Revised Common Lectionary (Semicontinuous)
ರಚನೆಗಾರ: ದಾವೀದ.
29 ದೇವಪುತ್ರರೇ,[a] ಯೆಹೋವನನ್ನು ಸ್ತುತಿಸಿರಿ!
ಆತನ ಮಹಿಮೆಯನ್ನೂ ಶಕ್ತಿಯನ್ನೂ ಸ್ತುತಿಸಿರಿ.
2 ಯೆಹೋವನನ್ನು ಸ್ತುತಿಸುತ್ತಾ ಆತನ ಹೆಸರನ್ನು ಘನಪಡಿಸಿರಿ.
ಪರಿಶುದ್ಧ ವಸ್ತ್ರಗಳನ್ನು ಧರಿಸಿಕೊಂಡು ಆತನನ್ನು ಆರಾಧಿಸಿರಿ.[b]
3 ಯೆಹೋವನ ಸ್ವರವು ಸಮುದ್ರದ ಮೇಲೆ ಕೇಳಿ ಬರುವುದು.
ಮಹಾಸಾಗರದ ಮೇಲಿನ ಗುಡುಗಿನಂತೆ ಮಹಿಮಾಸ್ವರೂಪನಾದ ದೇವರ ಸ್ವರವು ಕೇಳಿಬರುವುದು.
4 ಯೆಹೋವನ ಸ್ವರವು
ಆತನ ಶಕ್ತಿಯನ್ನೂ ಮಹಿಮೆಯನ್ನೂ ತೋರ್ಪಡಿಸುವುದು.
5 ಯೆಹೋವನ ಸ್ವರವು ದೇವದಾರು ವೃಕ್ಷಗಳನ್ನು ತುಂಡುತುಂಡು ಮಾಡುತ್ತದೆ.
ಯೆಹೋವನು ಲೆಬನೋನಿನ ದೇವದಾರು ವೃಕ್ಷಗಳನ್ನೂ ಮುರಿದುಹಾಕುವನು.
6 ಯೆಹೋವನು ಲೆಬನೋನನ್ನು ನಡುಗಿಸಲು ಅದು ನರ್ತಿಸುತ್ತಿರುವ ಎಳೆಕರುವಿನಂತೆ ಕಾಣುತ್ತದೆ;
ಸಿರ್ಯೋನ್ ಪರ್ವತವು ಕಂಪಿಸುವಾಗ ಕುಣಿದಾಡುವ ಎಳೆ ಹೋರಿಯಂತೆ ಕಾಣುತ್ತದೆ.
7 ಯೆಹೋವನ ಗರ್ಜನಕ್ಕೆ ಮಿಂಚುಗಳು ಥಳಥಳನೆ ಹೊಳೆಯುತ್ತವೆ.
8 ಯೆಹೋವನ ಗರ್ಜನದಿಂದ ಅರಣ್ಯವು ಕಂಪಿಸುವುದು.
ಆತನ ಗರ್ಜನಕ್ಕೆ ಕಾದೇಶ್ ಅರಣ್ಯವು ನಡುಗುವುದು.
9 ಯೆಹೋವನ ಗರ್ಜನಕ್ಕೆ ಜಿಂಕೆಗಳು ಹೆದರಿಕೊಳ್ಳುತ್ತವೆ;
ಕಾಡಿನ ಮರಗಳು ಬರಿದಾಗುತ್ತವೆ;
ಆದರೆ ಆತನ ಆಲಯದಲ್ಲಿ ಜನರು ಆತನ ಮಹಿಮೆಯನ್ನು ಹಾಡಿಕೊಂಡಾಡುವರು.
10 ಜಲಪ್ರಳಯದ ಕಾಲದಲ್ಲೂ ಯೆಹೋವನು ರಾಜನಾಗಿದ್ದನು.
ಯೆಹೋವನು ಸದಾಕಾಲ ರಾಜನಾಗಿರುವನು.
11 ಯೆಹೋವನು ತನ್ನ ಜನರಿಗೆ ಬಲವನ್ನು ದಯಪಾಲಿಸಲಿ.
ಆತನು ತನ್ನ ಜನರಿಗೆ ಶಾಂತಿಯನ್ನು ಸ್ಥಾಪಿಸಲಿ.
