Revised Common Lectionary (Semicontinuous)
ಸ್ತುತಿಗೀತೆ. ರಚನೆಗಾರ: ಆಸಾಫ.
75 ದೇವರೇ, ನಿನ್ನನ್ನು ಕೊಂಡಾಡುವೆವು!
ನಿನ್ನ ಹೆಸರನ್ನು ಸ್ತುತಿಸುವೆವು; ಯಾಕೆಂದರೆ ನೀನು ನನ್ನ ಸಾಮಿಪ್ಯದಲ್ಲಿರುವೆ;
ನಿನ್ನ ಮಹತ್ಕಾರ್ಯಗಳ ಬಗ್ಗೆ ಜನರು ಹೇಳುತ್ತಲೇ ಇದ್ದಾರೆ.
2 ದೇವರು ಹೀಗೆನ್ನುತ್ತಾನೆ: “ನಾನು ನ್ಯಾಯತೀರ್ಪಿಗಾಗಿ ತಕ್ಕ ಸಮಯವನ್ನು ಗೊತ್ತುಪಡಿಸುವೆ;
ನಾನು ನೀತಿಯಿಂದಲೇ ತೀರ್ಪುಕೊಡುವೆ.
3 ಭೂಮಿಯು ಅದರ ಮೇಲಿರುವ ಸಮಸ್ತದೊಡನೆ ನಡುಗುತ್ತಿದ್ದರೂ
ಭೂಸ್ತಂಭಗಳನ್ನು ಸ್ಥಿರಗೊಳಿಸುವಾತನು ನಾನೇ.
4-5 “ಗರ್ವಿಷ್ಠರೇ, ‘ಕೊಚ್ಚಿಕೊಳ್ಳಬೇಡಿ’ ದುಷ್ಟರೇ, ‘ಅಹಂಕಾರ ಪಡಬೇಡಿ!
ಸೊಕ್ಕಿನ ಕುತ್ತಿಗೆಯಿಂದ ಮಾತಾಡಬೇಡಿ’” ಎಂದು ಹೇಳುವೆನು.
6 ಭೂಲೋಕದ ಯಾವ ಶಕ್ತಿಯೂ
ಮನುಷ್ಯನನ್ನು ಉದ್ಧಾರ ಮಾಡಲಾರದು.
7 ನ್ಯಾಯಾಧಿಪತಿಯು ದೇವರೇ.
ಯಾರನ್ನು ಉದ್ಧಾರಮಾಡಬೇಕು ಎಂಬ ನಿರ್ಣಯವನ್ನು ತೆಗೆದುಕೊಳ್ಳುವಾತನು ದೇವರೇ.
ದೇವರು ಒಬ್ಬನನ್ನು ಉನ್ನತಿಗೇರಿಸುವನು; ಮತ್ತೊಬ್ಬನನ್ನು ಅವನತಿಗಿಳಿಸುವನು.
8 ಯೆಹೋವನ ಕೈಯಲ್ಲಿ ಪಾತ್ರೆಯಿದೆ.
ಆ ಪಾತ್ರೆಯು ವಿಷ ದ್ರಾಕ್ಷಾರಸದಿಂದ ತುಂಬಿದೆ.
ಆತನು ದಂಡನೆಯೆಂಬ ಆ ವಿಷ ದ್ರಾಕ್ಷಾರಸವನ್ನು ಸುರಿಯುವನು;
ದುಷ್ಟರು ಕೊನೆಯ ತೊಟ್ಟಿನವರೆಗೂ ಅದನ್ನು ಕುಡಿಯುವರು!
9 ನಾನು ಇವುಗಳ ಬಗ್ಗೆ ಜನರಿಗೆ ಹೇಳುತ್ತಲೇ ಇರುವೆನು;
ಇಸ್ರೇಲರ ದೇವರನ್ನು ಸಂಕೀರ್ತಿಸುವೆನು.
10 ದುಷ್ಟರಿಂದ ಅಧಿಕಾರವನ್ನು ಕಿತ್ತುಕೊಂಡು
ಒಳ್ಳೆಯವರಿಗೆ ಅದನ್ನು ಒಪ್ಪಿಸಿಕೊಡುವೆನು.
