Revised Common Lectionary (Semicontinuous)
ಹನ್ನಳ ಸ್ತೋತ್ರ
2 ಹನ್ನಳು ಇಂತೆಂದಳು:
“ನನ್ನ ಹೃದಯವು ಯೆಹೋವನಲ್ಲಿ ಉಲ್ಲಾಸಿಸುತ್ತದೆ.
ನಾನು ನನ್ನ ದೇವರಾದ ಯೆಹೋವನಲ್ಲಿ ಬಲಶಾಲಿಯಾಗಿದ್ದೇನೆ.
ನಾನು ನನ್ನ ಶತ್ರುಗಳ ಬಗ್ಗೆ ನಗುವೆನು.[a]
ನಾನು ನಿನ್ನ ರಕ್ಷಣೆಯಲ್ಲಿ ಆನಂದಿಸುತ್ತೇನೆ.
2 ಯೆಹೋವನಂತಹ ಪವಿತ್ರ ದೇವರು ಬೇರೆ ಯಾರೂ ಇಲ್ಲ.
ನಿನ್ನ ಹೊರತು ಅನ್ಯದೇವರಿಲ್ಲ!
ನಮ್ಮ ದೇವರಿಗಿಂತ ಬೇರೊಂದು ಬಂಡೆಯಿಲ್ಲ.
3 ಇನ್ನು ಮುಂದೆ ಬಡಾಯಿಕೊಚ್ಚಬೇಡಿ!
ಸೊಕ್ಕಿನ ಮಾತುಗಳನ್ನು ಆಡಬೇಡಿ!
ಏಕೆಂದರೆ ಯೆಹೋವನು ಪ್ರತಿಯೊಂದನ್ನು ಬಲ್ಲನು.
ಆತನು ಮನುಷ್ಯರನ್ನು ಮುನ್ನಡೆಸುತ್ತಾನೆ ಮತ್ತು ತೂಗಿ ನೋಡುತ್ತಾನೆ.
4 ಶಕ್ತಿಶಾಲಿ ಯೋಧರ ಬಿಲ್ಲುಗಳು ಮುರಿದುಹೋಗುತ್ತವೆ.
ಬಲಹೀನರು ಶಕ್ತಿವಂತರಾಗುವರು.
5 ಹಿಂದೆ ಆಹಾರವನ್ನು ಸಮೃದ್ಧಿಕರವಾಗಿ ಹೊಂದಿದ್ದವರು
ಆಹಾರಕ್ಕಾಗಿ ದುಡಿಯಬೇಕಾಗುವುದು.
ಹಿಂದೆ ಆಹಾರವಿಲ್ಲದೆ ಹಸಿದಿದ್ದವರಿಗೆ
ಇಂದು ಆಹಾರ ಸಮೃದ್ಧಿಕರವಾಗಿರುವುದು!
ಬಂಜೆಗೆ ಈಗ ಏಳು ಜನ ಮಕ್ಕಳಿರುವರು.
ಆದರೆ ಹೆಚ್ಚು ಮಕ್ಕಳಿದ್ದ ತಾಯಿ ಇಂದು ವೇದನೆಗೊಂಡಿರುವಳು
ಏಕೆಂದರೆ ಅವಳ ಮಕ್ಕಳೆಲ್ಲ ಸತ್ತುಹೋಗಿದ್ದಾರೆ.
6 ಯೆಹೋವನು ಜನರಿಗೆ ಸಾವನ್ನೂ ತರುವನು.
ಅಂತೆಯೇ ಅವರಿಗೆ ಜೀವವನ್ನೂ ದಯಪಾಲಿಸುವನು.
ಆತನು ಅವರಿಗೆ ಮರುಜೀವವನ್ನು ದಯಪಾಲಿಸಬಲ್ಲನು.
ಯೆಹೋವನು ಜನರನ್ನು ಮರಣ ಸ್ಥಳವಾದ ಪಾತಾಳಕ್ಕೆ ತಳ್ಳುವನು.
7 ಯೆಹೋವನು ಜನರನ್ನು ಬಡವರನ್ನಾಗಿಸುತ್ತಾನೆ.
ಆತನು ಜನರನ್ನು ಹಣವಂತರನ್ನಾಗಿಸುತ್ತಾನೆ.
