Revised Common Lectionary (Semicontinuous)
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.
132 ಯೆಹೋವನೇ, ದಾವೀದನು ಅನುಭವಿಸಿದ ಕಷ್ಟವನ್ನು ಜ್ಞಾಪಿಸಿಕೋ.
2 ದಾವೀದನು ಯೆಹೋವನಿಗೆ ವಿಶೇಷವಾದ ವಾಗ್ದಾನವನ್ನು ಮಾಡಿದನು;
ಇಸ್ರೇಲರ ಶೂರನಾದ ದೇವರಿಗೆ ಆತನು ವಿಶೇಷವಾದ ಹರಕೆಯೊಂದನ್ನು ಮಾಡಿಕೊಂಡನು.
3 “ನಾನು ಯೆಹೋವನಿಗೋಸ್ಕರ ಒಂದು ಆಲಯವನ್ನು ಕಟ್ಟುವ ತನಕ ನನ್ನ ಮನೆಯೊಳಗೆ ಪ್ರವೇಶಿಸುವುದಿಲ್ಲ;
ನನ್ನ ಹಾಸಿಗೆಯ ಮೇಲೆ ಮಲಗಿಕೊಳ್ಳುವುದಿಲ್ಲ;
4 ನಾನು ನಿದ್ರಿಸುವುದೂ ಇಲ್ಲ;
ನನ್ನ ಕಣ್ಣುಗಳಿಗೆ ವಿಶ್ರಾಂತಿಯನ್ನು ಕೊಡುವುದೂ ಇಲ್ಲ.
5 ಇಸ್ರೇಲರ ಶೂರನಾದ ದೇವರಿಗೆ ಒಂದು ಆಲಯವನ್ನು ಕಟ್ಟುವೆನು”
ಎಂದು ದಾವೀದನು ಹೇಳಿದನು.
6 ನಾವು ಅದರ ಬಗ್ಗೆ ಎಫ್ರಾತದಲ್ಲಿ ಕೇಳಿದೆವು.
ನಾವು ಒಡಂಬಡಿಕೆಯ ಪೆಟ್ಟಿಗೆಯನ್ನು ಕಿರ್ಯತ್ಯಾರೀಮಿನಲ್ಲಿ ಕಂಡುಕೊಂಡೆವು.
7 ಬನ್ನಿರಿ, ಆತನ ಪವಿತ್ರ ಮಂದಿರಕ್ಕೆ ಹೋಗೋಣ;
ಆತನ ಪಾದಪೀಠದ ಮುಂದೆ ಆರಾಧಿಸೋಣ.
8 ಯೆಹೋವನೇ, ನಿನ್ನ ವಿಶ್ರಾಂತಿಯ ಸ್ಥಳದಿಂದ ಎದ್ದೇಳು.
ನಿನ್ನ ಶಕ್ತಿಪೂರ್ಣವಾದ ಪೆಟ್ಟಿಗೆಯೊಂದಿಗೆ ಎದ್ದೇಳು.
9 ನಿನ್ನ ಯಾಜಕರು ನೀತಿಯೆಂಬ ವಸ್ತ್ರವನ್ನು ಧರಿಸಿಕೊಂಡಿದ್ದಾರೆ.
ನಿನ್ನ ಭಕ್ತರು ಉಲ್ಲಾಸಿಸಲಿ.
10 ನಿನ್ನ ಸೇವಕನಾದ ದಾವೀದನಿಗೆ ನೀನು ವಾಗ್ದಾನ ಮಾಡಿರುವೆ.
ನೀನು ಅಭಿಷೇಕಿಸಿರುವ ರಾಜನನ್ನು ತಿರಸ್ಕರಿಸಬೇಡ.
11 ಯೆಹೋವನು ದಾವೀದನಿಗೆ ಸ್ಥಿರವಾದ ವಾಗ್ದಾನವನ್ನು ಮಾಡಿದನು.
ಆತನು ಅದನ್ನು ಬದಲಾಯಿಸುವುದೇ ಇಲ್ಲ.
“ನಿನ್ನ ಸಂತಾನದವರನ್ನು ನಿನ್ನ ಸಿಂಹಾಸನದ ಮೇಲೆ ಕುಳ್ಳಿರಿಸುವೆನು.
