Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 18:20-30

20 ನಾನು ನಿರಪರಾಧಿಯಾಗಿದ್ದರಿಂದ ಯೆಹೋವನು ನನಗೆ ಪ್ರತಿಫಲ ನೀಡಿದನು;
    ನಾನು ತಪ್ಪನ್ನು ಮಾಡಿಲ್ಲದ ಕಾರಣ ನನಗೆ ಒಳ್ಳೆಯದನ್ನು ಮಾಡಿದನು.
21 ಯಾಕೆಂದರೆ ನಾನು ಯೆಹೋವನಿಗೆ ವಿಧೇಯನಾಗಿದ್ದೆನು;
    ನನ್ನ ದೇವರ ವಿರೋಧನಾಗಿ ನಾನು ಪಾಪಮಾಡಲಿಲ್ಲ.
22 ನಾನು ಆತನ ಕಟ್ಟಳೆಗಳನ್ನೂ ಆಜ್ಞೆಗಳನ್ನೂ
    ಯಾವಾಗಲೂ ಜ್ಞಾಪಿಸಿಕೊಳ್ಳುವೆ.
23 ಆತನ ಎದುರಿನಲ್ಲಿ ನಿರ್ದೋಷಿಯಾಗಿದ್ದೆನು.
    ಪಾಪದಲ್ಲಿ ಬೀಳದಂತೆ ಎಚ್ಚರಿಕೆಯಾಗಿದ್ದೆನು.
24 ಯೆಹೋವನ ದೃಷ್ಟಿಯಲ್ಲಿ ನಾನು ನೀತಿವಂತನೂ ನಿರಪರಾಧಿಯೂ ಆಗಿರುವುದರಿಂದ
    ಆತನು ನನಗೆ ತಕ್ಕ ಪ್ರತಿಫಲವನ್ನು ಕೊಟ್ಟನು.

25 ಯೆಹೋವನೇ, ನಿನ್ನನ್ನು ನಿಜವಾಗಿಯೂ ಪ್ರೀತಿಸುವವರನ್ನು
    ನೀನು ಶಾಶ್ವತವಾದ ಪ್ರೀತಿಯಿಂದ ಪ್ರೀತಿಸುವೆ.
ನಿನಗೆ ನಂಬಿಗಸ್ತರಾಗಿರುವವರಿಗೆ
    ನೀನೂ ನಂಬಿಗಸ್ತನಾಗಿರುವೆ.
26 ನೀನು ಒಳ್ಳೆಯವರಿಗೂ ಶುದ್ಧರಿಗೂ ಒಳ್ಳೆಯವನಾಗಿಯೂ ಪರಿಶುದ್ಧನಾಗಿಯೂ ಇರುವೆ;
    ದುಷ್ಟರಿಗಾದರೋ ಶತ್ರುವಾಗಿರುವೆ.
27 ಯೆಹೋವನೇ, ನೀನು ದೀನರಿಗೆ ಸಹಾಯಮಾಡುವೆ.
    ಗರ್ವಿಷ್ಠರಿಗಾದರೋ ಅವಮಾನ ಮಾಡುವೆ.
28 ಯೆಹೋವನೇ, ನನ್ನ ದೀಪವನ್ನು ಹೊತ್ತಿಸುವವನು ನೀನೇ.
    ನನ್ನ ದೇವರು ನನ್ನ ಸುತ್ತಲೂ ಇರುವ ಕತ್ತಲೆಯನ್ನು ಬೆಳಕನ್ನಾಗಿ ಮಾಡುವನು.
29 ಯೆಹೋವನೇ, ನಿನ್ನ ಸಹಾಯದಿಂದ ನಾನು ಸೈನಿಕರೊಡನೆ ಓಡಬಲ್ಲೆ.
    ನನ್ನ ದೇವರ ಸಹಾಯದಿಂದ ನಾನು ಶತ್ರುಗಳ ಕೋಟೆಗಳನ್ನು ಹತ್ತುವೆನು.

