Revised Common Lectionary (Semicontinuous)
ಸ್ತುತಿಗೀತೆ. ರಚನೆಗಾರ: ದಾವೀದ.
138 ಯೆಹೋವನೇ, ಪೂರ್ಣಹೃದಯದಿಂದ ನಿನ್ನನ್ನು ಕೊಂಡಾಡುವೆನು.
ನಿನ್ನ ಹಾಡುಗಳನ್ನು ಎಲ್ಲಾ ದೇವರುಗಳ ಎದುರಿನಲ್ಲಿ ಹಾಡುವೆನು.
2 ನಾನು ನಿನ್ನ ಪರಿಶುದ್ಧಾಲಯದ ಕಡೆಗೆ ಅಡ್ಡಬೀಳುವೆನು.
ನಾನು ನಿನ್ನ ಹೆಸರನ್ನೂ ನಿನ್ನ ಪ್ರೀತಿಯನ್ನೂ ನಿನ್ನ ನಂಬಿಗಸ್ತಿಕೆಯನ್ನೂ ಕೊಂಡಾಡುವೆನು.
ನೀನು ನಿನ್ನ ವಾಕ್ಯವನ್ನು ನೆರವೇರಿಸಿ ನಿನ್ನ ನಾಮಮಹತ್ವವನ್ನು ಹೆಚ್ಚಿಸಿರುವೆ.
3 ನಾನು ಸಹಾಯಕ್ಕಾಗಿ ನಿನಗೆ ಮೊರೆಯಿಟ್ಟಾಗ
ನೀನು ನನಗೆ ಸದುತ್ತರವನ್ನು ದಯಪಾಲಿಸಿದೆ; ನನಗೆ ಬಲವನ್ನು ಅನುಗ್ರಹಿಸಿದೆ.
4 ಯೆಹೋವನೇ, ಭೂರಾಜರುಗಳೆಲ್ಲಾ ನಿನ್ನ ನುಡಿಗಳನ್ನು ಕೇಳಿ
ನಿನ್ನನ್ನು ಕೊಂಡಾಡಬೇಕೆಂಬುದು ನನ್ನ ಅಪೇಕ್ಷೆ.
5 ಅವರೆಲ್ಲರೂ ಯೆಹೋವನ ಮಾರ್ಗವನ್ನು ಹಾಡಿ ಕೊಂಡಾಡುವರು;
ಯಾಕೆಂದರೆ ಯೆಹೋವನ ಮಹಿಮೆಯು ಮಹತ್ವವಾದದ್ದು.
6 ಯೆಹೋವನೇ ಮಹೋನ್ನತನು.
ಆದರೂ ಆತನು ದೀನರಿಗೋಸ್ಕರ ಚಿಂತಿಸುವನು.
ಗರ್ವಿಷ್ಠರ ಕಾರ್ಯಗಳು ಆತನಿಗೆ ಗೊತ್ತಿವೆ.
ಆದರೆ ಆತನು ಅವರಿಗೆ ದೂರವಾಗಿಯೇ ಇರುತ್ತಾನೆ.
7 ಯೆಹೋವನೇ, ನಾನು ಆಪತ್ತಿನಲ್ಲಿದ್ದರೆ, ನನ್ನ ಪ್ರಾಣವನ್ನು ಕಾಪಾಡು.
ನನ್ನ ವೈರಿಗಳು ನನ್ನ ಮೇಲೆ ಕೋಪಗೊಂಡಿದ್ದರೆ, ನನ್ನನ್ನು ಅವರಿಂದ ರಕ್ಷಿಸು.
8 ಯೆಹೋವನೇ, ನಿನ್ನ ವಾಗ್ದಾನಗಳನ್ನು ನೆರವೇರಿಸು.
ಯೆಹೋವನೇ, ನಿನ್ನ ಪ್ರೀತಿಯು ಶಾಶ್ವತವಾದದ್ದು.
ನಮ್ಮನ್ನು ಸೃಷ್ಟಿಸಿದಾತನು ನೀನೇ. ನಮ್ಮನ್ನು ಕೈಬಿಡಬೇಡ!
