Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 72

ರಚನೆಗಾರ: ಸೊಲೊಮೋನ.

72 ದೇವರೇ, ನಿನ್ನಂತೆ ನ್ಯಾಯವಾಗಿ ತೀರ್ಪುನೀಡಲು ರಾಜನಿಗೆ ಕಲಿಸಿಕೊಡು.
    ನಿನ್ನ ನೀತಿಯನ್ನು ಕಲಿತುಕೊಳ್ಳಲು ರಾಜಕುಮಾರನಿಗೆ ಸಹಾಯಮಾಡು.
ನಿನ್ನ ಜನರಿಗೆ ನೀತಿಯಿಂದಲೂ ನಿನ್ನ ಬಡಜನರಿಗೆ ನ್ಯಾಯವಾಗಿಯೂ
    ತೀರ್ಪುಮಾಡಲು ಅವನಿಗೆ ಸಹಾಯಮಾಡು.
ಪ್ರಖ್ಯಾತವಾದ ಬೆಟ್ಟಗುಡ್ಡಗಳಲ್ಲೆಲ್ಲಾ,
    ದೇಶದಲ್ಲೆಲ್ಲಾ ಶಾಂತಿಯೂ ನ್ಯಾಯವೂ ನೆಲೆಸಿರಲಿ.
ರಾಜನು ಬಡವರಿಗೆ ನ್ಯಾಯ ದೊರಕಿಸಿಕೊಡಲಿ; ನಿಸ್ಸಹಾಯಕರಿಗೆ ಸಹಾಯಮಾಡಲಿ.
    ಅವರಿಗೆ ಕೇಡುಮಾಡುವವರನ್ನು ರಾಜನು ದಂಡಿಸಲಿ.
ಸೂರ್ಯಚಂದ್ರರು ಆಕಾಶದಲ್ಲಿ ಇರುವವರೆಗೂ
    ಜನರು ರಾಜನಿಗೆ ಭಯಪಡಲಿ; ಅವನನ್ನು ಗೌರವಿಸಲಿ.
ಹುಲ್ಲುಗಾವಲಿನ ಮೇಲೆ ಸುರಿಯುವ ಮಳೆಯಂತೆಯೂ
    ಭೂಮಿಯನ್ನು ಹದಗೊಳಿಸುವ ಹಿತವಾದ ಮಳೆಯಂತೆಯೂ ನೀನು ಅವನಿಗೆ ಸಹಾಯಕನಾಗಿರು.
ಅವನ ಆಡಳಿತದ ದಿನಗಳಲ್ಲಿ ನೀತಿಯು ವೃದ್ಧಿಯಾಗಲಿ.
    ಚಂದ್ರನಿರುವವರೆಗೂ ಶಾಂತಿ ನೆಲಸಿರಲಿ.
ಅವನ ರಾಜ್ಯವು ಸಮುದ್ರದಿಂದ ಸಮುದ್ರದವರೆಗೂ
    ಯೂಫ್ರೇಟೀಸ್ ನದಿಯಿಂದ ಭೂಮಿಯ ಬಹುದೂರದ ಸ್ಥಳದವರೆಗೂ ಬೆಳೆಯಲಿ.
ಅರಣ್ಯದಲ್ಲಿ ವಾಸಿಸುತ್ತಿರುವ ಜನರು ಅವನಿಗೆ ಅಡ್ಡಬೀಳಲಿ.
    ಅವನ ವೈರಿಗಳೆಲ್ಲ ಅವನ ಮುಂದೆ ಬಿದ್ದು ಮಣ್ಣುಮುಕ್ಕಲಿ.
