Revised Common Lectionary (Semicontinuous)
2 ದೇವರು ನನ್ನನ್ನು ರಕ್ಷಿಸುತ್ತಾನೆ.
ಆತನಲ್ಲಿ ಭರವಸವಿಟ್ಟಿದ್ದೇನೆ. ಆದ್ದರಿಂದ ನಾನು ಭಯಪಡೆನು. ಆತನು ನನ್ನನ್ನು ರಕ್ಷಿಸುತ್ತಾನೆ.
ಯೆಹೋವನೇ ನನ್ನ ಬಲವು.
ಆತನು ನನ್ನನ್ನು ರಕ್ಷಿಸುತ್ತಾನೆ. ನಾನು ಆತನಿಗೆ ಸ್ತೋತ್ರಗಾನ ಹಾಡುವೆನು.”
3 ರಕ್ಷಣೆಯೆಂಬ ಬುಗ್ಗೆಯಿಂದ ನೀರನ್ನು ತೆಗೆದುಕೊ.
ಆಗ ನೀನು ಸಂತೋಷಗೊಳ್ಳುವೆ.
4 ಆಗ ನೀನು, “ಯೆಹೋವನಿಗೆ ಸ್ತೋತ್ರವಾಗಲಿ, ಆತನ ಹೆಸರಿನ ಮಹತ್ವವನ್ನು ವರ್ಣಿಸಿರಿ!
ಆತನು ಜನಾಂಗಗಳಲ್ಲಿ ಮಾಡಿದ ಕಾರ್ಯಗಳನ್ನು ಸಾರಿರಿ.
ಆತನ ಹೆಸರು ಮಹೋನ್ನತವೆಂದು ಜ್ಞಾಪಕಪಡಿಸಿರಿ!” ಎಂದು ಹೇಳುವೆ.
5 ಯೆಹೋವನಿಗೆ ಸ್ತೋತ್ರಗಾನ ಹಾಡಿರಿ.
ಯಾಕೆಂದರೆ ಆತನು ಮಹಾಕಾರ್ಯಗಳನ್ನು ನಡೆಸಿದ್ದಾನೆ.
ದೇವರ ಬಗ್ಗೆ ಎಲ್ಲರಿಗೂ ಪ್ರಕಟಿಸಿರಿ. ಇಡೀ ಲೋಕಕ್ಕೆ ಸಾರಿರಿ.
ಎಲ್ಲಾ ಜನರು ಇದನ್ನು ತಿಳಿಯಲಿ.
6 ಚೀಯೋನಿನ ನಿವಾಸಿಗಳೇ, ಇದರ ವಿಷಯವಾಗಿ ಹರ್ಷಧ್ವನಿ ಮಾಡಿರಿ.
ಇಸ್ರೇಲರ ಪರಿಶುದ್ಧನು ನಿಮ್ಮೊಂದಿಗೆ ಬಲವಾಗಿದ್ದಾನೆ.
ಆದ್ದರಿಂದ ಹರ್ಷಿಸಿರಿ.
8 ಪಾಪದಿಂದ ತುಂಬಿದ ಇಸ್ರೇಲ್ ದೇಶವನ್ನು ಯೆಹೋವನು ನೋಡುತ್ತಿದ್ದಾನೆ.
ಆತನು ಹೇಳಿದ್ದೇನೆಂದರೆ,
“ನಾನು ಇಸ್ರೇಲರನ್ನು ಈ ಭೂಮುಖದಿಂದ ಅಳಿಸಿಬಿಡುವೆನು.
ಆದರೆ ಯಾಕೋಬನ ಸಂತತಿಯವರನ್ನು ಸಂಪೂರ್ಣವಾಗಿ ನಾಶಮಾಡುವುದಿಲ್ಲ.
9 ಇಸ್ರೇಲನ್ನು ನಾಶನ ಮಾಡುವದಕ್ಕಾಗಿ ಆಜ್ಞಾಪಿಸುವೆನು.
ಇಸ್ರೇಲರನ್ನು ನಾನು ಪರದೇಶಗಳಲ್ಲಿ, ಚದರಿಸಿಬಿಡುವೆನು.
ಒಬ್ಬನು ಜಾಳಿಗೆಯಲ್ಲಿ ಹಿಟ್ಟನ್ನು ಜಾಳಿಸುವಂತೆ ಇರುವುದು.
