Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 63

ದಾವೀದನು ಯೆಹೂದದ ಅರಣ್ಯದಲ್ಲಿದ್ದಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.

63 ದೇವರೇ, ನೀನೇ ನನ್ನ ದೇವರು.
    ನಿನಗಾಗಿ ಕುತೂಹಲದಿಂದ ಎದುರು ನೋಡುತ್ತೇನೆ.
ನೀರಿಲ್ಲದೆ ಒಣಗಿದ ಭೂಮಿಯಂತೆ ನನ್ನ ಆತ್ಮವು ನಿನಗಾಗಿ ಬಾಯಾರಿದೆ;
    ನನ್ನ ದೇಹವು ನಿನಗಾಗಿ ಬಯಸಿದೆ.
ಹೌದು, ನಿನ್ನನ್ನು ನಿನ್ನ ಆಲಯದಲ್ಲಿ ನೋಡಿದ್ದೇನೆ,
    ನಿನ್ನ ಶಕ್ತಿಯನ್ನೂ ಮಹಿಮೆಯನ್ನೂ ಕಂಡಿದ್ದೇನೆ.
ನಿನ್ನ ಪ್ರೀತಿಯು ಜೀವಕ್ಕಿಂತಲೂ ಶ್ರೇಷ್ಠ.
    ನನ್ನ ತುಟಿಗಳು ನಿನ್ನನ್ನು ಕೊಂಡಾಡುತ್ತವೆ.
ಹೌದು, ನನ್ನ ಜೀವಮಾನವೆಲ್ಲಾ ನಿನ್ನನ್ನು ಕೊಂಡಾಡುವೆನು.
    ನಿನ್ನ ಹೆಸರಿನಲ್ಲಿ ಕೈಮುಗಿದು ಪ್ರಾರ್ಥಿಸುವೆನು.
ಮೃಷ್ಟಾನ್ನವನ್ನು ತಿಂದಿರುವವನಂತೆ ತೃಪ್ತನಾಗಿರುವೆನು.
    ನನ್ನ ಬಾಯಿ ನಿನ್ನನ್ನು ಕೊಂಡಾಡುವುದು.
ಹಾಸಿಗೆಯು ಮೇಲೆ ಮಲಗಿರುವಾಗಲೂ ನಿನ್ನನ್ನು ಜ್ಞಾಪಿಸಿಕೊಳ್ಳುವೆನು.
    ಮಧ್ಯರಾತ್ರಿಯಲ್ಲಿಯೂ ನಿನ್ನನ್ನು ನೆನಸಿಕೊಳ್ಳುವೆನು.
ನಿಜವಾಗಿಯೂ ನೀನೇ ನನಗೆ ಸಹಾಯಕ.
    ನಿನ್ನ ರೆಕ್ಕೆಗಳ ಮರೆಯಲ್ಲಿ ಆನಂದಘೋಷ ಮಾಡುವೆನು.
ನನ್ನ ಆತ್ಮವು ನಿನ್ನನ್ನು ಅಂಟಿಕೊಂಡಿರುವುದು.
    ನಿನ್ನ ಬಲಗೈ ನನ್ನ ಕೈಹಿಡಿದು ನಡೆಸುವುದು.

ನನ್ನನ್ನು ಕೊಲ್ಲಬೇಕೆಂದಿರುವವರು
    ಪಾತಾಳಕ್ಕೆ ಇಳಿದುಹೋಗುವರು.
10 ಅವರು ಖಡ್ಗಗಳಿಂದ ಕೊಲ್ಲಲ್ಪಡುವರು.
    ಅವರ ಶವಗಳು ನರಿಗಳ ಪಾಲಾಗುವವು.
11 ರಾಜನಾದರೋ ತನ್ನ ದೇವರಲ್ಲಿಯೇ ಸಂತೋಷಿಸುವನು.
    ಹರಕೆಹೊತ್ತು ಅವನಿಗೆ ವಿಧೇಯರಾಗಿರುವವರು ದೇವರನ್ನು ಕೊಂಡಾಡುವರು,
    ಯಾಕೆಂದರೆ ಆ ಸುಳ್ಳುಗಾರರನ್ನೆಲ್ಲಾ ಆತನು ಸೋಲಿಸಿದ್ದಾನೆ.

2 ಸಮುವೇಲನು 2:1-7

ಹೆಬ್ರೋನಿಗೆ ದಾವೀದನ ಆಗಮನ

ತರುವಾಯ ದಾವೀದನು ಯೆಹೋವನಲ್ಲಿ ಪ್ರಾರ್ಥಿಸಿ, “ಯೆಹೂದದ ಯಾವುದಾದರೂ ನಗರಕ್ಕೆ ನಾನು ಹೋಗಬಹುದೇ?” ಎಂದು ಕೇಳಿದನು.

