Revised Common Lectionary (Semicontinuous)
ರಚನೆಗಾರ: ಸೊಲೊಮೋನ.
72 ದೇವರೇ, ನಿನ್ನಂತೆ ನ್ಯಾಯವಾಗಿ ತೀರ್ಪುನೀಡಲು ರಾಜನಿಗೆ ಕಲಿಸಿಕೊಡು.
ನಿನ್ನ ನೀತಿಯನ್ನು ಕಲಿತುಕೊಳ್ಳಲು ರಾಜಕುಮಾರನಿಗೆ ಸಹಾಯಮಾಡು.
2 ನಿನ್ನ ಜನರಿಗೆ ನೀತಿಯಿಂದಲೂ ನಿನ್ನ ಬಡಜನರಿಗೆ ನ್ಯಾಯವಾಗಿಯೂ
ತೀರ್ಪುಮಾಡಲು ಅವನಿಗೆ ಸಹಾಯಮಾಡು.
3 ಪ್ರಖ್ಯಾತವಾದ ಬೆಟ್ಟಗುಡ್ಡಗಳಲ್ಲೆಲ್ಲಾ,
ದೇಶದಲ್ಲೆಲ್ಲಾ ಶಾಂತಿಯೂ ನ್ಯಾಯವೂ ನೆಲೆಸಿರಲಿ.
4 ರಾಜನು ಬಡವರಿಗೆ ನ್ಯಾಯ ದೊರಕಿಸಿಕೊಡಲಿ; ನಿಸ್ಸಹಾಯಕರಿಗೆ ಸಹಾಯಮಾಡಲಿ.
ಅವರಿಗೆ ಕೇಡುಮಾಡುವವರನ್ನು ರಾಜನು ದಂಡಿಸಲಿ.
5 ಸೂರ್ಯಚಂದ್ರರು ಆಕಾಶದಲ್ಲಿ ಇರುವವರೆಗೂ
ಜನರು ರಾಜನಿಗೆ ಭಯಪಡಲಿ; ಅವನನ್ನು ಗೌರವಿಸಲಿ.
6 ಹುಲ್ಲುಗಾವಲಿನ ಮೇಲೆ ಸುರಿಯುವ ಮಳೆಯಂತೆಯೂ
ಭೂಮಿಯನ್ನು ಹದಗೊಳಿಸುವ ಹಿತವಾದ ಮಳೆಯಂತೆಯೂ ನೀನು ಅವನಿಗೆ ಸಹಾಯಕನಾಗಿರು.
7 ಅವನ ಆಡಳಿತದ ದಿನಗಳಲ್ಲಿ ನೀತಿಯು ವೃದ್ಧಿಯಾಗಲಿ.
ಚಂದ್ರನಿರುವವರೆಗೂ ಶಾಂತಿ ನೆಲಸಿರಲಿ.
8 ಅವನ ರಾಜ್ಯವು ಸಮುದ್ರದಿಂದ ಸಮುದ್ರದವರೆಗೂ
ಯೂಫ್ರೇಟೀಸ್ ನದಿಯಿಂದ ಭೂಮಿಯ ಬಹುದೂರದ ಸ್ಥಳದವರೆಗೂ ಬೆಳೆಯಲಿ.
9 ಅರಣ್ಯದಲ್ಲಿ ವಾಸಿಸುತ್ತಿರುವ ಜನರು ಅವನಿಗೆ ಅಡ್ಡಬೀಳಲಿ.
ಅವನ ವೈರಿಗಳೆಲ್ಲ ಅವನ ಮುಂದೆ ಬಿದ್ದು ಮಣ್ಣುಮುಕ್ಕಲಿ.
10 ತಾರ್ಷೀಷಿನ ರಾಜರುಗಳೂ ಬಹುದೂರದ ದೇಶಗಳವರೂ ಅವನಿಗೆ ಉಡುಗೊರೆಗಳನ್ನು ಕೊಡಲಿ.