12 “ಯೋಬನೇ, ಲಿವ್ಯಾತಾನನ ಅಂಗಗಳನ್ನೂ ಶಕ್ತಿಯನ್ನೂ
ಸೊಗಸಾದ ಆಕಾರವನ್ನೂ ನಿನಗೆ ವರ್ಣಿಸುವೆನು.
13 ಯಾವನೂ ಅದರ ಚರ್ಮವನ್ನು ಸುಲಿಯಲಾರನು.
ಯಾವನೂ ಅದರ ದವಡೆಗಳಿಗೆ ಚುಚ್ಚಲಾರನು.
14 ಬಲವಂತದಿಂದ ಅದರ ದವಡೆಗಳನ್ನು ತೆರೆಸಲು ಯಾರಿಗೂ ಸಾಧ್ಯವಿಲ್ಲ.
ಅದರ ದವಡೆಹಲ್ಲುಗಳು ಜನರನ್ನು ಭಯಗೊಳಿಸುತ್ತವೆ.
15 ಅದರ ಹಿಂಬದಿಯಲ್ಲಿ ಗುರಾಣಿಗಳ ಸಾಲುಗಳು
ಒಂದಕ್ಕೊಂದು ಬಿಗಿಯಲ್ಪಟ್ಟು ಮುದ್ರಿತವಾಗಿವೆ.
16 ಗಾಳಿಯೂ ಹಾದುಹೋಗದಂತೆ
ಆ ಗುರಾಣಿಗಳು ಜೋಡಿಸಲ್ಪಟ್ಟಿವೆ.
17 ಗುರಾಣಿಗಳು ಒಂದಕ್ಕೊಂದು ಅಂಟಿಕೊಂಡು
ಬಿಡಿಸಲು ಅಸಾಧ್ಯವಾಗಿದೆ.
18 ಅದರ ಸೀನಿನ ತುಂತುರುಗಳು ಥಳಥಳಿಸುತ್ತವೆ.
ಅದರ ಕಣ್ಣುಗಳು ಮುಂಜಾನೆಯ ಬೆಳಕಿನಂತಿವೆ.
19 ಅದರ ಬಾಯೊಳಗಿಂದ ಉರಿಯುವ ಕೊಳ್ಳಿಗಳು ಹೊರಬರುತ್ತವೆ.
ಬೆಂಕಿಯ ಜ್ವಾಲೆಗಳು ಹಾರುತ್ತವೆ.
20 ಕಾಯ್ದಮಡಕೆಯ ಕೆಳಗೆ ಉರಿಯುತ್ತಿರುವ ಆಪು ಹುಲ್ಲಿನಿಂದ ಬರುವ ಹೊಗೆಯಂತೆ
ಅದರ ಮೂಗಿನಿಂದ ಹೊಗೆಯು ಹಾಯುವುದು.
21 ಅದರ ಉಸಿರು ಇದ್ದಲನ್ನು ಹೊತ್ತಿಸುವುದು;
ಜ್ವಾಲೆಗಳು ಅದರ ಬಾಯೊಳಗಿಂದ ಹಾರುವವು.
22 ಅದರ ಕುತ್ತಿಗೆ ಬಹು ಶಕ್ತಿಯುತವಾಗಿದೆ;
ಜನರು ಭಯಗೊಂಡು ಅದರ ಬಳಿಯಿಂದ ಓಡಿಹೋಗುವರು.
23 ಅದರ ಚರ್ಮದಲ್ಲಿ ಯಾವ ಬಲಹೀನತೆಯೂ ಇಲ್ಲ.
ಅದು ಕಬ್ಬಿಣದಂತೆ ಗಟ್ಟಿಯಾಗಿದೆ.
24 ಅದರ ಹೃದಯ ಬಂಡೆಯಂತಿದೆ, ಅದಕ್ಕೆ ಭಯವೇ ಇಲ್ಲ.
ಬೀಸುವ ಕೆಳಗಲ್ಲಿನಂತೆ ಅದು ಗಟ್ಟಿಯಾಗಿದೆ.
25 ಅದು ಎದ್ದಾಗ ಬಲಿಷ್ಠರು ಭಯಪಡುವರು.
ಅದು ತನ್ನ ಬಾಲವನ್ನು ತೂಗಿದರೆ ಅವರು ಓಡಿಹೋಗುವರು.
