Revised Common Lectionary (Semicontinuous)
ರಚನೆಗಾರ: ದಾವೀದ.
19 ಆಕಾಶಮಂಡಲವು ದೇವರ ಮಹಿಮೆಯನ್ನು ಪ್ರಕಟಿಸುವುದು.
ಗಗನವು ಆತನ ಕೈಕೆಲಸವನ್ನು ತಿಳಿಸುವುದು.
2 ಪ್ರತಿಯೊಂದು ದಿನವೂ ಅದರ ಕುರಿತು ಹೊಸ ವಿಷಯವನ್ನು ತಿಳಿಸುವುದು.
ಪ್ರತಿಯೊಂದು ರಾತ್ರಿಯೂ ಅದರ ಕುರಿತು ಹೊಸ ಸಂಗತಿಯನ್ನು ಪ್ರಕಟಿಸುವುದು.
3 ಅವುಗಳ ಮಾತಾಗಲಿ
ನುಡಿಗಳಾಗಲಿ ಸ್ವರವಾಗಲಿ ನಮಗೆ ಕೇಳಿಸದು.
4 ಆದರೂ ಅವುಗಳ ಸಂದೇಶವು ಭೂಲೋಕದಲ್ಲೆಲ್ಲಾ ಹರಡುತ್ತದೆ;
ಭೂಮಿಯ ಕಟ್ಟಕಡೆಗಳವರೆಗೂ ವ್ಯಾಪಿಸುತ್ತದೆ.
ಆಕಾಶವು ಸೂರ್ಯನಿಗೆ ಮನೆಯಂತಿದೆ.
5 ಮದುವೆಯ ಮಂಟಪದಿಂದ ಆನಂದದಿಂದ ಬರುವ ಮದುಮಗನಂತೆ ಸೂರ್ಯನು ಮುಂಜಾನೆ ಉದಯಿಸುವನು.
ಕ್ರೀಡಾಪಟುವಿನಂತೆ
ಸೂರ್ಯನು ಆಕಾಶದಲ್ಲಿ ಓಡಲಾರಂಭಿಸುವನು.
6 ಸೂರ್ಯನು ಆಕಾಶದ ಒಂದು ಕಡೆಯಿಂದ ಉದಯಿಸಿ
ಮತ್ತೊಂದು ಕೊನೆಗೆ ಓಡುತ್ತಾಹೋಗುವನು.
ಅವನ ತಾಪಕ್ಕೆ ಯಾವುದೂ ಮರೆಯಾಗಿರಲಾರದು.
7 ಯೆಹೋವನ ಉಪದೇಶಗಳು ನಿಷ್ಕಳಂಕವಾಗಿವೆ.
ಅವು ದೇವಜನರಿಗೆ ಬಲವನ್ನು ಕೊಡುತ್ತವೆ.
ಯೆಹೋವನ ಕಟ್ಟಳೆಯು ಭರವಸೆಗೆ ಯೋಗ್ಯವಾಗಿದೆ.
ಅದು ಮೂಢರನ್ನು ಜ್ಞಾನಿಗಳನ್ನಾಗಿ ಮಾಡುತ್ತದೆ.
8 ಯೆಹೋವನ ನಿಯಮಗಳು ನೀತಿಯ ಕಟ್ಟಳೆಗಳಾಗಿವೆ.
ಅವು ಮನುಸ್ಸನ್ನು ಸಂತೋಷಗೂಳಿಸುತ್ತವೆ.
ಯೆಹೋವನ ಆಜ್ಞೆಗಳು ಒಳ್ಳೆಯ ಆಜ್ಞೆಗಳಾಗಿವೆ.
ಅವು ಕಣ್ಣುಗಳಿಗೆ ಬೆಳಕನ್ನು ನೀಡುತ್ತವೆ.
9 ಯೆಹೋವನಲ್ಲಿಡುವ ಭಯಭಕ್ತಿಯು ಪರಿಶುದ್ಧವಾಗಿದೆ;
ಅದು ಶಾಶ್ವತವಾದದ್ದು.
