Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಚೆಫನ್ಯ 3:14-20

ಸಂತಸದ ಹಾಡು

14 ಜೆರುಸಲೇಮೇ, ಹಾಡುತ್ತಾ ಸಂತೋಷಿಸುತ್ತಿರು.
    ಇಸ್ರೇಲೇ, ಸಂತೋಷದಿಂದ ಆರ್ಭಟಿಸು.
    ಜೆರುಸಲೇಮೇ, ಸಂತೋಷದಿಂದಿದ್ದು ಉಲ್ಲಾಸಿಸು.
15 ಯಾಕೆಂದರೆ ನಿನ್ನ ಯೆಹೋವನು ನಿನ್ನ ಶಿಕ್ಷೆಯನ್ನು ನಿಲ್ಲಿಸಿದ್ದಾನೆ.
    ನಿನ್ನ ವೈರಿಗಳ ಬಲವಾದ ಬುರುಜುಗಳನ್ನು ನಾಶಮಾಡಿದ್ದಾನೆ.
ಇಸ್ರೇಲಿನ ರಾಜನೇ, ನಿನ್ನ ದೇವರು ನಿನ್ನೊಂದಿಗಿದ್ದಾನೆ.
    ನಿನಗೆ ಕೆಟ್ಟದ್ದು ಸಂಭವಿಸುತ್ತದೆಂದು ನೀನು ಚಿಂತಿಸದಿರು.
16 ಆ ಸಮಯದಲ್ಲಿ ಜೆರುಸಲೇಮಿಗೆ ಹೀಗೆ ಹೇಳಲಾಗುವುದು:
    “ಬಲವಾಗಿರು! ಭಯಪಡದಿರು!
17 ನಿನ್ನ ದೇವರಾದ ಯೆಹೋವನು ನಿನ್ನೊಂದಿಗಿದ್ದಾನೆ.
    ಆತನು ರಣಶೂರನು.
ನಿನ್ನನ್ನು ರಕ್ಷಿಸಿ ನಿನ್ನ ಮೇಲಿನ ತನ್ನ ಪ್ರೀತಿಯನ್ನು ತೋರ್ಪಡಿಸುವನು.
    ನಿನ್ನೊಂದಿಗೆ ಎಷ್ಟು ಸಂತೋಷದಲ್ಲಿರುವನೆಂದು ತೋರಿಸುವನು.
ನಿನ್ನೊಂದಿಗೆ ನಗಾಡುತ್ತಾ ಹರ್ಷಿಸುವನು.
18     ನಿನ್ನ ನಾಚಿಕೆಯನ್ನು ತೆಗೆದುಬಿಡುವನು.
ನಿನ್ನನ್ನು ಹಿಂಸಿಸುವ ಜನರನ್ನು ನಿಲ್ಲಿಸುವನು.
19 ಆ ಸಮಯದಲ್ಲಿ, ನಿನಗೆ ಕೇಡುಮಾಡುವವರನ್ನು ಶಿಕ್ಷಿಸುವೆನು.
    ಗಾಯಗೊಂಡಿರುವ ನಿನ್ನ ಜನರನ್ನು ರಕ್ಷಿಸುವೆನು.
ತಮ್ಮ ದೇಶದಿಂದ ದೂರಕ್ಕೆ ಚದರಿಸಲ್ಪಟ್ಟ ಜನರನ್ನು ನಾನು ಹಿಂದಕ್ಕೆ ಕರೆದುಕೊಂಡು ಬರುವೆನು.
    ನಾನು ಅವರನ್ನು ಪ್ರಸಿದ್ಧಿಪಡಿಸುವೆನು.
    ಎಲ್ಲಾ ಜನರು ಅವರನ್ನು ಹೊಗಳುವರು.
20 ಆಗ ನಿಮ್ಮೆಲ್ಲರನ್ನು ನಾನು ಹಿಂದಕ್ಕೆ ಕರೆತರುವೆನು.
    ನಿನ್ನನ್ನು ಪ್ರಸಿದ್ಧಿಪಡಿಸುವೆನು.
ಎಲ್ಲಾ ಜನರು ನಿನ್ನನ್ನು ಹೊಗಳುವರು.
    ನಿನ್ನ ಕಣ್ಣೆದುರಿಗೆ ಸೆರೆಹಿಡಿದವರನ್ನು ಕರೆತರುವಾಗ ಹಾಗೆ ಆಗುವದು”
ಇದು ಯೆಹೋವನ ನುಡಿ.

