Revised Common Lectionary (Semicontinuous)
ಸ್ತುತಿಗೀತೆ. ರಚನೆಗಾರ: ಆಸಾಫ.
75 ದೇವರೇ, ನಿನ್ನನ್ನು ಕೊಂಡಾಡುವೆವು!
ನಿನ್ನ ಹೆಸರನ್ನು ಸ್ತುತಿಸುವೆವು; ಯಾಕೆಂದರೆ ನೀನು ನನ್ನ ಸಾಮಿಪ್ಯದಲ್ಲಿರುವೆ;
ನಿನ್ನ ಮಹತ್ಕಾರ್ಯಗಳ ಬಗ್ಗೆ ಜನರು ಹೇಳುತ್ತಲೇ ಇದ್ದಾರೆ.
2 ದೇವರು ಹೀಗೆನ್ನುತ್ತಾನೆ: “ನಾನು ನ್ಯಾಯತೀರ್ಪಿಗಾಗಿ ತಕ್ಕ ಸಮಯವನ್ನು ಗೊತ್ತುಪಡಿಸುವೆ;
ನಾನು ನೀತಿಯಿಂದಲೇ ತೀರ್ಪುಕೊಡುವೆ.
3 ಭೂಮಿಯು ಅದರ ಮೇಲಿರುವ ಸಮಸ್ತದೊಡನೆ ನಡುಗುತ್ತಿದ್ದರೂ
ಭೂಸ್ತಂಭಗಳನ್ನು ಸ್ಥಿರಗೊಳಿಸುವಾತನು ನಾನೇ.
4-5 “ಗರ್ವಿಷ್ಠರೇ, ‘ಕೊಚ್ಚಿಕೊಳ್ಳಬೇಡಿ’ ದುಷ್ಟರೇ, ‘ಅಹಂಕಾರ ಪಡಬೇಡಿ!
ಸೊಕ್ಕಿನ ಕುತ್ತಿಗೆಯಿಂದ ಮಾತಾಡಬೇಡಿ’” ಎಂದು ಹೇಳುವೆನು.
6 ಭೂಲೋಕದ ಯಾವ ಶಕ್ತಿಯೂ
ಮನುಷ್ಯನನ್ನು ಉದ್ಧಾರ ಮಾಡಲಾರದು.
7 ನ್ಯಾಯಾಧಿಪತಿಯು ದೇವರೇ.
ಯಾರನ್ನು ಉದ್ಧಾರಮಾಡಬೇಕು ಎಂಬ ನಿರ್ಣಯವನ್ನು ತೆಗೆದುಕೊಳ್ಳುವಾತನು ದೇವರೇ.
ದೇವರು ಒಬ್ಬನನ್ನು ಉನ್ನತಿಗೇರಿಸುವನು; ಮತ್ತೊಬ್ಬನನ್ನು ಅವನತಿಗಿಳಿಸುವನು.
8 ಯೆಹೋವನ ಕೈಯಲ್ಲಿ ಪಾತ್ರೆಯಿದೆ.
ಆ ಪಾತ್ರೆಯು ವಿಷ ದ್ರಾಕ್ಷಾರಸದಿಂದ ತುಂಬಿದೆ.
ಆತನು ದಂಡನೆಯೆಂಬ ಆ ವಿಷ ದ್ರಾಕ್ಷಾರಸವನ್ನು ಸುರಿಯುವನು;
ದುಷ್ಟರು ಕೊನೆಯ ತೊಟ್ಟಿನವರೆಗೂ ಅದನ್ನು ಕುಡಿಯುವರು!
9 ನಾನು ಇವುಗಳ ಬಗ್ಗೆ ಜನರಿಗೆ ಹೇಳುತ್ತಲೇ ಇರುವೆನು;
ಇಸ್ರೇಲರ ದೇವರನ್ನು ಸಂಕೀರ್ತಿಸುವೆನು.
10 ದುಷ್ಟರಿಂದ ಅಧಿಕಾರವನ್ನು ಕಿತ್ತುಕೊಂಡು
ಒಳ್ಳೆಯವರಿಗೆ ಅದನ್ನು ಒಪ್ಪಿಸಿಕೊಡುವೆನು.
40 ಇದಲ್ಲದೆ ಯೆಹೋವನು ಯೋಬನಿಗೆ,
2 “ಸರ್ವಶಕ್ತನಾದ ದೇವರ ವಿರುದ್ಧ ವ್ಯಾಜ್ಯಹೂಡಿದವನು ಆತನನ್ನು ಸರಿಪಡಿಸಬಲ್ಲನೇ?