ಯೆಹೋವನು ಜನರನ್ನು ದೀನರನ್ನಾಗಿಸುತ್ತಾನೆ.
ಆತನು ಜನರನ್ನು ದೊಡ್ಡವರನ್ನಾಗಿಸುತ್ತಾನೆ.
8 ಯೆಹೋವನು ಬಡವರನ್ನು ಧೂಳಿನಿಂದ ಮೇಲಕ್ಕೆತ್ತುತ್ತಾನೆ.
ಯೆಹೋವನು ದೀನರನ್ನು ತಿಪ್ಪೆಯಿಂದ ಮೇಲಕ್ಕೆತ್ತುತ್ತಾನೆ.
ಯೆಹೋವನು ಬಡವರನ್ನು ರಾಜಕುಮಾರರೊಂದಿಗೆ ಕುಳ್ಳಿರಿಸುತ್ತಾನೆ.
ಆತನು ಬಡವರನ್ನು ಗೌರವಪೀಠದಲ್ಲಿ ಕುಳ್ಳಿರಿಸುತ್ತಾನೆ.
ಲೋಕವೂ ಅದರ ಅಡಿಪಾಯಗಳೂ ಯೆಹೋವನವೇ.
ಆತನು ಆ ಕಂಬಗಳ ಮೇಲೆ ಲೋಕವನ್ನು ನಿಲ್ಲಿಸಿರುವನು.
9 ಯೆಹೋವನು ತನ್ನ ಪವಿತ್ರ ಜನರನ್ನು ರಕ್ಷಿಸುವನು.
ಆತನು ಅವರನ್ನು ಎಡವದಂತೆ ಕಾಪಾಡುವನು.
ಆದರೆ ಕೆಟ್ಟವರು ನಾಶವಾಗಿ ಕತ್ತಲೆಯಲ್ಲಿ ಬೀಳುವರು.
ಅವರ ಶಕ್ತಿ ಅವರಿಗೆ ಜಯನೀಡಲಾರದು.
10 ಯೆಹೋವನು ತನ್ನ ಶತ್ರುಗಳನ್ನು ನಾಶಗೊಳಿಸುವನು.
ಮಹೋನ್ನತನಾದ ದೇವರು ಪರಲೋಕದಲ್ಲಿ ಜನರಿಗೆ ವಿರುದ್ಧವಾಗಿ ಗುಡುಗುವನು.
ಯೆಹೋವನು ಬಹುದೂರದ ದೇಶಗಳಿಗೂ ತೀರ್ಪನ್ನು ಕೊಡುವನು.
ಆತನು ತನ್ನ ರಾಜನಿಗೆ ಶಕ್ತಿಯನ್ನು ಕೊಡುವನು.
ತಾನು ಅಭಿಷೇಕಿಸಿದ ರಾಜನನ್ನು ಬಲಗೊಳಿಸುವನು.”
18 ಆದರೆ ಬಾಲಕನಾದ ಸಮುವೇಲನು ಏಫೋದ್ ಎಂಬ ನಾರುಬಟ್ಟೆಯನ್ನು ಧರಿಸಿ ಯೆಹೋವನ ಸೇವೆ ಮಾಡುತ್ತಿದ್ದನು. 19 ಸಮುವೇಲನ ತಾಯಿಯು ಪ್ರತಿವರ್ಷವೂ ಒಂದು ಚಿಕ್ಕ ಮೇಲಂಗಿಯನ್ನು ಅವನಿಗಾಗಿ ತಯಾರಿಸಿ, ಗಂಡನೊಡನೆ ವಾರ್ಷಿಕ ಯಜ್ಞವನ್ನು ಅರ್ಪಿಸಲು ಶೀಲೋವಿಗೆ ಹೋದಾಗ ಅವನಿಗೆ ಕೊಡುತ್ತಿದ್ದಳು.
20 ಏಲಿಯು ಎಲ್ಕಾನನನ್ನು ಮತ್ತು ಅವನ ಹೆಂಡತಿಯಾದ ಹನ್ನಳನ್ನು ಆಶೀರ್ವದಿಸಿ, “ಹನ್ನಳು ಯೆಹೋವನನ್ನು ಪ್ರಾರ್ಥಿಸಿ ಪಡೆದ ಮಗನನ್ನು ಆತನಿಗೆ ಒಪ್ಪಿಸಿದ್ದರಿಂದ ಯೆಹೋವನು ಅವಳಿಗೆ ಬೇರೆ ಮಕ್ಕಳನ್ನು ಅನುಗ್ರಹಿಸಲಿ” ಎಂದು ಹೇಳಿದನು.