ಯೆಶಾಯ 12:2-6

ದೇವರು ನನ್ನನ್ನು ರಕ್ಷಿಸುತ್ತಾನೆ.
    ಆತನಲ್ಲಿ ಭರವಸವಿಟ್ಟಿದ್ದೇನೆ. ಆದ್ದರಿಂದ ನಾನು ಭಯಪಡೆನು. ಆತನು ನನ್ನನ್ನು ರಕ್ಷಿಸುತ್ತಾನೆ.
ಯೆಹೋವನೇ ನನ್ನ ಬಲವು.
    ಆತನು ನನ್ನನ್ನು ರಕ್ಷಿಸುತ್ತಾನೆ. ನಾನು ಆತನಿಗೆ ಸ್ತೋತ್ರಗಾನ ಹಾಡುವೆನು.”

ರಕ್ಷಣೆಯೆಂಬ ಬುಗ್ಗೆಯಿಂದ ನೀರನ್ನು ತೆಗೆದುಕೊ.
    ಆಗ ನೀನು ಸಂತೋಷಗೊಳ್ಳುವೆ.
ಆಗ ನೀನು, “ಯೆಹೋವನಿಗೆ ಸ್ತೋತ್ರವಾಗಲಿ, ಆತನ ಹೆಸರಿನ ಮಹತ್ವವನ್ನು ವರ್ಣಿಸಿರಿ!
    ಆತನು ಜನಾಂಗಗಳಲ್ಲಿ ಮಾಡಿದ ಕಾರ್ಯಗಳನ್ನು ಸಾರಿರಿ.
    ಆತನ ಹೆಸರು ಮಹೋನ್ನತವೆಂದು ಜ್ಞಾಪಕಪಡಿಸಿರಿ!” ಎಂದು ಹೇಳುವೆ.
ಯೆಹೋವನಿಗೆ ಸ್ತೋತ್ರಗಾನ ಹಾಡಿರಿ.
    ಯಾಕೆಂದರೆ ಆತನು ಮಹಾಕಾರ್ಯಗಳನ್ನು ನಡೆಸಿದ್ದಾನೆ.
ದೇವರ ಬಗ್ಗೆ ಎಲ್ಲರಿಗೂ ಪ್ರಕಟಿಸಿರಿ. ಇಡೀ ಲೋಕಕ್ಕೆ ಸಾರಿರಿ.
    ಎಲ್ಲಾ ಜನರು ಇದನ್ನು ತಿಳಿಯಲಿ.
ಚೀಯೋನಿನ ನಿವಾಸಿಗಳೇ, ಇದರ ವಿಷಯವಾಗಿ ಹರ್ಷಧ್ವನಿ ಮಾಡಿರಿ.
    ಇಸ್ರೇಲರ ಪರಿಶುದ್ಧನು ನಿಮ್ಮೊಂದಿಗೆ ಬಲವಾಗಿದ್ದಾನೆ.
    ಆದ್ದರಿಂದ ಹರ್ಷಿಸಿರಿ.

ಫಿಲಿಪ್ಪಿಯವರಿಗೆ 4:4-7

ಯಾವಾಗಲೂ ಪ್ರಭುವಿನಲ್ಲಿ ಆನಂದಿಸಿರಿ; ಆನಂದಪಡಿರಿ ಎಂದು ಮತ್ತೆ ಹೇಳುತ್ತೇನೆ.

