Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 28

ರಚನೆಗಾರ: ದಾವೀದ.

28 ಯೆಹೋವನೇ, ನೀನೇ ನನ್ನ ಬಂಡೆ.
    ಸಹಾಯಕ್ಕಾಗಿ ನಾನು ನಿನ್ನನ್ನು ಕೂಗಿಕೊಳ್ಳುತ್ತಿದ್ದೇನೆ.
    ನನ್ನ ಪ್ರಾರ್ಥನೆಗಳಿಗೆ ಕಿವಿಗಳನ್ನು ಮುಚ್ಚಿಕೊಳ್ಳಬೇಡ.
ಇಲ್ಲವಾದರೆ ಸತ್ತು ಸಮಾಧಿಯಲ್ಲಿರುವವರಂತೆ
    ಜನರು ನನ್ನನ್ನು ಪರಿಗಣಿಸುವರು.
ಮಹಾಪವಿತ್ರ ಸ್ಥಳದ ಕಡೆಗೆ ಕೈಯೆತ್ತಿ ಪ್ರಾರ್ಥಿಸುವೆನು.
    ನಾನು ನಿನ್ನನ್ನು ಕೂಗಿಕೊಳ್ಳುವಾಗ ನನಗೆ ಕಿವಿಗೊಟ್ಟು ಕರುಣಿಸು.
ನನ್ನನ್ನು ಆ ಕೆಟ್ಟವರೊಂದಿಗೆ ಲೆಕ್ಕಿಸಬೇಡ.
    ಅವರು ತಮ್ಮ ನೆರೆಯವರಿಗೆ “ಸಮಾಧಾನವಾಗಲಿ” ಎಂದು ಹರಸಿದರೂ ಅವರ ವಿರೋಧವಾಗಿ ಸಂಚುಗಳನ್ನು ಮಾಡುತ್ತಾರೆ.[a]
ಅವರು ನೆರೆಯವರಿಗೆ ಕೇಡುಗಳನ್ನು ಮಾಡುವರು.
    ಆದ್ದರಿಂದ ಅವರಿಗೇ ಕೇಡಾಗುವಂತೆ ಮಾಡು.
    ಅವರಿಗೆ ತಕ್ಕ ದಂಡನೆಯನ್ನು ಕೊಡು.
ಯೆಹೋವನ ಕಾರ್ಯಗಳನ್ನೂ ಆತನ ಕೈಕೆಲಸಗಳನ್ನೂ
    ಕೆಡುಕರು ವಿವೇಚಿಸಿ ತಿಳಿದುಕೊಳ್ಳುವುದಿಲ್ಲ.
ಆದ್ದರಿಂದ ಆತನು ಅವರನ್ನು ದಂಡಿಸಿ
    ನಿತ್ಯನಾಶಮಾಡುವನು.

ಯೆಹೋವನಿಗೆ ಸ್ತೋತ್ರವಾಗಲಿ!
    ಆತನು ನನ್ನ ಪ್ರಾರ್ಥನೆಯನ್ನು ಕೇಳಿದ್ದಾನೆ.
ಯೆಹೋವನೇ ನನಗೆ ಬಲವೂ ಗುರಾಣಿಯೂ ಆಗಿದ್ದಾನೆ.
    ನಾನು ಆತನಲ್ಲಿ ಭರವಸವಿಟ್ಟಿರುವುದರಿಂದ ಆತನು ನನಗೆ ಸಹಾಯಮಾಡಿದನು.
ಆದಕಾರಣ ನನ್ನ ಹೃದಯವು ಹರ್ಷಿಸುವುದು;
    ನಾನು ಸ್ತುತಿಗೀತೆಗಳನ್ನು ಹಾಡುತ್ತಾ ಆತನನ್ನು ಕೊಂಡಾಡುವೆನು.
ಯೆಹೋವನು ತನ್ನ ಜನರಿಗೆ ಬಲವೂ
    ತಾನು ಆರಿಸಿಕೊಂಡ ಅರಸನಿಗೆ ಆಶ್ರಯದುರ್ಗವೂ ಆಗಿದ್ದಾನೆ.

