Revised Common Lectionary (Semicontinuous)
89 ಯೆಹೋವನೇ, ನಿನ್ನ ವಾಕ್ಯವು ಪರಲೋಕದಲ್ಲಿ ಶಾಶ್ವತವಾಗಿ ಸ್ಥಾಪಿಸಲ್ಪಟ್ಟಿದೆ.
90 ನಿನ್ನ ನಂಬಿಗಸ್ತಿಕೆಯು ತಲತಲಾಂತರಕ್ಕೂ ಇರುವುದು.
ನೀನು ಭೂಮಿಯನ್ನು ಸೃಷ್ಟಿಸಿದೆ; ಅದು ಇಂದಿಗೂ ಸ್ಥಿರವಾಗಿ ನಿಂತಿದೆ.
91 ನಿನ್ನ ಆಜ್ಞೆಗಳಿಗನುಸಾರವಾಗಿ ಅದು ಸ್ಥಿರವಾಗಿಯೇ ಇದೆ.
ಅವುಗಳೆಲ್ಲಾ ಸೇವಕರಂತೆ ನಿನ್ನ ಆಜ್ಞೆಗಳಿಗೆ ವಿಧೇಯವಾಗಿವೆ.
92 ನಿನ್ನ ಉಪದೇಶಗಳು ನನಗೆ ಆನಂದಕರವಾಗಿವೆ;
ಇಲ್ಲವಾಗಿದ್ದರೆ ಸಂಕಟವು ನನ್ನನ್ನು ನಾಶಮಾಡಿಬಿಡುತ್ತಿತ್ತು.
93 ನಾನು ನಿನ್ನ ಆಜ್ಞೆಗಳನ್ನು ಮರೆಯುವುದೇ ಇಲ್ಲ.
ಯಾಕೆಂದರೆ ನಾನು ಬದುಕಿರುವುದು ಅವುಗಳಿಂದಲೇ.
94 ನಾನು ನಿನ್ನವನು, ನನ್ನನ್ನು ರಕ್ಷಿಸು!
ನಿನ್ನ ಆಜ್ಞೆಗಳಿಗೆ ಆಸಕ್ತಿಯಿಂದ ವಿಧೇಯನಾಗಿದ್ದೇನೆ.
95 ದುಷ್ಟರು ನನ್ನನ್ನು ನಾಶಮಾಡಲು ಪ್ರಯತ್ನಿಸಿದರು,
ಆದರೆ ನಿನ್ನ ಒಡಂಬಡಿಕೆಯು ನನ್ನನ್ನು ಜ್ಞಾನಿಯನ್ನಾಗಿ ಮಾಡಿತು.
96 ನಿನ್ನ ಧರ್ಮಶಾಸ್ತ್ರದ ಹೊರತು
ಬೇರೆಲ್ಲವುಗಳಿಗೂ ಮೇರೆಯಿದೆ.
27 ಯೆರೆಮೀಯನು ಬಾರೂಕನಿಗೆ ಹೇಳಿದ್ದ, ಬಾರೂಕನು ಶಾಹಿಯಿಂದ ಬರೆದಿದ್ದ ಸುರುಳಿಯನ್ನು ಯೆಹೋಯಾಕೀಮನು ಸುಟ್ಟುಹಾಕಿದ ಮೇಲೆ ಯೆರೆಮೀಯನಿಗೆ ಯೆಹೋವನಿಂದ ಈ ಸಂದೇಶ ಬಂದಿತು:
28 “ಯೆರೆಮೀಯನೇ, ಇನ್ನೊಂದು ಸುರುಳಿಯನ್ನು ತೆಗೆದುಕೊ. ಯೆಹೂದದ ರಾಜನಾದ ಯೆಹೋಯಾಕೀಮನು ಸುಟ್ಟುಹಾಕಿದ ಮೊದಲನೇ ಸುರುಳಿಯಲ್ಲಿ ಬರೆದ ಎಲ್ಲಾ ಸಂದೇಶಗಳನ್ನು ಈ ಸುರುಳಿಯ ಮೇಲೆ ಬರೆ. 