ನಿಮ್ಮ ಮೃದುಸ್ವಭಾವವನ್ನೂ ಕರುಣೆಯನ್ನೂ ಜನರೆಲ್ಲರೂ ನೋಡುವಂತಾಗಲಿ. ಪ್ರಭುವು ಬೇಗನೆ ಬರುತ್ತಾನೆ. ಯಾವುದರ ಬಗ್ಗೆಯೂ ಚಿಂತಿಸಬೇಡಿ. ಆದರೆ ಪ್ರಾರ್ಥನೆ ಮಾಡುತ್ತಾ ನಿಮ್ಮ ಅಗತ್ಯತೆಗಳಿಗೆಲ್ಲಾ ದೇವರಲ್ಲಿ ವಿಜ್ಞಾಪಿಸಿರಿ. ನೀವು ಪ್ರಾರ್ಥನೆ ಮಾಡುವಾಗಲೆಲ್ಲಾ ದೇವರಿಗೆ ಕೃತಜ್ಞತಾಸ್ತುತಿ ಮಾಡಿರಿ. ದೇವಶಾಂತಿಯು ಕ್ರಿಸ್ತ ಯೇಸುವಿನಲ್ಲಿ ನಿಮ್ಮ ಹೃದಯಗಳನ್ನೂ ಮನಸ್ಸುಗಳನ್ನೂ ಕಾಯುವುದು. ದೇವರು ಕೊಡುವ ಆ ಶಾಂತಿಯು ನಾವು ಅರ್ಥಮಾಡಿಕೊಳ್ಳಲಾಗದಷ್ಟು ಅಗಮ್ಯವಾಗಿದೆ.

ಲೂಕ 3:7-18

ಜನರು ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಲು ಬಂದರು. ಯೋಹಾನನು ಅವರಿಗೆ. “ನೀವು ವಿಷಕರವಾದ ಹಾವುಗಳಂತಿದ್ದೀರಿ! ಬರಲಿರುವ ದೇವರ ಕೋಪದಿಂದ ತಪ್ಪಿಸಿಕೊಳ್ಳುವುದಕ್ಕೆ ನಿಮ್ಮನ್ನು ಎಚ್ಚರಿಸಿದವರು ಯಾರು? ನಿಮ್ಮ ಮನಸ್ಸು ನಿಜವಾಗಿಯೂ ದೇವರ ಕಡೆಗೆ ತಿರುಗಿಕೊಂಡಿರುವುದಾದರೆ ಅದನ್ನು ನಿಮ್ಮ ತಕ್ಕಕಾರ್ಯಗಳಿಂದ ತೋರಿಸಿರಿ. ‘ಅಬ್ರಹಾಮನು ನಮ್ಮ ತಂದೆ’ ಎಂದು ಜಂಬ ಕೊಚ್ಚಿಕೊಳ್ಳಬೇಡಿರಿ. ದೇವರು ಅಬ್ರಹಾಮನಿಗೆ ಇಲ್ಲಿರುವ ಕಲ್ಲುಗಳಿಂದ ಮಕ್ಕಳನ್ನು ಕೊಡಬಲ್ಲನೆಂದು ನಾನು ನಿಮಗೆ ಹೇಳುತ್ತೇನೆ. ಮರಗಳನ್ನು ಕಡಿಯುವುದಕ್ಕೆ ಕೊಡಲಿಯು ಸಿದ್ಧವಾಗಿದೆ. ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನು ಕತ್ತರಿಸಿ ಬೆಂಕಿಯಲ್ಲಿ ಹಾಕಲಾಗುವುದು” ಎಂದು ಹೇಳಿದನು.

10 ಆದ್ದರಿಂದ ಜನರು, “ಈಗ ನಾವೇನು ಮಾಡಬೇಕು?” ಎಂದು ಕೇಳಿದರು.

11 ಯೋಹಾನನು, “ನಿಮ್ಮಲ್ಲಿ ಎರಡು ಅಂಗಿಗಳಿದ್ದರೆ, ಏನೂ ಇಲ್ಲದವನಿಗೆ ಒಂದು ಕೊಡಿರಿ. ನಿಮ್ಮಲ್ಲಿ ಆಹಾರವಿದ್ದರೆ, ಅದನ್ನೂ ಹಂಚಿಕೊಡಿರಿ” ಎಂದು ಹೇಳಿದನು.