10 ತಾರ್ಷೀಷಿನ ರಾಜರುಗಳೂ ಬಹುದೂರದ ದೇಶಗಳವರೂ ಅವನಿಗೆ ಉಡುಗೊರೆಗಳನ್ನು ಕೊಡಲಿ.
    ಶೆಬಾ ಮತ್ತು ಸೆಬಾ ಪ್ರಾಂತ್ಯಗಳ ರಾಜರುಗಳು ಅವನಿಗೆ ಕಪ್ಪಕಾಣಿಕೆಗಳನ್ನು ತಂದು ಕೊಡಲಿ.
11 ಅರಸರುಗಳೆಲ್ಲಾ ನಮ್ಮ ರಾಜನಿಗೆ ಅಡ್ಡಬೀಳಲಿ.
    ಜನಾಂಗಗಳೆಲ್ಲಾ ಅವನ ಸೇವೆಮಾಡಲಿ.
12 ನಮ್ಮ ರಾಜನು ನಿಸ್ಸಹಾಯಕರಿಗೆ ಸಹಾಯ ಮಾಡುವನು.
    ನಮ್ಮ ರಾಜನು ಬಡವರಿಗೂ ಅಸಹಾಯಕರಿಗೂ ಸಹಾಯ ಮಾಡುವನು.
13 ಬಡವರೂ ಅಸಹಾಯಕರೂ ಅವನನ್ನೇ ಅವಲಂಬಿಸಿಕೊಳ್ಳುವರು.
    ರಾಜನು ಅವರ ಪ್ರಾಣಗಳನ್ನು ಕಾಪಾಡುವನು.
14 ಕ್ರೂರಿಗಳಿಂದ ಅವರನ್ನು ತಪ್ಪಿಸಿ ರಕ್ಷಿಸುವನು.
    ಆ ಬಡವರ ಜೀವಗಳು ರಾಜನಿಗೆ ಅಮೂಲ್ಯವಾಗಿವೆ.
15 ರಾಜನು ಬಹುಕಾಲ ಬಾಳಲಿ!
    ಅವನಿಗೆ ಶೆಬಾ ಪ್ರಾಂತ್ಯದಿಂದ ಬಂಗಾರವು ಬರಲಿ.
ರಾಜನಿಗೋಸ್ಕರ ಯಾವಾಗಲೂ ಪ್ರಾರ್ಥಿಸಿರಿ.
    ಪ್ರತಿದಿನವೂ ಅವನನ್ನು ಆಶೀರ್ವದಿಸಿರಿ.
16 ಹೊಲಗಳು ಯಥೇಚ್ಚವಾಗಿ ಧಾನ್ಯಬೆಳೆಯಲಿ.
    ಬೆಟ್ಟಗಳು ಬೆಳೆಗಳಿಂದ ತುಂಬಿಹೋಗಲಿ.
ಹೊಲಗಳು ಲೆಬನೋನಿನಲ್ಲಿರುವ ಹೊಲಗಳಂತೆ ಫಲವತ್ತಾಗಿರಲಿ.
    ಬಯಲುಗಳು ಹುಲ್ಲಿನಿಂದ ಆವೃತಿಯಾಗಿರುವಂತೆ ಪಟ್ಟಣಗಳು ಜನರಿಂದ ತುಂಬಿಹೋಗಲಿ.
17 ರಾಜನು ಎಂದೆಂದಿಗೂ ಪ್ರಸಿದ್ಧನಾಗಿರಲಿ.
    ಸೂರ್ಯನು ಇರುವವರೆಗೂ ಜನರು ಅವನ ಹೆಸರನ್ನು ಜ್ಞಾಪಿಸಿಕೊಳ್ಳಲಿ.
ಅವನಿಂದ ಜನರಿಗೆ ಆಶೀರ್ವಾದವಾಗಲಿ.
    ಜನರೆಲ್ಲರೂ ಅವನನ್ನು ಆಶೀರ್ವದಿಸಲಿ.

