Revised Common Lectionary (Semicontinuous)
ನೀತಿಯುತವಾದ ಹೊಸ ಜೆರುಸಲೇಮ್
62 ಚೀಯೋನನ್ನು ನಾನು ಪ್ರೀತಿಸುತ್ತೇನೆ.
ಆಕೆಯ ವಿಷಯವಾಗಿ ನಾನು ಮಾತಾಡುತ್ತಲೇ ಇರುವೆನು.
ನಾನು ಜೆರುಸಲೇಮನ್ನು ಪ್ರೀತಿಸುತ್ತೇನೆ.
ಅದರ ವಿಷಯವಾಗಿ ಮಾತನಾಡುವದನ್ನು ನಾನು ನಿಲ್ಲಿಸುವದಿಲ್ಲ.
ಧರ್ಮವು ಬೆಳಕಿನಂತೆ ಪ್ರಕಾಶಿಸುವ ತನಕ ನಾನು ಮಾತನಾಡುವೆನು.
ರಕ್ಷಣೆಯು ಬೆಂಕಿಯಂತೆ ಪ್ರಜ್ವಲಿಸುವವರೆಗೆ ನಾನು ಮಾತನಾಡುವೆನು.
2 ಆಗ ಎಲ್ಲಾ ಜನಾಂಗದವರು ಆಕೆಯ ನ್ಯಾಯವನ್ನು ನೋಡುವರು.
ಎಲ್ಲಾ ಅರಸರುಗಳು ಆಕೆಯ ಮಹಿಮೆಯನ್ನು ನೋಡುವರು.
ಆಗ ನಿನಗೊಂದು ಹೊಸ ಹೆಸರನ್ನು ಕೊಡುವೆನು;
ಯೆಹೋವನು ತಾನೇ ಆ ಹೆಸರನ್ನು ಕೊಡುವನು.
3 ಯೆಹೋವನು ನಿನ್ನಲ್ಲಿ ಬಹಳವಾಗಿ ಹೆಚ್ಚಳಪಡುವನು.
ನೀನು ಆತನ ಕೈಯಲ್ಲಿ ಒಂದು ಸುಂದರವಾದ ಕಿರೀಟದಂತಿರುವೆ.
4 ದೇವರು ತೊರೆದ ಜನಾಂಗವೆಂದೂ ದೇವರು ನಾಶಮಾಡಿದ ದೇಶವೆಂದೂ
ನಿನ್ನನ್ನು ಇನ್ನು ಮುಂದೆ ಯಾರೂ ಕರೆಯುವದಿಲ್ಲ.
“ದೇವರ ಪ್ರಿಯ ಜನರು” ಎಂದು ನೀನು ಕರೆಯಲ್ಪಡುವಿ.
ನಿನ್ನ ದೇಶವು “ದೇವರ ಮದಲಗಿತ್ತಿ” ಎಂದು ಕರೆಯಲ್ಪಡುವದು.
ಯಾಕೆಂದರೆ ಯೆಹೋವನು ನಿನ್ನನ್ನು ಪ್ರೀತಿಸುತ್ತಾನೆ;
ನಿನ್ನ ದೇಶವು ಆತನಿಗೆ ಸೇರಿದೆ.
5 ಯೌವನಸ್ಥನು ಕನ್ನಿಕೆಯನ್ನು ಪ್ರೀತಿಸಿ ಮದುವೆಯಾಗುವನು; ತನ್ನ ಹೆಂಡತಿಯನ್ನಾಗಿ ಆಕೆಯನ್ನು ಸ್ವೀಕರಿಸುವನು.
ಅದೇ ರೀತಿಯಲ್ಲಿ ದೇವರು ನಿನ್ನನ್ನು ವಿವಾಹವಾಗುತ್ತಾನೆ.
ದೇಶವು ತುಂಬಿಹೋಗುವಷ್ಟು ಮಕ್ಕಳನ್ನು ಆತನು ಪಡೆದುಕೊಳ್ಳುತ್ತಾನೆ.
ಒಬ್ಬನು ಹೊಸದಾಗಿ ಮದುವೆಯಾದ ತನ್ನ ಹೆಂಡತಿಯೊಡನೆ
ಉಲ್ಲಾಸದಿಂದಿರುವಂತೆ ನಿನ್ನ ದೇವರು ನಿನ್ನಲ್ಲಿ ಆನಂದಿಸುವನು.
5 ಯೆಹೋವನೇ, ನಿನ್ನ ಪ್ರೀತಿಯು ಆಕಾಶಕ್ಕಿಂತಲೂ ಉನ್ನತವಾಗಿದೆ.
ನಿನ್ನ ನಂಬಿಗಸ್ತಿಕೆಯು ಮೇಘಗಳಿಗಿಂತಲೂ ಎತ್ತರವಾಗಿದೆ.
