Revised Common Lectionary (Semicontinuous)
113 ಯೆಹೋವನಿಗೆ ಸ್ತೋತ್ರವಾಗಲಿ!
ಯೆಹೋವನ ಸೇವಕರೇ, ಆತನಿಗೆ ಸ್ತೋತ್ರಮಾಡಿರಿ!
ಆತನ ಹೆಸರನ್ನು ಕೊಂಡಾಡಿರಿ.
2 ಯೆಹೋವನ ಹೆಸರು ಇಂದಿಗೂ ಎಂದೆಂದಿಗೂ ಸ್ತುತಿಸಲ್ಪಡಲಿ.
3 ಪೂರ್ವದಿಂದಿಡಿದು ಪಶ್ಚಿಮದವರೆಗೂ
ಯೆಹೋವನ ಹೆಸರು ಸ್ತುತಿಸಲ್ಪಡಲಿ.
4 ಯೆಹೋವನು ಎಲ್ಲಾ ಜನಾಂಗಗಳಲ್ಲಿ ಮಹೋನ್ನತನಾಗಿದ್ದಾನೆ;
ಆತನ ಮಹಿಮೆಯು ಮೇಲೋಕದಲ್ಲಿ ಮೆರೆಯುತ್ತಿದೆ.
5 ನಮ್ಮ ದೇವರಾದ ಯೆಹೋವನಿಗೆ ಸಮಾನರು ಇಲ್ಲವೇ ಇಲ್ಲ.
ಆತನು ಉನ್ನತ ಲೋಕದಲ್ಲಿ ಸಿಂಹಾಸನಾರೂಢನಾಗಿದ್ದಾನೆ.
6 ಆತನು ಆಕಾಶವನ್ನೂ
ಭೂಮಿಯನ್ನೂ ಬಾಗಿ ನೋಡುವನು.
7 ಆತನು ಬಡವರನ್ನು ಧೂಳಿನಿಂದ ಎಬ್ಬಿಸುವನು;
ಭಿಕ್ಷುಕರನ್ನು ತಿಪ್ಪೆಯಿಂದ ಎತ್ತುವನು.
8 ಆತನು ಅವರನ್ನು ಪ್ರಮುಖರನ್ನಾಗಿಯೂ
ನಾಯಕರುಗಳನ್ನಾಗಿಯೂ ಮಾಡುವನು.
9 ಆತನು ಬಂಜೆಗೆ ಮಕ್ಕಳನ್ನು ಅನುಗ್ರಹಿಸಿ
ಸಂತೋಷಪಡಿಸುವನು.
ಯೆಹೋವನಿಗೆ ಸ್ತೋತ್ರವಾಗಲಿ!
ಇಸಾಕನಿಗಾಗಿ ಹೆಂಡತಿ
24 ಅಬ್ರಹಾಮನು ಬಹಳ ವೃದ್ಧನಾದನು. ಯೆಹೋವನು ಅಬ್ರಹಾಮನನ್ನೂ ಅವನು ಮಾಡಿದ ಪ್ರತಿಯೊಂದನ್ನೂ ಆಶೀರ್ವದಿಸಿದನು. 2 ಅಬ್ರಹಾಮನ ಆಸ್ತಿಯನ್ನೆಲ್ಲಾ ನೋಡಿಕೊಳ್ಳಲು ಒಬ್ಬ ಸೇವಕನಿದ್ದನು. ಅಬ್ರಹಾಮನು ಆ ಸೇವಕನನ್ನು ಕರೆದು, “ನನ್ನ ತೊಡೆಯ ಕೆಳಗೆ ನಿನ್ನ ಕೈಯಿಟ್ಟು ನನಗೆ ಪ್ರಮಾಣಮಾಡು. 3 ಕಾನಾನ್ ದೇಶದ ಕನ್ನಿಕೆಯನ್ನು ನನ್ನ ಮಗನು ಮದುವೆಯಾಗದಂತೆ ನೀನು ನೋಡಿಕೊಳ್ಳುವುದಾಗಿಯೂ 4 ನನ್ನ ಸ್ವದೇಶದಲ್ಲಿರುವ ನನ್ನ ಸ್ವಜನರ ಬಳಿಗೆ ಹೋಗಿ ನನ್ನ ಮಗನಾದ ಇಸಾಕನಿಗೆ ಕನ್ನಿಕೆಯನ್ನು ಹುಡುಕಿ ಕರೆದುಕೊಂಡು ಬರುವುದಾಗಿಯೂ ಭೂಪರಲೋಕಗಳ ದೇವರಾದ ಯೆಹೋವನ ಮೇಲೆ ಪ್ರಮಾಣಮಾಡು” ಎಂದು ಹೇಳಿದನು.
