Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ರೂತಳು 1:1-18

ಯೆಹೂದದಲ್ಲಿ ಬರಗಾಲ

ನ್ಯಾಯಾಧೀಶರು ಆಳುತ್ತಿದ್ದಾಗ ದೇಶದಲ್ಲಿ ಬರಗಾಲ ಬಂತು. ಆಗ ಎಲೀಮೆಲೆಕನೆಂಬ ಒಬ್ಬ ಮನುಷ್ಯನು ತನ್ನ ಹೆಂಡತಿ ಮತ್ತು ಇಬ್ಬರು ಗಂಡುಮಕ್ಕಳೊಡನೆ ಯೆಹೂದಪ್ರಾಂತದ ಬೆತ್ಲೆಹೇಮ್ ನಗರವನ್ನು ಬಿಟ್ಟು ಮೋವಾಬ್ ಬೆಟ್ಟಪ್ರದೇಶಕ್ಕೆ ಹೋದನು. ಅವನ ಹೆಂಡತಿಯ ಹೆಸರು “ನೊವೊಮಿ.” ಅವನ ಇಬ್ಬರು ಗಂಡುಮಕ್ಕಳ ಹೆಸರುಗಳು: ಮಹ್ಲೋನ್ ಮತ್ತು ಕಿಲ್ಯೋನ್. ಅವರು ಯೆಹೂದಪ್ರಾಂತದ ಎಫ್ರಾತಿಗೆ ಸೇರಿದ ಬೆತ್ಲೆಹೇಮಿನ ನಿವಾಸಿಗಳು. ಇವರು ಮೋವಾಬ್ ಬೆಟ್ಟಪ್ರದೇಶಕ್ಕೆ ಹೋಗಿ ಅಲ್ಲಿಯೇ ನೆಲೆಸಿದರು.

ಕೆಲವು ದಿನಗಳಾದ ಮೇಲೆ ನೊವೊಮಿಯ ಗಂಡನಾದ ಎಲೀಮೆಲೆಕನು ಮರಣಹೊಂದಿದನು. ನೊವೊಮಿ ಮತ್ತು ಆಕೆಯ ಇಬ್ಬರು ಗಂಡುಮಕ್ಕಳು ಅಲ್ಲಿ ತಮ್ಮ ಜೀವನವನ್ನು ಮುಂದುವರಿಸಿದರು. ಆಕೆಯ ಗಂಡುಮಕ್ಕಳು ಮೋವಾಬ್ ದೇಶದ ಸ್ತ್ರೀಯರನ್ನು ಮದುವೆಯಾದರು. ಒಬ್ಬನ ಹೆಂಡತಿಯ ಹೆಸರು ಒರ್ಫಾ, ಇನ್ನೊಬ್ಬನ ಹೆಂಡತಿಯ ಹೆಸರು ರೂತ್. ಅವರು ಮೋವಾಬ್‌ನಲ್ಲಿ ಸುಮಾರು ಹತ್ತು ವರ್ಷವಿದ್ದರು. ಬಳಿಕ ಮಹ್ಲೋನ್ ಮತ್ತು ಕಿಲ್ಯೋನ್ ಸಹ ಸತ್ತುಹೋದರು. ಹೀಗಾಗಿ ನೊವೊಮಿಯು ತನ್ನ ಗಂಡನನ್ನೂ ಇಬ್ಬರು ಗಂಡುಮಕ್ಕಳನ್ನೂ ಕಳೆದುಕೊಂಡು ಒಬ್ಬಳೇ ಉಳಿದಳು.

ಸ್ವದೇಶಕ್ಕೆ ನೊವೊಮಿಯ ಪ್ರಯಾಣ

ನೊವೊಮಿಯು ಮೋವಾಬ್ ಬೆಟ್ಟಪ್ರದೇಶದಲ್ಲಿದ್ದಾಗ ಯೆಹೋವನು ತನ್ನ ಜನರಿಗೆ ಕರುಣೆತೋರಿ ಆಹಾರವನ್ನು ಒದಗಿಸಿರುವ ಸುದ್ದಿಯು ನೊವೊಮಿಗೆ ತಿಳಿಯಿತು. ಆದ್ದರಿಂದ ಆಕೆಯು ಮೋವಾಬ್ ಬೆಟ್ಟಪ್ರದೇಶವನ್ನು ಬಿಟ್ಟು ತನ್ನ ಊರಿಗೆ ಹೋಗಲು ನಿರ್ಧರಿಸಿದಳು. ಅವಳ ಸೊಸೆಯಂದಿರು ಸಹ ಅವಳ ಸಂಗಡ ಹೋಗಲು ತೀರ್ಮಾನಿಸಿದರು. ಅವಳು ಮತ್ತು ಅವಳ ಸೊಸೆಯಂದಿರು ತಾವು ಈವರೆಗೆ ಇದ್ದ ಸ್ಥಳವನ್ನು ಬಿಟ್ಟು ಯೆಹೂದ ಪ್ರಾಂತಕ್ಕೆ ಹೊರಟರು.

