Revised Common Lectionary (Semicontinuous)
106 ಯೆಹೋವನನ್ನು ಸ್ತುತಿಸಿರಿ!
ಆತನು ಒಳ್ಳೆಯವನು! ಆತನಿಗೆ ಕೃತಜ್ಞತಾಸ್ತುತಿಮಾಡಿರಿ.
ಆತನ ಪ್ರೀತಿಯು ಶಾಶ್ವತವಾದದ್ದು!
2 ಯೆಹೋವನ ಮಹತ್ವವನ್ನು ಸಂಪೂರ್ಣವಾಗಿ ವರ್ಣಿಸಲು ಯಾರಿಗೂ ಆಗದು;
ಆತನನ್ನು ಸಂಪೂರ್ಣವಾಗಿ ಸ್ತುತಿಸುವುದಕ್ಕೂ ಯಾರಿಗೂ ಸಾಧ್ಯವಿಲ್ಲ.
3 ದೇವರ ಆಜ್ಞೆಗಳಿಗೆ ವಿಧೇಯರಾಗಿರುವವರು ಭಾಗ್ಯವಂತರೇ ಸರಿ!
ಅವರು ಸತ್ಕಾರ್ಯಗಳನ್ನು ಯಾವಾಗಲೂ ಮಾಡುತ್ತಿರುವರು.
4 ಯೆಹೋವನೇ, ನಿನ್ನ ಜನರಿಗೆ ದಯೆತೋರುವಾಗ ನನ್ನನ್ನು ಜ್ಞಾಪಿಸಿಕೊಂಡು ದಯೆತೋರು.
ನಿನ್ನ ಜನರನ್ನು ರಕ್ಷಿಸುವಾಗ ನನ್ನನ್ನು ನೆನಪು ಮಾಡಿಕೊಂಡು ರಕ್ಷಿಸು.
5 ಯೆಹೋವನೇ, ನಿನ್ನ ಜನರಿಗೋಸ್ಕರ ನೀನು ಮಾಡುವ
ಒಳ್ಳೆಯವುಗಳಲ್ಲಿ ನನಗೂ ಪಾಲು ದೊರೆಯಲಿ.
ನಿನ್ನ ಜನರೊಂದಿಗೆ ನಾನೂ ಸಂತೋಷಪಡುವಂತೆ ಮಾಡು.
ನಿನ್ನ ಜನರೊಂದಿಗೆ ನಾನೂ ನಿನ್ನ ಬಗ್ಗೆ ಹೆಮ್ಮೆಪಡುವಂತಾಗಲಿ.
6 ನಮ್ಮ ಪೂರ್ವಿಕರು ಪಾಪಮಾಡಿದಂತೆಯೇ ನಾವು ಪಾಪ ಮಾಡಿದೆವು.
ನಾವು ಅಪರಾಧಿಗಳಾಗಿದ್ದೆವು; ದುಷ್ಕೃತ್ಯಗಳನ್ನು ಮಾಡಿದೆವು!
7 ನೀನು ಈಜಿಪ್ಟಿನಲ್ಲಿ ಮಾಡಿದ ಮಹತ್ಕಾರ್ಯಗಳಿಂದ
ನಮ್ಮ ಪೂರ್ವಿಕರು ಏನೂ ಕಲಿತುಕೊಳ್ಳಲಿಲ್ಲ.
ಕೆಂಪು ಸಮುದ್ರದ ಬಳಿಯಲ್ಲಿ
ನಮ್ಮ ಪೂರ್ವಿಕರು ನಿನಗೆ ವಿರೋಧವಾಗಿ ತಿರುಗಿದರು.
8 ಆದರೆ ಆತನು ತನ್ನ ಹೆಸರಿನ ನಿಮಿತ್ತವಾಗಿ ನಮ್ಮ ಪೂರ್ವಿಕರನ್ನು ರಕ್ಷಿಸಿದನು;
ತನ್ನ ಮಹಾಶಕ್ತಿಯನ್ನು ತೋರಿಸುವುದಕ್ಕಾಗಿ ಅವರನ್ನು ರಕ್ಷಿಸಿದನು.
9 ಆತನು ಆಜ್ಞಾಪಿಸಲು ಕೆಂಪು ಸಮುದ್ರವು ಒಣಗಿಹೋಯಿತು.
