Revised Common Lectionary (Semicontinuous)
ಸಮಾಧಾನದ ಅರಸನು ಬರುವನು
11 ಇಷಯನ ಬುಡದಿಂದ ಒಂದು ಚಿಗುರು ಒಡೆಯುವುದು. ಆ ಕೊಂಬೆಯು ಇಷಯನ ಬೇರಿನಿಂದ ಬೆಳೆಯುವುದು. 2 ಯೆಹೋವನ ಆತ್ಮವು ಆತನಲ್ಲಿದ್ದು, ಜ್ಞಾನ, ತಿಳುವಳಿಕೆ, ಮಾರ್ಗದರ್ಶನ ಮತ್ತು ಸಾಮರ್ಥ್ಯವನ್ನು ದಯಪಾಲಿಸುವದು; ಯೆಹೋವನನ್ನು ತಿಳಿದುಕೊಳ್ಳಲು ಮತ್ತು ಗೌರವಿಸಲು ಆ ಮಗುವಿಗೆ ಸಹಾಯಿಸುವುದು. 3 ಆತನು ಯೆಹೋವನನ್ನು ಸನ್ಮಾನಿಸುತ್ತಾ ಸಂತೋಷಿಸುವನು.
ಆತನು ಜನರಿಗೆ ನ್ಯಾಯತೀರಿಸುವುದು ಹೊರತೋರಿಕೆಯ ಆಧಾರದ ಮೇಲಲ್ಲ; ಕೇಳಿಕೊಂಡದ್ದರ ಆಧಾರದ ಮೇಲೂ ಅಲ್ಲ. 4-5 ಆತನು ಬಡಜನರಿಗೆ ಅನ್ಯಾಯಮಾಡದೆ ನ್ಯಾಯವಾದ ತೀರ್ಪನ್ನು ಕೊಡುವನು, ದೇಶದ ಬಡಜನರಿಗೋಸ್ಕರವಾಗಿ ಮಾಡುವ ಆಲೋಚನೆಯನ್ನು ಪಕ್ಷಪಾತವಿಲ್ಲದೆ ಮಾಡುವನು. ಆತನು ಜನರಿಗೆ ಶಿಕ್ಷೆ ಕೊಡಬೇಕೆಂದು ತೀರ್ಮಾನಿಸಿದರೆ ಅದನ್ನು ಆಜ್ಞಾಪಿಸಿ ಶಿಕ್ಷಿಸುವನು. ದುಷ್ಟರಿಗೆ ಮರಣದಂಡನೆಯಾಗಬೇಕೆಂದು ಆತನು ತೀರ್ಮಾನಿಸಿದರೆ, ಆತನು ಆಜ್ಞಾಪಿಸಿ ಕೊಲ್ಲಿಸುವನು. ನ್ಯಾಯವೇ ಆತನಿಗೆ ನಡುಕಟ್ಟು, ಒಳ್ಳೆಯತನವೇ ಆತನಿಗೆ ಸೊಂಟಪಟ್ಟಿಯಾಗಿವೆ.
6 ಆ ಸಮಯದಲ್ಲಿ ತೋಳಗಳು ಕುರಿಮರಿಯೊಂದಿಗೆ ಸಮಾಧಾನದಿಂದ ಒಟ್ಟಾಗಿ ವಾಸಿಸುವವು. ಚಿರತೆಯು ಆಡಿನ ಮರಿಗಳೊಂದಿಗೆ ಮಲಗಿಕೊಳ್ಳುವದು. ಕರುಗಳು, ಪ್ರಾಯದ ಸಿಂಹಗಳು, ಹೋರಿಗಳು ಒಟ್ಟಾಗಿ ಸಮಾಧಾನದಿಂದ ಜೀವಿಸುವವು. ಒಂದು ಚಿಕ್ಕಮಗು ಅವುಗಳನ್ನು ನಡಿಸುವುದು. 7 ದನಗಳೂ ಕರಡಿಗಳೂ ಜೊತೆಯಾಗಿರುವವು. ಅವುಗಳ ಮರಿಗಳೆಲ್ಲಾ ಒಂದಕ್ಕೊಂದು ಹಾನಿಮಾಡದೆ ಒಟ್ಟಾಗಿ ಮಲಗಿಕೊಳ್ಳುವವು. ಸಿಂಹಗಳು ದನಗಳಂತೆ ಹುಲ್ಲು ತಿನ್ನುವವು. ಹಾವುಗಳು ಸಹ ಜನರಿಗೆ ಹಾನಿ ಮಾಡುವದಿಲ್ಲ. 8 ಮಗುವು ನಾಗರಹಾವಿನ ಹುತ್ತದ ಬಳಿ ಆಡುತ್ತಾ ಹುತ್ತದೊಳಗೆ ಕೈಹಾಕುವದು.
