Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 132:1-12

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.

132 ಯೆಹೋವನೇ, ದಾವೀದನು ಅನುಭವಿಸಿದ ಕಷ್ಟವನ್ನು ಜ್ಞಾಪಿಸಿಕೋ.
ದಾವೀದನು ಯೆಹೋವನಿಗೆ ವಿಶೇಷವಾದ ವಾಗ್ದಾನವನ್ನು ಮಾಡಿದನು;
    ಇಸ್ರೇಲರ ಶೂರನಾದ ದೇವರಿಗೆ ಆತನು ವಿಶೇಷವಾದ ಹರಕೆಯೊಂದನ್ನು ಮಾಡಿಕೊಂಡನು.
“ನಾನು ಯೆಹೋವನಿಗೋಸ್ಕರ ಒಂದು ಆಲಯವನ್ನು ಕಟ್ಟುವ ತನಕ ನನ್ನ ಮನೆಯೊಳಗೆ ಪ್ರವೇಶಿಸುವುದಿಲ್ಲ;
    ನನ್ನ ಹಾಸಿಗೆಯ ಮೇಲೆ ಮಲಗಿಕೊಳ್ಳುವುದಿಲ್ಲ;
ನಾನು ನಿದ್ರಿಸುವುದೂ ಇಲ್ಲ;
    ನನ್ನ ಕಣ್ಣುಗಳಿಗೆ ವಿಶ್ರಾಂತಿಯನ್ನು ಕೊಡುವುದೂ ಇಲ್ಲ.
ಇಸ್ರೇಲರ ಶೂರನಾದ ದೇವರಿಗೆ ಒಂದು ಆಲಯವನ್ನು ಕಟ್ಟುವೆನು”
    ಎಂದು ದಾವೀದನು ಹೇಳಿದನು.

ನಾವು ಅದರ ಬಗ್ಗೆ ಎಫ್ರಾತದಲ್ಲಿ ಕೇಳಿದೆವು.
    ನಾವು ಒಡಂಬಡಿಕೆಯ ಪೆಟ್ಟಿಗೆಯನ್ನು ಕಿರ್ಯತ್ಯಾರೀಮಿನಲ್ಲಿ ಕಂಡುಕೊಂಡೆವು.
ಬನ್ನಿರಿ, ಆತನ ಪವಿತ್ರ ಮಂದಿರಕ್ಕೆ ಹೋಗೋಣ;
    ಆತನ ಪಾದಪೀಠದ ಮುಂದೆ ಆರಾಧಿಸೋಣ.
ಯೆಹೋವನೇ, ನಿನ್ನ ವಿಶ್ರಾಂತಿಯ ಸ್ಥಳದಿಂದ ಎದ್ದೇಳು.
    ನಿನ್ನ ಶಕ್ತಿಪೂರ್ಣವಾದ ಪೆಟ್ಟಿಗೆಯೊಂದಿಗೆ ಎದ್ದೇಳು.
ನಿನ್ನ ಯಾಜಕರು ನೀತಿಯೆಂಬ ವಸ್ತ್ರವನ್ನು ಧರಿಸಿಕೊಂಡಿದ್ದಾರೆ.
    ನಿನ್ನ ಭಕ್ತರು ಉಲ್ಲಾಸಿಸಲಿ.
10 ನಿನ್ನ ಸೇವಕನಾದ ದಾವೀದನಿಗೆ ನೀನು ವಾಗ್ದಾನ ಮಾಡಿರುವೆ.
    ನೀನು ಅಭಿಷೇಕಿಸಿರುವ ರಾಜನನ್ನು ತಿರಸ್ಕರಿಸಬೇಡ.
11 ಯೆಹೋವನು ದಾವೀದನಿಗೆ ಸ್ಥಿರವಾದ ವಾಗ್ದಾನವನ್ನು ಮಾಡಿದನು.
    ಆತನು ಅದನ್ನು ಬದಲಾಯಿಸುವುದೇ ಇಲ್ಲ.
    “ನಿನ್ನ ಸಂತಾನದವರನ್ನು ನಿನ್ನ ಸಿಂಹಾಸನದ ಮೇಲೆ ಕುಳ್ಳಿರಿಸುವೆನು.
12 ನಿನ್ನ ಮಕ್ಕಳು ನನ್ನ ಒಡಂಬಡಿಕೆಗೂ ನಾನು ಆಜ್ಞಾಪಿಸಿದ ಕಟ್ಟಳೆಗಳಿಗೂ ವಿಧೇಯರಾದರೆ,
    ನಿನ್ನ ಸಂತಾನದ ಒಬ್ಬನು ಯಾವಾಗಲೂ ರಾಜನಾಗಿರುವನು.”

