Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 39

ರಚನೆಗಾರ: ದಾವೀದ.

39 “ನಾನು ಜಾಗರೂಕನಾಗಿ ಮಾತಾಡುವೆ.
    ನನ್ನ ನಾಲಿಗೆ ನನ್ನನ್ನು ಪಾಪಕ್ಕೆ ಸಿಕ್ಕಿಸದಂತೆ ನೋಡಿಕೊಳ್ಳುವೆ.
    ದುಷ್ಟರ ಮಧ್ಯದಲ್ಲಿ ಬಾಯಿಮುಚ್ಚಿಕೊಂಡಿರುವೆ” ಅಂದುಕೊಂಡೆನು.

ನಾನು ಮೌನವಾಗಿದ್ದೆನು.
    ಒಳ್ಳೆಯದನ್ನೂ ಹೇಳದೆ ಸುಮ್ಮನಿದ್ದೆನು.
    ಆದರೆ ನನ್ನ ವೇದನೆಯು ಹೆಚ್ಚಾಯಿತು.
ನಾನು ಬಹುಕೋಪಗೊಂಡಿದ್ದೆ.
    ಅದರ ಕುರಿತು ಆಲೋಚಿಸಿದಷ್ಟೂ ಕೋಪವು ಅಧಿಕವಾಯಿತು.
    ಆಗ ನಾನು ಬಾಯಿತೆರೆದು,

ಯೆಹೋವನೇ, ನನ್ನ ಗತಿಯನ್ನು ತಿಳಿಸು!
    ನನ್ನ ಈ ಅಲ್ಪ ಜೀವಿತವು ಇನ್ನೆಷ್ಟು ಕಾಲವಿರುವುದು?
    ನಾನೆಷ್ಟು ಕಾಲ ಬದುಕುವೆ?
ನೀನು ನನಗೆ ಕೇವಲ ಅಲ್ಪಾಯುಷ್ಯವನ್ನು ಕೊಟ್ಟಿರುವೆ.
    ನನ್ನ ಅಲ್ಪ ಜೀವಿತವು ನಿನ್ನ ದೃಷ್ಟಿಯಲ್ಲಿ ಗಣನೆಗೂ ಬಾರದು.
ಮನುಷ್ಯನ ಜೀವಿತವು ಕೇವಲ ಮೋಡದಂತೆ ಕ್ಷಣಿಕವಾಗಿದೆ.
    ಯಾವನೂ ಸದಾಕಾಲ ಬದುಕುವುದಿಲ್ಲ!

ನಮ್ಮ ಜೀವಿತವು ಕೇವಲ ಕನ್ನಡಿಯ ಪ್ರತಿಬಿಂಬದಂತಿದೆ.
    ನಾವು ಗಡಿಬಿಡಿಯಿಂದ ಆಸ್ತಿಯನ್ನು ಕೂಡಿಸಿಟ್ಟುಕೊಳ್ಳುತ್ತೇವೆ.
    ನಾವು ಸತ್ತ ಮೇಲೆ ಅವು ಯಾರ ಪಾಲಾಗುವುದೋ ನಮಗೆ ತಿಳಿಯದು.