ಆತನು ಆಳವಾದ ಸಮುದ್ರವನ್ನು ಇಬ್ಭಾಗ ಮಾಡಿ ಮರಳುಗಾಡಿನಂತೆ ಒಣಗಿಹೋಗಿದ್ದ ಭೂಮಿಯ ಮೇಲೆ ನಮ್ಮ ಪೂರ್ವಿಕರನ್ನು ನಡೆಸಿದನು.
10 ನಮ್ಮ ಪೂರ್ವಿಕರನ್ನು ಅವರ ಶತ್ರುಗಳಿಂದ ರಕ್ಷಿಸಿದನು!
ವೈರಿಗಳಿಂದ ಪಾರುಮಾಡಿದನು!
11 ಅವರ ಶತ್ರುಗಳನ್ನು ಸಮುದ್ರದಲ್ಲಿ ಮುಳುಗಿಸಿಬಿಟ್ಟನು.
ಅವರ ಶತ್ರುಗಳಲ್ಲಿ ಒಬ್ಬರೂ ತಪ್ಪಿಸಿಕೊಳ್ಳಲಾಗಲಿಲ್ಲ!
12 ನಮ್ಮ ಪೂರ್ವಿಕರು ಆತನ ಆಜ್ಞೆಗಳನ್ನು
ನಂಬಿ ಆತನನ್ನು ಸಂಕೀರ್ತಿಸಿದರು.
ದೆಬೋರಾ—ಮಹಿಳಾ ನ್ಯಾಯಾಧೀಶೆ
4 ಏಹೂದನು ಮರಣಹೊಂದಿದ ಮೇಲೆ ಇಸ್ರೇಲರು ಮತ್ತೆ ಯೆಹೋವನ ವಿರೋಧವಾಗಿ ಪಾಪ ಮಾಡಿದರು. 2 ಆದ್ದರಿಂದ ಕಾನಾನ್ಯರ ಅರಸನಾದ ಯಾಬೀನನು ಇಸ್ರೇಲರನ್ನು ಸೋಲಿಸುವಂತೆ ಯೆಹೋವನು ಅವಕಾಶ ಮಾಡಿದನು. ಯಾಬೀನನು ಹಾಚೋರ್ ಎಂಬ ನಗರದಲ್ಲಿ ಆಳುತ್ತಿದ್ದನು. ಸೀಸೆರ ಎಂಬವನು ಅವನ ಸೇನಾಧಿಪತಿಯಾಗಿದ್ದನು. ಸೀಸೆರನು ಹರೋಷೆತ್ ಹಗ್ಗೋಯಿಮ್ ಎಂಬ ಪಟ್ಟಣದಲ್ಲಿ ವಾಸವಾಗಿದ್ದನು. 3 ಸೀಸೆರನ ಹತ್ತಿರ ಒಂಭೈನೂರು ಕಬ್ಬಿಣದ ರಥಗಳಿದ್ದವು. ಅವನು ಇಪ್ಪತ್ತು ವರ್ಷಗಳ ಕಾಲ ಇಸ್ರೇಲರನ್ನು ತುಂಬ ಬಾಧಿಸಿದನು. ಆದ್ದರಿಂದ ಇಸ್ರೇಲರು ಸಹಾಯಕ್ಕಾಗಿ ಯೆಹೋವನಲ್ಲಿ ಮೊರೆಯಿಟ್ಟರು.
