Revised Common Lectionary (Semicontinuous)
ದಾವೀದನು ಹುಚ್ಚನಂತೆ ವರ್ತಿಸಿ, ಅಬೀಮೆಲೆಕನಿಂದ ಹೊರಡಿಸಲ್ಪಟ್ಟಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.
[a]34 ನಾನು ಯೆಹೋವನನ್ನು ಎಡೆಬಿಡದೆ ಕೊಂಡಾಡುವೆನು.
ಆತನ ಸ್ತೋತ್ರವು ಯಾವಾಗಲೂ ನನ್ನ ಬಾಯಲ್ಲಿರುವುದು.
2 ದೀನರೇ, ನನ್ನ ಮನಸ್ಸು ಯೆಹೋವನಲ್ಲಿ ಹಿಗ್ಗುತ್ತಿರುವುದನ್ನು
ಕೇಳಿ ಸಂತೋಷಪಡಿರಿ.
3 ನನ್ನೊಂದಿಗೆ ಯೆಹೋವನನ್ನು ಸ್ತುತಿಸಿರಿ.
ನಾವು ಒಟ್ಟಾಗಿ ಆತನ ಹೆಸರನ್ನು ಸನ್ಮಾನಿಸೋಣ.
4 ನಾನು ಯೆಹೋವನ ಸನ್ನಿಧಿಯಲ್ಲಿ ಮೊರೆಯಿಟ್ಟಾಗ ಆತನು ನನಗೆ ಸಹಾಯಮಾಡಿದನು.
ನನ್ನನ್ನು ಎಲ್ಲಾ ಭೀತಿಗಳಿಂದ ಬಿಡಿಸಿದನು.
5 ಆತನನ್ನೇ ದೃಷ್ಟಿಸುವವರು ಸಹಾಯವನ್ನು ಹೊಂದಿಕೊಳ್ಳುವರು.[b]
ಅವರಿಗೆ ಆಶಾಭಂಗವಾಗದು.
6 ಕಷ್ಟದಲ್ಲಿದ್ದ ಈ ಬಡಮನುಷ್ಯನು ಮೊರೆಯಿಡಲು
ಯೆಹೋವನು ಕೇಳಿ ಎಲ್ಲಾ ಇಕ್ಕಟ್ಟುಗಳಿಂದ ಬಿಡಿಸಿದನು.
7 ಯೆಹೋವನ ಭಕ್ತರ ಸುತ್ತಲೂ ಆತನ ದೂತನು
ದಂಡಿಳಿಸಿ ಕಾವಲಾಗಿದ್ದು ಕಾಪಾಡುವನು.
8 ಯೆಹೋವನು ಎಷ್ಟು ಒಳ್ಳೆಯವನೆಂಬುದನ್ನು ಅನುಭವದಿಂದಲೇ ತಿಳಿದುಕೊಳ್ಳಿರಿ.
ಆತನನ್ನು ಆಶ್ರಯಿಸಿಕೊಂಡವರು ಎಷ್ಟೋ ಭಾಗ್ಯವಂತರು.
19 ನೀತಿವಂತರಿಗೆ ಅನೇಕ ಕಷ್ಟಗಳು ಬಂದರೂ
ಯೆಹೋವನು ಅವೆಲ್ಲವುಗಳಿಂದ ಬಿಡಿಸುವನು.
20 ಆತನು ಅವರ ಎಲುಬುಗಳನ್ನೆಲ್ಲ ಕಾಪಾಡುವನು.
ಅವುಗಳಲ್ಲಿ ಒಂದಾದರೂ ಮುರಿದುಹೋಗುವುದಿಲ್ಲ.
21 ದುಷ್ಟರಾದರೋ ಆಪತ್ತುಗಳಿಂದ ಸಾಯುವರು.
ನೀತಿವಂತರ ವೈರಿಗಳು ನಾಶವಾಗುವರು.
22 ಯೆಹೋವನು ತನ್ನ ಸೇವಕರ ಪ್ರಾಣವನ್ನು ರಕ್ಷಿಸುವನು.
ಆತನನ್ನು ಆಶ್ರಯಿಸಿಕೊಂಡಿರುವವರಲ್ಲಿ ಒಬ್ಬರಾದರೂ ನಾಶವಾಗುವುದಿಲ್ಲ.