ಕೀರ್ತನೆಗಳು 132:13-18

13 ಯೆಹೋವನು ತನ್ನ ಆಲಯಕ್ಕಾಗಿ
    ಚೀಯೋನನ್ನೇ ಆರಿಸಿಕೊಂಡನು.
14 “ಇದು ನನ್ನ ಶಾಶ್ವತ ನಿವಾಸಸ್ಥಾನ.
    ನಾನು ಇಲ್ಲೇ ಆಸನಾರೂಢನಾಗಿರುವೆನು.
    ಇದೇ ನನಗೆ ಇಷ್ಟವಾದ ಸ್ಥಳ.
15 ನಾನು ಚೀಯೋನಿಗೆ ಬೇಕಾದದ್ದನ್ನೆಲ್ಲಾ ಒದಗಿಸುವೆನು;
    ಇಲ್ಲಿಯ ಬಡವರಿಗೂ ಆಹಾರವನ್ನು ಸಮೃದ್ಧಿಯಾಗಿ ದಯಪಾಲಿಸುವೆನು;
16 ಯಾಜಕರಿಗೆ ರಕ್ಷಣೆಯೆಂಬ ವಸ್ತ್ರವನ್ನು ಹೊದಿಸುವೆನು.
    ನನ್ನ ಭಕ್ತರು ಉಲ್ಲಾಸಿಸುವರು.
17 ಇಲ್ಲಿಯೇ ನಾನು ದಾವೀದನನ್ನು ಬಲಗೊಳಿಸುವೆನು.
    ನಾನು ಅಭಿಷೇಕಿಸಿದ ಅವನಿಗೆ ದೀಪವನ್ನು ಒದಗಿಸುವೆನು.
18 ನಾನು ಅವನ ಶತ್ರುಗಳಿಗೆ ನಾಚಿಕೆಯೆಂಬ ವಸ್ತ್ರವನ್ನು ಹೊದಿಸುವೆನು.
    ಅವನ ರಾಜ್ಯವನ್ನಾದರೋ ಅಭಿವೃದ್ಧಿಗೊಳಿಸುವೆನು.”

