Revised Common Lectionary (Semicontinuous)
146 ಯೆಹೋವನಿಗೆ ಸ್ತೋತ್ರವಾಗಲಿ!
ನನ್ನ ಮನವೇ, ಯೆಹೋವನನ್ನು ಸ್ತುತಿಸು!
2 ನನ್ನ ಜೀವಮಾನವೆಲ್ಲಾ ಯೆಹೋವನನ್ನು ಸ್ತುತಿಸುವೆನು;
ಆತನನ್ನು ಸಂಕೀರ್ತಿಸುವೆನು.
3 ಸಹಾಯಕ್ಕಾಗಿ ನಿಮ್ಮ ನಾಯಕರುಗಳನ್ನು ಅವಲಂಬಿಸಿಕೊಳ್ಳಬೇಡಿ.
ಮನುಷ್ಯರಲ್ಲಿ ಭರವಸವಿಡಬೇಡಿ, ಅವರು ನಿಮ್ಮನ್ನು ರಕ್ಷಿಸಲಾರರು.
4 ಮನುಷ್ಯರು ಸತ್ತು ಸಮಾಧಿಗೆ ಸೇರುವರು;
ಆಗ ನಿಮಗೆ ಸಹಾಯಮಾಡಬೇಕೆಂಬ ಅವರ ಆಲೋಚನೆಗಳೆಲ್ಲಾ ಅಳಿದುಹೋಗುತ್ತವೆ.
5 ಯಾರಿಗೆ ದೇವರು ಸಹಾಯಕನೋ,
ಯಾರು ತಮ್ಮ ದೇವರಾದ ಯೆಹೋವನಲ್ಲಿ ಭರವಸವಿಟ್ಟಿದ್ದಾರೋ, ಅವರೇ ಭಾಗ್ಯವಂತರು.
6 ಯೆಹೋವನು ಆಕಾಶವನ್ನೂ ಭೂಮಿಯನ್ನೂ
ಸಮುದ್ರವನ್ನೂ ಅದರಲ್ಲಿರುವ ಪ್ರತಿಯೊಂದನ್ನೂ ಸೃಷ್ಟಿಸಿದನು.
ಆತನು ಅವುಗಳನ್ನು ಶಾಶ್ವತವಾಗಿ ಸಂರಕ್ಷಿಸುವನು.
7 ಹಿಂಸೆಗೆ ಗುರಿಯಾಗಿರುವವರಿಗೆ ನ್ಯಾಯವನ್ನೂ;
ಹಸಿದವರಿಗೆ ಆಹಾರವನ್ನೂ ಕೊಡುವವನು ಆತನೇ.
ಯೆಹೋವನು ಸೆರೆಯಲ್ಲಿರುವವರನ್ನು ಬಿಡಿಸುವನು.
8 ಯೆಹೋವನು ಕುರುಡರಿಗೆ ದೃಷ್ಟಿಕೊಡುವನು.
ಯೆಹೋವನು ಕುಗ್ಗಿಹೋದವರನ್ನು ಉದ್ಧರಿಸುವನು.
ಯೆಹೋವನು ನೀತಿವಂತರನ್ನು ಪ್ರೀತಿಸುವನು.
9 ಯೆಹೋವನು ನಮ್ಮ ದೇಶದಲ್ಲಿ ವಾಸವಾಗಿರುವ ವಿದೇಶಿಯರನ್ನು ಕಾಪಾಡುತ್ತಾನೆ.
ಆತನು ವಿಧವೆಯರನ್ನೂ ಅನಾಥರನ್ನೂ ಪರಿಪಾಲಿಸುತ್ತಾನೆ.
ಆದರೆ ಆತನು ದುಷ್ಟರ ಆಲೋಚನೆಗಳನ್ನು ನಾಶಮಾಡುವನು.
10 ಯೆಹೋವನು ಸದಾಕಾಲ ಆಳುವನು!
ಚೀಯೋನೇ, ನಿನ್ನ ದೇವರು ಶಾಶ್ವತವಾಗಿ ಆಳುವನು!
ಯೆಹೋವನಿಗೆ ಸ್ತೋತ್ರವಾಗಲಿ!