ಆರೋನನ ಮರಣ
22 ಇಸ್ರೇಲರೆಲ್ಲರೂ ಕಾದೇಶಿನಿಂದ ಹೊರಟು ಹೋರ್ ಬೆಟ್ಟಕ್ಕೆ ಹೋದರು. 23 ಹೋರ್ ಬೆಟ್ಟವು ಎದೋಮ್ಯರ ಗಡಿಯ ಬಳಿಯಲ್ಲಿ ಇತ್ತು. ಯೆಹೋವನು ಮೋಶೆ ಆರೋನರಿಗೆ, 24 “ಆರೋನನು ಸತ್ತು ಪೂರ್ವಿಕರ ಬಳಿ ಸೇರುವ ಸಮಯ ಬಂದಿದೆ. ಇಸ್ರೇಲರಿಗೆ ನಾನು ವಾಗ್ದಾನ ಮಾಡಿದ ದೇಶದೊಳಗೆ ಆರೋನನು ಪ್ರವೇಶಿಸುವುದಿಲ್ಲ. ಯಾಕೆಂದರೆ ನೀವಿಬ್ಬರೂ ಮೆರೀಬಾ ಬುಗ್ಗೆಯ ಕುರಿತಾಗಿ ನಾನು ಕೊಟ್ಟ ಆಜ್ಞೆಗೆ ವಿಧೇಯರಾಗದಿದ್ದುದರಿಂದ ನಾನು ನಿಮಗೆ ಇದನ್ನು ಹೇಳುತ್ತಿದ್ದೇನೆ.
25 “ಈಗ ನೀನು ಆರೋನನನ್ನೂ ಅವನ ಮಗನಾದ ಎಲ್ಲಾಜಾರನನ್ನೂ ಕರೆದುಕೊಂಡು ಹೋರ್ ಬೆಟ್ಟಕ್ಕೆ ಬಾ. 26 ಆರೋನನ ಪ್ರತಿಷ್ಠಿತ ವಸ್ತ್ರಗಳನ್ನು ಅವನಿಂದ ತೆಗೆದು ಅವನ ಮಗನಾದ ಎಲ್ಲಾಜಾರನ ಮೇಲೆ ಹಾಕು. ಆರೋನನು ಅಲ್ಲಿ ಬೆಟ್ಟದ ಮೇಲೆ ಸತ್ತು ಪೂರ್ವಿಕರ ಬಳಿ ಸೇರುವನು” ಎಂದು ಹೇಳಿದನು.
27 ಮೋಶೆಯು ಯೆಹೋವನ ಅಪ್ಪಣೆಗೆ ವಿಧೇಯನಾದನು. ಮೋಶೆ, ಆರೋನ ಮತ್ತು ಎಲ್ಲಾಜಾರ ಇವರು ಹೋರ್ ಬೆಟ್ಟವನ್ನು ಹತ್ತಿದರು. ಅವರು ಹೋಗುತ್ತಿರುವುದನ್ನು ಇಸ್ರೇಲರೆಲ್ಲರೂ ನೋಡಿದರು. 28 ಮೋಶೆಯು ಆರೋನನ ಪ್ರತಿಷ್ಠಿತಾ ವಸ್ತ್ರಗಳನ್ನು ಅವನಿಂದ ತೆಗೆದು ಅವನ ಮಗನಾದ ಎಲ್ಲಾಜಾರನ ಮೇಲೆ ಹಾಕಿದನು. ಬಳಿಕ ಆರೋನನು ಬೆಟ್ಟದ ಮೇಲೆ ಸತ್ತನು. ಮೋಶೆ ಮತ್ತು ಎಲ್ಲಾಜಾರನು ಬೆಟ್ಟದಿಂದ ಇಳಿದುಬಂದರು. 29 ಆರೋನನು ಸತ್ತನೆಂದು ಇಸ್ರೇಲರೆಲ್ಲರಿಗೆ ತಿಳಿಯಿತು. ಆದ್ದರಿಂದ ಇಸ್ರೇಲಿನಲ್ಲಿ ಪ್ರತಿಯೊಬ್ಬನೂ ಆರೋನನಿಗಾಗಿ ಮೂವತ್ತು ದಿನಗಳವರೆಗೆ ಶೋಕಿಸಿದನು.