2 ರಾಜರುಗಳು 22:1-10

ಯೋಷೀಯನು ಯೆಹೂದದಲ್ಲಿ ತನ್ನ ಆಳ್ವಿಕೆಯನ್ನು ಆರಂಭಿಸುವನು

22 ಯೋಷೀಯನು ಆಳಲಾರಂಭಿಸಿದಾಗ ಅವನಿಗೆ ಎಂಟು ವರ್ಷ ವಯಸ್ಸಾಗಿತ್ತು. ಅವನು ಮೂವತ್ತೊಂದು ವರ್ಷ ಜೆರುಸಲೇಮಿನಲ್ಲಿ ಆಳಿದನು. ಅವನ ತಾಯಿಯ ಹೆಸರು ಯದೀದಾ. ಇವಳು ಬೊಚ್ಕತ್ ಎಂಬ ಸ್ಥಳದ ಅದಾಯ ಎಂಬವನ ಮಗಳು. ಯೆಹೋವನು ಯೋಗ್ಯವೆಂದು ಹೇಳಿದ ಕಾರ್ಯಗಳನ್ನು ಯೋಷೀಯನು ಮಾಡಿದನು. ಯೋಷೀಯನು ತನ್ನ ಪೂರ್ವಿಕನಾದ ದಾವೀದನಂತೆ ದೇವರನ್ನು ಅನುಸರಿಸಿದನು. ಯೋಷೀಯನು ದೇವರ ಬೋಧನೆಗಳಲ್ಲಿ ಯಾವುದೇ ಬದಲಾವಣೆ ಮಾಡದೆ ಅವುಗಳನ್ನು ಅನುಸರಿಸಿದನು.

ಯೋಷೀಯನು ದೇವಾಲಯದ ದುರಸ್ತಿಗೆ ಆಜ್ಞಾಪಿಸುವನು

ಯೋಷೀಯನು ರಾಜನಾಗಿದ್ದ ಹದಿನೆಂಟನೆಯ ವರ್ಷದಲ್ಲಿ ಅಚೆಲ್ಯನ ಮಗನೂ ಮೆಷುಲ್ಲಾಮನ ಮೊಮ್ಮಗನೂ ಕಾರ್ಯದರ್ಶಿಯೂ ಆದ ಶಾಫಾನನನ್ನು ದೇವಾಲಯಕ್ಕೆ ಕಳುಹಿಸಿದನು. ಯೋಷೀಯನು, “ಮಹಾಯಾಜಕನಾದ ಹಿಲ್ಕೀಯನ ಬಳಿಗೆ ಹೋಗು. ದ್ವಾರಪಾಲಕರು ಜನರಿಂದ ಒಟ್ಟುಗೂಡಿಸಿರುವ ಹಣವನ್ನು ಅವನು ಲೆಕ್ಕಿಸಲಿ. ಜನರು ದೇವಾಲಯಕ್ಕೆ ತೆಗೆದುಕೊಂಡು ಬಂದು ಕೊಟ್ಟ ಹಣವೇ ಇದು. ನಂತರ ಯಾಜಕರು ದೇವಾಲಯದಲ್ಲಿ ಕೆಲಸದ ಉಸ್ತುವಾರಿಯನ್ನು ನೋಡಿಕೊಳ್ಳುವ ಮುಖ್ಯಸ್ಥರಿಗೆ ಕೊಡಲಿ. ಯಾಜಕರು ದೇವಾಲಯವನ್ನು ದುರಸ್ತಿ ಮಾಡುವ ಕೆಲಸಗಾರರಿಗೆ ಈ ಹಣವನ್ನು ವಿನಿಯೋಗಿಸಲಿ. ಅಲ್ಲಿ ಬಡಗಿಗಳು, ಶಿಲ್ಪಿಗಳು ಮತ್ತು ಕಲ್ಲುಕುಟಿಕರಿದ್ದಾರೆ. ಮರವನ್ನು ಕೊಳ್ಳಲು ಮತ್ತು ಕಲ್ಲುಗಳನ್ನು ಕೆತ್ತಿಸಲು ಈ ಹಣವನ್ನು ಬಳಸಿ. ನೀವು ಕೆಲಸಗಾರರಿಗೆ ಕೊಡುವ ಹಣವನ್ನು ಲೆಕ್ಕಹಾಕಬೇಡಿ. ಯಾಕೆಂದರೆ ಆ ಕೆಲಸಗಾರರು ನಂಬಿಗಸ್ತರಾಗಿದ್ದಾರೆ” ಎಂದು ಹೇಳಿದನು.