ಶೆಬಾ ಮತ್ತು ಸೆಬಾ ಪ್ರಾಂತ್ಯಗಳ ರಾಜರುಗಳು ಅವನಿಗೆ ಕಪ್ಪಕಾಣಿಕೆಗಳನ್ನು ತಂದು ಕೊಡಲಿ.
11 ಅರಸರುಗಳೆಲ್ಲಾ ನಮ್ಮ ರಾಜನಿಗೆ ಅಡ್ಡಬೀಳಲಿ.
ಜನಾಂಗಗಳೆಲ್ಲಾ ಅವನ ಸೇವೆಮಾಡಲಿ.
12 ನಮ್ಮ ರಾಜನು ನಿಸ್ಸಹಾಯಕರಿಗೆ ಸಹಾಯ ಮಾಡುವನು.
ನಮ್ಮ ರಾಜನು ಬಡವರಿಗೂ ಅಸಹಾಯಕರಿಗೂ ಸಹಾಯ ಮಾಡುವನು.
13 ಬಡವರೂ ಅಸಹಾಯಕರೂ ಅವನನ್ನೇ ಅವಲಂಬಿಸಿಕೊಳ್ಳುವರು.
ರಾಜನು ಅವರ ಪ್ರಾಣಗಳನ್ನು ಕಾಪಾಡುವನು.
14 ಕ್ರೂರಿಗಳಿಂದ ಅವರನ್ನು ತಪ್ಪಿಸಿ ರಕ್ಷಿಸುವನು.
ಆ ಬಡವರ ಜೀವಗಳು ರಾಜನಿಗೆ ಅಮೂಲ್ಯವಾಗಿವೆ.
15 ರಾಜನು ಬಹುಕಾಲ ಬಾಳಲಿ!
ಅವನಿಗೆ ಶೆಬಾ ಪ್ರಾಂತ್ಯದಿಂದ ಬಂಗಾರವು ಬರಲಿ.
ರಾಜನಿಗೋಸ್ಕರ ಯಾವಾಗಲೂ ಪ್ರಾರ್ಥಿಸಿರಿ.
ಪ್ರತಿದಿನವೂ ಅವನನ್ನು ಆಶೀರ್ವದಿಸಿರಿ.
16 ಹೊಲಗಳು ಯಥೇಚ್ಚವಾಗಿ ಧಾನ್ಯಬೆಳೆಯಲಿ.
ಬೆಟ್ಟಗಳು ಬೆಳೆಗಳಿಂದ ತುಂಬಿಹೋಗಲಿ.
ಹೊಲಗಳು ಲೆಬನೋನಿನಲ್ಲಿರುವ ಹೊಲಗಳಂತೆ ಫಲವತ್ತಾಗಿರಲಿ.
ಬಯಲುಗಳು ಹುಲ್ಲಿನಿಂದ ಆವೃತಿಯಾಗಿರುವಂತೆ ಪಟ್ಟಣಗಳು ಜನರಿಂದ ತುಂಬಿಹೋಗಲಿ.
17 ರಾಜನು ಎಂದೆಂದಿಗೂ ಪ್ರಸಿದ್ಧನಾಗಿರಲಿ.
ಸೂರ್ಯನು ಇರುವವರೆಗೂ ಜನರು ಅವನ ಹೆಸರನ್ನು ಜ್ಞಾಪಿಸಿಕೊಳ್ಳಲಿ.
ಅವನಿಂದ ಜನರಿಗೆ ಆಶೀರ್ವಾದವಾಗಲಿ.
ಜನರೆಲ್ಲರೂ ಅವನನ್ನು ಆಶೀರ್ವದಿಸಲಿ.
18 ಇಸ್ರೇಲರ ದೇವರಾದ ಯೆಹೋವನನ್ನು ಕೊಂಡಾಡಿರಿ.