18 ಇಸ್ರೇಲರ ದೇವರಾದ ಯೆಹೋವನನ್ನು ಕೊಂಡಾಡಿರಿ.
    ಅಂಥ ಅದ್ಭುತಕಾರ್ಯಗಳನ್ನು ದೇವರೊಬ್ಬನೇ ಮಾಡಬಲ್ಲನು!
19 ಆತನ ಪ್ರಭಾವಪೂರ್ಣವಾದ ಹೆಸರನ್ನು ಎಂದೆಂದಿಗೂ ಕೊಂಡಾಡಿರಿ!
    ಆತನ ಮಹಿಮೆ ಭೂಲೋಕವನ್ನೆಲ್ಲಾ ತುಂಬಿಕೊಳ್ಳಲಿ!
    ಆಮೆನ್, ಆಮೆನ್!

20 (ಇಷಯನ ಮಗನಾದ ದಾವೀದನ ಪ್ರಾರ್ಥನೆಗಳು ಇಲ್ಲಿಗೆ ಮುಕ್ತಾಯಗೊಂಡವು.)

ಯೆಶಾಯ 6:1-5

ಪ್ರವಾದಿಯಾಗಲು ಯೆಶಾಯನಿಗೆ ದೇವರಿಂದ ಕರೆ

ಅರಸನಾದ ಉಜ್ಜೀಯನು ಮರಣಹೊಂದಿದ ವರ್ಷದಲ್ಲಿ ನಾನು ನನ್ನ ಒಡೆಯನನ್ನು ಕಂಡೆನು. ಆತನು ಅದ್ಭುತವೂ ಉನ್ನತವೂ ಆಗಿರುವ ಸಿಂಹಾಸನದ ಮೇಲೆ ಕುಳಿತಿದ್ದನು. ಆತನ ಉದ್ದವಾದ ನಿಲುವಂಗಿಯು ಆಲಯವನ್ನು ತುಂಬಿಕೊಂಡಿತ್ತು. ಆರು ರೆಕ್ಕೆಗಳುಳ್ಳ ಸೆರಾಫಿಯರು ಯೆಹೋವನ ಸುತ್ತ್ತಲೂ ನಿಂತಿದ್ದರು. ಆ ದೇವದೂತರು ಎರಡು ರೆಕ್ಕೆಗಳಿಂದ ತಮ್ಮ ಮುಖಗಳನ್ನು ಮುಚ್ಚಿಕೊಂಡಿದ್ದರು; ಎರಡು ರೆಕ್ಕೆಗಳಿಂದ ತಮ್ಮ ಕಾಲುಗಳನ್ನು ಮುಚ್ಚಿಕೊಂಡಿದ್ದರು; ಉಳಿದ ಎರಡು ರೆಕ್ಕೆಗಳಿಂದ ಹಾರಾಡುತ್ತಿದ್ದರು. ಪ್ರತಿಯೊಬ್ಬ ದೂತನು ಇನ್ನೊಬ್ಬ ದೂತನನ್ನು ಕರೆದು, “ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು, ಸರ್ವಶಕ್ತನಾದ ಯೆಹೋವನು ಮಹಾ ಪರಿಶುದ್ಧನು. ಆತನ ಮಹಿಮೆಯು ಇಡೀ ಭೂಮಂಡಲವನ್ನು ಆವರಿಸಿಕೊಂಡಿದೆ” ಎಂದು ಗಟ್ಟಿಯಾದ ಸ್ವರದಲ್ಲಿ ಹೇಳುತ್ತಿದ್ದರು. ಅವರ ಗಟ್ಟಿಯಾದ ಸ್ವರಕ್ಕೆ ಬಾಗಿಲಿನ ನಿಲುವುಗಳು ಅಲುಗಾಡುತ್ತಿದ್ದವು; ಆಲಯವು ಹೊಗೆಯಿಂದ ತುಂಬಿಹೋಯಿತು.

