Revised Common Lectionary (Semicontinuous)
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.
126 ಯೆಹೋವನು ನಮ್ಮನ್ನು ಸೆರೆಯಿಂದ ತಿರಿಗಿ
ಚೀಯೋನಿಗೆ ಬರಮಾಡಿದಾಗ ನಾವು ಕನಸು ಕಂಡವರಂತಿದ್ದೆವು!
2 ನಾವು ನಗುತ್ತಿದ್ದೆವು; ಹರ್ಷಗೀತೆಗಳನ್ನು ಹಾಡುತ್ತಿದ್ದೆವು.
“ಯೆಹೋವನು ಇಸ್ರೇಲರಿಗೆ ಮಹತ್ಕಾರ್ಯಗಳನ್ನು ಮಾಡಿದ್ದಾನೆ”
ಎಂದು ಅನ್ಯ ಜನಾಂಗಗಳು ಮಾತಾಡಿಕೊಂಡರು.
3 ಹೌದು, ನಾವು ಸಂತೋಷದಿಂದ್ದೇವೆ ಯಾಕೆಂದರೆ ಯೆಹೋವನು ನಮಗೋಸ್ಕರ ಮಹತ್ಕಾರ್ಯಗಳನ್ನು ಮಾಡಿದನು.
4 ಯೆಹೋವನೇ, ಬತ್ತಿಹೋದ ತೊರೆಗಳು ನೀರಿನಿಂದ
ಮತ್ತೆ ತುಂಬಿ ಹರಿಯುವಂತೆ ನಮ್ಮನ್ನು ಬಿಡಿಸು.
5 ಅಳುತ್ತಾ ಬೀಜವನ್ನು ಬಿತ್ತುವವನು
ಹರ್ಷದಿಂದ ಕೊಯ್ಯುವನು.
6 ಅಳುತ್ತಾ ಹೊಲಕ್ಕೆ ಬೀಜವನ್ನು ಹೊತ್ತುಕೊಂಡು ಹೋಗುವವನು
ಹರ್ಷದಿಂದ ಸಿವುಡುಗಳನ್ನು ಹೊತ್ತುಕೊಂಡು ಬರುವನು!
ಇಸ್ರೇಲಿನ ಶಿಕ್ಷೆಯು ಅಂತ್ಯವಾಗುವದು
40 ನಿನ್ನ ದೇವರು ಹೇಳುವುದೇನೆಂದರೆ:
“ನನ್ನ ಜನರನ್ನು ಸಂತೈಸು, ಸಂತೈಸು.
2 ಜೆರುಸಲೇಮಿನೊಂದಿಗೆ ಕರುಣೆಯಿಂದ ಮಾತಾಡು.
ಜೆರುಸಲೇಮಿಗೆ ಹೀಗೆ ಹೇಳು,
‘ನಿನ್ನ ಸೆರೆವಾಸದ ಸಮಯವು ಅಂತ್ಯವಾಯಿತು.
ನೀನು ನಿನ್ನ ಪಾಪಗಳ ಶಿಕ್ಷೆಯನ್ನು ಅನುಭವಿಸಿದೆ.’
ಜೆರುಸಲೇಮ್ ಮಾಡಿದ ಪ್ರತಿಯೊಂದು ಪಾಪಕೃತ್ಯಗಳಿಗಾಗಿ ಯೆಹೋವನು ಎರಡು ಬಾರಿ ಶಿಕ್ಷಿಸಿದನು.”
3 ಒಬ್ಬ ಮನುಷ್ಯನು ಕೂಗಿಹೇಳುವುದನ್ನು ಕೇಳಿರಿ:
“ಯೆಹೋವನಿಗೆ ಅಡವಿಯಲ್ಲಿ ದಾರಿಯನ್ನು ಸಿದ್ಧಮಾಡಿರಿ!
ನಮ್ಮ ದೇವರಿಗೆ ಅಲ್ಲಿ ಮಾರ್ಗವನ್ನು ನೆಟ್ಟಗೆಮಾಡಿರಿ!
4 ತಗ್ಗುಗಳನ್ನು ಸಮತಟ್ಟು ಮಾಡಿರಿ.
