Revised Common Lectionary (Semicontinuous)
ರಚನೆಗಾರ: ದಾವೀದ.
29 ದೇವಪುತ್ರರೇ,[a] ಯೆಹೋವನನ್ನು ಸ್ತುತಿಸಿರಿ!
ಆತನ ಮಹಿಮೆಯನ್ನೂ ಶಕ್ತಿಯನ್ನೂ ಸ್ತುತಿಸಿರಿ.
2 ಯೆಹೋವನನ್ನು ಸ್ತುತಿಸುತ್ತಾ ಆತನ ಹೆಸರನ್ನು ಘನಪಡಿಸಿರಿ.
ಪರಿಶುದ್ಧ ವಸ್ತ್ರಗಳನ್ನು ಧರಿಸಿಕೊಂಡು ಆತನನ್ನು ಆರಾಧಿಸಿರಿ.[b]
3 ಯೆಹೋವನ ಸ್ವರವು ಸಮುದ್ರದ ಮೇಲೆ ಕೇಳಿ ಬರುವುದು.
ಮಹಾಸಾಗರದ ಮೇಲಿನ ಗುಡುಗಿನಂತೆ ಮಹಿಮಾಸ್ವರೂಪನಾದ ದೇವರ ಸ್ವರವು ಕೇಳಿಬರುವುದು.
4 ಯೆಹೋವನ ಸ್ವರವು
ಆತನ ಶಕ್ತಿಯನ್ನೂ ಮಹಿಮೆಯನ್ನೂ ತೋರ್ಪಡಿಸುವುದು.
5 ಯೆಹೋವನ ಸ್ವರವು ದೇವದಾರು ವೃಕ್ಷಗಳನ್ನು ತುಂಡುತುಂಡು ಮಾಡುತ್ತದೆ.
ಯೆಹೋವನು ಲೆಬನೋನಿನ ದೇವದಾರು ವೃಕ್ಷಗಳನ್ನೂ ಮುರಿದುಹಾಕುವನು.
6 ಯೆಹೋವನು ಲೆಬನೋನನ್ನು ನಡುಗಿಸಲು ಅದು ನರ್ತಿಸುತ್ತಿರುವ ಎಳೆಕರುವಿನಂತೆ ಕಾಣುತ್ತದೆ;
ಸಿರ್ಯೋನ್ ಪರ್ವತವು ಕಂಪಿಸುವಾಗ ಕುಣಿದಾಡುವ ಎಳೆ ಹೋರಿಯಂತೆ ಕಾಣುತ್ತದೆ.
7 ಯೆಹೋವನ ಗರ್ಜನಕ್ಕೆ ಮಿಂಚುಗಳು ಥಳಥಳನೆ ಹೊಳೆಯುತ್ತವೆ.
8 ಯೆಹೋವನ ಗರ್ಜನದಿಂದ ಅರಣ್ಯವು ಕಂಪಿಸುವುದು.
ಆತನ ಗರ್ಜನಕ್ಕೆ ಕಾದೇಶ್ ಅರಣ್ಯವು ನಡುಗುವುದು.
9 ಯೆಹೋವನ ಗರ್ಜನಕ್ಕೆ ಜಿಂಕೆಗಳು ಹೆದರಿಕೊಳ್ಳುತ್ತವೆ;
ಕಾಡಿನ ಮರಗಳು ಬರಿದಾಗುತ್ತವೆ;
ಆದರೆ ಆತನ ಆಲಯದಲ್ಲಿ ಜನರು ಆತನ ಮಹಿಮೆಯನ್ನು ಹಾಡಿಕೊಂಡಾಡುವರು.
10 ಜಲಪ್ರಳಯದ ಕಾಲದಲ್ಲೂ ಯೆಹೋವನು ರಾಜನಾಗಿದ್ದನು.
ಯೆಹೋವನು ಸದಾಕಾಲ ರಾಜನಾಗಿರುವನು.
11 ಯೆಹೋವನು ತನ್ನ ಜನರಿಗೆ ಬಲವನ್ನು ದಯಪಾಲಿಸಲಿ.
ಆತನು ತನ್ನ ಜನರಿಗೆ ಶಾಂತಿಯನ್ನು ಸ್ಥಾಪಿಸಲಿ.
ಪ್ರತಿಯೊಂದಕ್ಕೂ ಸೂಕ್ತ ಸಮಯವಿದೆ
3 ಪ್ರತಿಯೊಂದಕ್ಕೂ ಸೂಕ್ತವಾದ ಸಮಯವಿದೆ. ಭೂಮಿಯ ಮೇಲೆ ನಡೆಯುವ ಪ್ರತಿಯೊಂದು ಕಾರ್ಯಕ್ಕೂ ಸೂಕ್ತ ಸಮಯವಿದೆ.
2 ಹುಟ್ಟುವ ಸಮಯ,
ಸಾಯುವ ಸಮಯ.
