Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 145

ರಚನೆಗಾರ: ದಾವೀದ.

145 ನನ್ನ ದೇವರೇ, ನನ್ನ ರಾಜನೇ, ನಿನ್ನನ್ನು ಸ್ತುತಿಸುವೆನು;
    ನಿನ್ನ ಹೆಸರನ್ನು ಎಂದೆಂದಿಗೂ ಕೊಂಡಾಡುವೆನು.
ನಿನ್ನನ್ನು ಪ್ರತಿದಿನವೂ ಸ್ತುತಿಸುವೆನು.
    ನಿನ್ನ ಹೆಸರನ್ನು ಎಂದೆಂದಿಗೂ ಕೊಂಡಾಡುವೆನು.
ಯೆಹೋವನು ಮಹೋನ್ನತನೂ ಸ್ತುತಿಗೆ ಪಾತ್ರನೂ ಆಗಿದ್ದಾನೆ.
    ಆತನ ಮಹತ್ಕಾರ್ಯಗಳು ಅಸಂಖ್ಯಾತವಾಗಿವೆ.
ಯೆಹೋವನೇ, ನಿನ್ನ ಕಾರ್ಯಗಳನ್ನು ಜನರು ಎಂದೆಂದಿಗೂ ಸ್ತುತಿಸುವರು;
    ನಿನ್ನ ಮಹತ್ಕಾರ್ಯಗಳ ವಿಷಯವಾಗಿ ಜನರು ಬೇರೆಯವರಿಗೆ ಹೇಳುವರು.
ನಿನ್ನ ಪ್ರಭಾವವುಳ್ಳ ಮಹಿಮೆಯ ಕುರಿತು ಜನರು ಹೇಳುವರು.
    ನಾನು ನಿನ್ನ ಮಹತ್ಕಾರ್ಯಗಳನ್ನು ವರ್ಣಿಸುವೆನು.
ನಿನ್ನ ಅತ್ಯಾಶ್ಚರ್ಯಕರವಾದ ಕಾರ್ಯಗಳನ್ನು ಜನರು ಕೊಂಡಾಡುವರು.
    ನಿನ್ನ ಮಹತ್ಕಾರ್ಯಗಳನ್ನು ನಾನು ವರ್ಣಿಸುವೆನು.
ನಿನ್ನ ಒಳ್ಳೆಯ ಕಾರ್ಯಗಳ ಕುರಿತಾಗಿ ಜನರು ಹೇಳುವರು.
    ನಿನ್ನ ನೀತಿಯು ಕುರಿತಾಗಿ ಜನರು ಹಾಡುವರು.

ಯೆಹೋವನು ದಯೆಯುಳ್ಳವನೂ ಕನಿಕರವುಳ್ಳವನೂ
    ದೀರ್ಘಶಾಂತನೂ ಪ್ರೀತಿಪೂರ್ಣನೂ ಆಗಿದ್ದಾನೆ.
ಯೆಹೋವನು ಪ್ರತಿಯೊಬ್ಬನಿಗೂ ಒಳ್ಳೆಯವನಾಗಿದ್ದಾನೆ.
    ಆತನು ತಾನು ನಿರ್ಮಿಸಿದವುಗಳಿಗೆಲ್ಲಾ ಕನಿಕರ ತೋರಿಸುವನು.
10 ಯೆಹೋವನೇ, ನಿನ್ನ ಸೃಷ್ಟಿಯೆಲ್ಲವೂ ನಿನ್ನನ್ನು ಸ್ತುತಿಸುತ್ತವೆ.
    ನಿನ್ನ ಭಕ್ತರು ನಿನ್ನನ್ನು ಕೊಂಡಾಡುವರು.
11 ಅವರು ನಿನ್ನ ರಾಜ್ಯದ ಮಹತ್ವವನ್ನು ಕುರಿತು ಹೇಳುವರು.
    ನಿನ್ನ ಪರಾಕ್ರಮವನ್ನು ವರ್ಣಿಸುವರು.
12 ಹೀಗೆ ನಿನ್ನ ಮಹತ್ಕಾರ್ಯಗಳನ್ನು ಇತರ ಜನರು ತಿಳಿದುಕೊಳ್ಳುವರು.
    ನಿನ್ನ ರಾಜ್ಯದ ಮಹತ್ವವನ್ನೂ ವೈಭವವನ್ನೂ ಅವರು ತಿಳಿದುಕೊಳ್ಳುವರು.
13 ಯೆಹೋವನೇ, ನಿನ್ನ ರಾಜ್ಯವು ಶಾಶ್ವತವಾಗಿದೆ.
    ನೀನು ಎಂದೆಂದಿಗೂ ಆಳುವೆ.

