Revised Common Lectionary (Semicontinuous)
4 ಎಲ್ಕಾನನು ಪ್ರತಿಸಲ ಯಜ್ಞವನ್ನು ಅರ್ಪಿಸುವಾಗ, ಪೆನಿನ್ನಳಿಗೆ ಯಜ್ಞದ ಒಂದು ಭಾಗವನ್ನೂ ಅವಳ ಮಕ್ಕಳಿಗೆ ಒಂದು ಭಾಗವನ್ನೂ ಕೊಡುತ್ತಿದ್ದನು. 5 ಎಲ್ಕಾನನು ಹನ್ನಳಿಗೆ ಯಾವಾಗಲೂ ಎರಡು ಭಾಗವನ್ನು ಕೊಡುತ್ತಿದ್ದನು. ಯೆಹೋವನು ಹನ್ನಳಿಗೆ ಮಕ್ಕಳನ್ನು ಕೊಡದೇ ಇದ್ದರೂ, ಎಲ್ಕಾನನು ಎರಡು ಭಾಗವನ್ನು ಕೊಡುತ್ತಿದ್ದನು. ಎಲ್ಕಾನನು ಹನ್ನಳನ್ನು ಬಹಳವಾಗಿ ಪ್ರೀತಿಸುತ್ತಿದ್ದ ಕಾರಣ ಹೀಗೆ ಮಾಡುತ್ತಿದ್ದನು.
ಪೆನಿನ್ನಳು ಹನ್ನಳನ್ನು ನೋಯಿಸುವಳು
6 ಪೆನಿನ್ನಳು ಯಾವಾಗಲೂ ಹನ್ನಳನ್ನು ಕೆಣಕಿ ನೋವು ಮಾಡುತ್ತಿದ್ದಳು. ಹನ್ನಳು ಬಂಜೆಯಾಗಿದ್ದುದೇ ಅದಕ್ಕೆ ಕಾರಣ. 7 ಪ್ರತಿ ವರ್ಷವೂ ಶೀಲೋವಿನಲ್ಲಿದ್ದ ಯೆಹೋವನ ಆಲಯಕ್ಕೆ ಅವರ ಕುಟುಂಬವು ಹೋದಾಗಲೆಲ್ಲ ಪೆನಿನ್ನಳು ಹನ್ನಳನ್ನು ಕೆಣಕಿ ನೋವು ಮಾಡುತ್ತಿದ್ದಳು. ಒಂದು ದಿನ ಎಲ್ಕಾನನು ಯಜ್ಞವನ್ನು ಅರ್ಪಿಸುವಾಗ, ಹನ್ನಳು ನೊಂದುಕೊಂಡು ಅಳಲಾರಂಭಿಸಿದಳು. ಹನ್ನಳು ಊಟಮಾಡಲೇ ಇಲ್ಲ. 8 ಅವಳ ಗಂಡನಾದ ಎಲ್ಕಾನನು ಅವಳನ್ನು ಕುರಿತು, “ಹನ್ನಾ, ಯಾಕೆ ಅಳುತ್ತಿರುವೆ? ಯಾಕೆ ಊಟಮಾಡುತ್ತಿಲ್ಲ? ಯಾಕೆ ವ್ಯಸನದಿಂದಿರುವೆ? ನಿನಗೆ ನಾನಿಲ್ಲವೇ? ನಾನು ನಿನ್ನ ಗಂಡ. ನಾನು ನಿನಗೆ ಹತ್ತು ಗಂಡುಮಕ್ಕಳಿಗಿಂತಲೂ ಹೆಚ್ಚಾಗಿದ್ದೇನಲ್ಲಾ” ಎಂದು ಹೇಳಿದನು.