ಯೆಹೋವನ ವಿಧಿಗಳು ಯಥಾರ್ಥವಾಗಿವೆ;
ಅವು ಯಾವಾಗಲೂ ನ್ಯಾಯಾನುಸಾರವಾಗಿವೆ.
10 ಆತನ ಉಪದೇಶಗಳು ಬಂಗಾರಕ್ಕಿಂತಲೂ ಅಮೂಲ್ಯವಾಗಿವೆ;
ಅಪ್ಪಟವಾದ ಜೇನುತುಪ್ಪಕ್ಕಿಂತಲೂ ಮಧುರವಾಗಿವೆ.
11 ಆತನ ಉಪದೇಶಗಳು ಆತನ ಸೇವಕನನ್ನು ಎಚ್ಚರಿಸುತ್ತವೆ;
ಅವುಗಳನ್ನು ಕೈಕೊಂಡು ನಡೆದರೆ ಒಳ್ಳೆಯದಾಗುವುದು.
12 ಯೆಹೋವನೇ, ಯಾವನೂ ತನ್ನ ತಪ್ಪುಗಳನ್ನೆಲ್ಲಾ ತಿಳಿದುಕೊಳ್ಳುವುದಿಲ್ಲ.
ಆದ್ದರಿಂದ ಗುಪ್ತ ಪಾಪಗಳನ್ನು ಮಾಡಲು ನನ್ನನ್ನು ಬಿಟ್ಟುಬಿಡಬೇಡ.
13 ನನ್ನ ಇಷ್ಟಾನುಸಾರ ಪಾಪಮಾಡಲು ನನ್ನನ್ನು ಬಿಟ್ಟುಬಿಡಬೇಡ.
ಆ ಪಾಪಗಳು ನನ್ನನ್ನು ಆಳದಿರಲಿ.
ನೀನು ಸಹಾಯಮಾಡಿದರೆ
ನಾನು ಪರಿಶುದ್ಧನಾಗಿಯೂ ಪಾಪದಿಂದ ವಿಮುಕ್ತನಾಗಿಯೂ ಇರಲು ಸಾಧ್ಯ.
14 ನನ್ನ ಮಾತುಗಳೂ ನನ್ನ ಆಲೋಚನೆಗಳೂ ನಿನಗೆ ಮೆಚ್ಚಿಕೆಯಾಗಿರಲಿ.
ಯೆಹೋವನೇ, ನೀನೇ ನನ್ನ ಬಂಡೆಯಾಗಿರುವೆ.[a] ನನ್ನನ್ನು ರಕ್ಷಿಸುವಾತನು ನೀನೇ.
ಬಡಜನರಿಗೆ ನೆಹೆಮೀಯನ ಸಹಾಯ
5 ಯೆಹೂದ್ಯರಲ್ಲಿ ಎಷ್ಟೋ ಬಡಜನರು ತಮ್ಮ ಬಂಧುಗಳ ವಿಷಯದಲ್ಲಿ ದೂರು ಹೇಳಲಾರಂಭಿಸಿದರು. 2 ಕೆಲವರು ಹೀಗಂದರು: “ನಮ್ಮ ಮನೆಯಲ್ಲಿ ಬಹಳ ಮಕ್ಕಳಿದ್ದಾರೆ. ನಮಗೆ ಊಟಮಾಡಲು ಸಾಕಷ್ಟು ದವಸಧಾನ್ಯವಿಲ್ಲ; ಹೀಗಿರಲು ನಾವು ಜೀವಂತವಾಗಿ ಉಳಿಯುವ ಸಾಧ್ಯತೆಯಿಲ್ಲ.”
3 ಇನ್ನು ಕೆಲವರು, “ನಮಗೀಗ ಬರಗಾಲ ಪ್ರಾಪ್ತಿಯಾಗಿದೆ. ನಮಗೆ ದವಸಧಾನ್ಯ ಕೊಂಡುಕೊಳ್ಳಲು ನಮ್ಮ ಹೊಲಗದ್ದೆಗಳನ್ನು ಮಾರಬೇಕಾಗುತ್ತದೆ” ಅಂದರು.
