Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ನೆಹೆಮೀಯ 8:1-3

ಎಜ್ರನ ಧರ್ಮಶಾಸ್ತ್ರ ಪಠಣ

ಆ ವರ್ಷದ ಏಳನೆಯ ತಿಂಗಳಲ್ಲಿ ಎಲ್ಲಾ ಇಸ್ರೇಲರು ಒಂದೇ ಮನಸ್ಸುಳ್ಳವರಾಗಿ ಕೂಡಿಬಂದರು. ಅವರು ಬುಗ್ಗೆ ಬಾಗಿಲಿನ ಮುಂದಿದ್ದ ಜಾಗದಲ್ಲಿ ಸೇರಿಬಂದರು. ಇಸ್ರೇಲರಿಗೆ ಮೋಶೆಯ ಮೂಲಕವಾಗಿ ಯೆಹೋವನು ಕೊಟ್ಟಿದ್ದ ಧರ್ಮಶಾಸ್ತ್ರವನ್ನು ಓದಲು ಜನರು ಎಜ್ರನನ್ನು ಕೇಳಿಕೊಂಡರು. ಹೀಗೆ ಆ ವರ್ಷದ ಏಳನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಎಜ್ರನು ಧರ್ಮಶಾಸ್ತ್ರವನ್ನು ಆ ಜನರ ಮುಂದೆ ತಂದನು. ಆ ಜನಸಮೂಹದಲ್ಲಿ ಧರ್ಮಶಾಸ್ತ್ರಕ್ಕೆ ಕಿವಿಗೊಟ್ಟು ಗ್ರಹಿಸಿಕೊಳ್ಳಬಲ್ಲ ಸ್ತ್ರೀಪುರುಷರಿದ್ದರು. ಎಜ್ರನು ಮುಂಜಾನೆಯಿಂದ ಹಿಡಿದು ಮಧ್ಯಾಹ್ನದವರೆಗೆ ಬುಗ್ಗೆಬಾಗಿಲಿನ ಮುಂದೆ ಇರುವ ಮೈದಾನದಲ್ಲಿ ಸೇರಿ ಬಂದಿದ್ದ ಜನರೆದುರಾಗಿ ನಿಂತು ಗಟ್ಟಿಯಾಗಿ ಧರ್ಮಶಾಸ್ತ್ರವನ್ನು ಓದಿದನು. ಎಲ್ಲಾ ಜನರು ಎಚ್ಚರಿಕೆಯಿಂದ ಕೇಳಿ ಧರ್ಮಶಾಸ್ತ್ರವನ್ನು ಗ್ರಹಿಸಿಕೊಂಡರು.

ನೆಹೆಮೀಯ 8:5-6

ಎಜ್ರನು ಎತ್ತರವಾದ ವೇದಿಕೆಯ ಮೇಲೆ ನಿಂತಿದ್ದರಿಂದ ಎಲ್ಲರೂ ಅವನನ್ನು ನೋಡಲು ಸಾಧ್ಯವಾಯಿತು. ಎಜ್ರನು ಧರ್ಮಶಾಸ್ತ್ರವನ್ನು ತೆರೆಯುವಾಗ ಎಲ್ಲಾ ಜನರು ನಿಂತರು. ಎಜ್ರನು ಮಹೋನ್ನತ ದೇವರಾದ ಯೆಹೋವನನ್ನು ಸ್ತುತಿಸಿದನು. ಆಗ ಜನರೆಲ್ಲರೂ ಕೈಗಳನ್ನೆತ್ತಿ, “ಆಮೆನ್! ಆಮೆನ್!” ಎಂದು ಹೇಳಿದರು; ತಲೆಬಾಗಿ ಯೆಹೋವನನ್ನು ಆರಾಧಿಸಿದರು.

ನೆಹೆಮೀಯ 8:8-10

ಈ ಲೇವಿಯರು ಜನರಿಗೆ ಅರ್ಥವಾಗುವ ರೀತಿಯಲ್ಲಿ ದೇವರ ಧರ್ಮಶಾಸ್ತ್ರವನ್ನು ವಿವರಿಸಿ ಹೇಳಿದರು.

