Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 36:5-10

ಯೆಹೋವನೇ, ನಿನ್ನ ಪ್ರೀತಿಯು ಆಕಾಶಕ್ಕಿಂತಲೂ ಉನ್ನತವಾಗಿದೆ.
    ನಿನ್ನ ನಂಬಿಗಸ್ತಿಕೆಯು ಮೇಘಗಳಿಗಿಂತಲೂ ಎತ್ತರವಾಗಿದೆ.
ನಿನ್ನ ನೀತಿಯು ಅತ್ಯುನ್ನತವಾದ ಬೆಟ್ಟಕ್ಕಿಂತಲೂ ಎತ್ತರವಾಗಿದೆ.
    ನಿನ್ನ ನ್ಯಾಯವು ಮಹಾಸಾಗರಕ್ಕಿಂತಲೂ ಆಳವಾಗಿದೆ.
ಯೆಹೋವನೇ, ಮನುಷ್ಯರನ್ನೂ ಪ್ರಾಣಿಗಳನ್ನೂ ಕಾಪಾಡುವಾತನು ನೀನೇ.
ನಿನ್ನ ಶಾಶ್ವತವಾದ ಪ್ರೀತಿಗಿಂತ ಅಮೂಲ್ಯವಾದದ್ದು ಬೇರೊಂದಿಲ್ಲ.
    ಜನರೂ ದೇವದೂತರೂ ನಿನ್ನನ್ನೇ ಆಶ್ರಯಿಸಿಕೊಳ್ಳುವರು.
ನಿನ್ನ ಆಲಯದ ಸಮೃದ್ಧಿಯಿಂದ ಅವರು ನವಚೈತನ್ಯವನ್ನು ಪಡೆದುಕೊಳ್ಳುವರು.
    ನಿನ್ನ ಶ್ರೇಷ್ಠ ನದಿಯಲ್ಲಿ ಕುಡಿಯಲು ಅವರಿಗೆ ಆಸ್ಪದನೀಡು.
ಜೀವಬುಗ್ಗೆಯು ನಿನ್ನ ಬಳಿಯಿಂದ ಹರಿಯುವುದು!
    ನಾವು ಬೆಳಕನ್ನು ನೋಡುವುದು ನಿನ್ನ ಬೆಳಕಿನಿಂದಲೇ.
10 ನಿನ್ನನ್ನು ಅರಿತುಕೊಂಡವರ ಮೇಲೆ ನಿನ್ನ ಪ್ರೀತಿಯು ನೆಲೆಸಿರಲಿ.
    ಯಥಾರ್ಥವಂತರಿಗೆ ಒಳ್ಳೆಯದನ್ನು ಮಾಡು.

ಯೆರೆಮೀಯ 3:19-25

19 ಯೆಹೋವನಾದ ನಾನು ಹೀಗೆಂದುಕೊಂಡೆ:

“ನಾನು ಸಂತೋಷದಿಂದ ನಿಮ್ಮನ್ನು ಮಕ್ಕಳಂತೆ ನೋಡಿಕೊಳ್ಳುವೆನು.
    ಬೇರೆ ಎಲ್ಲಾ ಜನಾಂಗಗಳ ಪ್ರದೇಶಕ್ಕಿಂತ ಅತಿ ಸುಂದರವಾದ ಪ್ರದೇಶವನ್ನು
    ನಿಮಗೆ ಕೊಡುವುದಕ್ಕೆ ನಾನು ಸಂತೋಷಪಡುವೆನು.
ನೀವು ನನ್ನನ್ನು ‘ತಂದೆ’ ಎಂದು ಕರೆಯುವಿರೆಂದು ನಾನು ಭಾವಿಸಿದ್ದೆ.
    ನೀವು ಯಾವಾಗಲೂ ನನ್ನ ಹಿಂಬಾಲಕರಾಗಿರುವಿರೆಂದು ಭಾವಿಸಿದ್ದೆ.
20 ಆದರೆ ನೀವು ಗಂಡನಿಗೆ ವಂಚಿಸುವ ಜಾರಿಣಿಯಂತಾದಿರಿ.
    ಇಸ್ರೇಲ್ ವಂಶದವರೇ, ನೀವು ನನಗೆ ದ್ರೋಹ ಮಾಡಿದಿರಿ” ಎಂದು ಯೆಹೋವನು ನುಡಿದನು.
21 ಬೋಳುಪರ್ವತದ ಮೇಲೆ ಅಳುವ ಧ್ವನಿಯನ್ನು ನೀವು ಕೇಳಬಹುದು.
    ಇಸ್ರೇಲಿನ ಜನರು ಕಣ್ಣೀರು ಸುರಿಸಿ ಕರುಣೆಗಾಗಿ ಪ್ರಾರ್ಥಿಸುತ್ತಿದ್ದಾರೆ.
ಅವರು ತುಂಬಾ ಕೆಟ್ಟುಹೋಗಿ
    ತಮ್ಮ ದೇವರಾದ ಯೆಹೋವನನ್ನು ಮರೆತರು.