ಹನ್ನಳ ಪ್ರಾರ್ಥನೆ
9 ಹನ್ನಳು ಅನ್ನಪಾನಗಳನ್ನು ತೆಗೆದುಕೊಂಡು ಸದ್ದಿಲ್ಲದೆ ಮೇಲೆದ್ದು ಯೆಹೋವನಿಗೆ ಪ್ರಾರ್ಥಿಸಲು ಹೋದಳು. ಯೆಹೋವನ ಪವಿತ್ರ ಆಲಯದ ದ್ವಾರದ ಹತ್ತಿರ ಯಾಜಕನಾದ ಏಲಿಯು ಕುಳಿತಿದ್ದನು. 10 ಹನ್ನಳು ಬಹು ದುಃಖಿತಳಾಗಿದ್ದುದರಿಂದ ಕಣ್ಣೀರು ಸುರಿಯುತ್ತಿತ್ತು. ಅವಳು ಯೆಹೋವನಿಗೆ ಪ್ರಾರ್ಥಿಸುತ್ತಿದ್ದಳು. 11 ಅವಳು ದೇವರಲ್ಲಿ ಒಂದು ವಿಶೇಷ ವಾಗ್ದಾನವನ್ನು ಮಾಡಿದಳು. ಅವಳು, “ಯೆಹೋವನೇ, ಸರ್ವಶಕ್ತನೇ,[a] ನಾನು ಎಷ್ಟು ದುಃಖಿತಳೆಂಬುದನ್ನು ನೋಡು, ನನ್ನನ್ನು ಜ್ಞಾಪಿಸಿಕೊ! ನನ್ನನ್ನು ಮರೆಯದಿರು. ನೀನು ನನಗೊಬ್ಬ ಮಗನನ್ನು ಕರುಣಿಸಿದರೆ, ಅವನು ಜೀವದಿಂದಿರುವ ತನಕ ನಿನ್ನವನಾಗಿರುವಂತೆ ನಿನಗೇ ಪ್ರತಿಷ್ಠಿಸುತ್ತೇನೆ. ಅವನು ನಾಜೀರನಾಗಿರುವನು. ಅವನು ದ್ರಾಕ್ಷಾರಸವನ್ನಾಗಲಿ ಇತರೆ ಮದ್ಯವನ್ನಾಗಲಿ ಸೇವಿಸುವುದಿಲ್ಲ. ಅವನ ತಲೆಕೂದಲನ್ನು ಕ್ಷೌರ ಕತ್ತಿಯಿಂದ ಕತ್ತರಿಸುವುದಿಲ್ಲ”[b] ಎಂದು ಹೇಳಿದಳು
12 ಹನ್ನಳು ಬಹಳ ಹೊತ್ತಿನವರೆಗೆ ಯೆಹೋವನಿಗೆ ಪ್ರಾರ್ಥನೆ ಮಾಡಿದಳು. ಅವಳು ಪ್ರಾರ್ಥನೆ ಮಾಡುತ್ತಿದ್ದಾಗ ಏಲಿಯು ಅವಳ ಬಾಯನ್ನೇ ನೋಡುತ್ತಿದ್ದನು. 13 ಹನ್ನಳು ತನ್ನ ಹೃದಯದಲ್ಲಿಯೇ ಪ್ರಾರ್ಥಿಸುತ್ತಿದ್ದಳು. ಅವಳ ತುಟಿಗಳು ಚಲಿಸಿದರೂ ಮಾತುಗಳು ಕೇಳಿಸಲಿಲ್ಲ. ಅವಳು ಮದ್ಯಪಾನ ಮಾಡಿರುತ್ತಾಳೆಂದು 14 ಏಲಿಯು ನೆನಸಿ, “ನೀನು ಹೆಚ್ಚು ಕುಡಿದಿರುವೆ. ಅಮಲನ್ನು ಇಳಿಸಿಕೊ” ಎಂದು ಹನ್ನಳಿಗೆ ಹೇಳಿದನು.
