Revised Common Lectionary (Semicontinuous)
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ. ರಚನೆಗಾರ: ಸೊಲೋಮೋನ.
127 ಯೆಹೋವನು ಮನೆಯನ್ನು ಕಟ್ಟದಿದ್ದರೆ,
ಕಟ್ಟುವವರ ಸಮಯವೆಲ್ಲಾ ವ್ಯರ್ಥ.
ಯೆಹೋವನು ಪಟ್ಟಣವನ್ನು ಕಾಯದಿದ್ದರೆ,
ಕಾವಲುಗಾರರ ಸಮಯವೆಲ್ಲಾ ವ್ಯರ್ಥ.
2 ಕೇವಲ ಹೊಟ್ಟೆಪಾಡಿಗಾಗಿ ಮುಂಜಾನೆಯಲ್ಲೇ ಎದ್ದು
ರಾತ್ರಿಯವರೆಗೂ ದುಡಿಯುವುದು ಕೇವಲ ವ್ಯರ್ಥ.
ಯಾಕೆಂದರೆ ದೇವರು ತನ್ನ ಪ್ರಿಯರಿಗೆ
ಆಹಾರವನ್ನು ನಿದ್ರೆಯಲ್ಲೂ ದಯಪಾಲಿಸುವನು.
3 ಮಕ್ಕಳು ಯೆಹೋವನ ಕೊಡುಗೆ.
ತಾಯಿಯ ಗರ್ಭಫಲವು ಆತನ ಬಹುಮಾನ.
4 ಯೌವನಸ್ಥನ ಗಂಡುಮಕ್ಕಳು ಸೈನಿಕನ ಬತ್ತಳಿಕೆಯಲ್ಲಿರುವ ಬಾಣಗಳಂತಿದ್ದಾರೆ.
5 ತನ್ನ ಬತ್ತಳಿಕೆಯಲ್ಲಿ ಗಂಡುಮಕ್ಕಳನ್ನು ತುಂಬುವವನು ಭಾಗ್ಯವಂತನಾಗಿದ್ದಾನೆ.
ಅವನಿಗೆ ಸೋಲೇ ಇಲ್ಲ.
ಅವನ ಗಂಡುಮಕ್ಕಳು ಅವನ ಪರವಾಗಿಯೂ ಅವನ ಶತ್ರುಗಳ ವಿರೋಧವಾಗಿಯೂ ನ್ಯಾಯಸ್ಥ್ಥಾನಗಳಲ್ಲಿ ವಾದಿಸುವರು.
ಬೋವಜ ಮತ್ತು ಮತ್ತೊಬ್ಬ ಸಂಬಂಧಿಕನು
4 ಬೋವಜನು ನಗರದ್ವಾರದ ಬಳಿಯಲ್ಲಿ ಕುಳಿತುಕೊಂಡನು. ತಾನು ಹೇಳಿದ್ದ ಸಮೀಪಬಂಧುವು ಅಲ್ಲಿಂದ ಹಾದು ಹೋಗುವವರೆಗೂ ಅವನು ಅಲ್ಲಿಯೇ ಕುಳಿತಿದ್ದನು. ಅವನನ್ನು ಕಂಡ ಬೋವಜನು, “ಸ್ನೇಹಿತನೇ ಇಲ್ಲಿ ಬಾ, ಇಲ್ಲಿ ಕುಳಿತುಕೋ” ಎಂದು ಕರೆದನು.
2 ಆಮೇಲೆ ಬೋವಜನು ನಗರದ ಹಿರಿಯರಲ್ಲಿ ಹತ್ತುಮಂದಿಯನ್ನು ಕರೆದು ಅವರಿಗೆ, “ಇಲ್ಲಿ ಕುಳಿತುಕೊಳ್ಳಿ” ಎಂದು ಹೇಳಿದನು. ಅವರೂ ಕುಳಿತುಕೊಂಡರು.
