Revised Common Lectionary (Semicontinuous)
106 ಯೆಹೋವನನ್ನು ಸ್ತುತಿಸಿರಿ!
ಆತನು ಒಳ್ಳೆಯವನು! ಆತನಿಗೆ ಕೃತಜ್ಞತಾಸ್ತುತಿಮಾಡಿರಿ.
ಆತನ ಪ್ರೀತಿಯು ಶಾಶ್ವತವಾದದ್ದು!
2 ಯೆಹೋವನ ಮಹತ್ವವನ್ನು ಸಂಪೂರ್ಣವಾಗಿ ವರ್ಣಿಸಲು ಯಾರಿಗೂ ಆಗದು;
ಆತನನ್ನು ಸಂಪೂರ್ಣವಾಗಿ ಸ್ತುತಿಸುವುದಕ್ಕೂ ಯಾರಿಗೂ ಸಾಧ್ಯವಿಲ್ಲ.
3 ದೇವರ ಆಜ್ಞೆಗಳಿಗೆ ವಿಧೇಯರಾಗಿರುವವರು ಭಾಗ್ಯವಂತರೇ ಸರಿ!
ಅವರು ಸತ್ಕಾರ್ಯಗಳನ್ನು ಯಾವಾಗಲೂ ಮಾಡುತ್ತಿರುವರು.
4 ಯೆಹೋವನೇ, ನಿನ್ನ ಜನರಿಗೆ ದಯೆತೋರುವಾಗ ನನ್ನನ್ನು ಜ್ಞಾಪಿಸಿಕೊಂಡು ದಯೆತೋರು.
ನಿನ್ನ ಜನರನ್ನು ರಕ್ಷಿಸುವಾಗ ನನ್ನನ್ನು ನೆನಪು ಮಾಡಿಕೊಂಡು ರಕ್ಷಿಸು.
5 ಯೆಹೋವನೇ, ನಿನ್ನ ಜನರಿಗೋಸ್ಕರ ನೀನು ಮಾಡುವ
ಒಳ್ಳೆಯವುಗಳಲ್ಲಿ ನನಗೂ ಪಾಲು ದೊರೆಯಲಿ.
ನಿನ್ನ ಜನರೊಂದಿಗೆ ನಾನೂ ಸಂತೋಷಪಡುವಂತೆ ಮಾಡು.
ನಿನ್ನ ಜನರೊಂದಿಗೆ ನಾನೂ ನಿನ್ನ ಬಗ್ಗೆ ಹೆಮ್ಮೆಪಡುವಂತಾಗಲಿ.
6 ನಮ್ಮ ಪೂರ್ವಿಕರು ಪಾಪಮಾಡಿದಂತೆಯೇ ನಾವು ಪಾಪ ಮಾಡಿದೆವು.
ನಾವು ಅಪರಾಧಿಗಳಾಗಿದ್ದೆವು; ದುಷ್ಕೃತ್ಯಗಳನ್ನು ಮಾಡಿದೆವು!
7 ನೀನು ಈಜಿಪ್ಟಿನಲ್ಲಿ ಮಾಡಿದ ಮಹತ್ಕಾರ್ಯಗಳಿಂದ
ನಮ್ಮ ಪೂರ್ವಿಕರು ಏನೂ ಕಲಿತುಕೊಳ್ಳಲಿಲ್ಲ.
ಕೆಂಪು ಸಮುದ್ರದ ಬಳಿಯಲ್ಲಿ
ನಮ್ಮ ಪೂರ್ವಿಕರು ನಿನಗೆ ವಿರೋಧವಾಗಿ ತಿರುಗಿದರು.
8 ಆದರೆ ಆತನು ತನ್ನ ಹೆಸರಿನ ನಿಮಿತ್ತವಾಗಿ ನಮ್ಮ ಪೂರ್ವಿಕರನ್ನು ರಕ್ಷಿಸಿದನು;
ತನ್ನ ಮಹಾಶಕ್ತಿಯನ್ನು ತೋರಿಸುವುದಕ್ಕಾಗಿ ಅವರನ್ನು ರಕ್ಷಿಸಿದನು.
9 ಆತನು ಆಜ್ಞಾಪಿಸಲು ಕೆಂಪು ಸಮುದ್ರವು ಒಣಗಿಹೋಯಿತು.