ನೆಡುವ ಸಮಯ,
ಸಸಿಗಳನ್ನು ಕೀಳುವ ಸಮಯ.
3 ಕೊಲ್ಲುವ ಸಮಯ,
ವಾಸಿಮಾಡುವ ಸಮಯ.
ನಾಶಮಾಡುವ ಸಮಯ,
ಕಟ್ಟುವ ಸಮಯ.
4 ಅಳುವ ಸಮಯ,
ನಗುವ ಸಮಯ.
ಗೋಳಾಡುವ ಸಮಯ,
ಕುಣಿದಾಡುವ ಸಮಯ.
5 ಆಯುಧಗಳನ್ನು ಬಿಸಾಡುವ ಸಮಯ,
ಆಯುಧಗಳನ್ನು ಎತ್ತಿಕೊಳ್ಳುವ ಸಮಯ.
ಅಪ್ಪಿಕೊಳ್ಳುವ ಸಮಯ,
ಅಪ್ಪಿಕೊಳ್ಳದಿರುವ ಸಮಯ.
6 ಹುಡುಕುವ ಸಮಯ,
ಹುಡುಕದಿರುವ ಸಮಯ.
ವಸ್ತುಗಳನ್ನು ಇಟ್ಟುಕೊಳ್ಳುವ ಸಮಯ,
ವಸ್ತುಗಳನ್ನು ಬಿಸಾಡುವ ಸಮಯ.
7 ಬಟ್ಟೆಯನ್ನು ಹರಿಯುವ ಸಮಯ,
ಬಟ್ಟೆಯನ್ನು ಹೊಲಿಯುವ ಸಮಯ.
ಮೌನವಾಗಿರುವ ಸಮಯ,
ಮಾತಾಡುವ ಸಮಯ.
8 ಪ್ರೀತಿ ಮಾಡುವ ಸಮಯ,
ದ್ವೇಷಿಸುವ ಸಮಯ.
ಯುದ್ಧಮಾಡುವ ಸಮಯ,
ಶಾಂತಿಯಿಂದಿರುವ ಸಮಯ.
ಲೋಕವು ದೇವರ ಹತೋಟಿಯಲ್ಲಿದೆ
9 ದುಡಿಯುವವನಿಗೆ ಅವನ ಪ್ರಯಾಸದಿಂದ ಲಾಭವೇನು? 10 ದೇವರು ಮನುಷ್ಯರಿಗೆ ಕೊಟ್ಟಿರುವ ಪ್ರಯಾಸದ ಕೆಲಸವನ್ನೆಲ್ಲಾ ನೋಡಿದ್ದೇನೆ. 11 ಈ ಲೋಕವನ್ನು ಕುರಿತು ಆಲೋಚಿಸುವುದಕ್ಕೆ ದೇವರು ನನಗೆ ಜ್ಞಾನವನ್ನು ಕೊಟ್ಟಿದ್ದರೂ ದೇವರ ಕಾರ್ಯವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನಮಗೆ ಸಾಧ್ಯವೇ ಇಲ್ಲ. ದೇವರು ಪ್ರತಿಯೊಂದನ್ನೂ ತಕ್ಕ ಸಮಯದಲ್ಲಿ ಮಾಡುವನು.
12 ಬದುಕಿರುವಷ್ಟು ಕಾಲ ಸಂತೋಷವಾಗಿದ್ದು ಸುಖಪಡುವುದಕ್ಕಿಂತ ಬೇರೆ ಯಾವ ಮೇಲೂ ಮನುಷ್ಯರಿಗೆ ಇಲ್ಲವೆಂದು ಕಲಿತುಕೊಂಡೆನು. 13 ಪ್ರತಿಯೊಬ್ಬನು ಅನ್ನಪಾನಗಳನ್ನು ತೆಗೆದುಕೊಂಡು ತನ್ನ ಕೆಲಸವನ್ನು ಸಂತೋಷದಿಂದ ಮಾಡುವುದು ದೇವರಿಗೆ ಇಷ್ಟವಾಗಿದೆ. ಅವು ದೇವರ ವರವಾಗಿವೆ.
14 ದೇವರ ಕಾರ್ಯಗಳೆಲ್ಲಾ ಶಾಶ್ವತವಾದದ್ದು. ಆತನ ಕಾರ್ಯಗಳಿಗೆ ಮನುಷ್ಯರು ಏನನ್ನೂ ಸೇರಿಸಲಾರರು; ಅವುಗಳಿಂದ ಏನನ್ನೂ ತೆಗೆಯಲಾರರು. ಮನುಷ್ಯರು ದೇವರಲ್ಲಿ ಭಯಭಕ್ತಿಯುಳ್ಳವರಾಗಿರಬೇಕೆಂಬುದೇ ಇದಕ್ಕೆ ಕಾರಣ. 15 ಈಗ ಸಂಭವಿಸುವಂಥವುಗಳೂ ಮುಂದೆ ಸಂಭವಿಸುವಂಥವುಗಳೂ ಹಿಂದಿನ ಕಾಲದಲ್ಲಿ ಸಂಭವಿಸಲ್ಪಟ್ಟಿವೆ. ದೇವರು ಅದೇ ಕಾರ್ಯಗಳನ್ನು ಮತ್ತೆಮತ್ತೆ ಬರಮಾಡುವನು.