29 ಯೆರೆಮೀಯನೇ, ಯೆಹೂದದ ರಾಜನಾದ ಯೆಹೋಯಾಕೀಮನಿಗೆ ಹೀಗೆ ಹೇಳು, ‘ಯೆಹೋವನು ಹೀಗೆನ್ನುತ್ತಾನೆ: ಯೆಹೋಯಾಕೀಮನೇ, ನೀನು ಆ ಸುರುಳಿಯನ್ನು ಸುಟ್ಟುಬಿಟ್ಟೆ. ನೀನು, “ಬಾಬಿಲೋನ್ ರಾಜನು ಖಂಡಿತವಾಗಿ ಬಂದು ಈ ದೇಶವನ್ನು ನಾಶಮಾಡುವನು ಎಂದು ಯೆರೆಮೀಯನು ಏಕೆ ಬರೆದನು? ಬಾಬಿಲೋನ್ ರಾಜನು ಈ ದೇಶದ ಮನುಷ್ಯರನ್ನು ಮತ್ತು ಪ್ರಾಣಿಗಳನ್ನು ನಾಶಮಾಡುವನು ಎಂದು ಏಕೆ ಹೇಳಿದನು?” ಎಂದು ಕೇಳಿದೆ. 30 ಇಗೋ ಯೆಹೂದದ ರಾಜನಾದ ಯೆಹೋಯಾಕೀಮನ ಬಗ್ಗೆ ಯೆಹೋವನು ಹೀಗೆ ಹೇಳುತ್ತಾನೆ: ಯೆಹೋಯಾಕೀಮನ ಸಂತಾನದವರು ದಾವೀದನ ಸಿಂಹಾಸನದ ಮೇಲೆ ಕುಳಿತುಕೊಳ್ಳಲಾಗದು. ಯೆಹೋಯಾಕೀಮನು ಸತ್ತರೆ ರಾಜ ಮರ್ಯಾದೆಯಿಂದ ಅವನ ಶವಸಂಸ್ಕಾರ ಮಾಡಲಾಗುವದಿಲ್ಲ. ಅವನ ಶವವನ್ನು ನೆಲದ ಮೇಲೆ ಎಸೆಯಲಾಗುವುದು. ಅವನ ಶವ ಹಗಲಿನ ತಾಪದಲ್ಲಿ ಮತ್ತು ರಾತ್ರಿಯ ಚಳಿಯಲ್ಲಿ ಹೊರಗೆ ಬಿದ್ದಿರುವದು. 31 ಯೆಹೋವನಾದ ನಾನು ಯೆಹೋಯಾಕೀಮ ಮತ್ತು ಅವನ ಮಕ್ಕಳನ್ನು ದಂಡಿಸುವೆನು. ನಾನು ಅವನ ಅಧಿಕಾರಿಗಳನ್ನೂ ದಂಡಿಸುವೆನು. ಅವರು ದುಷ್ಟರಾದುದರಿಂದ ಹೀಗೆ ಮಾಡುವೆನು. ನಾನು ಅವರ ಮೇಲೂ ಜೆರುಸಲೇಮಿನಲ್ಲಿ ವಾಸಮಾಡುವ ಜನರೆಲ್ಲರ ಮೇಲೂ ಮತ್ತು ಯೆಹೂದದ ಜನರ ಮೇಲೂ ಭಯಂಕರವಾದ ಕೇಡನ್ನು ತರಲು ನಿಶ್ಚಯಿಸಿದ್ದೇನೆ. ನಾನು ಹೇಳಿದಂತೆ ಅವರಿಗೆ ಎಲ್ಲಾ ಕೆಡುಕನ್ನು ಉಂಟುಮಾಡುವೆನು. ಏಕೆಂದರೆ ಅವರು ನನ್ನ ಮಾತನ್ನು ಕೇಳಲಿಲ್ಲ.’”
32 ಅನಂತರ ಯೆರೆಮೀಯನು ಇನ್ನೊಂದು ಸುರುಳಿಯನ್ನು ತೆಗೆದುಕೊಂಡು ನೇರೀಯನ ಮಗನಾದ ಲಿಪಿಕಾರ ಬಾರೂಕನಿಗೆ ಕೊಟ್ಟನು. ರಾಜ ಯೆಹೋಯಾಕೀಮನು ಸುಟ್ಟುಹಾಕಿದ ಸುರುಳಿಯಲ್ಲಿದ್ದ ಸಂದೇಶವನ್ನೇ ಯೆರೆಮೀಯನು ಹೇಳಿದಂತೆಲ್ಲ ಬಾರೂಕನು ಸುರುಳಿಯ ಮೇಲೆ ಬರೆದನು. ಬೇರೆ ಹಲವು ಸಂದೇಶಗಳನ್ನು ಎರಡನೇ ಸುರುಳಿಯಲ್ಲಿ ಸೇರಿಸಲಾಯಿತು.
