Revised Common Lectionary (Semicontinuous)
5 ಯೆಹೋವನೇ, ನಿನ್ನ ಪ್ರೀತಿಯು ಆಕಾಶಕ್ಕಿಂತಲೂ ಉನ್ನತವಾಗಿದೆ.
ನಿನ್ನ ನಂಬಿಗಸ್ತಿಕೆಯು ಮೇಘಗಳಿಗಿಂತಲೂ ಎತ್ತರವಾಗಿದೆ.
6 ನಿನ್ನ ನೀತಿಯು ಅತ್ಯುನ್ನತವಾದ ಬೆಟ್ಟಕ್ಕಿಂತಲೂ ಎತ್ತರವಾಗಿದೆ.
ನಿನ್ನ ನ್ಯಾಯವು ಮಹಾಸಾಗರಕ್ಕಿಂತಲೂ ಆಳವಾಗಿದೆ.
ಯೆಹೋವನೇ, ಮನುಷ್ಯರನ್ನೂ ಪ್ರಾಣಿಗಳನ್ನೂ ಕಾಪಾಡುವಾತನು ನೀನೇ.
7 ನಿನ್ನ ಶಾಶ್ವತವಾದ ಪ್ರೀತಿಗಿಂತ ಅಮೂಲ್ಯವಾದದ್ದು ಬೇರೊಂದಿಲ್ಲ.
ಜನರೂ ದೇವದೂತರೂ ನಿನ್ನನ್ನೇ ಆಶ್ರಯಿಸಿಕೊಳ್ಳುವರು.
8 ನಿನ್ನ ಆಲಯದ ಸಮೃದ್ಧಿಯಿಂದ ಅವರು ನವಚೈತನ್ಯವನ್ನು ಪಡೆದುಕೊಳ್ಳುವರು.
ನಿನ್ನ ಶ್ರೇಷ್ಠ ನದಿಯಲ್ಲಿ ಕುಡಿಯಲು ಅವರಿಗೆ ಆಸ್ಪದನೀಡು.
9 ಜೀವಬುಗ್ಗೆಯು ನಿನ್ನ ಬಳಿಯಿಂದ ಹರಿಯುವುದು!
ನಾವು ಬೆಳಕನ್ನು ನೋಡುವುದು ನಿನ್ನ ಬೆಳಕಿನಿಂದಲೇ.
10 ನಿನ್ನನ್ನು ಅರಿತುಕೊಂಡವರ ಮೇಲೆ ನಿನ್ನ ಪ್ರೀತಿಯು ನೆಲೆಸಿರಲಿ.
ಯಥಾರ್ಥವಂತರಿಗೆ ಒಳ್ಳೆಯದನ್ನು ಮಾಡು.
4 ಇದು ಯೆಹೋವನ ಸಂದೇಶ:
“ಇಸ್ರೇಲೇ, ನೀನು ಹಿಂತಿರುಗಿ ಬರಲು ಇಚ್ಛಿಸಿದರೆ
ನನ್ನಲ್ಲಿಗೆ ಹಿಂತಿರುಗಿ ಬಾ.
ನಿನ್ನ ವಿಗ್ರಹಗಳನ್ನು ಎಸೆದುಬಿಡು.
ನನ್ನಿಂದ ದೂರಸರಿದು ಅಲೆದಾಡಬೇಡ.
2 ನೀನು ಹೀಗೆ ಮಾಡಿದರೆ
ನನ್ನ ಹೆಸರಿನ ಮೇಲೆ ಪ್ರಮಾಣ ಮಾಡಲು ಶಕ್ತಳಾಗುವೆ.
‘ಹಾದು, ಯೆಹೋವನಾಣೆ’ ಎಂದು ಹೇಳಶಕ್ತಳಾಗುವೆ.
ನೀನು ಆ ಪದಗಳನ್ನು ಸತ್ಯವಾಗಿಯೂ ಪ್ರಾಮಾಣಿಕವಾಗಿಯೂ ಸರಿಯಾಗಿ ಉಪಯೋಗಿಸಲು ಸಾಧ್ಯವಾಗುತ್ತದೆ.
ನೀನು ಹೀಗೆ ಮಾಡಿದರೆ,
ಎಲ್ಲಾ ಜನಾಂಗಗಳು ಯೆಹೋವನ ಆಶೀರ್ವಾದವನ್ನು ಪಡೆಯುತ್ತವೆ.