ಆತನು ಆಳವಾದ ಸಮುದ್ರವನ್ನು ಇಬ್ಭಾಗ ಮಾಡಿ ಮರಳುಗಾಡಿನಂತೆ ಒಣಗಿಹೋಗಿದ್ದ ಭೂಮಿಯ ಮೇಲೆ ನಮ್ಮ ಪೂರ್ವಿಕರನ್ನು ನಡೆಸಿದನು.
10 ನಮ್ಮ ಪೂರ್ವಿಕರನ್ನು ಅವರ ಶತ್ರುಗಳಿಂದ ರಕ್ಷಿಸಿದನು!
ವೈರಿಗಳಿಂದ ಪಾರುಮಾಡಿದನು!
11 ಅವರ ಶತ್ರುಗಳನ್ನು ಸಮುದ್ರದಲ್ಲಿ ಮುಳುಗಿಸಿಬಿಟ್ಟನು.
ಅವರ ಶತ್ರುಗಳಲ್ಲಿ ಒಬ್ಬರೂ ತಪ್ಪಿಸಿಕೊಳ್ಳಲಾಗಲಿಲ್ಲ!
12 ನಮ್ಮ ಪೂರ್ವಿಕರು ಆತನ ಆಜ್ಞೆಗಳನ್ನು
ನಂಬಿ ಆತನನ್ನು ಸಂಕೀರ್ತಿಸಿದರು.
12 “ಏಳು, ಏಳು ದೆಬೋರಳೇ!
ಏಳು, ಎದ್ದೇಳು, ಒಂದು ಗೀತೆಯನ್ನು ಹಾಡು!
ಬಾರಾಕನೇ, ಏಳು!
ಅಬೀನೋವಮನ ಮಗನೇ, ಹೋಗು; ನಿನ್ನ ಶತ್ರುಗಳನ್ನು ಸೆರೆ ಹಿಡಿದುಕೊ!
13 “ಆಗ ಬದುಕಿಕೊಂಡಿದ್ದವರು ನಾಯಕರ ಬಳಿಗೆ ಹೋದರು.
ಯೆಹೋವನ ಜನರೇ, ನನ್ನೊಂದಿಗೂ ಸೈನಿಕರೊಂದಿಗೂ ಬನ್ನಿರಿ.
14 “ಅಮಾಲೇಕ್ ಪರ್ವತ ಪ್ರದೇಶದಲ್ಲಿ ವಾಸಮಾಡುತ್ತಿದ್ದ ಎಫ್ರಾಯೀಮ್ಯರು ಬಂದರು;
ನಿನ್ನನ್ನೂ ನಿನ್ನ ಜನರನ್ನೂ ಅನುಸರಿಸುತ್ತಿದ್ದ ಬೆನ್ಯಾಮೀನ್ಯರೂ ಬಂದರು;
ಮಾಕೀರನ ಕುಲದಿಂದ ನಾಯಕರು ಬಂದರು;
ಜೆಬುಲೂನ್ ಕುಲದಿಂದ ನಾಯಕರು ಕಂಚಿನ ದೊಣ್ಣೆಗಳೊಡನೆ ಬಂದರು.
15 ಇಸ್ಸಾಕಾರ್ ಕುಲದ ನಾಯಕರು ದೆಬೋರಳ ಜೊತೆಯಲ್ಲಿದ್ದರು.
ಇಸ್ಸಾಕಾರ್ ಕುಲದವರು ಬಾರಾಕನಿಗೆ ನಂಬಿಗಸ್ತರಾಗಿದ್ದರು.
ಅವರು ಕಾಲು ನಡಿಗೆಯಿಂದ ಕಣಿವೆಗೆ ಬಂದರು.
“ರೂಬೇನ್ಯರೇ, ನಿಮ್ಮ ಸೈನ್ಯದಲ್ಲಿ ತುಂಬ ಶೂರರಿದ್ದಾರೆ.
16 ಹೀಗಿರಲು ನೀವು ಕುರಿಯ ಹಟ್ಟಿಗಳ ಗೋಡೆಗೆ ಒರಗಿಕೊಂಡು ಕುಳಿತಿರುವುದೇಕೆ?
ರೂಬೇನ್ಯರ ಶೂರ ಸೈನಿಕರು ಯುದ್ಧದ ಬಗ್ಗೆ ಬಹಳವಾಗಿ ಯೋಚಿಸಿದರು,
ಆದರೆ ಕುರಿಗಳಿಗಾಗಿ ಬಾರಿಸುವ ಸಂಗೀತವನ್ನು ಕೇಳುತ್ತಾ ಮನೆಯಲ್ಲಿ ಇದ್ದುಬಿಟ್ಟರು.