ದೇವರ ಮೇಲೆ ಅಪವಾದ ಹೊರಿಸುವವನು ಆತನಿಗೆ ಉತ್ತರ ನೀಡಲಿ” ಎಂದನು.
3 ಆಗ ಯೋಬನು ಯೆಹೋವನಿಗೆ,
4 “ನಾನು ಅಲ್ಪನೇ ಸರಿ!
ನಾನು ನಿನಗೆ ಉತ್ತರ ಕೊಡಲಾರೆನು!
ನನ್ನ ಕೈಯನ್ನು ಬಾಯಿಯ ಮೇಲೆ ಇಟ್ಟುಕೊಳ್ಳುತ್ತೇನೆ.
5 ನಾನು ಒಂದು ಸಲ ಮಾತಾಡಿದ್ದೇನೆ; ಆದರೆ ಪ್ರತಿವಾದ ಮಾಡಲಾರೆನು.
ನಾನು ಎರಡು ಸಲ ಮಾತಾಡಿದ್ದೇನೆ; ಆದರೆ ನಾನು ಹೆಚ್ಚಿಗೆ ಏನೂ ಹೇಳಲಾರೆನು” ಅಂದನು.
6 ಆಗ ಯೆಹೋವನು ಬಿರುಗಾಳಿಯೊಳಗಿಂದ ಮತ್ತೆ ಯೋಬನೊಂದಿಗೆ ಮಾತಾಡಿ ಹೀಗೆಂದನು:
7 “ಯೋಬನೇ, ನಡುಕಟ್ಟಿಕೊಂಡು ಎದ್ದುನಿಂತುಕೊ!
ನಾನು ನಿನಗೆ ಕೆಲವು ಪ್ರಶ್ನೆಗಳನ್ನು ಕೇಳುವೆನು; ನೀನು ನನಗೆ ಉತ್ತರ ಕೊಡು.
8 “ಯೋಬನೇ, ನನ್ನ ನೀತಿಯನ್ನು ಖಂಡಿಸುವಿಯಾ?
ನಿನ್ನನ್ನು ನಿರಪರಾಧಿಯೆಂದು ನಿರೂಪಿಸಲು ನನ್ನನ್ನು ದೋಷಿಯೆಂದು ಪರಿಗಣಿಸುವೆಯಾ?
9 ನಿನ್ನ ತೋಳುಗಳು ನನ್ನ ತೋಳುಗಳಂತೆ ಬಲಿಷ್ಠವಾಗಿವೆಯೋ?
ನಿನ್ನ ಸ್ವರವನ್ನು ನನ್ನ ಸ್ವರದಂತೆ ಗಟ್ಟಿಯಾಗಿ ಗುಡುಗುಟ್ಟಿಸಬಲ್ಲೆಯಾ?
10 ನೀನು ದೇವರಂತಿದ್ದರೆ ಹೆಮ್ಮೆಪಡು!
ನೀನು ದೇವರಂತಿದ್ದರೆ ಘನತೆಯನ್ನೂ ಮಹಿಮೆಯನ್ನೂ ವಸ್ತ್ರಗಳಂತೆ ಧರಿಸಿಕೋ.
11 ನೀನು ದೇವರಂತಿದ್ದರೆ, ನಿನ್ನ ಕೋಪವನ್ನು ತೋರಿ ಗರ್ವಿಷ್ಠರನ್ನು ದಂಡಿಸು;
ಅವರನ್ನು ದೀನರನ್ನಾಗಿ ಮಾಡು.
12 ಆ ಗರ್ವಿಷ್ಠರ ಕಡೆಗೆ ನೋಡಿ ಅವರನ್ನು ದೀನರನ್ನಾಗಿ ಮಾಡು.
ದುಷ್ಟರನ್ನು ಅವರು ನಿಂತಿರುವಲ್ಲಿಯೇ ಜಜ್ಜಿಹಾಕು.
13 ಗರ್ವಿಷ್ಠರನ್ನೆಲ್ಲಾ ಧೂಳಿನಲ್ಲಿ ಸಮಾಧಿಮಾಡು;
ಅವರ ದೇಹಗಳನ್ನು ಸುತ್ತಿ ಅವರ ಸಮಾಧಿಗಳೊಳಗೆ ಹಾಕು.