3 ಆಗ ಬೋವಜನು ಆ ಸಮೀಪಬಂಧುವಿನೊಡನೆ ಮಾತಾಡಿ, “ನೊವೊಮಿಯು ಮೋವಾಬ್ ಬೆಟ್ಟಪ್ರದೇಶದಿಂದ ಹಿಂದಿರುಗಿ ಬಂದಿದ್ದಾಳೆ. ಅವಳು ನಮ್ಮ ಸಂಬಂಧಿಯಾದ ಎಲೀಮೆಲೆಕನ ಹೊಲವನ್ನು ಮಾರುತ್ತಿದ್ದಾಳೆ. 4 ನಾನು ಇದರ ಬಗ್ಗೆ ನಿನಗೆ ಈ ಜನರ ಸಮ್ಮುಖದಲ್ಲಿ ಮತ್ತು ನಮ್ಮ ಹಿರಿಯರ ಸಮ್ಮುಖದಲ್ಲಿ ಹೇಳಬೇಕೆಂದು ತೀರ್ಮಾನಿಸಿದ್ದೇನೆ. ನೀನು ಆ ಹೊಲವನ್ನು ಕೊಂಡುಕೊಳ್ಳ ಬಯಸಿದರೆ ಕೊಂಡುಕೋ. ನಿನಗೆ ಕೊಂಡುಕೊಳ್ಳಲು ಇಷ್ಟವಿಲ್ಲದಿದ್ದರೆ ನನಗೆ ಹೇಳು. ನಿನ್ನ ಬಳಿಕ ಆ ಹೊಲವನ್ನು ಕೊಂಡುಕೊಳ್ಳುವ ಹಕ್ಕು ನನಗಿದೆ. ನೀನು ಆ ಹೊಲವನ್ನು ಕೊಂಡುಕೊಳ್ಳದಿದ್ದರೆ ನಾನು ಕೊಂಡುಕೊಳ್ಳುತ್ತೇನೆ.” ಅದಕ್ಕೆ ಅವನು, “ಸರಿ, ನಾನೇ ಕೊಂಡುಕೊಳ್ಳುತ್ತೇನೆ.” ಎಂದನು.
5 ಅದಕ್ಕೆ ಬೋವಜನು, “ನೀನು ನೊವೊಮಿಯಿಂದ ಆ ಹೊಲವನ್ನು ಕೊಂಡುಕೊಂಡರೆ ಸತ್ತವನ ಹೆಂಡತಿಯೂ ಮೋವಾಬ್ಯಳೂ ಆಗಿರುವ ರೂತಳನ್ನು ಸಹ ನೀನು ಮದುವೆಯಾಗಬೇಕು. ರೂತಳಿಗೆ ಜನಿಸುವ ಮಗನು ಆ ಹೊಲಕ್ಕೆ ಹಕ್ಕುದಾರನಾಗುವನು. ಹೀಗೆ ಈ ಭೂಮಿಯು ಸತ್ತು ಹೋದವನ ಕುಟುಂಬದಲ್ಲಿಯೇ ಇದ್ದು ಅವನ ಹೆಸರಿನಲ್ಲಿಯೇ ಮುಂದುವರಿಯುವುದು” ಎಂದು ಹೇಳಿದನು.
6 ಅದಕ್ಕೆ ಆ ಸಮೀಪಬಂಧುವು, “ನಾನು ಆ ಹೊಲವನ್ನು ಕೊಂಡುಕೊಳ್ಳಲಾರೆ. ಆ ಹೊಲ ನನಗೆ ಸೇರಬೇಕಾದರೂ ನಾನು ಅದನ್ನು ಕೊಂಡುಕೊಳ್ಳಲಾರೆ. ಒಂದುವೇಳೆ ನಾನು ಅದನ್ನು ಕೊಂಡುಕೊಂಡರೆ ನನ್ನ ಸ್ವಂತ ಹೊಲವನ್ನೇ ಕಳೆದುಕೊಳ್ಳಬೇಕಾಗುವುದು. ಆದ್ದರಿಂದ ನೀನೇ ಆ ಹೊಲವನ್ನು ಕೊಂಡುಕೊಳ್ಳಬಹುದು” ಎಂದು ಉತ್ತರಿಸಿದನು. 7 (ಇಸ್ರೇಲರಲ್ಲಿ ಪೂರ್ವಕಾಲದ ಪದ್ಧತಿಯೇನೆಂದರೆ, ಯಾವುದಾದರೊಂದು ವಸ್ತುವನ್ನು ಕೊಂಡುಕೊಳ್ಳುವಾಗಲೂ ತೆಗೆದುಕೊಳ್ಳುವಾಗಲೂ ಮಾತನ್ನು ದೃಢಪಡಿಸುವುದಕ್ಕೋಸ್ಕರ ಒಬ್ಬನು ತನ್ನ ಕೆರವನ್ನು ಮತ್ತೊಬ್ಬನಿಗೆ ಕೊಡುತ್ತಿದ್ದನು.) 8 ಆದ್ದರಿಂದ ಆ ಸಮೀಪಬಂಧುವು, “ನೀನೇ ಹೊಲವನ್ನು ಕೊಂಡುಕೋ” ಎಂದು ಹೇಳಿ ತನ್ನ ಕೆರವನ್ನು ತೆಗೆದು ಬೋವಜನಿಗೆ ಕೊಟ್ಟನು.
