Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 71:1-6

71 ಯೆಹೋವನೇ, ನಿನ್ನನ್ನೇ ಆಶ್ರಯಿಸಿಕೊಂಡಿದ್ದೇನೆ;
    ಎಂದಿಗೂ ಆಶಾಭಂಗಪಡಿಸಬೇಡ.
ನೀನು ನೀತಿವಂತನಾಗಿರುವುದರಿಂದ ನನ್ನನ್ನು ರಕ್ಷಿಸುವೆ; ಬಿಡುಗಡೆಮಾಡುವೆ.
    ನನಗೆ ಕಿವಿಗೊಟ್ಟು ನನ್ನನ್ನು ರಕ್ಷಿಸು.
ನೀನೇ ನನ್ನ ಸಂರಕ್ಷಣೆಯ ಆಶ್ರಯಗಿರಿಯಾಗಿರು.
    ನನ್ನನ್ನು ರಕ್ಷಿಸಲು ಆಜ್ಞಾಪಿಸು.
ನೀನೇ ನನ್ನ ಬಂಡೆಯೂ ಕೋಟೆಯೂ ಆಗಿರುವೆ.
ನನ್ನ ದೇವರೇ, ದುಷ್ಟರಿಂದಲೂ
    ಕ್ರೂರವಾದ ಕೆಟ್ಟವರಿಂದಲೂ ನನ್ನನ್ನು ರಕ್ಷಿಸು.
ನನ್ನ ಒಡೆಯನೇ, ನನ್ನ ಬಾಲ್ಯದಿಂದಲೂ
    ನೀನೇ ನನ್ನ ನಿರೀಕ್ಷೆಯೂ ಭರವಸವೂ ಆಗಿರುವೆ.
ನಾನು ಹುಟ್ಟಿದಂದಿನಿಂದಲೂ ನಿನ್ನನ್ನೇ ಆಶ್ರಯಿಸಿಕೊಂಡಿದ್ದೇನೆ.
    ನಾನು ಜನಿಸಿದಂದಿನಿಂದಲೂ ನೀನೇ ನನಗೆ ಆಧಾರವಾಗಿರುವೆ.
    ನಾನು ನಿನ್ನನ್ನು ಕೊಂಡಾಡುತ್ತಲೇ ಇರುವೆನು.

2 ಪೂರ್ವಕಾಲವೃತ್ತಾಂತ 34:1-7

ಯೆಹೂದದ ಅರಸಾನದ ಯೋಷೀಯ

34 ಯೋಷೀಯನು ಅರಸನಾದಾಗ ಎಂಟು ವರ್ಷ ಪ್ರಾಯದವನಾಗಿದ್ದನು. ಅವನು ಮೂವತ್ತೊಂದು ವರ್ಷದ ತನಕ ಜೆರುಸಲೇಮಿನಲ್ಲಿ ರಾಜ್ಯಭಾರವನ್ನು ಮಾಡಿದನು. ಯೋಷೀಯನು ಯೆಹೋವನಿಗೆ ಮೆಚ್ಚಿಕೆಯಾದ ಕಾರ್ಯಗಳನ್ನೇ ಮಾಡಿದನು. ಅವನು ತನ್ನ ಪೂರ್ವಿಕನಾದ ದಾವೀದನಂತೆ ದೇವರ ದೃಷ್ಟಿಯಲ್ಲಿ ಒಳ್ಳೆಯವನಾಗಿದ್ದನು. ಅವನು ಒಳ್ಳೆಯ ಕಾರ್ಯಗಳನ್ನು ಮಾಡುವುದನ್ನು ಬಿಟ್ಟುಬಿಡಲಿಲ್ಲ. ಅವನ ಆಳ್ವಿಕೆಯ ಎಂಟನೆಯ ವರ್ಷದಲ್ಲಿ ತನ್ನ ಪಿತೃವಾದ ದಾವೀದನು ಅನುಸರಿಸಿದ್ದ ದೇವರನ್ನು ಅನುಸರಿಸಿದನು. ಆಗ ಅವನು ಇನ್ನೂ ಎಳೆಯ ಪ್ರಾಯದವನಾಗಿದ್ದನು. ಅವನು ಪಟ್ಟಕ್ಕೆ ಬಂದ ಹನ್ನೆರಡನೆಯ ವರ್ಷದಲ್ಲಿ, ಜೆರುಸಲೇಮಿನಲ್ಲಿ ಮತ್ತು ಯೆಹೂದದಲ್ಲಿದ್ದ ಎತ್ತರವಾದ ಸ್ಥಳಗಳನ್ನೂ ಅಶೇರಸ್ತಂಭಗಳನ್ನೂ ಎರಕದ ಮತ್ತು ಕೆತ್ತನೆಯ ವಿಗ್ರಹಗಳನ್ನೂ ನಾಶಮಾಡಿದನು. ಜನರು ಬಾಳ್ ದೇವರ ವಿಗ್ರಹಗಳನ್ನೂ ಯಜ್ಞವೇದಿಕೆಗಳನ್ನೂ ಯೋಷೀಯನ ಮುಂದೆಯೇ ಕೆಡವಿಹಾಕಿದರು. ಆಮೇಲೆ ಯೋಷೀಯನು ಉನ್ನತಸ್ಥಳದಲ್ಲಿದ್ದ ಧೂಪವೇದಿಕೆಯನ್ನು ಕೆಡವಿ ಹಾಕಿ, ವಿಗ್ರಹಗಳನ್ನೆಲ್ಲಾ ಒಡೆದು ಪುಡಿಮಾಡಿ ಬಾಳ್ ದೇವರ ಪೂಜಾರಿಗಳ ಸಮಾಧಿಯ ಮೇಲೆ ಚೆಲ್ಲಿದನು. ಯೋಷೀಯನು ಬಾಳ್ ದೇವರ ವಿಗ್ರಹಗಳನ್ನೂ ಪೂಜಾರಿಯವರ ಎಲುಬುಗಳನ್ನೂ ಅವರ ವೇದಿಕೆಗಳ ಮೇಲೆಯೇ ಸುಟ್ಟುಬಿಟ್ಟನು. ಹೀಗೆ ಅವನು ಯೆಹೂದವನ್ನು ಮತ್ತು ಜೆರುಸಲೇಮನ್ನು ಶುಚಿಗೊಳಿಸಿದನು ಮತ್ತು ಶುದ್ಧೀಕರಿಸಿದನು. ಅದೇ ಪ್ರಕಾರ ಎಫ್ರಾಯೀಮ್, ಮನಸ್ಸೆ, ಸಿಮೆಯೋನ್ ಮತ್ತು ನಫ್ತಾಲಿ ಪ್ರಾಂತ್ಯಗಳ ಉದ್ದಕ್ಕೂ ಮಾಡಿದನು. ಆ ಪಟ್ಟಣಗಳ ಸಮೀಪದಲ್ಲಿದ್ದ ಹಾಳುಬಿದ್ದವುಗಳಿಗೂ ಅವನು ಹಾಗೆಯೇ ಮಾಡಿದನು. ಅಲ್ಲಿಂದ ಮುಂದೆ ಇಸ್ರೇಲ್ ದೇಶದಲ್ಲೂ ಪೂಜಾಸ್ಥಳಗಳನ್ನು ಕೆಡವಿ, ಅಶೇರಸ್ತಂಭಗಳನ್ನು ತುಂಡರಿಸಿ ಎರಕದ ಕೆತ್ತನೆಯ ವಿಗ್ರಹಗಳನ್ನು ಪುಡಿಮಾಡಿ, ಧೂಪವೇದಿಕೆಗಳನ್ನೆಲ್ಲಾ ನಾಶಮಾಡಿ ಜೆರುಸಲೇಮಿಗೆ ಹಿಂತಿರುಗಿದನು.