ಆಗ ಜನರೆಲ್ಲಾ ಅಳಲು ಪ್ರಾರಂಭಿಸಿದರು. ಆಗ ರಾಜ್ಯಪಾಲನಾದ ನೆಹೆಮೀಯನೂ ಯಾಜಕನೂ ಮತ್ತು ಉಪದೇಶಕನೂ ಆಗಿದ್ದ ಎಜ್ರನೂ ಲೇವಿಯರೂ ಎದ್ದುನಿಂತು ಜನರಿಗೆ, “ಈ ದಿನವು ನಿಮ್ಮ ದೇವರಾದ ಯೆಹೋವನಿಗೆ ವಿಶೇಷ ದಿನವಾಗಿದೆ. ಆದ್ದರಿಂದ ದುಃಖಿಸಬೇಡಿ ಮತ್ತು ಅಳಬೇಡಿರಿ” ಎಂದು ಹೇಳಿದರು.

10 “ಹೋಗಿ ಮೃಷ್ಟಾನ್ನ ಭೋಜನ ಮಾಡಿ ಸಿಹಿ ಪಾನೀಯಗಳನ್ನು ಕುಡಿಯಿರಿ. ಅಡಿಗೆ ಮಾಡದೆ ಇದ್ದವರಿಗೂ ಅವುಗಳನ್ನು ಕೊಡಿರಿ. ಈ ದಿನ ಯೆಹೋವನಿಗೆ ವಿಶೇಷ ದಿನವಾಗಿದೆ. ದುಃಖಿಸಬೇಡಿರಿ. ಯಾಕೆಂದರೆ ಯೆಹೋವನ ಸಂತೋಷವು ನಮ್ಮನ್ನು ಬಲಗೊಳಿಸುತ್ತದೆ” ಎಂದು ನೆಹೆಮೀಯನು ಜನರಿಗೆ ಹೇಳಿದನು.

ಕೀರ್ತನೆಗಳು 19

ರಚನೆಗಾರ: ದಾವೀದ.

19 ಆಕಾಶಮಂಡಲವು ದೇವರ ಮಹಿಮೆಯನ್ನು ಪ್ರಕಟಿಸುವುದು.
    ಗಗನವು ಆತನ ಕೈಕೆಲಸವನ್ನು ತಿಳಿಸುವುದು.
ಪ್ರತಿಯೊಂದು ದಿನವೂ ಅದರ ಕುರಿತು ಹೊಸ ವಿಷಯವನ್ನು ತಿಳಿಸುವುದು.
    ಪ್ರತಿಯೊಂದು ರಾತ್ರಿಯೂ ಅದರ ಕುರಿತು ಹೊಸ ಸಂಗತಿಯನ್ನು ಪ್ರಕಟಿಸುವುದು.
ಅವುಗಳ ಮಾತಾಗಲಿ
    ನುಡಿಗಳಾಗಲಿ ಸ್ವರವಾಗಲಿ ನಮಗೆ ಕೇಳಿಸದು.
ಆದರೂ ಅವುಗಳ ಸಂದೇಶವು ಭೂಲೋಕದಲ್ಲೆಲ್ಲಾ ಹರಡುತ್ತದೆ;
    ಭೂಮಿಯ ಕಟ್ಟಕಡೆಗಳವರೆಗೂ ವ್ಯಾಪಿಸುತ್ತದೆ.

ಆಕಾಶವು ಸೂರ್ಯನಿಗೆ ಮನೆಯಂತಿದೆ.
    ಮದುವೆಯ ಮಂಟಪದಿಂದ ಆನಂದದಿಂದ ಬರುವ ಮದುಮಗನಂತೆ ಸೂರ್ಯನು ಮುಂಜಾನೆ ಉದಯಿಸುವನು.
ಕ್ರೀಡಾಪಟುವಿನಂತೆ
    ಸೂರ್ಯನು ಆಕಾಶದಲ್ಲಿ ಓಡಲಾರಂಭಿಸುವನು.
ಸೂರ್ಯನು ಆಕಾಶದ ಒಂದು ಕಡೆಯಿಂದ ಉದಯಿಸಿ
    ಮತ್ತೊಂದು ಕೊನೆಗೆ ಓಡುತ್ತಾಹೋಗುವನು.
    ಅವನ ತಾಪಕ್ಕೆ ಯಾವುದೂ ಮರೆಯಾಗಿರಲಾರದು.