ಆಗ ನೊವೊಮಿ ತನ್ನ ಸೊಸೆಯಂದಿರಿಗೆ, “ನೀವಿಬ್ಬರೂ ನಿಮ್ಮ ತಂದೆತಾಯಿಗಳ ಮನೆಗೆ ಹೋಗಿ. ನೀವು ನನ್ನನ್ನೂ ಸತ್ತುಹೋದ ನನ್ನ ಇಬ್ಬರು ಮಕ್ಕಳನ್ನೂ ತುಂಬ ಪ್ರೀತಿಯಿಂದ ನೋಡಿಕೊಂಡಿದ್ದೀರಿ. ಯೆಹೋವನು ನಿಮಗೆ ಅಷ್ಟೇ ಕೃಪೆಯನ್ನೂ ಪ್ರೀತಿಯನ್ನೂ ತೋರಲಿ ಎಂದು ನಾನು ಪ್ರಾರ್ಥಿಸುತ್ತೇನೆ. ನೀವಿಬ್ಬರೂ ಮದುವೆ ಮಾಡಿಕೊಂಡು ಒಳ್ಳೆಯ ಕುಟುಂಬವನ್ನು ಹೊಂದಿಕೊಳ್ಳಲು ಯೆಹೋವನು ನಿಮಗೆ ಸಹಾಯಮಾಡಲಿ ಎಂದು ನಾನು ಪ್ರಾರ್ಥಿಸುತ್ತೇನೆ” ಎಂದು ಹೇಳಿ ತನ್ನ ಸೊಸೆಯಂದಿರಿಗೆ ಮುದ್ದಿಟ್ಟಳು. ಅವರೆಲ್ಲರೂ ಅಳತೊಡಗಿದರು.

10 ಅವಳ ಸೊಸೆಯಂದಿರು, “ನಾವು ನಿನ್ನ ಸಂಗಡ ಬಂದು ನಿನ್ನ ಜನರೊಡನೆ ಇರುತ್ತೇವೆ” ಎಂದರು.

11 ಆದರೆ ನೊವೊಮಿ, “ಬೇಡ ಮಕ್ಕಳೆ, ನಿಮ್ಮ ಮನೆಗಳಿಗೆ ಹಿಂತಿರುಗಿಹೋಗಿರಿ. ನನ್ನ ಸಂಗಡ ನೀವೇಕೆ ಬರಬೇಕು? ನಾನು ನಿಮಗೆ ಸಹಾಯ ಮಾಡಲಾರೆ. ನಿಮ್ಮನ್ನು ಮದುವೆಯಾಗುವಂಥ ಗಂಡುಮಕ್ಕಳು ನನ್ನಲ್ಲಿಲ್ಲ. 12 ನಿಮ್ಮ ತವರೂರಿಗೆ ಹೋಗಿರಿ! ನಾನು ಇನ್ನೊಂದು ಮದುವೆಯಾಗುವುದಕ್ಕೂ ಸಾಧ್ಯವಿಲ್ಲ. ನನಗೆ ತುಂಬಾ ವಯಸ್ಸಾಗಿದೆ. ನಾನು ನಿಮಗೆ ಸಹಾಯ ಮಾಡಲಾರೆ. ನಾನು ಇಂದು ರಾತ್ರಿಯೇ ಗರ್ಭಧರಿಸಿ ಇಬ್ಬರು ಗಂಡುಮಕ್ಕಳನ್ನು ಹೆತ್ತರೂ ನಿಮಗೆ ಅದರಿಂದ ಪ್ರಯೋಜನವಿಲ್ಲ. 13 ನೀವು ಅವರನ್ನು ಮದುವೆಯಾಗಬೇಕಾದರೆ ಅವರು ಬೆಳೆದು ಪ್ರಾಯಕ್ಕೆ ಬರುವವರೆಗೆ ಕಾದುಕೊಂಡಿರಬೇಕಾಗುತ್ತದೆ. ನೀವು ಗಂಡಂದಿರ ಸಲುವಾಗಿ ಅಷ್ಟುಕಾಲ ಕಾದುಕೊಂಡಿರುವುದು ನನಗಿಷ್ಟವಿಲ್ಲ. ಅದು ನನಗೆ ದುಃಖವನ್ನು ಉಂಟುಮಾಡುತ್ತದೆ. ನಿಮ್ಮ ಬಗ್ಗೆ ನಾನು ತುಂಬಾ ದುಃಖಪಡುತ್ತೇನೆ, ಯೆಹೋವನ ಹಸ್ತವು ನನಗೆ ವಿರುದ್ಧವಾಗಿದೆ” ಎಂದು ಹೇಳಿದಳು.