4 ಆಗ ದೆಬೋರಳೆಂಬ ಒಬ್ಬ ಪ್ರವಾದಿನಿ ಇದ್ದಳು. ಅವಳು ಲಪ್ಪೀದೋತ್ ಎಂಬವನ ಪತ್ನಿಯಾಗಿದ್ದಳು. ಅವಳು ಆಗ ಇಸ್ರೇಲಿನ ನ್ಯಾಯಾಧೀಶೆಯಾಗಿದ್ದಳು. 5 ಒಂದು ದಿನ, ಆಕೆ ದೆಬೋರಳ ಖರ್ಜೂರದ ಮರವೆಂದು ಪ್ರಸಿದ್ಧವಾದ ಮರದ ಕೆಳಗೆ ಕುಳಿತಿದ್ದಳು. ಆಗ ಇಸ್ರೇಲಿನ ಜನರು ಆಕೆಯ ಹತ್ತಿರ ಬಂದು, “ಸೀಸೆರನ ಬಗ್ಗೆ ಏನು ಮಾಡಬೇಕು?” ಎಂದು ಕೇಳಿದರು. ದೆಬೋರಳ ಖರ್ಜೂರಮರವು ಎಫ್ರಾಯೀಮ್ ಬೆಟ್ಟಪ್ರದೇಶದ ರಾಮಕ್ಕೂ ಬೇತೇಲಿಗೂ ಮಧ್ಯದಲ್ಲಿ ಇದೆ. 6 ದೆಬೋರಳು ತನ್ನನ್ನು ಬಂದು ಕಾಣಬೇಕೆಂದು ಬಾರಾಕನೆಂಬ ವ್ಯಕ್ತಿಗೆ ಹೇಳಿ ಕಳುಹಿಸಿದಳು. ಬಾರಾಕನು ಅಬೀನೋವಮನ ಮಗ. ಬಾರಾಕನು ನಫ್ತಾಲಿ ಪ್ರದೇಶದ ಕೆದೆಷ್ ಎಂಬ ಊರಲ್ಲಿ ವಾಸಮಾಡುತ್ತಿದ್ದನು. ದೆಬೋರಳು ಬಾರಾಕನಿಗೆ, “ಇಸ್ರೇಲಿನ ದೇವರಾದ ಯೆಹೋವನು, ‘ನೀನು ಹೋಗಿ ನಫ್ತಾಲಿ ಮತ್ತು ಜೆಬುಲೂನ್ ಕುಲಗಳವರ ಹತ್ತು ಸಾವಿರ ಜನರನ್ನು ಸೇರಿಸಿ ಅವರನ್ನು ತಾಬೋರ್ ಬೆಟ್ಟಕ್ಕೆ ಕರೆದುಕೊಂಡು ಹೋಗು. 7 ನಾನು ಯಾಬೀನನ ಸೇನಾಧಿಪತಿಯಾದ ಸೀಸೆರನನ್ನೂ ಅವನ ರಥಗಳನ್ನೂ ಅವನ ಸೈನ್ಯವನ್ನೂ ಕೀಷೋನ್ ನದಿಗೆ ಬರುವಂತೆ ಮಾಡುತ್ತೇನೆ. ಅಲ್ಲಿ ನೀನು ಸೀಸೆರನನ್ನು ಸೋಲಿಸುವಂತೆ ಮಾಡುತ್ತೇನೆ’ ಎಂದು ಹೇಳಿದ್ದಾನೆ” ಎಂದಳು.
8 ಆಗ ಬಾರಾಕನು ದೆಬೋರಳಿಗೆ, “ನೀನು ನನ್ನೊಂದಿಗೆ ಬಂದರೆ ನಾನು ಹೋಗುವೆನು; ನೀನು ನನ್ನೊಂದಿಗೆ ಬರದಿದ್ದರೆ ನಾನು ಹೋಗುವುದಿಲ್ಲ” ಎಂದನು.
9 ಅದಕ್ಕೆ ದೆಬೋರಳು, “ನಿಸ್ಸಂದೇಹವಾಗಿ ನಾನು ನಿನ್ನೊಂದಿಗೆ ಬರುತ್ತೇನೆ. ಆದರೆ ನಿನ್ನ ಈ ಮನೋಭಾವದಿಂದಾಗಿ ಸೀಸೆರನನ್ನು ಸೋಲಿಸಿದ ಗೌರವ ನಿನಗೆ ಸಲ್ಲುವುದಿಲ್ಲ. ಒಬ್ಬ ಹೆಂಗಸು ಸೀಸೆರನನ್ನು ಸೋಲಿಸುವಂತೆ ಯೆಹೋವನು ಮಾಡುತ್ತಾನೆ” ಎಂದು ಉತ್ತರಿಸಿದಳು.
ದೆಬೋರಳು ಬಾರಾಕನ ಸಂಗಡ ಕೆದೆಷ್ ನಗರಕ್ಕೆ ಹೋದಳು. 10 ಕೆದೆಷ್ ನಗರದಲ್ಲಿ ಬಾರಾಕನು ಜೆಬುಲೂನ್ ಮತ್ತು ನಫ್ತಾಲಿ ಕುಲದವರನ್ನು ಒಟ್ಟಿಗೆ ಸೇರಿಸಿ ಆ ಕುಲಗಳಿಂದ ಹತ್ತು ಸಾವಿರ ಜನರನ್ನು ತನ್ನೊಂದಿಗೆ ಬರುವಂತೆ ಮಾಡಿದನು. ದೆಬೋರಳು ಸಹ ಬಾರಾಕನ ಸಂಗಡ ಹೋದಳು.