ಯೆಹೋವನ ಉಪದೇಶಗಳು ನಿಷ್ಕಳಂಕವಾಗಿವೆ.
    ಅವು ದೇವಜನರಿಗೆ ಬಲವನ್ನು ಕೊಡುತ್ತವೆ.
ಯೆಹೋವನ ಕಟ್ಟಳೆಯು ಭರವಸೆಗೆ ಯೋಗ್ಯವಾಗಿದೆ.
    ಅದು ಮೂಢರನ್ನು ಜ್ಞಾನಿಗಳನ್ನಾಗಿ ಮಾಡುತ್ತದೆ.
ಯೆಹೋವನ ನಿಯಮಗಳು ನೀತಿಯ ಕಟ್ಟಳೆಗಳಾಗಿವೆ.
    ಅವು ಮನುಸ್ಸನ್ನು ಸಂತೋಷಗೂಳಿಸುತ್ತವೆ.
ಯೆಹೋವನ ಆಜ್ಞೆಗಳು ಒಳ್ಳೆಯ ಆಜ್ಞೆಗಳಾಗಿವೆ.
    ಅವು ಕಣ್ಣುಗಳಿಗೆ ಬೆಳಕನ್ನು ನೀಡುತ್ತವೆ.

ಯೆಹೋವನಲ್ಲಿಡುವ ಭಯಭಕ್ತಿಯು ಪರಿಶುದ್ಧವಾಗಿದೆ;
    ಅದು ಶಾಶ್ವತವಾದದ್ದು.
ಯೆಹೋವನ ವಿಧಿಗಳು ಯಥಾರ್ಥವಾಗಿವೆ;
    ಅವು ಯಾವಾಗಲೂ ನ್ಯಾಯಾನುಸಾರವಾಗಿವೆ.
10 ಆತನ ಉಪದೇಶಗಳು ಬಂಗಾರಕ್ಕಿಂತಲೂ ಅಮೂಲ್ಯವಾಗಿವೆ;
    ಅಪ್ಪಟವಾದ ಜೇನುತುಪ್ಪಕ್ಕಿಂತಲೂ ಮಧುರವಾಗಿವೆ.
11 ಆತನ ಉಪದೇಶಗಳು ಆತನ ಸೇವಕನನ್ನು ಎಚ್ಚರಿಸುತ್ತವೆ;
    ಅವುಗಳನ್ನು ಕೈಕೊಂಡು ನಡೆದರೆ ಒಳ್ಳೆಯದಾಗುವುದು.

12 ಯೆಹೋವನೇ, ಯಾವನೂ ತನ್ನ ತಪ್ಪುಗಳನ್ನೆಲ್ಲಾ ತಿಳಿದುಕೊಳ್ಳುವುದಿಲ್ಲ.
    ಆದ್ದರಿಂದ ಗುಪ್ತ ಪಾಪಗಳನ್ನು ಮಾಡಲು ನನ್ನನ್ನು ಬಿಟ್ಟುಬಿಡಬೇಡ.
13 ನನ್ನ ಇಷ್ಟಾನುಸಾರ ಪಾಪಮಾಡಲು ನನ್ನನ್ನು ಬಿಟ್ಟುಬಿಡಬೇಡ.
    ಆ ಪಾಪಗಳು ನನ್ನನ್ನು ಆಳದಿರಲಿ.
ನೀನು ಸಹಾಯಮಾಡಿದರೆ
    ನಾನು ಪರಿಶುದ್ಧನಾಗಿಯೂ ಪಾಪದಿಂದ ವಿಮುಕ್ತನಾಗಿಯೂ ಇರಲು ಸಾಧ್ಯ.
14 ನನ್ನ ಮಾತುಗಳೂ ನನ್ನ ಆಲೋಚನೆಗಳೂ ನಿನಗೆ ಮೆಚ್ಚಿಕೆಯಾಗಿರಲಿ.
    ಯೆಹೋವನೇ, ನೀನೇ ನನ್ನ ಬಂಡೆಯಾಗಿರುವೆ.[a] ನನ್ನನ್ನು ರಕ್ಷಿಸುವಾತನು ನೀನೇ.