ಯೆಹೋವನೇ, ನಿನ್ನ ಜನರನ್ನು ರಕ್ಷಿಸು,
    ನಿನ್ನ ಸ್ವಕೀಯ ಪ್ರಜೆಯನ್ನು ಆಶೀರ್ವದಿಸು!
    ಅವರಿಗೆ ಕುರುಬನಾಗಿದ್ದು ಸದಾಕಾಲ ಅವರನ್ನು ಪರಿಪಾಲಿಸು.

ಯೆಶಾಯ 59:9-19

ಇಸ್ರೇಲರ ಪಾಪವೇ ಸಂಕಟಕ್ಕೆ ಕಾರಣ

ಎಲ್ಲಾ ನ್ಯಾಯನೀತಿಗಳು ಇಲ್ಲವಾಗಿವೆ.
ನಮ್ಮ ಬಳಿಯಲ್ಲಿ ಅಂಧಕಾರವು ಇರುವದರಿಂದ
    ನಾವು ಬೆಳಕಿಗಾಗಿ ಕಾಯಬೇಕಾಗಿದೆ.
ಪ್ರಕಾಶಮಾನವಾದ ಬೆಳಕಿಗಾಗಿ ಆಶಿಸುತ್ತಿರುವಾಗ
    ನಮಗೆ ಸಿಕ್ಕಿದ್ದು ಕೇವಲ ಕತ್ತಲೆಯೇ.
10 ನಾವು ಕಣ್ಣಿಲ್ಲದವರಂತಿದ್ದೇವೆ.
    ಕುರುಡರಂತೆ ಗೋಡೆಗೆ ತಾಕುತ್ತಿದ್ದೇವೆ.
ರಾತ್ರಿಯಲ್ಲಿ ಎಡವಿಬೀಳುವಂತೆ ಬೀಳುತ್ತಿದ್ದೇವೆ.
    ಹಗಲಿನಲ್ಲಿಯೂ ನಮಗೆ ಕಾಣದು.
    ಮಧ್ಯಾಹ್ನದ ಸಮಯದಲ್ಲೂ ಸತ್ತವರಂತೆ ಬೀಳುತ್ತೇವೆ.
11 ನಾವೆಲ್ಲಾ ಗುಣುಗುಟ್ಟುತ್ತೇವೆ.
    ನಾವು ಕರಡಿಗಳಂತೆ ಗುರುಗುಟ್ಟುತ್ತಿದ್ದೇವೆ, ಪಾರಿವಾಳಗಳಂತೆ ಮೂಲುಗುತ್ತಿದ್ದೇವೆ.
ಜನರು ಧರ್ಮವನ್ನು ಅನುಸರಿಸುವ ಸಮಯಕ್ಕಾಗಿ ನಾವು ಕಾಯುತ್ತಿದ್ದೇವೆ.
    ಆದರೆ ಧರ್ಮವೇ ಇಲ್ಲ.
ನಾವು ರಕ್ಷಣೆಗಾಗಿ ಕಾಯುತ್ತಿದ್ದೇವೆ.
    ಆದರೆ ರಕ್ಷಣೆಯು ಬಹುದೂರವಿದೆ.
12 ಯಾಕೆಂದರೆ ನಾವು ಲೆಕ್ಕವಿಲ್ಲದಷ್ಟು ದ್ರೋಹಗಳನ್ನು ದೇವರಿಗೆ ವಿರುದ್ಧವಾಗಿ ಮಾಡಿರುತ್ತೇವೆ.
    ನಾವು ಮಾಡಿದ್ದು ತಪ್ಪೆಂದು ನಮ್ಮ ಪಾಪಗಳೇ ತೋರಿಸುತ್ತವೆ.
ಹೌದು, ನಾವು ಈ ಕಾರ್ಯಗಳನ್ನು
    ಮಾಡಿ ದೋಷಿಗಳಾಗಿದ್ದೇವೆ.
13 ನಾವು ಪಾಪಮಾಡಿ
    ಯೆಹೋವನಿಂದ ದೂರ ಹೋಗಿದ್ದೇವೆ.
ಆತನಿಂದ ದೂರವಾಗಿ
    ಆತನನ್ನು ತೊರೆದುಬಿಟ್ಟಿದ್ದೇವೆ.
ನಾವು ದುಷ್ಟತನವನ್ನೂ
    ದೇವರಿಗೆ ವಿರುದ್ಧವಾದ ಕಾರ್ಯಗಳನ್ನೂ ಆಲೋಚಿಸಿದ್ದೇವೆ.
ನಮ್ಮ ಹೃದಯಗಳಲ್ಲಿ
    ದುಷ್ಟಯೋಜನೆಗಳನ್ನು ಹಾಕಿರುತ್ತೇವೆ.
14 ನ್ಯಾಯವು ನಮ್ಮಿಂದ ತೊಲಗಿಹೋಗಿದೆ.
ಸತ್ಯವು ಬೀದಿ ಪಾಲಾಗಿದೆ.
    ನೀತಿಯು ಪಟ್ಟಣದೊಳಕ್ಕೆ ಪ್ರವೇಶಿಸಲಾರದು.
15 ಸತ್ಯವು ಹೊರಟುಹೋಯಿತು.
    ಒಳ್ಳೆಯದನ್ನು ಮಾಡುವವರು ಲೂಟಿಗೆ ಗುರಿಯಾಗಿದ್ದಾರೆ.