ಅಂಥ ಅದ್ಭುತಕಾರ್ಯಗಳನ್ನು ದೇವರೊಬ್ಬನೇ ಮಾಡಬಲ್ಲನು!
19 ಆತನ ಪ್ರಭಾವಪೂರ್ಣವಾದ ಹೆಸರನ್ನು ಎಂದೆಂದಿಗೂ ಕೊಂಡಾಡಿರಿ!
ಆತನ ಮಹಿಮೆ ಭೂಲೋಕವನ್ನೆಲ್ಲಾ ತುಂಬಿಕೊಳ್ಳಲಿ!
ಆಮೆನ್, ಆಮೆನ್!
20 (ಇಷಯನ ಮಗನಾದ ದಾವೀದನ ಪ್ರಾರ್ಥನೆಗಳು ಇಲ್ಲಿಗೆ ಮುಕ್ತಾಯಗೊಂಡವು.)
ನೆಬೂಕದ್ನೆಚ್ಚರನ ಸ್ವಪ್ನ
2 ತನ್ನ ಆಳ್ವಿಕೆಯ ಎರಡನೇ ವರ್ಷದಲ್ಲಿ ನೆಬೂಕದ್ನೆಚ್ಚರನು ಕೆಲವು ಕನಸುಗಳನ್ನು ಕಂಡನು. ಆ ಕನಸುಗಳು ಅವನನ್ನು ತತ್ತರಿಸಿಬಿಟ್ಟವು ಮತ್ತು ಅವನಿಗೆ ನಿದ್ರೆ ಬರದಂತೆ ಮಾಡಿದವು. 2 ಅರಸನು ತನ್ನ ಎಲ್ಲಾ ಪಂಡಿತರನ್ನು ಕರೆಸಿದನು. ಅವರು ಮಾಟಮಂತ್ರಗಳಿಂದ, ಜ್ಯೋತಿಶ್ಶಾಸ್ತ್ರದ ಸಹಾಯದಿಂದ ಅರಸನ ಕನಸಿನ ಅರ್ಥವನ್ನೂ ಭವಿಷ್ಯದಲ್ಲಿ ಸಂಭವಿಸಲಿರುವುದನ್ನೂ ತಿಳಿದುಕೊಳ್ಳಲು ಪ್ರಯತ್ನ ಮಾಡಿದರು. ರಾಜನು ತಾನು ಕಂಡ ಕನಸಿನ ಅರ್ಥವನ್ನು ತಿಳಿಯಬಯಸಿದ್ದರಿಂದ ಅವರು ಒಳಗೆ ಬಂದು ಅರಸನ ಸಮ್ಮುಖದಲ್ಲಿ ನಿಂತುಕೊಂಡರು.
3 ಆಗ ಅರಸನು ಅವರಿಗೆ, “ನಾನೊಂದು ಕನಸು ಕಂಡೆ. ಅದು ನನ್ನನ್ನು ಪೀಡಿಸುತ್ತಿದೆ. ಆ ಕನಸಿನ ಅರ್ಥವೇನೆಂಬುದನ್ನು ನಾನು ತಿಳಿಯಬಯಸುತ್ತೇನೆ” ಎಂದನು.
4 ಆಗ ಆ ಕಸ್ದೀಯರು ಅರಮೇಯಿಕ್ ಭಾಷೆಯಲ್ಲಿ, “ಅರಸನೇ ಚಿರಂಜೀವಿಯಾಗಿರು. ನಾವು ನಿನ್ನ ಸೇವಕರು. ದಯವಿಟ್ಟು ನಮಗೆ ನಿನ್ನ ಕನಸನ್ನು ಹೇಳು. ನಾವು ಅದರ ಅರ್ಥವನ್ನು ತಿಳಿಸುತ್ತೇವೆ” ಎಂದು ಉತ್ತರಕೊಟ್ಟರು.
