Revised Common Lectionary (Semicontinuous)
ಗತ್ ಎಂಬ ಊರಲ್ಲಿ ಫಿಲಿಷ್ಟಿಯರು ಸೆರೆಹಿಡಿದಾಗ ರಚಿಸಿಲ್ಪಟ್ಟಿತು. ರಚನೆಗಾರ: ದಾವೀದ.
56 ದೇವರೇ, ನನ್ನನ್ನು ಕರುಣಿಸು; ವೈರಿಗಳು ನನ್ನ ಮೇಲೆ ಆಕ್ರಮಣಮಾಡಿದ್ದಾರೆ.
ಅವರು ಸತತವಾಗಿ ನನ್ನನ್ನು ಬೆನ್ನಟ್ಟಿ ಹೋರಾಡುತ್ತಿದ್ದಾರೆ.
2 ನನ್ನ ವೈರಿಗಳು ಸತತವಾಗಿ ನನ್ನ ಮೇಲೆ ಆಕ್ರಮಣ ಮಾಡುವರು.
ಅವರಲ್ಲಿರುವ ಹೋರಾಟಗಾರರು ಅಸಂಖ್ಯಾತ.
3 ನಾನು ಭಯಗೊಂಡಾಗ, ನಿನ್ನಲ್ಲೇ ಭರವಸೆ ಇಡುವೆ.
4 ನಾನು ದೇವರಲ್ಲಿ ಭರವಸೆ ಇಟ್ಟಿರುವುದರಿಂದ ಜನರಿಗೆ ಭಯಪಡುವುದಿಲ್ಲ.
ಕ್ಷಣಿಕರಾದ ಮಾನವರು ನನಗೇನು ಮಾಡಬಲ್ಲರು?
ದೇವರ ವಾಗ್ದಾನಕ್ಕಾಗಿ ಆತನನ್ನು ಕೊಂಡಾಡುವೆನು.
5 ನನ್ನ ವೈರಿಗಳು ನನ್ನ ಮಾತುಗಳಿಗೆ ಅಪಾರ್ಥ ಮಾಡುವರು.
ನನಗೆ ಕೇಡುಮಾಡಬೇಕೆಂದೇ ಅವರು ಯಾವಾಗಲೂ ಯೋಚಿಸುವರು.
6 ಅವರು ಒಟ್ಟುಗೂಡಿ ನನ್ನನ್ನು ಕೊಲ್ಲಲು
ನನ್ನ ಹೆಜ್ಜೆಯನ್ನೇ ಹಿಂಬಾಲಿಸಿಕೊಂಡು ಬರುತ್ತಾರೆ.
7 ದೇವರೇ, ಅವರ ದುಷ್ಟತನದ ನಿಮಿತ್ತ ಅವರನ್ನು ಸೆರೆಯಾಳುಗಳಾಗಿ ಕಳುಹಿಸು.
ಅವರು ಅನ್ಯ ಜನಾಂಗಗಳ ಕೋಪವನ್ನು ಅನುಭವಿಸುವಂತೆ ಹೊರಗಟ್ಟು.
8 ನನಗಾಗಿರುವ ದುಃಖವು ನಿನಗೆ ಗೊತ್ತಿದೆ.
ನಾನು ಎಷ್ಚು ಅತ್ತಿರುವೆನೆಂದು ನಿನಗೆ ಗೊತ್ತಿದೆ.
ನನ್ನ ಕಣ್ಣೀರಿಗೆ ನೀನು ಖಂಡಿತವಾಗಿ ಲೆಕ್ಕವಿಟ್ಟಿರುವೆ.
9 ಆದ್ದರಿಂದ, ಸಹಾಯಕ್ಕಾಗಿ ನಾನು ನಿನಗೆ ಮೊರೆಯಿಡುವಾಗ ನನ್ನ ಶತ್ರುಗಳನ್ನು ಸೋಲಿಸು.
ನೀನು ಮಾಡಬಲ್ಲೆ ಎಂದು ನನಗೆ ಗೊತ್ತಿದೆ; ನೀನೇ ದೇವರು!