30 ದೇವರ ಮಾರ್ಗಗಳು ನಿಷ್ಕಳಂಕವಾಗಿವೆ;
    ಯೆಹೋವನ ಮಾತುಗಳು ಸತ್ಯವಾಗಿವೆ.
    ಆತನು ತನ್ನಲ್ಲಿ ಭರವಸೆಯಿಟ್ಟಿರುವವರನ್ನು ಸಂರಕ್ಷಿಸುವನು.

ರೂತಳು 2:15-23

15 ಆಗ ರೂತಳು ಎದ್ದು ಪುನಃ ಕೆಲಸಕ್ಕೆ ಹೋದಳು.

ಆಗ ಬೋವಜನು ತನ್ನ ಸೇವಕರಿಗೆ, “ರೂತಳು ಕಣದಲ್ಲಿರುವ ಸಿವುಡುಗಳ ಸುತ್ತಲೂ ಹಕ್ಕಲು ಆರಿಸಿಕೊಳ್ಳಲಿ; ಅವಳನ್ನು ತಡೆಯಬೇಡಿ. 16 ಅವಳಿಗಾಗಿ ಕಟ್ಟುಗಳಿಂದ ಕೆಲವು ತುಂಬು ತೆನೆಗಳನ್ನೇ ಬಿಟ್ಟು ಅವಳ ಕೆಲಸ ಸುಲಭಗೊಳಿಸಿರಿ. ಆ ಧಾನ್ಯವನ್ನು ತೆಗೆದುಕೊಂಡರೆ ಅವಳನ್ನು ಗದರಿಸಬೇಡಿ” ಎಂದು ಆಜ್ಞಾಪಿಸಿದನು.

ನೊವೊಮಿಗೆ ಬೋವಜನ ವಿಷಯ ತಿಳಿಯಿತು

17 ರೂತಳು ಸಾಯಂಕಾಲದವರೆಗೆ ಹೊಲದಲ್ಲಿ ಕೆಲಸ ಮಾಡಿದಳು. ಸಾಯಂಕಾಲ ತೆನೆಗಳನ್ನು ಬಡಿದು ಕಾಳನ್ನು ಹೊಟ್ಟಿನಿಂದ ಬೇರ್ಪಡಿಸಿದಳು. ಸುಮಾರು ಮೂವತ್ತು ಸೇರು[a] ಜವೆಗೋಧಿ ಸಿಕ್ಕಿತ್ತು. 18 ರೂತಳು ತನ್ನ ಅತ್ತೆಗೆ ತೋರಿಸುವುದಕ್ಕಾಗಿ ಆ ಧಾನ್ಯವನ್ನು ಪಟ್ಟಣಕ್ಕೆ ತೆಗೆದುಕೊಂಡು ಹೋದಳು. ಇದಲ್ಲದೆ ತಾನು ಮಧ್ಯಾಹ್ನ ಊಟ ಮಾಡುವಾಗ ತೆಗೆದಿಟ್ಟ ಆಹಾರವನ್ನು ಸಹ ಅವಳಿಗೆ ಕೊಟ್ಟಳು.

19 ಅವಳ ಅತ್ತೆಯು ಅವಳಿಗೆ, “ಈ ಧಾನ್ಯವನ್ನೆಲ್ಲಾ ನೀನು ಎಲ್ಲಿಂದ ಶೇಖರಿಸಿದೆ? ನೀನು ಎಲ್ಲಿ ಕೆಲಸ ಮಾಡಿದೆ? ನಿನಗೆ ಸಹಾಯ ಮಾಡಿದ ಮನುಷ್ಯನಿಗೆ ಶುಭವಾಗಲಿ” ಎಂದಳು.

ಅದಕ್ಕೆ ರೂತಳು, “ನಾನು ಇಂದು ಯಾರ ಹತ್ತಿರ ಕೆಲಸ ಮಾಡಿದೆನೋ ಆ ಮನುಷ್ಯನ ಹೆಸರು ಬೋವಜ” ಎಂದು ಹೇಳಿದಳು.