ದೇವಾಲಯದಲ್ಲಿ ಧರ್ಮಶಾಸ್ತ್ರವು ಸಿಕ್ಕಿತು

ಪ್ರಧಾನಯಾಜಕನಾದ ಹಿಲ್ಕೀಯನು ಕಾರ್ಯದರ್ಶಿಯಾದ ಶಾಫಾನನಿಗೆ, “ದೇವಾಲಯದಲ್ಲಿ ನನಗೆ ಧರ್ಮಶಾಸ್ತ್ರವು ಸಿಕ್ಕಿತು” ಎಂದು ಹೇಳಿದನು. ಹಿಲ್ಕೀಯನು ಅದನ್ನು ಶಾಫಾನನಿಗೆ ನೀಡಿದನು. ಶಾಫಾನನು ಅದನ್ನು ಓದಿದನು.

ಕಾರ್ಯದರ್ಶಿಯಾದ ಶಾಫಾನನು ರಾಜನಾದ ಯೋಷಿಯನ ಬಳಿಗೆ ಬಂದು ಅವನಿಗೆ, “ನಿನ್ನ ಸೇವಕರು ದೇವಾಲಯದಲ್ಲಿದ್ದ ಹಣವನ್ನು ವ್ಯಯಮಾಡಿದರು. ಅವರು ಆ ಹಣವನ್ನು ದೇವಾಲಯದಲ್ಲಿ ಕೆಲಸ ಮಾಡಿಸುವ ಮೇಲ್ವಿಚಾರಕರಿಗೆ ಒಪ್ಪಿಸಿದರು” ಎಂದು ಹೇಳಿದನು. 10 ನಂತರ ಕಾರ್ಯದರ್ಶಿಯಾದ ಶಾಫಾನನು ರಾಜನಿಗೆ, “ಯಾಜಕನಾದ ಹಿಲ್ಕೀಯನು ನನಗೆ ಒಂದು ಗ್ರಂಥವನ್ನು ಕೊಟ್ಟನು” ಎಂದು ಹೇಳಿದನು. ಶಾಫಾನನು ರಾಜನಿಗೆ ಆ ಗ್ರಂಥವನ್ನು ಓದಿದನು.

ಅಪೊಸ್ತಲರ ಕಾರ್ಯಗಳು 7:54-8:3

ಸ್ತೆಫನನು ಕೊಲ್ಲಲ್ಪಟ್ಟನು

54 ಸ್ತೆಫನನ ಈ ಮಾತುಗಳನ್ನು ಕೇಳಿದ ಆ ಯೆಹೂದ್ಯನಾಯಕರು ಬಹಳ ಕೋಪಗೊಂಡರು. ಅವರು ರೋಷದಿಂದ ಸ್ತೆಫನನ ಮೇಲೆ ಹಲ್ಲು ಕಡಿದರು. 55 ಆದರೆ ಸ್ತೆಫನನು ಪವಿತ್ರಾತ್ಮಭರಿತನಾಗಿದ್ದನು. ಅವನು ಆಕಾಶದತ್ತ ಕಣ್ಣೆತ್ತಿ ನೋಡಿ, ದೇವರ ಮಹಿಮೆಯನ್ನೂ ಯೇಸುವು ದೇವರ ಬಲಗಡೆಯಲ್ಲಿ ನಿಂತಿರುವುದನ್ನೂ ಕಂಡು, 56 “ಇಗೋ, ಪರಲೋಕವು ತೆರೆದಿರುವುದನ್ನೂ ಮನುಷ್ಯಕುಮಾರನು (ಯೇಸು) ದೇವರ ಬಲಗಡೆಯಲ್ಲಿ ನಿಂತಿರುವುದನ್ನೂ ನಾನು ನೋಡುತ್ತಿದ್ದೇನೆ!” ಎಂದು ಹೇಳಿದನು.