5 ಸೇವಕನು ಅವನಿಗೆ, “ಆ ಕನ್ಯೆಯು ನನ್ನೊಡನೆ ಈ ದೇಶಕ್ಕೆ ಬರಲು ಒಪ್ಪದಿದ್ದರೆ, ನಾನು ನಿನ್ನ ಮಗನನ್ನು ನಿನ್ನ ಸ್ವದೇಶಕ್ಕೆ ಕರೆದುಕೊಂಡು ಹೋಗಬೇಕೇ?” ಎಂದು ಕೇಳಿದನು.
6 ಅಬ್ರಹಾಮನು ಅವನಿಗೆ, “ಇಲ್ಲ, ಆ ದೇಶಕ್ಕೆ ನನ್ನ ಮಗನನ್ನು ಕರೆದುಕೊಂಡು ಹೋಗಬೇಡ. 7 ಪರಲೋಕದ ದೇವರಾದ ಯೆಹೋವನು ನನ್ನನ್ನು ಸ್ವದೇಶದಿಂದ ಈ ಸ್ಥಳಕ್ಕೆ ಕರೆದುಕೊಂಡು ಬಂದನು. ಆ ದೇಶ ನನ್ನ ತಂದೆಗೂ ನನ್ನ ಕುಟುಂಬಕ್ಕೂ ಸೇರಿದೆ. ಆದರೆ ಯೆಹೋವನು ಈ ದೇಶವನ್ನು ನನ್ನ ಸಂತತಿಗೆ ಕೊಡುವುದಾಗಿ ವಾಗ್ದಾನ ಮಾಡಿದನು. ನೀನು ನನ್ನ ಮಗನಿಗೆ ಕನ್ಯೆಯನ್ನು ಹುಡುಕಿ ಕರೆದುಕೊಂಡು ಬರಲು ಸಾಧ್ಯವಾಗುವಂತೆ ಯೆಹೋವನು ತನ್ನ ದೂತನನ್ನು ನಿನ್ನ ಮುಂದೆ ಕಳುಹಿಸಲಿ. 8 ಆದರೆ ಆ ಕನ್ಯೆಯು ನಿನ್ನೊಡನೆ ಬರಲು ಇಷ್ಟಪಡದಿದ್ದರೆ, ಈ ಪ್ರಮಾಣದಿಂದ ನೀನು ಬಿಡುಗಡೆಯಾಗುವೆ. ಆದರೆ ನೀನು ನನ್ನ ಮಗನನ್ನು ನನ್ನ ಸ್ವದೇಶಕ್ಕೆ ಕರೆದುಕೊಂಡು ಹೋಗಕೂಡದು” ಎಂದು ಹೇಳಿದನು.
9 ಆಗ ಆ ಸೇವಕನು ತನ್ನ ಒಡೆಯನಾದ ಅಬ್ರಹಾಮನ ತೊಡೆಯ ಕೆಳಗೆ ಕೈಯಿಟ್ಟು ಪ್ರಮಾಣ ಮಾಡಿದನು.
ಕನ್ಯೆಯನ್ನು ಹುಡುಕಲು ಪ್ರಯಾಣ
10 ಆ ಸೇವಕನು ಅಬ್ರಹಾಮನ ಹತ್ತು ಒಂಟೆಗಳನ್ನು ಸಿದ್ಧಮಾಡಿ ಶ್ರೇಷ್ಠವಾದ ಅನೇಕ ಉಡುಗೊರೆಗಳನ್ನು ತೆಗೆದುಕೊಂಡು ಮೆಸೊಪೋಟೊಮಿಯಕ್ಕೆ ಬಂದು ನಾಹೋರನು ವಾಸವಾಗಿದ್ದ ಊರನ್ನು ತಲುಪಿದನು.