5 ಆಗ ಅರಸನಾದ ನೆಬೂಕದ್ನೆಚ್ಚರನು, “ಹಾಗಲ್ಲ, ನೀವು ನನಗೆ ನನ್ನ ಕನಸನ್ನೂ ಅದರ ಅರ್ಥವನ್ನೂ ತಿಳಿಸಬೇಕು. ಇಲ್ಲವಾದರೆ ನಾನು ನಿಮ್ಮ ದೇಹವನ್ನು ತುಂಡುತುಂಡಾಗಿ ಕತ್ತರಿಸಲು ಆಜ್ಞಾಪಿಸುತ್ತೇನೆ. ನಿಮ್ಮ ಮನೆಗಳನ್ನು ಬೀಳಿಸಿ ಮಣ್ಣುಗುಡ್ಡೆಯನ್ನಾಗಿಯೂ ಮತ್ತು ಬೂದಿರಾಶಿಯನ್ನಾಗಿಯೂ ಮಾಡುವಂತೆ ಆಜ್ಞಾಪಿಸುತ್ತೇನೆ. 6 ಆದರೆ ನೀವು ನನಗೆ ನನ್ನ ಕನಸನ್ನೂ ಅದರ ಅರ್ಥವನ್ನೂ ಹೇಳಿದರೆ ಕಾಣಿಕೆಗಳನ್ನೂ ಬಹುಮಾನಗಳನ್ನೂ ಕೊಡುತ್ತೇನೆ ಮತ್ತು ಮಹಾಸನ್ಮಾನವನ್ನು ಮಾಡುತ್ತೇನೆ. ಆದ್ದರಿಂದ ನೀವು ನನಗೆ ಕನಸನ್ನೂ ಅದರ ಅರ್ಥವನ್ನೂ ಹೇಳಿರಿ” ಎಂದನು.
7 ಆ ಪಂಡಿತರು ಅರಸನಿಗೆ, “ದಯವಿಟ್ಟು ತಾವು ಕನಸಿನ ಬಗ್ಗೆ ಹೇಳಿರಿ. ನಾವು ಅದರ ಅಭಿಪ್ರಾಯವನ್ನು ಹೇಳುತ್ತೇವೆ” ಎಂದರು.
8 ಅರಸನಾದ ನೆಬೂಕದ್ನೆಚ್ಚರನು, “ನೀವು ಹೆಚ್ಚಿನ ಕಾಲಾವಕಾಶವನ್ನು ಪಡೆಯುವ ಪ್ರಯತ್ನ ಮಾಡುತ್ತಿದ್ದೀರೆಂಬುದನ್ನು ನಾನು ಬಲ್ಲೆ. ನಾನು ಹೇಳಿದ್ದು ನಿಮಗೆ ಸರಿಯಾಗಿ ತಿಳಿದಿದೆ. 9 ನೀವು ನನಗೆ ನನ್ನ ಕನಸಿನ ಬಗ್ಗೆ ಹೇಳದಿದ್ದರೆ ನಿಮಗೆ ಶಿಕ್ಷೆಯಾಗುವದೆಂದು ನೀವು ಬಲ್ಲಿರಿ. ನೀವೆಲ್ಲ ನನಗೆ ಸುಳ್ಳು ಹೇಳಬೇಕೆಂದು ನಿರ್ಧರಿಸಿಕೊಂಡಿದ್ದೀರಿ. ನೀವು ಹೆಚ್ಚಿನ ಸಮಯವನ್ನು ಪಡೆಯಲಿಚ್ಛಿಸುತ್ತಿದ್ದೀರಿ. ನಿಮಗೆ ಹೇಳಿದ್ದನ್ನು ನಾನು ಮರೆತುಬಿಡಬಹುದೆಂದು ನೀವು ಭಾವಿಸುತ್ತಿರುವಿರಿ. ಈಗ ನನ್ನ ಕನಸನ್ನು ತಿಳಿಸಿರಿ. ನೀವು ಕನಸನ್ನು ತಿಳಿಸಿದರೆ ಅದರ ನಿಜವಾದ ಅರ್ಥವನ್ನೂ ಹೇಳಬಲ್ಲಿರಿ” ಎಂದು ಅವರಿಗೆ ಉತ್ತರಕೊಟ್ಟನು.
