Revised Common Lectionary (Semicontinuous)
ರಚನೆಗಾರ: ದಾವೀದ.
145 ನನ್ನ ದೇವರೇ, ನನ್ನ ರಾಜನೇ, ನಿನ್ನನ್ನು ಸ್ತುತಿಸುವೆನು;
ನಿನ್ನ ಹೆಸರನ್ನು ಎಂದೆಂದಿಗೂ ಕೊಂಡಾಡುವೆನು.
2 ನಿನ್ನನ್ನು ಪ್ರತಿದಿನವೂ ಸ್ತುತಿಸುವೆನು.
ನಿನ್ನ ಹೆಸರನ್ನು ಎಂದೆಂದಿಗೂ ಕೊಂಡಾಡುವೆನು.
3 ಯೆಹೋವನು ಮಹೋನ್ನತನೂ ಸ್ತುತಿಗೆ ಪಾತ್ರನೂ ಆಗಿದ್ದಾನೆ.
ಆತನ ಮಹತ್ಕಾರ್ಯಗಳು ಅಸಂಖ್ಯಾತವಾಗಿವೆ.
4 ಯೆಹೋವನೇ, ನಿನ್ನ ಕಾರ್ಯಗಳನ್ನು ಜನರು ಎಂದೆಂದಿಗೂ ಸ್ತುತಿಸುವರು;
ನಿನ್ನ ಮಹತ್ಕಾರ್ಯಗಳ ವಿಷಯವಾಗಿ ಜನರು ಬೇರೆಯವರಿಗೆ ಹೇಳುವರು.
5 ನಿನ್ನ ಪ್ರಭಾವವುಳ್ಳ ಮಹಿಮೆಯ ಕುರಿತು ಜನರು ಹೇಳುವರು.
ನಾನು ನಿನ್ನ ಮಹತ್ಕಾರ್ಯಗಳನ್ನು ವರ್ಣಿಸುವೆನು.
6 ನಿನ್ನ ಅತ್ಯಾಶ್ಚರ್ಯಕರವಾದ ಕಾರ್ಯಗಳನ್ನು ಜನರು ಕೊಂಡಾಡುವರು.
ನಿನ್ನ ಮಹತ್ಕಾರ್ಯಗಳನ್ನು ನಾನು ವರ್ಣಿಸುವೆನು.
7 ನಿನ್ನ ಒಳ್ಳೆಯ ಕಾರ್ಯಗಳ ಕುರಿತಾಗಿ ಜನರು ಹೇಳುವರು.
ನಿನ್ನ ನೀತಿಯು ಕುರಿತಾಗಿ ಜನರು ಹಾಡುವರು.
8 ಯೆಹೋವನು ದಯೆಯುಳ್ಳವನೂ ಕನಿಕರವುಳ್ಳವನೂ
ದೀರ್ಘಶಾಂತನೂ ಪ್ರೀತಿಪೂರ್ಣನೂ ಆಗಿದ್ದಾನೆ.
9 ಯೆಹೋವನು ಪ್ರತಿಯೊಬ್ಬನಿಗೂ ಒಳ್ಳೆಯವನಾಗಿದ್ದಾನೆ.
ಆತನು ತಾನು ನಿರ್ಮಿಸಿದವುಗಳಿಗೆಲ್ಲಾ ಕನಿಕರ ತೋರಿಸುವನು.
10 ಯೆಹೋವನೇ, ನಿನ್ನ ಸೃಷ್ಟಿಯೆಲ್ಲವೂ ನಿನ್ನನ್ನು ಸ್ತುತಿಸುತ್ತವೆ.
ನಿನ್ನ ಭಕ್ತರು ನಿನ್ನನ್ನು ಕೊಂಡಾಡುವರು.
11 ಅವರು ನಿನ್ನ ರಾಜ್ಯದ ಮಹತ್ವವನ್ನು ಕುರಿತು ಹೇಳುವರು.
ನಿನ್ನ ಪರಾಕ್ರಮವನ್ನು ವರ್ಣಿಸುವರು.
12 ಹೀಗೆ ನಿನ್ನ ಮಹತ್ಕಾರ್ಯಗಳನ್ನು ಇತರ ಜನರು ತಿಳಿದುಕೊಳ್ಳುವರು.
ನಿನ್ನ ರಾಜ್ಯದ ಮಹತ್ವವನ್ನೂ ವೈಭವವನ್ನೂ ಅವರು ತಿಳಿದುಕೊಳ್ಳುವರು.