ಒಳ್ಳೆಯ ಹಿಟ್ಟು ಜಾಳಿಗೆಯ ರಂಧ್ರದ ಮೂಲಕ ಕೆಳಗೆ ಬಿದ್ದರೆ,
ಹಿಟ್ಟಿನ ಗಂಟುಗಳು ಜಾಳಿಗೆಯ ಮೇಲೆ ಸಿಕ್ಕಿಕೊಳ್ಳುವವು.
ಯಾಕೋಬನ ಕುಟುಂಬಕ್ಕೆ ಇದೇ ರೀತಿಯಾಗುವುದು.
10 “ನನ್ನ ಜನರಲ್ಲಿ ಪಾಪಿಗಳು ಹೇಳುತ್ತಾರೆ:
‘ನಮಗೆ ಯಾವ ಕೇಡೂ ಸಂಭವಿಸುವುದಿಲ್ಲ.’
ಆದರೆ ಅವರೆಲ್ಲಾ ಕತ್ತಿಯಿಂದ ಸಾಯುವರು.”
ರಾಜ್ಯವು ತಿರುಗಿ ಸ್ಥಾಪಿಸಲ್ಪಡುವದೆಂದು ದೇವರ ವಾಗ್ದಾನ
11 “ದಾವೀದನ ಗುಡಾರವು ಕುಸಿದುಬಿದ್ದಿದೆ.
ಆದರೆ ಆ ದಿವಸಗಳಲ್ಲಿ ತಿರುಗಿ ಅದನ್ನು ಮೇಲಕ್ಕೆತ್ತುವೆನು.
ಗೋಡೆಯಲ್ಲಿರುವ ರಂಧ್ರಗಳನ್ನು ನಾನು ಸರಿಪಡಿಸುವೆನು.
ಬಿದ್ದುಹೋದ ಕಟ್ಟಡಗಳನ್ನು ತಿರುಗಿ ಕಟ್ಟುವೆನು.
ಮುಂಚೆ ಹೇಗಿತ್ತೋ ಹಾಗೆಯೇ ಇರುವದು.
12 ಆಗ ಎದೋಮಿನಲ್ಲಿ ಉಳಿದವರು
ಮತ್ತು ನನ್ನ ಹೆಸರಿನಿಂದ ಕರೆಯಲ್ಪಟ್ಟ ಜನರು ಸಹಾಯಕ್ಕಾಗಿ ಯೆಹೋವನನ್ನು ನೋಡುವರು.”
ಇದು ಯೆಹೋವನ ನುಡಿ.
ಆತನು ಅವುಗಳನ್ನು ನೆರವೇರಿಸುವನು.
13 ಯೆಹೋವನು ಹೇಳುವುದೇನೆಂದರೆ, “ಒಂದು ಸಮಯವು ಬರುವುದು,
ಆಗ ಉಳುವವನು ಕೊಯ್ಯುವವನನ್ನೇ
ಮೀರಿಸಿ ಮುಂದೆ ಹೋಗುವನು.
ದ್ರಾಕ್ಷಿನೆಡುವವನು ದ್ರಾಕ್ಷಿಯನ್ನು ಕೊಯ್ಯುವನನ್ನೇ
ಮೀರಿಸಿ ಮುಂದೆ ಹೋಗುವನು.
ಬೆಟ್ಟಗಳಿಂದಲೂ ಪರ್ವತಗಳಿಂದಲೂ
ಸಿಹಿ ದ್ರಾಕ್ಷಾರಸವು ಹರಿದುಬರುವುದು.
14 ಸೆರೆಯಿಂದ ಬಿಡಿಸಿ ನನ್ನ ಜನರಾದ ಇಸ್ರೇಲನ್ನು
ಹಿಂದಕ್ಕೆ ಕರೆತರುವೆನು.
ಪಾಳುಬಿದ್ದ ಪಟ್ಟಣಗಳನ್ನು ತಿರುಗಿ ಕಟ್ಟಿ
ಅದರಲ್ಲಿ ವಾಸಿಸುವರು.
ದ್ರಾಕ್ಷಿತೋಟವನ್ನು ಮಾಡಿ
ಅದರಿಂದ ಸಿಗುವ ದ್ರಾಕ್ಷಾರಸವನ್ನು ಕುಡಿಯುವರು.
ತೋಟಗಳನ್ನು ಮಾಡಿ
ಅದರ ಫಲಗಳನ್ನು ಭೋಗಿಸುವರು.
15 ನಾನು ನನ್ನ ಜನರನ್ನು ಅವರ ದೇಶದಲ್ಲಿ ಸ್ಥಾಪಿಸುವೆನು.
ನಾನು ಕೊಟ್ಟಿರುವ ದೇಶದಿಂದ ಅವರು ಕೀಳಲ್ಪಡುವುದಿಲ್ಲ.”
