Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 119:89-96

89 ಯೆಹೋವನೇ, ನಿನ್ನ ವಾಕ್ಯವು ಪರಲೋಕದಲ್ಲಿ ಶಾಶ್ವತವಾಗಿ ಸ್ಥಾಪಿಸಲ್ಪಟ್ಟಿದೆ.
90 ನಿನ್ನ ನಂಬಿಗಸ್ತಿಕೆಯು ತಲತಲಾಂತರಕ್ಕೂ ಇರುವುದು.
    ನೀನು ಭೂಮಿಯನ್ನು ಸೃಷ್ಟಿಸಿದೆ; ಅದು ಇಂದಿಗೂ ಸ್ಥಿರವಾಗಿ ನಿಂತಿದೆ.
91 ನಿನ್ನ ಆಜ್ಞೆಗಳಿಗನುಸಾರವಾಗಿ ಅದು ಸ್ಥಿರವಾಗಿಯೇ ಇದೆ.
    ಅವುಗಳೆಲ್ಲಾ ಸೇವಕರಂತೆ ನಿನ್ನ ಆಜ್ಞೆಗಳಿಗೆ ವಿಧೇಯವಾಗಿವೆ.
92 ನಿನ್ನ ಉಪದೇಶಗಳು ನನಗೆ ಆನಂದಕರವಾಗಿವೆ;
    ಇಲ್ಲವಾಗಿದ್ದರೆ ಸಂಕಟವು ನನ್ನನ್ನು ನಾಶಮಾಡಿಬಿಡುತ್ತಿತ್ತು.
93 ನಾನು ನಿನ್ನ ಆಜ್ಞೆಗಳನ್ನು ಮರೆಯುವುದೇ ಇಲ್ಲ.
    ಯಾಕೆಂದರೆ ನಾನು ಬದುಕಿರುವುದು ಅವುಗಳಿಂದಲೇ.
94 ನಾನು ನಿನ್ನವನು, ನನ್ನನ್ನು ರಕ್ಷಿಸು!
    ನಿನ್ನ ಆಜ್ಞೆಗಳಿಗೆ ಆಸಕ್ತಿಯಿಂದ ವಿಧೇಯನಾಗಿದ್ದೇನೆ.
95 ದುಷ್ಟರು ನನ್ನನ್ನು ನಾಶಮಾಡಲು ಪ್ರಯತ್ನಿಸಿದರು,
    ಆದರೆ ನಿನ್ನ ಒಡಂಬಡಿಕೆಯು ನನ್ನನ್ನು ಜ್ಞಾನಿಯನ್ನಾಗಿ ಮಾಡಿತು.
96 ನಿನ್ನ ಧರ್ಮಶಾಸ್ತ್ರದ ಹೊರತು
    ಬೇರೆಲ್ಲವುಗಳಿಗೂ ಮೇರೆಯಿದೆ.