15 ಹನ್ನಳು “ಸ್ವಾಮೀ, ನಾನು ಯಾವುದೇ ದ್ರಾಕ್ಷಾರಸವನ್ನಾಗಲಿ ಮದ್ಯವನ್ನಾಗಲಿ ಕುಡಿದಿಲ್ಲ. ನಾನು ಬಹುದುಃಖಿತಳು. ನಾನು ಯೆಹೋವನಲ್ಲಿ ನನ್ನ ಎಲ್ಲ ತೊಂದರೆಗಳನ್ನು ನಿವೇದಿಸಿಕೊಳ್ಳುತ್ತಿದ್ದೆನು. 16 ನನ್ನನ್ನು ಅಯೋಗ್ಯ ಹೆಂಗಸೆಂದು ನೆನಸಬೇಡಿ. ನಾನು ಬಹು ದುಃಖಿತಳಾಗಿರುವುದರಿಂದ ಮತ್ತು ಹೆಚ್ಚು ನೊಂದಿರುವುದರಿಂದ ದೀರ್ಘಕಾಲ ಪ್ರಾರ್ಥನೆ ಮಾಡಿದೆ” ಎಂದು ಉತ್ತರಿಸಿದಳು.
17 ಏಲಿಯು, “ಸಮಾಧಾನದಿಂದ ಹೋಗು. ಇಸ್ರೇಲಿನ ದೇವರು ನಿನ್ನ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ” ಎಂದು ಉತ್ತರಿಸಿದನು.
18 ಹನ್ನಳು, “ನನ್ನ ಮೇಲೆ ನಿಮ್ಮ ದಯೆಯಿರಲಿ” ಎಂದು ಹೇಳಿದಳು. ಆಗ ಅವಳು ತನ್ನ ಮಾರ್ಗದಲ್ಲಿಯೇ ಹಿಂದಿರುಗಿ. ಸ್ವಲ್ಪ ಊಟ ಮಾಡಿದಳು. ಅಂದಿನಿಂದ ಅವಳು ದುಃಖಿತಳಾಗಲಿಲ್ಲ.
19 ಎಲ್ಕಾನನ ಕುಟುಂಬದವರು ಮರುದಿನ ಬೆಳಿಗ್ಗೆ ಎದ್ದು ಯೆಹೋವನನ್ನು ಆರಾಧಿಸಿ, ರಾಮಾತಯಿಮಿನಲ್ಲಿದ್ದ ತಮ್ಮ ಮನೆಗೆ ಹಿಂದಿರುಗಿದರು.
ಸಮುವೇಲನ ಜನನ
ಎಲ್ಕಾನನು ಹನ್ನಳನ್ನು ಕೂಡಿದನು. ಯೆಹೋವನು ಹನ್ನಳನ್ನು ಜ್ಞಾಪಿಸಿಕೊಂಡನು. 20 ಹನ್ನಳು ಗರ್ಭಿಣಿಯಾಗಿ ಮಗನನ್ನು ಹೆತ್ತಳು. ಹನ್ನಳು ಆ ಮಗನಿಗೆ ಸಮುವೇಲನೆಂದು ಹೆಸರಿಟ್ಟಳು. ಅವಳು, “ಅವನ ಹೆಸರು ಸಮುವೇಲ, ಏಕೆಂದರೆ ನಾನು ಅವನಿಗಾಗಿ ಯೆಹೋವನಲ್ಲಿ ಪ್ರಾರ್ಥಿಸಿದ್ದೆ” ಎಂದಳು.
ಹನ್ನಳ ಸ್ತೋತ್ರ
2 ಹನ್ನಳು ಇಂತೆಂದಳು:
“ನನ್ನ ಹೃದಯವು ಯೆಹೋವನಲ್ಲಿ ಉಲ್ಲಾಸಿಸುತ್ತದೆ.
ನಾನು ನನ್ನ ದೇವರಾದ ಯೆಹೋವನಲ್ಲಿ ಬಲಶಾಲಿಯಾಗಿದ್ದೇನೆ.
ನಾನು ನನ್ನ ಶತ್ರುಗಳ ಬಗ್ಗೆ ನಗುವೆನು.[a]
ನಾನು ನಿನ್ನ ರಕ್ಷಣೆಯಲ್ಲಿ ಆನಂದಿಸುತ್ತೇನೆ.
