Revised Common Lectionary (Semicontinuous)
104 ನನ್ನ ಆತ್ಮವೇ, ಯೆಹೋವನನ್ನು ಕೊಂಡಾಡು!
ಯೆಹೋವನೇ, ನನ್ನ ದೇವರೇ, ನೀನು ಬಹಳ ದೊಡ್ಡವನು!
ನೀನು ಮಹಿಮೆಯನ್ನೂ ಘನತೆಯನ್ನೂ ಧರಿಸಿಕೊಂಡಿರುವೆ.
2 ನೀನು ಬೆಳಕನ್ನು ನಿಲುವಂಗಿಯಂತೆ ಧರಿಸಿಕೊಂಡಿರುವೆ
ನೀನು ಆಕಾಶಮಂಡಲವನ್ನು ಪರದೆಯಂತೆ ಹರಡಿರುವೆ.
3 ನಿನ್ನ ಮನೆಯನ್ನು ಅವುಗಳ ಮೇಲೆ ಕಟ್ಟಿರುವೆ.
ದಟ್ಟವಾದ ಮೋಡಗಳನ್ನು ರಥಗಳನ್ನಾಗಿ ಮಾಡಿಕೊಂಡು
ಗಾಳಿಯ ರೆಕ್ಕೆಗಳ ಮೇಲೆ ಆಕಾಶದಲ್ಲಿ ಸಂಚರಿಸುವೆ.
4 ಗಾಳಿಯನ್ನು ನಿನ್ನ ದೂತರನ್ನಾಗಿಯೂ
ಬೆಂಕಿಯನ್ನು ನಿನ್ನ ಸೇವಕರನ್ನಾಗಿಯೂ ಮಾಡಿರುವೆ.[a]
5 ಭೂಮಿಯನ್ನು ನೀನು ಅಸ್ತಿವಾರದ ಮೇಲೆ ಕಟ್ಟಿರುವುದರಿಂದ
ಅದೆಂದಿಗೂ ನಾಶವಾಗದು.
6 ನೀನು ಭೂಮಿಗೆ ನೀರನ್ನು ಕಂಬಳಿಯಂತೆ ಹೊದಿಸಿರುವೆ.
ಅದು ಬೆಟ್ಟಗಳನ್ನು ಮುಚ್ಚಿಕೊಂಡಿತು.
7 ನೀನು ಆಜ್ಞಾಪಿಸಲು ನೀರು ಹಿಂತಿರುಗಿತು.
ನೀನು ಬರ್ಜಿಸಲು ನೀರು ಓಡಿಹೋಯಿತು.
8 ಜಲರಾಶಿಗಳು ಬೆಟ್ಟಗಳಿಂದ ಇಳಿದು
ಕಣಿವೆಗಳಿಗೂ ನೀನು ಗೊತ್ತುಪಡಿಸಿದ ಸ್ಥಳಗಳಿಗೂ ಹರಿದುಹೋದವು.
9 ನೀನು ಸಮುದ್ರಗಳಿಗೆ ಮೇರೆಗಳನ್ನು ಗೊತ್ತುಪಡಿಸಿರುವುದರಿಂದ
ನೀರಿನಿಂದ ಭೂಮಿಯು ಮತ್ತೆಂದಿಗೂ ಆವೃತವಾಗದು.
24 ಯೆಹೋವನೇ, ನೀನು ಅನೇಕ ಆಶ್ಚರ್ಯಕರವಾದ ಕಾರ್ಯಗಳನ್ನು ಮಾಡಿರುವೆ.
ನೀನು ಸೃಷ್ಟಿಸಿದ ವಸ್ತುಗಳಿಂದ ಭೂಮಿಯು ತುಂಬಿಹೋಗಿದೆ.
ನಿನ್ನ ಪ್ರತಿಯೊಂದು ಕಾರ್ಯದಲ್ಲೂ ನಿನ್ನ ಜ್ಞಾನವನ್ನು ಕಾಣಬಲ್ಲವು.
35 ಪಾಪಾತ್ಮರು ಭೂಮಿಯಿಂದ ಕಾಣದೆಹೋಗಲಿ.
ದುಷ್ಟರು ಎಂದೆಂದಿಗೂ ನಿರ್ಮೂಲವಾಗಲಿ.
ನನ್ನ ಆತ್ಮವೇ, ಯೆಹೋವನನ್ನು ಸ್ತುತಿಸು!
ಯೆಹೋವನನ್ನು ಕೊಂಡಾಡು!
36 ಎಲೀಹು ಮಾತನ್ನು ಮುಂದುವರಿಸಿ ಹೀಗೆಂದನು:
2 “ಯೋಬನೇ, ಇನ್ನು ಸ್ವಲ್ಪಹೊತ್ತು ನನ್ನೊಂದಿಗೆ ತಾಳ್ಮೆಯಿಂದಿರು.
ದೇವರ ಪರವಾಗಿ ಹೇಳಬೇಕಾಗಿರುವ ಇನ್ನೂ ಕೆಲವು ಮಾತುಗಳಿವೆ.