ಸ್ವದೇಶಕ್ಕೆ ಆಗಮನ
18 ರೂತಳು ತನ್ನ ಜೊತೆಗೆ ಬರಲು ದೃಢನಿಶ್ಚಯ ಮಾಡಿರುವುದು ನೊವೊಮಿಗೆ ತಿಳಿಯಿತು. ಆದ್ದರಿಂದ ನೊವೊಮಿಯು ರೂತಳೊಡನೆ ವಾದಮಾಡಲಿಲ್ಲ. 19 ಅವರಿಬ್ಬರೂ ಪ್ರಯಾಣ ಮಾಡಿ ಬೆತ್ಲೆಹೇಮ್ ಊರಿಗೆ ತಲುಪಿದರು. ಅವರಿಬ್ಬರನ್ನು ಕಂಡಾಗ ಬೆತ್ಲೆಹೇಮ್ ಪಟ್ಟಣದ ಜನರಿಗೆ ಆಶ್ಚರ್ಯವಾಯಿತು. “ಇವಳು ನೊವೊಮಿಯೇ?” ಎಂದು ಅವರು ಕೇಳಿದರು.
20 ಆದರೆ ನೊವೊಮಿಯು ಜನರಿಗೆ, “ನನ್ನನ್ನು ನೊವೊಮಿ ಎಂದು ಕರೆಯದೆ, ನನ್ನನ್ನು ಮಾರಾ ಎಂದು ಕರೆಯಿರಿ. ಏಕೆಂದರೆ ಸರ್ವಶಕ್ತನಾದ ದೇವರು ನನ್ನ ಜೀವನವನ್ನು ದುಃಖಕರವನ್ನಾಗಿ ಮಾಡಿದ್ದಾನೆ. 21 ಇಲ್ಲಿಂದ ಹೋಗುವಾಗ ಭಾಗ್ಯವಂತಳಾಗಿ ಹೋದೆನು; ಆದರೆ ಈಗ ಯೆಹೋವನು ನನ್ನನ್ನು ಬರಿಗೈಯಲ್ಲಿ ಮನೆಗೆ ಕರೆತಂದಿದ್ದಾನೆ. ಯೆಹೋವನು ನನ್ನನ್ನು ದುಃಖಿತಳನ್ನಾಗಿ ಮಾಡಿದ್ದಾನೆ. ಹೀಗಿರುವಾಗ ನೀವೇಕೆ ನನ್ನನ್ನು ‘ನೊವೊಮಿ’ ಎಂದು ಕರೆಯಬೇಕು? ಸರ್ವಶಕ್ತನಾದ ದೇವರು ನನಗೆ ಸಾಕಷ್ಟು ಕಷ್ಟ ಕೊಟ್ಟಿದ್ದಾನೆ” ಎಂದು ಹೇಳಿದಳು.
22 ಹೀಗೆ ನೊವೊಮಿ ಮತ್ತು ಅವಳ ಸೊಸೆ ಮೋವಾಬ್ಯಳಾದ ರೂತಳು ಮೋವಾಬ್ ಬೆಟ್ಟಪ್ರದೇಶದಿಂದ ಹಿಂದಿರುಗಿ ಬಂದರು. ಯೆಹೂದ ದೇಶದ ಬೆತ್ಲೆಹೇಮಿಗೆ ಇವರಿಬ್ಬರೂ ಜವೆಗೋಧಿಯ ಸುಗ್ಗಿಯ ಆರಂಭಕಾಲದಲ್ಲಿ ಬಂದರು.
ಹಳೆಯ ಒಡಂಬಡಿಕೆಯ ಕ್ರಮಕ್ಕನುಸಾರವಾದ ಆರಾಧನೆ
9 ಮೊದಲನೆ ಒಡಂಬಡಿಕೆಯಲ್ಲಿ ಆರಾಧನೆಯ ನಿಯಮಗಳಿದ್ದವು. ಅದರಲ್ಲಿ ಮಾನವನಿರ್ಮಿತವಾದ ಆರಾಧನಾ ಸ್ಥಳವಿತ್ತು. 2 ಈ ಸ್ಥಳವು ಗುಡಾರದ ಒಳಗಿತ್ತು. ಗುಡಾರದ ಮೊದಲ ಆವರಣವನ್ನು ಪವಿತ್ರ ಸ್ಥಳವೆಂದು ಕರೆಯುತ್ತಿದ್ದರು. ಪವಿತ್ರ ಸ್ಥಳದಲ್ಲಿ ದೀಪಸ್ತಂಭ, ಮೇಜು ಮತ್ತು ದೇವರಿಗೆ ಅರ್ಪಿಸಲ್ಪಟ್ಟ ರೊಟ್ಟಿಗಳಿದ್ದವು. 