Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಲೂಕ 1:68-79

68 “ಇಸ್ರೇಲರ ಪ್ರಭುವಾದ ದೇವರಿಗೆ ಸ್ತೋತ್ರವಾಗಲಿ.
    ಆತನು ಬಂದು ತನ್ನ ಜನರನ್ನು ಬಿಡುಗಡೆ ಮಾಡಿದ್ದಾನೆ.
69 ತನ್ನ ಸೇವಕನಾದ ದಾವೀದನ ಮನೆತನದಿಂದ
    ದೇವರು ವೀರರಕ್ಷಕನನ್ನು ನಮಗೆ ಕೊಟ್ಟಿದ್ದಾನೆ.
70 ಇದನ್ನು ಆತನು ಪೂರ್ವಕಾಲದ
    ತನ್ನ ಪವಿತ್ರ ಪ್ರವಾದಿಗಳ ಮೂಲಕ ತಿಳಿಸಿದ್ದಾನೆ.
71 ದೇವರು ನಮ್ಮನ್ನು ನಮ್ಮ ವೈರಿಗಳಿಂದಲೂ
    ದ್ವೇಷಿಗಳ ಹಿಡಿತದಿಂದಲೂ ರಕ್ಷಿಸಿದ್ದಾನೆ.
72 ಕರುಣೆ ತೋರುವುದಾಗಿ ನಮ್ಮ ಪಿತೃಗಳಿಗೆ ನೀಡಿದ
    ತನ್ನ ಪವಿತ್ರ ವಾಗ್ದಾನವನ್ನು ಆತನು ಜ್ಞಾಪಿಸಿಕೊಂಡಿದ್ದಾನೆ.
73 ನಮ್ಮ ವೈರಿಗಳ ಹಿಡಿತದಿಂದ ನಮ್ಮನ್ನು ಬಿಡಿಸುವುದಾಗಿ ದೇವರು ನಮ್ಮ ಪಿತೃವಾದ ಅಬ್ರಹಾಮನಿಗೆ ವಾಗ್ದಾನ ಮಾಡಿದ್ದಾನೆ.
74-75 ಏಕೆಂದರೆ ನಮ್ಮ ಜೀವಮಾನವೆಲ್ಲಾ ನಾವು ಆತನ ಸನ್ನಿಧಿಯಲ್ಲಿ ನೀತಿವಂತರೂ ಪರಿಶುದ್ಧರೂ ಆಗಿದ್ದು
    ಭಯವಿಲ್ಲದೆ ಆತನ ಸೇವೆ ಮಾಡಬೇಕೆಂಬುದೇ ಆತನ ಉದ್ದೇಶವಾಗಿತ್ತು.

76 “ಮಗುವೇ, ನೀನು ಮಹೋನ್ನತನ ಪ್ರವಾದಿ ಎನಿಸಿಕೊಳ್ಳುವೆ.
    ಪ್ರಭುವಿನ ಮುಂದೆ ಹೋಗಿ ಆತನ ಬರುವಿಕೆಗಾಗಿ ಜನರನ್ನು ಸಿದ್ಧಮಾಡುವೆ.
77 ಪಾಪಕ್ಷಮೆಯ ಮೂಲಕವಾಗಿ ರಕ್ಷಣೆಯಾಗುವುದೆಂಬ ತಿಳುವಳಿಕೆಯನ್ನು ನೀನು ಜನರಿಗೆ ಕೊಡುವೆ.

78 “ನಮ್ಮ ದೇವರ ಮಹಾಕರುಣೆಯಿಂದ
    ಪರಲೋಕದಿಂದ ಹೊಸ ದಿನವೊಂದು ನಮಗಾಗಿ ಉದಯಿಸುವುದು.
79 ಅಂಧಕಾರದಲ್ಲಿ ಜೀವಿಸುತ್ತಾ ಮರಣಭಯದಲ್ಲಿರುವ ಜನರಿಗೆ ದೇವರು ಸಹಾಯ ಮಾಡುವನು.
ಆತನು ನಮ್ಮನ್ನು ಸಮಾಧಾನದ ಮಾರ್ಗದಲ್ಲಿ ನಡೆಸುವನು.”