1 ಕೊರಿಂಥದವರಿಗೆ 12:12-31

ಕ್ರಿಸ್ತನ ದೇಹ

12 ದೇಹವು ಒಂದೇ, ಆದರೆ ಅದು ಅನೇಕ ಅಂಗಗಳನ್ನು ಪಡೆದಿದೆ. ಹೌದು, ದೇಹದಲ್ಲಿ ಅನೇಕ ಅಂಗಗಳಿವೆ, ಆದರೆ ಆ ಎಲ್ಲಾ ಅಂಗಗಳಿಂದ ಒಂದೇ ಒಂದು ದೇಹವು ರೂಪಿತವಾಗುತ್ತದೆ. ಅಂತೆಯೇ ಕ್ರಿಸ್ತನು. 13 ನಮ್ಮಲ್ಲಿ ಕೆಲವರು ಯೆಹೂದ್ಯರಿದ್ದಾರೆ, ಕೆಲವರು ಗ್ರೀಕರಿದ್ದಾರೆ, ಕೆಲವರು ಗುಲಾಮರಿದ್ದಾರೆ, ಕೆಲವರು ಸ್ವತಂತ್ರರಿದ್ದಾರೆ, ಆದರೆ ನಾವೆಲ್ಲರೂ ಒಂದೇ ದೇಹವಾಗುವುದಕ್ಕಾಗಿ ಒಬ್ಬನೇ ಪವಿತ್ರಾತ್ಮನ ಮೂಲಕ ದೀಕ್ಷಾಸ್ನಾನ ಮಾಡಿಸಿಕೊಂಡೆವು. ನಮ್ಮೆಲ್ಲರಿಗೂ ಒಬ್ಬನೇ ಪವಿತ್ರಾತ್ಮನನ್ನು ಕೊಡಲಾಯಿತು.[a]

14 ದೇಹವು ಒಂದು ಅಂಗಕ್ಕಿಂತಲೂ ಹೆಚ್ಚು ಅಂಗಗಳನ್ನು ಪಡೆದಿದೆ. ಅದು ಅನೇಕ ಅಂಗಗಳನ್ನು ಪಡೆದಿದೆ. 15 ಪಾದವು, “ನಾನು ಕೈಯಲ್ಲ, ಆದ್ದರಿಂದ ನಾನು ದೇಹಕ್ಕೆ ಸೇರಿಲ್ಲ” ಎಂದು ಹೇಳಬಹುದು. ಆದರೆ ಹೀಗೆ ಹೇಳಿದ ಮಾತ್ರಕ್ಕೆ ಪಾದವು ದೇಹದಿಂದ ಹೊರತಾಗಲಿಲ್ಲ. 16 ಕಿವಿಯು, “ನಾನು ಕಣ್ಣಲ್ಲ, ಆದ್ದರಿಂದ ನಾನು ದೇಹಕ್ಕೆ ಸೇರಿಲ್ಲ” ಎಂದು ಹೇಳಬಹುದು. ಆದರೆ ಹೀಗೆ ಹೇಳಿದ ಮಾತ್ರಕ್ಕೆ ಕಿವಿಯು ದೇಹದಿಂದ ಹೊರತಾಗಲಿಲ್ಲ. 17 ಇಡೀ ದೇಹವೇ ಕಣ್ಣಾಗಿದ್ದರೆ, ಕೇಳಿಸಿಕೊಳ್ಳಲು ದೇಹಕ್ಕೆ ಸಾಧ್ಯವಿರುತ್ತಿರಲಿಲ್ಲ. ಇಡೀ ದೇಹವೇ ಕಿವಿಯಾಗಿದ್ದರೆ, ದೇಹವು ಯಾವುದರ ವಾಸನೆಯನ್ನೂ ತಿಳಿದುಕೊಳ್ಳಲಾಗುತ್ತಿರಲಿಲ್ಲ. 18-19 ದೇಹದ ಪ್ರತಿಯೊಂದು ಅಂಗವು ಒಂದೇ ರೀತಿಯ ಅಂಗವಾಗಿದ್ದರೆ, ಆಗ ದೇಹವೇ ಇರುತ್ತಿರಲಿಲ್ಲ. ಆದರೆ ದೇವರು ತನ್ನ ಇಚ್ಛೆಗನುಸಾರವಾಗಿ ದೇಹದಲ್ಲಿ ಅಂಗಾಂಗಗಳನ್ನು ಇಟ್ಟಿದ್ದಾನೆ. ಆತನು ಅವುಗಳಲ್ಲಿ ಪ್ರತಿಯೊಂದಕ್ಕೂ ಸ್ಥಳವನ್ನು ಗೊತ್ತುಪಡಿಸಿದ್ದಾನೆ. 20 ಆದ್ದರಿಂದ ಅಂಗಗಳು ಅನೇಕವಿದ್ದರೂ ದೇಹವು ಒಂದೇ.