3 ಎರಡನೆ ತೆರೆಯ ಹಿಂದೆ “ಮಹಾ ಪವಿತ್ರಸ್ಥಳ”ವೆಂದು ಕರೆಸಿಕೊಳ್ಳುವ ಒಂದು ಕೊಠಡಿಯಿತ್ತು. 4 ಮಹಾ ಪವಿತ್ರಸ್ಥಳದಲ್ಲಿ ಧೂಪವನ್ನು ಸುಡುವುದಕ್ಕಾಗಿ ಬಂಗಾರದ ಯಜ್ಞವೇದಿಕೆಯಿತ್ತು. ಅಲ್ಲದೆ ಮೊದಲನೆ ಒಡಂಬಡಿಕೆಯನ್ನು ಇಡಲಾಗಿದ್ದ ಪವಿತ್ರ ಪೆಟ್ಟಿಗೆಯಿತ್ತು. ಅದಕ್ಕೆ ಚಿನ್ನದ ತಗಡನ್ನು ಹೊದಿಸಲಾಗಿತ್ತು. ಅದರ ಒಳಗಡೆ ಚಿನ್ನದ ಪಾತ್ರೆಯಲ್ಲಿಟ್ಟಿದ್ದ ಮನ್ನಾ ಮತ್ತು ಒಂದಾನೊಂದು ಕಾಲದಲ್ಲಿ ಚಿಗುರಿ ಎಲೆಗಳನ್ನು ಬಿಟ್ಟಿದ್ದ ಆರೋನನ ಕೋಲು ಇದ್ದವು. ಅಲ್ಲದೆ ಆ ಮೊದಲನೆ ಒಡಂಬಡಿಕೆಯ ಹತ್ತು ಆಜ್ಞೆಗಳನ್ನು ಬರೆಯಲಾಗಿದ್ದ ಕಲ್ಲಿನ ಹಲಗೆಗಳನ್ನು ಅದರಲ್ಲಿ ಇಡಲಾಗಿತ್ತು. 5 ಆ ಪೆಟ್ಟಿಗೆಯ ಮೇಲ್ಗಡೆ ದೇವರ ವೈಭವವನ್ನು ತೋರ್ಪಡಿಸುವ ಕೆರೂಬಿಗಳಿದ್ದವು. ಈ ಕೆರೂಬಿಗಳು ಕೃಪಾಸನವನ್ನು ಆಚ್ಛಾದಿಸಿಕೊಂಡಿದ್ದವು. ಆದರೆ ಇವುಗಳ ಕುರಿತು ಎಲ್ಲವನ್ನೂ ನಾವು ಈಗ ಹೇಳಲು ಸಾಧ್ಯವಿಲ್ಲ.
6 ನಾನು ನಿಮಗೆ ವಿವರಿಸಿದಂತೆಯೇ ಗುಡಾರದಲ್ಲಿ ಎಲ್ಲವನ್ನೂ ಸಿದ್ಧಮಾಡಲಾಗಿತ್ತು. ಯಾಜಕರು ಪ್ರತಿದಿನವೂ ತಮ್ಮ ಆರಾಧನೆಯ ಕರ್ತವ್ಯಗಳನ್ನು ಮಾಡಲು ಮೊದಲನೆ ಕೊಠಡಿಯ ಒಳಗಡೆ ಹೋಗುತ್ತಿದ್ದರು. 7 ಆದರೆ ಪ್ರಧಾನಯಾಜಕನು ಮಾತ್ರ ಎರಡನೆ ಕೊಠಡಿಯ ಒಳಗೆ ಹೋಗಬಹುದಿತ್ತು. ಅವನು ವರ್ಷಕ್ಕೊಮ್ಮೆ ಮಾತ್ರ ಅದರೊಳಗೆ ಹೋಗುತ್ತಿದ್ದನು. ಅವನು ತನ್ನೊಂದಿಗೆ ರಕ್ತವನ್ನು ತೆಗೆದುಕೊಳ್ಳದೆ ಎಂದೂ ಅದರೊಳಗೆ ಪ್ರವೇಶಿಸುತ್ತಿರಲಿಲ್ಲ. ತನಗೋಸ್ಕರವಾಗಿಯೂ ಜನರು ತಿಳಿಯದೆ ಮಾಡಿದ ಪಾಪಗಳಿಗಾಗಿಯೂ ಅವನು ಆ ರಕ್ತವನ್ನು ದೇವರಿಗೆ ಅರ್ಪಿಸುತ್ತಿದ್ದನು.
