Revised Common Lectionary (Semicontinuous)
68 “ಇಸ್ರೇಲರ ಪ್ರಭುವಾದ ದೇವರಿಗೆ ಸ್ತೋತ್ರವಾಗಲಿ.
ಆತನು ಬಂದು ತನ್ನ ಜನರನ್ನು ಬಿಡುಗಡೆ ಮಾಡಿದ್ದಾನೆ.
69 ತನ್ನ ಸೇವಕನಾದ ದಾವೀದನ ಮನೆತನದಿಂದ
ದೇವರು ವೀರರಕ್ಷಕನನ್ನು ನಮಗೆ ಕೊಟ್ಟಿದ್ದಾನೆ.
70 ಇದನ್ನು ಆತನು ಪೂರ್ವಕಾಲದ
ತನ್ನ ಪವಿತ್ರ ಪ್ರವಾದಿಗಳ ಮೂಲಕ ತಿಳಿಸಿದ್ದಾನೆ.
71 ದೇವರು ನಮ್ಮನ್ನು ನಮ್ಮ ವೈರಿಗಳಿಂದಲೂ
ದ್ವೇಷಿಗಳ ಹಿಡಿತದಿಂದಲೂ ರಕ್ಷಿಸಿದ್ದಾನೆ.
72 ಕರುಣೆ ತೋರುವುದಾಗಿ ನಮ್ಮ ಪಿತೃಗಳಿಗೆ ನೀಡಿದ
ತನ್ನ ಪವಿತ್ರ ವಾಗ್ದಾನವನ್ನು ಆತನು ಜ್ಞಾಪಿಸಿಕೊಂಡಿದ್ದಾನೆ.
73 ನಮ್ಮ ವೈರಿಗಳ ಹಿಡಿತದಿಂದ ನಮ್ಮನ್ನು ಬಿಡಿಸುವುದಾಗಿ ದೇವರು ನಮ್ಮ ಪಿತೃವಾದ ಅಬ್ರಹಾಮನಿಗೆ ವಾಗ್ದಾನ ಮಾಡಿದ್ದಾನೆ.
74-75 ಏಕೆಂದರೆ ನಮ್ಮ ಜೀವಮಾನವೆಲ್ಲಾ ನಾವು ಆತನ ಸನ್ನಿಧಿಯಲ್ಲಿ ನೀತಿವಂತರೂ ಪರಿಶುದ್ಧರೂ ಆಗಿದ್ದು
ಭಯವಿಲ್ಲದೆ ಆತನ ಸೇವೆ ಮಾಡಬೇಕೆಂಬುದೇ ಆತನ ಉದ್ದೇಶವಾಗಿತ್ತು.
76 “ಮಗುವೇ, ನೀನು ಮಹೋನ್ನತನ ಪ್ರವಾದಿ ಎನಿಸಿಕೊಳ್ಳುವೆ.
ಪ್ರಭುವಿನ ಮುಂದೆ ಹೋಗಿ ಆತನ ಬರುವಿಕೆಗಾಗಿ ಜನರನ್ನು ಸಿದ್ಧಮಾಡುವೆ.
77 ಪಾಪಕ್ಷಮೆಯ ಮೂಲಕವಾಗಿ ರಕ್ಷಣೆಯಾಗುವುದೆಂಬ ತಿಳುವಳಿಕೆಯನ್ನು ನೀನು ಜನರಿಗೆ ಕೊಡುವೆ.
78 “ನಮ್ಮ ದೇವರ ಮಹಾಕರುಣೆಯಿಂದ
ಪರಲೋಕದಿಂದ ಹೊಸ ದಿನವೊಂದು ನಮಗಾಗಿ ಉದಯಿಸುವುದು.
79 ಅಂಧಕಾರದಲ್ಲಿ ಜೀವಿಸುತ್ತಾ ಮರಣಭಯದಲ್ಲಿರುವ ಜನರಿಗೆ ದೇವರು ಸಹಾಯ ಮಾಡುವನು.