14 ಯೆಹೋವನು ಬಿದ್ದುಹೋಗಿರುವವರನ್ನು ಮೇಲೆತ್ತುವವನೂ
    ಕುಗ್ಗಿಹೋದವರನ್ನು ಉದ್ಧರಿಸುವವನೂ ಆಗಿದ್ದಾನೆ.
15 ಎಲ್ಲಾ ಜೀವಿಗಳು ತಮ್ಮ ಆಹಾರಕ್ಕಾಗಿ ನಿನ್ನನ್ನೇ ನೋಡುತ್ತವೆ.
    ನೀನು ಸಮಯಕ್ಕೆ ಸರಿಯಾಗಿ ಅವುಗಳಿಗೆ ಆಹಾರವನ್ನು ಕೊಡುವೆ.
16 ನೀನು ಕೈಯನ್ನು ತೆರೆದು
    ಜೀವಿಗಳ ಅವಶ್ಯಕತೆಗಳನ್ನೆಲ್ಲಾ ಪೂರೈಸುವೆ.
17 ಯೆಹೋವನ ಕಾರ್ಯಗಳೆಲ್ಲ ನೀತಿಯುಳ್ಳವುಗಳಾಗಿವೆ.
    ಆತನ ಪ್ರತಿಯೊಂದು ಕಾರ್ಯದಲ್ಲೂ ಆತನ ಶಾಶ್ವತ ಪ್ರೀತಿ ತೋರಿಬರುವುದು.
18 ಯೆಹೋವನು ತನ್ನ ಭಕ್ತರಿಗೆ ಸಮೀಪವಾಗಿದ್ದಾನೆ.
    ಆತನು ತನ್ನನ್ನು ಯಥಾರ್ಥವಾಗಿ ಕರೆಯುವ ಪ್ರತಿಯೊಬ್ಬರಿಗೂ ಸಮೀಪವಾಗಿದ್ದಾನೆ.
19 ಆತನು ತನ್ನ ಭಕ್ತರ ಇಷ್ಟವನ್ನು ನೆರವೇರಿಸುವನು.
    ಆತನು ಅವರ ಮೊರೆಗೆ ಕಿವಿಗೊಟ್ಟು ಅವರನ್ನು ರಕ್ಷಿಸುವನು.
20 ಯೆಹೋವನು ತನ್ನನ್ನು ಪ್ರೀತಿಸುವ ಪ್ರತಿಯೊಬ್ಬರನ್ನೂ ಸಂರಕ್ಷಿಸುವನು,
    ದುಷ್ಟರನ್ನಾದರೋ ಆತನು ನಾಶಮಾಡುವನು.
21 ನಾನು ಯೆಹೋವನನ್ನು ಕೊಂಡಾಡುತ್ತೇನೆ!
    ಎಲ್ಲಾ ಜೀವಿಗಳು ಆತನ ಪವಿತ್ರ ಹೆಸರನ್ನು ಸದಾಕಾಲ ಕೊಂಡಾಡಲಿ!