2 ಯೆಹೋವನಂತಹ ಪವಿತ್ರ ದೇವರು ಬೇರೆ ಯಾರೂ ಇಲ್ಲ.
ನಿನ್ನ ಹೊರತು ಅನ್ಯದೇವರಿಲ್ಲ!
ನಮ್ಮ ದೇವರಿಗಿಂತ ಬೇರೊಂದು ಬಂಡೆಯಿಲ್ಲ.
3 ಇನ್ನು ಮುಂದೆ ಬಡಾಯಿಕೊಚ್ಚಬೇಡಿ!
ಸೊಕ್ಕಿನ ಮಾತುಗಳನ್ನು ಆಡಬೇಡಿ!
ಏಕೆಂದರೆ ಯೆಹೋವನು ಪ್ರತಿಯೊಂದನ್ನು ಬಲ್ಲನು.
ಆತನು ಮನುಷ್ಯರನ್ನು ಮುನ್ನಡೆಸುತ್ತಾನೆ ಮತ್ತು ತೂಗಿ ನೋಡುತ್ತಾನೆ.
4 ಶಕ್ತಿಶಾಲಿ ಯೋಧರ ಬಿಲ್ಲುಗಳು ಮುರಿದುಹೋಗುತ್ತವೆ.
ಬಲಹೀನರು ಶಕ್ತಿವಂತರಾಗುವರು.
5 ಹಿಂದೆ ಆಹಾರವನ್ನು ಸಮೃದ್ಧಿಕರವಾಗಿ ಹೊಂದಿದ್ದವರು
ಆಹಾರಕ್ಕಾಗಿ ದುಡಿಯಬೇಕಾಗುವುದು.
ಹಿಂದೆ ಆಹಾರವಿಲ್ಲದೆ ಹಸಿದಿದ್ದವರಿಗೆ
ಇಂದು ಆಹಾರ ಸಮೃದ್ಧಿಕರವಾಗಿರುವುದು!
ಬಂಜೆಗೆ ಈಗ ಏಳು ಜನ ಮಕ್ಕಳಿರುವರು.
ಆದರೆ ಹೆಚ್ಚು ಮಕ್ಕಳಿದ್ದ ತಾಯಿ ಇಂದು ವೇದನೆಗೊಂಡಿರುವಳು
ಏಕೆಂದರೆ ಅವಳ ಮಕ್ಕಳೆಲ್ಲ ಸತ್ತುಹೋಗಿದ್ದಾರೆ.
6 ಯೆಹೋವನು ಜನರಿಗೆ ಸಾವನ್ನೂ ತರುವನು.
ಅಂತೆಯೇ ಅವರಿಗೆ ಜೀವವನ್ನೂ ದಯಪಾಲಿಸುವನು.
ಆತನು ಅವರಿಗೆ ಮರುಜೀವವನ್ನು ದಯಪಾಲಿಸಬಲ್ಲನು.
ಯೆಹೋವನು ಜನರನ್ನು ಮರಣ ಸ್ಥಳವಾದ ಪಾತಾಳಕ್ಕೆ ತಳ್ಳುವನು.
7 ಯೆಹೋವನು ಜನರನ್ನು ಬಡವರನ್ನಾಗಿಸುತ್ತಾನೆ.
ಆತನು ಜನರನ್ನು ಹಣವಂತರನ್ನಾಗಿಸುತ್ತಾನೆ.
ಯೆಹೋವನು ಜನರನ್ನು ದೀನರನ್ನಾಗಿಸುತ್ತಾನೆ.
ಆತನು ಜನರನ್ನು ದೊಡ್ಡವರನ್ನಾಗಿಸುತ್ತಾನೆ.
8 ಯೆಹೋವನು ಬಡವರನ್ನು ಧೂಳಿನಿಂದ ಮೇಲಕ್ಕೆತ್ತುತ್ತಾನೆ.