4 ಇನ್ನೂ ಕೆಲವರು, “ನಮ್ಮ ಹೊಲಗದ್ದೆಗಳ ಮೇಲೆ ಅರಸನಿಗೆ ತೆರಿಗೆ ಕೊಡಬೇಕಾಗಿದೆ. ಆದರೆ ಕೊಡಲು ನಮ್ಮಲ್ಲಿ ಏನೂ ಇಲ್ಲ. ಬೇರೆಯವರಿಂದ ಎರವಲು ಪಡೆದುಕೊಂಡು ಕೊಡಬೇಕಾಗಿದೆ” ಅಂದರು. 5 “ಆ ಧನಿಕರನ್ನು ನೋಡಿರಿ. ನಾವೂ ಅವರಂತೆಯೇ ಇದ್ದೇವೆ. ನಮ್ಮ ಮಕ್ಕಳು ಅವರ ಮಕ್ಕಳಂತೆಯೇ ಇದ್ದಾರೆ. ಆದರೆ ನಾವು ಮಾತ್ರ ನಮ್ಮ ಗಂಡುಹೆಣ್ಣು ಮಕ್ಕಳನ್ನು ಗುಲಾಮರಾಗಿ ಮಾರುವ ಸ್ಥಿತಿಯಲ್ಲಿದ್ದೇವೆ. ನಮ್ಮಲ್ಲಿ ಕೆಲವರು ಆಗಲೇ ತಮ್ಮ ಹೆಣ್ಣುಮಕ್ಕಳನ್ನು ಗುಲಾಮರನ್ನಾಗಿ ಮಾರಿದ್ದಾರೆ. ನಮಗೆ ಬೇರೆ ಮಾರ್ಗವೇ ಇಲ್ಲ. ನಮ್ಮ ಹೊಲಗದ್ದೆಗಳನ್ನು ಯಾವಾಗಲೋ ಕಳೆದುಕೊಂಡಿದ್ದೇವೆ.”
6 ನಾನು ಅವರ ದೂರುಗಳನ್ನು ಕೇಳಿಸಿಕೊಂಡಾಗ ಬಹಳವಾಗಿ ಸಿಟ್ಟುಗೊಂಡೆನು. 7 ನನ್ನ ಕೋಪವು ಶಾಂತವಾದ ಬಳಿಕ ಧನಿಕರ ಮತ್ತು ಅಧಿಕಾರಿಗಳ ಬಳಿಗೆ ಹೋಗಿ, “ನೀವು ನಿಮ್ಮ ಸ್ವಂತ ಜನರಿಗೆ ಕೊಟ್ಟಿರುವ ಸಾಲಕ್ಕೆ ಬಡ್ಡಿಯನ್ನು ಕೊಡಲು ಬಲವಂತ ಮಾಡುತ್ತಿದ್ದೀರಿ. ನೀವು ಕೂಡಲೇ ಅದನ್ನು ನಿಲ್ಲಿಸಬೇಕು” ಎಂದೆನು. ಅನಂತರ ನಾನು ಎಲ್ಲಾ ಜನರನ್ನು ಒಟ್ಟುಗೂಡಿಸಿ, 8 “ನಮ್ಮ ಯೆಹೂದಿ ಜನರನ್ನು ಪರದೇಶಗಳಲ್ಲಿ ಗುಲಾಮರನ್ನಾಗಿ ಮಾರಿದ್ದರು. ಅಂಥವರನ್ನು ನಾವು ಕ್ರಯಕೊಟ್ಟು ಕೊಂಡುಕೊಂಡು ಅವರನ್ನು ಗುಲಾಮತನದಿಂದ ಬಿಡುಗಡೆ ಮಾಡಿಸಿದೆವು. ಆದರೆ ನೀವು ಈಗ ಮತ್ತೆ ಗುಲಾಮರನ್ನಾಗಿ ಮಾಡುತ್ತಿದ್ದೀರಿ” ಎಂದೆನು.