13 ಯೆಹೋವನೇ, ನಿನ್ನ ರಾಜ್ಯವು ಶಾಶ್ವತವಾಗಿದೆ.
ನೀನು ಎಂದೆಂದಿಗೂ ಆಳುವೆ.
14 ಯೆಹೋವನು ಬಿದ್ದುಹೋಗಿರುವವರನ್ನು ಮೇಲೆತ್ತುವವನೂ
ಕುಗ್ಗಿಹೋದವರನ್ನು ಉದ್ಧರಿಸುವವನೂ ಆಗಿದ್ದಾನೆ.
15 ಎಲ್ಲಾ ಜೀವಿಗಳು ತಮ್ಮ ಆಹಾರಕ್ಕಾಗಿ ನಿನ್ನನ್ನೇ ನೋಡುತ್ತವೆ.
ನೀನು ಸಮಯಕ್ಕೆ ಸರಿಯಾಗಿ ಅವುಗಳಿಗೆ ಆಹಾರವನ್ನು ಕೊಡುವೆ.
16 ನೀನು ಕೈಯನ್ನು ತೆರೆದು
ಜೀವಿಗಳ ಅವಶ್ಯಕತೆಗಳನ್ನೆಲ್ಲಾ ಪೂರೈಸುವೆ.
17 ಯೆಹೋವನ ಕಾರ್ಯಗಳೆಲ್ಲ ನೀತಿಯುಳ್ಳವುಗಳಾಗಿವೆ.
ಆತನ ಪ್ರತಿಯೊಂದು ಕಾರ್ಯದಲ್ಲೂ ಆತನ ಶಾಶ್ವತ ಪ್ರೀತಿ ತೋರಿಬರುವುದು.
18 ಯೆಹೋವನು ತನ್ನ ಭಕ್ತರಿಗೆ ಸಮೀಪವಾಗಿದ್ದಾನೆ.
ಆತನು ತನ್ನನ್ನು ಯಥಾರ್ಥವಾಗಿ ಕರೆಯುವ ಪ್ರತಿಯೊಬ್ಬರಿಗೂ ಸಮೀಪವಾಗಿದ್ದಾನೆ.
19 ಆತನು ತನ್ನ ಭಕ್ತರ ಇಷ್ಟವನ್ನು ನೆರವೇರಿಸುವನು.
ಆತನು ಅವರ ಮೊರೆಗೆ ಕಿವಿಗೊಟ್ಟು ಅವರನ್ನು ರಕ್ಷಿಸುವನು.
20 ಯೆಹೋವನು ತನ್ನನ್ನು ಪ್ರೀತಿಸುವ ಪ್ರತಿಯೊಬ್ಬರನ್ನೂ ಸಂರಕ್ಷಿಸುವನು,
ದುಷ್ಟರನ್ನಾದರೋ ಆತನು ನಾಶಮಾಡುವನು.
21 ನಾನು ಯೆಹೋವನನ್ನು ಕೊಂಡಾಡುತ್ತೇನೆ!
ಎಲ್ಲಾ ಜೀವಿಗಳು ಆತನ ಪವಿತ್ರ ಹೆಸರನ್ನು ಸದಾಕಾಲ ಕೊಂಡಾಡಲಿ!
9 ನನ್ನ ಪ್ರಿಯಳೇ, ನನ್ನ ವಧುವೇ, ನೀನು ನನ್ನ ಹೃದಯವನ್ನು ಅಪಹರಿಸಿರುವೆ.
ನಿನ್ನ ನೋಟದಿಂದಲೂ ನಿನ್ನ ಮುತ್ತಿನಹಾರದಿಂದಲೂ ನನ್ನ ಹೃದಯವನ್ನು ವಶಪಡಿಸಿಕೊಂಡಿದ್ದಿ.
10 ನನ್ನ ಪ್ರಿಯಳೇ, ನನ್ನ ವಧುವೇ, ನಿನ್ನ ಪ್ರೀತಿಯು ಎಷ್ಟೋ ರಮ್ಯ!
ನಿನ್ನ ಪ್ರೀತಿಯು ದ್ರಾಕ್ಷಾರಸಕ್ಕಿಂತಲೂ ಎಷ್ಟೋ ಉತ್ತಮ!
ನಿನ್ನ ತೈಲದ ಪರಿಮಳವು
ಸಕಲ ಬಗೆಯ ಸುಗಂಧ ದ್ರವ್ಯಗಳಿಗಿಂತಲೂ ಉತ್ತಮ!
