Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 119:89-96

89 ಯೆಹೋವನೇ, ನಿನ್ನ ವಾಕ್ಯವು ಪರಲೋಕದಲ್ಲಿ ಶಾಶ್ವತವಾಗಿ ಸ್ಥಾಪಿಸಲ್ಪಟ್ಟಿದೆ.
90 ನಿನ್ನ ನಂಬಿಗಸ್ತಿಕೆಯು ತಲತಲಾಂತರಕ್ಕೂ ಇರುವುದು.
    ನೀನು ಭೂಮಿಯನ್ನು ಸೃಷ್ಟಿಸಿದೆ; ಅದು ಇಂದಿಗೂ ಸ್ಥಿರವಾಗಿ ನಿಂತಿದೆ.
91 ನಿನ್ನ ಆಜ್ಞೆಗಳಿಗನುಸಾರವಾಗಿ ಅದು ಸ್ಥಿರವಾಗಿಯೇ ಇದೆ.
    ಅವುಗಳೆಲ್ಲಾ ಸೇವಕರಂತೆ ನಿನ್ನ ಆಜ್ಞೆಗಳಿಗೆ ವಿಧೇಯವಾಗಿವೆ.
92 ನಿನ್ನ ಉಪದೇಶಗಳು ನನಗೆ ಆನಂದಕರವಾಗಿವೆ;
    ಇಲ್ಲವಾಗಿದ್ದರೆ ಸಂಕಟವು ನನ್ನನ್ನು ನಾಶಮಾಡಿಬಿಡುತ್ತಿತ್ತು.
93 ನಾನು ನಿನ್ನ ಆಜ್ಞೆಗಳನ್ನು ಮರೆಯುವುದೇ ಇಲ್ಲ.
    ಯಾಕೆಂದರೆ ನಾನು ಬದುಕಿರುವುದು ಅವುಗಳಿಂದಲೇ.
94 ನಾನು ನಿನ್ನವನು, ನನ್ನನ್ನು ರಕ್ಷಿಸು!
    ನಿನ್ನ ಆಜ್ಞೆಗಳಿಗೆ ಆಸಕ್ತಿಯಿಂದ ವಿಧೇಯನಾಗಿದ್ದೇನೆ.
95 ದುಷ್ಟರು ನನ್ನನ್ನು ನಾಶಮಾಡಲು ಪ್ರಯತ್ನಿಸಿದರು,
    ಆದರೆ ನಿನ್ನ ಒಡಂಬಡಿಕೆಯು ನನ್ನನ್ನು ಜ್ಞಾನಿಯನ್ನಾಗಿ ಮಾಡಿತು.
96 ನಿನ್ನ ಧರ್ಮಶಾಸ್ತ್ರದ ಹೊರತು
    ಬೇರೆಲ್ಲವುಗಳಿಗೂ ಮೇರೆಯಿದೆ.

ಯೆರೆಮೀಯ 36:11-26

11 ಬಾರೂಕನು ಓದಿದ ಎಲ್ಲಾ ಯೆಹೋವನ ಸಂದೇಶಗಳನ್ನು ಮೀಕಾಯನೆಂಬ ಒಬ್ಬ ಮನುಷ್ಯನು ಕೇಳಿಸಿಕೊಂಡನು. ಮೀಕಾಯನು ಶಾಫಾನನ ಮಗನಾದ ಗೆಮರ್ಯನ ಮಗನಾಗಿದ್ದನು. 12 ಸುರುಳಿಯಲ್ಲಿದ್ದ ಸಂದೇಶಗಳನ್ನು ಕೇಳಿದ ಕೂಡಲೇ ಅವನು ರಾಜನ ಅರಮನೆಯಲ್ಲಿದ್ದ ಆಸ್ಥಾನದ ಅಧಿಕಾರಿಯ ಕೋಣೆಗೆ ಹೋದನು. ರಾಜನ ಅರಮನೆಯಲ್ಲಿ ಎಲ್ಲಾ ರಾಜಾಧಿಕಾರಿಗಳು ಕುಳಿತುಕೊಂಡಿದ್ದರು. ಆ ಅಧಿಕಾರಿಗಳ ಹೆಸರುಗಳು ಇಂತಿವೆ: ದರ್ಬಾರಿನ ಅಧಿಕಾರಿಯಾದ ಎಲೀಷಾಮನು, ಶೆಮಾಯನ ಮಗನಾದ ದೆಲಾಯನು, ಅಕ್ಬೋರನ ಮಗನಾದ ಎಲ್ನಾಥಾನನು, ಶಾಫಾನನ ಮಗನಾದ ಗೆಮರ್ಯನು, ಹನನೀಯನ ಮಗನಾದ ಚಿದ್ಕೀಯನು ಮತ್ತು ಉಳಿದೆಲ್ಲ ಅಧಿಕಾರಿಗಳು ಅಲ್ಲಿದ್ದರು. 13 ಬಾರೂಕನು ಸುರಳಿಯಿಂದ ಓದಿದ ಎಲ್ಲಾ ವಿಷಯವನ್ನು ಮೀಕಾಯನು ಈ ಅಧಿಕಾರಿಗಳಿಗೆ ಹೇಳಿದನು.