12 ನಿನ್ನ ಮಕ್ಕಳು ನನ್ನ ಒಡಂಬಡಿಕೆಗೂ ನಾನು ಆಜ್ಞಾಪಿಸಿದ ಕಟ್ಟಳೆಗಳಿಗೂ ವಿಧೇಯರಾದರೆ,
ನಿನ್ನ ಸಂತಾನದ ಒಬ್ಬನು ಯಾವಾಗಲೂ ರಾಜನಾಗಿರುವನು.”
13 ಯೆಹೋವನು ತನ್ನ ಆಲಯಕ್ಕಾಗಿ
ಚೀಯೋನನ್ನೇ ಆರಿಸಿಕೊಂಡನು.
14 “ಇದು ನನ್ನ ಶಾಶ್ವತ ನಿವಾಸಸ್ಥಾನ.
ನಾನು ಇಲ್ಲೇ ಆಸನಾರೂಢನಾಗಿರುವೆನು.
ಇದೇ ನನಗೆ ಇಷ್ಟವಾದ ಸ್ಥಳ.
15 ನಾನು ಚೀಯೋನಿಗೆ ಬೇಕಾದದ್ದನ್ನೆಲ್ಲಾ ಒದಗಿಸುವೆನು;
ಇಲ್ಲಿಯ ಬಡವರಿಗೂ ಆಹಾರವನ್ನು ಸಮೃದ್ಧಿಯಾಗಿ ದಯಪಾಲಿಸುವೆನು;
16 ಯಾಜಕರಿಗೆ ರಕ್ಷಣೆಯೆಂಬ ವಸ್ತ್ರವನ್ನು ಹೊದಿಸುವೆನು.
ನನ್ನ ಭಕ್ತರು ಉಲ್ಲಾಸಿಸುವರು.
17 ಇಲ್ಲಿಯೇ ನಾನು ದಾವೀದನನ್ನು ಬಲಗೊಳಿಸುವೆನು.
ನಾನು ಅಭಿಷೇಕಿಸಿದ ಅವನಿಗೆ ದೀಪವನ್ನು ಒದಗಿಸುವೆನು.
18 ನಾನು ಅವನ ಶತ್ರುಗಳಿಗೆ ನಾಚಿಕೆಯೆಂಬ ವಸ್ತ್ರವನ್ನು ಹೊದಿಸುವೆನು.
ಅವನ ರಾಜ್ಯವನ್ನಾದರೋ ಅಭಿವೃದ್ಧಿಗೊಳಿಸುವೆನು.”
ಜನರು ಧರ್ಮಶಾಸ್ತ್ರವನ್ನು ಕೇಳುವರು
23 ಯೆಹೂದದ ಮತ್ತು ಜೆರುಸಲೇಮಿನ ನಾಯಕರೆಲ್ಲರೂ ಬಂದು ತನ್ನನ್ನು ಭೇಟಿಯಾಗಬೇಕೆಂದು ರಾಜನಾದ ಯೋಷೀಯನು ಹೇಳಿದನು. 2 ನಂತರ ರಾಜನು ದೇವಾಲಯಕ್ಕೆ ಹೋದನು. ಯೆಹೂದದ ಜನರೆಲ್ಲರು ಮತ್ತು ಜೆರುಸಲೇಮಿನಲ್ಲಿ ವಾಸಿಸುತ್ತಿದ್ದ ಜನರೆಲ್ಲರು ಅವನ ಜೊತೆಯಲ್ಲಿ ಹೋದರು. ಯಾಜಕರು, ಪ್ರವಾದಿಗಳು, ಚಿಕ್ಕವರು ಮತ್ತು ದೊಡ್ಡವರು ಅವನೊಡನೆ ಹೋದರು. ಆಗ ಅವನು ನಿಬಂಧನ ಗ್ರಂಥವನ್ನು ಓದಿದನು. ಇದು ದೇವಾಲಯದಲ್ಲಿ ಸಿಕ್ಕಿದ ಗ್ರಂಥವಾಗಿತ್ತು. ಜನರೆಲ್ಲರಿಗೂ ಕೇಳಿಸುವಂತೆ ಯೋಷೀಯನು ಗ್ರಂಥವನ್ನು ಓದಿದನು.
