Revised Common Lectionary (Semicontinuous)
ರಚನೆಗಾರ: ದಾವೀದ.
28 ಯೆಹೋವನೇ, ನೀನೇ ನನ್ನ ಬಂಡೆ.
ಸಹಾಯಕ್ಕಾಗಿ ನಾನು ನಿನ್ನನ್ನು ಕೂಗಿಕೊಳ್ಳುತ್ತಿದ್ದೇನೆ.
ನನ್ನ ಪ್ರಾರ್ಥನೆಗಳಿಗೆ ಕಿವಿಗಳನ್ನು ಮುಚ್ಚಿಕೊಳ್ಳಬೇಡ.
ಇಲ್ಲವಾದರೆ ಸತ್ತು ಸಮಾಧಿಯಲ್ಲಿರುವವರಂತೆ
ಜನರು ನನ್ನನ್ನು ಪರಿಗಣಿಸುವರು.
2 ಮಹಾಪವಿತ್ರ ಸ್ಥಳದ ಕಡೆಗೆ ಕೈಯೆತ್ತಿ ಪ್ರಾರ್ಥಿಸುವೆನು.
ನಾನು ನಿನ್ನನ್ನು ಕೂಗಿಕೊಳ್ಳುವಾಗ ನನಗೆ ಕಿವಿಗೊಟ್ಟು ಕರುಣಿಸು.
3 ನನ್ನನ್ನು ಆ ಕೆಟ್ಟವರೊಂದಿಗೆ ಲೆಕ್ಕಿಸಬೇಡ.
ಅವರು ತಮ್ಮ ನೆರೆಯವರಿಗೆ “ಸಮಾಧಾನವಾಗಲಿ” ಎಂದು ಹರಸಿದರೂ ಅವರ ವಿರೋಧವಾಗಿ ಸಂಚುಗಳನ್ನು ಮಾಡುತ್ತಾರೆ.[a]
4 ಅವರು ನೆರೆಯವರಿಗೆ ಕೇಡುಗಳನ್ನು ಮಾಡುವರು.
ಆದ್ದರಿಂದ ಅವರಿಗೇ ಕೇಡಾಗುವಂತೆ ಮಾಡು.
ಅವರಿಗೆ ತಕ್ಕ ದಂಡನೆಯನ್ನು ಕೊಡು.
5 ಯೆಹೋವನ ಕಾರ್ಯಗಳನ್ನೂ ಆತನ ಕೈಕೆಲಸಗಳನ್ನೂ
ಕೆಡುಕರು ವಿವೇಚಿಸಿ ತಿಳಿದುಕೊಳ್ಳುವುದಿಲ್ಲ.
ಆದ್ದರಿಂದ ಆತನು ಅವರನ್ನು ದಂಡಿಸಿ
ನಿತ್ಯನಾಶಮಾಡುವನು.
6 ಯೆಹೋವನಿಗೆ ಸ್ತೋತ್ರವಾಗಲಿ!
ಆತನು ನನ್ನ ಪ್ರಾರ್ಥನೆಯನ್ನು ಕೇಳಿದ್ದಾನೆ.
7 ಯೆಹೋವನೇ ನನಗೆ ಬಲವೂ ಗುರಾಣಿಯೂ ಆಗಿದ್ದಾನೆ.
ನಾನು ಆತನಲ್ಲಿ ಭರವಸವಿಟ್ಟಿರುವುದರಿಂದ ಆತನು ನನಗೆ ಸಹಾಯಮಾಡಿದನು.
ಆದಕಾರಣ ನನ್ನ ಹೃದಯವು ಹರ್ಷಿಸುವುದು;
ನಾನು ಸ್ತುತಿಗೀತೆಗಳನ್ನು ಹಾಡುತ್ತಾ ಆತನನ್ನು ಕೊಂಡಾಡುವೆನು.
8 ಯೆಹೋವನು ತನ್ನ ಜನರಿಗೆ ಬಲವೂ
ತಾನು ಆರಿಸಿಕೊಂಡ ಅರಸನಿಗೆ ಆಶ್ರಯದುರ್ಗವೂ ಆಗಿದ್ದಾನೆ.