“ಹೋಗು” ಎಂಬುದಾಗಿ ಯೆಹೋವನು ಹೇಳಿದನು.

“ನಾನು ಎಲ್ಲಿಗೆ ಹೋಗಲಿ?” ಎಂದು ದಾವೀದನು ಕೇಳಿದನು.

“ಹೆಬ್ರೋನಿಗೆ ಹೋಗು” ಎಂದು ಯೆಹೋವನು ಉತ್ತರಿಸಿದನು.

ಆದ್ದರಿಂದ ದಾವೀದನು ಅಲ್ಲಿಗೆ ಹೋದನು. ಅವನ ಇಬ್ಬರು ಹೆಂಡತಿಯರೂ ಅವನ ಜೊತೆಯಲ್ಲಿ ಹೋದರು. ಅವರು ಯಾರೆಂದರೆ: ಇಜ್ರೇಲಿನ ಅಹೀನೋವಮಳು ಮತ್ತು ಕರ್ಮೆಲಿನ ನಾಬಾಲನ ವಿಧವೆಯಾದ ಅಬೀಗೈಲಳು. ದಾವೀದನು ತನ್ನ ಜನರನ್ನು ಮತ್ತು ಅವರ ಕುಟುಂಬಗಳನ್ನು ಸಹ ಕರೆತಂದನು. ಅವರೆಲ್ಲರೂ ಹೆಬ್ರೋನ್ ಮತ್ತು ಅದರ ಸಮೀಪದ ನಗರಗಳಲ್ಲಿ ನೆಲೆಸಿದರು.

ಯೆಹೂದದ ಜನರು ಬಂದು ದಾವೀದನನ್ನು ಯೆಹೂದದ ರಾಜನನ್ನಾಗಿ ಅಭಿಷೇಕಿಸಿದರು. ಬಳಿಕ ಅವರು ದಾವೀದನಿಗೆ, “ಸೌಲನ ಸಮಾಧಿ ಮಾಡಿದವರು ಯಾಬೇಷ್ ಗಿಲ್ಯಾದಿನವರೇ” ಎಂದು ಹೇಳಿದರು.

ಯಾಬೇಷ್ ಗಿಲ್ಯಾದಿನ ಜನರಿಗೆ ದಾವೀದನು ಸಂದೇಶಕರನ್ನು ಕಳುಹಿಸಿ, “ಸೌಲನ ದೇಹದ ಬೂದಿಯನ್ನು[a] ಸಮಾಧಿಮಾಡುವುದರ ಮೂಲಕ ನೀವು ನಿಮ್ಮ ಒಡೆಯನಾದ ಸೌಲನಿಗೆ ಕರುಣೆ ತೋರಿದ್ದೀರಿ. ಅದಕ್ಕಾಗಿ ಯೆಹೋವನು ನಿಮ್ಮನ್ನು ಆಶೀರ್ವದಿಸಲಿ. ಆತನು ನಿಮಗೆ ಕೃಪಾಳುವೂ ನಂಬಿಗಸ್ತನೂ ಆಗಿರಲಿ. ನೀವು ಸೌಲನ ಬೂದಿಯನ್ನು ಸಮಾಧಿಮಾಡಿದ್ದರಿಂದ ನಾನೂ ನಿಮಗೆ ಕರುಣೆ ತೋರಿಸುವೆನು. ನಿಮ್ಮ ಒಡೆಯನಾದ ಸೌಲನು ಮರಣ ಹೊಂದಿರುವುದರಿಂದ, ಯೆಹೂದ ಕುಲದವರು ನನ್ನನ್ನು ತಮ್ಮ ರಾಜನನ್ನಾಗಿ ಅಭಿಷೇಕಿಸಿದ್ದಾರೆ. ಆದ್ದರಿಂದ ನೀವು ಬಲಿಷ್ಠರಾಗಿರಿ ಮತ್ತು ಧೈರ್ಯದಿಂದಿರಿ” ಎಂದು ಹೇಳಿಸಿದನು.