10 ಕಸ್ದೀಯರು, “ಮಹಾಪ್ರಭುಗಳು ಕೇಳುತ್ತಿರುವುದನ್ನು ಹೇಳುವವರು ಈ ಜಗತ್ತಿನಲ್ಲಿ ಯಾರೂ ಇಲ್ಲ. ಈ ಹಿಂದೆ ಯಾವ ಅರಸನೂ ತನ್ನ ಆಸ್ಥಾನ ಪಂಡಿತರಿಗೂ ಮಂತ್ರವಾದಿಗಳಿಗೂ ಇಂತಹ ಪ್ರಶ್ನೆಯನ್ನು ಕೇಳಲಿಲ್ಲ. ಅತ್ಯಂತ ದೊಡ್ಡ ಮತ್ತು ಪ್ರಬಲನಾದ ಅರಸನೂ ತನ್ನ ಪಂಡಿತರಿಗಾಗಲಿ ಜೋಯಿಸರಿಗಾಗಲಿ ಇಂಥದ್ದನ್ನು ಕೇಳಲಿಲ್ಲ. 11 ಮಹಾಪ್ರಭುಗಳು ಕೇಳುವ ವಿಷಯ ಅತಿ ಕಠಿಣವಾದದ್ದು. ದೇವತೆಗಳು ಮಾತ್ರ ಅರಸನ ಕನಸನ್ನೂ ಅದರ ಅರ್ಥವನ್ನೂ ತಿಳಿಸಲು ಸಾಧ್ಯ. ಆದರೆ ದೇವತೆಗಳು ಮಾನವರೊಂದಿಗೆ ವಾಸಮಾಡುವುದಿಲ್ಲ” ಎಂದರು.
12 ಇದನ್ನು ಕೇಳಿ ಅರಸನು ಬಹಳ ಕೋಪಗೊಂಡು ಬಾಬಿಲೋನಿನ ಎಲ್ಲಾ ವಿದ್ವಾಂಸರನ್ನು ಕೊಲ್ಲಬೇಕೆಂದು ಆಜ್ಞಾಪಿಸಿದನು. 13 ಅರಸನಾದ ನೆಬೂಕದ್ನೆಚ್ಚರನ ಆಜ್ಞೆಯನ್ನು ಪ್ರಕಟಗೊಳಿಸಲಾಯಿತು. ಎಲ್ಲಾ ವಿದ್ವಾಂಸರನ್ನು ಕೊಲ್ಲಬೇಕಾಗಿತ್ತು. ದಾನಿಯೇಲ ಮತ್ತು ಅವನ ಸ್ನೇಹಿತರನ್ನು ಹುಡುಕಿ ಅವರ ಕೊಲೆ ಮಾಡುವುದಕ್ಕಾಗಿ ರಾಜಭಟರನ್ನು ಕಳುಹಿಸಲಾಯಿತು.
14 ಅರ್ಯೋಕನು ಅರಸನ ಮೈಗಾವಲಿನವರ ದಳವಾಯಿಯಾಗಿದ್ದನು. ಅವನು ಬಾಬಿಲೋನಿನ ವಿದ್ವಾಂಸರನ್ನು ಕೊಲ್ಲಲು ಹೊರಟಿದ್ದನು. ಆದರೆ ದಾನಿಯೇಲನು ಅವನೊಂದಿಗೆ ಮಾತನಾಡಿದನು. ದಾನಿಯೇಲನು ಅವನ ಸಂಗಡ ವಿವೇಕ ಮತ್ತು ನಮ್ರತೆಯಿಂದ ಮಾತನಾಡಿದನು. 15 ದಾನಿಯೇಲನು ಅರ್ಯೋಕನಿಗೆ, “ಅರಸನು ಅಂತಹ ಕಠಿಣ ಶಿಕ್ಷೆಯನ್ನು ಏಕೆ ಆಜ್ಞಾಪಿಸಿದನು?” ಎಂದು ಕೇಳಿದನು.