14 ಅವರೆಲ್ಲರೂ ಮತ್ತೊಮ್ಮೆ ಗಟ್ಟಿಯಾಗಿ ಅತ್ತರು. ಒರ್ಫಾಳು ನೊವೊಮಿಗೆ ಮುದ್ದಿಟ್ಟು ಹೊರಟುಹೋದಳು. ಆದರೆ ರೂತಳು ಅವಳನ್ನು ಮುದ್ದಿಟ್ಟು ಆಕೆಯೊಂದಿಗೆ ಉಳಿದುಕೊಂಡಳು.

15 ನೊವೊಮಿಯು ಆಕೆಗೆ, “ನೋಡು, ನಿನ್ನ ಓರಗಿತ್ತಿಯು ಮತ್ತೆ ತನ್ನ ಜನರ ಬಳಿಗೂ ತನ್ನ ದೇವತೆಗಳ ಬಳಿಗೂ ಹೋಗುತ್ತಿದ್ದಾಳೆ. ನೀನೂ ಹಾಗೆಯೇ ಮಾಡು” ಎಂದು ಹೇಳಿದಳು.

16 ಅದಕ್ಕೆ ರೂತಳು, “ನಿನ್ನನ್ನು ಬಿಟ್ಟು ಸ್ವಜನರ ಬಳಿಗೆ ಹಿಂದಿರುಗಿ ಹೋಗೆಂದು ನನಗೆ ಒತ್ತಾಯ ಮಾಡಬೇಡ. ನೀನು ಎಲ್ಲಿಗೆ ಹೋದರೂ ನಾನೂ ಅಲ್ಲಿಗೆ ಬರುವೆನು. ನೀನು ವಾಸಿಸುವಲ್ಲೇ ನಾನೂ ವಾಸಿಸುವೆನು. ನಿನ್ನ ಜನರೇ ನನ್ನ ಜನರು; ನಿನ್ನ ದೇವರೇ ನನ್ನ ದೇವರು. 17 ನೀನು ಸಾಯುವಲ್ಲೇ ನಾನೂ ಸಾಯುವೆನು; ಅಲ್ಲಿಯೇ ನನಗೆ ಸಮಾಧಿಯಾಗಬೇಕು. ಈ ಪ್ರತಿಜ್ಞೆಯನ್ನು ನಾನು ಪೂರ್ಣಗೊಳಿಸದಿದ್ದರೆ ನನ್ನನ್ನು ಶಿಕ್ಷಿಸು ಎಂದು ನಾನು ಯೆಹೋವನಲ್ಲಿ ಕೇಳಿಕೊಳ್ಳುತ್ತೇನೆ. ಮರಣವು ಮಾತ್ರ ನಮ್ಮಿಬ್ಬರನ್ನು ಅಗಲಿಸಬಲ್ಲದು” ಎಂದು ದೃಢವಾಗಿ ಹೇಳಿದಳು.

ಸ್ವದೇಶಕ್ಕೆ ಆಗಮನ

18 ರೂತಳು ತನ್ನ ಜೊತೆಗೆ ಬರಲು ದೃಢನಿಶ್ಚಯ ಮಾಡಿರುವುದು ನೊವೊಮಿಗೆ ತಿಳಿಯಿತು. ಆದ್ದರಿಂದ ನೊವೊಮಿಯು ರೂತಳೊಡನೆ ವಾದಮಾಡಲಿಲ್ಲ.