19 ಬಳಿಕ ಅವನು ಊಟಮಾಡಿ ಚೇತರಿಸಿಕೊಂಡನು.
ಸೌಲನು ದಮಸ್ಕದಲ್ಲಿ ಬೋಧಿಸುವನು
ಸೌಲನು ದಮಸ್ಕದಲ್ಲಿ ಯೇಸುವಿನ ಶಿಷ್ಯರೊಂದಿಗೆ ಕೆಲವು ದಿನಗಳವರೆಗೆ ಇದ್ದನು. 20 ಅವನು ತಡಮಾಡದೆ ಸಭಾಮಂದಿರಗಳಿಗೆ ಹೋಗಿ “ಯೇಸುವೇ ದೇವಕುಮಾರ”ನೆಂದು ಬೋಧಿಸತೊಡಗಿದನು.
21 ಸೌಲನ ಮಾತನ್ನು ಕೇಳಿದ ಜನರೆಲ್ಲರೂ ವಿಸ್ಮಯಗೊಂಡು, “ಜೆರುಸಲೇಮಿನಲ್ಲಿದ್ದವನು ಈ ಮನುಷ್ಯನೇ. ಈ ಹೆಸರಿನಲ್ಲಿ (ಯೇಸುವಿನ) ನಂಬಿಕೆ ಇಡುವ ಜನರನ್ನು ನಾಶಮಾಡಲು ಇವನು ಪ್ರಯತ್ನಿಸುತ್ತಿದ್ದನು! ಯೇಸುವಿನ ಶಿಷ್ಯರನ್ನು ಬಂಧಿಸಿ ಜೆರುಸಲೇಮಿನಲ್ಲಿರುವ ಮಹಾಯಾಜಕರ ಬಳಿಗೆ ಕೊಂಡೊಯ್ಯಲು ಇವನು ಇಲ್ಲಿಗೂ ಬಂದಿದ್ದಾನೆ” ಎಂದು ಹೇಳಿದರು.
22 ಆದರೆ ಸೌಲನು ಹೆಚ್ಚುಹೆಚ್ಚು ಪ್ರಬಲವಾಗಿ ಯೇಸುವೇ ಕ್ರಿಸ್ತನೆಂದು ನಿರೂಪಿಸಿದನು. ಅವನ ಆಧಾರಗಳು ಬಹು ಬಲವಾಗಿದ್ದ ಕಾರಣ ದಮಸ್ಕದ ಯೆಹೂದ್ಯರು ಅವನೊಂದಿಗೆ ವಾದ ಮಾಡಲಿಲ್ಲ.
ಸೌಲನು ಯೆಹೂದ್ಯರಿಂದ ತಪ್ಪಿಸಿಕೊಳ್ಳುವನು
23 ಅನೇಕ ದಿನಗಳಾದ ಮೇಲೆ, ಯೆಹೂದ್ಯರು ಸೌಲನನ್ನು ಕೊಲ್ಲಲು ಸಂಚುಮಾಡಿದರು. 24 ಯೆಹೂದ್ಯರು ಸೌಲನಿಗಾಗಿ ಎದುರುನೋಡುತ್ತಾ ನಗರದ ದ್ವಾರಗಳನ್ನು ಹಗಲಿರುಳು ಕಾಯುತ್ತಿದ್ದರು. ಆದರೆ ಅವರ ಯೋಜನೆ ಸೌಲನಿಗೆ ತಿಳಿಯಿತು. 25 ಒಂದು ರಾತ್ರಿ, ಸೌಲನ ಕೆಲವು ಶಿಷ್ಯರು ಅವನನ್ನು ಪಟ್ಟಣದಿಂದ ಹೊರಗೆ ಕಳುಹಿಸುವುದಕ್ಕಾಗಿ ಅವನನ್ನು ಒಂದು ಬುಟ್ಟಿಯಲ್ಲಿ ಕುಳ್ಳಿರಿಸಿ, ನಗರದ ಕೋಟೆಯ ಸಂದಿನ ಮೂಲಕ ಅವನನ್ನು ಕೆಳಗಿಳಿಸಿದರು.
Kannada Holy Bible: Easy-to-Read Version. All rights reserved. © 1997 Bible League International