ಯೆಹೋವನು ದೀನರನ್ನು ತಿಪ್ಪೆಯಿಂದ ಮೇಲಕ್ಕೆತ್ತುತ್ತಾನೆ.
ಯೆಹೋವನು ಬಡವರನ್ನು ರಾಜಕುಮಾರರೊಂದಿಗೆ ಕುಳ್ಳಿರಿಸುತ್ತಾನೆ.
ಆತನು ಬಡವರನ್ನು ಗೌರವಪೀಠದಲ್ಲಿ ಕುಳ್ಳಿರಿಸುತ್ತಾನೆ.
ಲೋಕವೂ ಅದರ ಅಡಿಪಾಯಗಳೂ ಯೆಹೋವನವೇ.
ಆತನು ಆ ಕಂಬಗಳ ಮೇಲೆ ಲೋಕವನ್ನು ನಿಲ್ಲಿಸಿರುವನು.
9 ಯೆಹೋವನು ತನ್ನ ಪವಿತ್ರ ಜನರನ್ನು ರಕ್ಷಿಸುವನು.
ಆತನು ಅವರನ್ನು ಎಡವದಂತೆ ಕಾಪಾಡುವನು.
ಆದರೆ ಕೆಟ್ಟವರು ನಾಶವಾಗಿ ಕತ್ತಲೆಯಲ್ಲಿ ಬೀಳುವರು.
ಅವರ ಶಕ್ತಿ ಅವರಿಗೆ ಜಯನೀಡಲಾರದು.
10 ಯೆಹೋವನು ತನ್ನ ಶತ್ರುಗಳನ್ನು ನಾಶಗೊಳಿಸುವನು.
ಮಹೋನ್ನತನಾದ ದೇವರು ಪರಲೋಕದಲ್ಲಿ ಜನರಿಗೆ ವಿರುದ್ಧವಾಗಿ ಗುಡುಗುವನು.
ಯೆಹೋವನು ಬಹುದೂರದ ದೇಶಗಳಿಗೂ ತೀರ್ಪನ್ನು ಕೊಡುವನು.
ಆತನು ತನ್ನ ರಾಜನಿಗೆ ಶಕ್ತಿಯನ್ನು ಕೊಡುವನು.
ತಾನು ಅಭಿಷೇಕಿಸಿದ ರಾಜನನ್ನು ಬಲಗೊಳಿಸುವನು.”
11 ಪ್ರತಿದಿನವೂ ಯಾಜಕರು ನಿಂತುಕೊಂಡು ತಮ್ಮ ಧಾರ್ಮಿಕ ಸೇವೆಯನ್ನು ಮಾಡುತ್ತಾರೆ. ಅವರು ಮತ್ತೆಮತ್ತೆ ಅದೇ ಯಜ್ಞಗಳನ್ನು ಅರ್ಪಿಸುತ್ತಾರೆ. ಆದರೆ ಅವರ ಪಾಪಗಳನ್ನು ತೆಗೆದುಹಾಕಲು ಯಜ್ಞಗಳಿಗೆ ಎಂದಿಗೂ ಸಾಧ್ಯವಿಲ್ಲ. 12 ಆದರೆ ಕ್ರಿಸ್ತನು ಪಾಪಗಳಿಗಾಗಿ ಶಾಶ್ವತವಾದ ಒಂದೇ ಯಜ್ಞವನ್ನು ಅರ್ಪಿಸಿದನು. ನಂತರ ಆತನು ದೇವರ ಬಲಗಡೆಯಲ್ಲಿ ಕುಳಿತುಕೊಂಡನು. 13 ಶತ್ರುಗಳನ್ನು ತನ್ನ ಪಾದಪೀಠವನ್ನಾಗಿ ಮಾಡುವ ತನಕ ಕ್ರಿಸ್ತನು ಕಾಯುತ್ತಿದ್ದಾನೆ. 14 ಒಂದೇ ಯಜ್ಞದ ಮೂಲಕ ಆತನು ತನ್ನ ಜನರನ್ನು ಎಂದೆಂದಿಗೂ ನಿಷ್ಕಳಂಕರನ್ನಾಗಿ ಮಾಡಿದನು. ಪರಿಶುದ್ಧರಾಗಿ ಮಾಡಲ್ಪಡುತ್ತಿರುವ ಜನರೇ ಇವರು.