11 ಇದು ಹೇಗೆಂದರೆ: ಒಬ್ಬನ ಆಲೋಚನೆಗಳು ಅವನ ಆಂತರ್ಯದಲ್ಲಿರುವ ಜೀವಾತ್ಮವೊಂದಕ್ಕೆ ಹೊರತು ಬೇರೆ ಯಾರಿಗೂ ತಿಳಿದಿರುವುದಿಲ್ಲ. ಅಂತೆಯೇ, ದೇವರ ಆಲೋಚನೆಗಳು ದೇವರಾತ್ಮನ ಹೊರತು ಬೇರೆ ಯಾರಿಗೂ ತಿಳಿದಿರುವುದಿಲ್ಲ. 12 ನಾವು ಹೊಂದಿಕೊಂಡದ್ದು ದೇವರಿಂದ ಬಂದ ಪವಿತ್ರಾತ್ಮನನ್ನೇ ಹೊರತು ಪ್ರಾಪಂಚಿಕವಾದ ಆತ್ಮವನ್ನಲ್ಲ. ದೇವರು ನಮಗೆ ಉಚಿತವಾಗಿ ಕೊಟ್ಟಿರುವಂಥವುಗಳನ್ನು ತಿಳಿದುಕೊಳ್ಳುವುದಕ್ಕಾಗಿ ನಾವು ಆತನನ್ನು ಹೊಂದಿಕೊಂಡೆವು.
13 ನಾವು ಈಸಂಗತಿಗಳನ್ನು ಹೇಳುವಾಗ ಮನುಷ್ಯರ ಜ್ಞಾನದಿಂದ ಕಲಿತುಕೊಂಡಿರುವ ವಾಕ್ಯಗಳನ್ನು ಉಪಯೋಗಿಸದೆ ಆತ್ಮನಿಂದ ಕಲಿತುಕೊಂಡ ವಾಕ್ಯಗಳನ್ನೇ ಉಪಯೋಗಿಸುತ್ತೇವೆ. ಆತ್ಮಿಕ ಸಂಗತಿಗಳನ್ನು ವಿವರಿಸಲು ಆತ್ಮಿಕ ಪದಗಳನ್ನೇ ಬಳಸುತ್ತೇವೆ. 14 ಆತ್ಮಿಕನಲ್ಲದ ವ್ಯಕ್ತಿಯು ದೇವಾರಾತ್ಮನ ವಿಷಯಗಳನ್ನು ಸ್ವೀಕರಿಸಿಕೊಳ್ಳವುದಿಲ್ಲ. ಅವನು ಆ ವಿಷಯಗಳನ್ನು ಮೂರ್ಖತನವೆಂದು ಯೋಚಿಸುತ್ತಾನೆ. ಅವನು ಪವಿತ್ರಾತ್ಮನ ವಿಷಯಗಳನ್ನು ಅರ್ಥಮಾಡಿಕೊಳ್ಳಲಾರನು; ಏಕೆಂದರೆ ಆ ವಿಷಯಗಳನ್ನು ಆತ್ಮಿಕವಾಗಿ ವಿಚಾರಣೆ ಮಾಡಲು ಮಾತ್ರ ಸಾಧ್ಯ. 15 ಆದರೆ ಆತ್ಮಿಕ ಮನುಷ್ಯನು ಎಲ್ಲಾ ವಿಷಯಗಳ ಬಗ್ಗೆ ತೀರ್ಪು ಮಾಡಬಲ್ಲನು. ಅವನಿಗೆ ಬೇರೆ ಯಾರೂ ತೀರ್ಪು ನೀಡಲಾಗುವುದಿಲ್ಲ. 16 ಪವಿತ್ರ ಗ್ರಂಥವು ಹೇಳುವಂತೆ:
“ಪ್ರಭುವಿನ ಮನಸ್ಸನ್ನು ಯಾರು ಬಲ್ಲರು?
ಪ್ರಭುವಿಗೆ ಯಾರು ಉಪದೇಶ ಮಾಡಬಲ್ಲರು?”(A)
ನಾವಾದರೋ ಕ್ರಿಸ್ತನ ಮನಸ್ಸನ್ನು ಹೊಂದಿದವರಾಗಿದ್ದೇವೆ.
Kannada Holy Bible: Easy-to-Read Version. All rights reserved. © 1997 Bible League International