Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 72

ರಚನೆಗಾರ: ಸೊಲೊಮೋನ.

72 ದೇವರೇ, ನಿನ್ನಂತೆ ನ್ಯಾಯವಾಗಿ ತೀರ್ಪುನೀಡಲು ರಾಜನಿಗೆ ಕಲಿಸಿಕೊಡು.
    ನಿನ್ನ ನೀತಿಯನ್ನು ಕಲಿತುಕೊಳ್ಳಲು ರಾಜಕುಮಾರನಿಗೆ ಸಹಾಯಮಾಡು.
ನಿನ್ನ ಜನರಿಗೆ ನೀತಿಯಿಂದಲೂ ನಿನ್ನ ಬಡಜನರಿಗೆ ನ್ಯಾಯವಾಗಿಯೂ
    ತೀರ್ಪುಮಾಡಲು ಅವನಿಗೆ ಸಹಾಯಮಾಡು.
ಪ್ರಖ್ಯಾತವಾದ ಬೆಟ್ಟಗುಡ್ಡಗಳಲ್ಲೆಲ್ಲಾ,
    ದೇಶದಲ್ಲೆಲ್ಲಾ ಶಾಂತಿಯೂ ನ್ಯಾಯವೂ ನೆಲೆಸಿರಲಿ.
ರಾಜನು ಬಡವರಿಗೆ ನ್ಯಾಯ ದೊರಕಿಸಿಕೊಡಲಿ; ನಿಸ್ಸಹಾಯಕರಿಗೆ ಸಹಾಯಮಾಡಲಿ.
    ಅವರಿಗೆ ಕೇಡುಮಾಡುವವರನ್ನು ರಾಜನು ದಂಡಿಸಲಿ.
ಸೂರ್ಯಚಂದ್ರರು ಆಕಾಶದಲ್ಲಿ ಇರುವವರೆಗೂ
    ಜನರು ರಾಜನಿಗೆ ಭಯಪಡಲಿ; ಅವನನ್ನು ಗೌರವಿಸಲಿ.
ಹುಲ್ಲುಗಾವಲಿನ ಮೇಲೆ ಸುರಿಯುವ ಮಳೆಯಂತೆಯೂ
    ಭೂಮಿಯನ್ನು ಹದಗೊಳಿಸುವ ಹಿತವಾದ ಮಳೆಯಂತೆಯೂ ನೀನು ಅವನಿಗೆ ಸಹಾಯಕನಾಗಿರು.
ಅವನ ಆಡಳಿತದ ದಿನಗಳಲ್ಲಿ ನೀತಿಯು ವೃದ್ಧಿಯಾಗಲಿ.
    ಚಂದ್ರನಿರುವವರೆಗೂ ಶಾಂತಿ ನೆಲಸಿರಲಿ.
ಅವನ ರಾಜ್ಯವು ಸಮುದ್ರದಿಂದ ಸಮುದ್ರದವರೆಗೂ
    ಯೂಫ್ರೇಟೀಸ್ ನದಿಯಿಂದ ಭೂಮಿಯ ಬಹುದೂರದ ಸ್ಥಳದವರೆಗೂ ಬೆಳೆಯಲಿ.
ಅರಣ್ಯದಲ್ಲಿ ವಾಸಿಸುತ್ತಿರುವ ಜನರು ಅವನಿಗೆ ಅಡ್ಡಬೀಳಲಿ.
    ಅವನ ವೈರಿಗಳೆಲ್ಲ ಅವನ ಮುಂದೆ ಬಿದ್ದು ಮಣ್ಣುಮುಕ್ಕಲಿ.