ಒಳ್ಳೆಯವರು ಇಲ್ಲದೆ ಇರುವುದನ್ನು ಕಂಡು
    ಯೆಹೋವನು ಬೇಸರಗೊಂಡಿದ್ದಾನೆ.
16 ಜನರಿಗೆ ಸಹಾಯ ಮಾಡುವವರು ಇಲ್ಲದೆ ಇರುವುದನ್ನು ಕಂಡು
    ಯೆಹೋವನು ಆಶ್ಚರ್ಯಚಕಿತನಾಗಿದ್ದಾನೆ.
ಆದ್ದರಿಂದ ಯೆಹೋವನು ತನ್ನ ಸ್ವಂತ ಶಕ್ತಿಯನ್ನೂ
    ನೀತಿಯನ್ನೂ ಬಳಸಿ ಜನರನ್ನು ರಕ್ಷಿಸಿದನು.
17 ಯೆಹೋವನು ಯುದ್ಧ ಸನ್ನದ್ಧನಾದನು.
    ಆತನು ಒಳ್ಳೆಯತನವೆಂಬ ಕವಚ,
    ರಕ್ಷಣೆಯೆಂಬ ಶಿರಸ್ತ್ರಾಣ,
    ಶಿಕ್ಷೆಯೆಂಬ ಬಟ್ಟೆ ಮತ್ತು
    ಗಾಢವಾದ ಪ್ರೇಮವೆಂಬ ಮೇಲ್ಹೊದಿಕೆಯನ್ನು ಧರಿಸಿದ್ದಾನೆ.
18 ಯೆಹೋವನು ತನ್ನ ಶತ್ರುಗಳ ಮೇಲೆ ಕೋಪಗೊಂಡಿರುವುದರಿಂದ ಅವರಿಗೆ ಸರಿಯಾದ ದಂಡನೆಯನ್ನು ಕೊಡುವನು.
    ಯೆಹೋವನು ತನ್ನ ಶತ್ರುಗಳ ಮೇಲೆ ಕೋಪಗೊಂಡಿರುವುದರಿಂದ ದೂರದೇಶಗಳಲ್ಲಿರುವ ಜನರನ್ನೆಲ್ಲಾ ಸರಿಯಾಗಿ ದಂಡಿಸುವನು.
19 ಆಗ ಪಶ್ಚಿಮದಲ್ಲಿರುವ ಜನರು ಯೆಹೋವನ ನಾಮಕ್ಕೆ ಭಯಪಟ್ಟು ಗೌರವಿಸುವರು.
    ಪೂರ್ವದಲ್ಲಿದ್ದ ಜನರು ಆತನ ಮಹಿಮೆಯನ್ನು ಭಯಭಕ್ತಿಯಿಂದ ಕಾಣುವರು.
ಬಿರುಗಾಳಿಯಿಂದ ರಭಸವಾಗಿ ಹರಿದುಬರುವ ಹೊಳೆಯಂತೆ
    ಯೆಹೋವನು ಬೇಗನೆ ಬರುವನು.