ಆಮೇಲೆ ಎಲ್ಕಾನ ಮತ್ತು ಹನ್ನ ಮನೆಗೆ ಹೋದರು. 21 ಯೆಹೋವನು ಹನ್ನಳಿಗೆ ದಯೆತೋರಿದನು. ಅವಳಿಗೆ ಮೂರು ಮಂದಿ ಗಂಡುಮಕ್ಕಳೂ ಇಬ್ಬರು ಹೆಣ್ಣುಮಕ್ಕಳೂ ಆದರು. ಬಾಲಕನಾದ ಸಮುವೇಲನು ಯೆಹೋವನ ಸನ್ನಿಧಿಯಲ್ಲಿ ದೊಡ್ಡವನಾದನು.
ಕ್ರಿಸ್ತನಲ್ಲಿ ನೆಲೆಗೊಂಡಿರಿ
6 ಪ್ರಭುವಾದ ಕ್ರಿಸ್ತ ಯೇಸುವನ್ನು ನೀವು ಸ್ವೀಕರಿಸಿಕೊಂಡಿರುವುದರಿಂದ ಆತನಲ್ಲಿ ನೆಲೆಗೊಂಡಿದ್ದು ಜೀವಿಸಿರಿ. 7 ಕ್ರಿಸ್ತನನ್ನು ಮಾತ್ರ ನೀವು ಅವಲಂಬಿಸಬೇಕು. ಜೀವವೂ ಶಕ್ತಿಯೂ ಆತನಿಂದಲೇ ಬರುತ್ತವೆ. ನಿಮಗೆ ಸತ್ಯವನ್ನು ಉಪದೇಶಿಸಲಾಗಿದೆ. ನೀವು ಆ ಸತ್ಯ ಬೋಧನೆಯಲ್ಲಿ ದೃಢವಾಗಿ ನೆಲೆಗೊಂಡಿರಬೇಕು ಮತ್ತು ದೇವರಿಗೆ ಸಲ್ಲತಕ್ಕ ಕೃತಜ್ಞತಾಸ್ತುತಿಯಿಂದ ತುಂಬಿದವರಾಗಿರಬೇಕು.
8 ಯಾರೂ ನಿಮ್ಮನ್ನು ಮೋಸಕರವಾದ ಮತ್ತು ನಿರರ್ಥಕವಾದ ತತ್ವಜ್ಞಾನ ಬೋಧನೆಯಿಂದ ತಪ್ಪು ದಾರಿಗೆ ನಡೆಸದಂತೆ ಜಾಗ್ರತೆಯಿಂದಿರಿ. ಆ ತತ್ವಜ್ಞಾನಗಳು ಜನರಿಂದ ಬಂದುವೇ ಹೊರತು ಕ್ರಿಸ್ತನಿಂದಲ್ಲ. ಅವು ಈ ಲೋಕದ ಜನರ ನಿರರ್ಥಕ ತತ್ವಗಳು. 9 ದೇವರ ಸರ್ವಸಂಪೂರ್ಣತೆಯು ಕ್ರಿಸ್ತನಲ್ಲಿ ನೆಲೆಗೊಂಡಿದೆ. (ಕ್ರಿಸ್ತನು ಈ ಲೋಕದಲ್ಲಿದ್ದಾಗಲೂ ಸಹ ನೆಲೆಗೊಂಡಿತ್ತು.) 10 ನೀವೆಲ್ಲರೂ ಕ್ರಿಸ್ತನಲ್ಲಿ ಸಂಪೂರ್ಣರಾಗಿದ್ದೀರಿ. ನಿಮಗೆ ಬೇರೇನೂ ಬೇಕಿಲ್ಲ. ಕ್ರಿಸ್ತನು ಎಲ್ಲ ದೊರೆತನಗಳನ್ನು ಮತ್ತು ಅಧಿಕಾರಗಳನ್ನು ಆಳುತ್ತಾನೆ.