ಮಲಾಕಿ 3:5-12

ಆಗ ನಾನು ನಿಮ್ಮ ಬಳಿಗೆ ಬಂದು ಯೋಗ್ಯವಾದ ಕಾರ್ಯವನ್ನು ಮಾಡುವೆನು. ದುಷ್ಟ ಕ್ರಿಯೆಗಳನ್ನು ಮಾಡಿದ ಜನರ ಬಗ್ಗೆ ನ್ಯಾಯಾಧೀಶರೊಡನೆ ದೂರು ಹೇಳುವ ಮನುಷ್ಯನಂತಿರುವೆನು. ಕೆಲವರು ಮಾಟಮಂತ್ರ ಮಾಡುವರು; ಕೆಲವರು ವ್ಯಭಿಚಾರ ಮಾಡುವರು; ಕೆಲವರು ಸುಳ್ಳು ವಾಗ್ದಾನಗಳನ್ನು ಮಾಡುವರು; ಕೆಲವರು ಕೂಲಿಯಾಳುಗಳಿಗೆ ಹೇಳಿದ ಕೂಲಿಯನ್ನು ಕೊಡದೆ ಅವರಿಗೆ ಮೋಸಮಾಡುವರು. ಜನರು ವಿಧವೆಯರಿಗೂ ಅನಾಥರಿಗೂ ಸಹಾಯ ಮಾಡುವದಿಲ್ಲ. ಪರದೇಶಿಗಳಿಗೆ ಸಹಾಯ ಮಾಡುವದಿಲ್ಲ. ನನಗೆ ಗೌರವ ಸಲ್ಲಿಸುವದಿಲ್ಲ.” ಇದು ಸರ್ವಶಕ್ತನಾದ ಯೆಹೋವನ ನುಡಿ.

ದೇವರಿಂದ ಕದ್ದುಕೊಳ್ಳುವದು

“ನಾನು ದೇವರಾದ ಯೆಹೋವನು. ನಾನು ಬದಲಾಗದ ದೇವರು. ನೀವು ಯಾಕೋಬನ ಮಕ್ಕಳು. ನೀವು ಸಂಪೂರ್ಣವಾಗಿ ನಾಶ ಹೊಂದಲಿಲ್ಲ. ನೀವು ನನ್ನ ಆಜ್ಞೆಗಳಿಗೆ ವಿಧೇಯರಾಗಲಿಲ್ಲ. ನಿಮ್ಮ ಪೂರ್ವಿಕರು ನನ್ನನ್ನು ಅನುಸರಿಸುವದನ್ನು ನಿಲ್ಲಿಸಿಬಿಟ್ಟಿದ್ದರು. ನೀವು ಹಿಂತಿರುಗಿ ನನ್ನ ಬಳಿಗೆ ಬಂದರೆ ನಾನು ನಿಮ್ಮ ಬಳಿಗೆ ಬರುವೆನು.” ಇದು ಸರ್ವಶಕ್ತನಾದ ಯೆಹೋವನ ನುಡಿ.

“ನಾವು ಹೇಗೆ ಹಿಂತಿರುಗಿ ಬರಬಹುದು?” ಎಂದು ನೀವು ಕೇಳುತ್ತೀರೋ?

ದೇವರಿಂದ ಕದ್ದುಕೊಳ್ಳುವದನ್ನು ನಿಲ್ಲಿಸಿರಿ. ಮನುಷ್ಯನು ದೇವರಿಂದ ಕದ್ದುಕೊಳ್ಳಬಾರದು. ಆದರೆ ನೀವು ನನ್ನಿಂದ ಕದ್ದುಕೊಂಡಿದ್ದೀರಿ.

“ನಿನ್ನಿಂದ ಏನು ಕದ್ದುಕೊಂಡಿದ್ದೇವೆ” ಎಂದು ಕೇಳುತ್ತೀರಾ?