ಅಪೊಸ್ತಲರ ಕಾರ್ಯಗಳು 10:44-48

ಯೆಹೂದ್ಯರಲ್ಲದವರಿಗೆ ಪವಿತ್ರಾತ್ಮಧಾರೆ

44 ಪೇತ್ರನು ಇನ್ನೂ ಹೀಗೆ ಹೇಳುತ್ತಿರುವಾಗಲೇ, ಅವನ ಉಪದೇಶವನ್ನು ಕೇಳುತ್ತಿದ್ದವರ ಮೇಲೆ ಪವಿತ್ರಾತ್ಮನು ಇಳಿದು ಬಂದನು. 45 ಪೇತ್ರನೊಂದಿಗೆ ಬಂದಿದ್ದ ಯೆಹೂದ್ಯ ವಿಶ್ವಾಸಿಗಳು ವಿಸ್ಮಿತರಾದರು. ಯೆಹೂದ್ಯರಲ್ಲದ ಜನರಿಗೂ ಸಹ ಪವಿತ್ರಾತ್ಮಧಾರೆಯಾದದ್ದನ್ನು ಕಂಡು ಅವರು ಆಶ್ಚರ್ಯಪಟ್ಟರು. 46 ಅವರು ಬೇರಬೇರೆ ಭಾಷೆಗಳನ್ನು ಮಾತಾಡುತ್ತಾ ದೇವರಿಗೆ ಸ್ತೋತ್ರ ಸಲ್ಲಿಸುತ್ತಿರುವುದನ್ನು ಆ ಯೆಹೂದ್ಯ ವಿಶ್ವಾಸಿಗಳು ಕೇಳಿದರು. ಬಳಿಕ ಪೇತ್ರನು, 47 “ನೀರಿನಲ್ಲಿ ದೀಕ್ಷಾಸ್ನಾನ ತೆಗೆದುಕೊಳ್ಳದಂತೆ ನಾವು ಈ ಜನರಿಗೆ ಅಡ್ಡಿಮಾಡಲು ಸಾಧ್ಯವಿಲ್ಲ. ನಾವು ಹೊಂದಿಕೊಂಡಂತೆ ಇವರೂ ಪವಿತ್ರಾತ್ಮನನ್ನು ಹೊಂದಿಕೊಂಡರು!” ಎಂದು ಹೇಳಿ, 48 ಯೇಸು ಕ್ರಿಸ್ತನ ಹೆಸರಿನಲ್ಲಿ ದೀಕ್ಷಾಸ್ನಾನ ತೆಗೆದುಕೊಳ್ಳಲು ಅವರಿಗೆ ಅಪ್ಪಣೆಕೊಟ್ಟನು. ಬಳಿಕ ಅವರು ತಮ್ಮೊಂದಿಗೆ ಕೆಲವು ದಿನಗಳವರೆಗೆ ಇರಬೇಕೆಂದು ಪೇತ್ರನನ್ನು ಕೇಳಿಕೊಂಡರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International