22 ಇದಲ್ಲದೆ ಯೆಹೋವನು, “ಅಪನಂಬಿಗಸ್ತರಾದ ಜನರೇ,
    ನನ್ನಲ್ಲಿಗೆ ಹಿಂತಿರುಗಿ ಬನ್ನಿ.
ನನಗೆ ವಿಶ್ವಾಸದ್ರೋಹ ಮಾಡಿದುದಕ್ಕೆ ನಾನು ಕ್ಷಮಿಸುವೆನು,
    ಹಿಂತಿರುಗಿ ಬನ್ನಿ” ಎಂದು ಹೇಳುತ್ತಾನೆ.

“ಅದಕ್ಕೆ ಜನರು, ‘ಆಗಲಿ ನಿನ್ನಲ್ಲಿಗೆ ಬರುತ್ತೇವೆ.
    ನೀನೇ ನಮ್ಮ ದೇವರಾದ ಯೆಹೋವನು.
23 ಬೆಟ್ಟದ ಮೇಲೆ ವಿಗ್ರಹಗಳ ಪೂಜೆ ಮಾಡಿದ್ದು ನಮ್ಮ ಮೂರ್ಖತನವಾಯಿತು.
    ಬೆಟ್ಟಗಳ ಮೇಲಿನ ಎಲ್ಲಾ ಉತ್ಸವಗಳು ಕೇವಲ ಸುಳ್ಳು.
ಇಸ್ರೇಲಿನ ರಕ್ಷಣೆ ಖಚಿತವಾಗಿಯೂ
    ನಮ್ಮ ದೇವರಾದ ಯೆಹೋವನಿಂದ ಮಾತ್ರ ಸಾಧ್ಯ.
24 ನಮ್ಮ ಪೂರ್ವಿಕರು ಸಂಪಾದಿಸಿದ್ದೆಲ್ಲವನ್ನು
    ನೈವೇದ್ಯದಲ್ಲಿ ಸುಳ್ಳುದೇವರಾದ ಬಾಳನು ತಿಂದುಬಿಟ್ಟನು.
ನಮ್ಮ ಬಾಲ್ಯದಿಂದಲೂ ಹೀಗಾಗುತಾ ಬಂದಿದೆ.
ಭಯಂಕರವಾದ ಆ ಸುಳ್ಳು ದೇವರು
    ನಮ್ಮ ಪೂರ್ವಿಕರ ದನಕುರಿಗಳನ್ನೂ
    ಅವರ ಗಂಡುಹೆಣ್ಣುಮಕ್ಕಳನ್ನೂ ಬಲಿ ತೆಗೆದುಕೊಳ್ಳುತ್ತಿರುವನು.
25 ನಾವು ತಂದುಕೊಂಡ ಅವಮಾನದಲ್ಲಿ ಬಿದ್ದಿರೋಣ.
    ನಮ್ಮ ನಾಚಿಕೆಯು ಕಂಬಳಿಯು ಹೊದಿಸಿದಂತೆ ನಮ್ಮನ್ನು ಮುಚ್ಚಿಬಿಡಲಿ.
ನಾವು ನಮ್ಮ ದೇವರಾದ ಯೆಹೋವನ ವಿಷಯದಲ್ಲಿ ಪಾಪಮಾಡಿದ್ದೇವೆ.
    ನಾವು ಮತ್ತು ನಮ್ಮ ಪೂರ್ವಿಕರು ಪಾಪಮಾಡಿದ್ದೇವೆ.
    ನಮ್ಮ ಬಾಲ್ಯದಿಂದ ಇಂದಿನವರೆಗೆ ನಾವು ನಮ್ಮ ದೇವರಾದ ಯೆಹೋವನ ಆಜ್ಞೆಯನ್ನು ಪಾಲಿಸಲಿಲ್ಲ’” ಎಂದು ಮೊರೆಯಿಟ್ಟರು.

