Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 113

113 ಯೆಹೋವನಿಗೆ ಸ್ತೋತ್ರವಾಗಲಿ!
ಯೆಹೋವನ ಸೇವಕರೇ, ಆತನಿಗೆ ಸ್ತೋತ್ರಮಾಡಿರಿ!
    ಆತನ ಹೆಸರನ್ನು ಕೊಂಡಾಡಿರಿ.
ಯೆಹೋವನ ಹೆಸರು ಇಂದಿಗೂ ಎಂದೆಂದಿಗೂ ಸ್ತುತಿಸಲ್ಪಡಲಿ.
ಪೂರ್ವದಿಂದಿಡಿದು ಪಶ್ಚಿಮದವರೆಗೂ
    ಯೆಹೋವನ ಹೆಸರು ಸ್ತುತಿಸಲ್ಪಡಲಿ.
ಯೆಹೋವನು ಎಲ್ಲಾ ಜನಾಂಗಗಳಲ್ಲಿ ಮಹೋನ್ನತನಾಗಿದ್ದಾನೆ;
    ಆತನ ಮಹಿಮೆಯು ಮೇಲೋಕದಲ್ಲಿ ಮೆರೆಯುತ್ತಿದೆ.
ನಮ್ಮ ದೇವರಾದ ಯೆಹೋವನಿಗೆ ಸಮಾನರು ಇಲ್ಲವೇ ಇಲ್ಲ.
    ಆತನು ಉನ್ನತ ಲೋಕದಲ್ಲಿ ಸಿಂಹಾಸನಾರೂಢನಾಗಿದ್ದಾನೆ.
ಆತನು ಆಕಾಶವನ್ನೂ
    ಭೂಮಿಯನ್ನೂ ಬಾಗಿ ನೋಡುವನು.
ಆತನು ಬಡವರನ್ನು ಧೂಳಿನಿಂದ ಎಬ್ಬಿಸುವನು;
    ಭಿಕ್ಷುಕರನ್ನು ತಿಪ್ಪೆಯಿಂದ ಎತ್ತುವನು.
ಆತನು ಅವರನ್ನು ಪ್ರಮುಖರನ್ನಾಗಿಯೂ
    ನಾಯಕರುಗಳನ್ನಾಗಿಯೂ ಮಾಡುವನು.
ಆತನು ಬಂಜೆಗೆ ಮಕ್ಕಳನ್ನು ಅನುಗ್ರಹಿಸಿ
    ಸಂತೋಷಪಡಿಸುವನು.

ಯೆಹೋವನಿಗೆ ಸ್ತೋತ್ರವಾಗಲಿ!

ಆದಿಕಾಂಡ 24:28-42

28 ಆಗ ರೆಬೆಕ್ಕಳು ಬೇಗನೆ ಹೋಗಿ ಈ ಸಂಗತಿಗಳನ್ನೆಲ್ಲಾ ತನ್ನ ಕುಟುಂಬದವರಿಗೆ ತಿಳಿಸಿದಳು. 29-30 ರೆಬೆಕ್ಕಳಿಗೆ ಒಬ್ಬ ಅಣ್ಣನಿದ್ದನು. ಅವನ ಹೆಸರು ಲಾಬಾನ. ನಡೆದ ಸಂಗತಿಗಳನ್ನೆಲ್ಲ ರೆಬೆಕ್ಕಳು ಅವನಿಗೆ ತಿಳಿಸಿದಳು. ಲಾಬಾನನು ಆಕೆಯ ಮಾತುಗಳನ್ನೆಲ್ಲ ಕೇಳಿದಾಗ ಮತ್ತು ಉಂಗುರವನ್ನು ಮತ್ತು ಕೈಗಳಲ್ಲಿದ್ದ ಬಳೆಗಳನ್ನು ಕಂಡಾಗ ಬಾವಿಯ ಬಳಿಗೆ ಓಡಿಹೋದನು. ಬಾವಿಯ ಬಳಿಯಲ್ಲಿ ಒಂಟೆಗಳ ಹತ್ತಿರ ಆ ಸೇವಕನು ನಿಂತುಕೊಂಡಿದ್ದನು. 31 ಲಾಬಾನನು ಅವನಿಗೆ, “ಯೆಹೋವನ ಆಶೀರ್ವಾದ ಹೊಂದಿದವನೇ, ಒಳಗೆ ಬಾ. ನೀನು ಹೊರಗಡೆ ನಿಂತುಕೊಳ್ಳಬೇಕಾಗಿಲ್ಲ. ನೀನು ಇಳಿದುಕೊಳ್ಳುವುದಕ್ಕಾಗಿ ಕೋಣೆಯನ್ನೂ ನಿನ್ನ ಒಂಟೆಗಳಿಗಾಗಿ ಸ್ಥಳವನ್ನೂ ಸಿದ್ಧಪಡಿಸಿದ್ದೇನೆ” ಎಂದು ಹೇಳಿದನು.

