Revised Common Lectionary (Semicontinuous)
ಸ್ತುತಿಗೀತೆ. ರಚನೆಗಾರ: ಆಸಾಫ.
75 ದೇವರೇ, ನಿನ್ನನ್ನು ಕೊಂಡಾಡುವೆವು!
ನಿನ್ನ ಹೆಸರನ್ನು ಸ್ತುತಿಸುವೆವು; ಯಾಕೆಂದರೆ ನೀನು ನನ್ನ ಸಾಮಿಪ್ಯದಲ್ಲಿರುವೆ;
ನಿನ್ನ ಮಹತ್ಕಾರ್ಯಗಳ ಬಗ್ಗೆ ಜನರು ಹೇಳುತ್ತಲೇ ಇದ್ದಾರೆ.
2 ದೇವರು ಹೀಗೆನ್ನುತ್ತಾನೆ: “ನಾನು ನ್ಯಾಯತೀರ್ಪಿಗಾಗಿ ತಕ್ಕ ಸಮಯವನ್ನು ಗೊತ್ತುಪಡಿಸುವೆ;
ನಾನು ನೀತಿಯಿಂದಲೇ ತೀರ್ಪುಕೊಡುವೆ.
3 ಭೂಮಿಯು ಅದರ ಮೇಲಿರುವ ಸಮಸ್ತದೊಡನೆ ನಡುಗುತ್ತಿದ್ದರೂ
ಭೂಸ್ತಂಭಗಳನ್ನು ಸ್ಥಿರಗೊಳಿಸುವಾತನು ನಾನೇ.
4-5 “ಗರ್ವಿಷ್ಠರೇ, ‘ಕೊಚ್ಚಿಕೊಳ್ಳಬೇಡಿ’ ದುಷ್ಟರೇ, ‘ಅಹಂಕಾರ ಪಡಬೇಡಿ!
ಸೊಕ್ಕಿನ ಕುತ್ತಿಗೆಯಿಂದ ಮಾತಾಡಬೇಡಿ’” ಎಂದು ಹೇಳುವೆನು.
6 ಭೂಲೋಕದ ಯಾವ ಶಕ್ತಿಯೂ
ಮನುಷ್ಯನನ್ನು ಉದ್ಧಾರ ಮಾಡಲಾರದು.
7 ನ್ಯಾಯಾಧಿಪತಿಯು ದೇವರೇ.
ಯಾರನ್ನು ಉದ್ಧಾರಮಾಡಬೇಕು ಎಂಬ ನಿರ್ಣಯವನ್ನು ತೆಗೆದುಕೊಳ್ಳುವಾತನು ದೇವರೇ.
ದೇವರು ಒಬ್ಬನನ್ನು ಉನ್ನತಿಗೇರಿಸುವನು; ಮತ್ತೊಬ್ಬನನ್ನು ಅವನತಿಗಿಳಿಸುವನು.
8 ಯೆಹೋವನ ಕೈಯಲ್ಲಿ ಪಾತ್ರೆಯಿದೆ.
ಆ ಪಾತ್ರೆಯು ವಿಷ ದ್ರಾಕ್ಷಾರಸದಿಂದ ತುಂಬಿದೆ.
ಆತನು ದಂಡನೆಯೆಂಬ ಆ ವಿಷ ದ್ರಾಕ್ಷಾರಸವನ್ನು ಸುರಿಯುವನು;
ದುಷ್ಟರು ಕೊನೆಯ ತೊಟ್ಟಿನವರೆಗೂ ಅದನ್ನು ಕುಡಿಯುವರು!
9 ನಾನು ಇವುಗಳ ಬಗ್ಗೆ ಜನರಿಗೆ ಹೇಳುತ್ತಲೇ ಇರುವೆನು;
ಇಸ್ರೇಲರ ದೇವರನ್ನು ಸಂಕೀರ್ತಿಸುವೆನು.
10 ದುಷ್ಟರಿಂದ ಅಧಿಕಾರವನ್ನು ಕಿತ್ತುಕೊಂಡು
ಒಳ್ಳೆಯವರಿಗೆ ಅದನ್ನು ಒಪ್ಪಿಸಿಕೊಡುವೆನು.
41 “ಯೋಬನೇ, ನೀನು ಲಿವ್ಯಾತಾನನನ್ನು[a] ಗಾಳದಿಂದ ಹಿಡಿಯಬಲ್ಲೆಯಾ?
ನೀನು ಅದರ ನಾಲಿಗೆಯನ್ನು ಅದುಮಿ ಹಗ್ಗದಿಂದ ಕಟ್ಟಬಲ್ಲೆಯಾ?