ಯೇಸುವಿನಿಂದ ಗುಣಹೊಂದಿದ ಸ್ತ್ರೀ
(ಮತ್ತಾಯ 8:14-17; ಮಾರ್ಕ 1:29-34)
38 ಯೇಸು ಸಭಾಮಂದಿರದಿಂದ ಹೊರಟು ಸೀಮೋನನ[a] ಮನೆಗೆ ಹೋದನು. ಸೀಮೋನನ ಅತ್ತೆ ಬಹಳ ಜ್ವರದಿಂದ ನರಳುತ್ತಿದ್ದಳು. ಆಕೆಗೆ ಸಹಾಯ ಮಾಡಬೇಕೆಂದು ಅಲ್ಲಿದ್ದವರು ಆತನನ್ನು ಬೇಡಿಕೊಂಡರು. 39 ಯೇಸು ಆಕೆಯ ಬಳಿ ನಿಂತು, ಆಕೆಯನ್ನು ಬಿಟ್ಟುಹೋಗುವಂತೆ ಜ್ವರಕ್ಕೆ ಆಜ್ಞಾಪಿಸಿದನು. ಆ ಕೂಡಲೇ ಆಕೆಗೆ ಗುಣವಾಯಿತು. ಆಕೆ ಎದ್ದು ಅವರನ್ನು ಉಪಚರಿಸಿದಳು.
ಅನೇಕರಿಗೆ ಆರೋಗ್ಯದಾನ
40 ಸೂರ್ಯನು ಮುಳುಗಿದ ಮೇಲೆ, ಅಸ್ವಸ್ಥರಾದ ತಮ್ಮ ಸ್ನೇಹಿತರನ್ನು ಜನರು ಯೇಸುವಿನ ಬಳಿಗೆ ಕರೆದುಕೊಂಡು ಬಂದರು. ಅವರಿಗೆ ಅನೇಕ ತರಹದ ಕಾಯಿಲೆಗಳಿದ್ದವು. ಪ್ರತಿಯೊಬ್ಬ ರೋಗಿಯ ಮೇಲೂ ಯೇಸು ತನ್ನ ಕೈಯನ್ನಿಟ್ಟು ಗುಣಪಡಿಸಿದನು. 41 ಅನೇಕ ಜನರೊಳಗಿಂದ ದೆವ್ವಗಳು, “ನೀನು ದೇವಕುಮಾರ” ಎಂದು ಆರ್ಭಟಿಸುತ್ತಾ ಬಿಟ್ಟುಹೋದವು. ಆದರೆ ಯೇಸು ಆ ದೆವ್ವಗಳಿಗೆ, “ಮಾತಾಡಕೂಡದೆಂದು” ಬಲವಾಗಿ ಆಜ್ಞಾಪಿಸಿದನು. ಯೇಸುವೇ “ಕ್ರಿಸ್ತ”ನೆಂದು ದೆವ್ವಗಳಿಗೆ ತಿಳಿದಿತ್ತು.
ಇತರ ಊರುಗಳಿಗೆ ಯೇಸುವಿನ ಸಂದರ್ಶನ
(ಮಾರ್ಕ 1:35-39)
42 ಮರುದಿನ ಯೇಸು ನಿರ್ಜನ ಸ್ಥಳಕ್ಕೆ ಹೋದನು. ಜನರು ಯೇಸುವಿಗಾಗಿ ಹುಡುಕುತ್ತಾ ಅಲ್ಲಿಗೆ ಬಂದು, ತಮ್ಮನ್ನು ಬಿಟ್ಟುಹೋಗದಂತೆ ಆತನನ್ನು ತಡೆಯಲು ಪ್ರಯತ್ನಿಸಿದರು. 43 ಆದರೆ ಯೇಸು ಅವರಿಗೆ, “ನಾನು ಬೇರೆ ಊರುಗಳವರಿಗೂ ಸಹ ದೇವರ ರಾಜ್ಯದ ಸುವಾರ್ತೆಯನ್ನು ತಿಳಿಸಬೇಕು. ಇದಕ್ಕಾಗಿಯೇ ನನ್ನನ್ನು ಕಳುಹಿಸಲಾಗಿದೆ” ಎಂದು ಹೇಳಿದನು.
44 ಬಳಿಕ ಯೇಸು ಜುದೇಯದ ಸಭಾಮಂದಿರಗಳಲ್ಲಿ ಬೋಧಿಸಿದನು.
Kannada Holy Bible: Easy-to-Read Version. All rights reserved. © 1997 Bible League International