ಸೇರಿಬಂದಿದ್ದ ಶ್ರೀಮಂತರೂ ಅಧಿಕಾರಿಗಳೂ ಸುಮ್ಮನೆ ಬಾಯಿ ಮುಚ್ಚಿಕೊಂಡರು. ಅವರಿಗೆ ಏನೂ ಹೇಳಲಿಕ್ಕೂ ಆಗಲಿಲ್ಲ. 9 ನಾನು ಹೇಳುವುದನ್ನು ಮುಂದುವರಿಸುತ್ತಾ, “ನೀವು ತಪ್ಪು ಕೆಲಸ ಮಾಡುತ್ತಿದ್ದೀರಿ. ದೇವರಿಗೆ ಭಯಪಟ್ಟು ಆತನನ್ನು ಗೌರವಿಸಬೇಕೆಂದು ನಿಮಗೆ ಗೊತ್ತಿದೆ. ಇತರ ಜನರು ಮಾಡುವ ನಾಚಿಕೆಕರವಾದ ಕೆಲಸವನ್ನು ನೀವು ಮಾಡಬಾರದು. 10 ನನ್ನ ಜನರು, ನನ್ನ ಬಂಧುಗಳು ಮತ್ತು ನಾನು ಹಣವನ್ನು ದವಸಧಾನ್ಯಗಳನ್ನು ಎರವಲಾಗಿ ಕೊಡುತ್ತೇವೆ. ಆದರೆ ಅವರಿಂದ ಬಡ್ಡಿಯನ್ನು ವಸೂಲು ಮಾಡುವುದಿಲ್ಲ. ಸಾಲ ಪಡೆದುಕೊಂಡವರಿಂದ ಬಡ್ಡಿಯನ್ನು ಬಲವಂತದಿಂದ ವಸೂಲು ಮಾಡುವುದನ್ನು ನಾವು ನಿಲ್ಲಿಸಬೇಕು. 11 ಅವರಿಂದ ಕಿತ್ತುಕೊಂಡ ಹೊಲಗದ್ದೆಗಳನ್ನು, ದ್ರಾಕ್ಷಾತೋಟ, ಎಣ್ಣೆಮರಗಳ ತೋಟ ಮತ್ತು ಅವರ ಮನೆಗಳನ್ನು ಅವರಿಗೆ ಈಗಲೇ ಹಿಂದಕ್ಕೆ ಕೊಡಿರಿ. ಅವರಿಂದ ವಸೂಲಿ ಮಾಡಿದ ಬಡ್ಡಿಯನ್ನು ಹಿಂದಕ್ಕೆ ಕೊಡಿರಿ. ನೀವು ಯಾವ ಯಾವದಕ್ಕೆ ಬಡ್ಡಿ ವಸೂಲಿ ಮಾಡಿರುವಿರೋ ಎಲ್ಲವನ್ನು ಹಿಂದಕ್ಕೆ ಕೊಡಿರಿ” ಎಂದು ಹೇಳಿದೆನು.
12 ಆಗ ಶ್ರೀಮಂತರೂ ಅಧಿಕಾರಿಗಳೂ, “ನಾವು ಹಿಂದಕ್ಕೆ ಕೊಡುತ್ತೇವೆ. ಅವರಿಂದ ನಾವು ಹೆಚ್ಚೇನೂ ಕೇಳುವುದಿಲ್ಲ. ನೆಹೆಮೀಯನೇ, ನೀನು ಹೇಳಿದಂತೆಯೇ ನಾವು ಮಾಡುತ್ತೇವೆ” ಎಂದರು.
