Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಲೂಕ 1:68-79

68 “ಇಸ್ರೇಲರ ಪ್ರಭುವಾದ ದೇವರಿಗೆ ಸ್ತೋತ್ರವಾಗಲಿ.
    ಆತನು ಬಂದು ತನ್ನ ಜನರನ್ನು ಬಿಡುಗಡೆ ಮಾಡಿದ್ದಾನೆ.
69 ತನ್ನ ಸೇವಕನಾದ ದಾವೀದನ ಮನೆತನದಿಂದ
    ದೇವರು ವೀರರಕ್ಷಕನನ್ನು ನಮಗೆ ಕೊಟ್ಟಿದ್ದಾನೆ.
70 ಇದನ್ನು ಆತನು ಪೂರ್ವಕಾಲದ
    ತನ್ನ ಪವಿತ್ರ ಪ್ರವಾದಿಗಳ ಮೂಲಕ ತಿಳಿಸಿದ್ದಾನೆ.
71 ದೇವರು ನಮ್ಮನ್ನು ನಮ್ಮ ವೈರಿಗಳಿಂದಲೂ
    ದ್ವೇಷಿಗಳ ಹಿಡಿತದಿಂದಲೂ ರಕ್ಷಿಸಿದ್ದಾನೆ.
72 ಕರುಣೆ ತೋರುವುದಾಗಿ ನಮ್ಮ ಪಿತೃಗಳಿಗೆ ನೀಡಿದ
    ತನ್ನ ಪವಿತ್ರ ವಾಗ್ದಾನವನ್ನು ಆತನು ಜ್ಞಾಪಿಸಿಕೊಂಡಿದ್ದಾನೆ.
73 ನಮ್ಮ ವೈರಿಗಳ ಹಿಡಿತದಿಂದ ನಮ್ಮನ್ನು ಬಿಡಿಸುವುದಾಗಿ ದೇವರು ನಮ್ಮ ಪಿತೃವಾದ ಅಬ್ರಹಾಮನಿಗೆ ವಾಗ್ದಾನ ಮಾಡಿದ್ದಾನೆ.
74-75 ಏಕೆಂದರೆ ನಮ್ಮ ಜೀವಮಾನವೆಲ್ಲಾ ನಾವು ಆತನ ಸನ್ನಿಧಿಯಲ್ಲಿ ನೀತಿವಂತರೂ ಪರಿಶುದ್ಧರೂ ಆಗಿದ್ದು
    ಭಯವಿಲ್ಲದೆ ಆತನ ಸೇವೆ ಮಾಡಬೇಕೆಂಬುದೇ ಆತನ ಉದ್ದೇಶವಾಗಿತ್ತು.

76 “ಮಗುವೇ, ನೀನು ಮಹೋನ್ನತನ ಪ್ರವಾದಿ ಎನಿಸಿಕೊಳ್ಳುವೆ.
    ಪ್ರಭುವಿನ ಮುಂದೆ ಹೋಗಿ ಆತನ ಬರುವಿಕೆಗಾಗಿ ಜನರನ್ನು ಸಿದ್ಧಮಾಡುವೆ.
77 ಪಾಪಕ್ಷಮೆಯ ಮೂಲಕವಾಗಿ ರಕ್ಷಣೆಯಾಗುವುದೆಂಬ ತಿಳುವಳಿಕೆಯನ್ನು ನೀನು ಜನರಿಗೆ ಕೊಡುವೆ.

78 “ನಮ್ಮ ದೇವರ ಮಹಾಕರುಣೆಯಿಂದ
    ಪರಲೋಕದಿಂದ ಹೊಸ ದಿನವೊಂದು ನಮಗಾಗಿ ಉದಯಿಸುವುದು.
79 ಅಂಧಕಾರದಲ್ಲಿ ಜೀವಿಸುತ್ತಾ ಮರಣಭಯದಲ್ಲಿರುವ ಜನರಿಗೆ ದೇವರು ಸಹಾಯ ಮಾಡುವನು.
ಆತನು ನಮ್ಮನ್ನು ಸಮಾಧಾನದ ಮಾರ್ಗದಲ್ಲಿ ನಡೆಸುವನು.”

ಮಲಾಕಿ 3:13-18

ನ್ಯಾಯತೀರ್ಪಿನ ವಿಶೇಷ ಕಾಲ

13 ಯೆಹೋವನು ಹೀಗೆನ್ನುತ್ತಾನೆ, “ನೀವು ನನಗೆ ವಿರುದ್ಧವಾಗಿ ಹೇಯ ಮಾತುಗಳನ್ನಾಡಿದಿರಿ.”