17 ಗಿಲ್ಯಾದಿನ ಜನರು ಜೋರ್ಡನ್ ನದಿಯ ಆಚೆಯ ದಡದಲ್ಲಿದ್ದ ತಮ್ಮ ಶಿಬಿರಗಳಲ್ಲಿ ಇದ್ದುಬಿಟ್ಟರು.[a]
ದಾನ್ ಕುಲದವರೇ, ನೀವೇಕೆ ನಿಮ್ಮ ಹಡಗುಗಳಲ್ಲಿಯೇ ಉಳಿದುಬಿಟ್ಟಿರಿ?
ಆಶೇರ್ ಕುಲದವರು ಸಮುದ್ರತೀರದಲ್ಲಿರುವ
ತಮ್ಮ ಸುರಕ್ಷಿತವಾದ ಬಂದರುಗಳಲ್ಲಿ ಉಳಿದುಕೊಂಡರು.
18 “ಆದರೆ ಜೆಬುಲೂನ್ಯರೂ ನಫ್ತಾಲ್ಯರೂ ಆ ಬೆಟ್ಟಗಳ ಮೇಲೆ
ತಮ್ಮ ಜೀವವನ್ನೇ ಮುಡಿಪಾಗಿಟ್ಟು ಯುದ್ಧ ಮಾಡಿದರು.
19 ಕಾನಾನ್ಯ ಅರಸರು ಬಂದು ಯುದ್ಧಮಾಡಿದರು;
ಅವರು ಮೆಗಿದ್ದೋ ಪ್ರವಾಹಗಳ ಬಳಿಯಲ್ಲಿರುವ ತಾನಾಕದಲ್ಲಿ ಹೋರಾಡಿದರು.
ಆದರೆ ಅವರು ಯಾವ ಸಂಪತ್ತನ್ನು ತೆಗೆದುಕೊಂಡು ಹೋಗಲಿಲ್ಲ!
20 ಪರಲೋಕದಿಂದ ನಕ್ಷತ್ರಗಳು ಯುದ್ಧ ಮಾಡಿದವು.
ನಕ್ಷತ್ರಗಳು ಆಕಾಶಪಥದಿಂದ ಸೀಸೆರನೊಡನೆ ಯುದ್ಧ ಮಾಡಿದವು.
21 ಪೂರ್ವಕಾಲದಿಂದ ಪ್ರಸಿದ್ಧವಾದ ಕೀಷೋನ್ ನದಿಯು
ಸೀಸೆರನ ಜನರನ್ನು ಕೊಚ್ಚಿಕೊಂಡು ಹೋಯಿತು.
ನನ್ನ ಆತ್ಮವೇ, ಧೈರ್ಯದಿಂದ ಮುನ್ನುಗ್ಗು!
ಈಗ ನಮಗೆ ನಿತ್ಯಜೀವವಿದೆ
13 ದೇವರ ಮಗನಲ್ಲಿ ನಂಬಿಕೆಯಿಟ್ಟಿರುವ ನಿಮಗೆ ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ. ಈಗ ನಿಮಗೆ ನಿತ್ಯಜೀವವಿದೆ ಎಂಬುದು ನಿಮಗೆ ಗೊತ್ತಾಗುವಂತೆ ನಾನು ಈ ಪತ್ರ ಬರೆಯುತ್ತಿದ್ದೇನೆ. 14 ನಾವು ಯಾವ ಸಂದೇಹಗಳೂ ಇಲ್ಲದೆ ದೇವರ ಬಳಿಗೆ ಬರಲು ಸಾಧ್ಯವಿದೆ. ಇದರ ಅರ್ಥವೇನೆಂದರೆ (ದೇವರ ಚಿತ್ತಕ್ಕನುಸಾರವಾಗಿ) ನಮಗೆ ಬೇಕಾದವುಗಳಿಗಾಗಿ ದೇವರನ್ನು ಕೇಳಿಕೊಂಡರೆ ಆತನು ನಮ್ಮ ವಿಜ್ಞಾಪನೆಯನ್ನು ಕೇಳುತ್ತಾನೆ. 15 ನಾವು ದೇವರನ್ನು ಬೇಡಿಕೊಂಡಾಗಲೆಲ್ಲಾ ಆತನು ನಮ್ಮ ಬೇಡಿಕೆಗಳನ್ನು ಕೇಳುವುದರಿಂದ ಆತನಲ್ಲಿ ಬೇಡಿಕೊಂಡದ್ದನ್ನು ಆತನು ನಮಗೆ ದಯಪಾಲಿಸುತ್ತಾನೆಂಬುದು ನಮಗೆ ತಿಳಿದಿದೆ.