57 ಆಗ ಯೆಹೂದ್ಯನಾಯಕರೆಲ್ಲ ಗಟ್ಟಿಯಾಗಿ ಕೂಗಿ, ತಮ್ಮ ಕಿವಿಗಳನ್ನು ಕೈಗಳಿಂದ ಮುಚ್ಚಿಕೊಂಡರು. ಅವರೆಲ್ಲರು ಸ್ತೆಫನನ ಬಳಿಗೆ ಒಟ್ಟಾಗಿ ಓಡಿಬಂದು, 58 ಅವನನ್ನು ಪಟ್ಟಣದಿಂದ ಹೊರಗೆ ಎಳೆದೊಯ್ದು, ಅವನು ಸಾಯುವವರೆಗೂ ಅವನ ಮೇಲೆ ಕಲ್ಲುಗಳನ್ನು ಎಸೆದರು. ಸ್ತೆಫನನ ವಿರುದ್ಧವಾಗಿ ಸುಳ್ಳು ಹೇಳಿದ ಜನರು ತಮ್ಮ ಮೇಲಂಗಿಗಳನ್ನು ಬಿಚ್ಚಿ ಸೌಲನೆಂಬ ಯುವಕನಿಗೆ ಕೊಟ್ಟು, 59 ಸ್ತೆಫನನಿಗೆ ಕಲ್ಲುಗಳನ್ನು ಎಸೆದರು. ಆದರೆ ಸ್ತೆಫನನು ಪ್ರಾರ್ಥಿಸುತ್ತಾ, “ಪ್ರಭುವಾದ ಯೇಸುವೇ, ನನ್ನ ಆತ್ಮವನ್ನು ಸ್ವೀಕರಿಸಿಕೊ!” ಎಂದನು. 60 ಅವನು ಮೊಣಕಾಲೂರಿ, “ಪ್ರಭುವೇ, ಈ ಪಾಪವನ್ನು ಇವರ ಮೇಲೆ ಹೊರಿಸಬೇಡ!” ಎಂದು ಧ್ವನಿಯೆತ್ತಿ ಹೇಳುತ್ತಾ ಪ್ರಾಣಬಿಟ್ಟನು.

1-3 ಸ್ತೆಫನನ ಕೊಲೆಗೆ ಸೌಲನ ಸಮ್ಮತಿಯಿತ್ತು. ಕೆಲವು ಭಕ್ತರು ಸ್ತೆಫನನನ್ನು ಸಮಾಧಿ ಮಾಡಿದರು. ಅವರು ಅವನಿಗೋಸ್ಕರ ಬಹಳವಾಗಿ ಗೋಳಾಡಿದರು.

ವಿಶ್ವಾಸಿಗಳಿಗೆ ಹಿಂಸೆ

ಜೆರುಸಲೇಮಿನಲ್ಲಿದ್ದ ವಿಶ್ವಾಸಿಗಳ ಸಮುದಾಯವನ್ನು ಹಿಂಸಿಸಲು ಯೆಹೂದ್ಯರು ಅಂದೇ ಆರಂಭಿಸಿ ಅವರನ್ನು ಬಹಳವಾಗಿ ಸಂಕಟಪಡಿಸಿದರು. ಆ ಸಭೆಯನ್ನು ನಾಶಮಾಡಲು ಸೌಲನು ಮನೆಗಳಿಗೆ ನುಗ್ಗಿ ಗಂಡಸರನ್ನೂ ಹೆಂಗಸರನ್ನೂ ಎಳೆದೊಯ್ದು ಸೆರೆಮನೆಗೆ ಹಾಕಿದನು. ವಿಶ್ವಾಸಿಗಳೆಲ್ಲಾ ಜೆರುಸಲೇಮನ್ನು ಬಿಟ್ಟುಹೋದರು. ಅಪೊಸ್ತಲರು ಮಾತ್ರ ಅಲ್ಲೇ ಇದ್ದರು. ವಿಶ್ವಾಸಿಗಳು ಜುದೇಯ ಮತ್ತು ಸಮಾರ್ಯದ ಬೇರೆಬೇರೆ ಸ್ಥಳಗಳಿಗೆ ಹೊರಟುಹೋದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International