ಆಗ ಅರ್ಯೋಕನು ಅರಸನ ಕನಸಿಗೆ ಸಂಬಂಧಿಸಿದ ಎಲ್ಲಾ ವಿಷಯವನ್ನು ವಿವರಿಸಿದನು. 16 ಆಗ ದಾನಿಯೇಲನು ಅರಸನಾದ ನೆಬೂಕದ್ನೆಚ್ಚರನ ಬಳಿಗೆ ಹೋಗಿ ತನಗೆ ಸ್ವಲ್ಪ ಸಮಯ ಕೊಡುವುದಾದರೆ ತಾನು ಅರಸನ ಕನಸನ್ನೂ ಅದರ ಅರ್ಥವನ್ನೂ ತಿಳಿಸುವುದಾಗಿ ಹೇಳಿದನು.
17 ದಾನಿಯೇಲನು ಮನೆಗೆ ಹೋಗಿ ತನ್ನ ಸ್ನೇಹಿತರಾದ ಹನನ್ಯ, ಮೀಶಾಯೇಲ ಮತ್ತು ಅಜರ್ಯ ಇವರುಗಳಿಗೆ ಈ ವಿಷಯ ತಿಳಿಸಿದನು. 18 ಪರಲೋಕದ ದೇವರು ತನಗೆ ಸಹಾಯ ಮಾಡುವಂತೆಯೂ ಕೃಪೆ ತೋರುವಂತೆಯೂ ಪ್ರಾರ್ಥಿಸಬೇಕೆಂದು ದಾನಿಯೇಲನು ಅವರನ್ನು ಕೇಳಿಕೊಂಡನು. ದಾನಿಯೇಲ ಮತ್ತು ಅವನ ಸ್ನೇಹಿತರು ಮರಣದಂಡನೆಯಿಂದ ಪಾರಾಗಬೇಕಿದ್ದರೆ ಕನಸನ್ನೂ ಅದರ ಅರ್ಥವನ್ನೂ ತಿಳಿಸಬೇಕಿತ್ತು.
19 ಅಂದು ರಾತ್ರಿ ದಾನಿಯೇಲನಿಗೆ ದೇವದರ್ಶನವಾಯಿತು. ಆಗ ದಾನಿಯೇಲನು ಪರಲೋಕದ ದೇವರನ್ನು ಹೀಗೆ ಸ್ತುತಿಸಿದನು:
ನೀವು ಜೀವಿಸಬೇಕಾದ ರೀತಿ
17 ಪ್ರಭುವಿಗೋಸ್ಕರ ನಾನು ನಿಮಗೆ ಇದನ್ನು ಹೇಳುತ್ತೇನೆ ಮತ್ತು ಎಚ್ಚರಿಸುತ್ತೇನೆ. ಅವಿಶ್ವಾಸಿಗಳಂತೆ ಇನ್ನು ಮೇಲೆ ಜೀವಿಸದಿರಿ. ಅವರ ಆಲೋಚನೆಗಳು ನಿಷ್ಪ್ರಯೋಜಕವಾಗಿವೆ. 