Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 104:1-9

104 ನನ್ನ ಆತ್ಮವೇ, ಯೆಹೋವನನ್ನು ಕೊಂಡಾಡು!
    ಯೆಹೋವನೇ, ನನ್ನ ದೇವರೇ, ನೀನು ಬಹಳ ದೊಡ್ಡವನು!
ನೀನು ಮಹಿಮೆಯನ್ನೂ ಘನತೆಯನ್ನೂ ಧರಿಸಿಕೊಂಡಿರುವೆ.
    ನೀನು ಬೆಳಕನ್ನು ನಿಲುವಂಗಿಯಂತೆ ಧರಿಸಿಕೊಂಡಿರುವೆ
ನೀನು ಆಕಾಶಮಂಡಲವನ್ನು ಪರದೆಯಂತೆ ಹರಡಿರುವೆ.
    ನಿನ್ನ ಮನೆಯನ್ನು ಅವುಗಳ ಮೇಲೆ ಕಟ್ಟಿರುವೆ.
ದಟ್ಟವಾದ ಮೋಡಗಳನ್ನು ರಥಗಳನ್ನಾಗಿ ಮಾಡಿಕೊಂಡು
    ಗಾಳಿಯ ರೆಕ್ಕೆಗಳ ಮೇಲೆ ಆಕಾಶದಲ್ಲಿ ಸಂಚರಿಸುವೆ.
ಗಾಳಿಯನ್ನು ನಿನ್ನ ದೂತರನ್ನಾಗಿಯೂ
    ಬೆಂಕಿಯನ್ನು ನಿನ್ನ ಸೇವಕರನ್ನಾಗಿಯೂ ಮಾಡಿರುವೆ.[a]
ಭೂಮಿಯನ್ನು ನೀನು ಅಸ್ತಿವಾರದ ಮೇಲೆ ಕಟ್ಟಿರುವುದರಿಂದ
    ಅದೆಂದಿಗೂ ನಾಶವಾಗದು.
ನೀನು ಭೂಮಿಗೆ ನೀರನ್ನು ಕಂಬಳಿಯಂತೆ ಹೊದಿಸಿರುವೆ.
    ಅದು ಬೆಟ್ಟಗಳನ್ನು ಮುಚ್ಚಿಕೊಂಡಿತು.
ನೀನು ಆಜ್ಞಾಪಿಸಲು ನೀರು ಹಿಂತಿರುಗಿತು.
    ನೀನು ಬರ್ಜಿಸಲು ನೀರು ಓಡಿಹೋಯಿತು.
ಜಲರಾಶಿಗಳು ಬೆಟ್ಟಗಳಿಂದ ಇಳಿದು
    ಕಣಿವೆಗಳಿಗೂ ನೀನು ಗೊತ್ತುಪಡಿಸಿದ ಸ್ಥಳಗಳಿಗೂ ಹರಿದುಹೋದವು.
ನೀನು ಸಮುದ್ರಗಳಿಗೆ ಮೇರೆಗಳನ್ನು ಗೊತ್ತುಪಡಿಸಿರುವುದರಿಂದ
    ನೀರಿನಿಂದ ಭೂಮಿಯು ಮತ್ತೆಂದಿಗೂ ಆವೃತವಾಗದು.

ಕೀರ್ತನೆಗಳು 104:24

24 ಯೆಹೋವನೇ, ನೀನು ಅನೇಕ ಆಶ್ಚರ್ಯಕರವಾದ ಕಾರ್ಯಗಳನ್ನು ಮಾಡಿರುವೆ.
    ನೀನು ಸೃಷ್ಟಿಸಿದ ವಸ್ತುಗಳಿಂದ ಭೂಮಿಯು ತುಂಬಿಹೋಗಿದೆ.
    ನಿನ್ನ ಪ್ರತಿಯೊಂದು ಕಾರ್ಯದಲ್ಲೂ ನಿನ್ನ ಜ್ಞಾನವನ್ನು ಕಾಣಬಲ್ಲವು.

ಕೀರ್ತನೆಗಳು 104:35

35 ಪಾಪಾತ್ಮರು ಭೂಮಿಯಿಂದ ಕಾಣದೆಹೋಗಲಿ.
    ದುಷ್ಟರು ಎಂದೆಂದಿಗೂ ನಿರ್ಮೂಲವಾಗಲಿ.
ನನ್ನ ಆತ್ಮವೇ, ಯೆಹೋವನನ್ನು ಸ್ತುತಿಸು!