ಅದಕ್ಕೆ ನೀವು “ನಿನ್ನ ವಿರುದ್ಧವಾಗಿ ಏನು ಹೇಳಿದ್ದೇವೆ?” ಎಂದು ಕೇಳುತ್ತೀರಿ.

14 ನೀವು, “ದೇವರಾದ ಯೆಹೋವನನ್ನು ಆರಾಧಿಸುವುದು ನಿಷ್ಪ್ರಯೋಜಕ. ಆತನ ಕಟ್ಟಳೆಗಳನ್ನು ನಾವು ಅನುಸರಿಸಿದೆವು. ಆದರೆ ಅದರಲ್ಲಿ ನಮಗೇನೂ ಲಾಭವಾಗಲಿಲ್ಲ. ಸಮಾಧಿಯಲ್ಲಿ ಜನರು ರೋದಿಸುವ ಹಾಗೆ ನಮ್ಮ ಪಾಪಗಳಿಗಾಗಿ ನಾವು ರೋದಿಸಿದೆವು. ಆದರೆ ಅದರಿಂದ ನಮಗೇನೂ ಸಹಾಯವಾಗಲಿಲ್ಲ. 15 ಗರ್ವಿಷ್ಟರು ಸಂತೋಷವಾಗಿದ್ದಾರೆ ಎಂದು ನಾವು ತಿಳಿಯುತ್ತೇವೆ. ದುಷ್ಟಜನರು ಸಫಲತೆ ಹೊಂದುತ್ತಿದ್ದಾರೆ, ದೇವರ ತಾಳ್ಮೆಯನ್ನು ಪರೀಕ್ಷಿಸಲು ದುಷ್ಕೃತ್ಯಗಳನ್ನು ಮಾಡುತ್ತಿದ್ದಾರೆ. ಆದರೆ ದೇವರು ಅವರನ್ನು ಶಿಕ್ಷಿಸಲಿಲ್ಲ” ಎಂದು ಹೇಳಿದಿರಿ.

16 ದೇವರನ್ನು ಅನುಸರಿಸುವ ಭಕ್ತರು ಒಬ್ಬರಿಗೊಬ್ಬರು ಮಾತನಾಡಿಕೊಳ್ಳಲು ಯೆಹೋವನು ಆಲೈಸಿದನು. ಆತನ ಮುಂದೆ ದೇವಜನರ ಹೆಸರುಗಳನ್ನು ಬರೆದಿರುವ ಒಂದು ಪುಸ್ತಕವಿತ್ತು. ಯೆಹೋವನ ಹೆಸರನ್ನು ಘನಪಡಿಸುವವರ ಹೆಸರುಗಳು ಅದರಲ್ಲಿದ್ದವು.

17 ಯೆಹೋವನು ಹೇಳುವುದೇನೆಂದರೆ, “ಅವರು ನನ್ನ ಜನರು. ನಾನು ಅವರಿಗೆ ಕರುಣೆ ತೋರಿಸುವೆನು. ತಂದೆಯು ತನಗೆ ವಿಧೇಯತೆ ತೋರಿಸುವ ತನ್ನ ಮಕ್ಕಳಿಗೆ ಕನಿಕರವುಳ್ಳವನಾಗಿರುತ್ತಾನೆ. ಅದೇ ರೀತಿಯಲ್ಲಿ ನನ್ನನ್ನು ಅನುಸರಿಸುವವರ ಮೇಲೆ ನಾನು ದಯೆ ತೋರಿಸುವೆನು. 18 ನೀವು ನನ್ನ ಬಳಿಗೆ ಹಿಂತಿರುಗಿ ಬರುವಿರಿ. ಆಗ ನೀವು ಒಳ್ಳೆಯವರಿಗೂ ಕೆಟ್ಟವರಿಗೂ ಇರುವ ವ್ಯತ್ಯಾಸವನ್ನು ತಿಳಿದುಕೊಳ್ಳುವಿರಿ. ಆಗ ನೀವು ದೇವರನ್ನು ಹಿಂಬಾಲಿಸುವವರಿಗೂ ಹಿಂಬಾಲಿಸದೆ ಇರುವವರಿಗೂ ಇರುವ ವ್ಯತ್ಯಾಸವನ್ನು ನೋಡುವಿರಿ.

ಫಿಲಿಪ್ಪಿಯವರಿಗೆ 1:18-26

18 ಅವರು ನನಗೆ ತೊಂದರೆ ಮಾಡಿದರೂ ನಾನು ಚಿಂತಿಸುವುದಿಲ್ಲ. ಅವರ ಉದ್ದೇಶವು ಯಥಾರ್ಥವಾಗಿದ್ದರೂ ಯಥಾರ್ಥವಾಗಿಲ್ಲದಿದ್ದರೂ ನನಗದು ಮುಖ್ಯವಲ್ಲ.