1 ಕೊರಿಂಥದವರಿಗೆ 7:1-7

ಮದುವೆ ಕುರಿತು ಬೋಧನೆ

ನೀವು ಬರೆದು ಕೇಳಿರುವ ಸಂಗತಿಗಳ ಬಗ್ಗೆ ಈಗ ನಾನು ಚರ್ಚಿಸುತ್ತೇನೆ. ಪುರುಷನು ಮದುವೆ ಮಾಡಿಕೊಳ್ಳದಿರುವುದು ಒಳ್ಳೆಯದೇ ಸರಿ. ಆದರೆ ಲೈಂಗಿಕ ಪಾಪ ಅಪಾಯಕರವಾದದ್ದು. ಆದ್ದರಿಂದ ಪ್ರತಿಯೊಬ್ಬ ಪುರುಷನಿಗೂ ಸ್ವಂತ ಹೆಂಡತಿ ಇದ್ದರೆ ಮತ್ತು ಪ್ರತಿಯೊಬ್ಬ ಸ್ತ್ರೀಗೂ ಸ್ವಂತ ಗಂಡನು ಇದ್ದರೆ ಒಳ್ಳೆಯದು. ಗಂಡನು ತನ್ನ ಹೆಂಡತಿಗೆ ದಾಂಪತ್ಯ ಜೀವನದಲ್ಲಿ ಸಲ್ಲತಕ್ಕದ್ದನ್ನೆಲ್ಲ ಸಲ್ಲಿಸಲಿ. ಮತ್ತು ಹೆಂಡತಿಯು ತನ್ನ ಗಂಡನಿಗೆ ದಾಂಪತ್ಯ ಜೀವನದಲ್ಲಿ ಸಲ್ಲತಕ್ಕದ್ದನ್ನೆಲ್ಲ ಸಲ್ಲಿಸಲಿ. ಹೆಂಡತಿಗೆ ತನ್ನ ಸ್ವಂತ ದೇಹದ ಮೇಲೆ ಅಧಿಕಾರವಿಲ್ಲ. ಆಕೆಯ ಗಂಡನಿಗೆ ಆಕೆಯ ದೇಹದ ಮೇಲೆ ಅಧಿಕಾರವಿದೆ. ಅದೇರೀತಿ, ಗಂಡನಿಗೆ ತನ್ನ ಸ್ವಂತ ದೇಹದ ಮೇಲೆ ಅಧಿಕಾರವಿಲ್ಲ. ಅವನ ಹೆಂಡತಿಗೆ ಅವನ ದೇಹದ ಮೇಲೆ ಅಧಿಕಾರವಿದೆ. ಆದ್ದರಿಂದ ಗಂಡ ಮತ್ತು ಹೆಂಡತಿ ಒಬ್ಬರಿಗೊಬ್ಬರು ದಾಂಪತ್ಯ ಕರ್ತವ್ಯಗಳನ್ನು ನೆರವೇರಿಸಲು ನಿರಾಕರಿಸಬಾರದು. ಅವರು ತಮ್ಮ ಸಮಯವನ್ನು ಪ್ರಾರ್ಥನೆಯಲ್ಲಿ ವಿನಿಯೋಗಿಸುವುದಕ್ಕಾಗಿ ಸ್ವಲ್ಪಕಾಲ ಲೈಂಗಿಕ ಸಂಬಂಧದಿಂದ ದೂರವಿರಬಹುದು. ಆದರೆ ಅದಕ್ಕೆ ಪರಸ್ಪರ ಸಮ್ಮತಿಯಿರಬೇಕು. ಬಳಿಕ ಮತ್ತೆ ಒಂದಾಗಬೇಕು, ಇಲ್ಲವಾದರೆ ನಿಮ್ಮ ಬಲಹೀನತೆಯನ್ನು ಕಂಡು ಸೈತಾನನು ಪಾಪಕ್ಕೆ ಪ್ರಚೋಧಿಸಬಹುದು. ಸ್ವಲ್ಪಕಾಲ ಅಗಲಿ ದೂರವಿರುವುದಕ್ಕೆ ಅನುಮತಿ ಕೊಡಲು ನಾನು ಇದನ್ನು ಹೇಳುತ್ತಿದ್ದೇನೆ. ಇದು ಆಜ್ಞೆಯಲ್ಲ. ಎಲ್ಲಾ ಜನರು ನಮ್ಮಂತೆ ಇರಬೇಕೆಂದು ನಮ್ಮ ಅಭಿಲಾಷೆ. ಆದರೆ ಪ್ರತಿಯೊಬ್ಬ ವ್ಯಕ್ತಿಯು ದೇವರಿಂದ ತನ್ನದೇ ಆದ ವರವನ್ನು ಹೊಂದಿದ್ದಾನೆ. ಒಬ್ಬ ವ್ಯಕ್ತಿಗೆ ಒಂದು ವರವಿದ್ದರೆ ಮತ್ತೊಬ್ಬನಿಗೆ ಇನ್ನೊಂದು ವರವಿದೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International