20 ನೊವೊಮಿಯು ತನ್ನ ಸೊಸೆಗೆ, “ಯೆಹೋವನು ಅವನಿಗೆ ಕೃಪೆತೋರಲಿ. ಯೆಹೋವನು ಸತ್ತುಹೋದವರಿಗೂ ಬದುಕಿರುವವರಿಗೂ ದಯೆತೋರಿಸುತ್ತಾನೆ” ಎಂದು ಹೇಳಿದಳು.

ಆಮೇಲೆ ನೊವೊಮಿಯು ತನ್ನ ಸೊಸೆಗೆ, “ಬೋವಜನು ನಮ್ಮ ಸಂಬಂಧಿಗಳಲ್ಲೊಬ್ಬನಲ್ಲದೆ ನಮ್ಮ ಸಮೀಪದ ಬಂಧುವೂ ನಮ್ಮ ಸಂರಕ್ಷಕನೂ ಆಗಿದ್ದಾನೆ” ಎಂದು ತಿಳಿಸಿದಳು.

21 ಅದಕ್ಕೆ ರೂತಳು, “ಸುಗ್ಗಿಕಾಲ ಮುಗಿಯುವವರೆಗೂ ತನ್ನ ಹೆಣ್ಣಾಳುಗಳ ಜೊತೆಯಲ್ಲಿಯೇ ಹೋಗಬೇಕೆಂದು ಬೋವಜನು ನನಗೆ ಹೇಳಿದ್ದಾನೆ” ಎಂದು ಹೇಳಿದಳು.

22 ಆಗ ನೊವೊಮಿಯು ತನ್ನ ಸೊಸೆಯಾದ ರೂತಳಿಗೆ, “ನೀನು ಅವನ ಹೆಣ್ಣಾಳುಗಳ ಜೊತೆಯಲ್ಲಿ ಹೋಗುವುದೇ ಒಳ್ಳೆಯದು. ನೀನು ಬೇರೆ ಹೊಲಕ್ಕೆ ಹೋದರೆ ನಿನಗೆ ತೊಂದರೆಯಾಗಬಹುದು” ಎಂದಳು. 23 ರೂತಳು ಬೋವಜನ ಹೆಣ್ಣಾಳುಗಳ ಜೊತೆಯಲ್ಲಿದ್ದುಕೊಂಡು ಗೋಧಿಯ ಮತ್ತು ಜವೆಗೋಧಿಯ ಸುಗ್ಗಿಕಾಲ ಮುಗಿಯುವವರೆಗೂ ಹಕ್ಕಲಾಯುತ್ತಿದ್ದಳು. ರೂತಳು ತನ್ನ ಅತ್ತೆಯಾದ ನೊವೊಮಿಯ ಸಂಗಡ ಮನೆಯಲ್ಲಿದ್ದಳು.

ರೋಮ್ನಗರದವರಿಗೆ 12:17-21

17 ಯಾವನಾದರು ನಿಮಗೆ ಕೇಡುಮಾಡಿದರೆ, ಅದಕ್ಕೆ ಪ್ರತಿಯಾಗಿ ಅವನಿಗೆ ಕೇಡುಮಾಡಬೇಡಿ. ಎಲ್ಲಾ ಜನರು ಒಳ್ಳೆಯದೆಂದು ಯೋಚಿಸುವ ಕಾರ್ಯಗಳನ್ನು ಮಾಡಲು ಪ್ರಯತ್ನಿಸಿರಿ. 18 ಎಲ್ಲಾ ಜನರೊಂದಿಗೆ ಶಾಂತಿಯಿಂದ ಜೀವಿಸಲು ನಿಮ್ಮಿಂದ ಸಾಧ್ಯವಾದಷ್ಟರ ಮಟ್ಟಿಗೆ ಪ್ರಯತ್ನಿಸಿರಿ. 19 ನನ್ನ ಸ್ನೇಹಿತರೇ, ನಿಮಗೆ ಕೇಡುಮಾಡುವ ಜನರನ್ನು ದಂಡಿಸಲು ಪ್ರಯತ್ನಿಸಬೇಡಿ. ದೇವರು ತನ್ನ ಕೋಪದಿಂದ ಅವರನ್ನು ದಂಡಿಸುವವರೆಗೆ ಕಾದುಕೊಂಡಿರಿ. “ನಾನೇ ದಂಡಿಸುವವನು; ನಾನೇ ಜನರಿಗೆ ಮುಯ್ಯಿತೀರಿಸುವವನು ಎಂದು ಪ್ರಭುವು ಹೇಳುತ್ತಾನೆ”(A) ಎಂಬುದಾಗಿ ಬರೆಯಲ್ಪಟ್ಟಿದೆ. 20 ನೀವು ಮಾಡಬೇಕಾದದ್ದೇನೆಂದರೆ,