ಆಗ ನಾನು ದೇವರ ಮುಂದೆ ಅವರಿಂದ ಪ್ರತಿಜ್ಞೆ ಮಾಡಿಸಲು ಯಾಜಕರನ್ನು ಕರೆದೆನು. 13 ನಂತರ ನಾನು ನನ್ನ ಉಡುಪಿನ ನೆರಿಗೆಯನ್ನು ಝಾಡಿಸಿ, “ತಾನು ಮಾಡಿದ ಪ್ರತಿಜ್ಞೆಯಂತೆ ನಡೆಯದವನನ್ನು ದೇವರು ಅವನ ಮನೆಯಿಂದ ಝಾಡಿಸಿಬಿಡಲಿ; ಅವನು ತಾನು ಗಳಿಸಿದ್ದೆಲ್ಲವನ್ನು ಕಳೆದುಕೊಳ್ಳಲಿ” ಎಂದು ಹೇಳಿದಾಗ ಜನರೆಲ್ಲರೂ “ಆಮೆನ್” ಅಂದರು; ಯೆಹೋವನನ್ನು ಸ್ತುತಿಸಿದರು. ತಾವು ಮಾಡಿದ ಪ್ರತಿಜ್ಞೆಯಂತೆ ನಡೆದುಕೊಂಡರು.
ಯೋಸೇಫನು ಮತ್ತು ಮರಿಯಳು ಮನೆಗೆ ಮರಳಿದರು
39 ಪ್ರಭುವಿನ ಧರ್ಮಶಾಸ್ತ್ರದ ಎಲ್ಲ ವಿಧಿಗಳನ್ನು ನೆರವೇರಿಸಿದ ಮೇಲೆ ಯೋಸೇಫ ಮತ್ತು ಮರಿಯಳು ಗಲಿಲಾಯ ಪ್ರಾಂತ್ಯದಲ್ಲಿದ್ದ ತಮ್ಮ ಸ್ವಂತ ಊರಾದ ನಜರೇತಿಗೆ ಹಿಂತಿರುಗಿದರು. 40 ಬಾಲಕ ಯೇಸು ಬೆಳೆದು ಬಲಗೊಂಡು ಸಂಪೂರ್ಣ ಜ್ಞಾನಿಯಾದನು. ದೇವರ ಆಶೀರ್ವಾದವು ಆತನೊಡನೆ ಇತ್ತು.
ಬಾಲಕ ಯೇಸು
41 ಪ್ರತಿವರ್ಷ ಯೇಸುವಿನ ತಂದೆತಾಯಿಗಳು ಪಸ್ಕಹಬ್ಬಕ್ಕಾಗಿ[a] ಜೆರುಸಲೇಮಿಗೆ ಹೋಗುತ್ತಿದ್ದರು. 42 ಯೇಸುವಿಗೆ ಹನ್ನೆರಡು ವರ್ಷವಾಗಿದ್ದಾಗ ಎಂದಿನಂತೆ ಅವರು ಪಸ್ಕ ಹಬ್ಬಕ್ಕಾಗಿ ಜೆರುಸಲೇಮಿಗೆ ಹೋದರು. 43 ಹಬ್ಬದ ದಿನಗಳು ಮುಗಿದ ನಂತರ ಅವರು ಮನೆಗೆ ಹೋದರು. ಆದರೆ ಬಾಲಕನಾದ ಯೇಸು ಜೆರುಸಲೇಮಿನಲ್ಲಿ ಉಳಿದುಕೊಂಡನು. ಆತನ ತಂದೆತಾಯಿಗಳಿಗೆ ಇದು ತಿಳಿದಿರಲಿಲ್ಲ. ಯೇಸುವು ಯಾತ್ರಿಕರ ಗುಂಪಿನಲ್ಲಿರಬಹುದೆಂದು ಭಾವಿಸಿಕೊಂಡ 44 ಯೋಸೇಫನು ಮತ್ತು ಮರಿಯಳು ಒಂದು ದಿನವೆಲ್ಲ ಪ್ರಯಾಣ ಮಾಡಿದರು. ನಂತರ ಮಗನನ್ನು ಕಾಣದೆ ತಮ್ಮ ಕುಟುಂಬದವರ ಮತ್ತು ಆಪ್ತಸ್ನೇಹಿತರ ಮಧ್ಯದಲ್ಲಿ ಆತನಿಗಾಗಿ ಹುಡುಕತೊಡಗಿದರು. 45 ಆದರೆ ಅಲ್ಲೆಲ್ಲೂ ಕಾಣದೆ ಯೇಸುವನ್ನು ಹುಡುಕಲು ಜೆರುಸಲೇಮಿಗೆ ಮರಳಿಹೋದರು.