15 ಪವಿತ್ರಾತ್ಮನು ನಮಗೆ ಇದರ ಬಗ್ಗೆ ತಿಳಿಸಿದ್ದಾನೆ. ಮೊದಲನೆಯದಾಗಿ ಆತನು ಹೇಳುವುದೇನೆಂದರೆ:
16 “ಮುಂದಿನ ಕಾಲದಲ್ಲಿ ನಾನು ನನ್ನ ಜನರೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಯು ಹೀಗಿದೆ ಎಂದು ಪ್ರಭುವು ಹೇಳುತ್ತಾನೆ:
ನಾನು ನನ್ನ ಆಜ್ಞೆಗಳನ್ನು ಅವರ ಹೃದಯದಲ್ಲಿ ಇಡುವೆನು;
ಅವರ ಮನಸ್ಸಿನ ಮೇಲೆ ಬರೆಯುವೆನು.”(A)
17 ನಂತರ ಆತನು ಹೇಳುವುದೇನೆಂದರೆ:
“ನಾನು ಅವರ ಪಾಪಗಳನ್ನು ಮತ್ತು ಅವರ ಕೆಟ್ಟಕಾರ್ಯಗಳನ್ನು ಕ್ಷಮಿಸುತ್ತೇನೆ.
ಅವುಗಳನ್ನು ಮತ್ತೆಂದಿಗೂ ನೆನಪು ಮಾಡಿಕೊಳ್ಳುವುದಿಲ್ಲ.”(B)
18 ಈ ಪಾಪಗಳೆಲ್ಲಾ ಕ್ಷಮಿಸಲ್ಪಟ್ಟ ಮೇಲೆ, ಅವುಗಳಿಗಾಗಿ ಮತ್ತೆ ಯಜ್ಞಗಳನ್ನು ಅರ್ಪಿಸುವುದು ಅಗತ್ಯವಿಲ್ಲ.
ಸಮೀಪಕ್ಕೆ ಬನ್ನಿರಿ
19-20 ಸಹೋದರ ಸಹೋದರಿಯರೇ, ನಾವು ಮಹಾ ಪವಿತ್ರಸ್ಥಳವನ್ನು ಪ್ರವೇಶಿಸಲು ಸಂಪೂರ್ಣವಾಗಿ ಸ್ವತಂತ್ರರಾಗಿದ್ದೇವೆ. ಯೇಸು ನಮಗಾಗಿ ತೆರೆದಿರುವ ಹೊಸ ಮಾರ್ಗದ ಮೂಲಕ ನಾವು ಭಯವಿಲ್ಲದೆ ಪ್ರವೇಶಿಸಬಹುದು. ಅದು ಜೀವವುಳ್ಳ ಮಾರ್ಗ. ಕ್ರಿಸ್ತನ ದೇಹವೆಂಬ ತೆರೆಯ ಮೂಲಕ ಈ ಹೊಸ ಮಾರ್ಗವು ನಮ್ಮನ್ನು ಮುಂದಕ್ಕೆ ಕೊಂಡೊಯ್ಯವುದು. 21 ದೇವರ ಮನೆಯನ್ನು ಆಳಲು ನಮಗೊಬ್ಬ ಶ್ರೇಷ್ಠ ಯಾಜಕನಿರುವನು. 