ಯೆರೆಮೀಯ 36:1-10

ಯೆಹೋಯಾಕೀಮನು ಯೆರೆಮೀಯನ ಗ್ರಂಥವನ್ನು ಸುಟ್ಟದ್ದು

36 ಯೋಷೀಯನ ಮಗನಾದ ಯೆಹೋಯಾಕೀಮನ ಆಳ್ವಿಕೆಯ ನಾಲ್ಕನೇ ವರ್ಷದಲ್ಲಿ ಯೆರೆಮೀಯನಿಗೆ ಯೆಹೋವನಿಂದ ಒಂದು ಸಂದೇಶ ಬಂದಿತು. ಯೆಹೋವನ ಸಂದೇಶ ಹೀಗಿತ್ತು: “ಯೆರೆಮೀಯನೇ, ಒಂದು ಸುರಳಿಯನ್ನು ತೆಗೆದುಕೊಂಡು ನಾನು ನಿನಗೆ ಹೇಳಿದ ಎಲ್ಲಾ ಸಂದೇಶಗಳನ್ನು ಅದರಲ್ಲಿ ಬರೆದಿಡು. ನಾನು ನಿನಗೆ ಇಸ್ರೇಲ್ ಮತ್ತು ಯೆಹೂದ ಜನಾಂಗಗಳ ಬಗ್ಗೆಯೂ ಮತ್ತು ಉಳಿದ ಜನಾಂಗಗಳ ಬಗ್ಗೆಯೂ ಹೇಳಿದ್ದೇನೆ. ಯೋಷೀಯನ ಆಳ್ವಿಕೆಯ ಕಾಲದಿಂದ ಇಲ್ಲಿಯವರೆಗೂ ನಾನು ನಿನಗೆ ಹೇಳಿದ ಪ್ರತಿಯೊಂದು ಶಬ್ಧವನ್ನೂ ಬರೆದಿಡು. ನಾನು ಮಾಡಬೇಕೆಂದು ಯೋಚಿಸಿರುವುದನ್ನು ಯೆಹೂದ ಕುಲದವರು ಕೇಳಿಸಿಕೊಳ್ಳಬಹುದು. ಅವರು ಮಾಡುತ್ತಿರುವ ದುಷ್ಕೃತ್ಯಗಳನ್ನು ನಿಲ್ಲಿಸಬಹುದು. ಅವರು ಹಾಗೆ ಮಾಡಿದರೆ ಅವರು ಮಾಡಿದ ಪಾಪಗಳನ್ನು ನಾನು ಕ್ಷಮಿಸುವೆನು.”

ಆಗ ಯೆರೆಮೀಯನು ಬಾರೂಕನೆಂಬ ಒಬ್ಬ ವ್ಯಕ್ತಿಯನ್ನು ಕರೆದನು. ಬಾರೂಕನು ನೇರೀಯನ ಮಗ. ಯೆರೆಮೀಯನು ಯೆಹೋವನ ಸಂದೇಶವನ್ನು ಹೇಳುತ್ತಿದ್ದಾಗ ಬಾರೂಕನು ಆ ಸಂದೇಶವನ್ನು ಸುರುಳಿಯ ಮೇಲೆ ಬರೆದನು. ಆಗ ಯೆರೆಮೀಯನು ಬಾರೂಕನಿಗೆ ಹೀಗೆ ಹೇಳಿದನು: “ಯೆಹೋವನ ಆಲಯಕ್ಕೆ ನಾನು ಹೋಗಲಾರೆ. ಅಲ್ಲಿ ಹೋಗುವದಕ್ಕೆ ಅಪ್ಪಣೆಯಿಲ್ಲ. ಆದ್ದರಿಂದ ನೀನು ಯೆಹೋವನ ಆಲಯಕ್ಕೆ ಉಪವಾಸದ ದಿನ ಹೋಗು ಮತ್ತು ಸುರುಳಿಯಲ್ಲಿ ಬರೆದದ್ದನ್ನು ಜನರ ಮುಂದೆ ಓದು. ನಾನು ಹೇಳುತ್ತಿದ್ದಂತೆಯೇ ನೀನು ಸುರುಳಿಯ ಮೇಲೆ ಬರೆದುಕೊಂಡ ಯೆಹೋವನ ಸಂದೇಶಗಳನ್ನು ಆ ಜನರ ಮುಂದೆ ಓದು. ತಾವು ವಾಸಮಾಡುವ ಸ್ಥಳಗಳಿಂದ ಜೆರುಸಲೇಮಿಗೆ ಬಂದಿರುವ ಎಲ್ಲಾ ಯೆಹೂದ್ಯರ ಮುಂದೆ ಆ ಸಂದೇಶಗಳನ್ನು ಓದು. ಬಹುಶಃ ಆ ಜನರು ತಮಗೆ ಸಹಾಯಮಾಡೆಂದು ಯೆಹೋವನನ್ನು ಪ್ರಾರ್ಥಿಸಬಹುದು. ಆಗ ಪ್ರತಿಯೊಬ್ಬನೂ ದುಷ್ಕೃತ್ಯ ಮಾಡುವದನ್ನು ನಿಲ್ಲಿಸಬಹುದು. ಆ ಜನರ ಮೇಲೆ ತನಗೆ ಬಹಳ ಕೋಪಬಂದಿದೆ ಎಂದು ಯೆಹೋವನು ಪ್ರಕಟಿಸಿದ್ದಾನೆ.” ಪ್ರವಾದಿಯಾದ ಯೆರೆಮೀಯನು ತನಗೆ ಮಾಡಲು ಹೇಳಿದಂತೆ ನೇರೀಯನ ಮಗನಾದ ಬಾರೂಕನು ಮಾಡಿದನು. ಬಾರೂಕನು ಸುರುಳಿಯ ಮೇಲೆ ಬರೆದ ಯೆಹೋವನ ಸಂದೇಶಗಳನ್ನು ಗಟ್ಟಿಯಾಗಿ ಯೆಹೋವನ ಆಲಯದಲ್ಲಿ ಓದಿದನು.