2 ಅದರ ಮೂಗಿನ ಮೂಲಕ ಹಗ್ಗವನ್ನಾಗಲಿ
ದವಡೆಗಳ ಮೂಲಕ ಕೊಂಡಿಯನ್ನಾಗಲಿ ಹಾಕಬಲ್ಲೆಯಾ?
3 ತನ್ನನ್ನು ಸ್ವತಂತ್ರವಾಗಿ ಬಿಟ್ಟುಕೊಡಬೇಕೆಂದು ಅದು ನಿನ್ನನ್ನು ಬೇಡಿಕೊಳ್ಳುವುದೇ?
ಅದು ನಯವಾದ ಪದಗಳಿಂದ ನಿನ್ನೊಂದಿಗೆ ಮಾತಾಡುತ್ತದೆಯೋ?
4 ಅದು ನಿನ್ನೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳುವುದೇ?
ಸದಾಕಾಲ ನಿನ್ನ ಸೇವೆಮಾಡುವುದಾಗಿ ವಾಗ್ದಾನ ಮಾಡುವುದೇ?
5 ನೀನು ಪಕ್ಷಿಯೊಂದಿಗೆ ಆಟವಾಡುವಂತೆ ಅದರ ಜೊತೆಯಲ್ಲಿ ಆಟವಾಡುವಿಯಾ?
ನಿನ್ನ ದಾಸಿಯರು ಅದರೊಂದಿಗೆ ಆಟವಾಡಲೆಂದು ಹಗ್ಗದಿಂದ ಅದನ್ನು ಕಟ್ಟಿಹಾಕುವಿಯಾ?
6 ಯೋಬನೇ, ಬೆಸ್ತರು ಅದನ್ನು ನಿನ್ನಿಂದ ಕೊಂಡುಕೊಳ್ಳಲು ಪ್ರಯತ್ನಿಸುವರೇ?
ಅವರು ಅದನ್ನು ವರ್ತಕರಿಗೆ ಮಾರುವುದಕ್ಕಾಗಿ ತುಂಡುತುಂಡಾಗಿ ಕತ್ತರಿಸುವರೇ?
7 ನೀನು ಭರ್ಜಿಗಳನ್ನು ಎಸೆದು ಅದರ ಚರ್ಮಕ್ಕೂ ತಲೆಗೂ ನಾಟಿಸಬಲ್ಲೆಯಾ?
8 “ಯೋಬನೇ, ನೀನು ಅದರ ಮೇಲೆ ನಿನ್ನ ಕೈಯಿಟ್ಟು ನೋಡು.
ಆ ಪ್ರಯಾಸದ ಹೋರಾಟವನ್ನು ನೆನಸಿಕೊಂಡರೆ ಅದನ್ನು ನೀನು ಮುಟ್ಟುವುದೇ ಇಲ್ಲ.
9 ನೀನು ಅದನ್ನು ಸೋಲಿಸಬಹುದೆಂದು ಯೋಚಿಸಿಕೊಂಡಿದ್ದರೆ,
ಇನ್ನಾದರೂ ಅದನ್ನು ಮರೆತುಬಿಡು!
ಅದನ್ನು ನೋಡಿದರೇ ನಿನಗೆ ಭಯವಾಗುತ್ತದೆ!
10 ಅದನ್ನು ಕೋಪಗೊಳಿಸುವಷ್ಟು ಧೈರ್ಯ ಯಾರಿಗೂ ಇಲ್ಲ.
“ಹೀಗಿರುವಲ್ಲಿ ನನಗೆ ವಿರುದ್ಧವಾಗಿ ನಿಂತುಕೊಳ್ಳುವಷ್ಟು ಶಕ್ತಿ ಯಾರಿಗಿದೆ?
11 ನಾನು ಯಾರಿಗೂ ಯಾವ ಸಾಲವನ್ನೂ ತೀರಿಸಬೇಕಿಲ್ಲ.
ಆಕಾಶಮಂಡಲದ ಕೆಳಗಿರುವ ಸಮಸ್ತವೂ ನನ್ನದೇ.