3 ರಾಜನು ಸ್ತಂಭದ ಬಳಿ ನಿಂತು ತಾನು ಯೆಹೋವನ ಮಾರ್ಗದಲ್ಲಿ ನಡೆಯುವುದಾಗಿಯೂ ಆತನ ಆಜ್ಞೆಗಳಿಗೆ, ಒಡಂಬಡಿಕೆಗೆ ಮತ್ತು ಆತನ ನಿಯಮಗಳಿಗೆ ಪೂರ್ಣಹೃದಯದಿಂದಲೂ ಪೂರ್ಣಆತ್ಮದಿಂದಲೂ ವಿಧೇಯನಾಗಿರುವುದಾಗಿಯೂ ನಿಬಂಧನ ಗ್ರಂಥದಲ್ಲಿ ಬರೆದಿರುವ ಎಲ್ಲಾ ವಾಕ್ಯಗಳನ್ನು ನೆರವೇರಿಸುವುದಾಗಿಯೂ ಯೆಹೋವನಿಗೆ ಪ್ರಮಾಣಮಾಡಿದನು. ರಾಜನ ಪ್ರಮಾಣಕ್ಕೆ ಬೆಂಬಲ ನೀಡಲು ಜನರೆಲ್ಲರೂ ಎದ್ದುನಿಂತರು.
4 ನಂತರ ರಾಜನು ಪ್ರಧಾನಯಾಜಕನಾದ ಹಿಲ್ಕೀಯನಿಗೆ, ಇತರ ಯಾಜಕರಿಗೆ, ದ್ವಾರಪಾಲಕರಿಗೆ, ಬಾಳ್‌ದೇವರಿಗೂ ಅಶೇರ ದೇವತೆಗೂ ಮತ್ತು ಆಕಾಶದ ನಕ್ಷತ್ರಗಳಿಗೂ ಉಪಯೋಗಿಸುತ್ತಿದ್ದ ಎಲ್ಲಾ ಸಲಕರಣೆಗಳನ್ನು ದೇವಾಲಯದಿಂದ ಹೊರತರುವಂತೆ ಆಜ್ಞಾಪಿಸಿದನು. ಯೋಷೀಯನು ಜೆರುಸಲೇಮಿನ ಹೊರಗೆ ಕಿದ್ರೋನ್ ಹೊಲಗಳಲ್ಲಿ ಅವುಗಳನ್ನು ಸುಟ್ಟುಹಾಕಿದನು. ಅವರು ಬೂದಿಯನ್ನು ಬೇತೇಲಿಗೆ ತೆಗೆದುಕೊಂಡು ಹೋದರು.
5 ಯೆಹೂದದ ರಾಜರುಗಳು ಯಾಜಕರಾಗಿ ಸೇವೆಮಾಡಲು ಕೆಲವು ಸಾಮಾನ್ಯ ಜನರನ್ನು ಆರಿಸಿಕೊಂಡರು. ಈ ಜನರು ಆರೋನನ ಕುಲದಿಂದ ಬಂದವರಲ್ಲ! ಈ ಸುಳ್ಳುಯಾಜಕರು ಯೆಹೂದದ ನಗರಗಳಲ್ಲಿನ ಮತ್ತು ಜೆರುಸಲೇಮಿನ ಊರುಗಳಲ್ಲಿನ ಉನ್ನತಸ್ಥಳಗಳಲ್ಲಿ ಧೂಪವನ್ನು ಸುಡುತ್ತಿದ್ದರು. ಅವರು ಬಾಳನನ್ನು, ಸೂರ್ಯನನ್ನು, ಚಂದ್ರನನ್ನು, ಆಕಾಶ ಸೈನ್ಯವಾದ ನಕ್ಷತ್ರಗಳನ್ನು ಗೌರವಿಸಲು ಧೂಪವನ್ನು ಸುಡುತ್ತಿದ್ದರು. ಆದರೆ ಯೋಷೀಯನು ಆ ಸುಳ್ಳು ಯಾಜಕರನ್ನು ನಿಲ್ಲಿಸಿದನು.