ಯೆಹೋಯಾಕೀಮನ ಆಳ್ವಿಕೆಯ ಐದನೇ ವರ್ಷದ ಒಂಭತ್ತನೇ ತಿಂಗಳಲ್ಲಿ ಒಂದು ಉಪವಾಸವನ್ನು ಪ್ರಕಟಿಸಲಾಯಿತು. ಜೆರುಸಲೇಮ್ ನಗರದ ನಿವಾಸಿಗಳೆಲ್ಲರೂ ಯೆಹೂದದ ಬೇರೆ ಊರುಗಳಿಂದ ಜೆರುಸಲೇಮಿಗೆ ಬಂದವರೆಲ್ಲರೂ ಯೆಹೋವನ ಆಲಯದಲ್ಲಿ ಉಪವಾಸ ಮಾಡುವರೆಂದು ಗೊತ್ತುಪಡಿಸಲಾಗಿತ್ತು. 10 ಆ ಸಂದರ್ಭದಲ್ಲಿ ಯೆರೆಮೀಯನು ಹೇಳಿದ ಆ ಸಂದೇಶವನ್ನು ಬಾರೂಕನು ಓದಿದನು. ಅವನು ಯೆಹೋವನ ಆಲಯದಲ್ಲಿ ಆ ಸುರುಳಿಯನ್ನು ಓದಿದನು. ಯೆಹೋವನ ಆಲಯದಲ್ಲಿದ್ದ ಎಲ್ಲಾ ಜನರು ಕೇಳುವಂತೆ ಬಾರೂಕನು ಆ ಸುರುಳಿಯನ್ನು ಓದಿದನು. ಆ ಸುರುಳಿಯನ್ನು ಓದುವಾಗ ಬಾರೂಕನು ಮೇಲಿನ ಪ್ರಾಕಾರದಲ್ಲಿದ್ದ ಗೆಮರ್ಯನ ಕೋಣೆಯಲ್ಲಿದ್ದನು. ಆ ಕೋಣೆಯು ಪವಿತ್ರ ಆಲಯದ ಹೊಸ ಬಾಗಿಲಿನ ಹತ್ತಿರ ಇತ್ತು. ಗೆಮರ್ಯನು ಶಾಫಾನನ ಮಗನಾಗಿದ್ದನು. ಗೆಮರ್ಯನು ಯೆಹೋವನ ಆಲಯದಲ್ಲಿ ಯೆಹೂದ್ಯ ಧರ್ಮಶಾಸ್ತ್ರಜ್ಞನಾಗಿದ್ದನು.