ಆತನು ನಮ್ಮನ್ನು ಸಮಾಧಾನದ ಮಾರ್ಗದಲ್ಲಿ ನಡೆಸುವನು.”
4 “ಆ ನ್ಯಾಯತೀರ್ಪಿನ ದಿನವು ಬರುತ್ತಿದೆ. ಅದು ಕುಲುಮೆಯಂತೆ ತೀಕ್ಷ್ಣವಾಗಿರುವದು. ಅಹಂಕಾರಿಗಳೆಲ್ಲಾ ಶಿಕ್ಷಿಸಲ್ಪಡುವರು. ದುಷ್ಟಜನರೆಲ್ಲಾ ಹುಲ್ಲಿನಂತೆ ಸುಡುವರು. ಆ ಸಮಯದಲ್ಲಿ ಒಂದು ಪೊದೆ ಬೆಂಕಿಯಲ್ಲಿ ಸುಡುವಂತೆ ಸುಡುವರು. ಆದರೆ ಕೊಂಬೆ ಅಥವಾ ಬೇರು ಯಾವದೂ ಉಳಿಯುವದಿಲ್ಲ.” ಇದು ಸರ್ವಶಕ್ತನಾದ ಯೆಹೋವನ ನುಡಿ.
2 “ನನ್ನನ್ನು ಹಿಂಬಾಲಿಸುವವರ ಮೇಲೆ ಸೂರ್ಯನ ಪ್ರಕಾಶದಂತೆ ಶುಭವು ಪ್ರಕಾಶಿಸುವದು. ಸೂರ್ಯನ ಕಿರಣಗಳಂತೆ ಅದು ಗುಣಪಡಿಸುವ ಶಕ್ತಿಯನ್ನು ಹೊಂದುವದು. ಕೊಟ್ಟಿಗೆಯಿಂದ ಬಿಟ್ಟ ಕರುಗಳಂತೆ ನೀವು ಸ್ವತಂತ್ರರಾಗಿಯೂ ಸಂತೋಷವಾಗಿಯೂ ಇರುವಿರಿ. 3 ಆಗ ನೀವು ದುಷ್ಟಜನರ ಮೇಲೆ ನಡೆದುಕೊಂಡು ಹೋಗುವಿರಿ; ಅವರು ನಿಮ್ಮ ಕಾಲುಗಳ ಕೆಳಗೆ ಬೂದಿಯಂತಿರುವರು. ನ್ಯಾಯತೀರ್ಪಿನ ಸಮಯದಲ್ಲಿ ನಾನು ಹಾಗೆ ಮಾಡುವೆನು.” ಇದು ಸರ್ವಶಕ್ತನಾದ ಯೆಹೋವನ ನುಡಿ.
4 “ನನ್ನ ಸೇವಕನಾದ ಮೋಶೆಯ ಕಟ್ಟಳೆಗಳನ್ನು ಅನುಸರಿಸಲು ಮರೆಯಬೇಡಿ. ಹೋರೇಬ್ ಬೆಟ್ಟದಲ್ಲಿ ನಾನು ಆ ನ್ಯಾಯವಿಧಿಗಳನ್ನು ಅವನಿಗೆ ಕೊಟ್ಟೆನು. ಆ ಕಟ್ಟಳೆಗಳೆಲ್ಲಾ ಇಸ್ರೇಲ್ ಜನರಿಗಾಗಿ ಇರುವದು.”
5 ಯೆಹೋವನು ಹೀಗೆನ್ನುತ್ತಾನೆ, “ನಾನು ಪ್ರವಾದಿಯಾದ ಎಲೀಯನನ್ನು ನಿಮ್ಮ ಬಳಿಗೆ ಕಳುಹಿಸುವೆನು. ಅವನು ಯೆಹೋವನಿಂದ ಪ್ರಾಪ್ತಿಯಾಗುವ ಭಯಂಕರವಾದ ಮಹಾ ನ್ಯಾಯತೀರ್ಪಿನ ಕಾಲದಲ್ಲಿ ಬರುವನು. 6 ತಂದೆತಾಯಿಗಳು ಮಕ್ಕಳಿಗೂ ಮಕ್ಕಳು ತಂದೆತಾಯಿಗಳಿಗೂ ನಿಕಟ ಸಂಬಂಧಿಗಳಾಗುವಂತೆ ಅವನು ಮಾಡುವನು. ಇದು ನೆರವೇರಲೇಬೇಕು, ಇಲ್ಲದಿದ್ದಲ್ಲಿ ನಾನು ಬಂದು ನಿಮ್ಮ ದೇಶವನ್ನು ಸಂಪೂರ್ಣವಾಗಿ ನಾಶಮಾಡುವೆನು.”