6 ನಿನ್ನ ನೀತಿಯು ಅತ್ಯುನ್ನತವಾದ ಬೆಟ್ಟಕ್ಕಿಂತಲೂ ಎತ್ತರವಾಗಿದೆ.
ನಿನ್ನ ನ್ಯಾಯವು ಮಹಾಸಾಗರಕ್ಕಿಂತಲೂ ಆಳವಾಗಿದೆ.
ಯೆಹೋವನೇ, ಮನುಷ್ಯರನ್ನೂ ಪ್ರಾಣಿಗಳನ್ನೂ ಕಾಪಾಡುವಾತನು ನೀನೇ.
7 ನಿನ್ನ ಶಾಶ್ವತವಾದ ಪ್ರೀತಿಗಿಂತ ಅಮೂಲ್ಯವಾದದ್ದು ಬೇರೊಂದಿಲ್ಲ.
ಜನರೂ ದೇವದೂತರೂ ನಿನ್ನನ್ನೇ ಆಶ್ರಯಿಸಿಕೊಳ್ಳುವರು.
8 ನಿನ್ನ ಆಲಯದ ಸಮೃದ್ಧಿಯಿಂದ ಅವರು ನವಚೈತನ್ಯವನ್ನು ಪಡೆದುಕೊಳ್ಳುವರು.
ನಿನ್ನ ಶ್ರೇಷ್ಠ ನದಿಯಲ್ಲಿ ಕುಡಿಯಲು ಅವರಿಗೆ ಆಸ್ಪದನೀಡು.
9 ಜೀವಬುಗ್ಗೆಯು ನಿನ್ನ ಬಳಿಯಿಂದ ಹರಿಯುವುದು!
ನಾವು ಬೆಳಕನ್ನು ನೋಡುವುದು ನಿನ್ನ ಬೆಳಕಿನಿಂದಲೇ.
10 ನಿನ್ನನ್ನು ಅರಿತುಕೊಂಡವರ ಮೇಲೆ ನಿನ್ನ ಪ್ರೀತಿಯು ನೆಲೆಸಿರಲಿ.
ಯಥಾರ್ಥವಂತರಿಗೆ ಒಳ್ಳೆಯದನ್ನು ಮಾಡು.
ಪವಿತ್ರಾತ್ಮನ ವರಗಳು
12 ಸಹೋದರ ಸಹೋದರಿಯರೇ, ಆತ್ಮಿಕ ವರಗಳ ಬಗ್ಗೆ ನೀವು ಅರ್ಥಮಾಡಿಕೊಳ್ಳಬೇಕೆಂಬುದು ನನ್ನ ಅಪೇಕ್ಷೆಯಾಗಿದೆ. 2 ನೀವು ವಿಶ್ವಾಸಿಗಳಾಗುವುದಕ್ಕಿಂತ ಮುಂಚೆ ನಿಮ್ಮ ಜೀವಿತವು ಹೇಗಿತ್ತೆಂಬುದನ್ನು ಜ್ಞಾಪಿಸಿಕೊಳ್ಳಿರಿ. ನಿಮಗಿಷ್ಟ ಬಂದಂತೆ ನಿರ್ಜೀವ ವಸ್ತುಗಳಾದ ವಿಗ್ರಹಗಳನ್ನು ಆರಾಧಿಸುತ್ತಿದ್ದಿರಿ. 3 ಹೀಗಿರಲಾಗಿ, ನಾನು ನಿಮಗೆ ಹೇಳುವುದೇನೆಂದರೆ, ದೇವರಾತ್ಮನ ಸಹಾಯದಿಂದ ಮಾತಾಡುವ ಯಾವ ವ್ಯಕ್ತಿಯೇ ಆಗಲಿ, “ಯೇಸು ಶಾಪಗ್ರಸ್ತನಾಗಲಿ” ಎಂದು ಹೇಳುವುದಿಲ್ಲ. ಅಂತೆಯೇ ಪವಿತ್ರಾತ್ಮನ ಸಹಾಯವಿಲ್ಲದೆ ಯಾವ ವ್ಯಕ್ತಿಯೇ ಆಗಲಿ, “ಯೇಸುವೇ ಪ್ರಭು” ಎಂದು ಹೇಳಲಾರನು.