14 ಆಗ ಆ ಅಧಿಕಾರಿಗಳೆಲ್ಲ ಯೆಹೂದಿ ಎಂಬುವನನ್ನು ಬಾರೂಕನಲ್ಲಿಗೆ ಕಳುಹಿಸಿಕೊಟ್ಟರು. ಯೆಹೂದಿಯು ಶೆಲೆಮ್ಯನ ಮಗನಾದ ನೆಥನ್ಯನ ಮಗ. ಶೆಲೆಮ್ಯನು ಕೂಷಿಯ ಮಗ. ಯೆಹೂದಿಯು ಬಾರೂಕನಿಗೆ, “ನೀನು ಓದಿದ ಸುರುಳಿಯನ್ನು ತೆಗೆದುಕೊಂಡು ನನ್ನ ಜೊತೆ ಬಾ” ಎಂದು ಕರೆದನು.

ನೇರೀಯನ ಮಗನಾದ ಬಾರೂಕನು ಸುರುಳಿಯನ್ನು ತೆಗೆದುಕೊಂಡು ಯೆಹೂದಿಯ ಸಂಗಡ ಆ ಅಧಿಕಾರಿಗಳ ಹತ್ತಿರಕ್ಕೆ ಹೋದನು.

15 ಆಗ ಆ ಅಧಿಕಾರಿಗಳು ಬಾರೂಕನಿಗೆ, “ಕುಳಿತುಕೊ. ಆ ಸುರುಳಿಯನ್ನು ನಮ್ಮ ಮುಂದೆ ಓದು” ಎಂದರು.

ಬಾರೂಕನು ಸುರುಳಿಯನ್ನು ಅವರ ಮುಂದೆ ಓದಿದನು.

16 ಆ ರಾಜ್ಯಾಧಿಕಾರಿಗಳು ಆ ಸುರುಳಿಯಲ್ಲಿ ಬರೆದ ಎಲ್ಲಾ ಸಂದೇಶಗಳನ್ನು ಕೇಳಿ ಭಯಪಟ್ಟು ಒಬ್ಬರ ಮುಖವನ್ನೊಬ್ಬರು ನೋಡಿದರು. ಅವರು ಬಾರೂಕನಿಗೆ, “ನಾವು ರಾಜನಾದ ಯೆಹೋಯಾಕೀಮನಿಗೆ ಈ ಸುರುಳಿಯಲ್ಲಿರುವ ಸಂದೇಶಗಳ ಬಗ್ಗೆ ತಿಳಿಸಬೇಕು” ಎಂದರು. 17 ಬಳಿಕ ಆ ಅಧಿಕಾರಿಗಳು ಬಾರೂಕನಿಗೆ, “ಬಾರೂಕನೇ, ನೀನು ಈ ಸುರುಳಿಯ ಮೇಲೆ ಬರೆದ ಸಂದೇಶಗಳನ್ನು ಎಲ್ಲಿಂದ ಪಡೆದೆ? ಯೆರಮೀಯನು ನಿನಗೆ ಹೇಳಿದ್ದನ್ನು ನೀನು ಬರೆದುಕೊಂಡೆಯಾ? ಹೇಳು” ಎಂದು ಪ್ರಶ್ನಿಸಿದರು.