13 ದೇವರು ಅಬ್ರಹಾಮನಿಗೆ ಒಂದು ವಾಗ್ದಾನ ಮಾಡಿದನು. ದೇವರಿಗಿಂತ ದೊಡ್ಡವನಿಲ್ಲ. ಆದ್ದರಿಂದ, ದೇವರು ತನ್ನ ಮೇಲೆಯೇ ಆಣೆಯಿಟ್ಟು ತನ್ನ ಮಾತಿನಂತೆಯೇ ಮಾಡಿದನು. 14 ಆತನು ಅವನಿಗೆ, “ನಾನು ನಿಜವಾಗಿಯೂ ನಿನ್ನನ್ನು ಆಶೀರ್ವದಿಸುತ್ತೇನೆ. ಅನೇಕಾನೇಕ ಸಂತತಿಗಳನ್ನು ನಿನಗೆ ದಯಪಾಲಿಸುವೆನು”(A) ಎಂದು ಹೇಳಿದನು. 15 ಅಬ್ರಹಾಮನು ಇದರ ನೆರವೇರುವಿಕೆಗಾಗಿ ತಾಳ್ಮೆಯಿಂದ ಕಾದಿದ್ದನು. ತರುವಾಯ ಅವನಿಗೆ ದೇವರ ವಾಗ್ದಾನದ ಫಲ ದೊರೆಯಿತು.
16 ಜನರು ವಾಗ್ದಾನ ಮಾಡುವಾಗ ಯಾವಾಗಲೂ ತಮಗಿಂತ ದೊಡ್ಡವರಾದ ಯಾರಾದರೊಬ್ಬರನ್ನು ಬಳಸಿಕೊಳ್ಳುತ್ತಾರೆ. ಅವರು ಹೇಳಿದ್ದು ನಿಜವೆಂಬುದನ್ನು ಆ ವಾಗ್ದಾನವು ಶ್ರುತಪಡಿಸುತ್ತದೆ. ಇದರಿಂದಾಗಿ ಅವರ ಎಲ್ಲಾ ವಾಗ್ವಾದಗಳಿಗೆ ಕೊನೆಯಾಗುತ್ತದೆ. 17 ಹಾಗೆಯೇ ದೇವರು ತನ್ನ ವಾಗ್ದಾನವನ್ನು ಬಾಧ್ಯವಾಗಿ ಪಡೆಯುವ ಜನರಿಗೆ ತನ್ನ ಸಂಕಲ್ಪವು ಸ್ಥಿರವಾದದ್ದು ಎಂಬುದನ್ನು ಸ್ಪಷ್ಟಪಡಿಸಲು ಆಣೆಯಿಟ್ಟು ನಿಶ್ಚಯಪಡಿಸಿದನು. 18 ದೇವರ ವಾಗ್ದಾನ ಮತ್ತು ಆಣೆ ಅಚಲವಾದ ಎರಡು ಆಧಾರಗಳಾಗಿವೆ. ಇವುಗಳ ವಿಷಯದಲ್ಲಿ ನಮಗೆಂದಿಗೂ ಮೋಸವಾಗುವುದಿಲ್ಲ.
ಇದರಿಂದಾಗಿ, ದೇವರ ರಕ್ಷಣೆಗಾಗಿ ಓಡಿ ಬಂದಿರುವ ನಾವು ನಮ್ಮ ನಿರೀಕ್ಷೆಯಲ್ಲಿ ಸ್ಥಿರವಾಗಿರಲು ಬಲವಾದ ಪ್ರೋತ್ಸಾಹ ಉಂಟಾಯಿತು. 19 ಈ ನಿರೀಕ್ಷೆಯು ನಮ್ಮ ಆತ್ಮಗಳನ್ನು ಅಪಾಯದಲ್ಲಿ ಕೊಚ್ಚಿಕೊಂಡು ಹೋಗದಂತೆ ಕಾಪಾಡುವ ಬಲವಾದ ಸ್ಥಿರವಾದ ಲಂಗರಿನಂತಿದೆ. ಅದು ಸ್ವರ್ಗದಾಲಯದ ತೆರೆಯ ಮರೆಯಲ್ಲಿರುವ ಮಹಾ ಪವಿತ್ರಸ್ಥಳದ ಒಳಕ್ಕೆ ಪ್ರವೇಶಿಸುತ್ತದೆ. 20 ಯೇಸು ಈಗಾಗಲೇ ಅಲ್ಲಿಗೆ ಪ್ರವೇಶಿಸಿ, ಅನುಸರಿಸುವುದಕ್ಕಾಗಿ ಮಾರ್ಗವನ್ನು ತೋರಿದನು. ಯೇಸು ಮೆಲ್ಕಿಜೆದೇಕನಂತೆ ಸದಾಕಾಲಕ್ಕೂ ಇರುವ ಪ್ರಧಾನಯಾಜಕನಾಗಿದ್ದಾನೆ.
Kannada Holy Bible: Easy-to-Read Version. All rights reserved. © 1997 Bible League International