6 ಯೋಷೀಯನು ಅಶೇರಸ್ತಂಭವನ್ನು ದೇವಾಲಯದಿಂದ ತೆಗೆದುಹಾಕಿದನು. ಅವನು ಅಶೇರಸ್ತಂಭವನ್ನು ನಗರದ ಹೊರವಲಯದ ಕಿದ್ರೋನ್ ಕಣಿವೆಗೆ ತೆಗೆದುಕೊಂಡು ಹೋಗಿ ಅದನ್ನು ಅಲ್ಲಿ ಸುಟ್ಟುಹಾಕಿದನು. ನಂತರ ಅವನು ಅದನ್ನು ಪುಡಿಪುಡಿ ಮಾಡಿಸಿ ಧೂಳಿನಲ್ಲಿ ಬೆರಸಿ ಸಾಮಾನ್ಯ ಜನರ ಸ್ಮಶಾನದಲ್ಲಿ ಆ ಧೂಳನ್ನು ಚೆಲ್ಲಿದನು.
7 ನಂತರ ರಾಜನಾದ ಯೋಷೀಯನು ದೇವಾಲಯದಲ್ಲಿದ್ದ ದೇವದಾಸ ದೇವದಾಸಿಯರ ಮನೆಗಳನ್ನು ಕೆಡವಿಹಾಕಿಸಿದನು. ಆ ಮನೆಗಳಲ್ಲಿ ಸುಳ್ಳುದೇವತೆಯಾದ ಅಶೇರಳಿಗೋಸ್ಕರ ಚಿಕ್ಕ ಗುಡಾರಗಳನ್ನು ನೇಯುತ್ತಿದ್ದರು.
8-9 ಆ ಸಮಯದಲ್ಲಿ ಯಾಜಕರು ಯಜ್ಞಗಳನ್ನು ಜೆರುಸಲೇಮಿಗೆ ತರಲಿಲ್ಲ ಮತ್ತು ದೇವಾಲಯದಲ್ಲಿನ ಯಜ್ಞವೇದಿಕೆಯ ಮೇಲೆ ಅವುಗಳನ್ನು ಅರ್ಪಿಸಲಿಲ್ಲ. ಯಾಜಕರು ಯೆಹೂದದ ಎಲ್ಲಾ ನಗರಗಳಲ್ಲಿಯೂ ವಾಸಿಸುತ್ತಿದ್ದರು. ಅವರು ಆ ನಗರಗಳಲ್ಲಿನ ಉನ್ನತಸ್ಥಳಗಳಲ್ಲಿ ಧೂಪವನ್ನು ಸುಡುತ್ತಿದ್ದರು ಮತ್ತು ಯಜ್ಞಗಳನ್ನು ಅರ್ಪಿಸುತ್ತಿದ್ದರು. ಆ ಉನ್ನತಸ್ಥಳಗಳು ಗೆಬದಿಂದ ಬೇರ್ಷೆಬದವರೆಗೆ ಎಲ್ಲಾ ಕಡೆಗಳಲ್ಲಿದ್ದವು. ಯಾಜಕರು ತಮ್ಮ ಹುಳಿಯಿಲ್ಲದ ರೊಟ್ಟಿಗಳನ್ನು ಜೆರುಸಲೇಮಿನ ದೇವಾಲಯದಲ್ಲಿ ಯಾಜಕರಾಗಿದ್ದ ವಿಶೇಷ ಸ್ಥಳಗಳಲ್ಲಿ ತಿನ್ನದೆ ಆ ಊರುಗಳಲ್ಲಿ ಸಾಮಾನ್ಯ ಜನರೊಂದಿಗೆ ತಿನ್ನುತ್ತಿದ್ದರು. ಆದರೆ ರಾಜನಾದ ಯೋಷೀಯನು ಆ ಉನ್ನತಸ್ಥಳಗಳನ್ನು ನಾಶಗೊಳಿಸಿ ಆ ಯಾಜಕರನ್ನು ಜೆರುಸಲೇಮಿಗೆ ಕರೆತಂದನು. ನಗರಾಧಿಕಾರಿಯಾದ ಯೆಹೋಶುವನ ದ್ವಾರದ ಎಡಗಡೆಯಲ್ಲಿದ್ದ ಉನ್ನತಸ್ಥಳಗಳನ್ನು ಯೋಷೀಯನು ನಾಶಗೊಳಿಸಿದನು.