“ನಿಮ್ಮ ದಶಮ ಭಾಗವನ್ನು ನೀವು ನನಗೆ ಅರ್ಪಿಸಬೇಕಿತ್ತು. ವಿಶೇಷ ಕಾಣಿಕೆಗಳನ್ನು ನೀವು ನನಗೆ ಕೊಡಬೇಕಾಗಿತ್ತು. ಆದರೆ ನೀವು ಹಾಗೆ ಮಾಡಲಿಲ್ಲ. ಈ ರೀತಿಯಾಗಿ ನಿಮ್ಮ ಇಡೀ ಜನಾಂಗವೇ ನನ್ನಿಂದ ಕದ್ದುಕೊಂಡಿದ್ದಾರೆ. ಆದ್ದರಿಂದ ನಿಮಗೆ ದುರ್ದೆಶೆ ಸಂಭವಿಸುತ್ತಲಿದೆ.” ಇದು ಸರ್ವಶಕ್ತನಾದ ಯೆಹೋವನ ನುಡಿ.

10 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ನೀವು ಈ ಪರೀಕ್ಷೆ ಮಾಡಿನೋಡಿ. ನಿಮ್ಮ ವಸ್ತುಗಳ ಹತ್ತನೇ ಒಂದು ಅಂಶವನ್ನು ನನಗೆ ತೆಗೆದುಕೊಂಡು ಬನ್ನಿರಿ. ಅವುಗಳನ್ನು ಆಲಯದ ಬಂಡಾರದೊಳಗೆ ಹಾಕಿರಿ. ನನ್ನ ಮನೆಗೆ ನೀವು ಆಹಾರ ವಸ್ತುಗಳನ್ನು ತನ್ನಿರಿ. ನನ್ನನ್ನು ಪರೀಕ್ಷಿಸಿರಿ. ನೀವು ಹೀಗೆ ಮಾಡುವುದಾದರೆ ಖಂಡಿತವಾಗಿಯೂ ನಾನು ನಿಮ್ಮನ್ನು ಆಶೀರ್ವದಿಸುವೆನು. ಆಕಾಶದಿಂದ ಮಳೆ ಸುರಿಯುವ ಹಾಗೆ ನಿಮಗೆ ಶುಭವು ಸುರಿಯುವವು. ನಿಮ್ಮ ಮನೆಯಲ್ಲಿ ಬೇಕಾಗಿರುವದಕ್ಕಿಂತ ಹೆಚ್ಚು ಯಾವಾಗಲೂ ಇರುವದು. 11 ನಿಮ್ಮ ಬೆಳೆಗಳು ಹುಳಗಳಿಂದ ನಾಶವಾಗದಂತೆ ನಾನು ಸಂರಕ್ಷಿಸುವೆನು; ನಿಮ್ಮ ದ್ರಾಕ್ಷಾಲತೆಗಳೆಲ್ಲಾ ದ್ರಾಕ್ಷಿಯನ್ನು ಫಲಿಸುವವು.” ಇದು ಸರ್ವಶಕ್ತನಾದ ಯೆಹೋವನ ನುಡಿ.

12 “ಇತರ ಜನಾಂಗಗಳವರು ನಿಮ್ಮೊಂದಿಗೆ ಸಮಾಧಾನದಿಂದಿರುವರು. ನಿಜವಾಗಿಯೂ ನಿಮ್ಮ ದೇಶವು ಆಗ ಆಶ್ಚರ್ಯಕರವಾದ ದೇಶವಾಗಿರುವುದು.” ಇದು ಸರ್ವಶಕ್ತನಾದ ಯೆಹೋವನ ನುಡಿ.