21 ಕಣ್ಣು, “ನೀನು ನನಗೆ ಅವಶ್ಯವಿಲ್ಲ” ಎಂದು ಕೈಗೆ ಹೇಳಲಾರದು ಮತ್ತು ತಲೆಯು, “ನೀನು ನನಗೆ ಅವಶ್ಯವಿಲ್ಲ” ಎಂದು ಪಾದಕ್ಕೆ ಹೇಳಲಾರದು. 22 ಅಲ್ಲದೆ ದೇಹದಲ್ಲಿ ಬಲಹೀನವಾಗಿ ತೋರುವ ಅಂಗಗಳು ನಿಜವಾಗಿಯೂ ಬಹಳ ಅವಶ್ಯವಾಗಿವೆ. 23 ನಾವು ದೇಹದ ಯಾವ ಅಂಗಗಳನ್ನು ಅಲ್ಪವಾದುವುಗಳೆಂದು ಎಣಿಸುತ್ತೇವೋ ಆ ಅಂಗಗಳ ಬಗ್ಗೆ ಹೆಚ್ಚು ಎಚ್ಚರಿಕೆ ತೆಗೆದುಕೊಳ್ಳುತ್ತೇವೆ. ನಾವು ನಮ್ಮ ಯಾವ ಅಂಗಗಳನ್ನು ತೋರಿಸಬಯಸುವುದಿಲ್ಲವೋ ಆ ಅಂಗಗಳನ್ನು ವಿಶೇಷವಾದ ರೀತಿಯಲ್ಲಿ ಸಂರಕ್ಷಿಸುತ್ತೇವೆ. 24 ಬಹು ಸುಂದರವಾದ ಅಂಗಗಳಿಗೆ ಇಂಥ ವಿಶೇಷ ಸಂರಕ್ಷಣೆಯ ಅಗತ್ಯವಿರುವುದಿಲ್ಲ. ಆದರೆ ದೇವರು ಅಂಗಗಳನ್ನು ಒಟ್ಟಾಗಿ ಸೇರಿಸಿದ್ದಾನೆ ಮತ್ತು ಕೊರತೆಯಲ್ಲಿರುವ ಅಂಗಗಳಿಗೆ ಹೆಚ್ಚಿನ ಮಾನ್ಯತೆಯನ್ನು ಕೊಟ್ಟಿದ್ದಾನೆ. 25 ನಮ್ಮ ದೇಹವು ವಿಭಜನೆಯಾಗದಂತೆ ಅಂಗಗಳು ಒಂದಕ್ಕೊಂದರ ಹಿತವನ್ನು ಸರಿಸಮನಾಗಿ ಗಮನಿಸುವಂತೆ ದೇವರು ಮಾಡಿದ್ದಾನೆ. 26 ಒಂದು ಅಂಗಕ್ಕೆ ನೋವಾದರೆ, ಉಳಿದೆಲ್ಲ ಅಂಗಗಳು ಅದರೊಂದಿಗೆ ನೋವನ್ನು ಅನುಭವಿಸುತ್ತವೆ. ಒಂದು ಅಂಗಕ್ಕೆ ಸನ್ಮಾನ ದೊರೆತರೆ, ಉಳಿದೆಲ್ಲ ಅಂಗಗಳು ಅದರ ಸನ್ಮಾನದಲ್ಲಿ ಪಾಲುಗಾರರಾಗುತ್ತವೆ.