3 ನಾನು ಜ್ಞಾನವನ್ನು ಬಹುದೂರದಿಂದ ಪಡೆದುಕೊಂಡಿದ್ದೇನೆ.
ನನ್ನ ಸೃಷ್ಟಿಕರ್ತನಾದ ದೇವರು ನ್ಯಾಯವಂತನೆಂದು ನಿರೂಪಿಸುವೆ.
4 ಯೋಬನೇ, ನಾನು ಹೇಳುವ ಪ್ರತಿಯೊಂದು ಮಾತೂ ಸತ್ಯ.
ನಿನ್ನ ಬಳಿಯಲ್ಲಿ ಜ್ಞಾನಪೂರ್ಣನೊಬ್ಬನು ಇದ್ದಾನೆ.
5 “ದೇವರು ಮಹಾ ಶಕ್ತಿಶಾಲಿಯಾಗಿದ್ದರೂ ಜನರನ್ನು ತಿರಸ್ಕರಿಸುವುದಿಲ್ಲ.
ದೇವರು ಮಹಾ ಬಲಶಾಲಿಯೂ ಹೌದು, ಮಹಾ ಜ್ಞಾನಿಯೂ ಹೌದು!
6 ದೇವರು ದುಷ್ಟರನ್ನು ಜೀವಿಸಲು ಅವಕಾಶ ಕೊಡುವುದಿಲ್ಲ.
ಆತನು ಬಡಜನರಿಗೆ ಯಾವಾಗಲೂ ನ್ಯಾಯದೊರಕಿಸುವನು.
7 ನೀತಿವಂತರನ್ನು ದೇವರು ಪರಿಪಾಲಿಸುವನು;
ಆತನು ಒಳ್ಳೆಯವರನ್ನು ಅಧಿಪತಿಗಳನ್ನಾಗಿ ನೇಮಿಸುವನು;
ಅವರಿಗೆ ಸದಾಕಾಲ ಗೌರವ ದೊರೆಯುವಂತೆ ಮಾಡುವನು.
8 ಅವರು ಒಂದುವೇಳೆ ದಂಡನೆಗೆ ಒಳಗಾಗಿ ಸರಪಣಿಗಳಿಂದ ಬಂಧಿಸಲ್ಪಟ್ಟು
ಸಂಕಟಪಡುತ್ತಿದ್ದರೆ,
9 ಆತನು ಅವರ ದುಷ್ಕೃತ್ಯವನ್ನೂ ಪಾಪವನ್ನೂ ಗರ್ವವನ್ನೂ
ಅವರಿಗೆ ತಿಳಿಯಪಡಿಸುವನು.
10 ಇದಲ್ಲದೆ ತನ್ನ ಎಚ್ಚರಿಕೆಯ ಮಾತಿಗೆ ಕಿವಿಗೊಡುವಂತೆ ಬಲವಂತ ಮಾಡುವನು;
ಪಾಪಮಾಡಕೂಡದೆಂದು ಆಜ್ಞಾಪಿಸುವನು.
11 ಅವರು ದೇವರಿಗೆ ಕಿವಿಗೊಟ್ಟು ಆತನಿಗೆ ವಿಧೇಯರಾದರೆ, ಆತನು ಅವರನ್ನು ಅಭಿವೃದ್ಧಿಪಡಿಸುವನು;
ಆಗ ಅವರ ಜೀವನವು ಸುಖಕರವಾಗುವುದು.
12 ಆದರೆ ಅವರು ದೇವರಿಗೆ ವಿಧೇಯರಾಗದಿದ್ದರೆ ನಾಶವಾಗುವರು;
ಮೂಢರಂತೆ ಸಾಯುವರು.
13 “ದೇವರ ಬಗ್ಗೆ ಲಕ್ಷಿಸದವರು ಯಾವಾಗಲೂ ಕೋಪದಿಂದಿರುವರು.
ದೇವರು ಅವರನ್ನು ದಂಡಿಸಿದರೂ ಅವರು ದೇವರಿಗೆ ಮೊರೆಯಿಡುವುದಿಲ್ಲ.
14 ಅವರು ಯೌವನ ಪ್ರಾಯದಲ್ಲೇ
ಪುರುಷಗಾಮಿಗಳಂತೆ ಸಾಯುವರು.
15 ಆದರೆ ದೇವರು ದೀನರನ್ನು ವಿಪತ್ತುಗಳಿಂದ ಬಿಡಿಸುವನು.
ಆ ವಿಪತ್ತುಗಳಿಂದ ದೇವರು ಜನರನ್ನು ಎಚ್ಚರಗೊಳಿಸಿ ತನಗೆ ಕಿವಿಗೊಡುವಂತೆ ಮಾಡುವನು.
16 “ಯೋಬನೇ, ದೇವರು ನಿನ್ನನ್ನು ಕೇಡಿನಿಂದ ತಪ್ಪಿಸಿ
ಸುರಕ್ಷಿತವೂ ಅಭಿವೃದ್ಧಿಕರವೂ ಆಗಿರುವ ಸ್ಥಳಕ್ಕೆ ಕರೆದುಕೊಂಡು ಬಂದು
ನಿನಗೆ ಊಟವನ್ನು ಯಥೇಚ್ಛವಾಗಿ ಬಡಿಸಲು ಇಷ್ಟಪಡುತ್ತಾನೆ.