ನಿಮ್ಮ ದೇವರಾದ ಯೆಹೋವನು ಈ ಸಂಗತಿಗಳನ್ನು ಹೇಳಿದ್ದಾನೆ.
ಯೋಹಾನನ ಜನನ
57 ಎಲಿಜಬೇತಳಿಗೆ ಹೆರಿಗೆ ಕಾಲ ಬಂದಿತು. ಆಕೆಯಲ್ಲಿ ಒಬ್ಬ ಮಗನು ಹುಟ್ಟಿದನು. 58 ಪ್ರಭುವು ಆಕೆಗೆ ತೋರಿದ ಮಹಾಕರುಣೆಯು ಆಕೆಯ ನೆರೆಹೊರೆಯವರಿಗೆ ಮತ್ತು ಬಂಧುಗಳಿಗೆ ತಿಳಿಯಿತು. ಅವರು ಆಕೆಯ ವಿಷಯದಲ್ಲಿ ಸಂತೋಷಪಟ್ಟರು.
59 ಮಗುವಿಗೆ ಎಂಟು ದಿನವಾದಾಗ ಅವರು ಸುನ್ನತಿ ಮಾಡಿಸುವುದಕ್ಕಾಗಿ ಬಂದರು. ಅವರು ಆ ಮಗುವಿಗೆ “ಜಕರೀಯ” ಎಂಬ ಹೆಸರು ಇಡಬೇಕೆಂದಿದ್ದರು. ಏಕೆಂದರೆ ಅದು ಮಗುವಿನ ತಂದೆಯ ಹೆಸರಾಗಿತ್ತು. 60 ಆದರೆ ಮಗುವಿನ ತಾಯಿ, “ಇಲ್ಲ! ಆತನಿಗೆ ‘ಯೋಹಾನ’ ಎಂಬ ಹೆಸರಿಡಬೇಕು” ಎಂದು ಹೇಳಿದಳು.
61 ಜನರು ಎಲಿಜಬೇತಳಿಗೆ, “ನಿನ್ನ ಕುಟುಂಬದಲ್ಲಿ ಯಾರಿಗೂ ಈ ಹೆಸರು ಇಲ್ಲವಲ್ಲಾ!” ಎಂದು ಹೇಳಿದರು. 62 ಬಳಿಕ ಅವರು ಅವನ ತಂದೆಗೆ ಸನ್ನೆಮಾಡಿ, “ಆತನಿಗೆ ಯಾವ ಹೆಸರಿಡಬೇಕು?” ಎಂದು ಕೇಳಿದರು.
63 ಆಗ ಜಕರೀಯನು ಸನ್ನೆಮಾಡಿ, ಒಂದು ಹಲಗೆಯನ್ನು ತರಿಸಿಕೊಂಡು, “ಈತನ ಹೆಸರು ಯೋಹಾನ” ಎಂದು ಬರೆದನು. ಜನರೆಲ್ಲರಿಗೂ ಆಶ್ಚರ್ಯವಾಯಿತು. 64 ಆ ಕೂಡಲೇ ಜಕರೀಯನು ಮತ್ತೆ ಮಾತಾಡಬಲ್ಲವನಾಗಿ ದೇವರನ್ನು ಸ್ತುತಿಸತೊಡಗಿದನು. 65 ಇದನ್ನು ಕೇಳಿ ನೆರೆಹೊರೆಯವರಿಗೆಲ್ಲಾ ಭಯವಾಯಿತು. ಜುದೇಯದ ಗುಡ್ಡಪ್ರದೇಶದಲ್ಲೆಲ್ಲಾ ಈ ಸಂಗತಿಗಳ ಬಗ್ಗೆ ಜನರು ಮಾತನಾಡತೊಡಗಿದರು. 66 ಈ ಸಂಗತಿಗಳನ್ನು ಕೇಳಿದ ಜನರೆಲ್ಲರು ಆಶ್ಚರ್ಯಪಟ್ಟು “ಈ ಮಗು (ಯೋಹಾನ) ಬೆಳೆದು ದೊಡ್ಡವನಾದ ಮೇಲೆ ಎಂಥ ವ್ಯಕ್ತಿಯಾಗುವನೋ?” ಎಂದು ಯೋಚಿಸತೊಡಗಿದರು. ಏಕೆಂದರೆ ಪ್ರಭುವು ಈ ಮಗುವಿನ ಸಂಗಡವಿದ್ದನು.
Kannada Holy Bible: Easy-to-Read Version. All rights reserved. © 1997 Bible League International