ಆಗ ನಾನು ಬಹು ಭಯಗೊಂಡು, “ಅಯ್ಯೋ, ನಾನು ನಾಶವಾಗುತ್ತಿದ್ದೇನೆ. ನಾನು ದೇವರೊಂದಿಗೆ ಮಾತನಾಡುವಷ್ಟು ಯೋಗ್ಯನಲ್ಲ. ದೇವರೊಂದಿಗೆ ಮಾತಾಡಲು ಯೋಗ್ಯರಲ್ಲದ ಜನರೊಂದಿಗೆ ನಾನು ಜೀವಿಸುತ್ತಿದ್ದೇನೆ. ಆದರೂ ನಾನು ಸರ್ವಶಕ್ತನಾದ ಯೆಹೋವನನ್ನು, ರಾಜಾಧಿರಾಜನನ್ನು ನೋಡಿದೆನು” ಎಂದೆನು.

ಅಪೊಸ್ತಲರ ಕಾರ್ಯಗಳು 7:44-53

44 “ದೇವರು ನಮ್ಮ ಪಿತೃಗಳೊಂದಿಗೆ ಯಾವ ಗುಡಾರದಲ್ಲಿ ಮತಾಡಿದ್ದನೋ ಆ ಗುಡಾರವು[a] ಈ ಯೆಹೂದ್ಯರೊಂದಿಗೆ ಮರಳುಗಾಡಿನಲ್ಲಿತ್ತು. ಈ ಗುಡಾರವನ್ನು ನಿರ್ಮಿಸುವ ಬಗೆಯನ್ನು ದೇವರು ಮೋಶೆಗೆ ತಿಳಿಸಿಕೊಟ್ಟನು. ದೇವರು ತನಗೆ ತೋರಿಸಿದ ಆಕಾರದಂತೆಯೇ ಮೋಶೆಯು ಅದನ್ನು ನಿರ್ಮಿಸಿದನು. 45 ತರುವಾಯ ಇತರ ಜನಾಂಗಗಳ ನಾಡುಗಳನ್ನು ವಶಪಡಿಸಿಕೊಳ್ಳುವುದಕ್ಕಾಗಿ ಯೆಹೋಶುವನು ನಮ್ಮ ಪಿತೃಗಳನ್ನು ಮುನ್ನಡೆಸಿದನು. ನಮ್ಮ ಜನರು ಆ ದೇಶದೊಳಗೆ ಹೋದಾಗ, ದೇವರು ಇತರ ಜನರನ್ನು ಅಲ್ಲಿಂದ ಹೊರಡಿಸಿಬಿಟ್ಟನು. ನಮ್ಮ ಜನರು ಆ ಹೊಸ ದೇಶದೊಳಗೆ ಹೋದಾಗ ಈ ಗುಡಾರವನ್ನು ತಮ್ಮೊಂದಿಗೆ ತೆಗೆದುಕೊಂಡು ಹೋದರು. ನಮ್ಮ ಜನರು ಈ ಗುಡಾರವನ್ನು ತಮ್ಮ ಪಿತೃಗಳಿಂದ ಸ್ವೀಕರಿಸಿಕೊಂಡು ದಾವೀದನ ಕಾಲದವರೆಗೂ ಅದನ್ನು ಇಟ್ಟುಕೊಂಡಿದ್ದರು. 46 ದೇವರು ದಾವೀದನನ್ನು ಬಹಳವಾಗಿ ಮೆಚ್ಚಿಕೊಂಡನು. ‘ಯಾಕೋಬನ ದೇವರಾದ ನಿನಗಾಗಿ ಒಂದು ಆಲಯವನ್ನು ಕಟ್ಟಲು ನನಗೆ ಅವಕಾಶಕೊಡು’ ಎಂದು ದಾವೀದನು ದೇವರನ್ನು ಕೇಳಿಕೊಂಡನು. 47 ಆದರೆ ದೇವಾಲಯವನ್ನು ಕಟ್ಟಿದ್ದು (ದಾವೀದನ ಮಗನಾದ) ಸೊಲೊಮೋನನೇ.