“ಸುಖವು” ನೀತಿಮಾರ್ಗಕ್ಕೆ ನಡೆಸುವುದೇ?
2 ನಾನು ನನ್ನ ಹೃದಯದಲ್ಲಿ, “ಬಾ, ನಿನ್ನನ್ನು ಸುಖದ ಮೂಲಕ ಪರೀಕ್ಷಿಸುವೆನು; ಆಗ ನೀನು ನೀತಿಮಾರ್ಗವನ್ನು ಕಲಿತುಕೊಳ್ಳುವೆ” ಎಂದುಕೊಂಡೆನು. ಆದರೆ ಇದು ಸಹ ವ್ಯರ್ಥವೆಂದು ಕಂಡುಕೊಂಡೆನು. 2 ನಗೆಯು ಹುಚ್ಚುತನ. ಸುಖದಿಂದ ಪ್ರಯೋಜನವೇನು? ಅಂದುಕೊಂಡೆನು.
3 ಮನುಷ್ಯರು ತಮ್ಮ ಕ್ಷಣಿಕ ಜೀವಮಾನದಲ್ಲಿ ಮಾಡತಕ್ಕ ಒಳ್ಳೆಯದನ್ನು ತಿಳಿದುಕೊಳ್ಳಬೇಕೆಂದು ನನ್ನ ಮನಸ್ಸನ್ನು ಜ್ಞಾನದಿಂದ ತುಂಬಿಸಿದೆ; ದೇಹವನ್ನು ದ್ರಾಕ್ಷಾರಸದಿಂದ ತುಂಬಿಸಿದೆ; ಮೂಢತನವನ್ನು ಅವಲಂಭಿಸಿಕೊಂಡೆ.
ದುಡಿಮೆಯಿಂದ ಸಂತೋಷವಾಗುವುದೇ?
4 ದೊಡ್ಡಕಾರ್ಯಗಳನ್ನು ಮಾಡಲಾರಂಭಿಸಿದೆ; ನನಗೋಸ್ಕರ ಮನೆಗಳನ್ನು ಕಟ್ಟಿಸಿದೆ; ದ್ರಾಕ್ಷಿತೋಟಗಳನ್ನು ಮಾಡಿಸಿದೆ; 5 ತೋಟಗಳನ್ನೂ ಉದ್ಯಾನವನಗಳನ್ನೂ ಮಾಡಿಸಿದೆ; ಎಲ್ಲಾ ಬಗೆಯ ಹಣ್ಣಿನ ಮರಗಳನ್ನು ನೆಡಿಸಿದೆ. 6 ನೀರಿನ ಕೊಳಗಳನ್ನು ಮಾಡಿಸಿ ಮರಗಳಿಗೆ ನೀರನ್ನು ಹಾಯಿಸಿದೆ. 7 ಪುರುಷರನ್ನೂ ಸ್ತ್ರೀಯರನ್ನೂ ಗುಲಾಮರನ್ನಾಗಿ ಕೊಂಡುಕೊಂಡೆ. ನನ್ನ ಮನೆಯಲ್ಲೇ ಹುಟ್ಟಿದ ಗುಲಾಮರೂ ನನಗಿದ್ದರು. ನನಗೆ ದನದ ಹಿಂಡುಗಳೂ ಕುರಿಮಂದೆಗಳೂ ಇದ್ದವು. ಜೆರುಸಲೇಮಿನಲ್ಲಿ ಇದ್ದವರೆಲ್ಲರಿಗಿಂತಲೂ ಹೆಚ್ಚು ವಸ್ತುಗಳನ್ನು ನಾನು ಪಡೆದಿದ್ದೆ.
8 ಇದಲ್ಲದೆ ಬೆಳ್ಳಿಬಂಗಾರಗಳನ್ನು ನನಗೋಸ್ಕರ ಸಂಗ್ರಹಿಸಿದೆ; ರಾಜರುಗಳಿಂದಲೂ ಅವರ ದೇಶಗಳಿಂದಲೂ ಭಂಡಾರಗಳನ್ನು ತೆಗೆದುಕೊಂಡೆ. ನನಗೋಸ್ಕರ ಹಾಡಲು ಗಾಯಕಗಾಯಕಿಯರಿದ್ದರು. ನನ್ನನ್ನು ಸಂತೋಷಪಡಿಸಲು ಅನೇಕ ಉಪಪತ್ನಿಯರಿದ್ದರು. ಮನುಷ್ಯನು ಬಯಸಬಹುದಾದ ಪ್ರತಿಯೊಂದನ್ನೂ ನಾನು ಪಡೆದಿದ್ದೆ.