18 “ಹೌದು, ಯೆರೆಮೀಯನು ಬಾಯಿಂದ ಹೇಳಿದನು ಮತ್ತು ನಾನು ಆ ಸಂದೇಶಗಳನ್ನೆಲ್ಲಾ ಶಾಹಿಯಿಂದ ಸುರುಳಿಯ ಮೇಲೆ ಬರೆದೆನು” ಎಂದು ಬಾರೂಕನು ಉತ್ತರಿಸಿದನು.

19 ಆಗ ರಾಜಾಧಿಕಾರಿಗಳು ಬಾರೂಕನಿಗೆ, “ನೀನು ಮತ್ತು ಯೆರೆಮೀಯನು ಹೋಗಿ ಎಲ್ಲಿಯಾದರೂ ಅಡಗಿಕೊಳ್ಳಿರಿ. ಎಲ್ಲಿ ಅಡಗಿಕೊಂಡಿದ್ದೀರೆಂಬುದನ್ನು ಯಾರಿಗೂ ತಿಳಿಸಬೇಡಿ” ಎಂದು ಹೇಳಿದರು.

20 ಅನಂತರ ರಾಜಾಧಿಕಾರಿಗಳು ಆ ಸುರುಳಿಯನ್ನು ಧರ್ಮಶಾಸ್ತ್ರಜ್ಞನಾದ ಎಲೀಷಾಮನ ಕೋಣೆಯಲ್ಲಿ ಇಟ್ಟರು. ಅವರು ರಾಜನಾದ ಯೆಹೋಯಾಕೀಮನ ಬಳಿಗೆ ಹೋಗಿ ಆ ಸುರುಳಿಯ ಬಗ್ಗೆ ವಿವರವಾಗಿ ಹೇಳಿದರು.

21 ರಾಜನಾದ ಯೆಹೋಯಾಕೀಮನು ಆ ಸುರುಳಿಯನ್ನು ತರುವದಕ್ಕೆ ಯೆಹೂದಿಯನ್ನು ಕಳುಹಿಸಿದನು. ಯೆಹೂದಿಯು ಧರ್ಮಶಾಸ್ತ್ರಜ್ಞನಾದ ಎಲೀಷಾಮನ ಕೋಣೆಯಿಂದ ಆ ಸುರುಳಿಯನ್ನು ತಂದನು. ಬಳಿಕ ರಾಜನು ಮತ್ತು ಅವನ ಸುತ್ತಲು ನಿಂತ ಅಧಿಕಾರಿಗಳೆಲ್ಲ ಕೇಳುವಂತೆ ಯೆಹೂದಿಯು ಆ ಸುರಳಿಯನ್ನು ಓದಿದನು. 22 ಅದು ನಡೆದದ್ದು ಒಂಭತ್ತನೇ ತಿಂಗಳಲ್ಲಿ, ರಾಜನಾದ ಯೆಹೋಯಾಕೀಮನು ಚಳಿಗಾಲದ ಮನೆಯಲ್ಲಿ ಕುಳಿತಿದ್ದನು. ರಾಜನ ಎದುರಿಗಿದ್ದ ಒಂದು ಸಣ್ಣ ಅಗ್ಗಿಷ್ಟಿಕೆಯಲ್ಲಿ ಬೆಂಕಿಯು ಉರಿಯುತ್ತಿತು. 23 ಯೆಹೂದಿಯು ಸುರುಳಿಯನ್ನು ಓದಲು ಪ್ರಾರಂಭಿಸಿದನು. ಆದರೆ ಅವನು ಎರಡು ಅಥವಾ ಮೂರು ಅಂಕಣಗಳನ್ನು ಓದಿ ಮುಗಿಸಿದ ಕೂಡಲೆ ರಾಜನಾದ ಯೆಹೋಯಾಕೀಮನು ಆ ಸುರುಳಿಯನ್ನು ಕಸಿದುಕೊಂಡು ಆ ಅಂಕಣಗಳನ್ನು ಒಂದು ಸಣ್ಣ ಚೂರಿಯಿಂದ ಕತ್ತರಿಸಿ ಅಗ್ಗಿಷ್ಟಿಕೆಯಲ್ಲಿ ಎಸೆಯತೊಡಗಿದನು. ಕೊನೆಗೆ ಇಡೀ ಸುರುಳಿಯನ್ನು ಸುಟ್ಟುಹಾಕಲಾಯಿತು. 24 ಈ ಸುರುಳಿಯಲ್ಲಿದ್ದ ಸಂದೇಶವನ್ನು ಕೇಳಿ ರಾಜನಾದ ಯೆಹೋಯಾಕೀಮನು ಮತ್ತು ಅವನ ಸೇವಕರು ಗಾಬರಿಯಾಗಲಿಲ್ಲ. ತಾವು ತಪ್ಪು ಮಾಡಿದ್ದಕ್ಕಾಗಿ ದುಃಖವನ್ನು ಸೂಚಿಸಲು ಅವರು ತಮ್ಮ ವಸ್ತ್ರಗಳನ್ನು ಹರಿದುಕೊಳ್ಳಲಿಲ್ಲ.