48 “ಆದರೆ ಮನುಷ್ಯರು ತಮ್ಮ ಕೈಯಾರೆ ನಿರ್ಮಿಸಿದ ಮನೆಗಳಲ್ಲಿ ಮಹೋನ್ನತನು (ದೇವರು) ವಾಸಿಸುವುದಿಲ್ಲ. ಪ್ರವಾದಿಯು ಹೀಗೆ ಬರೆದಿದ್ದಾನೆ:

49 ‘ಪ್ರಭುವು ಹೀಗೆನ್ನುತ್ತಾನೆ,
ಪರಲೋಕವು ನನ್ನ ಸಿಂಹಾಸನ.
    ಭೂಮಿಯು ನನ್ನ ಪಾದಪೀಠ.
ನೀವು ನನಗೋಸ್ಕರ ಯಾವ ಬಗೆಯ ಮನೆಯನ್ನು ಕಟ್ಟಬಲ್ಲಿರಿ?
    ನಾನು ವಿಶ್ರಮಿಸಿಕೊಳ್ಳತಕ್ಕ ಸ್ಥಳವೇ ಇಲ್ಲ!
50 ನೆನಪಿರಲಿ, ಈ ವಸ್ತುಗಳನ್ನೆಲ್ಲ ಮಾಡಿದವನು ನಾನೇ!’(A)

51 ಸ್ತೆಫನನು ಮಾತನ್ನು ಮುಂದುವರಿಸಿದನು: “ಮೊಂಡರಾದ ಯೆಹೂದ್ಯನಾಯಕರೇ! ನೀವು ನಿಮ್ಮ ಹೃದಯಗಳನ್ನು ದೇವರಿಗೆ ಕೊಟ್ಟಿಲ್ಲ. ನೀವು ಆತನಿಗೆ ಕಿವಿಗೊಡುವುದಿಲ್ಲ. ಪವಿತ್ರಾತ್ಮನು ನಿಮಗೆ ತಿಳಿಸಲು ಪ್ರಯತ್ನಿಸುತ್ತಿರುವ ವಿಷಯಕ್ಕೆ ನೀವು ಯಾವಾಗಲೂ ವಿರೋಧಿಗಳಾಗಿದ್ದೀರಿ. ನಿಮ್ಮ ಪಿತೃಗಳು ಹೀಗೆಯೇ ಮಾಡಿದರು ಮತ್ತು ನೀವೂ ಅವರಂತೆಯೇ ಇದ್ದೀರಿ! 52 ಜೀವಸಿದ್ದ ಪ್ರವಾದಿಗಳಲ್ಲಿ ಪ್ರತಿಯೊಬ್ಬರನ್ನೂ ನಿಮ್ಮ ಪಿತೃಗಳು ಹಿಂಸಿಸಿದರು. ನೀತಿವಂತನೊಬ್ಬನು (ಕ್ರಿಸ್ತನು) ಬರುತ್ತಾನೆಂದು ಬಹುಕಾಲದ ಹಿಂದೆಯೇ ಆ ಪ್ರವಾದಿಗಳು ತಿಳಿಸಿದ್ದರು. ಆದರೆ ನಿಮ್ಮ ಪಿತೃಗಳು ಆ ಪ್ರವಾದಿಗಳನ್ನು ಕೊಂದುಹಾಕಿದರು. ಈಗ ನೀವು ನೀತಿವಂತನಿಗೆ ವಿರುದ್ಧವಾಗಿ ತಿರುಗಿ ಆತನನ್ನು ಕೊಂದುಹಾಕಿದಿರಿ. 53 ದೇವರು ತನ್ನ ದೂತರ ಮೂಲಕ ಕೊಟ್ಟ ಮೋಶೆಯ ಧರ್ಮಶಾಸ್ತ್ರವನ್ನು ಪಡೆದುಕೊಂಡ ನೀವೇ ಅದಕ್ಕೆ ವಿಧೇಯರಾಗುವುದಿಲ್ಲ!”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International