11 ಹೆಬೆರನೆಂಬ ಒಬ್ಬ ಮನುಷ್ಯನಿದ್ದನು. ಅವನು ಕೇನ್ಯರ ಕುಲದವನಾಗಿದ್ದನು. ಅವನು ಉಳಿದ ಕೇನ್ಯರನ್ನು ಬಿಟ್ಟು ಚಾನನ್ನೀಮ್ ಎಂಬ ಊರಲ್ಲಿ ಓಕ್ ವೃಕ್ಷದ ಬಳಿ ಮನೆ ಮಾಡಿಕೊಂಡಿದ್ದನು. (ಕೇನ್ಯರು ಹೋಬಾಬನ ಸಂತತಿಯವರಾಗಿದ್ದರು. ಹೋಬಾಬನು ಮೋಶೆಯ ಮಾವನಾಗಿದ್ದನು.) ಚಾನನ್ನೀಮ್ ಕೆದೆಷ್ ನಗರದ ಸಮೀಪದಲ್ಲಿತ್ತು.
12 ಅಬೀನೋವಮನ ಮಗನಾದ ಬಾರಾಕನು ತಾಬೋರ್ ಬೆಟ್ಟಕ್ಕೆ ಬಂದಿದ್ದಾನೆಂಬ ಸಮಾಚಾರ ಸೀಸೆರನಿಗೆ ತಿಳಿಯಿತು. 13 ಸೀಸೆರನು ತನ್ನ ಒಂಭೈನೂರು ಕಬ್ಬಿಣದ ರಥಗಳನ್ನು ಒಟ್ಟುಗೂಡಿಸಿದನು. ಸೀಸೆರನು ತನ್ನ ಎಲ್ಲಾ ಜನರನ್ನು ತನ್ನ ಜೊತೆ ಸೇರಿಸಿಕೊಂಡನು. ಅವರು ಹರೋಷೆತ್ ಹೆಗ್ಗೋಯಿಮ್‌ನಿಂದ ಕೀಷೋನ್ ನದಿಗೆ ನಡೆದರು.
14 ಆಗ ದೆಬೋರಳು ಬಾರಾಕನಿಗೆ, “ಈ ದಿನ ಯೆಹೋವನು ಸೀಸೆರನನ್ನು ಸೋಲಿಸಲು ನಿನಗೆ ಸಹಾಯ ಮಾಡುತ್ತಾನೆ. ಯೆಹೋವನು ನಿನಗಾಗಿ ದಾರಿಯನ್ನು ಸುಗಮಗೊಳಿಸಿದ್ದಾನೆಂಬುದು ನಿನಗೆ ಖಚಿತವಾಗಿ ಗೊತ್ತಿದೆ” ಎಂದು ಹೇಳಿದಳು. ಆದ್ದರಿಂದ ಬಾರಾಕನು ಹತ್ತು ಸಾವಿರ ಜನರೊಂದಿಗೆ ತಾಬೋರ್ ಬೆಟ್ಟದಿಂದ ಇಳಿದನು. 15 ಬಾರಾಕ ಮತ್ತು ಅವನ ಜನರು ಸೀಸೆರನ ಮೇಲೆ ಧಾಳಿ ಮಾಡಿದರು. ಯೆಹೋವನು ಸೀಸೆರನಲ್ಲಿ ಮತ್ತು ಅವನ ಸೈನ್ಯದಲ್ಲಿ ಮತ್ತು ಅವನ ರಥಗಳಲ್ಲಿ ಗಲಿಬಿಲಿ ಉಂಟುಮಾಡಿದನು. ಏನು ಮಾಡಬೇಕೆಂದು ಅವರಿಗೆ ತಿಳಿಯಲಿಲ್ಲ. ಬಾರಾಕ ಮತ್ತು ಅವನ ಸೈನಿಕರು ಸೀಸೆರನ ಸೈನ್ಯವನ್ನು ಸೋಲಿಸಿದರು. ಆದರೆ ಸೀಸೆರನು ತನ್ನ ರಥವನ್ನು ಬಿಟ್ಟು ಓಡಿಹೋದನು. 16 ಬಾರಾಕ ಮತ್ತು ಅವನ ಜನರು ಸೀಸೆರನ ಸೈನ್ಯವನ್ನು ಮತ್ತು ರಥಗಳನ್ನು ಹರೋಷೆತ್ ಹಗ್ಗೋಯಿಮ್‌ನವರೆಗೆ ಬೆನ್ನಟ್ಟಿದರು. ಬಾರಾಕ ಮತ್ತು ಅವನ ಜನರು ಖಡ್ಗದಿಂದ ಸೀಸೆರನ ಜನರನ್ನು ಕೊಂದುಹಾಕಿದರು. ಸೀಸೆರನ ಜನರಲ್ಲಿ ಒಬ್ಬನನ್ನೂ ಜೀವಂತವಾಗಿ ಬಿಡಲಿಲ್ಲ.