5 ವೃದ್ಧ ಪುರುಷರೊಂದಿಗೆ ಕೋಪದಿಂದ ಮಾತಾಡದೆ ಅವರನ್ನು ನಿನ್ನ ತಂದೆಯೆಂದು ಭಾವಿಸಿ ಅವರೊಂದಿಗೆ ಮಾತನಾಡು. ಯೌವನಸ್ಥರನ್ನು ಸಹೋದರರಂತೆಯೂ 2 ವೃದ್ಧ ಸ್ತ್ರೀಯರನ್ನು ತಾಯಿಗಳಂತೆಯೂ ಯೌವನಸ್ಥೆಯರನ್ನು ಸಹೋದರಿಯರಂತೆಯೂ ಪರಿಗಣಿಸು. ಯಾವಾಗಲೂ ಅವರೊಡನೆ ಒಳ್ಳೆಯ ರೀತಿಯಲ್ಲಿ ನಡೆದುಕೊ.
ವಿಧವೆಯರನ್ನು ಹೇಗೆ ಪೋಷಿಸಬೇಕೆಂಬ ನಿಯಮಗಳು
3 ದಿಕ್ಕಿಲ್ಲದ ವಿಧವೆಯರನ್ನು ಪರಿಪಾಲಿಸು. 4 ಆದರೆ ಒಬ್ಬ ವಿಧವೆಗೆ ಮಕ್ಕಳಾಗಲಿ, ಮೊಮ್ಮಕ್ಕಳಾಗಲಿ ಇದ್ದರೆ, ಅವರು ತಂದೆತಾಯಿಗಳಿಗೆ ಸಹಾಯ ಮಾಡುವುದರ ಮೂಲಕ ಸ್ವಂತ ಕುಟುಂಬಕ್ಕೆ ಗೌರವವನ್ನು ತೋರಬೇಕು. ಅವರು ಹೀಗೆ ಮಾಡಿದರೆ, ತಂದೆತಾಯಿಗಳಿಗೆ ಮತ್ತು ಅಜ್ಜಅಜ್ಜಿಯರಿಗೆ ಪ್ರತ್ಯುಪಕಾರ ಮಾಡಿದಂತಾಗುವುದು. ಅದು ದೇವರಿಗೆ ಮೆಚ್ಚಿಕೆಯಾದದ್ದು. 5 ಒಬ್ಬ ವಿಧವೆಯು ನಿಜವಾಗಿಯೂ ಸಹಾಯಕರಿಲ್ಲದೆ ಒಬ್ಬಂಟಿಗಳಾಗಿದ್ದರೆ, ಆಗ ಆಕೆಯು ತನ್ನ ರಕ್ಷಣೆಗಾಗಿ ದೇವರ ಮೇಲೆ ಭರವಸೆ ಇಡುವಳು. ಆ ಸ್ತ್ರೀಯು ಹಗಲು ರಾತ್ರಿಯೆಲ್ಲ ಪ್ರಾರ್ಥಿಸುವಳು. ಅವಳು ದೇವರ ಸಹಾಯವನ್ನು ಬೇಡುವಳು. 6 ಆದರೆ ವಿಧವೆಯಾದವಳು ತನ್ನ ಇಚ್ಛೆಪೂರೈಕೆಗಾಗಿ ತನ್ನ ಜೀವಿತವನ್ನು ಬಳಸಿಕೊಳ್ಳುವುದಾದರೆ ಅವಳು ಬದುಕಿದ್ದರೂ ಸತ್ತಂತೆಯೇ. 7 ಜನರು ನಿಂದೆನೆಗೆ ಗುರಿಯಾಗದಂತೆ ಅನುಸರಿಸಬೇಕಾದ ಕ್ರಮಗಳನ್ನು ತಿಳಿಸು. ಆಗ ಯಾರೂ ಅವರನ್ನು ನಿಂದಿಸಲು ಸಾಧ್ಯವಿಲ್ಲ. 8 ಯಾವನಾದರೂ ಸ್ವಂತ ಜನರನ್ನು ವಿಶೇಷವಾಗಿ ಸ್ವಂತ ಕುಟುಂಬದವರನ್ನು ಪರಿಪಾಲಿಸದೆ ಹೋದರೆ ಅವನು ಸತ್ಯಬೋಧನೆಯನ್ನು ತಿರಸ್ಕರಿಸುವವನಾಗಿದ್ದಾನೆ. ಅವನು ನಂಬದವನಿಗಿಂತ ತುಂಬಾ ಕೀಳಾದವನು.
Kannada Holy Bible: Easy-to-Read Version. All rights reserved. © 1997 Bible League International