ಎಲ್ಲಾ ಬೆಟ್ಟಗುಡ್ಡಗಳನ್ನು ನೆಲಸಮ ಮಾಡಿರಿ.
ಕೊರಕಲು ರಸ್ತೆಗಳನ್ನು ನೆಟ್ಟಗೆ ಮಾಡಿರಿ.
ಏರುತಗ್ಗು ನೆಲವನ್ನು ಸಮಗೊಳಿಸಿರಿ.
5 ಆಗ ಯೆಹೋವನ ಮಹಿಮೆಯು ಪ್ರದರ್ಶಿಸಲ್ಪಡುವದು.
ಆಗ ಎಲ್ಲರೂ ಯೆಹೋವನ ಮಹಿಮೆಯನ್ನು ನೋಡುವರು.
ಯೆಹೋವನೇ ಇವುಗಳನ್ನು ಸ್ವತಃ ನುಡಿದಿದ್ದಾನೆ.”
6 ಒಂದು ಸ್ವರವು “ಮಾತನಾಡು” ಎಂದಿತು.
ಅದಕ್ಕೆ ಮನುಷ್ಯನು, “ಏನು ಮಾತಾಡಲಿ” ಅಂದನು.
ಆಗ ಸ್ವರವು, “ಜನರು ಶಾಶ್ವತವಾಗಿ ಜೀವಿಸುವದಿಲ್ಲ, ಅವರೆಲ್ಲರೂ ಹುಲ್ಲಿನಂತಿದ್ದಾರೆ.
ಅವರ ಒಳ್ಳೆಯತನವು ಕಾಡುಹೂವಿನಂತಿದೆ.
7 ಯೆಹೋವನ ಕಡೆಯಿಂದ ಒಂದು ಬಲವಾದ ಗಾಳಿಯು ಹುಲ್ಲಿನ ಮೇಲೆ ಬೀಸಿತು.
ಆ ಹುಲ್ಲು ಒಣಗಿಹೋಯಿತು.
ಕಾಡಿನ ಪುಷ್ಪವು ಬಾಡಿಹೋಯಿತು.
8 ಜನರೆಲ್ಲರೂ ಹುಲ್ಲಿನಂತಿದ್ದಾರೆ. ಹುಲ್ಲು ಸಾಯುತ್ತದೆ. ಪುಷ್ಪಗಳು ಉದುರುತ್ತವೆ.
ಆದರೆ ನಮ್ಮ ದೇವರ ಮಾತುಗಳು ಶಾಶ್ವತವಾಗಿವೆ” ಎಂದು ಹೇಳಿತು.
ದೇವರ ಸುವಾರ್ತೆ-ರಕ್ಷಣೆ
9 ಚೀಯೋನೇ, ಸಾರಿ ತಿಳಿಸಲು ನಿನಗೆ ಒಂದು ಶುಭವಾರ್ತೆಯಿದೆ.
ಉನ್ನತ ಪರ್ವತಕ್ಕೆ ಏರಿಹೋಗಿ ಶುಭವಾರ್ತೆಯನ್ನು ಗಟ್ಟಿಯಾಗಿ ಸಾರು!
ಜೆರುಸಲೇಮೇ, ನಿನಗೆ ತಿಳಿಸಲು ಒಳ್ಳೆಯ ವಾರ್ತೆ ಇದೆ.
ಹೆದರಬೇಡ, ಅದನ್ನು ಗಟ್ಟಿಯಾಗಿ ಸಾರು.
ಯೆಹೂದದ ಎಲ್ಲಾ ನಗರಗಳಲ್ಲಿ ತಿಳಿಸು:
“ಇಗೋ! ನಿನ್ನ ದೇವರು ಇಲ್ಲಿದ್ದಾನೆ.”
10 ಇಗೋ, ನನ್ನ ಒಡೆಯನಾದ ಯೆಹೋವನು ಬಲಸಾಮರ್ಥ್ಯಗಳೊಡನೆ ಬರುತ್ತಿದ್ದಾನೆ.
ಆತನು ತನ್ನ ಪರಾಕ್ರಮದಿಂದ ಎಲ್ಲಾ ಜನರನ್ನು ಆಳುವನು.