26 ಅದಕ್ಕೆ ಬಡಿಯುವ ಖಡ್ಗ, ಭರ್ಜಿ ಈಟಿಗಳು ಹಿಂದಕ್ಕೆ ಪುಟಹಾರುತ್ತವೆ.
ಯಾವ ಆಯುಧಗಳೂ ಅದನ್ನು ನೋಯಿಸಲಾರವು!
27 ಅದು ಕಬ್ಬಿಣವನ್ನು ಒಣಹುಲ್ಲಿನಂತೆಯೂ
ತಾಮ್ರವನ್ನು ಲೊಡ್ಡುಮರದಂತೆಯೂ ಮುರಿದುಹಾಕುವುದು.
28 ಬಾಣಗಳೂ ಅದನ್ನು ಓಡಿಸಲಾರವು,
ಕವಣಿಕಲ್ಲುಗಳೂ ಅದಕ್ಕೆ ಒಣಹುಲ್ಲಿನಂತಿವೆ.
29 ಅದು ತನಗೆ ಬಡಿದ ಮರದ ದೊಣ್ಣೆಯನ್ನು ಹುಲ್ಲುಕಡ್ಡಿಯೆಂದು ಭಾವಿಸಿಕೊಳ್ಳುವುದು.
ಮನುಷ್ಯರು ಬಿರುಸಾಗಿ ಎಸೆಯುವ ಭರ್ಜಿಗಳನ್ನು ಕಂಡು ನಗುತ್ತದೆ.
30 ಅದರ ಕೆಳಭಾಗವು ಮಡಕೆಯ ಹರಿತವಾದ ಚೂರುಗಳಂತಿವೆ.
ಅದು ನಡೆಯುವಾಗ ಒಕ್ಕಣೆಯ ಸುತ್ತಿಗೆಯಂತೆ ಮಣ್ಣಿನಲ್ಲಿ ಕುಳಿಗಳನ್ನು ಮಾಡುತ್ತದೆ.
31 ಮಡಕೆಯಲ್ಲಿ ಕುದಿಯುತ್ತಿರುವ ನೀರಿನಂತೆಯೂ
ಮಡಕೆಯಲ್ಲಿ ಕುದಿಯುತ್ತಿರುವ ಎಣ್ಣೆಯಂತೆಯೂ ಅದು ನೀರನ್ನು ಕುದಿಸುವುದು.
32 ಅದು ಈಜುವಾಗ ಅದರ ಹಿಂದೆ ಒಂದು ದಾರಿಯೇ ನಿರ್ಮಿತವಾಗುವುದು.
ಅದು ನೀರನ್ನು ಕಲಕಿ ತನ್ನ ಹಿಂದೆ ಬಿಳಿ ನೊರೆಯನ್ನು ಉಂಟುಮಾಡುವುದು.
33 ಭೂಮಿಯ ಮೇಲಿರುವ ಯಾವ ಪ್ರಾಣಿಯೂ ಅದರಂತಿಲ್ಲ.
ಈ ಪ್ರಾಣಿಯೊಂದೇ ಯಾವುದಕ್ಕೂ ಭಯಪಡದು.
34 ಅತ್ಯಂತ ಗರ್ವಿಷ್ಠ ಪ್ರಾಣಿಗಳನ್ನೂ ಅದು ಕಡೆಗಣಿಸುವುದು.
ಅದು ಕ್ರೂರಪ್ರಾಣಿಗಳಿಗೆಲ್ಲಾ ರಾಜನಾಗಿದೆ.”
ಯೇಸು ತನ್ನ ಶಿಷ್ಯರ ಪಾದಗಳನ್ನು ತೊಳೆಯುವನು
13 ಯೆಹೂದ್ಯರ ಪಸ್ಕಹಬ್ಬವು ಬಹು ಸಮೀಪವಾಗಿತ್ತು. ತಾನು ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗುವ ಸಮಯ ಬಂದಿರುವುದಾಗಿ ಯೇಸುವಿಗೆ ತಿಳಿದಿತ್ತು. ಈ ಲೋಕದಲ್ಲಿದ್ದ ತನ್ನವರನ್ನು ಆತನು ಯಾವಾಗಲೂ ಪ್ರೀತಿಸುತ್ತಿದ್ದನು. ಈಗಲಾದರೋ ಅವರ ಮೇಲೆ ತನಗಿರುವ ಅಪಾರ ಪ್ರೀತಿಯನ್ನು ತೋರಿಸುವ ಕಾಲ ಆತನಿಗೆ ಬಂದಿತ್ತು.