22 ನಾವು ತೊಳೆಯಲ್ಪಟ್ಟವರಾಗಿದ್ದು ಕೆಟ್ಟ ಮನಸ್ಸಾಕ್ಷಿಯಿಂದ ಬಿಡುಗಡೆ ಹೊಂದಿದ್ದೇವೆ. ನಮ್ಮ ದೇಹಗಳನ್ನು ಶುದ್ಧವಾದ ನೀರಿನಿಂದ ತೊಳೆಯಲಾಗಿದೆ. ಆದ್ದರಿಂದ ಪೂರ್ಣನಂಬಿಕೆಯಿಂದಲೂ ಶುದ್ಧವಾದ ಹೃದಯದಿಂದಲೂ ದೇವರ ಬಳಿಗೆ ಬರೋಣ. 23 ನಮ್ಮಲ್ಲಿರುವ ನಿರೀಕ್ಷೆಯನ್ನು ದೃಢವಾಗಿ ಕಾಯ್ದುಕೊಂಡು ಅದರ ಬಗ್ಗೆ ಜನರಿಗೆ ತಿಳಿಸುವುದರಲ್ಲಿ ದೃಢವಾಗಿರೋಣ. ದೇವರು ತನ್ನ ವಾಗ್ದಾನವನ್ನು ಈಡೇರಿಸುತ್ತಾನೆ ಎಂಬ ಭರವಸೆ ನಮ್ಮಲ್ಲಿರಬೇಕು.
ಒಬ್ಬರಿಗೊಬ್ಬರು ಸಹಾಯಮಾಡಿ ಶಕ್ತಿಯುಳ್ಳವರಾಗಿರಿ
24 ಒಬ್ಬರಿಗೊಬ್ಬರು ಹಿತಚಿಂತಕರಾಗಿರೋಣ. ಆಗ ಒಬ್ಬರಿಗೊಬ್ಬರು ಪ್ರೀತಿಯನ್ನು ತೋರ್ಪಡಿಸುವುದಕ್ಕೂ ಒಳ್ಳೆಯಕಾರ್ಯಗಳನ್ನು ಮಾಡುವುದಕ್ಕೂ ಪ್ರೋತ್ಸಾಹಿಸಲು ಸಾಧ್ಯವಾಗುತ್ತದೆ. 25 ನಾವು ಸಭೆಯಾಗಿ ಸೇರಿಬರುವುದನ್ನು ಬಿಡಬಾರದು. ಕೆಲವರು ಸಭೆಗೆ ಬರುತ್ತಿಲ್ಲ. ನಾವು ಒಟ್ಟಾಗಿ ಸೇರಿಬಂದು ಒಬ್ಬರನ್ನೊಬ್ಬರು ಬಲಪಡಿಸಬೇಕು. ಯೇಸುವು ಪ್ರತ್ಯಕ್ಷನಾಗುವ ದಿನ[a] ಸಮೀಪವಾಗುತ್ತಿರುವುದರಿಂದ ನೀವು ಇದನ್ನು ಮತ್ತಷ್ಟು ಹೆಚ್ಚಾಗಿ ಮಾಡಬೇಕು.
ದೇವಾಲಯದ ಮುಂದಿನ ವಿನಾಶ
(ಮತ್ತಾಯ 24:1-44; ಲೂಕ 21:5-33)
13 ಯೇಸು ದೇವಾಲಯದಿಂದ ಹೊರಡುತ್ತಿರಲು ಆತನ ಶಿಷ್ಯರಲ್ಲಿ ಒಬ್ಬನು ಆತನಿಗೆ, “ಗುರುವೇ, ನೋಡು! ಈ ದೇವಾಲಯ ಎಂಥಾ ದೊಡ್ಡ ಕಲ್ಲುಗಳಿಂದ ಮಾಡಿದ ಎಂಥಾ ಸುಂದರ ಕಟ್ಟಡಗಳನ್ನು ಹೊಂದಿದೆ” ಎಂದನು.