12 ಸುಂಕವಸೂಲಿಗಾರರು[a] ಸಹ ದೀಕ್ಷಾಸ್ನಾನ ಮಾಡಿಸಿಕೊಳ್ಳಲು ಯೋಹಾನನ ಬಳಿಗೆ ಬಂದರು. ಅವರು ಯೋಹಾನನಿಗೆ, “ಉಪದೇಶಕನೇ, ನಾವೇನು ಮಾಡಬೇಕು?” ಎಂದು ಕೇಳಿದರು.

13 ಯೋಹಾನನು ಅವರಿಗೆ, “ನೇಮಕವಾದ ತೆರಿಗೆಗಿಂತ ಹೆಚ್ಚಾಗಿ ಜನರಿಂದ ತೆಗೆದುಕೊಳ್ಳಬೇಡಿರಿ” ಎಂದು ಹೇಳಿದನು.

14 ಸೈನಿಕರು ಯೋಹಾನನಿಗೆ, “ನಾವೇನು ಮಾಡಬೇಕು?” ಎಂದು ಕೇಳಿದರು.

ಯೋಹಾನನು ಅವರಿಗೆ, “ಲಂಚ ತೆಗೆದುಕೊಳ್ಳಬೇಡಿ, ಸುಳ್ಳುದೂರು ಹೇಳಬೇಡಿರಿ. ನಿಮಗೆ ಸಿಕ್ಕುವ ಸಂಬಳದಲ್ಲಿ ಸಂತೋಷವಾಗಿರಿ” ಎಂದು ಹೇಳಿದನು.

15 ಜನರೆಲ್ಲರೂ ಕ್ರಿಸ್ತನ ಆಗಮನವನ್ನು ನಿರೀಕ್ಷಿಸುತ್ತಿದ್ದುದರಿಂದ ಅವರು ಯೋಹಾನನ ಬಗ್ಗೆ ಆಶ್ಚರ್ಯಪಟ್ಟು, “ಒಂದುವೇಳೆ ಈತನೇ ಕ್ರಿಸ್ತನಾಗಿರಬಹುದು” ಎಂದು ಭಾವಿಸಿಕೊಂಡರು.

16 ಅದಕ್ಕೆ ಯೋಹಾನನು, “ನಾನು ನಿಮಗೆ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸುತ್ತೇನೆ. ಆದರೆ ನನಗಿಂತಲೂ ಶಕ್ತನಾಗಿರುವಾತನು ಬರುತ್ತಾನೆ. ಆತನ ಪಾದರಕ್ಷೆಗಳನ್ನು ಬಿಚ್ಚುವದಕ್ಕೂ ನನಗೆ ಯೋಗ್ಯತೆ ಇಲ್ಲ. ಆತನು ನಿಮಗೆ ಪವಿತ್ರಾತ್ಮನಲ್ಲಿಯೂ, ಬೆಂಕಿಯಲ್ಲಿಯೂ ದೀಕ್ಷಾಸ್ನಾನ ಮಾಡಿಸುವನು. 17 ಆತನು ರಾಶಿಯನ್ನು ಶುದ್ಧಮಾಡುವುದಕ್ಕೆ[b] ಸಿದ್ಧನಾಗಿ ಬರುವನು. ಆತನು ಒಳ್ಳೆಯ ಕಾಳನ್ನು ಹೊಟ್ಟಿನಿಂದ ಬೇರ್ಪಡಿಸಿ ತನ್ನ ಕಣಜದಲ್ಲಿ ಹಾಕುವನು. ನಂತರ ಹೊಟ್ಟನ್ನು ಆರದ ಬೆಂಕಿಯಲ್ಲಿ ಸುಟ್ಟುಬಿಡುವನು” ಎಂದು ಉತ್ತರಕೊಟ್ಟನು. 18 ಯೋಹಾನನು ಜನರಿಗೆ ಇನ್ನೂ ಅನೇಕ ವಿಷಯಗಳನ್ನು ಹೇಳಿ ಪ್ರೋತ್ಸಾಹಿಸುತ್ತಾ ಸುವಾರ್ತೆಯನ್ನು ಬೋಧಿಸುತ್ತಿದ್ದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International