9 ನಾನು ಬಹು ಐಶ್ವರ್ಯವಂತನಾದೆ; ಪ್ರಸಿದ್ಧನಾದೆ. ನನಗಿಂತ ಮೊದಲು ಜೆರುಸಲೇಮಿನಲ್ಲಿದ್ದ ಎಲ್ಲರಿಗಿಂತಲೂ ನಾನು ದೊಡ್ಡವನಾದೆ. ನನಗೆ ಸಹಾಯಕ್ಕಾಗಿ ಯಾವಾಗಲೂ ನನ್ನಲ್ಲಿ ಜ್ಞಾನವಿತ್ತು. 10 ನನ್ನ ಕಣ್ಣುಗಳು ಬಯಸಿದ್ದನ್ನೆಲ್ಲ ನನಗೋಸ್ಕರ ಪಡೆದುಕೊಂಡೆನು. ಯಾವುದೇ ಸುಖದಿಂದಾಗಲಿ ನನ್ನ ಹೃದಯವನ್ನು ನಾನು ತಡೆಹಿಡಿಯಲಿಲ್ಲ; ಯಾಕೆಂದರೆ ನನ್ನ ಕಾರ್ಯಗಳಲ್ಲಿ ನನ್ನ ಹೃದಯವು ಸಂತೋಷಗೊಂಡಿತ್ತು. ನನ್ನ ಪ್ರಯಾಸದ ಫಲವು ಅದೊಂದೇ.
11 ನನ್ನ ಕಾರ್ಯಗಳನ್ನೂ ನನ್ನ ಪ್ರಯಾಸವನ್ನೂ ಆಲೋಚಿಸಿದೆ. ಗಾಳಿಯನ್ನು ಹಿಂದಟ್ಟಿದ ಹಾಗೆ ಅದೆಲ್ಲಾ ವ್ಯರ್ಥವೆಂದು ಕಂಡುಕೊಂಡೆ. ನಮ್ಮ ಈ ಜೀವಮಾನದ ಯಾವ ಕೆಲಸಗಳಿಂದಲೂ ಲಾಭವಿಲ್ಲ.
ಶಿಲುಬೆಗೆರಿಸಲ್ಪಟ್ಟ ಕ್ರಿಸ್ತನ ಕುರಿತಾದ ಸಂದೇಶ
2 ಪ್ರಿಯ ಸಹೋದರ ಸಹೋದರಿಯರೇ, ನಾನು ನಿಮ್ಮ ಬಳಿಗೆ ಬಂದಿದ್ದಾಗ, ನಾನು ನಿಮಗೆ ದೇವರ ಸತ್ಯವನ್ನು ತಿಳಿಸಿದೆನು. ಆದರೆ ನಾನು ನಾಜೂಕಾದ ಪದಗಳನ್ನಾಗಲಿ ಮಹಾ ಜ್ಞಾನವನ್ನಾಗಲಿ ಉಪಯೋಗಿಸಲಿಲ್ಲ. 2 ನಾನು ನಿಮ್ಮೊಂದಿಗಿದ್ದಾಗ ಯೇಸು ಕ್ರಿಸ್ತನ ಮತ್ತು ಆತನ ಶಿಲುಬೆಯ ಮೇಲಿನ ಮರಣವನ್ನೇ ಹೊರತು ಬೇರೆಲ್ಲಾ ವಿಷಯಗಳನ್ನು ಮರೆತುಬಿಡಲು ನಿರ್ಧರಿಸಿದೆನು. 3 ನಾನು ನಿಮ್ಮ ಬಳಿಗೆ ಬಂದಿದ್ದಾಗ ಬಲಹೀನನಾಗಿದ್ದೆನು; ಭಯದಿಂದ ನಡುಗುತ್ತಿದ್ದೆನು. 4 ನನ್ನ ಉಪದೇಶವಾಗಲಿ ಮಾತುಕತೆಯಾಗಲಿ ಜನರನ್ನು ಒತ್ತಾಯಿಸುವಂಥ ಜ್ಞಾನವಾಕ್ಯಗಳನ್ನು ಒಳಗೊಂಡಿರಲಿಲ್ಲ. ಆದರೆ ಪವಿತ್ರಾತ್ಮನು ಕೊಡುವ ಶಕ್ತಿಯೇ ನನ್ನ ಉಪದೇಶಕ್ಕೆ ಆಧಾರವಾಗಿತ್ತು. 5 ನಿಮ್ಮ ನಂಬಿಕೆಯು ಮನುಷ್ಯನ ಜ್ಞಾನದ ಮೇಲೆ ಆಧಾರಗೊಂಡಿರದೆ ದೇವರ ಶಕ್ತಿಯ ಮೇಲೆ ಆಧಾರಗೊಂಡಿರಬೇಕೆಂದು ನಾನು ಹೀಗೆ ಮಾಡಿದೆನು.