ಕೀರ್ತನೆಗಳು 146

146 ಯೆಹೋವನಿಗೆ ಸ್ತೋತ್ರವಾಗಲಿ!
    ನನ್ನ ಮನವೇ, ಯೆಹೋವನನ್ನು ಸ್ತುತಿಸು!
ನನ್ನ ಜೀವಮಾನವೆಲ್ಲಾ ಯೆಹೋವನನ್ನು ಸ್ತುತಿಸುವೆನು;
    ಆತನನ್ನು ಸಂಕೀರ್ತಿಸುವೆನು.
ಸಹಾಯಕ್ಕಾಗಿ ನಿಮ್ಮ ನಾಯಕರುಗಳನ್ನು ಅವಲಂಬಿಸಿಕೊಳ್ಳಬೇಡಿ.
    ಮನುಷ್ಯರಲ್ಲಿ ಭರವಸವಿಡಬೇಡಿ, ಅವರು ನಿಮ್ಮನ್ನು ರಕ್ಷಿಸಲಾರರು.
ಮನುಷ್ಯರು ಸತ್ತು ಸಮಾಧಿಗೆ ಸೇರುವರು;
    ಆಗ ನಿಮಗೆ ಸಹಾಯಮಾಡಬೇಕೆಂಬ ಅವರ ಆಲೋಚನೆಗಳೆಲ್ಲಾ ಅಳಿದುಹೋಗುತ್ತವೆ.
ಯಾರಿಗೆ ದೇವರು ಸಹಾಯಕನೋ,
    ಯಾರು ತಮ್ಮ ದೇವರಾದ ಯೆಹೋವನಲ್ಲಿ ಭರವಸವಿಟ್ಟಿದ್ದಾರೋ, ಅವರೇ ಭಾಗ್ಯವಂತರು.
ಯೆಹೋವನು ಆಕಾಶವನ್ನೂ ಭೂಮಿಯನ್ನೂ
    ಸಮುದ್ರವನ್ನೂ ಅದರಲ್ಲಿರುವ ಪ್ರತಿಯೊಂದನ್ನೂ ಸೃಷ್ಟಿಸಿದನು.
ಆತನು ಅವುಗಳನ್ನು ಶಾಶ್ವತವಾಗಿ ಸಂರಕ್ಷಿಸುವನು.
ಹಿಂಸೆಗೆ ಗುರಿಯಾಗಿರುವವರಿಗೆ ನ್ಯಾಯವನ್ನೂ;
    ಹಸಿದವರಿಗೆ ಆಹಾರವನ್ನೂ ಕೊಡುವವನು ಆತನೇ.
ಯೆಹೋವನು ಸೆರೆಯಲ್ಲಿರುವವರನ್ನು ಬಿಡಿಸುವನು.
    ಯೆಹೋವನು ಕುರುಡರಿಗೆ ದೃಷ್ಟಿಕೊಡುವನು.
ಯೆಹೋವನು ಕುಗ್ಗಿಹೋದವರನ್ನು ಉದ್ಧರಿಸುವನು.
    ಯೆಹೋವನು ನೀತಿವಂತರನ್ನು ಪ್ರೀತಿಸುವನು.
ಯೆಹೋವನು ನಮ್ಮ ದೇಶದಲ್ಲಿ ವಾಸವಾಗಿರುವ ವಿದೇಶಿಯರನ್ನು ಕಾಪಾಡುತ್ತಾನೆ.
    ಆತನು ವಿಧವೆಯರನ್ನೂ ಅನಾಥರನ್ನೂ ಪರಿಪಾಲಿಸುತ್ತಾನೆ.
    ಆದರೆ ಆತನು ದುಷ್ಟರ ಆಲೋಚನೆಗಳನ್ನು ನಾಶಮಾಡುವನು.
10 ಯೆಹೋವನು ಸದಾಕಾಲ ಆಳುವನು!
    ಚೀಯೋನೇ, ನಿನ್ನ ದೇವರು ಶಾಶ್ವತವಾಗಿ ಆಳುವನು!

ಯೆಹೋವನಿಗೆ ಸ್ತೋತ್ರವಾಗಲಿ!