ಅವರು ಕ್ರಿಸ್ತನ ವಿಷಯವಾಗಿ ಜನರಿಗೆ ಬೋಧಿಸುತ್ತಿರುವುದರಿಂದ ನಾನು ಉಲ್ಲಾಸಿಸುತ್ತೇನೆ, ಇನ್ನು ಮುಂದೆಯೂ ಉಲ್ಲಾಸಿಸುತ್ತೇನೆ. 19 ನೀವು ನನಗೋಸ್ಕರ ಪ್ರಾರ್ಥಿಸುತ್ತಿದ್ದೀರಿ ಮತ್ತು ಯೇಸು ಕ್ರಿಸ್ತನ ಆತ್ಮನು ನನಗೆ ಸಹಾಯ ಮಾಡುತ್ತಿದ್ದಾನೆ. ಆದ್ದರಿಂದ ನನ್ನ ಈ ಕಷ್ಟವು ನನಗೆ ರಕ್ಷಣೆಯನ್ನು ಉಂಟು ಮಾಡುವುದೆಂದು ನನಗೆ ಗೊತ್ತಿದೆ. 20 ನಾನು ಯಾವ ವಿಷಯದಲ್ಲಿಯೂ ನಾಚಿಕೆಪಡದೆ ಎಂದಿನಂತೆ ಈಗಲೂ ಸಹ ಧೈರ್ಯದಿಂದ ಇದ್ದೇನೆ. ನಾನು ಬದುಕಿದರೂ ಸರಿ, ಸತ್ತರೂ ಸರಿ ನನ್ನ ದೇಹದ ಮೂಲಕ ಕ್ರಿಸ್ತನಿಗೆ ಮಹಿಮೆ ಉಂಟಾಗಬೇಕೆಂಬುದೇ ನನ್ನ ಅಭಿಲಾಷೆ ಮತ್ತು ನಿರೀಕ್ಷೆ. 21 ನನಗಂತೂ ಬದುಕುವುದೆಂದರೆ ಕ್ರಿಸ್ತನೇ, ಸಾಯುವುದೆಂದರೆ ಲಾಭವೇ. 22 ನಾನು ಜೀವದಿಂದಿದ್ದರೆ ಫಲಫಲಿಸುವ ಕೆಲಸ ನನಗಿರುತ್ತದೆ. ಆದರೆ ನಾನು ಸಾಯಬೇಕೇ? ಅಥವಾ ಬದುಕಬೇಕೇ? ಏನನ್ನು ಆರಿಸಿಕೊಳ್ಳಬೇಕೋ ನನಗೆ ಗೊತ್ತಿಲ್ಲ. 23 ಇವೆರಡರಲ್ಲಿ ಯಾವುದನ್ನು ಆರಿಸಿಕೊಳ್ಳಬೇಕೆಂಬುದೇ ಕಷ್ಟ. ನಾನು ಈ ಜೀವಿತವನ್ನು ಬಿಟ್ಟು ಆತನೊಂದಿಗಿರಲು ಅಪೇಕ್ಷಿಸುತ್ತೇನೆ. ಅದೇ ಉತ್ತಮವಾದದ್ದು. 24 ಆದರೆ ನಾನಿಲ್ಲಿ ಇಹಲೋಕದ ಶರೀರದಲ್ಲಿರುವುದು ನಿಮಗೆ ಅಗತ್ಯವಾಗಿದೆ. 25 ಆದ್ದರಿಂದ ನಾನು ಜೀವದಿಂದುಳಿದು ನಿಮ್ಮೊಂದಿಗೆ ಇರುತ್ತೇನೆಂದು ನನಗೆ ಗೊತ್ತಿದೆ. ನೀವು ನಂಬಿಕೆಯಲ್ಲಿ ವೃದ್ಧಿಯಾಗಿರಲು ಆನಂದವಾಗಿರಲು ನಿಮಗೆ ನೆರವಾಗಬೇಕೆಂತಲೂ 26 ನಾನು ಮತ್ತೆ ನಿಮ್ಮೊಂದಿಗಿರುವಾಗ ನೀವು ಕ್ರಿಸ್ತಯೇಸುವಿನಲ್ಲಿ ನನ್ನ ವಿಷಯವಾಗಿ ಹೆಮ್ಮೆಪಡಲು ಮತ್ತಷ್ಟು ಕಾರಣಗಳಿರುತ್ತವೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International