32 ಆದ್ದರಿಂದ ಅಬ್ರಹಾಮನ ಸೇವಕನು ಲಾಬಾನನ ಮನೆಗೆ ಹೋದನು. ಒಂಟೆಗಳ ಮೇಲಿದ್ದ ಹೊರೆಗಳನ್ನು ಇಳಿಸಲು ಲಾಬಾನನು ಸಹಾಯಮಾಡಿದನು; ಒಂಟೆಗಳಿಗೆ ಸ್ಥಳಮಾಡಿಕೊಟ್ಟು ಮೇವನ್ನು ಕೊಡಿಸಿದನು; ಆಮೇಲೆ ಆ ಸೇವಕನಿಗೆ ಮತ್ತು ಅವನ ಸಂಗಡ ಇದ್ದವರಿಗೆ, ಕಾಲು ತೊಳೆದುಕೊಳ್ಳಲು ನೀರು ಕೊಟ್ಟನು. 33 ನಂತರ ಲಾಬಾನನು ಅವನಿಗೆ ಊಟವನ್ನು ಕೊಟ್ಟನು. ಆದರೆ ಆ ಸೇವಕನು ಊಟಮಾಡದೆ ಅವರಿಗೆ, “ನಾನು ಬಂದ ಉದ್ದೇಶವನ್ನು ತಿಳಿಸದೆ ಊಟಮಾಡುವುದಿಲ್ಲ” ಎಂದು ಹೇಳಿದನು.

ಅದಕ್ಕೆ ಲಾಬಾನನು, “ಸರಿ, ಹೇಳು” ಅಂದನು.