14 ಯೋಬನೇ, ನೀನು ಇವುಗಳನ್ನೆಲ್ಲಾ ಮಾಡಶಕ್ತನಾಗಿದ್ದರೆ,
ನಿನ್ನನ್ನು ರಕ್ಷಿಸಿಕೊಳ್ಳಬಲ್ಲೆ ಎಂದು ನಿನ್ನನ್ನು ನಾನೇ ಹೊಗಳುವೆನು.
15 “ಯೋಬನೇ, ಬೆಹೇಮೋತನ್ನು ನೋಡು.
ಅದನ್ನು ನಿರ್ಮಿಸಿದವನು ನಾನೇ; ನಿನ್ನನ್ನು ನಿರ್ಮಿಸಿದವನೂ ನಾನೇ.
ಅದು ಹಸುವಿನಂತೆ ಹುಲ್ಲನ್ನು ಮೇಯುತ್ತದೆ.
16 ಅದರ ದೇಹದಲ್ಲಿ ಬಹಳ ಶಕ್ತಿಯಿದೆ.
ಅದರ ಹೊಟ್ಟೆಯಲ್ಲಿರುವ ಮಾಂಸಖಂಡಗಳು ಬಹು ಶಕ್ತಿಯುತವಾಗಿವೆ.
17 ಅದರ ಬಾಲವು ದೇವದಾರು ಮರದಂತೆ ಬಲವಾಗಿ ನಿಂತುಕೊಳ್ಳುತ್ತದೆ.
ಅದರ ಕಾಲಿನ ಮಾಂಸಖಂಡಗಳು ಬಹು ಬಲವಾಗಿವೆ.
18 ಅದರ ಎಲುಬುಗಳು ತಾಮ್ರದಂತೆ ಬಲವಾಗಿವೆ.
ಅದರ ಕಾಲುಗಳು ಕಬ್ಬಿಣದ ಕಂಬಿಗಳಂತಿವೆ.
19 ನನ್ನಿಂದ ನಿರ್ಮಿತವಾಗಿರುವ ಅತ್ಯದ್ಭುತವಾದ ಪ್ರಾಣಿ ಅದು.
ಅದನ್ನು ಸೃಷ್ಟಿಸಿದ ನಾನೊಬ್ಬನೇ ಅದನ್ನು ಕೊಲ್ಲಬಲ್ಲೆನು.
20 ಕಾಡುಪ್ರಾಣಿಗಳು ಆಟವಾಡುವ ಬೆಟ್ಟಗಳ ಮೇಲೆ ಬೆಳೆಯುವ ಹುಲ್ಲನ್ನು
ಅದು ತಿನ್ನುತ್ತದೆ.
21 ಅದು ತಾವರೆ ಗಿಡಗಳ ಕೆಳಗೆ ಮಲಗಿಕೊಳ್ಳುತ್ತದೆ;
ಕೊಳಚೆಯಲ್ಲಿರುವ ಅವುಗಳ ನಡುವೆ ಅಡಗಿಕೊಳ್ಳುತ್ತದೆ.
22 ತಾವರೆಗಿಡಗಳು ತಮ್ಮ ನೆರಳಿನಿಂದ ಅದನ್ನು ಮರೆಮಾಡುತ್ತವೆ;
ನದಿಯ ಸಮೀಪದಲ್ಲಿ ಬೆಳೆಯುವ ನೀರವಂಜಿ ಮರಗಳ ಕೆಳಗೆ ಅದು ವಾಸಿಸುತ್ತದೆ.
23 ನದಿಯು ತುಂಬಿಹರಿದರೂ ಅದು ಓಡಿಹೋಗುವುದಿಲ್ಲ.
ಜೋರ್ಡನ್ ನದಿಯು ಅದರ ಮುಖಕ್ಕೆ ರಭಸದಿಂದ ಬಡಿದರೂ ಅದಕ್ಕೆ ಭಯವಿಲ್ಲ.
24 ಅದರ ಕಣ್ಣುಗಳನ್ನು ಕುರುಡುಮಾಡಿ ಅದನ್ನು ಬಂಧಿಸುವುದಕ್ಕಾಗಲಿ
ಕೊಂಡಿಗಳಿಂದ ಅದರ ಮೂಗಿಗೆ ಚುಚ್ಚುವುದಕ್ಕಾಗಲಿ ಯಾರಿಗೂ ಸಾಧ್ಯವಿಲ್ಲ.