9 ಯಾರೂ ಪರಸ್ಪರ ಹಾನಿಮಾಡುವದಿಲ್ಲ. ನನ್ನ ಪವಿತ್ರ ಪರ್ವತದಲ್ಲಿನ ಜನರು ವಸ್ತುಗಳನ್ನು ನಾಶಮಾಡಲು ಇಷ್ಟಪಡುವದಿಲ್ಲ. ಯಾಕೆಂದರೆ ಆಗ ಜನರು ನಿಜವಾಗಿಯೂ ಯೆಹೋವನನ್ನು ಅರಿತಿರುವರು. ಸಾಗರದಲ್ಲಿ ನೀರು ತುಂಬಿದಂತೆ ಲೋಕವೆಲ್ಲಾ ಆತನ ವಿಷಯವೆಂಬ ಜ್ಞಾನದಿಂದ ತುಂಬುವದು.
8 ಹಿಂಡುಗಳ ಗೋಪುರವೇ,
ನಿನ್ನ ಸಮಯವು ಬರುವದು.
ಚೀಯೋನಿನ ಒಫೆಲ್ ಗುಡ್ಡವೇ,
ನಿನಗೆ ತಿರುಗಿ ಅಧಿಕಾರ ದೊರಕುವುದು.
ಹೌದು, ಮೊದಲಿನಂತೆಯೇ
ಜೆರುಸಲೇಮಿನಲ್ಲೇ ರಾಜ್ಯವಿರುವುದು.
ಬಾಬಿಲೋನಿಗೆ ಇಸ್ರೇಲರು ಯಾಕೆ ಹೋಗಬೇಕು?
9 ಯಾಕೆ ನೀನು ಗಟ್ಟಿಯಾಗಿ ಅರಚಿಕೊಳ್ಳುವೆ?
ನೀನು ನಿನ್ನ ನಾಯಕನನ್ನು ಕಳೆದುಕೊಂಡೆಯಾ?
ನಿನ್ನ ರಾಜನು ನಿನ್ನನ್ನು ಬಿಟ್ಟುಹೋದನೋ?
ಈ ಕಾರಣದಿಂದ ನೀನು ಪ್ರಸವವೇದನೆಯನ್ನು ಅನುಭವಿಸುವ ಸ್ತ್ರೀಯಂತೆ ಶ್ರಮೆಯನ್ನು ಅನುಭವಿಸುತ್ತಿರುವೆಯೋ?
10 ಚೀಯೋನ್ ಕುಮಾರಿಯೇ, ಪ್ರಸವವೇದನೆಯಲ್ಲಿರುವ ಸ್ತ್ರೀಯಂತೆ
ನೀನು ನೋವನ್ನು ಅನುಭವಿಸು.
ನೀನು ಜೆರುಸಲೇಮ್ ಪಟ್ಟಣದಿಂದ
ಹೊರಗೆ ಹೋಗಿ ಹೊಲದಲ್ಲಿ ವಾಸಿಸುವೆ.
ನಾನು ಹೇಳುವುದೇನೆಂದರೆ, ನೀನು ಬಾಬಿಲೋನಿಗೆ ಹೋಗುವೆ,
ಆದರೆ ಅಲ್ಲಿ ನೀನು ರಕ್ಷಿಸಲ್ಪಡುವೆ.
ಯೆಹೋವನು ಅಲ್ಲಿಗೆ ಬಂದು ನಿನ್ನನ್ನು ರಕ್ಷಿಸುವನು.
ನಿನ್ನ ವೈರಿಗಳಿಂದ ನಿನ್ನನ್ನು ಬಿಡುಗಡೆ ಮಾಡುವನು.
ಯೆಹೋವನು ಜನಾಂಗಗಳನ್ನು ನಾಶಮಾಡುವನು
11 ಎಷ್ಟೋ ಜನಾಂಗಗಳು ನಿನ್ನ ವಿರುದ್ಧ ಯುದ್ಧಕ್ಕೆ ಬಂದಿವೆ.
“ಅಲ್ಲಿ ನೋಡಿ, ಚೀಯೋನ್, ಬನ್ನಿ ಆಕ್ರಮಣ ಮಾಡೋಣ” ಎಂದು ಹೇಳುವರು.
12 ಅವರು ತಮ್ಮ ಯೋಜನೆಯನ್ನು ಹಾಕುತ್ತಾರೆ.
ಆದರೆ ಯೆಹೋವನ ಯೋಜನೆಯೇನೆಂದು ಅವರು ಅರಿಯರು.
ಯೆಹೋವನು ತನ್ನ ಜನರನ್ನು ಒಂದು ವಿಶೇಷ ಉದ್ದೇಶಕ್ಕಾಗಿ ಇಲ್ಲಿಗೆ ತಂದಿದ್ದಾನೆ.