10 ತಾರ್ಷೀಷಿನ ರಾಜರುಗಳೂ ಬಹುದೂರದ ದೇಶಗಳವರೂ ಅವನಿಗೆ ಉಡುಗೊರೆಗಳನ್ನು ಕೊಡಲಿ.
    ಶೆಬಾ ಮತ್ತು ಸೆಬಾ ಪ್ರಾಂತ್ಯಗಳ ರಾಜರುಗಳು ಅವನಿಗೆ ಕಪ್ಪಕಾಣಿಕೆಗಳನ್ನು ತಂದು ಕೊಡಲಿ.
11 ಅರಸರುಗಳೆಲ್ಲಾ ನಮ್ಮ ರಾಜನಿಗೆ ಅಡ್ಡಬೀಳಲಿ.
    ಜನಾಂಗಗಳೆಲ್ಲಾ ಅವನ ಸೇವೆಮಾಡಲಿ.
12 ನಮ್ಮ ರಾಜನು ನಿಸ್ಸಹಾಯಕರಿಗೆ ಸಹಾಯ ಮಾಡುವನು.
    ನಮ್ಮ ರಾಜನು ಬಡವರಿಗೂ ಅಸಹಾಯಕರಿಗೂ ಸಹಾಯ ಮಾಡುವನು.
13 ಬಡವರೂ ಅಸಹಾಯಕರೂ ಅವನನ್ನೇ ಅವಲಂಬಿಸಿಕೊಳ್ಳುವರು.
    ರಾಜನು ಅವರ ಪ್ರಾಣಗಳನ್ನು ಕಾಪಾಡುವನು.
14 ಕ್ರೂರಿಗಳಿಂದ ಅವರನ್ನು ತಪ್ಪಿಸಿ ರಕ್ಷಿಸುವನು.
    ಆ ಬಡವರ ಜೀವಗಳು ರಾಜನಿಗೆ ಅಮೂಲ್ಯವಾಗಿವೆ.
15 ರಾಜನು ಬಹುಕಾಲ ಬಾಳಲಿ!
    ಅವನಿಗೆ ಶೆಬಾ ಪ್ರಾಂತ್ಯದಿಂದ ಬಂಗಾರವು ಬರಲಿ.
ರಾಜನಿಗೋಸ್ಕರ ಯಾವಾಗಲೂ ಪ್ರಾರ್ಥಿಸಿರಿ.
    ಪ್ರತಿದಿನವೂ ಅವನನ್ನು ಆಶೀರ್ವದಿಸಿರಿ.
16 ಹೊಲಗಳು ಯಥೇಚ್ಚವಾಗಿ ಧಾನ್ಯಬೆಳೆಯಲಿ.
    ಬೆಟ್ಟಗಳು ಬೆಳೆಗಳಿಂದ ತುಂಬಿಹೋಗಲಿ.
ಹೊಲಗಳು ಲೆಬನೋನಿನಲ್ಲಿರುವ ಹೊಲಗಳಂತೆ ಫಲವತ್ತಾಗಿರಲಿ.
    ಬಯಲುಗಳು ಹುಲ್ಲಿನಿಂದ ಆವೃತಿಯಾಗಿರುವಂತೆ ಪಟ್ಟಣಗಳು ಜನರಿಂದ ತುಂಬಿಹೋಗಲಿ.
17 ರಾಜನು ಎಂದೆಂದಿಗೂ ಪ್ರಸಿದ್ಧನಾಗಿರಲಿ.
    ಸೂರ್ಯನು ಇರುವವರೆಗೂ ಜನರು ಅವನ ಹೆಸರನ್ನು ಜ್ಞಾಪಿಸಿಕೊಳ್ಳಲಿ.
ಅವನಿಂದ ಜನರಿಗೆ ಆಶೀರ್ವಾದವಾಗಲಿ.
    ಜನರೆಲ್ಲರೂ ಅವನನ್ನು ಆಶೀರ್ವದಿಸಲಿ.