9 ಯೆಹೋವನೇ, ನಿನ್ನ ಜನರನ್ನು ರಕ್ಷಿಸು,
ನಿನ್ನ ಸ್ವಕೀಯ ಪ್ರಜೆಯನ್ನು ಆಶೀರ್ವದಿಸು!
ಅವರಿಗೆ ಕುರುಬನಾಗಿದ್ದು ಸದಾಕಾಲ ಅವರನ್ನು ಪರಿಪಾಲಿಸು.
ಜೆರುಸಲೇಮ್ ದಂಡಿಸಲ್ಪಡುವುದು
12 ಆಗ ಯೆಹೋವನ ನುಡಿ ನನಗೆ ಬಂತು. ಆತನು ಹೀಗೆ ಹೇಳಿದನು, 13 “ನರಪುತ್ರನೇ, ನನಗೆ ಅಪನಂಬಿಗಸ್ತರಾಗಿದ್ದು ನನ್ನ ವಿರುದ್ಧ ಪಾಪಮಾಡುವ ಯಾವ ದೇಶವನ್ನಾದರೂ ನಾನು ದಂಡಿಸುತ್ತೇನೆ. ನಾನು ಅವರ ಆಹಾರ ಸರಬರಾಜನ್ನು ನಿಲ್ಲಿಸುತ್ತೇನೆ. ನಾನು ಕ್ಷಾಮವನ್ನು ಕಳುಹಿಸಿ ಅವರ ಜನರನ್ನೂ ಪ್ರಾಣಿಗಳನ್ನೂ ನಾಶಮಾಡುವೆ. 14 ಆ ದೇಶದಲ್ಲಿ ನೋಹ, ದಾನಿಯೇಲ, ಯೋಬ ಜೀವಿಸಿದ್ದರೂ ಆ ಮೂವರು ತಮ್ಮ ಸತ್ಕಾರ್ಯಗಳಿಂದ ತಮ್ಮ ಪ್ರಾಣಗಳನ್ನು ಉಳಿಸಿಕೊಳ್ಳುತ್ತಿದ್ದರೇ ಹೊರತು ಇಡೀ ದೇಶವನ್ನು ರಕ್ಷಿಸಲಾಗುತ್ತಿರಲಿಲ್ಲ.” ಇವುಗಳನ್ನು ನನ್ನ ಒಡೆಯನಾದ ಯೆಹೋವನೇ ಹೇಳಿದ್ದಾನೆ.
15 ದೇವರು ಹೇಳಿದ್ದೇನೆಂದರೆ: “ಒಂದುವೇಳೆ, ನಾನು ಕ್ರೂರಪ್ರಾಣಿಗಳನ್ನು ದೇಶದೊಳಗೆ ಕಳುಹಿಸಿ ಜನರನ್ನು ಕೊಂದರೆ, ಅವುಗಳ ದೆಸೆಯಿಂದ ಯಾವನೂ ದೇಶದಲ್ಲಿ ಪ್ರಯಾಣಮಾಡಲಾಗುತ್ತಿರಲಿಲ್ಲ. 16 ನನ್ನ ಜೀವದಾಣೆ, ನೋಹನಾಗಲಿ ದಾನಿಯೇಲನಾಗಲಿ ಯೋಬನಾಗಲಿ ತಮ್ಮ ಪುತ್ರಪುತ್ರಿಯರನ್ನು ರಕ್ಷಿಸಲಾಗುತ್ತಿರಲಿಲ್ಲ. ಅವರು ತಮ್ಮನ್ನು ಮಾತ್ರ ರಕ್ಷಿಸಿಕೊಳ್ಳಬಹುದಾಗಿತ್ತು. ಆದರೆ ದೇಶವು ನಿರ್ಜನವಾಗುತ್ತಿತ್ತು.” ಇವುಗಳನ್ನು ನನ್ನ ಒಡೆಯನಾದ ಯೆಹೋವನೇ ಹೇಳಿದ್ದಾನೆ.