25 ಎಲ್ನಾಥಾನನೂ ದೆಲಾಯನೂ ಗೆಮರ್ಯನೂ ಅದನ್ನು ಸುಡಬೇಡವೆಂದು ರಾಜನಿಗೆ ಹೇಳುವ ಪ್ರಯತ್ನ ಮಾಡಿದರು. ಆದರೆ ರಾಜನು ಅವರ ಮಾತನ್ನು ಕೇಳಲಿಲ್ಲ. 26 ರಾಜನಾದ ಯೆಹೋಯಾಕೀಮನು ಲಿಪಿಕಾರನಾದ ಬಾರೂಕನನ್ನು ಮತ್ತು ಪ್ರವಾದಿಯಾದ ಯೆರೆಮೀಯನನ್ನು ಬಂಧಿಸಬೇಕೆಂದು ರಾಜವಂಶೀಯನಾದ ಎರಖ್ಮೆಯೇಲ, ಅಜ್ರಿಯೇಲನ ಮಗನಾದ ಸೆರಾಯ, ಅಬ್ದೆಯೇಲನ ಮಗನಾದ ಶೆಲೆಮ್ಯ ಇವರಿಗೆ ಆಜ್ಞೆಯನ್ನು ಕೊಟ್ಟನು. ಆದರೆ ಅವರಿಂದ ಬಾರೂಕನನ್ನು ಮತ್ತು ಯೆರೆಮೀಯನನ್ನು ಹುಡುಕಲಾಗಲಿಲ್ಲ. ಯಾಕೆಂದರೆ ಯೆಹೋವನು ಅವರನ್ನು ಬಚ್ಚಿಟ್ಟಿದ್ದನು.

2 ಕೊರಿಂಥದವರಿಗೆ 7:2-12

ಪೌಲನ ಆನಂದ

ನಿಮ್ಮ ಹೃದಯಗಳಲ್ಲಿ ನಮಗೆ ಸ್ಥಳವನ್ನು ಕೊಡಿರಿ. ನಾವು ನಿಮ್ಮಲ್ಲಿ ಯಾರಿಗೂ ಕೆಟ್ಟದ್ದನ್ನು ಮಾಡಿಲ್ಲ. ಯಾರ ನಂಬಿಕೆಯನ್ನೂ ಹಾಳುಮಾಡಿಲ್ಲ; ಯಾರನ್ನೂ ವಂಚಿಸಲಿಲ್ಲ. ನಾನು ಇದನ್ನು ಹೇಳುತ್ತಿರುವುದು ನಿಮ್ಮನ್ನು ನಿಂದಿಸುವುದಕ್ಕಾಗಿಯಲ್ಲ. ನಿಮ್ಮೊಂದಿಗೆ ಬದುಕುವಷ್ಟರಮಟ್ಟಿಗೆ ಮತ್ತು ಸಾಯುವಷ್ಟರಮಟ್ಟಿಗೆ ನಿಮ್ಮನ್ನು ಅಪಾರವಾಗಿ ಪ್ರೀತಿಸುತ್ತೇವೆಂದು ನಾನು ಮೊದಲೇ ನಿಮಗೆ ತಿಳಿಸಿದ್ದೇನೆ. ನಿಮ್ಮ ವಿಷಯದಲ್ಲಿ ನನಗೆ ಬಹಳ ಭರವಸವಿದೆ. ನಾನು ನಿಮ್ಮ ವಿಷಯದಲ್ಲಿ ಹೆಮ್ಮೆಪಡುತ್ತೇನೆ. ನೀವು ನನ್ನನ್ನು ಬಹಳವಾಗಿ ಸಂತೈಸಿದಿರಿ. ನಮ್ಮ ಎಲ್ಲಾ ಇಕ್ಕಟ್ಟುಗಳಲ್ಲಿಯೂ ನನಗೆ ಮಹಾ ಆನಂದವಿದೆ.