11 ನನ್ನ ವಧುವೇ, ನಿನ್ನ ತುಟಿಗಳು ಜೇನುಗರೆಯುತ್ತವೆ;
ಹಾಲೂ ಜೇನೂ ನಿನ್ನ ನಾಲಿಗೆಯೊಳಗಿವೆ.
ನಿನ್ನ ಬಟ್ಟೆಗಳು ಪರಿಮಳದ್ರವ್ಯದಂತೆ[a]
ಸುವಾಸನೆಭರಿತವಾಗಿವೆ.
12 ನನ್ನ ಪ್ರಿಯಳೇ, ನನ್ನ ವಧುವೇ,
ನೀನು ಕದಹಾಕಿದ ತೋಟದಂತಿರುವೆ;
ಬೇಲಿಯೊಳಗಿರುವ ಬುಗ್ಗೆಯಂತಿರುವೆ;
ಮುಚ್ಚಿ ಮುದ್ರಿಸಿದ ಚಿಲುಮೆಯಂತಿರುವೆ.
13 ನಿನ್ನ ಅಂಗಾಂಗಗಳು ದಾಳಿಂಬೆ ಮರಗಳಿಂದಲೂ
ರುಚಿಕರವಾದ ಹಣ್ಣಿನ ಮರಗಳಿಂದಲೂ ಗೋರಂಟಿ,
14 ನಾರ್ಡ್, ಜಟಾಮಾಂಸಿ, ಕೇಸರಿ, ಬಜೆ, ಲವಂಗಚಕ್ಕೆ, ರಕ್ತಬೋಳ, ಅಗುರು, ಸಾಂಬ್ರಾಣಿ ಗಿಡ ಮತ್ತು ದಾಲ್ಚಿನ್ನಿ
ಎಂಬ ಸುಗಂಧದ ಸಸ್ಯಗಳಿಂದಲೂ ಕೂಡಿರುವ ತೋಟಗಳಂತಿವೆ.
15 ನೀನು ತೋಟದ ಬುಗ್ಗೆಯಂತಿರುವೆ;
ಹೊಸ ನೀರಿನ ಬಾವಿಯಂತಿರುವೆ;
ಲೆಬನೋನಿನ ಬೆಟ್ಟಗಳಿಂದ ಹರಿದುಬರುತ್ತಿರುವ ನೀರಿನಂತಿರುವೆ.
ಪ್ರಿಯತಮೆ
16 ಉತ್ತರದ ಗಾಳಿಯೇ, ಎಚ್ಚರವಾಗು!
ದಕ್ಷಿಣದ ಗಾಳಿಯೇ, ಬಾ!
ನನ್ನ ತೋಟದ ಮೇಲೆ ಬೀಸು.
ಅದರ ಸುವಾಸನೆಯು ಹರಡಿಕೊಳ್ಳಲಿ.
ನನ್ನ ಪ್ರಿಯನು ನನ್ನ ತೋಟವನ್ನು ಪ್ರವೇಶಿಸಲಿ.
ಅವನು ಅದರ ರುಚಿಕರವಾದ ಹಣ್ಣನ್ನು ತಿನ್ನಲಿ.
ಪ್ರಿಯಕರ
5 ನನ್ನ ಪ್ರಿಯೇ, ನನ್ನ ವಧುವೇ, ನನ್ನ ತೋಟವನ್ನು ಪ್ರವೇಶಿಸಿದ್ದೇನೆ.
ನನ್ನ ಸುಗಂಧದ್ರವ್ಯದೊಡನೆ ಗೋಲರಸವನ್ನು ಶೇಖರಿಸಿದ್ದೇನೆ.
ನನ್ನ ಜೇನುಗೂಡನ್ನೂ ಜೇನುತುಪ್ಪವನ್ನೂ ತಿಂದಿದ್ದೇನೆ.
ನನ್ನ ದ್ರಾಕ್ಷಾರಸವನ್ನೂ ಹಾಲನ್ನೂ ಕುಡಿದಿದ್ದೇನೆ.
ಪ್ರಿಯತಮೆಯು ಸ್ನೇಹಿತರಿಗೆ
ಸ್ನೇಹಿತರೇ, ತಿನ್ನಿರಿ, ಕುಡಿಯಿರಿ!
ಪ್ರೀತಿಯಿಂದ ಮತ್ತರಾಗಿ!
