Revised Common Lectionary (Semicontinuous)
12 ಜೆರುಸಲೇಮೇ, ಯೆಹೋವನನ್ನು ಸ್ತುತಿಸು!
ಚೀಯೋನೇ, ನಿನ್ನ ದೇವರನ್ನು ಸ್ತುತಿಸು!
13 ಜೆರುಸಲೇಮೇ, ದೇವರು ನಿನ್ನ ಬಾಗಿಲುಗಳ ಸರಳುಗಳನ್ನು ಬಲಪಡಿಸುವನು;
ನಿನ್ನ ನಗರದಲ್ಲಿರುವ ಜನರನ್ನು ಆಶೀರ್ವದಿಸುವನು.
14 ಆತನು ನಿಮ್ಮ ದೇಶದಲ್ಲಿ ಶಾಂತಿಯನ್ನು ನೆಲೆಗೊಳಿಸಿದನು.
ನಿಮ್ಮನ್ನು ಶ್ರೇಷ್ಠವಾದ ಗೋಧಿಯಿಂದ ತೃಪ್ತಿಪಡಿಸಿದನು.
15 ಆತನು ಭೂಮಿಗೆ ಆಜ್ಞಾಪಿಸಲು
ಅದು ಕೂಡಲೆ ವಿಧೇಯವಾಗುತ್ತದೆ.
16 ನೆಲವು ಉಣ್ಣೆಯಂತೆ ಬಿಳುಪಾಗುವವರೆಗೆ ಆತನು ಮಂಜನ್ನು ಬೀಳಿಸುವನು;
ಹಿಮವನ್ನು ಗಾಳಿಯ ಮೂಲಕ ಧೂಳಿನಂತೆ ಹರಡುವನು.
17 ಆತನು ಆಕಾಶದಿಂದ ಕಲ್ಲುಗಳಂತಿರುವ ಆಲಿಕಲ್ಲನ್ನು ಸುರಿಸುವನು;
ಯಾವನೂ ಚಳಿಯಲ್ಲಿ ಹೊರಗಡೆ ಇರಲಾರನು.
18 ಆತನು ಮತ್ತೊಂದು ಆಜ್ಞೆಯನ್ನು ಹೊರಡಿಸುವನು; ಆಗ ಬಿಸಿಗಾಳಿಯು ಮತ್ತೆ ಬೀಸುವುದು;
ಮಂಜು ಕರಗಿಹೋಗುವುದು. ನೀರು ಹರಿಯತೊಡಗುವುದು.
19 ಆತನು ಯಾಕೋಬಿಗೆ ತನ್ನ ಆಜ್ಞೆಗಳನ್ನು ಕೊಟ್ಟನು.
ಇಸ್ರೇಲಿಗೆ ತನ್ನ ಕಟ್ಟಳೆಗಳನ್ನೂ ನಿಯಮಗಳನ್ನೂ ಕೊಟ್ಟನು.
20 ಆತನು ಬೇರೆ ಯಾವ ಜನಾಂಗದವರಿಗೂ ಹೀಗೆ ಮಾಡಲಿಲ್ಲ.
ಆತನು ಅನ್ಯಜನಾಂಗಗಳವರಿಗೆ ತನ್ನ ಕಟ್ಟಳೆಗಳನ್ನು ಉಪದೇಶಿಸಲಿಲ್ಲ.
ಯೆಹೋವನಿಗೆ ಸ್ತೋತ್ರವಾಗಲಿ!
ಮುನ್ನುಡಿ
1 ದಾವೀದನ ಮಗನಾದ ಸೊಲೊಮೋನನ ಜ್ಞಾನೋಕ್ತಿಗಳು. ಸೊಲೊಮೋನನು ಇಸ್ರೇಲರ ರಾಜನಾಗಿದ್ದನು. 2 ಜ್ಞಾನವನ್ನು ಮತ್ತು ಶಿಕ್ಷಣವನ್ನು ಪಡೆದುಕೊಳ್ಳುವುದಕ್ಕೂ ಬುದ್ಧಿವಾದವನ್ನು ಗ್ರಹಿಸಿಕೊಳ್ಳುವುದಕ್ಕೂ ಈ ಜ್ಞಾನೋಕ್ತಿಗಳು ಸಹಾಯಕವಾಗಿವೆ. 3 ಈ ಜ್ಞಾನೋಕ್ತಿಗಳು ಯೋಗ್ಯವಾರ್ಗದಲ್ಲಿ ಜೀವಿಸಲು ಅಂದರೆ ಯಥಾರ್ಥವಾಗಿಯೂ ನ್ಯಾಯವಾಗಿಯೂ ಮತ್ತು ಒಳ್ಳೆಯವರಾಗಿಯೂ ಇರಲು ಉಪದೇಶಿಸುತ್ತವೆ. 4 ಈ ಜ್ಞಾನೋಕ್ತಿಗಳು ಸಾಮಾನ್ಯರಿಗೆ ಜಾಣತನವನ್ನು ಯೌವನಸ್ಥರಿಗೆ ಜ್ಞಾನವನ್ನೂ ತಿಳುವಳಿಕೆಯನ್ನೂ ಕೊಡುತ್ತವೆ. 5 ಈ ಜ್ಞಾನೋಕ್ತಿಗಳಿಗೆ ಕಿವಿಗೊಡುವುದರ ಮೂಲಕ ಜ್ಞಾನಿಗಳು ತಮ್ಮ ಪಾಂಡಿತ್ಯವನ್ನೂ ವಿವೇಕಿಗಳು ತಮ್ಮ ಉಚಿತಾಲೋಚನೆಗಳನ್ನೂ ಹೆಚ್ಚಿಸಿಕೊಳ್ಳಲಿ. 6 ಆಗ ಅವರು ಗಾದೆಗಳನ್ನು, ಸಾಮತಿಗಳನ್ನು, ಜ್ಞಾನದ ನುಡಿಗಳನ್ನು ಮತ್ತು ಒಗಟುಗಳನ್ನು ಅರ್ಥಮಾಡಿಕೊಳ್ಳುವರು.