ರೆಬೆಕ್ಕಳನ್ನು ಇಸಾಕನಿಗಾಗಿ ಕೇಳಿದ್ದು

34 ಆ ಸೇವಕನು “ನಾನು ಅಬ್ರಹಾಮನ ಸೇವಕನು. 35 ಯೆಹೋವನು ನನ್ನ ಒಡೆಯನನ್ನು ಪ್ರತಿಯೊಂದರಲ್ಲಿಯೂ ಬಹಳವಾಗಿ ಆಶೀರ್ವದಿಸಿದ್ದಾನೆ. ನನ್ನ ಒಡೆಯನು ಮಹಾವ್ಯಕ್ತಿಯಾಗಿದ್ದಾನೆ. ಯೆಹೋವನು ಅಬ್ರಹಾಮನಿಗೆ ಅನೇಕ ಕುರಿಹಿಂಡುಗಳನ್ನೂ ದನಕರುಗಳ ಮಂದೆಗಳನ್ನೂ ಕೊಟ್ಟಿದ್ದಾನೆ. ಅಬ್ರಹಾಮನಿಗೆ ಬೇಕಾದಷ್ಟು ಬೆಳ್ಳಿಬಂಗಾರಗಳಿವೆ. ಅನೇಕ ಸೇವಕರಿದ್ದಾರೆ. ಅನೇಕ ಒಂಟೆಗಳೂ ಕತ್ತೆಗಳೂ ಇವೆ. 36 ಸಾರಳು ನನ್ನ ಒಡೆಯನ ಹೆಂಡತಿ. ಆಕೆ ತುಂಬಾ ವಯಸ್ಸಾಗಿರುವಾಗ ಒಬ್ಬ ಗಂಡುಮಗನನ್ನು ಹೆತ್ತಳು. ನನ್ನ ಒಡೆಯನು ತನ್ನ ಆಸ್ತಿಯನ್ನೆಲ್ಲ ಆ ಮಗನಿಗೇ ಕೊಟ್ಟಿದ್ದಾನೆ. 37 ನನ್ನ ಒಡೆಯನ್ನು ನನ್ನಿಂದ ಒಂದು ಪ್ರಮಾಣವನ್ನು ಬಲವಂತವಾಗಿ ಮಾಡಿಸಿದನು. ನನ್ನ ಒಡೆಯನು ನನಗೆ, ‘ನನ್ನ ಮಗನಿಗೆ ಕಾನಾನಿನ ಹುಡುಗಿಯೊಡನೆ ಮದುವೆಯಾಗದಂತೆ ನೀನು ನೋಡಿಕೊಳ್ಳಬೇಕು; ನಾವು ಈ ಜನರೊಡನೆ ವಾಸಿಸುತ್ತಿದ್ದೇವೆ. ಆದರೆ ಕಾನಾನಿನ ಹುಡುಗಿಯೊಂದಿಗೆ ನನ್ನ ಮಗನಿಗೆ ಮದುವೆಯಾಗುವುದು ನನಗೆ ಇಷ್ಟವಿಲ್ಲ. 38 ಆದ್ದರಿಂದ ನೀನು ನನ್ನ ಸ್ವದೇಶಕ್ಕೆ ಹೋಗಿ ನನ್ನ ಸ್ವಜನರಿಂದಲೇ ನನ್ನ ಮಗನಿಗೆ ಕನ್ಯೆಯನ್ನು ತೆಗೆದುಕೊಳ್ಳಬೇಕು’ ಎಂದು ಹೇಳಿದನು. 39 ನಾನು ನನ್ನ ಒಡೆಯನಿಗೆ, ‘ಆ ಕನ್ಯೆಯು ಈ ದೇಶಕ್ಕೆ ನನ್ನೊಂದಿಗೆ ಬರಲು ಒಪ್ಪದಿರಬಹುದು’ ಎಂದು ಹೇಳಿದೆ. 40 ಆದರೆ ನನ್ನ ಒಡೆಯನು ನನಗೆ, ‘ನಾನು ಯೆಹೋವನ ಸೇವೆ ಮಾಡುತ್ತಿದ್ದೇನೆ. ಆದ್ದರಿಂದ ಯೆಹೋವನು ತನ್ನ ದೂತನನ್ನು ನಿನ್ನೊಂದಿಗೆ ಕಳುಹಿಸಿ ನಿನಗೆ ಸಹಾಯ ಮಾಡುವನು. ಅಲ್ಲಿರುವ ನನ್ನ ತಂದೆಯ ಕುಟುಂಬದವರಲ್ಲಿ ನೀನು ನನ್ನ ಮಗನಿಗಾಗಿ ಒಬ್ಬ ಕನ್ಯೆಯನ್ನು ಕಂಡುಕೊಳ್ಳುವೆ. 41 ಆದರೆ ನೀನು ನನ್ನ ತಂದೆಯ ನಾಡಿಗೆ ಹೋದಾಗ ಅವರು ನನ್ನ ಮಗನಿಗೆ ಒಬ್ಬ ಕನ್ಯೆಯನ್ನು ಕೊಡಲು ಒಪ್ಪದಿದ್ದರೆ ನೀನು ಈ ಪ್ರಮಾಣದಿಂದ ಬಿಡುಗಡೆಯಾಗಿರುವೆ’ ಎಂದು ಹೇಳಿದನು.

42 “ಇಂದು ನಾನು ಈ ಬಾವಿಯ ಬಳಿಗೆ ಬಂದು, ‘ನನ್ನ ಒಡೆಯನಾದ ಅಬ್ರಹಾಮನ ದೇವರಾಗಿರುವ ಯೆಹೋವನೇ, ದಯವಿಟ್ಟು ನನ್ನ ಪ್ರವಾಸವನ್ನು ಯಶಸ್ವಿಗೊಳಿಸು.