ಫಿಲಿಪ್ಪಿಯವರಿಗೆ 1:12-18

ಪೌಲನ ಕಷ್ಟಗಳು ಸುವಾರ್ತಾ ಸೇವೆಗೆ ಸಹಾಯಕವಾಗಿವೆ

12 ಸಹೋದರ ಸಹೋದರಿಯರೇ, ನನಗೆ ಸಂಭವಿಸಿದ ಕಷ್ಟಗಳು ಸುವಾರ್ತೆಯನ್ನು ಹಬ್ಬಿಸಲು ಸಹಾಯಕವಾದವೆಂದು ನಿಮಗೆ ತಿಳಿದಿರಬೇಕೆಂಬುದಾಗಿ ಅಪೇಕ್ಷಿಸುತ್ತೇನೆ. 13 ನಾನು ಏಕೆ ಸೆರೆಮನೆಯಲ್ಲಿದ್ದೇನೆಂಬುದು ಸ್ಪಷ್ಟವಾಗಿಯೇ ಇದೆ. ನಾನು ಕ್ರಿಸ್ತ ವಿಶ್ವಾಸಿಯಾಗಿರುವುದರಿಂದ ಸೆರೆಮನೆಯಲ್ಲಿದ್ದೇನೆ. ಇಲ್ಲಿಯ ಕಾವಲುಗಾರರಿಗೂ ಅರಮನೆಯ ಇತರ ಜನರೆಲ್ಲರಿಗೂ ಇದು ಗೊತ್ತಿದೆ. 14 ನಾನಿನ್ನೂ ಸೆರೆಮನೆಯಲ್ಲಿದ್ದೇನೆ. ಆದರೆ ನನ್ನ ಈ ಸ್ಥಿತಿಯಿಂದ ಅನೇಕ ವಿಶ್ವಾಸಿಗಳು ಪ್ರೋತ್ಸಾಹಿತರಾಗಿ ಕ್ರಿಸ್ತನ ವಿಷಯವಾದ ಸಂದೇಶವನ್ನು ಮತ್ತಷ್ಟು ಧೈರ್ಯದಿಂದ ಜನರಿಗೆ ಹೇಳುತ್ತಿದ್ದಾರೆ.

15 ಕೆಲವರು ತಮ್ಮಲ್ಲಿರುವ ಅಸೂಯೆಯಿಂದಲೂ ವೈಮನಸ್ಸಿನಿಂದಲೂ ಇನ್ನು ಕೆಲವರು ಸಹಾಯ ಮಾಡಬೇಕೆಂಬ ಉದ್ದೇಶದಿಂದಲೂ ಕ್ರಿಸ್ತನ ವಿಷಯವಾಗಿ ಬೋಧಿಸುತ್ತಾರೆ. 16 ಇವರು ತಮ್ಮಲ್ಲಿ ಪ್ರೀತಿಯಿರುವುದರಿಂದಲೇ ಜನರಿಗೆ ಬೋಧಿಸುತ್ತಾರೆ. ಸುವಾರ್ತೆಯನ್ನು ಪ್ರತಿಪಾದಿಸುವ ಕೆಲಸವನ್ನು ದೇವರು ನನಗೆ ಕೊಟ್ಟನೆಂಬುದು ಇವರಿಗೆ ಗೊತ್ತಿದೆ. 17 ಬೇರೆ ಕೆಲವರು ತಮ್ಮ ಸ್ವಾರ್ಥದ ದೆಸೆಯಿಂದ ಕ್ರಿಸ್ತನ ವಿಷಯವಾಗಿ ಬೋಧಿಸುತ್ತಾರೆ. ಅವರ ಸುವಾರ್ತಾಸೇವೆಯ ಉದ್ದೇಶವೇ ತಪ್ಪಾಗಿದೆ. ಸೆರೆಯಲ್ಲಿರುವ ನನಗೆ ತೊಂದರೆ ಮಾಡಬೇಕೆಂಬುದೇ ಅವರ ಅಪೇಕ್ಷೆ. 18 ಅವರು ನನಗೆ ತೊಂದರೆ ಮಾಡಿದರೂ ನಾನು ಚಿಂತಿಸುವುದಿಲ್ಲ. ಅವರ ಉದ್ದೇಶವು ಯಥಾರ್ಥವಾಗಿದ್ದರೂ ಯಥಾರ್ಥವಾಗಿಲ್ಲದಿದ್ದರೂ ನನಗದು ಮುಖ್ಯವಲ್ಲ.

ಅವರು ಕ್ರಿಸ್ತನ ವಿಷಯವಾಗಿ ಜನರಿಗೆ ಬೋಧಿಸುತ್ತಿರುವುದರಿಂದ ನಾನು ಉಲ್ಲಾಸಿಸುತ್ತೇನೆ, ಇನ್ನು ಮುಂದೆಯೂ ಉಲ್ಲಾಸಿಸುತ್ತೇನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International