1 ಕೊರಿಂಥದವರಿಗೆ 14:1-12

ಸಭೆಯ ಸಹಾಯಕ್ಕಾಗಿ ಆತ್ಮಿಕ ವರಗಳನ್ನು ಉಪಯೋಗಿಸಿರಿ

14 ಪ್ರೀತಿಯೇ ನಿಮ್ಮ ಗುರಿಯಾಗಿರಲಿ. ಅಲ್ಲದೆ ಪವಿತ್ರಾತ್ಮನ ವರಗಳನ್ನು ಹೊಂದಿಕೊಳ್ಳಲು ವಿಶೇಷವಾಗಿ ಪ್ರವಾದಿಸುವ ವರವನ್ನು ಬಹಳವಾಗಿ ಅಪೇಕ್ಷಿಸಬೇಕು. ಅದಕ್ಕೆ ಕಾರಣವೇನೆಂದರೆ: ಪರಭಾಷೆಯಲ್ಲಿ ಮಾತಾಡುವ ವರವನ್ನು ಹೊಂದಿರುವವನು ಜನರೊಂದಿಗೆ ಮಾತಾಡುವುದಿಲ್ಲ. ಅವನು ದೇವರೊಂದಿಗೆ ಮಾತಾಡುತ್ತಾನೆ. ಯಾರೂ ಅವನನ್ನು ಅರ್ಥಮಾಡಿಕೊಳ್ಳುವುದಿಲ್ಲ. ಏಕೆಂದರೆ ಅವನು ಪವಿತ್ರಾತ್ಮನ ಮೂಲಕವಾಗಿ ರಹಸ್ಯ ಸಂಗತಿಗಳನ್ನು ಮಾತಾಡುತ್ತಿರುತ್ತಾನೆ. ಆದರೆ ಪ್ರವಾದಿಸುವವನು ಜನರೊಂದಿಗೆ ಮಾತಾಡುತ್ತಾನೆ. ಅವನು ಜನರಿಗೆ ಶಕ್ತಿಯನ್ನು, ಪ್ರೋತ್ಸಾಹವನ್ನು ಮತ್ತು ಆದರಣೆಯನ್ನು ಕೊಡುತ್ತಾನೆ. ಪರಭಾಷೆಯಲ್ಲಿ ಮಾತಾಡುವ ವ್ಯಕ್ತಿಯು ತನಗೆ ಮಾತ್ರ ಸಹಾಯ ಮಾಡಿಕೊಳ್ಳುವನು. ಆದರೆ ಪ್ರವಾದಿಸುವವನು ಇಡೀ ಸಭೆಗೆ ಸಹಾಯ ಮಾಡುತ್ತಾನೆ.

ವಿವಿಧ ಭಾಷೆಗಳಲ್ಲಿ ಮಾತಾಡುವ ವರವನ್ನು ನೀವೆಲ್ಲರೂ ಹೊಂದಿರಬೇಕೆಂದು ನನ್ನ ಅಪೇಕ್ಷೆಯಾಗಿದೆ. ಆದರೆ ನೀವು ಪ್ರವಾದಿಸಬೇಕೆಂದು ನಾನು ಇನ್ನೂ ಹೆಚ್ಚಾಗಿ ಅಪೇಕ್ಷಿಸುತ್ತೇನೆ. ಕೇವಲ ವಿವಿಧ ಭಾಷೆಗಳನ್ನು ಮಾತನಾಡುವವನಿಗಿಂತಲೂ ಪ್ರವಾದಿಸುವವನು ಹೆಚ್ಚು ಶ್ರೇಷ್ಠನಾಗಿದ್ದಾನೆ. ಆದರೆ ವಿವಿಧ ಭಾಷೆಗಳಲ್ಲಿ ಮಾತಾಡುವವನು ಆ ಭಾಷೆಗಳನ್ನು ಅನುವಾದಿಸಬಲ್ಲವನಾಗಿದ್ದರೆ, ಅವನು ಪ್ರವಾದಿಸುವವನಷ್ಟೇ ಶ್ರೇಷ್ಠನಾಗುತ್ತಾನೆ. ಆಗ ಅವನು ಹೇಳುವ ಸಂಗತಿಗಳ ಮೂಲಕ ಸಭೆಗೆ ಸಹಾಯವಾಗುವುದು.