7 ಕ್ರಿಸ್ತನು ನಿಮ್ಮನ್ನು ಸ್ವೀಕರಿಸಿಕೊಂಡನು. ಆದ್ದರಿಂದ ನೀವು ಒಬ್ಬರನ್ನೊಬ್ಬರು ಸ್ವೀಕರಿಸಿಕೊಳ್ಳಬೇಕು. ಇದು ದೇವರಿಗೆ ಮಹಿಮೆಯನ್ನು ಉಂಟು ಮಾಡುತ್ತದೆ. 8 ದೇವರು ನಮ್ಮ ಪಿತೃಗಳಿಗೆ ಮಾಡಿದ ವಾಗ್ದಾನಗಳು ಸತ್ಯವಾದುವುಗಳೆಂದು ತೋರಿಸುವುದಕ್ಕಾಗಿಯೂ ದೇವರು ಆ ವಾಗ್ದಾನಗಳನ್ನು ನೆರವೇರಿಸುತ್ತಾನೆ ಎಂಬುದನ್ನು ನಿರೂಪಿಸುವುದಕ್ಕಾಗಿಯೂ 9 ದೇವರು ತಮಗೆ ತೋರುವ ಕರುಣೆಗಾಗಿ ಯೆಹೂದ್ಯರಲ್ಲದವರು ಆತನನ್ನು ಮಹಿಮೆಪಡಿಸಲೆಂದು ಕ್ರಿಸ್ತನು ಯೆಹೂದ್ಯರ ಸೇವಕನಾದನು. ಪವಿತ್ರ ಗ್ರಂಥದಲ್ಲಿ ಈ ರೀತಿ ಬರೆಯಲ್ಪಟ್ಟಿದೆ:
“ಆದ್ದರಿಂದ ಯೆಹೂದ್ಯರಲ್ಲದ ಜನರ ಮಧ್ಯದಲ್ಲಿ ನಾನು ನಿನ್ನನ್ನು ಸ್ತುತಿಸುವೆನು:
ನಾನು ನಿನ್ನ ಹೆಸರನ್ನು ಸಂಕೀರ್ತಿಸುವೆನು.”(A)
10 ಇದಲ್ಲದೆ ಪವಿತ್ರ ಗ್ರಂಥವು ಹೀಗೆನ್ನುತ್ತದೆ:
“ಯೆಹೂದ್ಯರಲ್ಲದ ನೀವು ದೇವರ ಸ್ವಂತ ಜನರೊಂದಿಗೆ ಸೇರಿ ಸಂತೋಷದಿಂದಿರಬೇಕು.”(B)
11 ಮತ್ತೊಂದು ಕಡೆ ಪವಿತ್ರ ಗ್ರಂಥವು ಹೀಗೆ ಹೇಳುತ್ತದೆ:
“ಯೆಹೂದ್ಯರಲ್ಲದ ನೀವೆಲ್ಲರೂ ಪ್ರಭುವನ್ನು ಸ್ತುತಿಸಿರಿ.
ಎಲ್ಲಾ ಜನರು ಪ್ರಭುವಿಗೆ ಸ್ತೋತ್ರ ಮಾಡಲಿ.”(C)
12 ಯೆಶಾಯನು ಹೀಗೆ ಹೇಳಿದ್ದಾನೆ:
“ಇಷಯನ ಕುಟುಂಬದಿಂದ ಒಬ್ಬ ವ್ಯಕ್ತಿಯು ಬರುವನು.
ಆತನು ಯೆಹೂದ್ಯರಲ್ಲದವರನ್ನು ಆಳುವುದಕ್ಕಾಗಿ ಬರುವನು.
ಯೆಹೂದ್ಯರಲ್ಲದ ಜನರು ಆತನಲ್ಲಿ ನಿರೀಕ್ಷೆಯನ್ನು ಹೊಂದಿಕೊಳ್ಳುವರು.”(D)
13 ನಿರೀಕ್ಷೆಯನ್ನು ಕೊಡುವ ದೇವರು ನಂಬಿಕೆಯಿಂದ ಉಂಟಾಗುವ ಆನಂದವನ್ನೂ ಸಮಾಧಾನವನ್ನೂ ನಿಮಗೆ ಸಂಪೂರ್ಣವಾಗಿ ದಯಪಾಲಿಸಲೆಂದು ನಾನು ಪ್ರಾರ್ಥಿಸುತ್ತೇನೆ. ಆಗ ಪವಿತ್ರಾತ್ಮನ ಶಕ್ತಿಯ ಮೂಲಕ ನಿರೀಕ್ಷೆಯು ನಿಮ್ಮಲ್ಲಿ ತುಂಬಿ ಹೊರಸೂಸುವುದು.
Kannada Holy Bible: Easy-to-Read Version. All rights reserved. © 1997 Bible League International