ಪರಮ ಗೀತ 4:1-8

ಪ್ರಿಯಕರನು ಪ್ರಿಯತಮೆಗೆ

ನನ್ನ ಪ್ರಿಯಳೇ, ನೀನು ಬಹಳ ಸುಂದರಿ!
    ನೀನು ರೂಪವತಿ!
ಮುಸುಕಿನೊಳಗಿರುವ ನಿನ್ನ ಕಣ್ಣುಗಳು
    ಕೋಮಲವಾದ ಪಾರಿವಾಳಗಳಂತಿವೆ.
ನಿನ್ನ ಕೂದಲು ಗಿಲ್ಯಾದ್ ಬೆಟ್ಟದ ಇಳಿಜಾರುಗಳಲ್ಲಿ
    ನೃತ್ಯವಾಡುತ್ತಿರುವ ಆಡುಮಂದೆಯಂತೆ ಬಳಕುತ್ತಿದೆ.
ನಿನ್ನ ಹಲ್ಲುಗಳು
    ಉಣ್ಣೆ ಕತ್ತರಿಸಿದ ನಂತರ ಸ್ನಾನ ಮಾಡಿಕೊಂಡು
ತಮ್ಮ ಜೋಡಿಗಳನ್ನು ಕಳೆದುಕೊಳ್ಳದೆ
    ಜೊತೆಜೊತೆಯಾಗಿ ಬರುವ ಕುರಿಮಂದೆಯಂತಿವೆ.
ನಿನ್ನ ತುಟಿಗಳು ರೇಷ್ಮೆಯ ಕೆಂಪುದಾರದಂತಿವೆ.
    ನಿನ್ನ ಬಾಯಿ ಸುಂದರವಾಗಿದೆ.
ಮುಸುಕಿನೊಳಗಿರುವ ನಿನ್ನ ಕೆನ್ನೆಗಳು
    ದಾಳಿಂಬೆ ಹಣ್ಣಿನ ಎರಡು ಹೋಳುಗಳಂತಿವೆ.
ನಿನ್ನ ಕೊರಳು ದಾವೀದನ ಗೋಪುರದಂತೆ
    ಉದ್ದವಾಗಿದೆ ಮತ್ತು ತೆಳುವಾಗಿದೆ.
ಆ ಗೋಪುರದ ಗೋಡೆಗಳು
    ಸಾವಿರ ಗುರಾಣಿಗಳಿಂದಲೂ
    ಬಲಿಷ್ಠ ಸೈನಿಕರ ಗುರಾಣಿಗಳಿಂದಲೂ ಅಲಂಕೃತವಾಗಿವೆ.[a]
ನಿನ್ನ ಎರಡು ಸ್ತನಗಳು ಅವಳಿಜವಳಿ ಜಿಂಕೆಮರಿಗಳಂತೆಯೂ
    ನೆಲದಾವರೆಗಳ ಮಧ್ಯದಲ್ಲಿ ಮೇಯುತ್ತಿರುವ
    ಅವಳಿಜವಳಿ ಸಾರಂಗಗಳಂತೆಯೂ ಇವೆ.
ಹಗಲು ತನ್ನ ಕೊನೆ ಉಸಿರೆಳೆಯುವವರೆಗೆ
    ಮತ್ತು ನೆರಳುಗಳೆಲ್ಲಾ ಓಡಿಹೋಗುವವರೆಗೆ
ನಾನು ಗೋಲರಸದ ಬೆಟ್ಟಕ್ಕೂ
    ಧೂಪದ ಗುಡ್ಡಕ್ಕೂ ಹೋಗುವೆನು.
ನನ್ನ ಪ್ರಿಯೆ, ನೀನು ಸರ್ವಾಂಗಸುಂದರಿ.
    ನಿನಗೆ ಎಲ್ಲಿಯೂ ಕಲೆಗಳಿಲ್ಲ!
ನನ್ನ ವಧುವೇ, ಲೆಬನೋನಿನಿಂದ ನನ್ನೊಂದಿಗೆ ಬಾ!
    ಲೆಬನೋನಿನಿಂದ ನನ್ನೊಂದಿಗೆ ಬಾ!
ಅಮಾನದ ತುದಿಯಿಂದಲೂ
    ಶೆನೀರಿನ ತುದಿಯಿಂದಲೂ ಹೆರ್ಮೋನಿನ ತುದಿಯಿಂದಲೂ
    ಸಿಂಹದ ಗವಿಗಳಿಂದಲೂ ಚಿರತೆಗಳ ಬೆಟ್ಟಗಳಿಂದಲೂ ಬಾ!