ದೇವರ ಜ್ಞಾನ
6 ಪರಿಣತರಾದ ಜನರಿಗೆ ನಾವು ಜ್ಞಾನವನ್ನೇ ಉಪದೇಶಿಸುತ್ತೇವೆ. ಇದು ಇಹಲೋಕದ ಜ್ಞಾನವೂ ಅಲ್ಲ. ಅಧಿಪತಿಗಳ ಜ್ಞಾನವೂ ಅಲ್ಲ. ಈ ಲೋಕದ ಅಧಿಪತಿಗಳು ತಮ್ಮ ಅಧಿಕಾರವನ್ನು ಕಳೆದುಕೊಳ್ಳುವವರಾಗಿದ್ದಾರೆ. 7 ನಾವಾದರೋ ದೇವರ ರಹಸ್ಯವಾದ ಜ್ಞಾನವನ್ನೇ ಹೇಳುತ್ತೇವೆ. ಈ ಜ್ಞಾನವನ್ನು ಜನರಿಗೆ ಮರೆಮಾಡಲಾಗಿದೆ. ದೇವರು ನಮ್ಮ ಮಹಿಮೆಗಾಗಿ ಈ ಜ್ಞಾನವನ್ನು ಲೋಕವು ಆರಂಭವಾಗುವುದಕ್ಕಿಂತ ಮೊದಲೇ ಯೋಜಿಸಿದ್ದನು. 8 ಈ ಲೋಕದ ಯಾವ ಅಧಿಪತಿಗಳೂ ಈ ಜ್ಞಾನವನ್ನು ಅರ್ಥಮಾಡಿಕೊಳ್ಳಲಿಲ್ಲ. ಅವರು ಅರ್ಥಮಾಡಿಕೊಂಡಿದ್ದರೆ, ಮಹಿಮೆಯುಳ್ಳ ಪ್ರಭುವನ್ನು ಶಿಲುಬೆಗೇರಿಸುತ್ತಿರಲಿಲ್ಲ. 9 ಪವಿತ್ರಗ್ರಂಥದಲ್ಲಿ ಬರೆದಿರುವಂತೆಯೇ ಇದಾಯಿತು:
“ದೇವರು ತನ್ನನ್ನು ಪ್ರೀತಿಸುವ ಜನರಿಗೆ ಸಿದ್ಧಪಡಿಸಿರುವುದನ್ನು
ಯಾವ ಕಣ್ಣೂ ಕಾಣಲಿಲ್ಲ.
ಯಾವ ಕಿವಿಯೂ ಕೇಳಲಿಲ್ಲ.
ಯಾವ ವ್ಯಕ್ತಿಯೂ ಊಹಿಸಿಕೊಳ್ಳಲಿಲ್ಲ.”(A)
10 ಆದರೆ ದೇವರು ತನ್ನ ಪವಿತ್ರಾತ್ಮನ ಮೂಲಕ ನಮಗೆ ಈ ಸಂಗತಿಗಳನ್ನು ಪ್ರಕಟಿಸಿದನು.
ಪವಿತ್ರಾತ್ಮನು ಸಕಲವನ್ನೂ ದೇವರ ಅಗಾಧವಾದ ರಹಸ್ಯಗಳನ್ನೂ ತಿಳಿದಿದ್ದಾನೆ.
Kannada Holy Bible: Easy-to-Read Version. All rights reserved. © 1997 Bible League International