ಯೋಹಾನ 16:25-33

ಲೋಕದ ಮೇಲೆ ವಿಜಯ

25 “ನಾನು ನಿಮಗೆ ಈ ಸಂಗತಿಗಳನ್ನು ಸಾಮ್ಯಗಳ ರೂಪದಲ್ಲಿ ತಿಳಿಸಿದೆನು. ಆದರೆ ಸಮಯವು ಬರಲಿದೆ. ಆಗ ನಾನು ಸಾಮ್ಯಗಳನ್ನು ಬಳಸದೆ ನನ್ನ ತಂದೆಯ ಬಗ್ಗೆ ಸರಳವಾದ ಮಾತುಗಳಲ್ಲಿ ತಿಳಿಸುವೆನು. 26 ಆಗ ನೀವು ನನ್ನ ಹೆಸರಿನಲ್ಲಿ ತಂದೆಯನ್ನು ಬೇಡಿಕೊಳ್ಳುವಿರಿ. ನಾನು ನಿಮಗೋಸ್ಕರ ತಂದೆಯನ್ನು ಕೇಳಿಕೊಳ್ಳುವ ಅಗತ್ಯವಿರುವುದಿಲ್ಲ. 27 ಹೌದು, ತಂದೆಯು ತಾನೇ ನಿಮ್ಮನ್ನು ಪ್ರೀತಿಸುತ್ತಾನೆ. ನೀವು ನನ್ನನ್ನು ಪ್ರೀತಿಸಿದರಿಂದ ಮತ್ತು ನಾನು ದೇವರಿಂದ ಬಂದೆನೆಂದು ನೀವು ನಂಬುವುದರಿಂದ ಆತನು ನಿಮ್ಮನ್ನು ಪ್ರೀತಿಸುತ್ತಾನೆ. 28 ನಾನು ತಂದೆಯ ಬಳಿಯಿಂದ ಈ ಲೋಕಕ್ಕೆ ಬಂದೆನು. ಈಗ ನಾನು ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹಿಂತಿರುಗಿ ಹೋಗುತ್ತಿದ್ದೇನೆ” ಎಂದು ಹೇಳಿದನು.

29 ಆಗ ಶಿಷ್ಯರು ಯೇಸುವಿಗೆ, “ಈಗ ನೀನು ನಮ್ಮೊಂದಿಗೆ ಸ್ಪಷ್ಟವಾಗಿ ಮಾತಾಡುತ್ತಿರುವೆ. ಅರ್ಥವಾಗದಂಥ ಕಠಿಣ ಮಾತುಗಳನ್ನು ನೀನು ಬಳಸುತ್ತಿಲ್ಲ. 30 ನಿನಗೆ ಎಲ್ಲಾ ಸಂಗತಿಗಳು ತಿಳಿದಿವೆಯೆಂದು ನಮಗೆ ಈಗ ತಿಳಿಯಿತು. ಒಬ್ಬನು ಪ್ರಶ್ನೆಯನ್ನು ಕೇಳುವುದಕ್ಕಿಂತ ಮೊದಲೇ ನೀನು ಅವನ ಪ್ರಶ್ನೆಗೆ ಉತ್ತರ ಕೊಡಬಲ್ಲೆ. ಇದರಿಂದಾಗಿ, ನೀನು ದೇವರಿಂದ ಬಂದವನೆಂದು ನಾವು ನಂಬುತ್ತೇವೆ” ಎಂದು ಹೇಳಿದರು.

31 ಯೇಸು, “ಹಾಗಾದರೆ ಈಗ ನೀವು ನಂಬುತ್ತೀರಾ? 32 ನನಗೆ ಕಿವಿಗೊಡಿರಿ. ನೀವು ಚದರಿಹೋಗುವ ಕಾಲ ಬರುತ್ತಿದೆ. ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಸ್ವಂತ ಮನೆಗೆ ಚದರಿಹೋಗುವನು. ಆ ಸಮಯ ಈಗಲೇ ಬಂದಿದೆ. ನೀವು ನನ್ನನ್ನು ಬಿಟ್ಟು ಹೋಗುವಿರಿ. ನಾನು ಒಬ್ಬಂಟಿಗನಾಗಿರುವೆನು. ಆದರೆ ನಿಜವಾಗಿ ನಾನೆಂದಿಗೂ ಒಬ್ಬಂಟಿಗನಲ್ಲ. ಏಕೆಂದರೆ ತಂದೆಯು ನನ್ನೊಂದಿಗಿದ್ದಾನೆ.

33 “ನೀವು ನನ್ನಲ್ಲಿ ಶಾಂತಿಯನ್ನು ಹೊಂದಿದವರಾಗಿರಬೇಕೆಂದು ನಾನು ನಿಮಗೆ ಈ ಸಂಗತಿಗಳನ್ನೆಲ್ಲಾ ಹೇಳಿದ್ದೇನೆ. ಈ ಲೋಕದಲ್ಲಿ ನಿಮಗೆ ಸಂಕಟವಿದೆ. ಆದರೆ ಧೈರ್ಯದಿಂದಿರಿ! ನಾನು ಈ ಲೋಕವನ್ನು ಸೋಲಿಸಿದ್ದೇನೆ!” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International