ಇಬ್ರಿಯರಿಗೆ 9:11-14

ಹೊಸ ಒಡಂಬಡಿಕೆಗನುಸಾರವಾಗಿ ಆರಾಧನೆ

11 ಆದರೆ ಕ್ರಿಸ್ತನು ಈಗಾಗಲೇ ಪ್ರಧಾನಯಾಜಕನಾಗಿ ಬಂದಿದ್ದಾನೆ. ಈಗ ನಾವು ಹೊಂದಿರುವ ಉತ್ತಮ ಸಂಗತಿಗಳಿಗೆ ಆತನು ಪ್ರಧಾನಯಾಜಕನಾಗಿದ್ದಾನೆ. ಇತರ ಯಾಜಕರಾದರೊ ಗುಡಾರದಲ್ಲಿ ಸೇವೆಯನ್ನು ಮಾಡಿದರು. ಆದರೆ ಕ್ರಿಸ್ತನು ಗುಡಾರದಲ್ಲಿ ಸೇವೆ ಮಾಡದೆ ಅದಕ್ಕಿಂತಲೂ ಶ್ರೇಷ್ಠವಾದ ಸ್ಥಳದಲ್ಲಿ ಸೇವೆ ಮಾಡುತ್ತಾನೆ. ಅದು ಮತ್ತಷ್ಟು ಪರಿಪೂರ್ಣವಾದದ್ದು. ಅದು ಮನುಷ್ಯರಿಂದ ನಿರ್ಮಿತವಾದದ್ದಲ್ಲ. ಲೋಕಕ್ಕೆ ಸೇರಿದ್ದೂ ಅಲ್ಲ. 12 ಆತನು ಒಂದೇ ಒಂದು ಸಾರಿ ಮಹಾ ಪವಿತ್ರಸ್ಥಳಕ್ಕೆ ಪ್ರವೇಶಿಸಿದನು. ಆತನು ಹೋತಗಳ ಮತ್ತು ಹೋರಿಕರುಗಳ ರಕ್ತವನ್ನು ತೆಗೆದುಕೊಳ್ಳದೆ ತನ್ನ ಸ್ವಂತ ರಕ್ತದಿಂದಲೇ ಮಹಾ ಪವಿತ್ರಸ್ಥಳಕ್ಕೆ ಪ್ರವೇಶಿಸಿ ನಮಗೆ ನಿತ್ಯಸ್ವಾತಂತ್ರ್ಯವನ್ನು ತಂದುಕೊಟ್ಟನು.

13 ಹೋತಗಳ ಮತ್ತು ಹೋರಿಗಳ ರಕ್ತವನ್ನೂ ಹಸುಗಳ ಬೂದಿಯನ್ನೂ ಆ ಆರಾಧನೆಯ ಸ್ಥಳದಲ್ಲಿ ಪ್ರವೇಶಿಸುವಷ್ಟು ಶುದ್ಧರಾಗಿಲ್ಲದ ಜನರ ಮೇಲೆ ಚಿಮುಕಿಸಲಾಗುತ್ತಿತ್ತು. ಆ ರಕ್ತ ಮತ್ತು ಬೂದಿ ಜನರ ದೇಹಗಳನ್ನು ಮಾತ್ರ ಶುದ್ಧಿಗೊಳಿಸುತ್ತಿದ್ದವು. 14 ಆದ್ದರಿಂದ ಆತನ ರಕ್ತವು ಖಚಿತವಾಗಿ ಅದಕ್ಕಿಂತಲೂ ಹೆಚ್ಚಿನದನ್ನು ಸಾಧಿಸುತ್ತದೆ. ಆತನು ನಿತ್ಯಾತ್ಮನ ಮೂಲಕ ತನ್ನನ್ನು ತಾನೇ ದೇವರಿಗೆ ನಿಷ್ಕಳಂಕವಾದ ಯಜ್ಞವನ್ನಾಗಿ ಅರ್ಪಿಸಿಕೊಂಡನು. ಆತನ ರಕ್ತವು ನಮ್ಮನ್ನು ನಮ್ಮ ಕೆಟ್ಟಕಾರ್ಯಗಳಿಂದ ಪರಿಪೂರ್ಣವಾಗಿ ಬಿಡಿಸಿ ನಾವು ಜೀವಸ್ವರೂಪನಾದ ದೇವರನ್ನು ಆರಾಧಿಸಲು ಸಾಧ್ಯವಾಗುವಂತೆ ನಮ್ಮ ಹೃದಯವನ್ನೂ ಪರಿಶುದ್ಧಗೊಳಿಸುತ್ತದೆ.