ಲೂಕ 4:16-30

ಯೇಸು ಸ್ವಂತ ನಾಡಿಗೆ ಬಂದದ್ದು

(ಮತ್ತಾಯ 13:53-58; ಮಾರ್ಕ 6:1-6)

16 ಯೇಸು ತಾನು ಬೆಳೆದ ನಜರೇತ್ ಎಂಬ ಊರಿಗೆ ಪ್ರಯಾಣ ಮಾಡಿದನು. ವಾಡಿಕೆಯ ಪ್ರಕಾರ, ಆತನು ಸಬ್ಬತ್‌ದಿನದಲ್ಲಿ ಸಭಾಮಂದಿರಕ್ಕೆ ಹೋದನು. ಯೇಸು ಓದುವುದಕ್ಕಾಗಿ ಎದ್ದುನಿಂತನು. 17 ಪ್ರವಾದಿಯಾದ ಯೆಶಾಯನ ಗ್ರಂಥವನ್ನು ಆತನಿಗೆ ಓದಲು ಕೊಡಲಾಗಿತ್ತು. ಯೇಸು ಆ ಪುಸ್ತಕವನ್ನು ತೆರೆದು ಈ ಭಾಗವನ್ನು ಓದಿದನು:

18 “ಪ್ರಭುವಿನ (ದೇವರ) ಆತ್ಮವು ನನ್ನಲ್ಲಿ ಇದೆ.
ಬಡಜನರಿಗೆ ಶುಭಸಂದೇಶವನ್ನು ತಿಳಿಸಲು ದೇವರು ನನ್ನನ್ನು ಅಭಿಷೇಕಿಸಿದ್ದಾನೆ.
ಪಾಪಕ್ಕೆ ಸೆರೆಯಾಳುಗಳಾಗಿರುವ ಜನರಿಗೆ ‘ನೀವು ಬಿಡುಗಡೆಯಾಗಿದ್ದೀರಿ’ ಎಂತಲೂ
    ಕುರುಡರಿಗೆ, ‘ನಿಮಗೆ ಮತ್ತೆ ಕಣ್ಣು ಕಾಣಿಸುವುದು’ ಎಂತಲೂ
ತಿಳಿಸುವುದಕ್ಕೆ ದೇವರು ನನ್ನನ್ನು ಕಳುಹಿಸಿದ್ದಾನೆ.
ದಬ್ಬಾಳಿಕೆಗೆ ಗುರಿಯಾದವರನ್ನು ಬಿಡಿಸುವುದಕ್ಕೂ
19     ಪ್ರಭುವಿನ ಶುಭವರ್ಷವನ್ನು ಪ್ರಕಟಿಸುವುದಕ್ಕೂ ದೇವರು ನನ್ನನ್ನು ಕಳುಹಿಸಿದ್ದಾನೆ.”(A)

20 ಈ ಭಾಗವನ್ನು ಓದಿದ ನಂತರ ಯೇಸು ಆ ಪುಸ್ತಕವನ್ನು ಮುಚ್ಚಿ ಸಭಾಮಂದಿರದ ಸೇವಕನ ಕೈಗೆ ಕೊಟ್ಟು ಕುಳಿತುಕೊಂಡನು. ಸಭಾಮಂದಿರದಲ್ಲಿದ್ದ ಪ್ರತಿಯೊಬ್ಬರು ಯೇಸುವನ್ನೇ ದೃಷ್ಟಿಸಿ ನೋಡುತ್ತಿದ್ದರು. 21 ಆಗ ಯೇಸು, ಅವರಿಗೆ, “ನಾನು ಇದೀಗ ಓದಿದ ಮಾತುಗಳನ್ನು ನೀವು ಕೇಳುತ್ತಿದ್ದಾಗಲೇ ಅವು ನಿಜವಾಗಿ ನೆರವೇರಿದವು!” ಎಂದು ಹೇಳಿದನು.

22 ಜನರೆಲ್ಲರೂ ಯೇಸುವನ್ನು ಹೊಗಳತೊಡಗಿದರು. ಅವರು ಆತನ ಇಂಪಾದ ಮಾತುಗಳಿಗೆ ಆಶ್ಚರ್ಯಪಟ್ಟು, “ಇವನು ಈ ರೀತಿ ಮಾತಾಡಲು ಹೇಗೆ ಸಾಧ್ಯ? ಇವನು ಯೋಸೇಫನ ಮಗನಲ್ಲವೇ?” ಎಂದು ಮಾತಾಡಿಕೊಂಡರು.