ಆತನ ಕಾರ್ಯಗಳಿಗಾಗಿ
ಆತನಿಗೆ ಸ್ತೋತ್ರ ಮಾಡುತ್ತವೆ.”
3 ಯೆಹೂದ ಜನಾಂಗದ ಜನರಿಗೂ ಜೆರುಸಲೇಮ್ ನಗರದ ಜನರಿಗೂ ಯೆಹೋವನು ಹೀಗೆ ಹೇಳುತ್ತಾನೆ:
“ನಿಮ್ಮ ಹೊಲಗಳಲ್ಲಿ ನೇಗಿಲು ಹೊಡೆದಿಲ್ಲ,
ಆ ಹೊಲಗಳನ್ನು ನೇಗಿಲು ಹೊಡೆದು ಸ್ವಚ್ಛಮಾಡಿರಿ.
ಮುಳ್ಳುಗಳಲ್ಲಿ ಬೀಜಗಳನ್ನು ಬಿತ್ತಬೇಡಿರಿ.
4 ಯೆಹೋವನ ಮನುಷ್ಯರಾಗಿರಿ,
ನಿಮ್ಮ ಹೃದಯ ಪರಿವರ್ತನೆ[a] ಮಾಡಿಕೊಳ್ಳಿರಿ.
ಯೆಹೂದದ ಜನಗಳೇ, ಜೆರುಸಲೇಮಿನ ಜನರೇ, ನೀವು ಬದಲಾಗದಿದ್ದರೆ
ನನಗೆ ವಿಪರೀತ ಕೋಪ ಬರುವುದು.
ನನ್ನ ಕೋಪವು ಬೆಂಕಿಯ ಜ್ವಾಲೆಯಂತೆ ಭರದಿಂದ ಹಬ್ಬುವದು.
ನನ್ನ ಕೋಪವು ನಿಮ್ಮನ್ನು ಸುಟ್ಟು ಬೂದಿ ಮಾಡುವುದು.
ಯಾರಿಂದಲೂ ಆ ಬೆಕಿಯನ್ನು ಆರಿಸುವುದು ಸಾಧ್ಯವಾಗುವದಿಲ್ಲ.
ಇದೆಲ್ಲ ಏಕೆ ನಡೆಯುವುದು? ನೀವು ಮಾಡಿದ ದುಷ್ಕೃತ್ಯಗಳಿಂದಲೇ.”
ಯೇಸುವಿನ ಶಕ್ತಿ ದೇವರಿಂದ ಬಂದದ್ದು
(ಮತ್ತಾಯ 12:22-30; ಮಾರ್ಕ 3:20-27)
14 ಒಮ್ಮೆ ಯೇಸು ಮೂಕದೆವ್ವದಿಂದ ಪೀಡಿತನಾಗಿದ್ದ ಒಬ್ಬನನ್ನು ಬಿಡಿಸುತ್ತಿದ್ದನು. ಆ ದೆವ್ವವು ಅವನನ್ನು ಬಿಟ್ಟು ಹೊರಗೆ ಬಂದಾಗ ಅವನು ಮಾತಾಡಿದನು. ಇದನ್ನು ಕಂಡ ಜನರು ಬೆರಗಾದರು. 15 ಆದರೆ ಕೆಲವರು, “ದೆವ್ವದಿಂದ ಪೀಡಿತರಾಗಿರುವವರನ್ನು ಇವನು ಬೆಲ್ಜೆಬೂಲನ ಶಕ್ತಿಯಿಂದ ಬಿಡಿಸುತ್ತಾನೆ. ಬೆಲ್ಜೆಬೂಲನು ದೆವ್ವಗಳ ಅಧಿಪತಿ” ಎಂದು ಹೇಳಿದರು.