1 ಕೊರಿಂಥದವರಿಗೆ 1:3-17

ನಮ್ಮ ತಂದೆಯಾದ ದೇವರಿಂದಲೂ ಪ್ರಭುವಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ ಶಾಂತಿಯೂ ದೊರೆಯಲಿ.

ಪೌಲನು ದೇವರಿಗೆ ಸಲ್ಲಿಸುವ ಕೃತಜ್ಞತಾಸ್ತುತಿ

ದೇವರು ಕ್ರಿಸ್ತ ಯೇಸುವಿನ ಮೂಲಕ ನಿಮಗೆ ಕೊಟ್ಟಿರುವ ಕೃಪೆಯ ನಿಮಿತ್ತವಾಗಿ ನಾನು ನಿಮಗೋಸ್ಕರ ದೇವರಿಗೆ ಯಾವಾಗಲೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಯೇಸುವಿನಲ್ಲಿ ಸಕಲ ಆಶೀರ್ವಾದಗಳನ್ನು ಹೊಂದಿರುವ ನೀವು ವಾಕ್ಚತುರರೂ ಜ್ಞಾನಸಂಪನ್ನರೂ ಆಗಿದ್ದೀರಿ. ಕ್ರಿಸ್ತನ ವಿಷಯವಾದ ಸತ್ಯವು ನಿಮ್ಮಲ್ಲಿ ನಿರೂಪಿಸಲ್ಪಟ್ಟಿದೆ. ಹೀಗಿರಲು, ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಪುನರಾಗಮನವನ್ನು ಎದುರುನೋಡುತ್ತಿರುವ ನೀವು ದೇವರಿಂದ ಬರುವ ಪ್ರತಿಯೊಂದು ವರವನ್ನು ಹೊಂದಿದವರಾಗಿದ್ದೀರಿ. ಯೇಸುವು ನಿಮ್ಮನ್ನು ಕೊನೆಯವರೆಗೂ ದೃಢಪಡಿಸಿ ಕಾಪಾಡುವನು. ನಮ್ಮ ಪ್ರಭುವಾದ ಯೇಸು ಕ್ರಿಸ್ತನು ಮತ್ತೆ ಬಂದಾಗ ನೀವು ನಿರ್ದೋಷಿಗಳಾಗಿರುವಿರಿ. ದೇವರು ನಂಬಿಗಸ್ತನಾಗಿದ್ದಾನೆ. ದೇವರ ಮಗನಾದ ಮತ್ತು ಪ್ರಭುವಾದ ಯೇಸು ಕ್ರಿಸ್ತನ ಜೀವದಲ್ಲಿ ಪಾಲುಹೊಂದಬೇಕೆಂದು ನಮ್ಮನ್ನು ಕರೆದಿರುವಾತನು ದೇವರೇ.

ಕೊರಿಂಥ ಸಭೆಯಲ್ಲಿ ಸಮಸ್ಯೆಗಳು

10 ಸಹೋದರ ಸಹೋದರಿಯರೇ, ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಾನು ನಿಮ್ಮನ್ನು ಬೇಡಿಕೊಳ್ಳುವುದೇನೆಂದರೆ, ವಾದವಿವಾದವಿಲ್ಲದೆ ಭಿನ್ನಭೇದಗಳಿಲ್ಲದೆ ಒಂದೇ ಮನಸ್ಸಿನಿಂದಲೂ ಒಂದೇ ಉದ್ದೇಶದಿಂದಲೂ ನೀವು ಐಕ್ಯಮತ್ಯದಿಂದ ಬಾಳಿರಿ.