23 ಯೇಸು ಅವರಿಗೆ, “ನೀವಂತೂ ‘ವೈದ್ಯನೇ, ನಿನ್ನನ್ನೇ ವಾಸಿಮಾಡಿಕೊ’ ಎಂಬ ಗಾದೆಯನ್ನು ನನಗೆ ಹೇಳುತ್ತೀರಿ ಎಂಬುದು ನನಗೆ ಗೊತ್ತು. ‘ನೀನು ಕಪೆರ್ನೌಮಿನಲ್ಲಿ ಮಾಡಿದ ಕೆಲವು ಕಾರ್ಯಗಳ ಬಗ್ಗೆ ನಾವು ಕೇಳಿದ್ದೇವೆ. ಅದೇ ಕಾರ್ಯಗಳನ್ನು ನಿನ್ನ ಸ್ವಂತ ಊರಿನಲ್ಲಿ ಮಾಡು!’” ಎಂದು ಹೇಳಬೇಕೆಂದಿದ್ದೀರಿ. 24 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಪ್ರವಾದಿ ತನ್ನ ಸ್ವಂತ ಊರಿನಲ್ಲಿ ಸ್ವೀಕೃತನಾಗುವುದಿಲ್ಲ.

25 “ನಾನು ಹೇಳುವುದು ಸತ್ಯ. ಎಲೀಯನ ಕಾಲದಲ್ಲಿ ಮೂರುವರೆ ವರ್ಷಗಳವರೆಗೆ ಇಸ್ರೇಲ್ ದೇಶದಲ್ಲಿ ಮಳೆ ಬೀಳಲಿಲ್ಲ. ದೇಶದ ಯಾವ ಕಡೆಯಲ್ಲಿಯೂ ಆಹಾರವಿರಲಿಲ್ಲ. ಆ ಸಮಯದಲ್ಲಿ ಇಸ್ರೇಲಿನಲ್ಲಿ ಅನೇಕ ವಿಧವೆಯರು ಇದ್ದರು. 26 ಆದರೆ ಎಲೀಯನನ್ನು ಬೇರೆ ಯಾವ ವಿಧವೆಯರ ಬಳಿಗೂ ಕಳುಹಿಸದೆ ಸಿದೋನ್ ದೇಶಕ್ಕೆ ಸೇರಿದ ಸರೆಪ್ತ ಊರಿನ ಒಬ್ಬ ವಿಧವೆಯ ಬಳಿಗೆ ಮಾತ್ರ ಕಳುಹಿಸಲಾಯಿತು.

27 “ಪ್ರವಾದಿಯಾದ ಎಲೀಷನ ಕಾಲದಲ್ಲಿ ಅನೇಕ ಕುಷ್ಠರೋಗಿಗಳು ಇಸ್ರೇಲಿನಲ್ಲಿ ವಾಸಿಸುತ್ತಿದ್ದರು. ಆದರೆ ಅವರಲ್ಲಿ ಯಾರಿಗೂ ವಾಸಿಯಾಗದೆ ಸಿರಿಯ ದೇಶದ ನಾಮಾನನೊಬ್ಬನಿಗೇ ವಾಸಿಯಾಯಿತು” ಎಂದು ಹೇಳಿದನು.

28 ಸಭಾಮಂದಿರದಲ್ಲಿದ್ದ ಜನರೆಲ್ಲರೂ ಈ ಮಾತುಗಳನ್ನು ಕೇಳಿ ಬಹಳವಾಗಿ ಕೋಪಗೊಂಡು 29 ಯೇಸುವನ್ನು ಪಟ್ಟಣದಿಂದ ಹೊರಗಟ್ಟಿದರು. ಆ ಪಟ್ಟಣವು ಒಂದು ಗುಡ್ಡದ ಮೇಲಿತ್ತು. ಅವರು ಯೇಸುವನ್ನು ಗುಡ್ಡದ ಅಂಚಿಗೆ ಕರೆದುಕೊಂಡು ಬಂದು ಕೆಳಕ್ಕೆ ತಳ್ಳಿಬಿಡಬೇಕೆಂದಿದ್ದರು. 30 ಆದರೆ ಯೇಸು ಅವರ ಮಧ್ಯದಲ್ಲಿ ಹಾದು ಹೊರಟುಹೋದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International