4 ಅನೇಕ ರೀತಿಯ ಆತ್ಮಿಕ ವರಗಳಿವೆ. ಆದರೆ ಅವುಗಳೆಲ್ಲ ಒಬ್ಬನೇ ಆತ್ಮನಿಂದ ಬಂದಂಥವುಗಳಾಗಿವೆ. 5 ಸೇವೆಮಾಡಲು ವಿವಿಧ ಮಾರ್ಗಗಳಿವೆ, ಆದರೆ ಅವುಗಳೆಲ್ಲಾ ಒಬ್ಬನೇ ಆತ್ಮನಿಂದ ಬಂದಂಥವುಗಳಾಗಿವೆ. 6 ದೇವರು ಜನರಲ್ಲಿ ಮಾಡುವ ಕಾರ್ಯಗಳಿಗೂ ವಿವಿಧ ಮಾರ್ಗಗಳಿವೆ. ಆದರೆ ಅವುಗಳೆಲ್ಲಾ ಒಬ್ಬನೇ ದೇವರಿಂದ ಬಂದಂಥವುಗಳಾಗಿವೆ.
7 ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಪವಿತ್ರಾತ್ಮನ ವರವು ಕಾಣಬಲ್ಲದು. ಇತರರಿಗೆ ಸಹಾಯ ಮಾಡಲೆಂದು ಪವಿತ್ರಾತ್ಮನು ವರವನ್ನು ಕೊಡುತ್ತಾನೆ. 8 ಆತನು ಒಬ್ಬನಿಗೆ ಜ್ಞಾನದಿಂದ ಮಾತಾಡುವ ವರವನ್ನೂ ಮತ್ತೊಬ್ಬನಿಗೆ ತಿಳುವಳಿಕೆಯಿಂದ ಮಾತಾಡುವ ವರವನ್ನೂ ಕೊಡುತ್ತಾನೆ. 9 ಒಬ್ಬನಿಗೆ ನಂಬಿಕೆಯನ್ನೂ ಮತ್ತೊಬ್ಬನಿಗೆ ಸ್ವಸ್ಥಪಡಿಸುವ ವರವನ್ನೂ ಕೊಡುತ್ತಾನೆ; 10 ಮತ್ತೊಬ್ಬನಿಗೆ ಅದ್ಭುತಕಾರ್ಯಗಳನ್ನು ಮಾಡುವ ಶಕ್ತಿಯನ್ನೂ ಇನ್ನೊಬ್ಬನಿಗೆ ಪ್ರವಾದಿಸುವ ಸಾಮರ್ಥ್ಯವನ್ನೂ ಇನ್ನೊಬ್ಬನಿಗೆ ಒಳ್ಳೆಯ ಮತ್ತು ಕೆಟ್ಟ ಆತ್ಮಗಳ ನಡುವೆ ಇರುವ ವ್ಯತ್ಯಾಸವನ್ನು ತಿಳಿದುಕೊಳ್ಳುವ ಸಾಮರ್ಥ್ಯವನ್ನೂ ಕೊಡುತ್ತಾನೆ; ಒಬ್ಬನಿಗೆ ಅನೇಕ ಭಾಷೆಗಳನ್ನು ಮಾತಾಡುವ ಸಾಮರ್ಥ್ಯವನ್ನೂ ಮತ್ತೊಬ್ಬನಿಗೆ ಆ ಭಾಷೆಗಳನ್ನು ಅನುವಾದಿಸುವ ಸಾಮರ್ಥ್ಯವನ್ನೂ ಕೊಡುತ್ತಾನೆ. 11 ಪವಿತ್ರಾತ್ಮನು ಒಬ್ಬನೇ. ಆತನೇ ಎಲ್ಲಾ ವರಗಳನ್ನು ತನ್ನ ಚಿತ್ತಕ್ಕನುಸಾರವಾಗಿ ಪ್ರತಿಯೊಬ್ಬನಿಗೂ ಹಂಚಿಕೊಟ್ಟು ನಡೆಸುತ್ತಾನೆ.
ಕಾನಾ ಊರಿನಲ್ಲಿ ಮದುವೆ
2 ಮಾರನೆಯ ದಿನ ಗಲಿಲಾಯದ ಕಾನಾ ಊರಿನಲ್ಲಿ ಒಂದು ಮದುವೆ ಇತ್ತು. ಯೇಸುವಿನ ತಾಯಿಯೂ ಬಂದಿದ್ದಳು. 2 ಯೇಸು ಮತ್ತು ಆತನ ಶಿಷ್ಯರನ್ನು ಸಹ ಮದುವೆಗೆ ಆಹ್ವಾನಿಸಲಾಗಿತ್ತು. 3 ಮದುವೆಯಲ್ಲಿ ಸಾಕಷ್ಟು ದ್ರಾಕ್ಷಾರಸವಿರಲಿಲ್ಲ. ಇದ್ದ ದ್ರಾಕ್ಷಾರಸವೆಲ್ಲಾ ಮುಗಿದುಹೋದಾಗ ಯೇಸುವಿನ ತಾಯಿಯು ಆತನಿಗೆ, “ಅವರಲ್ಲಿ ದ್ರಾಕ್ಷಾರಸವೇ ಇಲ್ಲ” ಎಂದು ತಿಳಿಸಿದಳು.