8 ಪವಿತ್ರಾತ್ಮನು ಆ ಎರಡು ಪ್ರತ್ಯೇಕವಾದ ಕೊಠಡಿಗಳ ಮೂಲಕ ನಮಗೆ ತಿಳಿಸುವುದೇನೆಂದರೆ, ಮೊದಲನೆ ಕೊಠಡಿಯು ಅಲ್ಲಿ ಇರುವವರೆಗೂ ಮಹಾ ಪವಿತ್ರಸ್ಥಳಕ್ಕೆ ಹೋಗುವ ಮಾರ್ಗವು ತೆರೆಯಲೇ ಇಲ್ಲ. 9 ಈ ದಿನ ನಮಗೆ ಇದೊಂದು ಉದಾಹರಣೆಯಾಗಿದೆ. ದೇವರಿಗೆ ಅರ್ಪಿಸಲ್ಪಡುತ್ತಿದ್ದ ಕಾಣಿಕೆಗಳಿಗಾಗಲಿ ಯಜ್ಞಗಳಿಗಾಗಲಿ ದೇವಾರಾಧನೆ ಮಾಡುವ ವ್ಯಕ್ತಿಯನ್ನು ಪರಿಪೂರ್ಣನನ್ನಾಗಿ ಮಾಡಲು ಸಾಧ್ಯವಿರಲಿಲ್ಲ ಎಂಬುದನ್ನು ಇದು ತೋರ್ಪಡಿಸುತ್ತದೆ. ಆ ವ್ಯಕ್ತಿಯ ಹೃದಯವನ್ನು ಪರಿಶುದ್ಧಗೊಳಿಸಲು ಆ ಯಜ್ಞಗಳಿಗೆ ಸಾಧ್ಯವಿರಲಿಲ್ಲ. 10 ಆ ಯಜ್ಞಗಳು ಮತ್ತು ಕಾಣಿಕೆಗಳು ಅನ್ನಪಾನಾದಿಗಳನ್ನೂ ವಿಶೇಷವಾದ ಸ್ನಾನಗಳನ್ನೂ ಕುರಿತಾಗಿದ್ದವು. ಅವು ದೇಹಕ್ಕೆ ಸಂಬಂಧಿಸಿದ ನಿಯಮಗಳೇ ಹೊರತು ಜನರ ಹೃದಯಕ್ಕೆ ಸಂಬಂಧಿಸಿದ್ದವುಗಳಲ್ಲ. ಜನರಿಗೆ ದೇವರ ಹೊಸ ಮಾರ್ಗವು ಲಭಿಸುವ ಕಾಲದವರೆಗೆ, ಅವರು ಅನುಸರಿಸಲೆಂದು ಆ ನಿಯಮಗಳನ್ನು ದೇವರೇ ಕೊಟ್ಟನು.
ಹೊಸ ಒಡಂಬಡಿಕೆಗನುಸಾರವಾಗಿ ಆರಾಧನೆ
11 ಆದರೆ ಕ್ರಿಸ್ತನು ಈಗಾಗಲೇ ಪ್ರಧಾನಯಾಜಕನಾಗಿ ಬಂದಿದ್ದಾನೆ. ಈಗ ನಾವು ಹೊಂದಿರುವ ಉತ್ತಮ ಸಂಗತಿಗಳಿಗೆ ಆತನು ಪ್ರಧಾನಯಾಜಕನಾಗಿದ್ದಾನೆ. ಇತರ ಯಾಜಕರಾದರೊ ಗುಡಾರದಲ್ಲಿ ಸೇವೆಯನ್ನು ಮಾಡಿದರು. ಆದರೆ ಕ್ರಿಸ್ತನು ಗುಡಾರದಲ್ಲಿ ಸೇವೆ ಮಾಡದೆ ಅದಕ್ಕಿಂತಲೂ ಶ್ರೇಷ್ಠವಾದ ಸ್ಥಳದಲ್ಲಿ ಸೇವೆ ಮಾಡುತ್ತಾನೆ. ಅದು ಮತ್ತಷ್ಟು ಪರಿಪೂರ್ಣವಾದದ್ದು. ಅದು ಮನುಷ್ಯರಿಂದ ನಿರ್ಮಿತವಾದದ್ದಲ್ಲ. ಲೋಕಕ್ಕೆ ಸೇರಿದ್ದೂ ಅಲ್ಲ. 12 ಆತನು ಒಂದೇ ಒಂದು ಸಾರಿ ಮಹಾ ಪವಿತ್ರಸ್ಥಳಕ್ಕೆ ಪ್ರವೇಶಿಸಿದನು. ಆತನು ಹೋತಗಳ ಮತ್ತು ಹೋರಿಕರುಗಳ ರಕ್ತವನ್ನು ತೆಗೆದುಕೊಳ್ಳದೆ ತನ್ನ ಸ್ವಂತ ರಕ್ತದಿಂದಲೇ ಮಹಾ ಪವಿತ್ರಸ್ಥಳಕ್ಕೆ ಪ್ರವೇಶಿಸಿ ನಮಗೆ ನಿತ್ಯಸ್ವಾತಂತ್ರ್ಯವನ್ನು ತಂದುಕೊಟ್ಟನು.
Kannada Holy Bible: Easy-to-Read Version. All rights reserved. © 1997 Bible League International