18 ಅವರು ಅರ್ಥ ಮಾಡಿಕೊಳ್ಳುವುದಿಲ್ಲ. ಅವರು ಕಿವಿಗೊಡದ ಕಾರಣ ಅವರಿಗೆ ಏನೂ ಗೊತ್ತಿಲ್ಲ. ಆದ್ದರಿಂದ ದೇವರು ಕೊಡುವ ಜೀವಿತವನ್ನು ಹೊಂದಿಕೊಳ್ಳಲು ಅವರಿಗೆ ಸಾಧ್ಯವಿಲ್ಲ. 19 ಅವರಿಗೆ ನಾಚಿಕೆಯೇ ಇಲ್ಲ. ಅವರು ತಮ್ಮ ಜೀವಿತಗಳನ್ನು ದುಷ್ಕೃತ್ಯಗಳಿಗೆ ಉಪಯೋಗಿಸುತ್ತಾರೆ; ಎಲ್ಲಾ ಬಗೆಯ ಕೆಟ್ಟಕಾರ್ಯಗಳನ್ನು ಇನ್ನೂ ಹೆಚ್ಚೆಚ್ಚಾಗಿ ಮಾಡಲು ತವಕಪಡುತ್ತಾರೆ. 20 ಆದರೆ ಕ್ರಿಸ್ತನಿಂದ ನೀವು ಕಲಿತುಕೊಂಡದ್ದು ಅವುಗಳನ್ನಲ್ಲ. 21 ನೀವು ಆತನ ವಿಷಯವಾಗಿ ಕೇಳಿದ್ದೀರೆಂಬುದು ನನಗೆ ಗೊತ್ತಿದೆ. ನೀವು ಆತನಲ್ಲಿರುವುದರಿಂದ ಸತ್ಯವನ್ನು ಕಲಿತುಕೊಂಡಿರಿ. ಹೌದು, ಸತ್ಯವು ಯೇಸುವಿನಲ್ಲಿದೆ. 22 ನೀವು ನಿಮ್ಮ ಹಿಂದಿನ ಕೆಟ್ಟ ನಡತೆಯನ್ನು ಬಿಟ್ಟುಬಿಡಬೇಕೆಂಬುದನ್ನು ಅಂದರೆ ನಿಮ್ಮ ಹಳೆಯ ಸ್ವಭಾವವನ್ನು ತೊರೆದುಬಿಡಬೇಕೆಂಬುದನ್ನು ಕಲಿತುಕೊಂಡಿರಿ. ಜನರು ತಾವು ಮಾಡ ಬಯಸುವ ದುಷ್ಕೃತ್ಯಗಳಿಂದ ವಂಚಿತರಾಗಿರುವುದರಿಂದ ಆ ಹಳೆಯ ಸ್ವಭಾವವು ದಿನದಿಂದ ದಿನಕ್ಕೆ ಮತ್ತಷ್ಟು ಕೆಟ್ಟು ಹೋಗುತ್ತದೆ. 23 ಆದರೆ ಆಂತರ್ಯದಲ್ಲಿ ಹೊಸಬರಾಗಿ ನೂತನ ಸ್ವಭಾವವನ್ನು ಹೊಂದಿಕೊಳ್ಳತಕ್ಕ ರೀತಿಯನ್ನು ನೀವು ಕಲಿತುಕೊಂಡಿರಿ. 24 ಆ ಸ್ವಭಾವವು ದೇವರ ಹೋಲಿಕೆಯ ಮೇರೆಗೆ ಸತ್ಯವಾದ ನೀತಿಯುಳ್ಳದಾಗಿಯೂ ಪರಿಶುದ್ಧವಾಗಿಯೂ ನಿರ್ಮಿಸಲ್ಪಟ್ಟಿದೆ.