ಯೆಹೋವನನ್ನು ಕೊಂಡಾಡು!

ಯೋಬನು 39

39 “ಯೋಬನೇ, ಬೆಟ್ಟದ ಮೇಕೆಗಳು ಯಾವಾಗ ಹುಟ್ಟುತ್ತವೆ ಎಂಬುದು ನಿನಗೆ ಗೊತ್ತಿದೆಯೋ?
    ತಾಯಿ ಜಿಂಕೆಯು ಮರಿ ಈಯುವಾಗ ನೀನು ಸಹಾಯ ಮಾಡಬಲ್ಲೆಯಾ?
ಬೆಟ್ಟದ ಮೇಕೆಯೂ ಜಿಂಕೆಯೂ ತಮ್ಮ ಮರಿಗಳನ್ನು ಹೊಟ್ಟೆಯಲ್ಲಿ ಎಷ್ಟು ತಿಂಗಳವರೆಗೆ ಹೊತ್ತುಕೊಂಡಿರುತ್ತವೆ ಎಂಬುದು ನಿನಗೆ ಗೊತ್ತಿದೆಯೋ?
    ಅವುಗಳು ಹುಟ್ಟುವುದಕ್ಕೆ ಸರಿಯಾದ ಸಮಯ ಯಾವುದೆಂದು ನಿನಗೆ ಗೊತ್ತಿದೆಯೋ?
ಅವು ಬಗ್ಗಿಕೊಂಡು ಮರಿಗಳನ್ನು ಈಯುತ್ತವೆ;
    ಬಳಿಕ ಅವುಗಳ ಪ್ರಸವವೇದನೆ ಕೊನೆಗೊಳ್ಳುತ್ತದೆ.
ಬೆಟ್ಟದಮೇಕೆ ಮರಿಗಳೂ ಜಿಂಕೆಯ ಮರಿಗಳೂ ಬಯಲುಗಳಲ್ಲಿ ಪುಷ್ಟಿಯಾಗಿ ಬೆಳೆಯುತ್ತವೆ.
    ಬಳಿಕ ಅವು ತಮ್ಮ ತಾಯಂದಿರನ್ನು ಬಿಟ್ಟುಹೋಗುತ್ತವೆ; ಹಿಂತಿರುಗಿ ಬರುವುದೇ ಇಲ್ಲ.

“ಯೋಬನೇ, ಸ್ವತಂತ್ರವಾಗಿರುವಂತೆ ಕಾಡುಕತ್ತೆಗಳನ್ನು ಕಳುಹಿಸಿದವರು ಯಾರು?
    ಅವುಗಳ ಹಗ್ಗಗಳನ್ನು ಬಿಚ್ಚಿ, ಅವುಗಳನ್ನು ಬಿಟ್ಟುಬಿಟ್ಟವರು ಯಾರು?
ಕಾಡುಕತ್ತೆಗೆ ಅಡವಿಯನ್ನು ಮನೆಯನ್ನಾಗಿ ಕೊಟ್ಟವನೇ ನಾನು.
    ಅವುಗಳಿಗೆ ಉಪ್ಪುಭೂಮಿಯನ್ನು ವಾಸಿಸುವ ಸ್ಥಳವನ್ನಾಗಿ ಕೊಟ್ಟವನೇ ನಾನು.
ಕಾಡುಕತ್ತೆಯು ಗದ್ದಲವಿರುವ ಊರುಗಳ ಸಮೀಪಕ್ಕೂ ಹೋಗುವುದಿಲ್ಲ,
    ಯಾರೂ ಅವುಗಳನ್ನು ಪಳಗಿಸಿ ದುಡಿಸುವುದಿಲ್ಲ.
ಕಾಡುಕತ್ತೆಗಳು ಬೆಟ್ಟಗಳಲ್ಲಿ ವಾಸಿಸುತ್ತವೆ.
    ಹಸಿರಾದ ಏನನ್ನಾದರೂ ತಿನ್ನುವುದಕ್ಕೆ ಅವು ಅಲ್ಲಿಯೇ ಹುಡುಕುತ್ತವೆ.