11 ನನ್ನ ಸಹೋದರ ಸಹೋದರಿಯರೇ, ಖ್ಲೊಯೆಯ ಮನೆಯಿಂದ ಬಂದಿದ್ದ ಕೆಲವರು ನಿಮ್ಮ ಬಗ್ಗೆ ನನಗೆ ಹೇಳಿದರು. ನಿಮ್ಮ ಮಧ್ಯದಲ್ಲಿ ವಾಗ್ವಾದಗಳಿರುವುದಾಗಿ ನನಗೆ ತಿಳಿಯಿತು. 12 ಅಂದರೆ, ನಿಮ್ಮಲ್ಲಿ ಒಬ್ಬನು, “ನಾನು ಪೌಲನನ್ನು ಹಿಂಬಾಲಿಸುತ್ತೇನೆ” ಎಂದು ಹೇಳುತ್ತಾನೆ; ಮತ್ತೊಬ್ಬನು, “ನಾನು ಅಪೊಲ್ಲೋಸನನ್ನು ಹಿಂಬಾಲಿಸುತ್ತೇನೆ” ಎಂದು ಹೇಳುತ್ತಾನೆ. ಇನ್ನೊಬ್ಬನು, “ನಾನು ಕೇಫನನ್ನು (ಪೇತ್ರನನ್ನು) ಹಿಂಬಾಲಿಸುತ್ತೇನೆ” ಎಂದು ಹೇಳುತ್ತಾನೆ. ಮತ್ತೊಬ್ಬನು, “ನಾನು ಕ್ರಿಸ್ತನನ್ನು ಹಿಂಬಾಲಿಸುತ್ತೇನೆ.” ಎಂದು ಹೇಳುತ್ತಾನೆ. 13 ಕ್ರಿಸ್ತನು ವಿಭಾಗವಾಗಿದ್ದಾನೋ? ಪೌಲನು ನಿಮಗೋಸ್ಕರ ಶಿಲುಬೆಯ ಮೇಲೆ ಸತ್ತನೇ? ಇಲ್ಲ! ನೀವು ಪೌಲನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡಿರೋ? ಇಲ್ಲ! 14 ನಿಮ್ಮಲ್ಲಿ ಕ್ರಿಸ್ಪನು ಮತ್ತು ಗಾಯನು ಇವರ ಹೊರತು ಬೇರೆ ಯಾರಿಗೂ ನಾನು ದೀಕ್ಷಾಸ್ನಾನ ಮಾಡಿಸಿಲ್ಲವಾದ್ದರಿಂದ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ. 15 ನನ್ನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡಿರುವುದಾಗಿ ಹೇಳಲು ನಿಮ್ಮಲ್ಲಿ ಯಾರಿಗೂ ಈಗ ಸಾಧ್ಯವಿಲ್ಲವಾದ್ದರಿಂದ ನಾನು ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ. 16 (ಸ್ತೆಫನನ ಮನೆಯವರಿಗಲ್ಲದೆ ಬೇರೆ ಯಾರಿಗೂ ದೀಕ್ಷಾಸ್ನಾನ ಮಾಡಿಸಿದಂತೆ ನನಗೆ ತೋರುವುದಿಲ್ಲ.) 17 ಕ್ರಿಸ್ತನು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ, ಸುವಾರ್ತೆಯನ್ನು ತಿಳಿಸುವುದಕ್ಕಾಗಿಯಷ್ಟೆ. ಆದರೆ ವಾಕ್ಚಾತುರ್ಯದಿಂದ ಸಾರುವುದಕ್ಕಾಗಿ ಕಳುಹಿಸಲಿಲ್ಲ. ನಾನೇನಾದರೂ ಲೋಕಜ್ಞಾನದಿಂದ ಸುವಾರ್ತೆ ಸಾರಿದ್ದೇಯಾದರೆ, ಕ್ರಿಸ್ತನ ಶಿಲುಬೆಯೇ ನಿರರ್ಥಕವಾಗುವುದು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International