10 ನಾನು ದೇವರನ್ನು ಆತನ ವಾಗ್ದಾನಕ್ಕಾಗಿ ಕೊಂಡಾಡುವೆನು.
ಯೆಹೋವನು ನನಗೆ ಮಾಡಿರುವ ವಾಗ್ದಾನಕ್ಕಾಗಿ ನಾನು ಆತನನ್ನು ಕೊಂಡಾಡುವೆನು.
11 ನಾನು ದೇವರಲ್ಲಿ ಭರವಸವಿಟ್ಟಿರುವುದರಿಂದ ಜನರಿಗೆ ಭಯಪಡುವುದಿಲ್ಲ.
ಕ್ಷಣಿಕರಾದ ಮಾನವರು ನನಗೇನು ಮಾಡಬಲ್ಲರು?
12 ದೇವರೇ, ನಾನು ನಿನಗೆ ವಿಶೇಷ ಹರಕೆಗಳನ್ನು ಮಾಡಿದ್ದೇನೆ.
ನಾನು ಮಾಡಿದ ಹರಕೆಗಳನ್ನು ಸಲ್ಲಿಸುವೆನು.
ನಾನು ನಿನಗೆ ಕೃತಜ್ಞತಾ ಕಾಣಿಕೆಯನ್ನು ಅರ್ಪಿಸುವೆನು.
13 ಯಾಕೆಂದರೆ ನೀನು ನನ್ನನ್ನು ಮರಣದಿಂದ ರಕ್ಷಿಸಿದೆ;
ನೀನು ನನ್ನನ್ನು ಸೋಲಿನಿಂದ ತಪ್ಪಿಸಿದೆ.
ಆದ್ದರಿಂದ, ಜೀವಂತರಾಗಿರುವ ಜನರು ಮಾತ್ರ
ನೋಡಬಹುದಾದ ಬೆಳಕಿನಲ್ಲಿ ನಾನು ದೇವರನ್ನು ಆರಾಧಿಸುವೆನು.
8 ನಂತರ ಯೆಹೋವನು ಎಲೀಯನಿಗೆ, 9 “ಚೀದೋನ್ಯರ ಚಾರೆಪ್ತಗೆ ಹೋಗಿ ಅಲ್ಲಿ ವಾಸಮಾಡು. ಆ ಸ್ಥಳದಲ್ಲಿ ಒಬ್ಬ ವಿಧವೆಯು ವಾಸಿಸುತ್ತಾಳೆ. ನಿನಗೆ ಆಹಾರವನ್ನು ಕೊಡುವಂತೆ ಅವಳಿಗೆ ನಾನು ಆಜ್ಞಾಪಿಸಿದ್ದೇನೆ” ಎಂದು ಹೇಳಿದನು.
10 ಎಲೀಯನು ಚಾರೆಪ್ತಗೆ ಹೋದನು. ಅವನು ಊರು ಬಾಗಿಲಿಗೆ ಹೋದಾಗ, ಅಲ್ಲಿ ಒಬ್ಬ ವಿಧವೆಯನ್ನು ನೋಡಿದನು. ಆ ಸ್ತ್ರೀಯು ಬೆಂಕಿಗಾಗಿ ಸೌದೆಯನ್ನು ಒಟ್ಟುಗೂಡಿಸುತ್ತಿದ್ದಳು. ಎಲೀಯನು ಅವಳಿಗೆ, “ನನಗೆ ಕುಡಿಯುವುದಕ್ಕೆ ಚಂಬಿನಲ್ಲಿ ಸ್ವಲ್ಪ ನೀರನ್ನು ನೀನು ತರುವೆಯಾ?” ಎಂದು ಕೇಳಿದನು. 11 ಆ ಸ್ತ್ರೀಯು ಅವನಿಗೆ ನೀರನ್ನು ತರಲು ಹೋಗುತ್ತಿರುವಾಗ, ಎಲೀಯನು, “ದಯವಿಟ್ಟು ಒಂದು ತುಂಡು ರೊಟ್ಟಿಯನ್ನು ತೆಗೆದುಕೊಂಡು ಬಾ” ಎಂದು ಹೇಳಿದನು.