9 ಆಗ ಬೋವಜನು ಹಿರಿಯರಿಗೂ ಎಲ್ಲಾ ಜನರಿಗೂ, “ನಾನು ಎಲೀಮೆಲೆಕ್, ಕಿಲ್ಯೋನ್, ಮಹ್ಲೋನ್ ಇವರೆಲ್ಲರ ಆಸ್ತಿಯನ್ನು ನೊವೊಮಿಯಿಂದ ಕೊಂಡುಕೊಳ್ಳುತ್ತಿದ್ದೇನೆ. ಇದಕ್ಕೆ ನೀವು ಸಾಕ್ಷಿಯಾಗಿದ್ದೀರಿ. 10 ಮೋವಾಬ್ಯಳೂ ಮಹ್ಲೋನನ ಹೆಂಡತಿಯೂ ಆಗಿದ್ದ ರೂತಳನ್ನು ನನ್ನ ಹೆಂಡತಿಯನ್ನಾಗಿ ತೆಗೆದುಕೊಳ್ಳುತ್ತೇನೆ. ಸತ್ತುಹೋದ ಮನುಷ್ಯನ ಆಸ್ತಿಯು ಅವನ ಹೆಸರಿನಲ್ಲಿ ಉಳಿಯಲೆಂದು ನಾನು ಹೀಗೆ ಮಾಡುತ್ತಿದ್ದೇನೆ. ಹೀಗೆ ಮಾಡುವುದರಿಂದ ಸತ್ತವನ ಹೆಸರು ಅವನ ಕುಟುಂಬದಲ್ಲಿಯೂ ಅವನ ಆಸ್ತಿಯಲ್ಲಿಯೂ ಉಳಿಯುವುದು. ಇದಕ್ಕೆ ನೀವೇ ಸಾಕ್ಷಿಯಾಗಿದ್ದೀರಿ” ಎಂದು ನುಡಿದನು.
6 ನಾವು ಬಲಹೀನರೂ ದೇವರಿಗೆ ವಿರೋಧವಾಗಿ ಜೀವಿಸುವವರೂ ಆಗಿದ್ದಾಗಲೇ ಕ್ರಿಸ್ತನು ನೇಮಿತ ಕಾಲದಲ್ಲಿ ನಮಗೋಸ್ಕರ ಪ್ರಾಣಕೊಟ್ಟನು. 7 ನೀತಿವಂತನ ಪ್ರಾಣವನ್ನು ರಕ್ಷಿಸುವುದಕ್ಕಾಗಿ ಒಬ್ಬನು ಪ್ರಾಣಕೊಡುವುದು ಅಪರೂಪ. ನಿಜವಾಗಿಯೂ ಒಳ್ಳೆಯವನಾಗಿರುವ ಒಬ್ಬನಿಗಾಗಿ ಪ್ರಾಣಕೊಡಲು ಒಬ್ಬನು ಧೈರ್ಯಮಾಡಿದರೂ ಮಾಡಬಹುದು. 8 ಆದರೆ ನಾವು ಇನ್ನೂ ಪಾಪಿಗಳಾಗಿದ್ದಾಗಲೇ ಕ್ರಿಸ್ತನು ನಮಗೋಸ್ಕರ ಪ್ರಾಣಕೊಟ್ಟನು. ದೇವರಿಗೆ ನಮ್ಮ ಮೇಲಿರುವ ಮಹಾ ಪ್ರೀತಿಯನ್ನು ಇದು ವ್ಯಕ್ತಪಡಿಸಿದೆ.
9 ನಾವು ಕ್ರಿಸ್ತನ ರಕ್ತದ ಮೂಲಕವಾಗಿ ನೀತಿವಂತರಾಗಿದ್ದೇವೆ. ಆದ್ದರಿಂದ ಆತನ ಮೂಲಕ ದೇವರ ಕೋಪದಿಂದ ಖಂಡಿತವಾಗಿ ತಪ್ಪಿಸಿಕೊಳ್ಳುತ್ತೇವೆ. 10 ಅಂದರೆ, ನಾವು ದೇವರ ಶತ್ರುಗಳಾಗಿದ್ದಾಗಲೇ, ದೇವರು ತನ್ನ ಮಗನ ಮರಣದ ಮೂಲಕವಾಗಿ ನಮ್ಮನ್ನು ತನ್ನ ಸ್ನೇಹಿತರನ್ನಾಗಿ ಮಾಡಿಕೊಂಡಿದ್ದಾನೆ. ಈಗ ನಾವು ದೇವರ ಸ್ನೇಹಿತರಾಗಿರುವುದರಿಂದ ದೇವರು ತನ್ನ ಮಗನ ಪ್ರಾಣದ ಮೂಲಕ ನಮ್ಮನ್ನು ರಕ್ಷಿಸುವುದು ಮತ್ತಷ್ಟು ನಿಶ್ಚಯವಾಗಿದೆ. 11 ಇಷ್ಟು ಮಾತ್ರವಲ್ಲದೆ, ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಮೂಲಕ ನಾವು ದೇವರಲ್ಲಿ ಹರ್ಷಿಸುತ್ತೇವೆ. ಈಗ ನಾವು ದೇವರ ಸ್ನೇಹಿತರಾಗಿರುವುದು ಯೇಸುವಿನಿಂದಲೇ.
Kannada Holy Bible: Easy-to-Read Version. All rights reserved. © 1997 Bible League International