1 ಪೇತ್ರನು 2:1-10

ಜೀವಂತವಾದ ಕಲ್ಲು ಮತ್ತು ಪವಿತ್ರವಾದ ದೇಶ

ಆದ್ದರಿಂದ ಇತರ ಜನರಿಗೆ ಕೇಡುಮಾಡಬೇಡಿ, ಸುಳ್ಳಾಡದಿರಿ, ಜನರನ್ನು ಮೋಸಗೊಳಿಸಬೇಡಿ, ಹೊಟ್ಟೆಕಿಚ್ಚುಪಡದಿರಿ, ಜನರ ಬಗ್ಗೆ ಕೆಟ್ಟಮಾತುಗಳನ್ನು ಆಡದಿರಿ. ಇವುಗಳನ್ನೆಲ್ಲಾ ನಿಮ್ಮ ಜೀವಿತದಿಂದ ಹೊರಕ್ಕೆ ಹಾಕಿರಿ. ಹೊಸದಾಗಿ ಹುಟ್ಟಿದ ಕೂಸುಗಳಂತಿರಿ. ನಿಮ್ಮ ಆತ್ಮವನ್ನು ಪೋಷಿಸುವಂಥ ಶುದ್ಧ ಹಾಲನ್ನು (ದೇವರ ವಾಕ್ಯವೆಂಬ) ಬಯಸಿರಿ. ನೀವು ಅದನ್ನು ಕುಡಿಯುವುದರಿಂದ ಬೆಳವಣಿಗೆ ಹೊಂದಿ ರಕ್ಷಿಸಲ್ಪಡುವಿರಿ. ನೀವು ಈಗಾಗಲೇ ದೇವರ ಒಳ್ಳೆಯತನವನ್ನು ರುಚಿ ನೋಡಿದ್ದೀರಿ.

ಪ್ರಭುವಾದ ಯೇಸುವೇ ಜೀವವುಳ್ಳ “ಕಲ್ಲು.” ಈ ಲೋಕದ ಜನರು ತಮಗೆ ಆ “ಕಲ್ಲು” (ಯೇಸು) ಬೇಡವೆಂದು ತೀರ್ಮಾನಿಸಿದರು. ಆದರೆ ಆತನು ದೇವರಿಂದ ಆರಿಸಲ್ಪಟ್ಟ “ಕಲ್ಲು.” ಆತನು ದೇವರಿಗೆ ಅಮೂಲ್ಯನಾಗಿದ್ದಾನೆ. ಆದ್ದರಿಂದ ಆತನ ಹತ್ತಿರಕ್ಕೆ ಬನ್ನಿರಿ. ನೀವೂ ಸಹ ಜೀವವುಳ್ಳ ಕಲ್ಲುಗಳಾಗಿದ್ದೀರಿ. ಆತ್ಮಸಂಬಂಧವಾದ ದೇವಾಲಯವಾಗುವದಕ್ಕಾಗಿ ನೀವೇ ಕಟ್ಟಲ್ಪಡುತ್ತಿದ್ದೀರಿ; ದೇವರಿಂದ ಸ್ವೀಕೃತವಾಗುವಂಥ ಆತ್ಮಿಕ ಯಜ್ಞಗಳನ್ನು ಯೇಸು ಕ್ರಿಸ್ತನ ಮೂಲಕ ದೇವರಿಗೆ ಅರ್ಪಿಸುವ ಪವಿತ್ರ ಯಾಜಕರಾಗಿದ್ದೀರಿ. ಪವಿತ್ರ ಗ್ರಂಥವು ಹೇಳುವುದೇನೆಂದರೆ,

