Revised Common Lectionary (Semicontinuous)
106 ಯೆಹೋವನನ್ನು ಸ್ತುತಿಸಿರಿ!
ಆತನು ಒಳ್ಳೆಯವನು! ಆತನಿಗೆ ಕೃತಜ್ಞತಾಸ್ತುತಿಮಾಡಿರಿ.
ಆತನ ಪ್ರೀತಿಯು ಶಾಶ್ವತವಾದದ್ದು!
2 ಯೆಹೋವನ ಮಹತ್ವವನ್ನು ಸಂಪೂರ್ಣವಾಗಿ ವರ್ಣಿಸಲು ಯಾರಿಗೂ ಆಗದು;
ಆತನನ್ನು ಸಂಪೂರ್ಣವಾಗಿ ಸ್ತುತಿಸುವುದಕ್ಕೂ ಯಾರಿಗೂ ಸಾಧ್ಯವಿಲ್ಲ.
3 ದೇವರ ಆಜ್ಞೆಗಳಿಗೆ ವಿಧೇಯರಾಗಿರುವವರು ಭಾಗ್ಯವಂತರೇ ಸರಿ!
ಅವರು ಸತ್ಕಾರ್ಯಗಳನ್ನು ಯಾವಾಗಲೂ ಮಾಡುತ್ತಿರುವರು.
4 ಯೆಹೋವನೇ, ನಿನ್ನ ಜನರಿಗೆ ದಯೆತೋರುವಾಗ ನನ್ನನ್ನು ಜ್ಞಾಪಿಸಿಕೊಂಡು ದಯೆತೋರು.
ನಿನ್ನ ಜನರನ್ನು ರಕ್ಷಿಸುವಾಗ ನನ್ನನ್ನು ನೆನಪು ಮಾಡಿಕೊಂಡು ರಕ್ಷಿಸು.
5 ಯೆಹೋವನೇ, ನಿನ್ನ ಜನರಿಗೋಸ್ಕರ ನೀನು ಮಾಡುವ
ಒಳ್ಳೆಯವುಗಳಲ್ಲಿ ನನಗೂ ಪಾಲು ದೊರೆಯಲಿ.
ನಿನ್ನ ಜನರೊಂದಿಗೆ ನಾನೂ ಸಂತೋಷಪಡುವಂತೆ ಮಾಡು.
ನಿನ್ನ ಜನರೊಂದಿಗೆ ನಾನೂ ನಿನ್ನ ಬಗ್ಗೆ ಹೆಮ್ಮೆಪಡುವಂತಾಗಲಿ.
6 ನಮ್ಮ ಪೂರ್ವಿಕರು ಪಾಪಮಾಡಿದಂತೆಯೇ ನಾವು ಪಾಪ ಮಾಡಿದೆವು.
ನಾವು ಅಪರಾಧಿಗಳಾಗಿದ್ದೆವು; ದುಷ್ಕೃತ್ಯಗಳನ್ನು ಮಾಡಿದೆವು!
7 ನೀನು ಈಜಿಪ್ಟಿನಲ್ಲಿ ಮಾಡಿದ ಮಹತ್ಕಾರ್ಯಗಳಿಂದ
ನಮ್ಮ ಪೂರ್ವಿಕರು ಏನೂ ಕಲಿತುಕೊಳ್ಳಲಿಲ್ಲ.
ಕೆಂಪು ಸಮುದ್ರದ ಬಳಿಯಲ್ಲಿ
ನಮ್ಮ ಪೂರ್ವಿಕರು ನಿನಗೆ ವಿರೋಧವಾಗಿ ತಿರುಗಿದರು.
8 ಆದರೆ ಆತನು ತನ್ನ ಹೆಸರಿನ ನಿಮಿತ್ತವಾಗಿ ನಮ್ಮ ಪೂರ್ವಿಕರನ್ನು ರಕ್ಷಿಸಿದನು;
ತನ್ನ ಮಹಾಶಕ್ತಿಯನ್ನು ತೋರಿಸುವುದಕ್ಕಾಗಿ ಅವರನ್ನು ರಕ್ಷಿಸಿದನು.
9 ಆತನು ಆಜ್ಞಾಪಿಸಲು ಕೆಂಪು ಸಮುದ್ರವು ಒಣಗಿಹೋಯಿತು.
ಆತನು ಆಳವಾದ ಸಮುದ್ರವನ್ನು ಇಬ್ಭಾಗ ಮಾಡಿ ಮರಳುಗಾಡಿನಂತೆ ಒಣಗಿಹೋಗಿದ್ದ ಭೂಮಿಯ ಮೇಲೆ ನಮ್ಮ ಪೂರ್ವಿಕರನ್ನು ನಡೆಸಿದನು.