ಸಹೋದರ ಸಹೋದರಿಯರೇ, ನಾನು ವಿವಿಧ ಭಾಷೆಗಳನ್ನು ಮಾತಾಡುವವನಾಗಿ ನಿಮ್ಮ ಬಳಿಗೆ ಬಂದರೆ ಅದರಿಂದ ನಿಮಗೆ ಸಹಾಯವಾಗುವುದೇ? ಇಲ್ಲ! ನಾನು ನಿಮಗೆ ಹೊಸ ಸತ್ಯವನ್ನು, ಜ್ಞಾನವನ್ನು, ಪ್ರವಾದನೆಯನ್ನು ಮತ್ತು ಉಪದೇಶವನ್ನು ತಂದರೆ ಮಾತ್ರ ನಿಮಗೆ ಸಹಾಯವಾಗುತ್ತದೆ. ನಾದವನ್ನು ಹೊರಹೊಮ್ಮಿಸುವ ಕೊಳಲು ಅಥವಾ ವೀಣೆ ಮುಂತಾದ ನಿರ್ಜೀವ ವಸ್ತುಗಳಿಗೆ ಇದು ಸರಿಹೋಲುತ್ತದೆ. ವಿವಿಧ ಧ್ವನಿಗಳು ಸ್ಪಷ್ಟವಾಗಿಲ್ಲದಿದ್ದರೆ ಯಾವ ಹಾಡನ್ನು ನುಡಿಸಲಾಗುತ್ತಿದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಲಾರಿರಿ. ಪ್ರತಿಯೊಂದು ಧ್ವನಿಯನ್ನು ಸ್ಪಷ್ಟವಾಗಿ ನುಡಿಸಿದಾಗ ಮಾತ್ರ ನೀವು ಸ್ವರವನ್ನು ಅರ್ಥಮಾಡಿಕೊಳ್ಳುವಿರಿ. ಇದಲ್ಲದೆ ಯುದ್ಧದಲ್ಲಿ ಕಹಳೆಯನ್ನು ಸ್ಪಷ್ಟವಾಗಿ ಊದದಿದ್ದರೆ, ಇದು ಯುದ್ಧಕ್ಕೆ ಸಿದ್ಧರಾಗುವ ಸಮಯವೆಂಬುದು ಸೈನಿಕರಿಗೆ ತಿಳಿಯುವುದಿಲ್ಲ.

ಇದು ನಿಮಗೂ ಅನ್ವಯಿಸುತ್ತದೆ. ನೀವು ನಿಮ್ಮ ನಾಲಿಗೆಯಿಂದ ಮಾತಾಡುವ ಪದಗಳು ಸ್ಪಷ್ಟವಾಗಿರಬೇಕು. ನೀವು ಸ್ಪಷ್ಟವಾಗಿ ಮಾತಾಡದಿದ್ದರೆ, ನೀವು ಏನು ಮಾತಾಡುತ್ತಿದ್ದೀರೆಂಬುದನ್ನು ಜನರು ಅರ್ಥಮಾಡಿಕೊಳ್ಳುವುದಿಲ್ಲ. ನೀವು ಗಾಳಿಯೊಂದಿಗೆ ಮಾತಾಡುತ್ತಿರುವಂತೆ ತೋರುವುದು. 10 ಪ್ರಪಂಚದಲ್ಲಿ ಹಲವಾರು ಭಾಷೆಗಳಿರುವುದೇನೋ ಸತ್ಯ ಮತ್ತು ಆ ಭಾಷೆಗಳಿಗೆಲ್ಲಾ ಅರ್ಥವಿದೆ. 11 ಆದ್ದರಿಂದ, ಒಬ್ಬ ವ್ಯಕ್ತಿಯು ಮಾತಾಡುವ ಭಾಷೆಯನ್ನು ನಾನು ಅರ್ಥಮಾಡಿಕೊಳ್ಳದಿದ್ದರೆ ಅವನು ನನಗೆ ವಿದೇಶಿಯನಂತಿರುವನು; ನಾನೂ ಅವನಿಗೆ ವಿದೇಶಿಯನಂತಿರುವೆನು. 12 ಇದು ನಿಮಗೂ ಅನ್ವಯಿಸುತ್ತದೆ. ನೀವು ಆತ್ಮಿಕ ವರಗಳನ್ನು ಬಹಳವಾಗಿ ಅಪೇಕ್ಷಿಸುತ್ತೀರಿ. ಆದ್ದರಿಂದ, ಸಭೆಯು ದೃಢವಾಗಿ ಬೆಳೆಯಲು ಸಹಾಯಕರವಾದ ವರಗಳನ್ನು ಹೊಂದಿಕೊಳ್ಳಲು ಹೆಚ್ಚಾಗಿ ಪ್ರಯತ್ನಿಸಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International