18 ಇಸ್ರೇಲರ ದೇವರಾದ ಯೆಹೋವನನ್ನು ಕೊಂಡಾಡಿರಿ.
    ಅಂಥ ಅದ್ಭುತಕಾರ್ಯಗಳನ್ನು ದೇವರೊಬ್ಬನೇ ಮಾಡಬಲ್ಲನು!
19 ಆತನ ಪ್ರಭಾವಪೂರ್ಣವಾದ ಹೆಸರನ್ನು ಎಂದೆಂದಿಗೂ ಕೊಂಡಾಡಿರಿ!
    ಆತನ ಮಹಿಮೆ ಭೂಲೋಕವನ್ನೆಲ್ಲಾ ತುಂಬಿಕೊಳ್ಳಲಿ!
    ಆಮೆನ್, ಆಮೆನ್!

20 (ಇಷಯನ ಮಗನಾದ ದಾವೀದನ ಪ್ರಾರ್ಥನೆಗಳು ಇಲ್ಲಿಗೆ ಮುಕ್ತಾಯಗೊಂಡವು.)

ಯೋಬನು 42:10-17

10 ಯೋಬನು ತನ್ನ ಸ್ನೇಹಿತರಿಗೋಸ್ಕರ ಪ್ರಾರ್ಥಿಸಿದ ಮೇಲೆ ಯೆಹೋವನು ಯೋಬನನ್ನು ಅಭಿವೃದ್ಧಿಪಡಿಸಿದನು. ಆತನು ಯೋಬನಿಗೆ, ಮೊದಲಿಗಿಂತ ಎರಡರಷ್ಟು ಹೆಚ್ಚಿಗೆ ಆಸ್ತಿಯನ್ನು ಕೊಟ್ಟನು. 11 ಯೋಬನ ಸಹೋದರಸಹೋದರಿಯರೂ ಅವನ ಪರಿಚಯಸ್ಥರೂ ಅವನ ಮನೆಗೆ ಬಂದರು; ಅವನೊಂದಿಗೆ ಊಟ ಮಾಡಿದರು; ಯೆಹೋವನು ಅವನಿಗೆ ಬಹಳ ಕಷ್ಟವನ್ನು ಬರಮಾಡಿದ್ದರಿಂದ ಅವರು ಮರುಕದಿಂದ ಅವನನ್ನು ಸಂತೈಸಿದರು. ಪ್ರತಿಯೊಬ್ಬರು ಯೋಬನಿಗೆ ಒಂದು ಬೆಳ್ಳಿಯ ನಾಣ್ಯವನ್ನೂ ಒಂದು ಚಿನ್ನದ ಉಂಗುರವನ್ನೂ ಕೊಟ್ಟರು.

12 ಯೆಹೋವನು ಯೋಬನ ಜೀವಿತದ ಅಂತಿಮ ಸ್ಥಿತಿಯನ್ನು ಮೊದಲನೆ ಸ್ಥಿತಿಗಿಂತಲೂ ಹೆಚ್ಚಾಗಿ ಆಶೀರ್ವದಿಸಿದನು. ಯೋಬನಿಗೆ ಹದಿನಾಲ್ಕು ಸಾವಿರ ಕುರಿಗಳೂ ಆರು ಸಾವಿರ ಒಂಟೆಗಳೂ ಒಂದು ಸಾವಿರ ಜೊತೆ ಎತ್ತುಗಳೂ ಒಂದು ಸಾವಿರ ಹೆಣ್ಣು ಕತ್ತೆಗಳೂ ಇದ್ದವು. 13 ಅಲ್ಲದೆ ಯೋಬನು ಏಳು ಗಂಡುಮಕ್ಕಳನ್ನೂ ಮೂವರು ಹೆಣ್ಣುಮಕ್ಕಳನ್ನೂ ಪಡೆದನು. 14 ಯೋಬನು ಮೊದಲನೆ ಮಗಳಿಗೆ “ಯೆಮೀಮ” ಎಂತಲೂ, ಎರಡನೆಯವಳಿಗೆ “ಕೆಚೀಯ” ಎಂತಲೂ ಮೂರನೆಯವಳಿಗೆ “ಕೆರೆನ್ಹಪ್ಪೂಕ್” ಎಂತಲೂ ಹೆಸರಿಟ್ಟನು. 15 ಯೋಬನ ಹೆಣ್ಣುಮಕ್ಕಳು ಇಡೀ ದೇಶದಲ್ಲೇ ಅತ್ಯಂತ ಸೌಂದರ್ಯವುಳ್ಳ ಸ್ತ್ರೀಯರಾಗಿದ್ದರು. ಯೋಬನು ತನ್ನ ಗಂಡುಮಕ್ಕಳಿಗೆ ಆಸ್ತಿಯನ್ನು ಕೊಟ್ಟಂತೆ ತನ್ನ ಹೆಣ್ಣುಮಕ್ಕಳಿಗೂ ಕೊಟ್ಟನು.

16 ಆ ಮೇಲೆ ಯೋಬನು ನೂರನಲವತ್ತು ವರ್ಷಗಳ ಕಾಲ ಬದುಕಿದ್ದನು. ಅವನು ತನ್ನ ಮಕ್ಕಳನ್ನೂ ಮೊಮ್ಮಕ್ಕಳನ್ನೂ ಮರಿಮಕ್ಕಳನ್ನೂ ಮರಿಮೊಮ್ಮಕ್ಕಳನ್ನೂ ಮರಿಮೊಮ್ಮಕ್ಕಳಿಗೆ ಹುಟ್ಟಿದ ಮಕ್ಕಳನ್ನೂ ಕಣ್ಣಾರೆಕಂಡನು. 17 ತರುವಾಯ ಯೋಬನು ಮುಪ್ಪಿನ ಮುದುಕನಾಗಿ ತೀರಿಕೊಂಡನು.