10 ತೋಫೆತ್ ಎನ್ನುವುದು ಬೆನ್‌ಹಿನ್ನೋಮ್‌ನ ಮಗನಿಗೆ ಸೇರಿದ ಒಂದು ಕಣಿವೆ. ಅಲ್ಲಿ ಸುಳ್ಳುದೇವರಾದ ಮೋಲೆಕನ ಗೌರವಾರ್ಥವಾಗಿ ಜನರು ತಮ್ಮ ಮಕ್ಕಳನ್ನು ಆಹುತಿ ಕೊಡುತ್ತಿದ್ದರು ಮತ್ತು ಯಜ್ಞವೇದಿಕೆಯ ಮೇಲೆ ಸುಡುತ್ತಿದ್ದರು. ಯೋಷೀಯನು, ಜನರು ಮತ್ತೆ ಆ ಸ್ಥಳವನ್ನು ಉಪಯೋಗಿಸದಂತೆ ನಾಶಗೊಳಿಸಿದನು. 11 ಪೂರ್ವಕಾಲದಲ್ಲಿ ಯೆಹೂದದ ರಾಜರುಗಳು ದೇವಾಲಯದ ಬಾಗಿಲಿನ ಹತ್ತಿರ ಕೆಲವು ಕುದುರೆಗಳನ್ನು ಮತ್ತು ರಥಗಳನ್ನು ನಿಲ್ಲಿಸುತ್ತಿದ್ದರು. ಇದು ನಾತಾನ್ ಮೆಲೆಕನೆಂಬ ಮುಖ್ಯ ಅಧಿಕಾರಿಯ ಕೋಣೆಯ ಹತ್ತಿರದಲ್ಲಿತ್ತು. ಆ ಕುದುರೆಗಳು ಮತ್ತು ರಥಗಳು ಸೂರ್ಯದೇವತೆಯ ಗೌರವಾರ್ಥವಾಗಿದ್ದವು. ಯೋಷೀಯನು ಕುದುರೆಗಳನ್ನು ತೆಗೆಸಿ ರಥಗಳನ್ನು ಸುಡಿಸಿಬಿಟ್ಟನು.
12 ಪೂರ್ವಕಾಲದಲ್ಲಿ, ಯೆಹೂದದ ರಾಜರುಗಳು ಅಹಾಬನ ಕಟ್ಟಡದ ಮಾಳಿಗೆಯ ಮೇಲೆ ಯಜ್ಞವೇದಿಕೆಗಳನ್ನು ನಿರ್ಮಿಸಿದ್ದರು. ರಾಜನಾದ ಮನಸ್ಸೆಯು ದೇವಾಲಯದ ಎರಡು ಪ್ರಾಕಾರಗಳಲ್ಲಿ ಯಜ್ಞವೇದಿಕೆಗಳನ್ನು ನಿರ್ಮಿಸಿದ್ದನು. ಯೋಷೀಯನು ಆ ಯಜ್ಞವೇದಿಕೆಗಳನ್ನೆಲ್ಲ ನಾಶಗೊಳಿಸಿ, ಅವುಗಳ ಚೂರುಗಳನ್ನು ಕಿದ್ರೋನ್ ಕಣಿವೆಗೆ ಎಸೆದನು.
13 ಪೂರ್ವಕಾಲದಲ್ಲಿ, ರಾಜನಾದ ಸೊಲೊಮೋನನು ಜೆರುಸಲೇಮಿನ ಬಳಿಯಲ್ಲಿದ್ದ ವಿಘ್ನಪರ್ವತದ ಮೇಲೆ ಕೆಲವು ಉನ್ನತಸ್ಥಳಗಳನ್ನು ನಿರ್ಮಿಸಿದ್ದನು. ಆ ಉನ್ನತಸ್ಥಳಗಳು ಪರ್ವತದ ದಕ್ಷಿಣದಿಕ್ಕಿನ ಮೇಲಿದ್ದವು. ರಾಜನಾದ ಸೊಲೊಮೋನನು ಚೀದೋನ್ಯರ ಅಷ್ಟೋರೆತ್, ಮೋವಾಬ್ಯರ ಕೆಮೋಷ್, ಅಮ್ಮೋನಿಯರ ಮಿಲ್ಕೋಮ್ ಎಂಬ ಅಸಹ್ಯ ವಿಗ್ರಹಗಳಿಗಾಗಿ ಆ ಉನ್ನತಸ್ಥಳಗಳನ್ನು ನಿರ್ಮಿಸಿದ್ದನು. ಆದರೆ ರಾಜನಾದ ಯೋಷೀಯನು ಆ ಪೂಜಾಸ್ಥಳಗಳನ್ನೆಲ್ಲಾ ನಾಶಪಡಿಸಿದನು. 14 ರಾಜನಾದ ಯೋಷೀಯನು ಎಲ್ಲಾ ಸ್ಮಾರಕಕಲ್ಲುಗಳನ್ನು ಮತ್ತು ಅಶೇರಸ್ತಂಭಗಳನ್ನು ಒಡೆದು ಹಾಕಿಸಿದನು. ಆಮೇಲೆ ಅವನು ಆ ಸ್ಥಳದ ಮೇಲೆ ಸತ್ತವರ ಎಲುಬುಗಳನ್ನು ಹರಡಿದನು.