“ಯೋಬನೇ, ಕಾಡುಕೋಣಕ್ಕೆ ಮೂಗುದಾರವನ್ನು ಕಟ್ಟಿ ನಿನ್ನ ಹೊಲವನ್ನು ಉಳುವಂತೆ ಮಾಡಬಲ್ಲೆಯಾ?
    ತಗ್ಗುಭೂಮಿಯಲ್ಲಿ ಕುಂಟೆ ಹೊಡೆಯಬಲ್ಲೆಯಾ?
10 ಕಾಡುಕೋಣವನ್ನು ಹಗ್ಗದಿಂದ ಕಟ್ಟಿ ಭೂಮಿಯನ್ನು ಉಳುಮೆ ಮಾಡಬಲ್ಲೆಯಾ?
    ಅದು ತಗ್ಗುಗಳಲ್ಲಿ ನಿನ್ನನ್ನು ಹಿಂಬಾಲಿಸಿ ಕುಂಟೆ ಎಳೆಯುವುದೋ?
11 ನಿನ್ನ ಬೇಸಾಯಕ್ಕೆ ಕಾಡುಕೋಣದ ಶಕ್ತಿಯನ್ನು ಅವಲಂಭಿಸಿಕೊಳ್ಳಬಲ್ಲೆಯಾ?
    ಪ್ರಯಾಸದ ಕೆಲಸವನ್ನು ಅದು ಮಾಡಬೇಕೆಂದು ಅಪೇಕ್ಷಿಸುವೆಯಾ?
12 ಅದು ನಿನ್ನ ಬೆಳೆಯನ್ನು ಕೂಡಿಸಿ,
    ನಿನ್ನ ಕಣಕ್ಕೆ ಹೊತ್ತುಕೊಂಡು ಬರುವುದೆಂದು ಭರವಸವಿಡುವಿಯಾ?

13 “ಉಷ್ಟ್ರಪಕ್ಷಿಯು ಸಂತೋಷದಿಂದ ತನ್ನ ರೆಕ್ಕೆಗಳನ್ನು ಬಡಿದಾಡುವುದು.
    ಆದರೆ ಅದರ ರೆಕ್ಕೆಗಳು ಕೊಕ್ಕರೆಯ ರೆಕ್ಕೆಗಳಿಗೆ ಸರಿಹೋಲುವುದಿಲ್ಲ.
14 ಉಷ್ಟ್ರಪಕ್ಷಿಯು ನೆಲದ ಮೇಲೆ ಮೊಟ್ಟೆಗಳನ್ನು ಇಡುತ್ತದೆ;
    ಮೊಟ್ಟೆಗಳು ಮರಳಿನಲ್ಲಿ ಕಾವು ಪಡೆಯುತ್ತವೆ.
15 ಆ ಮೊಟ್ಟೆಗಳನ್ನು ಮನುಷ್ಯರಾಗಲಿ ಪ್ರಾಣಿಗಳಾಗಲಿ ತುಳಿಯಬಹುದೆಂಬುದನ್ನು
    ಆ ಉಷ್ಟ್ರಪಕ್ಷಿಯು ಮರೆತುಬಿಡುತ್ತದೆ.
16 ಉಷ್ಟ್ರಪಕ್ಷಿಯು ತನ್ನ ಮರಿಗಳನ್ನು ಕಡೆಗಣಿಸಿ
    ತನ್ನ ಮರಿಗಳಲ್ಲವೆಂಬಂತೆ ವರ್ತಿಸುತ್ತದೆ;
    ಮರಿಗಳು ಸತ್ತುಹೋದರೆ ತನ್ನ ಪ್ರಯಾಸವು ವ್ಯರ್ಥವಾಯಿತೆಂಬ ಚಿಂತೆಯೂ ಅದಕ್ಕಿಲ್ಲ.
17 ಯಾಕೆಂದರೆ ನಾನು ಉಷ್ಟ್ರಪಕ್ಷಿಗೆ ಜ್ಞಾನವನ್ನು ಕೊಡಲಿಲ್ಲ.
    ಉಷ್ಟ್ರಪಕ್ಷಿಯು ಮೂಢಪಕ್ಷಿಯಾಗಿದೆ, ಅದನ್ನು ಈ ರೀತಿ ನಿರ್ಮಿಸಿದವನು ನಾನೇ.
18 ಆದರೆ ಉಷ್ಟ್ರಪಕ್ಷಿಯು ಓಡಲು ಎದ್ದೇಳುವಾಗ, ಕುದುರೆಯನ್ನೂ ಅದರ ಸವಾರನನ್ನೂ ಕಂಡು ನಗುತ್ತದೆ.
    ಅದು ಕುದುರೆಗಿಂತಲೂ ವೇಗವಾಗಿ ಓಡಬಲ್ಲದು.