11 ಕ್ರಿಸ್ತನಲ್ಲಿ ನೀವು ಬೇರೊಂದು ಸುನ್ನತಿಯನ್ನು ಪಡೆದಿರುವಿರಿ. ಆ ಸುನ್ನತಿಯು ಕೈಯಿಂದ ಮಾಡಿದ್ದಲ್ಲ. ಅಂದರೆ ನಿಮ್ಮ ಪಾಪಾಧೀನಸ್ವಭಾವದಿಂದ ನಿಮಗೆ ಬಿಡುಗಡೆಯಾಯಿತು. ಇದುವೇ ಕ್ರಿಸ್ತನು ಮಾಡುವ ಸುನ್ನತಿ. 12 ನೀವು ದೀಕ್ಷಾಸ್ನಾನ ಮಾಡಿಸಿಕೊಂಡಾಗ ಕ್ರಿಸ್ತನೊಂದಿಗೆ ಹೂಳಲ್ಪಟ್ಟಿರಿ. ದೇವರು ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸುವುದರ ಮೂಲಕ ತೋರಿದ ಶಕ್ತಿಯಲ್ಲಿ ನಂಬಿಕೆಯಿಡುವುದರ ಮೂಲಕ ನೀವು ಆ ದೀಕ್ಷಾಸ್ನಾನದಲ್ಲಿ ಕ್ರಿಸ್ತನೊಂದಿಗೆ ಮೇಲಕ್ಕೆ ಎದ್ದುಬಂದಿರಿ.
13 ನೀವು ನಿಮ್ಮ ಪಾಪಗಳ ದೆಸೆಯಿಂದ ಮತ್ತು ನಿಮ್ಮ ಪಾಪ ಸ್ವಭಾವದ ಹಿಡಿತದಿಂದ ಇನ್ನೂ ಮುಕ್ತರಾಗದೆ ಇದ್ದುದರಿಂದ ಆತ್ಮಿಕವಾಗಿ ಸತ್ತವರಾಗಿದ್ದಿರಿ. ಆದರೆ ದೇವರು ನಿಮಗೆ ಕ್ರಿಸ್ತನೊಂದಿಗೆ ಜೀವವನ್ನು ದಯಪಾಲಿಸಿದನು. ಆತನು ನಮ್ಮ ಎಲ್ಲಾ ಪಾಪಗಳನ್ನು ಕ್ಷಮಿಸಿದನು. 14 ದೇವರ ನಿಯಮಗಳನ್ನು ಉಲ್ಲಂಘಿಸಿದ್ದರಿಂದ ನಾವು ಅಪರಾಧಿಗಳಾಗಿದ್ದೆವು. ನಮ್ಮ ಮೇಲೆ ಹೊರಿಸಲಾದ ದೋಷಾರೋಪಣೆಯ ಪಟ್ಟಿಯಲ್ಲಿ ನಾವು ಉಲ್ಲಂಘಿಸಿದ ಆಜ್ಞೆಗಳನ್ನೆಲ್ಲ ಲಿಖಿತಗೊಳಿಸಲಾಗಿತ್ತು. ಆದರೆ ದೇವರು ನಮ್ಮ ಅಪರಾಧಗಳನ್ನೆಲ್ಲ ಕ್ಷಮಿಸಿ ಅವುಗಳನ್ನು ಶಿಲುಬೆಗೆ ಜಡಿದನು. 15 ದೇವರು ತನಗೆ ವಿರೋಧವಾಗಿದ್ದ ದೊರೆತನಗಳನ್ನೂ ಅಧಿಕಾರಗಳನ್ನೂ ಸೋಲಿಸಿ, ಅವುಗಳನ್ನು ನಿರಾಯುಧರನ್ನಾಗಿ ಮಾಡಿ ಶಿಲುಬೆಯ ವಿಜಯೋತ್ಸವದಲ್ಲಿ ಅವುಗಳನ್ನು ಇಡೀ ಲೋಕದ ಎದುರಿನಲ್ಲಿ ಸೆರೆಯಾಳುಗಳನ್ನಾಗಿ ಮೆರವಣಿಗೆ ಮಾಡಿದನು.
Kannada Holy Bible: Easy-to-Read Version. All rights reserved. © 1997 Bible League International