ಪರಲೋಕದಿಂದ ಬರುವ ವ್ಯಕ್ತಿ
31 “ಮೇಲಿನಿಂದ ಬರುವ ಒಬ್ಬನು (ಯೇಸು) ಬೇರೆಲ್ಲಾ ಜನರಿಗಿಂತಲೂ ದೊಡ್ಡವನಾಗಿದ್ದಾನೆ. ಈ ಲೋಕದ ವ್ಯಕ್ತಿಯು ಈ ಲೋಕಕ್ಕೆ ಸೇರಿದವನಾಗಿದ್ದಾನೆ. ಅವನು ಈ ಲೋಕದಲ್ಲಿನ ಸಂಗತಿಗಳ ಬಗ್ಗೆ ಮಾತಾಡುತ್ತಾನೆ. ಆದರೆ ಪರಲೋಕದಿಂದ ಬರುವ ಒಬ್ಬನು ಬೇರೆಲ್ಲಾ ಜನರಿಗಿಂತಲೂ ದೊಡ್ಡವನಾಗಿದ್ದಾನೆ. 32 ಆತನು ತಾನು ಕಂಡಿರುವುದರ ಬಗ್ಗೆ ಮತ್ತು ಕೇಳಿರುವುದರ ಬಗ್ಗೆ ಸಾಕ್ಷಿ ನೀಡುತ್ತಾನೆ. ಆದರೆ ಆತನ ಸಾಕ್ಷಿಯನ್ನು ಜನರು ಸ್ವೀಕರಿಸಿಕೊಳ್ಳುವುದಿಲ್ಲ. 33 ಆತನ ಸಾಕ್ಷಿಯನ್ನು ಸ್ವೀಕರಿಸಿಕೊಳ್ಳುವ ವ್ಯಕ್ತಿಯು ದೇವರೇ ಸತ್ಯವಂತನೆಂದು ನಿರೂಪಿಸುತ್ತಾನೆ. 34 ದೇವರು ಆತನನ್ನು (ಯೇಸುವನ್ನು) ಕಳುಹಿಸಿದನು. ದೇವರು ಹೇಳುವ ಸಂಗತಿಗಳನ್ನು ಆತನು ಹೇಳುತ್ತಾನೆ. ಏಕೆಂದರೆ ದೇವರು ಆತನಿಗೆ ಆತ್ಮವನ್ನು ಅಮಿತವಾಗಿ ಕೊಡುತ್ತಾನೆ. 35 ತಂದೆಯು ಮಗನನ್ನು ಪ್ರೀತಿಸುತ್ತಾನೆ. ತಂದೆಯು ಮಗನಿಗೆ ಪ್ರತಿಯೊಂದರ ಮೇಲೆಯೂ ಅಧಿಕಾರವನ್ನು ಕೊಟ್ಟಿದ್ದಾನೆ. 36 ಮಗನಲ್ಲಿ ನಂಬಿಕೆ ಇಡುವವನು ನಿತ್ಯಜೀವವನ್ನು ಹೊಂದಿದ್ದಾನೆ. ಆದರೆ ಮಗನಿಗೆ ವಿಧೇಯನಾಗದವನು ಆ ಜೀವವನ್ನು ಎಂದಿಗೂ ಹೊಂದಿಕೊಳ್ಳುವುದಿಲ್ಲ. ದೇವರ ಕೋಪವು ಅವನ ಮೇಲೆ ನೆಲೆಗೊಂಡಿರುವುದು” ಎಂದು ಉತ್ತರಕೊಟ್ಟನು.
Kannada Holy Bible: Easy-to-Read Version. All rights reserved. © 1997 Bible League International