ದೇವರ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ
10 ಕಡೇ ಮಾತೇನೆಂದರೆ, ಪ್ರಭುವಿನಲ್ಲಿಯೂ ಆತನ ಮಹಾಶಕ್ತಿಯಲ್ಲಿಯೂ ಬಲವಾಗಿರಿ. 11 ದೇವರ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ. ಆಗ ಸೈತಾನನ ಕುತಂತ್ರಗಳಿಗೆ ವಿರುದ್ಧವಾಗಿ ಹೋರಾಡಲು ನಿಮಗೆ ಸಾಧ್ಯವಾಗುವುದು. 12 ನಮ್ಮ ಹೋರಾಟವು ಜನರ ವಿರುದ್ಧವಲ್ಲ. ನಾವು ಅಂಧಕಾರದ ಅಧಿಪತಿಗಳಿಗೂ ಅಧಿಕಾರಿಗಳಿಗೂ ಮತ್ತು ಈ ಲೋಕದ ಕತ್ತಲೆಯ ಶಕ್ತಿಗಳಿಗೂ ಆಕಾಶಮಂಡಲದ ದುಷ್ಟಶಕ್ತಿಗಳಿಗೂ ವಿರುದ್ಧವಾಗಿ ಹೋರಾಡುತ್ತಿದ್ದೇವೆ. 13 ಆದಕಾರಣವೇ ನೀವು ದೇವರ ಸರ್ವಾಯುಧಗಳನ್ನು ಧರಿಸಿಕೊಳ್ಳಬೇಕು. ಆಗ ಯುದ್ಧದ ದಿನದಲ್ಲಿಯೂ ಹೋರಾಟವು ಸಂಪೂರ್ಣವಾಗಿ ಮುಗಿದಾದ ಮೇಲೆಯೂ ದೃಢವಾಗಿನಿಂತುಕೊಳ್ಳಲು ನಿಮಗೆ ಸಾಧ್ಯವಾಗುವುದು.
14 ಆದ್ದರಿಂದ ಸತ್ಯವೆಂಬ ನಡುಕಟ್ಟನ್ನು ಕಟ್ಟಿಕೊಂಡು ನೀತಿಯೆಂಬ ವಜ್ರಕವಚವನ್ನು ಎದೆಗೆ ಬಿಗಿದುಕೊಂಡು 15 ಸಮಾಧಾನದ ಸುವಾರ್ತೆಯೆಂಬ ಪಾದರಕ್ಷೆಯನ್ನು ಹಾಕಿಕೊಂಡು ದೃಢವಾಗಿ ನಿಂತುಕೊಳ್ಳಿರಿ. 16 ಅಲ್ಲದೆ ನಂಬಿಕೆಯೆಂಬ ಗುರಾಣಿಯನ್ನೂ ಹಿಡಿದುಕೊಳ್ಳಿರಿ. ಕೆಡುಕನ ಅಗ್ನಿಬಾಣಗಳನ್ನೆಲ್ಲಾ ತಡೆಯಲು ನಿಮಗೆ ಇದರಿಂದ ಸಾಧ್ಯವಾಗುವುದು. 17 ದೇವರ ರಕ್ಷಣೆಯನ್ನು ಶಿರಸ್ತ್ರಾಣವನ್ನಾಗಿ ಧರಿಸಿಕೊಳ್ಳಿರಿ. ಪವಿತ್ರಾತ್ಮನ ಖಡ್ಗವನ್ನು ಅಂದರೆ ದೇವರ ವಾಕ್ಯವನ್ನು ತೆಗೆದುಕೊಳ್ಳಿರಿ.
Kannada Holy Bible: Easy-to-Read Version. All rights reserved. © 1997 Bible League International