4 ಯೇಸು, “ಅಮ್ಮಾ, ನನ್ನ ಗೊಡವೆ ನಿನಗೇಕೆ? ನನ್ನ ಸಮಯ ಇನ್ನೂ ಬಂದಿಲ್ಲ” ಎಂದು ಉತ್ತರಕೊಟ್ಟನು.
5 ಯೇಸುವಿನ ತಾಯಿ ಸೇವಕರಿಗೆ, “ಯೇಸು ನಿಮಗೆ ಏನು ಹೇಳುತ್ತಾನೋ ಅದನ್ನು ಮಾಡಿರಿ” ಎಂದು ಹೇಳಿದಳು.
6 ಕಲ್ಲಿನಿಂದ ಮಾಡಿದ ಆರು ದೊಡ್ಡ ಬಾನೆಗಳು ಅಲ್ಲಿದ್ದವು. ಯೆಹೂದ್ಯರು ಶುದ್ಧಾಚಾರಗಳಿಗಾಗಿ ಈ ಕಲ್ಲಿನ ಬಾನೆಗಳನ್ನು ಉಪಯೋಗಿಸುತ್ತಿದ್ದರು. ಪ್ರತಿಯೊಂದು ಬಾನೆಯೂ ಸುಮಾರು ನೂರು ಲೀಟರ್‌ಗಳಷ್ಟು ನೀರು ಹಿಡಿಯುತ್ತಿತ್ತು.
7 ಯೇಸು ಸೇವಕರಿಗೆ, “ಆ ಬಾನೆಗಳಲ್ಲಿ ನೀರನ್ನು ತುಂಬಿರಿ” ಎಂದು ಹೇಳಿದನು. ಅಂತೆಯೇ ಸೇವಕರು ಆ ಬಾನೆಗಳ ಕಂಠದವರೆಗೂ ನೀರನ್ನು ತುಂಬಿದರು.
8 ಬಳಿಕ ಯೇಸು ಸೇವಕರಿಗೆ, “ಈಗ ಸ್ವಲ್ಪ ನೀರನ್ನು ತೆಗೆದುಕೊಂಡು ಹೋಗಿ ಔತಣದ ಮೇಲ್ವಿಚಾರಕನಿಗೆ ಕೊಡಿರಿ” ಎಂದು ಹೇಳಿದನು.
ಅಂತೆಯೇ ಅವರು ಅದನ್ನು ತೆಗೆದುಕೊಂಡು ಹೋದರು. 9 ಮದುವೆಯ ಮೇಲ್ವಿಚಾರಕನು ದ್ರಾಕ್ಷಾರಸವಾಗಿ ಮಾರ್ಪಟ್ಟಿದ್ದ ನೀರನ್ನು ರುಚಿ ನೋಡಿದನು. ದ್ರಾಕ್ಷಾರಸವು ಎಲ್ಲಿಂದ ಬಂತೆಂಬುದು ಅವನಿಗೆ ಗೊತ್ತಿರಲಿಲ್ಲ. ಆದರೆ ಅದು ಆ ಸೇವಕರಿಗೆ ತಿಳಿದಿತ್ತು. ಮದುವೆಯ ಮೇಲ್ವಿಚಾರಕನು ಮದುಮಗನನ್ನು ಕರೆದು, 10 “ಜನರು ಉತ್ತಮವಾದ ದ್ರಾಕ್ಷಾರಸವನ್ನು ಯಾವಾಗಲೂ ಮೊದಲು ಹಂಚುತ್ತಾರೆ. ಅತಿಥಿಗಳು ಕುಡಿದು ಮತ್ತರಾದ ಮೇಲೆ ಅವರಿಗೆ ಕಡಿಮೆ ದರ್ಜೆಯ ದ್ರಾಕ್ಷಾರಸವನ್ನು ಕೊಡುತ್ತಾರೆ. ಆದರೆ ನೀನು ಉತ್ತಮವಾದ ದ್ರಾಕ್ಷಾರಸವನ್ನು ಈವರೆಗೂ ಇಟ್ಟಿರುವೆ!” ಎಂದು ಹೇಳಿದನು.
11 ಯೇಸು ಮಾಡಿದ ಮೊದಲನೆಯ ಅದ್ಭುತಕಾರ್ಯವಿದು. ಯೇಸು ಇದನ್ನು ಗಲಿಲಾಯದ ಕಾನಾ ಊರಿನಲ್ಲಿ ಮಾಡಿ ತನ್ನ ಮಹತ್ವವನ್ನು ತೋರಿದನು. ಆತನ ಶಿಷ್ಯರೂ ಆತನಲ್ಲಿ ನಂಬಿಕೆ ಇಟ್ಟರು.
Kannada Holy Bible: Easy-to-Read Version. All rights reserved. © 1997 Bible League International