ಆ ಜನರು ಕಣಕ್ಕೆ ಹಾಕಿದ ಸಿವುಡುಗಳಂತೆ ನಜ್ಜುಗುಜ್ಜಾಗುವರು.
ಇಸ್ರೇಲ್ ಜಯಗೊಂಡು ಇತರ ಜನಾಂಗಗಳನ್ನು ನಾಶಮಾಡುವದು
13 “ಚೀಯೋನ್ ಕುಮಾರಿಯೇ ಎದ್ದೇಳು, ಆ ಜನರನ್ನು ಪುಡಿಮಾಡು!
ನಾನು ನಿನ್ನನ್ನು ಬಲಶಾಲಿಯನ್ನಾಗಿ ಮಾಡುವೆನು.
ಕಬ್ಬಿಣದ ಕೊಂಬುಗಳಿರುವಂತೆ, ತಾಮ್ರದ ಗೊರಸುಗಳಿರುವಂತೆ ನಿನ್ನನ್ನು ಮಾಡುವೆನು.
ಎಷ್ಟೋ ಜನರನ್ನು ನೀನು ತುಂಡುತುಂಡು ಮಾಡುವೆ.
ಅವರ ಐಶ್ವರ್ಯವನ್ನು ನೀನು ಯೆಹೋವನಿಗೆ ಕೊಡುವೆ.
ಅವರ ನಿಕ್ಷೇಪಗಳನ್ನು ಇಡೀ ಭೂಮಿಗೆ ಒಡೆಯನಾಗಿರುವ ಯೆಹೋವನಿಗೆ ಅರ್ಪಿಸುವೆ.”
31 “ಈ ಕಾಲದ ಜನರ ಬಗ್ಗೆ ನಾನು ಏನು ಹೇಳಲಿ? ನಾನು ಅವರನ್ನು ಯಾವುದಕ್ಕೆ ಹೋಲಿಸಲಿ? ಅವರು ಯಾರನ್ನು ಹೋಲುತ್ತಾರೆ? 32 ಈ ಕಾಲದ ಜನರು ಮಾರುಕಟ್ಟೆಯಲ್ಲಿ ಕುಳಿತುಕೊಂಡಿರುವ ಮಕ್ಕಳಿಗೆ ಹೋಲುತ್ತಾರೆ. ಒಂದು ಗುಂಪಿನ ಮಕ್ಕಳು ಇನ್ನೊಂದು ಗುಂಪಿನ ಮಕ್ಕಳನ್ನು ಕರೆದು,
‘ನಾವು ನಿಮಗೋಸ್ಕರ ವಾದ್ಯಬಾರಿಸಿದೆವು,
ಆದರೆ ನೀವು ಕುಣಿಯಲಿಲ್ಲ;
ನಾವು ದುಃಖದ ಹಾಡನ್ನು ಹಾಡಿದೆವು,
ಆದರೆ ನೀವು ಅಳಲಿಲ್ಲ’
ಎಂದು ಹೇಳುತ್ತಾರೆ. 33 ಸ್ನಾನಿಕ ಯೋಹಾನನು ಬಂದನು. ಅವನು ಇತರರಂತೆ ತಿನ್ನಲಿಲ್ಲ ಅಥವಾ ದ್ರಾಕ್ಷಾರಸವನ್ನು ಕುಡಿಯಲಿಲ್ಲ. ಆದರೆ ನೀವು, ‘ಅವನಿಗೆ ದೆವ್ವ ಹಿಡಿದಿದೆ’ ಎಂದು ಹೇಳುತ್ತೀರಿ. 34 ಮನುಷ್ಯಕುಮಾರನು ಬಂದನು. ಅವನು ಇತರ ಜನರಂತೆ ಊಟಮಾಡುತ್ತಾನೆ ಮತ್ತು ದ್ರಾಕ್ಷಾರಸವನ್ನು ಕುಡಿಯುತ್ತಾನೆ. ಆದರೆ ನೀವು, ‘ನೋಡಿರಿ! ಅವನೊಬ್ಬ ಹೊಟ್ಟೆಬಾಕ, ಕುಡುಕ! ಸುಂಕವಸೂಲಿಗಾರರು ಮತ್ತು ಇತರ ಕೆಟ್ಟಜನರೇ ಅವನ ಸ್ನೇಹಿತರು!’ ಎನ್ನುತ್ತೀರಿ. 35 ಆದರೆ ಜ್ಞಾನವು ತನ್ನ ಕಾರ್ಯಗಳಿಂದಲೇ ತನ್ನನ್ನು ಸಮರ್ಥಿಸಿಕೊಳ್ಳುವುದು” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International