25 ಆದ್ದರಿಂದ ನೀವು ಸುಳ್ಳು ಹೇಳದೆ ಒಬ್ಬರಿಗೊಬ್ಬರು ಯಾವಾಗಲೂ ಸತ್ಯವನ್ನೇ ಹೇಳಿರಿ. ಏಕೆಂದರೆ ನಾವೆಲ್ಲರೂ ಒಂದೇ ದೇಹಕ್ಕೆ ಸೇರಿದ ಅಂಗಗಳಾಗಿದ್ದೇವೆ. 26 ಕೋಪಗೊಂಡರೂ ಪಾಪ ಮಾಡಬೇಡಿ ಮತ್ತು ದಿನವೆಲ್ಲಾ ಕೋಪದಿಂದಿರಬೇಡಿ.(A) 27 ನಿಮ್ಮನ್ನು ಸೋಲಿಸಲು ಸೈತಾನನಿಗೆ ಅವಕಾಶಕೊಡಬೇಡಿ. 28 ಕಳ್ಳನು ಕದಿಯುವುದನ್ನು ನಿಲ್ಲಿಸಿ ತಾನೇ ದುಡಿದು ಸಂಪಾದಿಸಲಿ; ಅವನು ತನ್ನ ಕೈಗಳನ್ನು ಒಳ್ಳೆಯದನ್ನು ಮಾಡುವುದಕ್ಕಾಗಿ ಉಪಯೋಗಿಸಲಿ. ಆಗ ಬಡವರಿಗೂ ಸಹಾಯ ಮಾಡಲು ಅವನಿಗೆ ಸಾಧ್ಯವಾಗುವುದು.
29 ನಿಮ್ಮ ಬಾಯಿಂದ ಕೆಟ್ಟ ಮಾತುಗಳು ಬಾರದಿರಲಿ. ಭಕ್ತಿಯನ್ನು ವೃದ್ಧಿಮಾಡುವಂಥ ಕಾಲೋಚಿತವಾದ ಮಾತು ಇದ್ದರೆ ಕೇಳುವವರ ಹಿತಕ್ಕಾಗಿ ಅದನ್ನು ಆಡಿರಿ. 30 ಪವಿತ್ರಾತ್ಮನನ್ನು ದುಃಖಪಡಿಸಬೇಡಿ. ನೀವು ದೇವರಿಗೆ ಸೇರಿದವರೆಂಬುದಕ್ಕೆ ಆತನೇ ದೇವರ ಪ್ರಮಾಣವಾಗಿದ್ದಾನೆ. ಸೂಕ್ತ ಸಮಯದಲ್ಲಿ ನಿಮ್ಮನ್ನು ಬಿಡುಗಡೆ ಮಾಡುತ್ತೇನೆ ಎಂಬುದನ್ನು ತೋರಿಸುವುದಕ್ಕಾಗಿಯೇ ದೇವರು ನಿಮಗೆ ಆತನನ್ನು ಕೊಟ್ಟನು. 31 ಎಲ್ಲಾ ದ್ವೇಷ, ಕೋಪ, ಕ್ರೋಧ, ಕಲಹ, ದೂಷಣೆ ಇವುಗಳನ್ನೂ ಸಕಲ ವಿಧವಾದ ದುಷ್ಟತನವನ್ನೂ ನಿಮ್ಮಿಂದ ದೂರಮಾಡಿರಿ. 32 ಒಬ್ಬರಿಗೊಬ್ಬರು ಕರುಣೆ ತೋರಿರಿ. ಒಬ್ಬರನ್ನೊಬ್ಬರು ಪ್ರೀತಿಸಿರಿ. ದೇವರು ಕ್ರಿಸ್ತನಲ್ಲಿ ನಿಮ್ಮನ್ನು ಕ್ಷಮಿಸಿದಂತೆ ನೀವೂ ಒಬ್ಬರನ್ನೊಬ್ಬರು ಕ್ಷಮಿಸಿರಿ.
5 ನೀವು ದೇವರ ಪ್ರಿಯ ಮಕ್ಕಳಾಗಿದ್ದೀರಿ; ಆದ್ದರಿಂದ ನೀವು ಆತನನ್ನು ಅನುಸರಿಸಬೇಕು.
Kannada Holy Bible: Easy-to-Read Version. All rights reserved. © 1997 Bible League International