6 ಆದ್ದರಿಂದ ಕ್ರಿಸ್ತನನ್ನು ಕುರಿತ ಆರಂಭದ ಪಾಠಗಳನ್ನು ನಾವು ಮುಗಿಸಿದವರಾಗಿರಬೇಕು. ನಾವು ಆರಂಭಿಸಿದ ಪಾಠಗಳಿಗೆ ಮತ್ತೆ ಹೋಗಬಾರದು. ನಮ್ಮ ಮೊದಲಿನ ದುಷ್ಕೃತ್ಯಗಳನ್ನು ತೊರೆದುಬಿಟ್ಟು ದೇವರಲ್ಲಿ ನಂಬಿಕೆಯನ್ನಿಟ್ಟು ಕ್ರಿಸ್ತನಲ್ಲಿ ನಮ್ಮ ಜೀವನವನ್ನು ಪ್ರಾರಂಭಿಸಿದೆವು. 2 ಆ ಸಮಯದಲ್ಲಿ ನಮಗೆ ದೀಕ್ಷಾಸ್ನಾನ, ಹಸ್ತಾರ್ಪಣ, ಸತ್ತವರ ಪುನರುತ್ಥಾನ ಮತ್ತು ನಿತ್ಯವಾದ ನ್ಯಾಯತೀರ್ಪು ಇವುಗಳನ್ನು ಕುರಿತು ಬೋಧಿಸಲಾಯಿತು. ಆದರೆ ಈಗ ನಾವು ಪೂರ್ಣ ತಿಳುವಳಿಕೆಗೆ ಹೋಗುವುದು ಅಗತ್ಯವಾಗಿದೆ. 3 ದೇವರ ಚಿತ್ತವಾದರೆ ಹೀಗೆ ಮುಂದಕ್ಕೆ ಸಾಗುತ್ತಾ ಹೋಗುವೆವು.
4-6 ಕ್ರಿಸ್ತನ ಮಾರ್ಗವನ್ನು ಜನರು ಬಿಟ್ಟುಹೋದ ನಂತರ, ನೀವು ಅವರ ಜೀವನವನ್ನು ಮತ್ತೆ ಪರಿವರ್ತಿಸಲು ಸಾಧ್ಯವೇ? ನಾನು ಸತ್ಯವನ್ನು ತಿಳಿದುಕೊಂಡ ಜನರನ್ನು ಕುರಿತು ಮಾತಾಡುತ್ತಿದ್ದೇನೆ. ಅವರು ದೇವರ ವರಗಳನ್ನು ಪಡೆದವರೂ ಪವಿತ್ರಾತ್ಮನಲ್ಲಿ ಪಾಲುಗಾರರೂ ಆಗಿದ್ದಾರೆ. ದೇವರು ಹೇಳಿದ ಸಂಗತಿಗಳನ್ನು ಅವರು ಕೇಳಿದವರೂ ದೇವರ ಹೊಸಲೋಕದ ಮಹಾಶಕ್ತಿಗಳನ್ನು ನೋಡಿದವರೂ ಆಗಿದ್ದಾರೆ. ಅವುಗಳೆಲ್ಲ ಉತ್ತಮವಾದವುಗಳೆಂಬುದನ್ನು ಅವರು ಕಲಿತುಕೊಂಡಿದ್ದಾರೆ. ಆದರೂ ಅವರು ಕ್ರಿಸ್ತನ ಮಾರ್ಗವನ್ನು ಬಿಟ್ಟುಹೋದರು. ಅವರ ಜೀವಿತವನ್ನು ಮತ್ತೆ ಪರಿವರ್ತಿಸಿ ಕ್ರಿಸ್ತನ ಬಳಿಗೆ ಬರಮಾಡಲು ಸಾಧ್ಯವಿಲ್ಲ. ಏಕೆಂದರೆ ಕ್ರಿಸ್ತನನ್ನು ಬಿಟ್ಟುಹೋದ ಅವರು ಕ್ರಿಸ್ತನನ್ನು ಮತ್ತೆ ಶಿಲುಬೆಗೇರಿಸಿ ಮೊಳೆಗಳನ್ನು ಹೊಡೆಯುವವರೂ ಜನರೆಲ್ಲರ ಮುಂದೆ ಕ್ರಿಸ್ತನಿಗೆ ಅವಮಾನ ಮಾಡುವವರೂ ಆಗಿದ್ದಾರೆ.