19 “ಯೋಬನೇ, ನೀನು ಕುದುರೆಗೆ ಶಕ್ತಿಯನ್ನು ಕೊಟ್ಟೆಯಾ?
    ಅದರ ಕೊರಳಿನ ಮೇಲಿನ ಕೇಸರವನ್ನು ಕೊಟ್ಟೆಯಾ?
20 ಮಿಡತೆಯು ಕುಪ್ಪಳಿಸುವಂತೆ ನೀನು ಕುದುರೆಯನ್ನೂ ಕುಪ್ಪಳಿಸಬಲ್ಲೆಯಾ?
    ಅದರ ಗಟ್ಟಿಯಾದ ಕೆನೆತ ಜನರನ್ನು ಭಯಗೊಳಿಸುತ್ತದೆ.
21 ಕುದುರೆಯು ತನಗಿರುವ ಬಾಹುಬಲದಲ್ಲಿ ಸಂತೋಷಪಡುತ್ತದೆ;
    ತನ್ನ ಪಾದದಿಂದ ನೆಲವನ್ನು ಕೆರೆಯುತ್ತದೆ, ಯುದ್ಧಕ್ಕೆ ವೇಗವಾಗಿ ಓಡುತ್ತಾ ಹೋಗುವುದು.
22 ಕುದುರೆಯು ಭಯವನ್ನು ಕಂಡು ನಗುವುದು; ಅದಕ್ಕೆ ಭಯವಿಲ್ಲ!
    ಅದು ಯುದ್ಧದಿಂದ ಓಡಿಹೋಗುವುದಿಲ್ಲ.
23 ಕುದುರೆಯ ಪಾರ್ಶ್ವದಲ್ಲಿ ಬತ್ತಳಿಕೆಯು ಅಲುಗಾಡುವುದು.
    ಕುದುರೆಸವಾರನು ಕೊಂಡೊಯ್ಯುತ್ತಿರುವ ಬರ್ಜಿ ಮತ್ತು ಆಯುಧಗಳು ಸೂರ್ಯನ ಬೆಳಕಿನಲ್ಲಿ ಹೊಳೆಯುತ್ತವೆ.
24 ಕುದುರೆಯು ಬಹು ಉತ್ಸುಕತೆಯಿಂದಿರುತ್ತದೆ!
    ಅದು ನೆಲದ ಮೇಲೆ ವೇಗವಾಗಿ ಓಡುವುದು; ಅದು ತೂತೂರಿಯ ಧ್ವನಿಯನ್ನು ಕೇಳಿದರೂ ನಿಲ್ಲದು.
25 ತುತ್ತೂರಿಯ ಧ್ವನಿಗೆ ಕುದುರೆಯು, “ಆಹಾ!” ಎಂದು ಹೇಳುತ್ತದೆ.
    ಅದು ದೂರದಿಂದಲೇ ಯುದ್ಧವನ್ನು ಮೂಸಿ ನೋಡಿ ತಿಳಿಯುವುದು.
    ಸೇನಾಧಿಪತಿಗಳು ಗಟ್ಟಿಯಾಗಿ ಅಪ್ಪಣೆಕೊಡುವುದನ್ನೂ ಯುದ್ಧದ ಎಲ್ಲಾ ಕೂಗಾಟವನ್ನೂ ಅದು ಕೇಳಿಸಿಕೊಳ್ಳುತ್ತದೆ.