ಮಾರ್ಕ 12:28-34

ಅತ್ಯಂತ ಮುಖ್ಯ ಆಜ್ಞೆ ಯಾವುದು?

(ಮತ್ತಾಯ 22:34-40; ಲೂಕ 10:25-28)

28 ಈ ವಾದವಿವಾದವನ್ನು ಕೇಳುತ್ತಿದ್ದ ಧರ್ಮೋಪದೇಶಕರಲ್ಲಿ ಒಬ್ಬನು ಯೇಸು ಸದ್ದುಕಾಯರಿಗೆ ಹಾಗೂ ಫರಿಸಾಯರಿಗೆ ಒಳ್ಳೆಯ ಉತ್ತರ ಕೊಟ್ಟದ್ದನ್ನು ಗಮನಿಸಿ, ಆತನ ಬಳಿಗೆ ಬಂದು, “ಆಜ್ಞೆಗಳಲ್ಲೆಲ್ಲಾ ಅತ್ಯಂತ ಮುಖ್ಯವಾದ ಆಜ್ಞೆ ಯಾವುದು?” ಎಂದು ಕೇಳಿದನು.

29 ಅದಕ್ಕೆ ಯೇಸು, “ಇಸ್ರೇಲಿನ ಜನರೇ ಕೇಳಿರಿ, ‘ನಮ್ಮ ದೇವರಾದ ಪ್ರಭುವೊಬ್ಬನೇ ದೇವರು. 30 ನಿಮ್ಮ ದೇವರಾದ ಪ್ರಭುವನ್ನು ನೀವು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಬುದ್ಧಿಯಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು.’(A) ಇದೇ ಅತ್ಯಂತ ಮುಖ್ಯವಾದ ಆಜ್ಞೆ. 31 ‘ನೀವು ನಿಮ್ಮನ್ನು ಪ್ರೀತಿಸುವಂತೆ ನಿಮ್ಮ ನೆರೆಯವರನ್ನು ಪ್ರೀತಿಸಬೇಕು’(B) ಎಂಬುದೇ ಅತ್ಯಂತ ಮುಖ್ಯವಾದ ಎರಡನೇ ಆಜ್ಞೆ. ಇವುಗಳೇ ಅತ್ಯಂತ ಮುಖ್ಯವಾದವು” ಎಂದು ಹೇಳಿದನು.

32 ಆಗ ಅವನು, “ಉಪದೇಶಕನೇ, ಅದು ಒಳ್ಳೆಯ ಉತ್ತರ. ನೀನು ಸರಿಯಾಗಿ ಹೇಳಿದೆ. ದೇವರೊಬ್ಬನೇ ಪ್ರಭು. 33 ಆತನಲ್ಲದೆ ಬೇರೆ ದೇವರಿಲ್ಲ. ದೇವರನ್ನು ಪೂರ್ಣಹೃದಯದಿಂದ, ಪೂರ್ಣಬುದ್ಧಿಯಿಂದ ಹಾಗೂ ಪೂರ್ಣಶಕ್ತಿಯಿಂದ ಪ್ರೀತಿಸಬೇಕು ಮತ್ತು ಒಬ್ಬ ವ್ಯಕ್ತಿಯು ತನ್ನನ್ನು ಪ್ರೀತಿಸುವಂತೆಯೇ ಇತರರನ್ನೂ ಪ್ರೀತಿಸಬೇಕು. ನಾವು ದೇವರಿಗೆ ಅರ್ಪಿಸುವ ಪಶುಯಜ್ಞಗಳಿಗಿಂತಲೂ ಈ ಆಜ್ಞೆಗಳು ಹೆಚ್ಚು ಮುಖ್ಯವಾಗಿವೆ” ಎಂದು ಉತ್ತರಿಸಿದನು.

34 ಅವನ ಬುದ್ಧಿವಂತಿಕೆಯ ಉತ್ತರವನ್ನು ಕೇಳಿದ ಯೇಸು, “ನೀನು ದೇವರ ರಾಜ್ಯಕ್ಕೆ ಹತ್ತಿರವಾಗಿರುವೆ” ಎಂದನು. ಅಂದಿನಿಂದ, ಯೇಸುವಿಗೆ ಹೆಚ್ಚು ಪ್ರಶೆಗಳನ್ನು ಕೇಳಲು ಯಾರಿಗೂ ಸಾಕಷ್ಟು ಧೈರ್ಯ ಬರಲಿಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International