7 ಆ ಜನರು ತನ್ನ ಮೇಲೆ ಪದೇಪದೇ ಸುರಿಯುವ ಮಳೆಯನ್ನು ಹೀರಿಕೊಳ್ಳುವ ಭೂಮಿಯಂತಿದ್ದಾರೆ. ಅದು ಜನರಿಗೆ ಆಹಾರವನ್ನು ಕೊಡಲೆಂದು ರೈತನು ಅದರಲ್ಲಿ ಸಸಿಯನ್ನು ನೆಟ್ಟು ಬೆಳೆಸುತ್ತಾನೆ. ಅದು ಜನರಿಗೆ ಉಪಯುಕ್ತವಾದ ಬೆಳೆಗಳನ್ನು ಬೆಳೆಸಿದರೆ, ಅದಕ್ಕೆ ದೇವರಿಂದ ಆಶೀರ್ವಾದ ದೊರೆಯುತ್ತದೆ. 8 ಆದರೆ ಅದು ಮುಳ್ಳುಗಿಡಗಳನ್ನೂ ಕಳೆಯನ್ನೂ ಬೆಳೆಸಿದರೆ ನಿಷ್ಪ್ರಯೋಜಕವಾಗಿ ದೇವರ ಶಾಪಕ್ಕೆ ಗುರಿಯಾಗುತ್ತದೆ. ಆ ಭೂಮಿಯನ್ನು ಬೆಂಕಿಯಿಂದ ಸುಟ್ಟು ನಾಶಮಾಡಲಾಗುವುದು.
9 ಪ್ರಿಯ ಸ್ನೇಹಿತರೇ, ನಾವು ಈ ಸಂಗತಿಗಳನ್ನು ನಿಮಗೆ ಹೇಳುತ್ತಿದ್ದರೂ ನಿಮ್ಮಿಂದ ಇದಕ್ಕಿಂತಲೂ ಉತ್ತಮವಾದ ಕಾರ್ಯಗಳನ್ನು ಅಪೇಕ್ಷಿಸುತ್ತೇವೆ. ರಕ್ಷಣೆಗೆ ಸಂಬಂಧಿಸಿದ ಕಾರ್ಯಗಳನ್ನು ನೀವು ಮಾಡುತ್ತೀರೆಂದು ನಾವು ದೃಢವಾಗಿ ನಂಬಿದ್ದೇವೆ. 10 ದೇವರು ನ್ಯಾಯವಂತನಾಗಿದ್ದಾನೆ. ನೀವು ಮಾಡಿದ ಉಪಕಾರವನ್ನು ಮತ್ತು ದೇವಜನರಿಗೆ ಸಹಾಯ ಮಾಡಿದ್ದರ ಮೂಲಕ ಮತ್ತು ಸಹಾಯ ಮಾಡುತ್ತಲೇ ಇರುವುದರ ಮೂಲಕ ನೀವು ಆತನಿಗೆ ತೋರಿದ ಪ್ರೀತಿಯನ್ನು ಆತನು ಮರೆತುಬಿಡುವುದಿಲ್ಲ. 11 ನಿಮ್ಮಲ್ಲಿ ಪ್ರತಿಯೊಬ್ಬರು ತಮ್ಮ ಇಡೀ ಜೀವನದಲ್ಲಿ ಇದೇ ಆಸಕ್ತಿಯುಳ್ಳವರಾಗಿ ನಿಮ್ಮ ನಿರೀಕ್ಷೆಯನ್ನು ದೃಢಪಡಿಸಿಕೊಳ್ಳಬೇಕೆಂದು ನಾವು ಅಪೇಕ್ಷಿಸುತ್ತೇವೆ. 12 ನೀವು ಸೋಮಾರಿಗಳಾಗಿರಬೇಕೆಂಬುದು ನಮ್ಮ ಅಪೇಕ್ಷೆಯಲ್ಲ. ದೇವರ ವಾಗ್ದಾನದ ಫಲಗಳನ್ನು ಪಡೆಯುವ ಜನರಂತೆ ನೀವಿರಬೇಕೆಂಬುದು ನಮ್ಮ ಅಪೇಕ್ಷೆ. ಆ ಜನರಿಗೆ ನಂಬಿಕೆ ಮತ್ತು ತಾಳ್ಮೆಯಿದ್ದುದರಿಂದ ಅವರು ದೇವರ ವಾಗ್ದಾನದಂತೆ ಫಲವನ್ನು ಪಡೆದರು.
Kannada Holy Bible: Easy-to-Read Version. All rights reserved. © 1997 Bible League International