16 ಇತರ ಜನರು ಯೇಸುವನ್ನು ಪರೀಕ್ಷಿಸಬೇಕೆಂದು ದೇವರಿಂದ ಒಂದು ಸೂಚಕಕಾರ್ಯವನ್ನು ನಮಗೆ ತೋರಿಸು ಎಂದು ಕೇಳಿದರು. 17 ಆದರೆ ಅವರ ಆಲೋಚನೆಯನ್ನು ತಿಳಿದಿದ್ದ ಯೇಸು ಅವರಿಗೆ, “ಒಡೆದುಹೋದ ಮತ್ತು ತನಗೆ ವಿರುದ್ಧವಾಗಿ ತಾನೇ ಕಾದಾಡುವ ರಾಜ್ಯವು ನಾಶವಾಗುವುದು. ಭೇದಭಾವದಿಂದ ಕೂಡಿರುವ ಕುಟುಂಬವು ಮುರಿದು ಹೋಗುವುದು. 18 ಅಂತೆಯೇ, ಸೈತಾನನು ತನಗೆ ವಿರುದ್ಧವಾಗಿ ತಾನೇ ಕಾದಾಡಿದರೆ ಅವನ ರಾಜ್ಯವು ಮುಂದುವರಿಯಲು ಹೇಗೆ ಸಾಧ್ಯ? ನಾನು ದೆವ್ವಗಳನ್ನು ಬೆಲ್ಜೆಬೂಲನ ಶಕ್ತಿಯಿಂದ ಬಿಡಿಸುತ್ತೇನೆಂದು ನೀವು ಹೇಳುತ್ತೀರಿ. 19 ನಾನು ಬೆಲ್ಜೆಬೂಲನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುವುದಾಗಿದ್ದರೆ, ನಿಮ್ಮ ಜನರು ದೆವ್ವಗಳನ್ನು ಯಾವ ಶಕ್ತಿಯಿಂದ ಬಿಡಿಸುತ್ತಾರೆ? ಆದ್ದರಿಂದ ನಿಮ್ಮ ಸ್ವಂತ ಜನರೇ ನಿಮ್ಮನು ತಪ್ಪಿತಸ್ಥರೆಂದು ಹೇಳುತ್ತಾರೆ. 20 ಆದರೆ ನಾನು ದೆವ್ವಗಳನ್ನು ದೇವರ ಬಲದಿಂದ ಹೊರಡಿಸುವುದಾದರೆ ದೇವರ ರಾಜ್ಯವು ನಿಮ್ಮ ಬಳಿಗೆ ಬಂದಿದೆ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ.
21 “ಒಬ್ಬ ಬಲಿಷ್ಠನು ಅನೇಕ ಆಯುಧಗಳಿಂದ ಸುಸಜ್ಜಿತನಾಗಿ ತನ್ನ ಮನೆಯನ್ನು ಕಾಯುತ್ತಿರುವಾಗ, ಮನೆಯೊಳಗಿರುವ ವಸ್ತುಗಳು ಸುರಕ್ಷಿತವಾಗಿರುತ್ತವೆ. 22 ಆದರೆ ಅವನಿಗಿಂತಲೂ ಬಲಿಷ್ಠನಾದ ಮತ್ತೊಬ್ಬನು ಬಂದು ಅವನನ್ನು ಸೋಲಿಸಿದರೆ, ಮೊದಲನೆಯ ಬಲಿಷ್ಠನು ತನ್ನ ಮನೆಯನ್ನು ಸುರಕ್ಷಿತವಾಗಿಡುವುದಕ್ಕಾಗಿ ಅವಲಂಬಿಸಿಕೊಂಡಿದ್ದ ಆಯುಧಗಳನ್ನೆಲ್ಲಾ ಆ ಮತ್ತೊಬ್ಬ ಬಲಿಷ್ಠನು ತೆಗೆದುಕೊಂಡು ಹೋಗುವನು. ಬಳಿಕ ಆ ಮತ್ತೊಬ್ಬ ಬಲಿಷ್ಠನು ಆ ಮನುಷ್ಯನ ವಸ್ತುಗಳನ್ನು ತನಗೆ ಇಷ್ಟಬಂದ ಹಾಗೆ ಮಾಡುವನು.
23 “ನನ್ನೊಂದಿಗಿಲ್ಲದವನು ನನಗೆ ವಿರೋಧವಾಗಿದ್ದಾನೆ. ನನ್ನೊಂದಿಗೆ ಶೇಖರಿಸದವನು ಚದರಿಸುವವನಾಗಿದ್ದಾನೆ.
Kannada Holy Bible: Easy-to-Read Version. All rights reserved. © 1997 Bible League International