Revised Common Lectionary (Semicontinuous)
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ. ರಚನೆಗಾರ: ಸೊಲೋಮೋನ.
127 ಯೆಹೋವನು ಮನೆಯನ್ನು ಕಟ್ಟದಿದ್ದರೆ,
ಕಟ್ಟುವವರ ಸಮಯವೆಲ್ಲಾ ವ್ಯರ್ಥ.
ಯೆಹೋವನು ಪಟ್ಟಣವನ್ನು ಕಾಯದಿದ್ದರೆ,
ಕಾವಲುಗಾರರ ಸಮಯವೆಲ್ಲಾ ವ್ಯರ್ಥ.
2 ಕೇವಲ ಹೊಟ್ಟೆಪಾಡಿಗಾಗಿ ಮುಂಜಾನೆಯಲ್ಲೇ ಎದ್ದು
ರಾತ್ರಿಯವರೆಗೂ ದುಡಿಯುವುದು ಕೇವಲ ವ್ಯರ್ಥ.
ಯಾಕೆಂದರೆ ದೇವರು ತನ್ನ ಪ್ರಿಯರಿಗೆ
ಆಹಾರವನ್ನು ನಿದ್ರೆಯಲ್ಲೂ ದಯಪಾಲಿಸುವನು.
3 ಮಕ್ಕಳು ಯೆಹೋವನ ಕೊಡುಗೆ.
ತಾಯಿಯ ಗರ್ಭಫಲವು ಆತನ ಬಹುಮಾನ.
4 ಯೌವನಸ್ಥನ ಗಂಡುಮಕ್ಕಳು ಸೈನಿಕನ ಬತ್ತಳಿಕೆಯಲ್ಲಿರುವ ಬಾಣಗಳಂತಿದ್ದಾರೆ.
5 ತನ್ನ ಬತ್ತಳಿಕೆಯಲ್ಲಿ ಗಂಡುಮಕ್ಕಳನ್ನು ತುಂಬುವವನು ಭಾಗ್ಯವಂತನಾಗಿದ್ದಾನೆ.
ಅವನಿಗೆ ಸೋಲೇ ಇಲ್ಲ.
ಅವನ ಗಂಡುಮಕ್ಕಳು ಅವನ ಪರವಾಗಿಯೂ ಅವನ ಶತ್ರುಗಳ ವಿರೋಧವಾಗಿಯೂ ನ್ಯಾಯಸ್ಥ್ಥಾನಗಳಲ್ಲಿ ವಾದಿಸುವರು.
ರೂತ್ ಮತ್ತು ಬೋವಜನ ವಂಶವೃಕ್ಷ
18 ಪೆರೆಚನ ವಂಶಾವಳಿ ಹೀಗಿದೆ:
ಪೆರೆಚನು ಹೆಚ್ರೋನನ ತಂದೆ.
19 ಹೆಚ್ರೋನನು ರಾಮನ ತಂದೆ.
ರಾಮನು ಅಮ್ಮೀನಾದಾಬನ ತಂದೆ.
20 ಅಮ್ಮೀನಾದಾಬನು ನಹಶೋನನ ತಂದೆ.
ನಹಶೋನನು ಸಲ್ಮೋನನ ತಂದೆ.
21 ಸಲ್ಮೋನನು ಬೋವಜನ ತಂದೆ.
ಬೋವಜನು ಓಬೇದನ ತಂದೆ.
22 ಓಬೇದನು ಇಷಯನ ತಂದೆ.
ಇಷಯನು ದಾವೀದನ ತಂದೆ.