26 “ಯೋಬನೇ, ತನ್ನ ರೆಕ್ಕೆಗಳನ್ನು ಚಾಚಿಕೊಂಡು ದಕ್ಷಿಣದ ಕಡೆಗೆ ಹಾರುವ ಗಿಡುಗಕ್ಕೆ ನೀನು ಹಾರುವುದನ್ನು ಕಲಿಸಿದೆಯೋ?
27 ನೀನು ಹದ್ದಿಗೆ ಹಾರಿಹೋಗಿ ಎತ್ತರವಾದ ಬೆಟ್ಟಗಳ ಮೇಲೆ ಗೂಡನ್ನು ಕಟ್ಟಿಕೊಳ್ಳಲು ಆಜ್ಞಾಪಿಸುವೆಯಾ?
28 ಹದ್ದು ಕಡಿದಾದ ಬಂಡೆಯ ಮೇಲೆ ವಾಸಿಸುವುದು.
    ಕಡಿದಾದ ಬಂಡೆಯು ಹದ್ದಿನ ದುರ್ಗವಾಗಿದೆ.
29 ಹದ್ದು ಆಹಾರಕ್ಕಾಗಿ ತನ್ನ ದುರ್ಗದಿಂದ ನೋಡುತ್ತದೆ.
    ದೂರದಲ್ಲಿರುವ ಆಹಾರವನ್ನು ಅದು ನೋಡಬಲ್ಲದು.
30 ಹದ್ದಿನ ಮರಿಗಳು ರಕ್ತವನ್ನು ಕುಡಿಯುತ್ತವೆ.
    ಅವು ಸತ್ತದೇಹಗಳ ಸುತ್ತಲೂ ಸೇರಿಕೊಳ್ಳುತ್ತವೆ.”

ಲೂಕ 22:24-30

ಸೇವಕರಂತಿರಿ

24 ಬಳಿಕ ಅಪೊಸ್ತಲರು ತಮ್ಮಲ್ಲಿ ಯಾರು ಅತಿ ಶ್ರೇಷ್ಠರೆಂದು ವಾದ ಮಾಡತೊಡಗಿದರು. 25 ಆಗ ಯೇಸು ಅವರಿಗೆ, “ಈ ಲೋಕದ ಅರಸರು ತಮ್ಮ ಜನರ ಮೇಲೆ ದೊರೆತನ ಮಾಡುತ್ತಾರೆ. ಜನರ ಮೇಲೆ ಅಧಿಕಾರ ಹೊಂದಿರುವವರನ್ನು ಧರ್ಮಿಷ್ಠರೆಂದು ಕರೆಯುತ್ತಾರೆ. 26 ಆದರೆ ನೀವು ಹಾಗಾಗಬಾರದು. ಅತ್ಯಂತ ದೊಡ್ಡ ವ್ಯಕ್ತಿಯು ಅತ್ಯಂತ ಚಿಕ್ಕ ವ್ಯಕ್ತಿಯಾಗಬೇಕು. ನಾಯಕರು ಸೇವಕರಂತಿರಬೇಕು. 27 ಶ್ರೇಷ್ಠನಾದವನು ಯಾರು? ಊಟಕ್ಕೆ ಕುಳಿತವನೋ? ಅಥವಾ ಅವನಿಗೆ ಸೇವೆ ಮಾಡುವವನೋ? ಊಟಕ್ಕೆ ಕುಳಿತಿರುವವನೇ ಶ್ರೇಷ್ಠನೆಂದು ನೀವು ಭಾವಿಸುತ್ತೀರೋ? ಆದರೆ ನಾನು ನಿಮ್ಮಲ್ಲಿ ಸೇವಕನಂತಿದ್ದೇನೆ!

28 “ನೀವು ನನ್ನ ಅನೇಕ ಕಷ್ಟಗಳಲ್ಲಿ ನನ್ನ ಸಂಗಡ ಇದ್ದವರು. 29 ನನ್ನ ತಂದೆ ನನಗೆ ರಾಜ್ಯವನ್ನು ಕೊಟ್ಟಿದ್ದಾನೆ. ನನ್ನ ಸಂಗಡ ಆಳುವುದಕ್ಕೆ ನಾನು ಸಹ ನಿಮಗೆ ಅಧಿಕಾರ ಕೊಡುತ್ತೇನೆ. 30 ನನ್ನ ರಾಜ್ಯದಲ್ಲಿ ನೀವು ನನ್ನ ಸಂಗಡ ಊಟಮಾಡುವಿರಿ ಮತ್ತು ಕುಡಿಯುವಿರಿ. ನೀವು ಸಿಂಹಾಸನಗಳಲ್ಲಿ ಕುಳಿತುಕೊಂಡು ಇಸ್ರೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರಿಸುವಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International