17 ದೇವರು ಹೇಳಿದ್ದೇನೆಂದರೆ, “ಒಂದುವೇಳೆ, ಅವರ ವಿರುದ್ಧ ಹೋರಾಡಲು ನಾನು ಶತ್ರುಸೈನ್ಯವೊಂದನ್ನು ಕಳುಹಿಸಿದರೆ, ಎಲ್ಲಾ ಜನರು ಮತ್ತು ಎಲ್ಲಾ ಪ್ರಾಣಿಗಳು ನಾಶವಾಗುತ್ತಿದ್ದವು. 18 ದೇವರಾದ ಯೆಹೋವನಾಣೆ, ನೋಹನಾಗಲಿ ದಾನಿಯೇಲನಾಗಲಿ ಯೋಬನಾಗಲಿ ತಮ್ಮ ಪುತ್ರಪುತ್ರಿಯರನ್ನು ರಕ್ಷಿಸಿಕೊಳ್ಳಲಾಗುತ್ತಿರಲಿಲ್ಲ. ಅವರು ತಮ್ಮನ್ನು ಮಾತ್ರ ರಕ್ಷಿಸಿಕೊಳ್ಳಬಹುದಾಗಿತ್ತು.” ಇವುಗಳನ್ನು ನನ್ನ ಒಡೆಯನಾದ ಯೆಹೋವನೇ ಹೇಳಿದ್ದಾನೆ.
19 ದೇವರು ಹೇಳಿದ್ದೇನೆಂದರೆ, “ಒಂದುವೇಳೆ, ನಾನು ದೇಶದ ಮೇಲೆ ರೋಗಗಳನ್ನು ಬರಮಾಡಿದರೆ, ಅಥವಾ ನನ್ನ ಕೋಪವನ್ನು ಸುರಿದು ಜನರನ್ನು ಕೊಂದುಹಾಕಿದರೆ ಮತ್ತು ಪ್ರಾಣಿಗಳನ್ನು ನಾಶಮಾಡಿದರೆ, 20 ದೇವರಾದ ಯೆಹೋವನಾಣೆ, ನೋಹನಾಗಲಿ ದಾನಿಯೇಲನಾಗಲಿ ಯೋಬನಾಗಲಿ ತಮ್ಮ ಪುತ್ರಪುತ್ರಿಯರನ್ನು ರಕ್ಷಿಸಿಕೊಳ್ಳಲಾಗುತ್ತಿರಲಿಲ್ಲ. ಅವರು ತಮ್ಮನ್ನು ಮಾತ್ರ ರಕ್ಷಿಸಿಕೊಳ್ಳಬಹುದಾಗಿತ್ತು.” ಇದು ನನ್ನ ಒಡೆಯನಾದ ಯೆಹೋವನ ನುಡಿ.
21 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ಭಯಂಕರವಾದ ನಾಲ್ಕು ದಂಡನೆಗಳನ್ನು ನಾನು ಜೆರುಸಲೇಮ್ ಪಟ್ಟಣದ ಮೇಲೆ ಕಳುಹಿಸುವೆನು. ಆದ್ದರಿಂದ ಜೆರುಸಲೇಮಿಗೆ ಇನ್ನೂ ಎಷ್ಟು ಹೆಚ್ಚಾಗಿ ಕಷ್ಟಕರವಾಗಬಹುದೆಂದು ಯೋಚಿಸಿರಿ. ನಾನು ಆ ನಗರದ ವಿರುದ್ಧವಾಗಿ ಶತ್ರು ಸೈನಿಕರನ್ನು, ಹಸಿವೆ, ರೋಗ ಮತ್ತು ಕ್ರೂರಜಂತುಗಳನ್ನು ಕಳುಹಿಸುತ್ತೇನೆ. ದೇಶದಲ್ಲಿರುವ ಎಲ್ಲಾ ಜನರನ್ನೂ ಪಶುಗಳನ್ನೂ ನಿರ್ಮೂಲ ಮಾಡುವೆನು. 22 ಆದರೆ ಆಶ್ಚರ್ಯಕರವಾಗಿ, ಕೆಲವರು ಅದರಲ್ಲಿ ಉಳಿದುಕೊಳ್ಳುವರು, ಪುತ್ರಪುತ್ರಿಯರನ್ನು ನಿಮ್ಮ ಬಳಿಗೆ ಜೀವಂತವಾಗಿ ತರಲಾಗುವುದು. ಆ ಜನರು ಎಷ್ಟು ದುಷ್ಟರೆಂಬುದನ್ನು ಸ್ವತಃ ನೀವೇ ಅರ್ಥಮಾಡಿಕೊಳ್ಳುವಿರಿ. ನಾನು ಜೆರುಸಲೇಮಿನ ಮೇಲೆ ಬರಮಾಡಿದ ಇಡೀ ಆಪತ್ತಿನ ಬಗ್ಗೆ ನೀವು ಬಹಳವಾಗಿ ನೊಂದುಕೊಳ್ಳುವಿರಿ. 23 ಅವರು ಜೀವಿಸುವ ರೀತಿ, ದುಷ್ಟತನವನ್ನು ನಡಿಸುವ ರೀತಿಯನ್ನು ನೀವು ನೋಡುವಿರಿ. ಆಗ ನಾನು ಯಾಕೆ ಅವರನ್ನು ಶಿಕ್ಷಿಸುತ್ತೇನೆಂದು ನಿಮಗೆ ಗೊತ್ತಾಗುವದು.” ಇದು ನನ್ನ ಒಡೆಯನಾದ ಯೆಹೋವನ ನುಡಿ.