27 ನೀವೆಲ್ಲರೂ ಒಂದುಗೂಡಿ ಕ್ರಿಸ್ತನ ದೇಹವಾಗಿದ್ದೀರಿ. ನಿಮ್ಮಲ್ಲಿ ಪ್ರತಿಯೊಬ್ಬರೂ ಅದರ ಅಂಗವಾಗಿದ್ದೀರಿ. 28 ದೇವರು ಸಭೆಯಲ್ಲಿ ಅಪೊಸ್ತಲರಿಗೆ ಮೊದಲನೆಯ ಸ್ಥಾನವನ್ನೂ ಪ್ರವಾದಿಗಳಿಗೆ ಎರಡನೆಯ ಸ್ಥಾನವನ್ನೂ ಉಪದೇಶಕರಿಗೆ ಮೂರನೆಯ ಸ್ಥಾನವನ್ನೂ ಇಟ್ಟಿದ್ದಾನೆ. ಇದಲ್ಲದೆ ದೇವರು, ಅದ್ಭುತಕಾರ್ಯಗಳನ್ನು ಮಾಡುವ ಜನರಿಗೂ ಸ್ಪಸ್ಥಪಡಿಸುವ ಜನರಿಗೂ ಇತರರಿಗೆ ಸಹಾಯಮಾಡುವ ಜನರಿಗೂ ಮುನ್ನಡೆಸಬಲ್ಲ ಜನರಿಗೂ ವಿವಿಧ ಭಾಷೆಗಳನ್ನು ಮಾತಾಡಬಲ್ಲ ಜನರಿಗೂ ಸಭೆಯಲ್ಲಿ ಸ್ಥಾನವನ್ನು ಕೊಟ್ಟಿದ್ದಾನೆ. 29 ಎಲ್ಲಾ ಜನರು ಅಪೊಸ್ತಲರುಗಳಲ್ಲ. ಎಲ್ಲಾ ಜನರು ಪ್ರವಾದಿಗಳಲ್ಲ. ಎಲ್ಲಾ ಜನರು ಉಪದೇಶಕರುಗಳಲ್ಲ. ಎಲ್ಲಾ ಜನರು ಅದ್ಭುತಕಾರ್ಯಗಳನ್ನು ಮಾಡುವುದಿಲ್ಲ. 30 ಎಲ್ಲಾ ಜನರು ಗುಣಪಡಿಸುವ ವರವನ್ನು ಹೊಂದಿಲ್ಲ. ಎಲ್ಲಾ ಜನರು ವಿವಿಧ ಭಾಷೆಗಳನ್ನು ಮಾತಾಡುವುದಿಲ್ಲ. ಎಲ್ಲಾ ಜನರು ಆ ಭಾಷೆಗಳನ್ನು ಅನುವಾದಿಸುವುದಿಲ್ಲ. 31 ಆದರೆ ನೀವು ಪವಿತ್ರಾತ್ಮನ ಇನ್ನೂ ಶ್ರೇಷ್ಠವಾದ ವರಗಳನ್ನು ಯಥಾರ್ಥವಾಗಿ ಅಪೇಕ್ಷಿಸತಕ್ಕದ್ದು. ಈಗ ನಾನು ನಿಮಗೆ ಎಲ್ಲಕ್ಕಿಂತಲೂ ಉತ್ತಮವಾದ ಮಾರ್ಗವನ್ನು ತೋರಿಸುತ್ತೇನೆ.

ಲೂಕ 4:14-21

ಜನರಿಗೆ ಯೇಸುವಿನ ಉಪದೇಶ

(ಮತ್ತಾಯ 4:12-17; ಮಾರ್ಕ 1:14-15)

14 ಯೇಸು ಪವಿತ್ರಾತ್ಮನ ಶಕ್ತಿಯಿಂದ ಕೂಡಿದವನಾಗಿ ಗಲಿಲಾಯಕ್ಕೆ ಹಿಂತಿರುಗಿ ಹೋದನು. ಯೇಸುವಿನ ಸುದ್ದಿಯು ಗಲಿಲಾಯದ ಸುತ್ತಮುತ್ತಲಿರುವ ಪ್ರದೇಶದಲ್ಲೆಲ್ಲಾ ಹಬ್ಬಿತು. 15 ಯೇಸು ಸಭಾಮಂದಿರಗಳಲ್ಲಿ ಉಪದೇಶಿಸಲು ಪ್ರಾರಂಭಿಸಿದನು. ಜನರೆಲ್ಲರೂ ಆತನನ್ನು ಹೊಗಳಿದರು.