ಲೂಕ 8:16-21

ನಿಮ್ಮ ತಿಳುವಳಿಕೆಯನ್ನು ಉಪಯೋಗಿಸಿರಿ

(ಮಾರ್ಕ 4:21-25)

16 “ಯಾವ ವ್ಯಕ್ತಿಯೂ ದೀಪವನ್ನು ಹಚ್ಚಿ ಅದನ್ನು ಪಾತ್ರೆಯ ಒಳಗಾಗಲಿ ಮಂಚದ ಕೆಳಗಾಗಲಿ ಬಚ್ಚಿಡುವುದಿಲ್ಲ. ಮನೆಯೊಳಗೆ ಬರುವವರಿಗೆ ಸಾಕಷ್ಟು ಬೆಳಕು ದೊರೆಯಲಿ ಎಂದು ದೀಪವನ್ನು ದೀಪಸ್ತಂಭದ ಮೇಲೆ ಇಡುತ್ತಾನೆ. 17 ಬೆಳಕಿಗೆ ಬಾರದ ಯಾವ ರಹಸ್ಯವೂ ಇಲ್ಲ; ಬಯಲಿಗೆ ಬಾರದ ಯಾವ ಗುಟ್ಟೂ ಇಲ್ಲ. 18 ಆದ್ದರಿಂದ ನೀವು ಕಿವಿಗೊಡುವಾಗ ಜಾಗರೂಕರಾಗಿರಿ; ಸ್ವಲ್ಪ ತಿಳುವಳಿಕೆ ಇರುವ ವ್ಯಕ್ತಿಯು ಹೆಚ್ಚು ತಿಳುವಳಿಕೆಯನ್ನು ಹೊಂದುವನು. ಆದರೆ ತಿಳುವಳಿಕೆ ಇಲ್ಲದ ವ್ಯಕ್ತಿಯು ತನಗಿದೆ ಎಂದುಕೊಂಡಿದ್ದ ತಿಳುವಳಿಕೆಯನ್ನೂ ಕಳೆದುಕೊಳ್ಳುವನು” ಎಂದು ಹೇಳಿದನು.

ಯೇಸುವಿನ ಶಿಷ್ಯರೇ ಆತನ ಕುಟುಂಬದವರು

(ಮತ್ತಾಯ 12:46-50; ಮಾರ್ಕ 3:31-35)

19 ಯೇಸುವಿನ ತಾಯಿ ಮತ್ತು ತಮ್ಮಂದಿರು ಆತನನ್ನು ಭೇಟಿಯಾಗಲು ಬಂದರು. ಅಲ್ಲಿ ಬಹಳ ಜನರು ಇದ್ದುದರಿಂದ ಯೇಸುವಿನ ತಾಯಿಯಾಗಲಿ ಆತನ ತಮ್ಮಂದಿರಾಗಲಿ ಆತನ ಬಳಿಗೆ ಹೋಗಲು ಸಾಧ್ಯವಾಗಲಿಲ್ಲ. ಅಲ್ಲಿದ್ದ ಒಬ್ಬನು, 20 “ನಿನ್ನ ತಾಯಿ ಮತ್ತು ತಮ್ಮಂದಿರು ಹೊರಗೆ ನಿಂತಿದ್ದಾರೆ. ಅವರು ನಿನ್ನನ್ನು ನೋಡಬೇಕೆಂದಿದ್ದಾರೆ” ಎಂದು ಯೇಸುವಿಗೆ ತಿಳಿಸಿದನು.

21 ಅದಕ್ಕೆ ಯೇಸು, “ದೇವರ ವಾಕ್ಯವನ್ನು ಕೇಳಿ ಅದಕ್ಕೆ ವಿಧೇಯರಾಗುವ ಜನರೇ ನನ್ನ ತಾಯಿ ಮತ್ತು ನನ್ನ ತಮ್ಮಂದಿರು!” ಎಂದು ಉತ್ತರಕೊಟ್ಟನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International