10 ನಮ್ಮ ಪೂರ್ವಿಕರನ್ನು ಅವರ ಶತ್ರುಗಳಿಂದ ರಕ್ಷಿಸಿದನು!
ವೈರಿಗಳಿಂದ ಪಾರುಮಾಡಿದನು!
11 ಅವರ ಶತ್ರುಗಳನ್ನು ಸಮುದ್ರದಲ್ಲಿ ಮುಳುಗಿಸಿಬಿಟ್ಟನು.
ಅವರ ಶತ್ರುಗಳಲ್ಲಿ ಒಬ್ಬರೂ ತಪ್ಪಿಸಿಕೊಳ್ಳಲಾಗಲಿಲ್ಲ!
12 ನಮ್ಮ ಪೂರ್ವಿಕರು ಆತನ ಆಜ್ಞೆಗಳನ್ನು
ನಂಬಿ ಆತನನ್ನು ಸಂಕೀರ್ತಿಸಿದರು.
ಚಲ್ಪಹಾದನ ಹೆಣ್ಣುಮಕ್ಕಳು
27 ಚಲ್ಪಹಾದನು ಹೇಫೆರನ ಮಗನು. ಹೇಫೆರನು ಗಿಲ್ಯಾದನ ಮಗನು. ಗಿಲ್ಯಾದನು ಮಾಕೀರನ ಮಗನು. ಮಾಕೀರನು ಮನಸ್ಸೆಯ ಮಗನು. ಮನಸ್ಸೆಯು ಯೋಸೇಫನ ಮಗನು. ಚಲ್ಪಹಾದನಿಗೆ ಐದುಮಂದಿ ಹೆಣ್ಣುಮಕ್ಕಳಿದ್ದರು. ಅವರು ಯಾರೆಂದರೆ: ಮಹ್ಲಾ, ನೋವಾ, ಹೊಗ್ಲಾ, ಮಿಲ್ಕಾ ಮತ್ತು ತಿರ್ಚಾ. 2 ಈ ಐದುಮಂದಿ ಸ್ತ್ರೀಯರು ದೇವದರ್ಶನಗುಡಾರದ ಪ್ರವೇಶದ್ವಾರದ ಬಳಿಗೆ ಹೋಗಿ ಮೋಶೆಯ, ಮಹಾಯಾಜಕನಾದ ಎಲ್ಲಾಜಾರನ, ನಾಯಕರ ಮತ್ತು ಎಲ್ಲಾ ಇಸ್ರೇಲರ ಮುಂದೆ ನಿಂತರು.
3 ಈ ಐದು ಹೆಣ್ಣುಮಕ್ಕಳು, “ನಮ್ಮ ತಂದೆ ಮರುಭೂಮಿಯಲ್ಲಿ ಸತ್ತುಹೋದನು. ಅವನು ಕೋರಹನ ಜೊತೆಯಲ್ಲಿ ಯೆಹೋವನಿಗೆ ವಿರೋಧವಾಗಿ ತಿರುಗಿ ಬಿದ್ದವರಲ್ಲಿ ಸೇರಿದವನಲ್ಲ. ನಮ್ಮ ತಂದೆಯು ತನ್ನ ಪಾಪದ ಫಲವಾಗಿ ಸತ್ತನು. ಅವನಿಗೆ ಗಂಡುಮಕ್ಕಳಿರಲಿಲ್ಲ. 4 ನಮ್ಮ ತಂದೆಗೆ ಗಂಡುಮಗನಿಲ್ಲದ ಮಾತ್ರದಿಂದ ಅವನ ಹೆಸರನ್ನು ಅವನ ಕುಲದವರ ಮಧ್ಯದಿಂದ ತೆಗೆಯುವುದು ನ್ಯಾಯವೋ? ನಮ್ಮ ತಂದೆಯ ಸಂಬಂಧಿಕರೊಡನೆ ನಮಗೂ ಸ್ವಾಸ್ತ್ಯವನ್ನು ಕೊಡು” ಎಂದು ಹೇಳಿದರು.
5 ಮೋಶೆಯು ಇದರ ವಿಷಯದಲ್ಲಿ ತಾನು ಏನು ಮಾಡಬೇಕೆಂದು ಯೆಹೋವನ ಸನ್ನಿಧಿಯಲ್ಲಿ ವಿಚಾರಿಸಲಾಗಿ, 6 ಯೆಹೋವನು ಅವನಿಗೆ ಹೇಳಿದ್ದೇನೆಂದರೆ: 7 “ಚಲ್ಪಹಾದನ ಹೆಣ್ಣುಮಕ್ಕಳು ಹೇಳುವುದು ನ್ಯಾಯವಾಗಿದೆ. ಅವರ ತಂದೆಯ ಸಂಬಂಧಿಕರೊಡನೆ ಅವರಿಗೂ ನೀನು ಸ್ವಾಸ್ತ್ಯವನ್ನು ಕೊಡಬೇಕು. ಅವರ ತಂದೆಯ ಸ್ವಾಸ್ತ್ಯವನ್ನು ನೀನು ಅವರಿಗೆ ವರ್ಗಾವಣೆ ಮಾಡಬೇಕು.