12 ಆ ಸ್ತ್ರೀಯು, “ನನ್ನಲ್ಲಿ ರೊಟ್ಟಿಯಿಲ್ಲವೆಂದು ನಿನ್ನ ದೇವರಾದ ಯೆಹೋವನ ಸನ್ನಿಧಿಯಲ್ಲಿ ನಾನು ಪ್ರಮಾಣ ಮಾಡುತ್ತೇನೆ. ನನ್ನ ಮಡಕೆಯಲ್ಲಿ ಸ್ವಲ್ಪ ಹಿಟ್ಟು ಮಾತ್ರ ಇದೆ; ಪಾತ್ರೆಯಲ್ಲಿ ಸ್ವಲ್ಪ ಆಲೀವ್ ಎಣ್ಣೆಯಿದೆ. ಬೆಂಕಿ ಹೊತ್ತಿಸಲು ಸೌದೆ ಚೂರುಗಳನ್ನು ಆಯ್ದುಕೊಳ್ಳವುದಕ್ಕಾಗಿ ನಾನು ಈ ಸ್ಥಳಕ್ಕೆ ಬಂದೆ. ಸೌಧೆಯನ್ನು ನಾನು ಮನೆಗೆ ತೆಗೆದುಕೊಂಡು ಹೋಗಿ, ನಮ್ಮ ಕೊನೆಯ ಊಟವನ್ನು ಸಿದ್ಧಪಡಿಸುತ್ತೇನೆ. ನನ್ನ ಮಗ ಮತ್ತು ನಾನು ಅದನ್ನು ತಿಂದು, ನಂತರ ಹಸಿವಿನಿಂದ ಸಾಯುತ್ತೇವೆ” ಎಂದು ಹೇಳಿದಳು.
13 ಎಲೀಯನು ಆ ಸ್ತ್ರೀಗೆ, “ಚಿಂತಿಸದಿರು, ಮನೆಗೆ ಹೋಗಿ ನೀನು ಹೇಳಿದಂತೆ ಆಹಾರವನ್ನು ಸಿದ್ಧಪಡಿಸು. ಆದರೆ ನಿನ್ನಲ್ಲಿರುವ ಹಿಟ್ಟಿನಿಂದ ಮೊದಲು ಒಂದು ಚಿಕ್ಕ ರೊಟ್ಟಿಯನ್ನು ಮಾಡು. ಆ ರೊಟ್ಟಿಯನ್ನು ನನಗೆ ತಂದುಕೊಡು; ನಂತರ ನಿನಗೆ ಮತ್ತು ನಿನ್ನ ಮಗನಿಗೆ ಅಡಿಗೆ ಮಾಡಿಕೋ. 14 ಇಸ್ರೇಲಿನ ದೇವರಾದ ಯೆಹೋವನು ಹೇಳುವುದೇನೆಂದರೆ, ‘ಆ ಮಡಕೆಯಲ್ಲಿರುವ ಹಿಟ್ಟು ಎಂದೆಂದಿಗೂ ಖಾಲಿಯಾಗುವುದಿಲ್ಲ. ಆ ಪಾತ್ರೆಯಲ್ಲಿ ಯಾವಾಗಲೂ ಎಣ್ಣೆಯಿರುತ್ತದೆ. ಯೆಹೋವನು ಭೂಮಿಯ ಮೇಲೆ ಮಳೆಯನ್ನು ಸುರಿಸುವ ತನಕ ಇದು ಹೀಗೆಯೇ ಮುಂದುವರಿಯುತ್ತದೆ’” ಎಂದು ಹೇಳಿದನು.