ಒಣಗಿಹೋದ ಅಂಜೂರ ಮರ
(ಮತ್ತಾಯ 21:18-19)
12 ಮರುದಿನ, ಯೇಸು ಬೆಥಾನಿಯದಿಂದ ಹೋಗುತ್ತಿರಲು ಆತನಿಗೆ ಹಸಿವಾಗಿತ್ತು. 13 ಆತನು ಎಲೆಗಳಿದ್ದ ಒಂದು ಅಂಜೂರದ ಮರವನ್ನು ನೋಡಿದನು. ಆದ್ದರಿಂದ ಆ ಮರದಲ್ಲಿ ಅಂಜೂರದ ಹಣ್ಣೇನಾದರೂ ಸಿಕ್ಕಬಹುದೆಂದು ಅದರ ಬಳಿಗೆ ಹೋದನು. ಆದರೆ ಆತನು ಆ ಮರದಲ್ಲಿ ಅಂಜೂರದ ಹಣ್ಣುಗಳನ್ನು ಕಾಣಲಿಲ್ಲ. ಅಲ್ಲಿ ಎಲೆಗಳು ಮಾತ್ರ ಇದ್ದವು. ಏಕೆಂದರೆ ಅದು ಅಂಜೂರ ಹಣ್ಣಿನ ಕಾಲವಾಗಿರಲಿಲ್ಲ. 14 ಆದ್ದರಿಂದ ಯೇಸು ಆ ಮರಕ್ಕೆ, “ಇನ್ನು ಮೇಲೆ ನಿನ್ನ ಹಣ್ಣನ್ನು ಯಾರೂ ತಿನ್ನದಂತಾಗಲಿ” ಎಂದನು. ಯೇಸುವಿನ ಶಿಷ್ಯರಿಗೂ ಈ ಮಾತು ಕೇಳಿಸಿತು.
ನಂಬಿಕೆಯ ಶಕ್ತಿ
(ಮತ್ತಾಯ 21:20-22)
20 ಮರುದಿನ ಬೆಳಿಗ್ಗೆ, ಯೇಸು ತನ್ನ ಶಿಷ್ಯರೊಂದಿಗೆ ಹೋಗುತ್ತಿದ್ದನು. ಹಿಂದಿನ ದಿನ ಯೇಸು ಶಪಿಸಿದ ಅಂಜೂರದ ಮರವನ್ನು ಶಿಷ್ಯರು ನೋಡಿದರು. ಅಂಜೂರದ ಮರವು ಬೇರುಸಹಿತ ಒಣಗಿಹೋಗಿತ್ತು. 21 ಪೇತ್ರನು ಆ ಮರವನ್ನು ಜ್ಞಾಪಿಸಿಕೊಂಡು, ಯೇಸುವಿಗೆ, “ಗುರುವೇ, ನೋಡು! ನಿನ್ನೆ ನೀನು ಶಪಿಸಿದ ಅಂಜೂರದ ಮರ ಒಣಗಿಹೋಗಿದೆ!” ಎಂದನು.
22 ಯೇಸು, “ದೇವರಲ್ಲಿ ನಂಬಿಕೆ ಇಡಿರಿ. 23 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಈ ಬೆಟ್ಟಕ್ಕೆ, ‘ನೀನು ಹೋಗಿ ಸಮುದ್ರದೊಳಗೆ ಬೀಳು’ ಎಂದು ಹೇಳಿ, ಸಂಶಯವನ್ನೇಪಡದೆ, ನೀವು ಹೇಳಿದ್ದು ಖಂಡಿತವಾಗಿ ನೆರವೇರುತ್ತದೆ ಎಂದು ನಂಬಿದರೆ, ದೇವರು ಅದನ್ನು ನಿಮಗಾಗಿ ಮಾಡುತ್ತಾನೆ. 24 ಆದ್ದರಿಂದ ನೀವು ಪ್ರಾರ್ಥನೆಯಲ್ಲಿ ಬೇಡಿಕೊಂಡು, ಅದನ್ನೆಲ್ಲಾ ಹೊಂದಿಕೊಂಡಾಯಿತೆಂದು ನಂಬಿದರೆ, ಅದೆಲ್ಲಾ ನಿಮ್ಮದಾಗುತ್ತವೆ ಎಂದು ನಾನು ನಿಮಗೆ ಹೇಳುತ್ತೇನೆ.
Kannada Holy Bible: Easy-to-Read Version. All rights reserved. © 1997 Bible League International