2 ಯೇಸು ಮತ್ತು ಆತನ ಶಿಷ್ಯರು ರಾತ್ರಿಯ ಊಟಕ್ಕಾಗಿ ಕುಳಿತುಕೊಂಡಿದ್ದರು. ಯೇಸುವಿಗೆ ದ್ರೋಹ ಮಾಡುವಂತೆ ಸೈತಾನನು ಇಸ್ಕರಿಯೋತ ಯೂದನನ್ನು ಈಗಾಗಲೇ ಪ್ರೇರೇಪಿಸಿದ್ದನು. (ಯೂದನು ಸಿಮೋನನ ಮಗ.) 3 ತಂದೆಯು ಪ್ರತಿಯೊಂದರ ಮೇಲೆ ತನಗೆ ಅಧಿಕಾರವನ್ನು ಕೊಟ್ಟಿದ್ದಾನೆಂಬುದು ಯೇಸುವಿಗೆ ತಿಳಿದಿತ್ತು. ಅಲ್ಲದೆ ತಾನು ದೇವರ ಬಳಿಯಿಂದ ಬಂದಿರುವುದಾಗಿಯೂ ಮತ್ತು ಈಗ ದೇವರ ಬಳಿಗೆ ಮರಳಿಹೋಗುತ್ತಿರುವುದಾಗಿಯೂ ಆತನಿಗೆ ಗೊತ್ತಿತ್ತು. 4 ಅವರು ಊಟಮಾಡುತ್ತಿದ್ದಾಗ ಯೇಸು ಎದ್ದು ತನ್ನ ಮೇಲಂಗಿಯನ್ನು ತೆಗೆದಿಟ್ಟನು; ಅಂಗವಸ್ತ್ರವನ್ನು ಸೊಂಟಕ್ಕೆ ಕಟ್ಟಿಕೊಂಡನು. 5 ಅನಂತರ ಒಂದು ಬೋಗುಣಿಗೆ ನೀರು ಸುರಿದುಕೊಂಡು ಶಿಷ್ಯರ ಕಾಲುಗಳನ್ನು ತೊಳೆದು ತಾನು ಕಟ್ಟಿಕೊಂಡಿದ್ದ ಅಂಗವಸ್ತ್ರದಿಂದ ಅವರ ಪಾದಗಳನ್ನು ಒರಸಿದನು.
6 ಯೇಸು ಸೀಮೋನ್ ಪೇತ್ರನ ಬಳಿಗೆ ಬಂದಾಗ ಪೇತ್ರನು, “ಪ್ರಭುವೇ, ನನ್ನ ಪಾದಗಳನ್ನು ನೀನು ತೊಳೆಯಕೂಡದು” ಎಂದನು.
7 ಯೇಸು, “ಈಗ ನಾನು ಏನು ಮಾಡುತ್ತಿರುವೆನೆಂದು ನಿನಗೆ ಗೊತ್ತಿಲ್ಲ. ಆದರೆ ಮುಂದೆ ನೀನು ಅರ್ಥಮಾಡಿಕೊಳ್ಳುವೆ” ಎಂದು ಉತ್ತರಕೊಟ್ಟನು.
8 ಪೇತ್ರನು, “ಇಲ್ಲ! ನನ್ನ ಪಾದಗಳನ್ನು ನೀನು ಎಂದಿಗೂ ತೊಳೆಯಕೂಡದು” ಎಂದು ಪ್ರತಿಭಟಿಸಿದನು.
ಯೇಸು, “ನಿನ್ನ ಪಾದಗಳನ್ನು ನಾನು ತೊಳೆಯದಿದ್ದರೆ, ನನ್ನಲ್ಲಿ ನಿನಗೆ ಪಾಲು ಇಲ್ಲ” ಎಂದು ಹೇಳಿದನು.