15 ಆ ಸ್ತ್ರೀಯು ತನ್ನ ಮನೆಗೆ ಹೋದಳು. ಎಲೀಯನು ಹೇಳಿದಂತೆ ಆಕೆಯು ಮಾಡಿದಳು. ಎಲೀಯನು, ಆ ಸ್ತ್ರೀಯು ಮತ್ತು ಅವಳ ಮಗನು ಅನೇಕ ದಿನಗಳಿಗಾಗುವಷ್ಟು ಆಹಾರವನ್ನು ಹೊಂದಿದ್ದರು. 16 ಮಡಕೆಯಲ್ಲಿದ್ದ ಹಿಟ್ಟು ಮತ್ತು ಪಾತ್ರೆಯಲ್ಲಿದ್ದ ಎಣ್ಣೆ ಎಂದೆಂದಿಗೂ ಖಾಲಿಯಾಗಲಿಲ್ಲ. ಯೆಹೋವನು ಎಲೀಯನ ಮೂಲಕ ಹೇಳಿದ್ದಂತೆಯೇ ಇದು ಸಂಭವಿಸಿತು.
ದೇವರ ಜ್ಞಾನ
6 ಪರಿಣತರಾದ ಜನರಿಗೆ ನಾವು ಜ್ಞಾನವನ್ನೇ ಉಪದೇಶಿಸುತ್ತೇವೆ. ಇದು ಇಹಲೋಕದ ಜ್ಞಾನವೂ ಅಲ್ಲ. ಅಧಿಪತಿಗಳ ಜ್ಞಾನವೂ ಅಲ್ಲ. ಈ ಲೋಕದ ಅಧಿಪತಿಗಳು ತಮ್ಮ ಅಧಿಕಾರವನ್ನು ಕಳೆದುಕೊಳ್ಳುವವರಾಗಿದ್ದಾರೆ. 7 ನಾವಾದರೋ ದೇವರ ರಹಸ್ಯವಾದ ಜ್ಞಾನವನ್ನೇ ಹೇಳುತ್ತೇವೆ. ಈ ಜ್ಞಾನವನ್ನು ಜನರಿಗೆ ಮರೆಮಾಡಲಾಗಿದೆ. ದೇವರು ನಮ್ಮ ಮಹಿಮೆಗಾಗಿ ಈ ಜ್ಞಾನವನ್ನು ಲೋಕವು ಆರಂಭವಾಗುವುದಕ್ಕಿಂತ ಮೊದಲೇ ಯೋಜಿಸಿದ್ದನು. 8 ಈ ಲೋಕದ ಯಾವ ಅಧಿಪತಿಗಳೂ ಈ ಜ್ಞಾನವನ್ನು ಅರ್ಥಮಾಡಿಕೊಳ್ಳಲಿಲ್ಲ. ಅವರು ಅರ್ಥಮಾಡಿಕೊಂಡಿದ್ದರೆ, ಮಹಿಮೆಯುಳ್ಳ ಪ್ರಭುವನ್ನು ಶಿಲುಬೆಗೇರಿಸುತ್ತಿರಲಿಲ್ಲ. 9 ಪವಿತ್ರಗ್ರಂಥದಲ್ಲಿ ಬರೆದಿರುವಂತೆಯೇ ಇದಾಯಿತು:
“ದೇವರು ತನ್ನನ್ನು ಪ್ರೀತಿಸುವ ಜನರಿಗೆ ಸಿದ್ಧಪಡಿಸಿರುವುದನ್ನು
ಯಾವ ಕಣ್ಣೂ ಕಾಣಲಿಲ್ಲ.
ಯಾವ ಕಿವಿಯೂ ಕೇಳಲಿಲ್ಲ.
ಯಾವ ವ್ಯಕ್ತಿಯೂ ಊಹಿಸಿಕೊಳ್ಳಲಿಲ್ಲ.”(A)
10 ಆದರೆ ದೇವರು ತನ್ನ ಪವಿತ್ರಾತ್ಮನ ಮೂಲಕ ನಮಗೆ ಈ ಸಂಗತಿಗಳನ್ನು ಪ್ರಕಟಿಸಿದನು.