ಆತನು ತನ್ನ ಜನರಿಗೆ ಪ್ರತಿಫಲಗಳನ್ನು ತರುವನು.
ಅವರ ಸಂಬಳವು ಆತನ ಕೈಯಲ್ಲಿದೆ.
11 ಯೆಹೋವನು ತನ್ನ ಜನರನ್ನು ನಡಿಸುತ್ತಾನೆ.
ಕುರಿಗಳನ್ನು ನಡಿಸುವ ಕುರುಬನಂತೆ ಯೆಹೋವನು ತನ್ನ ಭುಜಬಲದಿಂದ ತನ್ನ ಕುರಿಗಳನ್ನು ಒಟ್ಟುಗೂಡಿಸುವನು.
ಯೆಹೋವನು ಕುರಿಮರಿಗಳನ್ನು ಎತ್ತಿಕೊಂಡು ಅಪ್ಪಿಕೊಳ್ಳುವನು.
ಅದರ ತಾಯಿ ಆತನ ಪಕ್ಕದಲ್ಲೇ ನಡೆಯುವವು.
22 ದೇವರು ಸೃಷ್ಟಿಮಾಡಿದ ಪ್ರತಿಯೊಂದೂ, ಪ್ರಸವವೇದನೆ ಪಡುತ್ತಿರುವ ಸ್ತ್ರೀಯಂತೆ ನೋವಿನಿಂದ ನರಳುತ್ತಾ ಇಂದಿನವರೆಗೂ ಕಾಯುತ್ತಿದೆ ಎಂಬುದು ನಮಗೆ ಗೊತ್ತಿದೆ. 23 ಜಗತ್ತು ಮಾತ್ರವೇ ಅಲ್ಲ, ನಾವು ಸಹ ನಮ್ಮೊಳಗೆ ನೋವಿನಿಂದ ನರಳುತ್ತಾ ಕಾಯುತ್ತಿದ್ದೇವೆ. ದೇವರ ವಾಗ್ದಾನದ ಮೊದಲನೆ ಭಾಗವಾಗಿರುವ ಪವಿತ್ರಾತ್ಮನನ್ನು ನಾವು ಹೊಂದಿಕೊಂಡಿದ್ದೇವೆ. ನಮ್ಮನ್ನು ತನ್ನ ಸ್ವಂತ ಮಕ್ಕಳನ್ನಾಗಿ ಮಾಡಿಕೊಳ್ಳಲು ದೇವರು ಮಾಡುತ್ತಿರುವ ಕಾರ್ಯವು ಸಂಪೂರ್ಣಗೊಳ್ಳುವುದನ್ನೇ ಅಂದರೆ, ನಮ್ಮ ದೇಹಗಳಿಗಾಗುವ ಬಿಡುಗಡೆಯನ್ನೇ ನಾವು ಎದುರು ನೋಡುತ್ತಿದ್ದೇವೆ. 24 ನಾವು ರಕ್ಷಣೆ ಹೊಂದಿದ್ದೇವೆ ಮತ್ತು ನಮಗಿನ್ನೂ ಆ ನಿರೀಕ್ಷೆಯಿದೆ. ನಾವು ಯಾವುದಕ್ಕೋಸ್ಕರ ಕಾಯುತ್ತಿದ್ದೇವೊ ಅದನ್ನು ಕಾಣಬಲ್ಲವರಾಗಿದ್ದರೆ, ಅದು ನಿಜವಾದ ನಿರೀಕ್ಷೆಯಲ್ಲ. ಜನರು ತಾವು ಈಗಾಗಲೇ ಹೊಂದಿರುವ ಯಾವುದನ್ನೂ ನಿರೀಕ್ಷಿಸುವುದಿಲ್ಲ. 25 ಆದರೆ ನಾವಿನ್ನೂ ಹೊಂದಿಕೊಂಡಿಲ್ಲದೆ ಇರುವುದನ್ನು ನಿರೀಕ್ಷಿಸುತ್ತಾ ತಾಳ್ಮೆಯಿಂದ ಅದಕ್ಕಾಗಿ ಕಾಯುತ್ತಿದ್ದೇವೆ.
Kannada Holy Bible: Easy-to-Read Version. All rights reserved. © 1997 Bible League International