ಯೇಸು ತನ್ನ ಅಪೊಸ್ತಲರನ್ನು ಸೇವೆಗೆ ಕಳುಹಿಸಿದ್ದು
(ಮತ್ತಾಯ 10:5-15; ಮಾರ್ಕ 6:7-13)
9 ಯೇಸು ಹನ್ನೆರಡು ಮಂದಿ ಅಪೊಸ್ತಲರನ್ನು ಒಟ್ಟಾಗಿ ಕರೆದು ಅವರಿಗೆ ಕಾಯಿಲೆಗಳನ್ನು ವಾಸಿಮಾಡುವ ಶಕ್ತಿಯನ್ನೂ ದೆವ್ವಗಳ ಮೇಲೆ ಅಧಿಕಾರವನ್ನೂ ಕೊಟ್ಟನು. 2 ದೇವರ ರಾಜ್ಯದ ಬಗ್ಗೆ ತಿಳಿಸುವುದಕ್ಕೂ ಅಸ್ವಸ್ಥರಾದವರನ್ನು ವಾಸಿಮಾಡುವುದಕ್ಕೂ ಯೇಸು ಅಪೊಸ್ತಲರನ್ನು ಕಳುಹಿಸಿದನು. 3 ಆತನು ಅವರಿಗೆ ಹೇಳಿದ್ದೇನೆಂದರೆ: “ನೀವು ಪ್ರಯಾಣಕ್ಕಾಗಿ ಊರುಗೋಲನ್ನಾಗಲಿ ಚೀಲವನ್ನಾಗಲಿ ಆಹಾರವನ್ನಾಗಲಿ ಹಣವನ್ನಾಗಲಿ ತೆಗೆದುಕೊಂಡು ಹೋಗಬೇಡಿರಿ. ಎರಡು ಅಂಗಿಗಳನ್ನೂ ತೆಗೆದುಕೊಳ್ಳಬೇಡಿ. 4 ನೀವು ಒಂದು ಮನೆಯಲ್ಲಿ ಇಳಿದುಕೊಂಡಾಗ, ಆ ಊರನ್ನು ಬಿಟ್ಟುಹೋಗುವ ಸಮಯದವರೆಗೂ ಅಲ್ಲೇ ತಂಗಿರಿ. 5 ಆ ಊರಿನ ಜನರು ನಿಮ್ಮನ್ನು ಸ್ವಾಗತಿಸದಿದ್ದರೆ, ಆ ಊರಿನ ಹೊರಗೆ ಹೋಗಿ ನಿಮ್ಮ ಪಾದಗಳಿಗೆ ಹತ್ತಿದ ಧೂಳನ್ನು ಝಾಡಿಸಿಬಿಡಿರಿ. ಅದು ಅವರಿಗೆ ಎಚ್ಚರಿಕೆಯಾಗಿರುವುದು.”
6 ಆದ್ದರಿಂದ ಅಪೊಸ್ತಲರು ಹೊರಟು ಊರೂರುಗಳಿಗೆ ಹೋಗಿ, ಎಲ್ಲೆಲ್ಲೂ ಸುವಾರ್ತೆಯನ್ನು ಸಾರಿದರು ಮತ್ತು ರೋಗಿಗಳನ್ನು ವಾಸಿಮಾಡಿದರು.
Kannada Holy Bible: Easy-to-Read Version. All rights reserved. © 1997 Bible League International