ಪವಿತ್ರಾತ್ಮನು ಸಕಲವನ್ನೂ ದೇವರ ಅಗಾಧವಾದ ರಹಸ್ಯಗಳನ್ನೂ ತಿಳಿದಿದ್ದಾನೆ. 11 ಇದು ಹೇಗೆಂದರೆ: ಒಬ್ಬನ ಆಲೋಚನೆಗಳು ಅವನ ಆಂತರ್ಯದಲ್ಲಿರುವ ಜೀವಾತ್ಮವೊಂದಕ್ಕೆ ಹೊರತು ಬೇರೆ ಯಾರಿಗೂ ತಿಳಿದಿರುವುದಿಲ್ಲ. ಅಂತೆಯೇ, ದೇವರ ಆಲೋಚನೆಗಳು ದೇವರಾತ್ಮನ ಹೊರತು ಬೇರೆ ಯಾರಿಗೂ ತಿಳಿದಿರುವುದಿಲ್ಲ. 12 ನಾವು ಹೊಂದಿಕೊಂಡದ್ದು ದೇವರಿಂದ ಬಂದ ಪವಿತ್ರಾತ್ಮನನ್ನೇ ಹೊರತು ಪ್ರಾಪಂಚಿಕವಾದ ಆತ್ಮವನ್ನಲ್ಲ. ದೇವರು ನಮಗೆ ಉಚಿತವಾಗಿ ಕೊಟ್ಟಿರುವಂಥವುಗಳನ್ನು ತಿಳಿದುಕೊಳ್ಳುವುದಕ್ಕಾಗಿ ನಾವು ಆತನನ್ನು ಹೊಂದಿಕೊಂಡೆವು.
13 ನಾವು ಈಸಂಗತಿಗಳನ್ನು ಹೇಳುವಾಗ ಮನುಷ್ಯರ ಜ್ಞಾನದಿಂದ ಕಲಿತುಕೊಂಡಿರುವ ವಾಕ್ಯಗಳನ್ನು ಉಪಯೋಗಿಸದೆ ಆತ್ಮನಿಂದ ಕಲಿತುಕೊಂಡ ವಾಕ್ಯಗಳನ್ನೇ ಉಪಯೋಗಿಸುತ್ತೇವೆ. ಆತ್ಮಿಕ ಸಂಗತಿಗಳನ್ನು ವಿವರಿಸಲು ಆತ್ಮಿಕ ಪದಗಳನ್ನೇ ಬಳಸುತ್ತೇವೆ. 14 ಆತ್ಮಿಕನಲ್ಲದ ವ್ಯಕ್ತಿಯು ದೇವಾರಾತ್ಮನ ವಿಷಯಗಳನ್ನು ಸ್ವೀಕರಿಸಿಕೊಳ್ಳವುದಿಲ್ಲ. ಅವನು ಆ ವಿಷಯಗಳನ್ನು ಮೂರ್ಖತನವೆಂದು ಯೋಚಿಸುತ್ತಾನೆ. ಅವನು ಪವಿತ್ರಾತ್ಮನ ವಿಷಯಗಳನ್ನು ಅರ್ಥಮಾಡಿಕೊಳ್ಳಲಾರನು; ಏಕೆಂದರೆ ಆ ವಿಷಯಗಳನ್ನು ಆತ್ಮಿಕವಾಗಿ ವಿಚಾರಣೆ ಮಾಡಲು ಮಾತ್ರ ಸಾಧ್ಯ. 15 ಆದರೆ ಆತ್ಮಿಕ ಮನುಷ್ಯನು ಎಲ್ಲಾ ವಿಷಯಗಳ ಬಗ್ಗೆ ತೀರ್ಪು ಮಾಡಬಲ್ಲನು. ಅವನಿಗೆ ಬೇರೆ ಯಾರೂ ತೀರ್ಪು ನೀಡಲಾಗುವುದಿಲ್ಲ. 16 ಪವಿತ್ರ ಗ್ರಂಥವು ಹೇಳುವಂತೆ:
“ಪ್ರಭುವಿನ ಮನಸ್ಸನ್ನು ಯಾರು ಬಲ್ಲರು?
ಪ್ರಭುವಿಗೆ ಯಾರು ಉಪದೇಶ ಮಾಡಬಲ್ಲರು?”(B)
ನಾವಾದರೋ ಕ್ರಿಸ್ತನ ಮನಸ್ಸನ್ನು ಹೊಂದಿದವರಾಗಿದ್ದೇವೆ.
Kannada Holy Bible: Easy-to-Read Version. All rights reserved. © 1997 Bible League International