9 ಆಗ ಸೀಮೋನ್ ಪೇತ್ರನು, “ಪ್ರಭುವೇ, ನನ್ನ ಪಾದಗಳನ್ನು ಮಾತ್ರವಲ್ಲದೆ ನನ್ನ ಕೈಗಳನ್ನು ಮತ್ತು ತಲೆಯನ್ನೂ ತೊಳೆ!” ಎಂದು ಕೇಳಿಕೊಂಡನು.
10 ಯೇಸು, “ಸ್ನಾನಮಾಡಿಕೊಂಡವನ ದೇಹವೆಲ್ಲಾ ಶುದ್ಧವಾಗಿರುತ್ತದೆ. ಅವನು ತನ್ನ ಪಾದಗಳನ್ನು ತೊಳೆದುಕೊಂಡರೆ ಸಾಕು. ನೀವು ಸಹ ಶುದ್ಧರಾಗಿದ್ದೀರಿ, ಆದರೆ ನಿಮ್ಮಲ್ಲಿ ಪ್ರತಿಯೊಬ್ಬನೂ ಶುದ್ಧನಲ್ಲ” ಎಂದು ಹೇಳಿದನು. 11 ತನಗೆ ದ್ರೋಹ ಮಾಡುವ ವ್ಯಕ್ತಿ ಯಾರೆಂದು ಯೇಸುವಿಗೆ ತಿಳಿದಿತ್ತು. ಆದಕಾರಣ ಆತನು, “ನಿಮ್ಮಲ್ಲಿ ಪ್ರತಿಯೊಬ್ಬನೂ ಶುದ್ಧನಲ್ಲ” ಎಂದು ಹೇಳಿದನು.
12 ಯೇಸು ಅವರ ಪಾದಗಳನ್ನು ತೊಳೆದ ಮೇಲೆ ತನ್ನ ಮೇಲಂಗಿಯನ್ನು ಧರಿಸಿಕೊಂಡು ಮತ್ತೆ ಕುಳಿತುಕೊಂಡು ಹೀಗೆಂದನು: “ನಾನು ನಿಮಗೆ ಮಾಡಿದ್ದು ಏನೆಂದು ಅರ್ಥವಾಯಿತೇ? 13 ನೀವು ನನ್ನನ್ನು, ‘ಗುರುವೇ, ಪ್ರಭುವೇ’ ಎಂದು ಕರೆಯುತ್ತೀರಿ. ನೀವು ಹಾಗೆ ಕರೆಯುವುದು ಸರಿ. ಏಕೆಂದರೆ ನಾನು ಗುರುವೂ ಹೌದು, ಪ್ರಭುವೂ ಹೌದು. 14 ನಿಮ್ಮ ಪ್ರಭುವೂ ಗುರುವೂ ಆಗಿರುವ ನಾನು ನಿಮ್ಮ ಪಾದಗಳನ್ನು ಸೇವಕನಂತೆ ತೊಳೆದೆನು. ಆದ್ದರಿಂದ ನೀವು ಸಹ ಒಬ್ಬರ ಪಾದಗಳನ್ನು ಇನ್ನೊಬ್ಬರು ತೊಳೆಯಬೇಕು. 15 ಈ ಕಾರ್ಯಕ್ಕೆ ನಾನೇ ನಿಮಗೆ ಮಾದರಿಯಾಗಿದ್ದೇನೆ. ನಾನು ನಿಮಗೆ ಮಾಡಿದಂತೆ ನೀವೂ ಒಬ್ಬರಿಗೊಬ್ಬರು ಮಾಡಬೇಕು. 16 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಸೇವಕನು ಒಡೆಯನಿಗಿಂತ ದೊಡ್ಡವನಲ್ಲ. ಆದ್ದರಿಂದ ಕೆಲಸಕ್ಕಾಗಿ ಕಳುಹಿಸಲ್ಪಟ್ಟವನು ಕಳುಹಿಸಿದವನಿಗಿಂತ ದೊಡ್ಡವನಲ್ಲ. 17 ನೀವು ಈ ಸಂಗತಿಗಳನ್ನು ತಿಳಿದುಕೊಂಡು ಇವುಗಳನ್ನು ಕೈಕೊಂಡು ನಡೆದರೆ ಸಂತೋಷದಿಂದಿರುವಿರಿ.
Kannada Holy Bible: Easy-to-Read Version. All rights reserved. © 1997 Bible League International