2 ಯೇಸು, “ನೀವು ಈ ದೊಡ್ಡ ಕಟ್ಟಡಗಳನ್ನು ನೋಡುತ್ತಿರುವಿರಾ? ಇವುಗಳನ್ನೆಲ್ಲ ನಾಶಪಡಿಸಲಾಗುವುದು. ಪ್ರತಿಯೊಂದು ಕಲ್ಲನ್ನೂ ನೆಲಕ್ಕೆ ಕೆಡವಲಾಗುವುದು. ಒಂದು ಕಲ್ಲಿನ ಮೇಲೆ ಮತ್ತೊಂದು ಕಲ್ಲು ಉಳಿಯುವುದಿಲ್ಲ” ಎಂದನು.
3 ನಂತರ ಯೇಸು ಆಲಿವ್ ಮರಗಳ ಗುಡ್ಡದ ಮೇಲೆ, ಪೇತ್ರ, ಯಾಕೋಬ, ಯೋಹಾನ ಮತ್ತು ಅಂದ್ರೆಯರ ಸಂಗಡ ಕುಳಿತಿದ್ದನು. ಅವರೆಲ್ಲರಿಗೂ ಅಲ್ಲಿಂದ ದೇವಾಲಯ ಕಾಣುತಿತ್ತು. 4 ಆ ಶಿಷ್ಯರು ಯೇಸುವಿಗೆ, “ಈ ಸಂಗತಿಗಳೆಲ್ಲಾ ಯಾವಾಗ ಸಂಭವಿಸುತ್ತವೆ? ಅವುಗಳು ನಡೆಯುವ ಕಾಲಕ್ಕೆ ಸೂಚನೆಯೇನು?” ಎಂದು ಕೇಳಿದರು.
5 ಅದಕ್ಕೆ ಯೇಸು, “ಎಚ್ಚರಿಕೆಯಿಂದಿರಿ! ನಿಮಗೆ ಮೋಸ ಮಾಡಲು ಯಾರಿಗೂ ಆಸ್ಪದ ಕೊಡಬೇಡಿ. 6 ಅನೇಕ ಜನರು ಬಂದು, ‘ನಾನೇ ಕ್ರಿಸ್ತನು; ನಾನೇ ಕ್ರಿಸ್ತನು’ ಎನ್ನುತ್ತಾ ಅನೇಕ ಜನರನ್ನು ಮೋಸಗೊಳಿಸುತ್ತಾರೆ. 7 ಸಮೀಪದಲ್ಲಿ ನಡೆಯುತ್ತಿರುವ ಯುದ್ಧಗಳ ಶಬ್ಧವನ್ನೂ ಬಹುದೂರದಲ್ಲಿ ನಡೆಯುತ್ತಿರುವ ಯುದ್ಧಗಳ ಬಗ್ಗೆ ಸುದ್ದಿಯನ್ನೂ ನೀವು ಕೇಳುವಿರಿ. ಆದರೆ ಭಯಪಡಬೇಡಿ. ಅಂತ್ಯಕಾಲ ಬರುವುದಕ್ಕಿಂತ ಮುಂಚೆ ಈ ಸಂಗತಿಗಳು ನಡೆಯಲೇಬೇಕು. 8 ಜನಾಂಗಗಳು ಇತರ ಜನಾಂಗಗಳ ವಿರುದ್ಧ ಹೋರಾಡುತ್ತವೆ. ರಾಜ್ಯಗಳು ಇತರ ರಾಜ್ಯಗಳ ವಿರುದ್ಧ ಹೋರಾಡುತ್ತವೆ. ಜನರಿಗೆ ತಿನ್ನಲು ಏನೂ ಆಹಾರವಿಲ್ಲದಂಥ ಕಾಲ ಬರುತ್ತದೆ. ಅನೇಕ ಸ್ಥಳಗಳಲ್ಲಿ ಭೂಕಂಪಗಳಾಗುತ್ತವೆ. ಈ ಸಂಗತಿಗಳು ಪ್ರಸವವೇದನೆಯಂತಿರುತ್ತವೆ.
Kannada Holy Bible: Easy-to-Read Version. All rights reserved. © 1997 Bible League International