ಉಪವಾಸದ ಕುರಿತು ಯೇಸುವಿನ ಉತ್ತರ
(ಮತ್ತಾಯ 9:14-17; ಮಾರ್ಕ 2:18-22)
33 ಅವರು ಯೇಸುವಿಗೆ, “ಫರಿಸಾಯರ ಹಿಂಬಾಲಕರು ಉಪವಾಸವಿದ್ದು ಪ್ರಾರ್ಥಿಸುತ್ತಾರೆ. ಯೋಹಾನನ ಶಿಷ್ಯರು ಆಗಾಗ್ಗೆ ಉಪವಾಸವಿದ್ದು ಪ್ರಾರ್ಥಿಸುತ್ತಾರೆ. ನಿನ್ನ ಶಿಷ್ಯರಾದರೋ ಯಾವಾಗಲೂ ತಿಂದುಕುಡಿಯುವುದರಲ್ಲೇ ಇದ್ದಾರೆ” ಎಂದು ಟೀಕಿಸಿದರು.
34 ಯೇಸು ಅವರಿಗೆ, “ಮದುವೆಯಲ್ಲಿ ಮದುಮಗನ ಸಂಗಡ ಇರುವ ಅವನ ಸ್ನೇಹಿತರಿಗೆ ನೀವು ಉಪವಾಸಮಾಡಿ ಎಂದು ಹೇಳಲು ಸಾಧ್ಯವಿಲ್ಲ. 35 ಆದರೆ ಮದುಮಗನು ಅವರ ಬಳಿಯಿಂದ ಹೊರಟುಹೋಗುವ ಕಾಲ ಬರುತ್ತದೆ. ಆಗ ಅವನ ಸ್ನೇಹಿತರು ಉಪವಾಸ ಮಾಡುವರು” ಎಂದು ಉತ್ತರಕೊಟ್ಟನು.
36 ಬಳಿಕ ಯೇಸು ಅವರಿಗೆ ಈ ಸಾಮ್ಯವನ್ನು ಹೇಳಿದನು: “ಹಳೆ ಅಂಗಿಗೆ ತೇಪೆ ಹಚ್ಚುವುದಕ್ಕಾಗಿ ಹೊಸ ಅಂಗಿಯಿಂದ ಬಟ್ಟೆಯನ್ನು ಯಾರೂ ಹರಿದುಕೊಳ್ಳುವುದಿಲ್ಲ. ಹಾಗೆ ಮಾಡಿದ್ದೇಯಾದರೆ, ಹೊಸ ಅಂಗಿಯನ್ನು ಕೆಡಿಸಿಕೊಂಡಂತಾಗುತ್ತದೆ. ಅಲ್ಲದೆ ಹೊಸ ಅಂಗಿಯ ಬಟ್ಟೆಯು ಹಳೆ ಅಂಗಿಗೆ ಹೋಲುವುದೂ ಇಲ್ಲ. 37 ಅಂತೆಯೇ ಹೊಸ ದ್ರಾಕ್ಷಾರಸವನ್ನು ಹಳೆಯ ದ್ರಾಕ್ಷಾರಸದ ಚೀಲಗಳಲ್ಲಿ ಯಾರೂ ತುಂಬಿಡುವುದಿಲ್ಲ. ಒಂದುವೇಳೆ ತುಂಬಿದರೆ, ಹೊಸ ದ್ರಾಕ್ಷಾರಸವು ಚೀಲಗಳನ್ನು ಒಡೆದುಹಾಕುವುದರಿಂದ ದ್ರಾಕ್ಷಾರಸವೂ ಚೆಲ್ಲಿಹೋಗುತ್ತದೆ, ಚೀಲಗಳೂ ಹಾಳಾಗುತ್ತವೆ. 38 ಜನರು ಯಾವಾಗಲೂ ಹೊಸ ದ್ರಾಕ್ಷಾರಸವನ್ನು ಹೊಸ ದ್ರಾಕ್ಷಾರಸದ ಚೀಲಗಳಲ್ಲಿ ತುಂಬಿಡುತ್ತಾರೆ. 39 ಹಳೆಯ ದ್ರಾಕ್ಷಾರಸವನ್ನು ಕುಡಿದವನಿಗೆ ಹೊಸ ದ್ರಾಕ್ಷಾರಸವು ರುಚಿಸುವುದಿಲ್ಲ. ಅವನು ಹಳೆಯ ದ್ರಾಕ್ಷಾರಸವನ್ನೇ ಇಷ್ಟಪಡುತ್ತಾನೆ.”
Kannada Holy Bible: Easy-to-Read Version. All rights reserved. © 1997 Bible League International