ಇಬ್ಬರು ಕುರುಡರಿಗೆ ಯೇಸುವಿನಿಂದ ಸ್ವಸ್ಥತೆ
(ಮಾರ್ಕ 10:46-52; ಲೂಕ 18:35-43)
29 ಯೇಸು ಮತ್ತು ಆತನ ಶಿಷ್ಯರು ಜೆರಿಕೋವಿನಿಂದ ಹೊರಟುಹೋಗುತ್ತಿರುವಾಗ ಬಹಳ ಜನರು ಯೇಸುವನ್ನು ಹಿಂಬಾಲಿಸಿದರು. 30 ದಾರಿಯ ಪಕ್ಕದಲ್ಲಿ ಇಬ್ಬರು ಕುರುಡರು ಕುಳಿತಿದ್ದರು. ಯೇಸು ಈ ಮಾರ್ಗವಾಗಿ ಹೋಗುತ್ತಿದ್ದಾನೆಂಬುದನ್ನು ಅವರು ಕೇಳಿದಾಗ, “ಪ್ರಭುವೇ, ದಾವೀದನ ಕುಮಾರನೇ, ದಯಮಾಡಿ ನಮಗೆ ಸಹಾಯ ಮಾಡು!” ಎಂದು ಕೂಗಿಕೊಂಡರು.
31 ಜನರೆಲ್ಲರೂ ಕುರುಡರನ್ನು ಗದರಿಸಿ, ಸುಮ್ಮನಿರಬೇಕೆಂದು ಹೇಳಿದರು. ಆದರೆ ಆ ಕುರುಡರು, “ಪ್ರಭುವೇ, ದಾವೀದನ ಕುಮಾರನೇ, ದಯಮಾಡಿ ನಮಗೆ ಸಹಾಯ ಮಾಡು!” ಎಂದು ಹೆಚ್ಚುಹೆಚ್ಚು ಕೂಗಿಕೊಂಡರು.
32 ಯೇಸು ನಿಂತು, ಆ ಕುರುಡರಿಗೆ “ನಾನು ನಿಮಗೆ ಏನು ಮಾಡಬೇಕೆಂದು ಆಶಿಸುತ್ತೀರಿ?” ಎಂದನು.
33 ಆಗ ಕುರುಡರು, “ಪ್ರಭುವೇ, ನಮಗೆ ಕಣ್ಣು ಕಾಣಿಸುವಂತೆ ಮಾಡು!” ಅಂದರು.
34 ಯೇಸು ಅವರಿಗಾಗಿ ದುಃಖಪಟ್ಟು ಅವರ ಕಣ್ಣುಗಳನ್ನು ಮುಟ್ಟಿದನು. ಕೂಡಲೇ ಅವರಿಗೆ ದೃಷ್ಟಿ ಬಂದಿತು. ಬಳಿಕ ಅವರು ಯೇಸುವನ್ನು ಹಿಂಬಾಲಿಸಿದರು.
Kannada Holy Bible: Easy-to-Read Version. All rights reserved. © 1997 Bible League International