46 ಮೂರು ದಿನಗಳಾದ ಮೇಲೆ ಆತನನ್ನು ಕಂಡುಕೊಂಡರು. ಯೇಸುವು ದೇವಾಲಯದಲ್ಲಿ ಧಾರ್ಮಿಕ ಉಪದೇಶಕರೊಡನೆ ಕುಳಿತುಕೊಂಡು ಅವರ ಉಪದೇಶವನ್ನು ಆಲಿಸುತ್ತಾ ಮತ್ತು ಅವರಿಗೆ ಪ್ರಶೆಗಳನ್ನು ಕೇಳುತ್ತಾ ಇದ್ದನು. 47 ಆತನ ಮಾತುಗಳನ್ನು ಕೇಳಿ ಆತನ ತಿಳುವಳಿಕೆಗೂ ಆತನ ಬುದ್ಧಿವಂತಿಕೆಯ ಉತ್ತರಗಳಿಗೂ ಅವರೆಲ್ಲರೂ ಆಶ್ಚರ್ಯಪಟ್ಟರು. 48 ಯೇಸುವಿನ ತಂದೆತಾಯಿಗಳು ಆತನನ್ನು ಅಲ್ಲಿ ಕಂಡು ಆಶ್ಚರ್ಯಪಟ್ಟರು. ಮರಿಯಳು ಆತನಿಗೆ, “ಮಗನೇ, ನೀನು ನಮಗೆ ಏಕೆ ಹೀಗೆ ಮಾಡಿದೆ? ನಿನ್ನ ತಂದೆ ಮತ್ತು ನಾನು ನಿನಗಾಗಿ ಬಹಳ ಚಿಂತಿಸುತ್ತಿದ್ದೆವು. ನಿನಗೋಸ್ಕರ ನಾವು ಹುಡುಕುತ್ತಿದ್ದೆವು” ಎಂದು ಹೇಳಿದಳು.
49 ಯೇಸು ಅವರಿಗೆ, “ನೀವು ನನಗೋಸ್ಕರ ಏಕೆ ಹುಡುಕಬೇಕಿತ್ತು? ನನ್ನ ತಂದೆಯ (ದೇವರ) ಕೆಲಸ ಎಲ್ಲಿರುತ್ತದೋ ಅಲ್ಲಿ ನಾನು ಇರಬೇಕು ಎಂಬುದನ್ನು ನೀವು ತಿಳಿದಿರಬೇಕಾಗಿತ್ತು!” ಎಂದು ಹೇಳಿದನು. 50 ಆದರೆ ಆತನ ಮಾತು ಅವರಿಗೆ ಅರ್ಥವಾಗಲಿಲ್ಲ.
51 ಯೇಸು ಅವರೊಡನೆ ನಜರೇತಿಗೆ ಬಂದು ಅವರಿಗೆ ವಿಧೇಯನಾಗಿದ್ದನು. ಆತನ ತಾಯಿ ಈ ವಿಷಯಗಳನ್ನೆಲ್ಲಾ ಇನ್ನೂ ಆಲೋಚಿಸುತ್ತಿದ್ದಳು. 52 ಯೇಸುವು ಜ್ಞಾನದಲ್ಲಿಯೂ ದೇಹಬಲದಲ್ಲಿಯೂ ವೃದ್ಧಿಯಾಗುತ್ತಾ ಬಂದನು. ದೇವರಿಗೂ ಜನರಿಗೂ ಅಚ್ಚುಮೆಚ್ಚಾದನು.
Kannada Holy Bible: Easy-to-Read Version. All rights reserved. © 1997 Bible League International