ನಾವು ಮಕೆದೋನಿಯಕ್ಕೆ ಬಂದಾಗ ನಮಗೆ ವಿಶ್ರಾಂತಿಯೇ ಇರಲಿಲ್ಲ. ನಮ್ಮ ಸುತ್ತಮುತ್ತಲೆಲ್ಲಾ ಇಕ್ಕಟ್ಟುಗಳಿದ್ದವು. ಹೊರಗೆ ಕಲಹವಿತ್ತು, ಒಳಗೆ ಭಯವಿತ್ತು. ಆದರೆ ದೇವರು ಇಕ್ಕಟ್ಟುಗಳಲ್ಲಿರುವ ಜನರನ್ನು ಸಂತೈಸುತ್ತಾನೆ. ತೀತನು ಬಂದಾಗ ದೇವರು ನಮ್ಮನ್ನು ಸಂತೈಸಿದನು. ಅವನ ಆಗಮನದಿಂದಲೂ ನೀವು ಅವನಿಗೆ ಕೊಟ್ಟ ಆದರಣೆಯಿಂದಲೂ ನಮಗೆ ಸಮಾಧಾನವಾಯಿತು. ನನ್ನನ್ನು ನೋಡಲು ನಿಮಗಿರುವ ಹಂಬಲದ ಕುರಿತಾಗಿಯೂ ನಿಮ್ಮ ಕಾರ್ಯಗಳಿಂದ ನಿಮಗಾಗಿರುವ ದುಃಖದ ಕುರಿತಾಗಿಯೂ ನನ್ನ ವಿಷಯವಾಗಿ ನಿಮಗಿರುವ ಮಹಾಹಿತಚಿಂತನೆಯ ಕುರಿತಾಗಿಯೂ ಅವನು ನನಗೆ ಹೇಳಿದಾಗ ನನಗೆ ಬಹಳ ಸಂತೋಷವಾಯಿತು.