ಯೇಸು ಸ್ವಂತ ನಾಡಿಗೆ ಬಂದದ್ದು

(ಮತ್ತಾಯ 13:53-58; ಮಾರ್ಕ 6:1-6)

16 ಯೇಸು ತಾನು ಬೆಳೆದ ನಜರೇತ್ ಎಂಬ ಊರಿಗೆ ಪ್ರಯಾಣ ಮಾಡಿದನು. ವಾಡಿಕೆಯ ಪ್ರಕಾರ, ಆತನು ಸಬ್ಬತ್‌ದಿನದಲ್ಲಿ ಸಭಾಮಂದಿರಕ್ಕೆ ಹೋದನು. ಯೇಸು ಓದುವುದಕ್ಕಾಗಿ ಎದ್ದುನಿಂತನು. 17 ಪ್ರವಾದಿಯಾದ ಯೆಶಾಯನ ಗ್ರಂಥವನ್ನು ಆತನಿಗೆ ಓದಲು ಕೊಡಲಾಗಿತ್ತು. ಯೇಸು ಆ ಪುಸ್ತಕವನ್ನು ತೆರೆದು ಈ ಭಾಗವನ್ನು ಓದಿದನು:

18 “ಪ್ರಭುವಿನ (ದೇವರ) ಆತ್ಮವು ನನ್ನಲ್ಲಿ ಇದೆ.
ಬಡಜನರಿಗೆ ಶುಭಸಂದೇಶವನ್ನು ತಿಳಿಸಲು ದೇವರು ನನ್ನನ್ನು ಅಭಿಷೇಕಿಸಿದ್ದಾನೆ.
ಪಾಪಕ್ಕೆ ಸೆರೆಯಾಳುಗಳಾಗಿರುವ ಜನರಿಗೆ ‘ನೀವು ಬಿಡುಗಡೆಯಾಗಿದ್ದೀರಿ’ ಎಂತಲೂ
    ಕುರುಡರಿಗೆ, ‘ನಿಮಗೆ ಮತ್ತೆ ಕಣ್ಣು ಕಾಣಿಸುವುದು’ ಎಂತಲೂ
ತಿಳಿಸುವುದಕ್ಕೆ ದೇವರು ನನ್ನನ್ನು ಕಳುಹಿಸಿದ್ದಾನೆ.
ದಬ್ಬಾಳಿಕೆಗೆ ಗುರಿಯಾದವರನ್ನು ಬಿಡಿಸುವುದಕ್ಕೂ
19     ಪ್ರಭುವಿನ ಶುಭವರ್ಷವನ್ನು ಪ್ರಕಟಿಸುವುದಕ್ಕೂ ದೇವರು ನನ್ನನ್ನು ಕಳುಹಿಸಿದ್ದಾನೆ.”(A)

20 ಈ ಭಾಗವನ್ನು ಓದಿದ ನಂತರ ಯೇಸು ಆ ಪುಸ್ತಕವನ್ನು ಮುಚ್ಚಿ ಸಭಾಮಂದಿರದ ಸೇವಕನ ಕೈಗೆ ಕೊಟ್ಟು ಕುಳಿತುಕೊಂಡನು. ಸಭಾಮಂದಿರದಲ್ಲಿದ್ದ ಪ್ರತಿಯೊಬ್ಬರು ಯೇಸುವನ್ನೇ ದೃಷ್ಟಿಸಿ ನೋಡುತ್ತಿದ್ದರು. 21 ಆಗ ಯೇಸು, ಅವರಿಗೆ, “ನಾನು ಇದೀಗ ಓದಿದ ಮಾತುಗಳನ್ನು ನೀವು ಕೇಳುತ್ತಿದ್ದಾಗಲೇ ಅವು ನಿಜವಾಗಿ ನೆರವೇರಿದವು!” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International