8 “ಮತ್ತು ನೀನು ಇಸ್ರೇಲರಿಗೆ ಹೀಗೆ ಅಪ್ಪಣೆ ಕೊಡಬೇಕು: ‘ಒಬ್ಬ ಮನುಷ್ಯನು ಮಗನಿಲ್ಲದೆ ಸತ್ತರೆ, ನೀವು ಅವನ ಸ್ವಾಸ್ತ್ಯವನ್ನು ಅವನ ಮಗಳಿಗೆ ವರ್ಗಾವಣೆ ಮಾಡಬೇಕು. 9-10 ಮಗಳು ಇಲ್ಲದ ಪಕ್ಷಕ್ಕೆ ಅವನ ಸ್ವಾಸ್ತ್ಯವನ್ನು ಅವನ ಅಣ್ಣತಮ್ಮಂದಿರಿಗೆ ಕೊಡಬೇಕು. ಅಣ್ಣತಮ್ಮಂದಿರು ಇಲ್ಲದ ಪಕ್ಷಕ್ಕೆ ಅವನ ಸ್ವಾಸ್ತ್ಯವನ್ನು ಅವನ ತಂದೆಯ ಸಹೋದರರಿಗೆ ಕೊಡಬೇಕು. 11 ಅವನ ತಂದೆಗೆ ಸಹೋದರರಿಲ್ಲದಿದ್ದರೆ, ಅವನ ಸ್ವಂತ ಕುಲದ ಅತಿ ಸಮೀಪದ ಸಂಬಂಧಿಕನಿಗೆ ಅದನ್ನು ವಹಿಸಿಕೊಡಬೇಕು. ಆಗ ಅವನು ಅದನ್ನು ಸ್ವಾಧೀನಪಡಿಸಿಕೊಳ್ಳುವನು. ಯೆಹೋವನು ಮೋಶೆಗೆ ಆಜ್ಞಾಪಿಸಿದ ಈ ನಿರ್ಧಾರವು ಇಸ್ರೇಲರಿಗೆ ಕಾನೂನು ಬದ್ಧವಾದ ವಿಧಿಯಾಗಿದೆ.’”
ಲೋಕಕ್ಕೆ ಬೆಳಕಾಗಿರಿ!
(ಮತ್ತಾಯ 5:15; 6:22-23)
33 “ದೀಪವನ್ನು ಹಚ್ಚಿ ಪಾತ್ರೆಯೊಳಗಾಗಲಿ ಬೇರೆ ಎಲ್ಲೇ ಆಗಲಿ ಅಡಗಿಸಿಡುವುದಿಲ್ಲ. ಒಳಗೆ ಬರುವವರಿಗೆ ಬೆಳಕು ಕಾಣಿಸಲೆಂದು ದೀಪವನ್ನು ದೀಪಸ್ತಂಭದ ಮೇಲೆ ಇಡುತ್ತಾರೆ. 34 ನಿನ್ನ ಕಣ್ಣು ದೇಹಕ್ಕೆ ಬೆಳಕಾಗಿದೆ, ನಿನ್ನ ಕಣ್ಣು ಒಳ್ಳೆಯದಾಗಿದ್ದರೆ, ನಿನ್ನ ದೇಹವೆಲ್ಲಾ ಪೂರ್ಣ ಬೆಳಕಾಗಿರುವುದು. ನಿನ್ನ ಕಣ್ಣು ಕೆಟ್ಟದ್ದಾಗಿದ್ದರೆ, ನಿನ್ನ ದೇಹವೆಲ್ಲಾ ಪೂರ್ಣಕತ್ತಲಾಗಿರುವುದು. 35 ಆದ್ದರಿಂದ ಎಚ್ಚರಿಕೆಯಾಗಿರು! ನಿನ್ನೊಳಗಿರುವ ಬೆಳಕು ಕತ್ತಲಾಗದಂತೆ ನೋಡಿಕೊ. 36 ನಿನ್ನ ದೇಹವೆಲ್ಲಾ ಬೆಳಕಿನಿಂದ ತುಂಬಿದ್ದು ಯಾವ ಭಾಗದಲ್ಲಿಯೂ ಕತ್ತಲಿಲ್ಲದಿದ್ದರೆ ನೀನು ಪ್ರಜ್ವಲಿಸುವ ಬೆಳಕಿನಂತಿರುವೆ” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International