ನಾನು ನಿಮಗೆ ಬರೆದ ಪತ್ರವು ನಿಮಗೆ ದುಃಖವನ್ನು ಉಂಟುಮಾಡಿದ್ದರೂ, ಅದನ್ನು ಬರೆದದ್ದಕ್ಕೆ ನನಗೆ ದುಃಖವಿಲ್ಲ, ಆ ಪತ್ರವು ನಿಮಗೆ ದುಃಖವನ್ನು ಉಂಟು ಮಾಡಿತೆಂದು ನನಗೆಗೊತ್ತಿದೆ. ಆ ವಿಷಯದಲ್ಲಿ ನನಗೆ ವ್ಯಸನವಾಯಿತು. ಆದರೆ ಅದು ನಿಮ್ಮನ್ನು ಸ್ವಲ್ಪಕಾಲದವರೆಗೆ ಮಾತ್ರ ದುಃಖಿತರನ್ನಾಗಿ ಮಾಡಿತು. ಈಗ ನಾನು ಸಂತೋಷವಾಗಿದ್ದೇನೆ. ನಿಮ್ಮನ್ನು ದುಃಖಿತರನ್ನಾಗಿ ಮಾಡಿದ್ದಕ್ಕಾಗಿ ನಾನು ದುಃಖಿಸುತ್ತಿಲ್ಲ. ಆದರೆ ನಿಮ್ಮ ದುಃಖವು ನಿಮ್ಮ ಹೃದಯಗಳಲ್ಲಿ ಪರಿವರ್ತನೆಯನ್ನು ಉಂಟುಮಾಡಿದ್ದರಿಂದ ನಾನು ಸಂತೋಷವಾಗಿದ್ದೇನೆ. ದೇವರ ಇಚ್ಫೆಗನುಸಾರವಾಗಿ ನೀವು ದುಃಖಿತರಾದಿರಿ. ಆದ್ದರಿಂದ ನಮ್ಮಿಂದ ನಿಮಗೆ ಯಾವ ರೀತಿಯಲ್ಲಿಯೂ ನೋವಾಗಲಿಲ್ಲ. 10 ದೇವರ ಇಷ್ಟಾನುಸಾರವಾದ ದುಃಖವು ಹೃದಯವನ್ನೂ ಜೀವಿತವನ್ನೂ ಪರಿವರ್ತಿಸುತ್ತದೆ. ಈ ಪರಿವರ್ತನೆಯು ರಕ್ಷಣೆಗೆ ನಡೆಸುತ್ತದೆ. ಈ ಪರಿವರ್ತನೆಯ ವಿಷಯದಲ್ಲಿ ನಾವು ವ್ಯಸನಪಡಬೇಕಾಗಿಲ್ಲ. ಆದರೆ, ಲೋಕವು ಹೊಂದಿರುವ ದುಃಖವು ಮರಣವನ್ನು ಬರಮಾಡುತ್ತದೆ. 11 ನೀವು ಯಾವ ದುಃಖವನ್ನು ಹೊಂದಿರಬೇಕೆಂದು ದೇವರು ಬಯಸಿದ್ದನೋ ಅದೇ ದುಃಖವನ್ನು ನೀವು ಹೊಂದಿದ್ದೀರಿ. ಆ ದುಃಖವು ನಿಮ್ಮನ್ನು ಬಹು ಆಸಕ್ತಿಯುಳ್ಳವರನ್ನಾಗಿ ಮಾಡಿತು; ನೀವು ತಪ್ಪಿತಸ್ಥರಾಗಿರಲಿಲ್ಲವೆಂದು ನಿರೂಪಿಸಬೇಕೆಂಬ ಬಯಕೆಯನ್ನು ನಿಮ್ಮಲ್ಲಿ ಉಂಟುಮಾಡಿತು; ನಿಮ್ಮನ್ನು ಕೋಪಗೊಳಿಸಿತು ಮತ್ತು ಭಯಗೊಳಿಸಿತು; ನನ್ನನ್ನು ನೋಡಬೇಕೆಂಬ ಬಯಕೆಯನ್ನು ನಿಮ್ಮಲ್ಲಿ ಉಂಟುಮಾಡಿತು; ನನ್ನ ಬಗ್ಗೆ ಚಿಂತಿಸುವಂತೆ ಮಾಡಿತು; ತಪ್ಪಿತಸ್ಥರನ್ನು ದಂಡಿಸಬೇಕೆಂಬ ಬಯಕೆಯನ್ನು ಉಂಟು ಮಾಡಿತು. ಆ ಸಮಸ್ಯೆಯ ಯಾವ ವಿಷಯದಲ್ಲಿಯೂ ನೀವು ಅಪರಾಧಿಗಳಾಗಿರಲಿಲ್ಲವೆಂದು ನಿರೂಪಿಸಿದಿರಿ. 12 ನಾನು ಆ ಪತ್ರವನ್ನು ಬರೆದದ್ದು ತಪ್ಪು ಮಾಡಿದವನಿಗೋಸ್ಕರವಲ್ಲ, ಆ ತಪ್ಪಿನಿಂದ ದುಃಖಕ್ಕೆ ಒಳಗಾದವನಿಗೋಸ್ಕರವೂ ಅಲ್ಲ. ಆದರೆ ನಮ್ಮ ವಿಷಯದಲ್ಲಿ ನಿಮಗಿರುವ ಮಹಾಚಿಂತೆಯನ್ನು ನೀವು ದೇವರ ಎದುರಿನಲ್ಲಿ ನೋಡುವಂತಾಗಬೇಕೆಂದು ಆ ಪತ್ರವನ್ನು ಬರೆದೆನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International