ಯೋಬನಿಗೆ ದೊರೆತ ಐಶ್ವರ್ಯ
7 ಯೆಹೋವನು ಯೋಬನೊಂದಿಗೆ ಮಾತಾಡಿದ ಮೇಲೆ, ಎಲೀಫಜನೊಂದಿಗೆ ಮಾತಾಡಿದನು. ಎಲೀಫಜನು ತೇಮಾನ್ ಪಟ್ಟಣದವನಾಗಿದ್ದನು. ಯೆಹೋವನು ಎಲೀಫಜನಿಗೆ, “ನಾನು ನಿನ್ನ ಮೇಲೆಯೂ ನಿನ್ನ ಇಬ್ಬರು ಸ್ನೇಹಿತರ ಮೇಲೆಯೂ ಕೋಪಗೊಂಡಿದ್ದೇನೆ. ಯಾಕೆಂದರೆ ನೀನು ನನ್ನ ಬಗ್ಗೆ ಹೇಳಿದವುಗಳು ಸತ್ಯವಲ್ಲ. ಆದರೆ ಯೋಬನು ನನ್ನ ಬಗ್ಗೆ ಹೇಳಿದವುಗಳು ಸತ್ಯವಾಗಿವೆ. ಯೋಬನು ನನ್ನ ಸೇವಕ. 8 ಆದ್ದರಿಂದ, ಈಗ ನೀವು (ಮೂವರು) ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ತೆಗೆದುಕೊಂಡು ನನ್ನ ಸೇವಕನಾದ ಯೋಬನ ಬಳಿಗೆ ಹೋಗಿ ಅವುಗಳನ್ನು ನಿಮಗೋಸ್ಕರ ದೋಷಪರಿಹಾರಕಯಜ್ಞ ಮಾಡಿರಿ. ನನ್ನ ಸೇವಕನಾದ ಯೋಬನು ನಿಮಗೋಸ್ಕರ ಪ್ರಾರ್ಥಿಸುವನು. ಆಗ ನಾನು ಅವನ ಪ್ರಾರ್ಥನೆಗೆ ಖಂಡಿತವಾಗಿ ಉತ್ತರಿಸುವೆನು; ನಿಮ್ಮ ಮೂರ್ಖತನಕ್ಕೆ ಬರಬೇಕಾಗಿದ್ದ ದಂಡನೆಯನ್ನು ಮನ್ನಿಸುವೆನು. ನೀವು ನನ್ನ ಬಗ್ಗೆ ಹೇಳಿದವುಗಳು ಸತ್ಯವಲ್ಲ; ಆದರೆ ನನ್ನ ಸೇವಕನಾದ ಯೋಬನು ಹೇಳಿದವುಗಳು ಸತ್ಯವಾಗಿವೆ.” ಎಂದನು.
9 ಆಗ ತೇಮಾನ್ ಪಟ್ಟಣದ ಎಲೀಫಜನೂ ಶೂಹ ದೇಶದ ಬಿಲ್ದದನೂ ನಾಮಾಥ್ಯ ದೇಶದ ಚೋಫರನೂ ಯೆಹೋವನಿಗೆ ವಿಧೇಯರಾದರು. ಯೆಹೋವನು ಯೋಬನ ಪ್ರಾರ್ಥನೆಗೆ ಉತ್ತರವನ್ನು ನೀಡಿದನು.
ಬೆತ್ಸಾಯಿದದಲ್ಲಿ ಕುರುಡನಿಗೆ ದೃಷ್ಟಿದಾನ
22 ಯೇಸು ಮತ್ತು ಆತನ ಶಿಷ್ಯರು ಬೆತ್ಸಾಯಿದಕ್ಕೆ ಬಂದರು. ಕೆಲವು ಜನರು ಯೇಸುವಿನ ಬಳಿಗೆ ಒಬ್ಬ ಕುರುಡನನ್ನು ತಂದು ಅವನನ್ನು ಮುಟ್ಟಬೇಕೆಂದು ಯೇಸುವನ್ನು ಬೇಡಿಕೊಂಡರು. 23 ಆಗ ಯೇಸು ಆ ಕುರುಡನ ಕೈ ಹಿಡಿದುಕೊಂಡು, ಅವನನ್ನು ಊರಿನಿಂದ ಹೊರಕ್ಕೆ ಕರೆದುಕೊಂಡು ಹೋದನು. ನಂತರ ಯೇಸು ಅವನ ಕಣ್ಣುಗಳಲ್ಲಿ ಉಗುಳಿ ಅವನ ಮೇಲೆ ತನ್ನ ಕೈಗಳನ್ನಿಟ್ಟು, “ಈಗ ನಿನಗೆ ಕಾಣುತ್ತದೆಯೋ?” ಎಂದು ಕೇಳಿದನು.
24 ಆ ಕುರುಡನು ತಲೆಯೆತ್ತಿ ನೋಡಿ, “ಹೌದು, ನನಗೆ ಜನರು ಕಾಣುತ್ತಾರೆ. ಅವರು ಮರಗಳಂತೆ ಕಂಡರೂ ನಡೆದಾಡುತ್ತಿದ್ದಾರೆ” ಎಂದು ಹೇಳಿದನು.
25 ಯೇಸು ತನ್ನ ಕೈಗಳನ್ನು ಮತ್ತೆ ಕುರುಡನ ಕಣ್ಣುಗಳ ಮೇಲೆ ಇಟ್ಟನು. ಆಗ ಅವನು ತನ್ನ ಕಣ್ಣುಗಳನ್ನು ಅಗಲವಾಗಿ ತೆರೆದನು. ಅವನ ಕಣ್ಣುಗಳು ಗುಣಹೊಂದಿದ್ದವು. ಅವನಿಗೆ ಎಲ್ಲವೂ ಸ್ಪಷ್ಟವಾಗಿ ಕಾಣಿಸಿತು. 26 ಯೇಸು ಅವನಿಗೆ, “ನೀನು ನೇರವಾಗಿ ಮನೆಗೆ ಹೋಗು, ಊರೊಳಗೆ ಹೋಗಬೇಡ” ಎಂದು ಹೇಳಿ ಕಳುಹಿಸಿದನು.
Kannada Holy Bible: Easy-to-Read Version. All rights reserved. © 1997 Bible League International