16 ಕ್ರಿಸ್ತನಲ್ಲಿ ಸಹೋದರನಾಗಲಿ ಅಥವಾ ಸಹೋದರಿಯಾಗಲಿ ಪಾಪ ಮಾಡುವುದನ್ನು (ನಿತ್ಯವಾದ ಮರಣಕ್ಕೆ ನಡೆಸುವ ಪಾಪವನ್ನಲ್ಲ) ಕಂಡ ವ್ಯಕ್ತಿಯು ತನ್ನ ಆ ಸಹೋದರನಿಗಾಗಿ ಅಥವಾ ಆ ಸಹೋದರಿಗಾಗಿ ಪ್ರಾರ್ಥಿಸಬೇಕು. ಆಗ ದೇವರು ಆ ಸಹೋದರನಿಗೆ ಅಥವಾ ಆ ಸಹೋದರಿಗೆ ಜೀವವನ್ನು ದಯಪಾಲಿಸುತ್ತಾನೆ. ಶಾಶ್ವತವಾದ ಮರಣದ ಕಡೆಗೆ ನಡೆಸದಿರುವ ಪಾಪವನ್ನು ಮಾಡುವವರ ಬಗ್ಗೆ ನಾನು ಹೇಳುತ್ತಿದ್ದೇನೆ. ಮರಣದ ಕಡೆಗೆ ನಡೆಸುವ ಪಾಪವಿದೆ. ಈ ಪಾಪ ಮಾಡುವವರಿಗಾಗಿ ಪ್ರಾರ್ಥಿಸಬೇಕೆಂದು ನಾನು ಹೇಳುತ್ತಿಲ್ಲ. 17 ನೀತಿಗೆ ವಿರುದ್ಧವಾದುದೆಲ್ಲಾ ಪಾಪವಾಗಿದೆ. ಆದರೆ ಶಾಶ್ವತ ಮರಣದ ಕಡೆಗೆ ಕೊಂಡೊಯ್ಯದಿರುವ ಪಾಪವೂ ಇದೆ.
18 ದೇವರಿಂದ ಹೊಸದಾಗಿ ಹುಟ್ಟಿದವನು ಪಾಪದಲ್ಲೇ ಮುಂದುವರಿಯುವುದಿಲ್ಲವೆಂದು ನಮಗೆ ತಿಳಿದಿದೆ. ದೇವರ ಮಗನಾದ ಯೇಸು ಅವನನ್ನು ಸುರಕ್ಷಿತವಾಗಿ ಕಾಪಾಡುತ್ತಾನೆ. ಕೆಡುಕನು ಅವನಿಗೆ ಕೇಡುಮಾಡಲಾಗುವುದಿಲ್ಲ. 19 ನಾವು ದೇವರಿಗೆ ಸೇರಿದವರೆಂಬುದು ನಮಗೆ ತಿಳಿದಿದೆ. ಆದರೆ ಈ ಲೋಕವು ಕೆಡುಕನ ವಶದಲ್ಲಿದೆ. 20 ದೇವರ ಮಗನು ಬಂದಿದ್ದಾನೆಂಬುದು ನಮಗೆ ತಿಳಿದಿದೆ. ದೇವರ ಮಗನು ನಮಗೆ ತಿಳುವಳಿಕೆಯನ್ನು ದಯಪಾಲಿಸಿರುವನು. ಈಗ ನಾವು ದೇವರನ್ನು ತಿಳಿದುಕೊಳ್ಳಬಲ್ಲೆವು. ಸತ್ಯವಾಗಿರುವಾತನು ದೇವರೇ. ಸತ್ಯ ದೇವರಲ್ಲಿಯೂ ಮತ್ತು ಆತನ ಮಗನಾದ ಯೇಸು ಕ್ರಿಸ್ತನಲ್ಲಿಯೂ ನಾವು ನೆಲೆಸಿದ್ದೇವೆ. ಆತನು ಸತ್ಯದೇವರೂ ನಿತ್ಯಜೀವವೂ ಆಗಿದ್ದಾನೆ. 21 ಆದ್ದರಿಂದ ಪ್ರಿಯ ಮಕ್ಕಳೇ, ನೀವು ಸುಳ್ಳುದೇವರುಗಳಿಂದ ದೂರವಾಗಿರಿ.
Kannada Holy Bible: Easy-to-Read Version. All rights reserved. © 1997 Bible League International