“ನಿಮ್ಮ ವೈರಿಯು ಹಸಿವೆಗೊಂಡಿದ್ದರೆ,
    ಅವನಿಗೆ ಊಟ ಕೊಡಿರಿ.
ನಿಮ್ಮ ವೈರಿಯು ಬಾಯಾರಿದ್ದರೆ,
    ಅವನಿಗೆ ಕುಡಿಯಲು ನೀರು ಕೊಡಿರಿ.
ನೀವು ಹೀಗೆ ಮಾಡಿದರೆ, ಅವನಿಗೆ ನಾಚಿಕೆಯಾಗುವುದು.”(B)

21 ಕೆಟ್ಟತನವು ನಿಮ್ಮನ್ನು ಸೋಲಿಸುವುದಕ್ಕೆ ಅವಕಾಶಕೊಡದೆ ಒಳ್ಳೆಯದನ್ನು ಮಾಡುವುದರ ಮೂಲಕವಾಗಿ ಕೆಟ್ಟತನವನ್ನು ಸೋಲಿಸಿರಿ.

ರೋಮ್ನಗರದವರಿಗೆ 13:8-10

ಇತರ ಜನರನ್ನು ಪ್ರೀತಿಸಬೇಕೆಂಬ ಒಂದೇ ಆಜ್ಞೆ

ಜನರಿಗೆ ಯಾವ ವಿಷಯದಲ್ಲಿಯೂ ಸಾಲಗಾರರಾಗಿರಬೇಡಿ. ಆದರೆ ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ವಿಷಯದಲ್ಲಿ ಮಾತ್ರ ಯಾವಾಗಲೂ ಸಾಲಗಾರರಾಗಿದ್ದೀರಿ. ಇತರ ಜನರನ್ನು ಪ್ರೀತಿಸುವ ವ್ಯಕ್ತಿಯು ಇಡೀ ಧರ್ಮಶಾಸ್ತ್ರಕ್ಕೆ ವಿಧೇಯನಾಗಿದ್ದಾನೆ. ಏಕೆಂದರೆ, “ವ್ಯಭಿಚಾರ ಮಾಡಕೂಡದು; ಕೊಲೆ ಮಾಡಕೂಡದು; ಕದಿಯಕೂಡದು; ಇತರರಿಗೆ ಸೇರಿದ ವಸ್ತುಗಳನ್ನು ಅಪೇಕ್ಷಿಸಕೂಡದು”(A) ಎಂದು ಧರ್ಮಶಾಸ್ತ್ರವು ಹೇಳುತ್ತದೆ. ಈ ಆಜ್ಞೆಗಳನ್ನು ಮೊದಲುಗೊಂಡು ಉಳಿದೆಲ್ಲಾ ಆಜ್ಞೆಗಳು, “ನೀನು ನಿನ್ನನ್ನು ಪ್ರೀತಿಸುವಂತೆ ಇತರ ಜನರನ್ನೂ ಪ್ರೀತಿಸು”(B) ಎಂಬ ಒಂದೇ ಆಜ್ಞೆಯಲ್ಲಿ ಅಡಕವಾಗಿದೆ. 10 ಪ್ರೀತಿಯು ಬೇರೆಯವರಿಗೆ ಕೇಡುಮಾಡುವುದಿಲ್ಲ. ಆದ್ದರಿಂದ ಪ್ರೀತಿಸುವುದಕ್ಕೂ ಎಲ್ಲಾ ಆಜ್ಞೆಗಳಿಗೆ ವಿಧೇಯರಾಗುವುದಕ್ಕೂ ವ್ಯತ್ಯಾಸವೇನೂ ಇಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International