“ನಾನು ಅಮೂಲ್ಯವಾದ ಮೂಲೆಗಲ್ಲನ್ನು ಆರಿಸಿದ್ದೇನೆ.
    ನಾನು ಆ ಕಲ್ಲನ್ನು ಚಿಯೋನಿನಲ್ಲಿ ಇಟ್ಟಿರುವೆನು;
ಆತನನ್ನು ನಂಬುವವನು ಎಂದಿಗೂ ಆಶಾಭಂಗಪಡುವುದಿಲ್ಲ”(A)

ನಂಬಿಕೆಯುಳ್ಳ ಜನರಾದ ನಿಮಗೆ ಆ ಕಲ್ಲು (ಯೇಸು) ಹೆಚ್ಚು ಬೆಲೆಯುಳ್ಳದ್ದು. ಆದರೆ ನಂಬದ ಜನರಿಗೆ ಆತನು ಇಂತೆಂದಿದ್ದಾನೆ:

“ಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ
    ಮೂಲೆಗಲ್ಲಾಯಿತು.”(B)

ನಂಬದಿರುವ ಜನರಿಗೆ ಆತನು:

“ಜನರನ್ನು ಮುಗ್ಗರಿಸುವ ಕಲ್ಲೂ
    ಜನರನ್ನು ಬೀಳಿಸುವ ಕಲ್ಲೂ ಆಗಿದ್ದಾನೆ.”(C)

ದೇವರ ಮಾತಿಗೆ ಅವಿಧೇಯರಾಗುವುದರಿಂದಲೇ ಜನರು ಮುಗ್ಗರಿಸಿ ಬೀಳುವರು. ಆ ಜನರಿಗೆ ಹೀಗಾಗಬೇಕೆಂಬುದು ದೇವರ ಯೋಜನೆಯಾಗಿತ್ತು.

ನೀವಾದರೋ ದೇವರಾದುಕೊಂಡ ಜನಾಂಗವೂ ರಾಜವಂಶಸ್ಥರಾದ ಯಾಜಕರೂ ಮೀಸಲಾದ ಜನರೂ ದೇವರ ಸ್ವಕೀಯ ಪ್ರಜೆಯೂ ಆಗಿದ್ದೀರಿ. ದೇವರು ತಾನು ಮಾಡಿದ ಅತ್ಯಾಶ್ಚರ್ಯ ಸಂಗತಿಗಳನ್ನು ತಿಳಿಸಲು ನಿಮ್ಮನ್ನು ಅಂಧಕಾರದಿಂದ (ಪಾಪಗಳಿಂದ) ತನ್ನ ಅದ್ಭುತವಾದ ಬೆಳಕಿಗೆ ಕರೆತಂದನು.

10 ಒಂದು ಕಾಲದಲ್ಲಿ, ನೀವು ದೇವರ ಜನರಾಗಿರಲಿಲ್ಲ.
    ಆದರೆ ಈಗ ನೀವು ದೇವರ ಜನರಾಗಿದ್ದೀರಿ.
ಮೊದಲು ನೀವು ಕರುಣೆಯನ್ನು ಹೊಂದಿರಲಿಲ್ಲ.
    ಆದರೆ ಈಗ ನೀವು ದೇವರ ಕರುಣೆಯನ್ನು ಹೊಂದಿಕೊಂಡಿದ್ದೀರಿ.[a]

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International