7 ಯೆಹೋವನಲ್ಲಿಟ್ಟಿರುವ ಭಯಭಕ್ತಿಯೇ ಜ್ಞಾನದ ಮೂಲ. ಮೂರ್ಖರಾದರೋ ಜ್ಞಾನವನ್ನೂ ಶಿಕ್ಷೆಯನ್ನೂ ದ್ವೇಷಿಸುವರು.
ನಿಜವಾದ ಜ್ಞಾನ
13 ನಿಮ್ಮಲ್ಲಿ ಜ್ಞಾನವಂತರಾಗಲಿ ಬದ್ಧಿವಂತರಾಗಲಿ ಇದ್ದಾರೋ? ಅಂಥವನು ತನ್ನ ಜ್ಞಾನವನ್ನು ಯೋಗ್ಯವಾಗಿ ಬದುಕುವುದರ ಮೂಲಕ ತೋರ್ಪಡಿಸಲಿ. ಅವನು ಒಳ್ಳೆಯ ಕಾರ್ಯಗಳನ್ನು ದೀನತೆಯಿಂದ ಮಾಡಲಿ. ಜ್ಞಾನಿಯಾದವನು ಕೊಚ್ಚಿಕೊಳ್ಳುವುದಿಲ್ಲ. 14 ನೀವು ಸ್ವಾರ್ಥಿಗಳೂ ತೀಕ್ಷ್ಣವಾದ ಮತ್ಸರವನ್ನು ಹೃದಯದಲ್ಲಿ ಹೊಂದಿರುವವರೂ ಆಗಿದ್ದರೆ, ನೀವು ಕೊಚ್ಚಿಕೊಳ್ಳುವುದರಲ್ಲಿ ಅರ್ಥವೇ ಇಲ್ಲ. ಏಕೆಂದರೆ ಅದು ಕೇವಲ ಸುಳ್ಳಷ್ಟೇ. 15 ಇಂಥ “ಜ್ಞಾನ”ವು ದೇವರಿಂದ ಬರದೆ ಲೋಕದಿಂದ ಬರುತ್ತದೆ. ಅದು ಆತ್ಮ ಸಂಬಂಧವಾದುದಲ್ಲ. ಅದು ದೆವ್ವಗಳಿಂದ ಬಂದುದು. 16 ಹೊಟ್ಟೆಕಿಚ್ಚು ಮತ್ತು ಸ್ವಾರ್ಥತೆಗಳು ಎಲ್ಲಿರುವವೋ ಅಲ್ಲಿ ಗಲಿಬಿಲಿಯೂ ಎಲ್ಲಾ ಬಗೆಯ ನೀಚತನಗಳೂ ಇರುತ್ತವೆ. 17 ಆದರೆ ದೇವರಿಂದ ಬರುವ ಜ್ಞಾನವು ಹೀಗಿರುತ್ತದೆ: ಮೊದಲನೆಯದಾಗಿ ಅದು ಪರಿಶುದ್ಧವಾದದ್ದು. ಅದು ಶಾಂತಿದಾಯಕವಾದದ್ದು, ಸಾತ್ವಿಕವಾದದ್ದು ಮತ್ತು ಸುಲಭವಾಗಿ ಮೆಚ್ಚಿಕೊಳ್ಳುವಂಥದ್ದು. ಈ ಜ್ಞಾನವು ತೊಂದರೆಯಲ್ಲಿರುವ ಜನರಿಗೆ ಸಹಾಯ ಮಾಡಲು ಮತ್ತು ಇತರ ಜನರಿಗೆ ಒಳ್ಳೆಯದನ್ನು ಮಾಡಲು ಯಾವಾಗಲೂ ಸಿದ್ಧವಾಗಿರುತ್ತದೆ. ಈ ಜ್ಞಾನವು ಯಾವಾಗಲೂ ನ್ಯಾಯವಾದದ್ದು ಮತ್ತು ಯಥಾರ್ಥವಾದದ್ದು. 18 ಶಾಂತಿ ಸ್ಥಾಪಿಸುವುದಕ್ಕಾಗಿ ಸಮಾಧಾನಕರವಾದ ರೀತಿಯಲ್ಲಿ ಕಾರ್ಯ ಮಾಡುವವರು ಯೋಗ್ಯವಾದ ಬದುಕಿನಿಂದ ಬರುವ ಉತ್ತಮ ಫಲಗಳನ್ನು ಪಡೆಯುತ್ತಾರೆ.
Kannada Holy Bible: Easy-to-Read Version. All rights reserved. © 1997 Bible League International