ಯೆಹೋವನೇ, ನನಗಿರುವ ನಿರೀಕ್ಷೆ ಯಾವುದು?
    ನನ್ನ ನಿರೀಕ್ಷೆಯು ನೀನೇ.
ನನ್ನ ಎಲ್ಲಾ ಅಪರಾಧಗಳಿಂದ ನನ್ನನ್ನು ಬಿಡಿಸು.
    ಮೂರ್ಖರ ನಿಂದೆಗೆ ನನ್ನನ್ನು ಗುರಿಮಾಡಬೇಡ.
ನಾನು ಬಾಯಿತೆರೆದು ಮಾತಾಡುವುದಿಲ್ಲ.
    ನೀನು ನ್ಯಾಯಕ್ಕೆ ತಕ್ಕಂತೆ ಮಾಡಿರುವೆ.
10 ನನ್ನನ್ನು ಶಿಕ್ಷಿಸುವುದನ್ನು ನಿಲ್ಲಿಸು.
    ಇಲ್ಲವಾದರೆ, ನಾನು ಸತ್ತೇ ಹೋಗುವೆನು.
11 ನೀನು ಅಪರಾಧಗಳಿಗೆ ತಕ್ಕಂತೆ ಜನರನ್ನು ದಂಡಿಸಿ, ನಿನ್ನ ಜೀವಮಾರ್ಗವನ್ನು ಅವರಿಗೆ ಉಪದೇಶಿಸುವೆ.
    ನುಸಿಯು ಬಟ್ಟೆಯನ್ನು ತಿಂದುಬಿಡುವಂತೆ ಜನರಿಗೆ ಇಷ್ಟವಾದವುಗಳನ್ನು ನೀನು ನಾಶಮಾಡುವೆ.
    ಹೌದು, ನಮ್ಮ ಜೀವಿತಗಳು ಬೇಗನೆ ಕಣ್ಮರೆಯಾಗುವ ಒಂದು ಚಿಕ್ಕ ಮೋಡದಂತಿವೆ.

12 ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳು!
    ನನ್ನ ಮೊರೆಗೆ ಕಿವಿಗೊಡು!
    ನನ್ನ ಕಣ್ಣೀರನ್ನು ನೋಡು!
ನಾನು ಈ ಜೀವಿತವನ್ನು ಕೇವಲ ಒಬ್ಬ ಪ್ರಯಾಣಿಕನಂತೆ ನಿನ್ನೊಂದಿಗೆ ಸಾಗಿಸುತ್ತಿರುವೆ.
    ನನ್ನ ಎಲ್ಲಾ ಪೂರ್ವಿಕರಂತೆ, ನಾನು ಇಲ್ಲಿ ಕೇವಲ ಸ್ವಲ್ಪಕಾಲ ಜೀವಿಸುವೆನು.
13 ನೀನು ಕೋಪದಿಂದ ನನ್ನ ಕಡೆಗೆ ನೋಡಬೇಡ! ಸಾಯುವುದಕ್ಕಿಂತ ಮೊದಲು ನನಗೆ ಸಂತೋಷವಿರಲಿ.
    ಇನ್ನು ಸ್ವಲ್ಪಕಾಲದಲ್ಲಿ ನಾನು ಇಲ್ಲವಾಗುವೆನು!

ಯೋಬನು 32

ಎಲೀಹುವಿನ ವಾದ

32 ಯೋಬನು ತಾನು ನಿರಪರಾಧಿಯೆಂದು ನಂಬಿದ್ದರಿಂದ ಅವನ ಮೂವರು ಗೆಳೆಯರು ಮತ್ತೆ ವಾದ ಮಾಡಲಿಲ್ಲ. ಅಲ್ಲಿ ಯೌವನಸ್ಥನಾದ ಎಲೀಹು ಸಹ ಇದ್ದನು. ಎಲೀಹು ಬರಕೇಲನ ಮಗನು. ಬರಕೇಲನು ಬೂಜ್ ಕುಲದವನು. ಎಲೀಹು, ರಾಮ್ ಸಂತಾನಕ್ಕೆ ಸೇರಿದವನು. ಎಲೀಹುವಿಗೆ ಯೋಬನ ಮೇಲೆ ಬಹು ಕೋಪಬಂದಿತು. ಯಾಕೆಂದರೆ ಯೋಬನು ತಾನು ದೇವರಿಗಿಂತಲೂ ನೀತಿವಂತನೆಂದು ಪ್ರತಿಪಾದಿಸುತ್ತಿದ್ದನು. ಎಲೀಹುವಿಗೆ ಯೋಬನ ಮೂವರ ಸ್ನೇಹಿತರ ಮೇಲೆಯೂ ಬಹು ಕೋಪಬಂದಿತು. ಯಾಕೆಂದರೆ ಯೋಬನ ಪ್ರಶ್ನೆಗಳಿಗೆ ಪರಿಣಾಮಕಾರಿಯಾದ ಉತ್ತರವನ್ನು ಕೊಟ್ಟು ಯೋಬನೇ ತಪ್ಪಿತಸ್ಥನೆಂದು ನಿರೂಪಿಸಲು ಯೋಬನ ಮೂವರು ಗೆಳೆಯರಿಗೆ ಗೊತ್ತಿರಲಿಲ್ಲ. ಆದಕಾರಣ, ದೇವರೇ ತಪ್ಪಿತಸ್ಥನೆಂದು ತೋರಿತು. ಅಲ್ಲಿದ್ದವರೆಲ್ಲರಲ್ಲಿ ಎಲೀಹು ಚಿಕ್ಕವನಾಗಿದ್ದನು. ಆದ್ದರಿಂದ ಪ್ರತಿಯೊಬ್ಬರು ಮಾತಾಡಿ ಮುಗಿಸುವವರೆಗೆ ಅವನು ಕಾದುಕೊಂಡಿದ್ದನು. ಬಳಿಕ ಅವನಿಗೆ ತಾನೂ ಮಾತಾಡಬಹುದೆನಿಸಿತು. ಯೋಬನ ಮೂವರು ಸ್ನೇಹಿತರ ಬಾಯಲ್ಲಿ ಉತ್ತರವಿಲ್ಲದಿರುವುದನ್ನು ಕಂಡು ಎಲೀಹು ಕೋಪಗೊಂಡನು. ಆದ್ದರಿಂದ ಬೂಜ್ ಕುಲಕ್ಕೆ ಸೇರಿದ ಬರಕೇಲನ ಮಗನಾದ ಎಲೀಹು ಮಾತಾಡಲಾರಂಭಿಸಿ ಹೀಗೆಂದನು:

“ನಾನು ವಯಸ್ಸಿನಲ್ಲಿ ಚಿಕ್ಕವನು, ನೀವು ವೃದ್ಧರು.
    ಆದಕಾರಣ, ನನ್ನ ಅಭಿಪ್ರಾಯವನ್ನು ನಿಮಗೆ ತಿಳಿಸಲು ಹಿಂಜರಿದೆನು ಮತ್ತು ಹೆದರಿಕೊಂಡಿದ್ದೆನು.
‘ವೃದ್ಧರು ಮೊದಲು ಮಾತಾಡಬೇಕು.
    ಅನೇಕ ವರ್ಷಗಳ ಕಾಲ ಬದುಕಿದ ಜನರು ತಮ್ಮ ಜ್ಞಾನವನ್ನು ಹಂಚಿಕೊಳ್ಳಬೇಕು’ ಎಂದು ನಾನು ನನ್ನೊಳಗೆ ಆಲೋಚಿಸಿಕೊಂಡೆನು.
ಆದರೆ ಮನುಷ್ಯರಲ್ಲಿರುವ ದೇವರಾತ್ಮನು
    ಅಂದರೆ ಸರ್ವಶಕ್ತನಾದ ದೇವರ ‘ಉಸಿರು’ ಮನುಷ್ಯರಿಗೆ ಜ್ಞಾನವನ್ನು ಕೊಡುತ್ತದೆ.
ವೃದ್ದರು ಮಾತ್ರ ಜ್ಞಾನಿಗಳಲ್ಲ,
    ಕೇವಲ ವಯಸ್ಸಾದವರು ಮಾತ್ರ ಯಾವುದು ಸರಿ ಎಂಬುದನ್ನು ಅರ್ಥಮಾಡಿಕೊಳ್ಳುವವರಲ್ಲ.

10 “ಆದಕಾರಣ ಎಲೀಹು ಎಂಬ ನಾನು ಹೇಳುವೆ, ನನಗೆ ಕಿವಿಗೊಡಿರಿ!
    ನಾನು ಸಹ ನನ್ನ ಅಭಿಪ್ರಾಯವನ್ನು ನಿಮಗೆ ತಿಳಿಸುವೆನು.
11 ನೀವು ಮಾತಾಡುತ್ತಿದ್ದಾಗ ನಾನು ತಾಳ್ಮೆಯಿಂದ ಕಾದುಕೊಂಡಿದ್ದೆನು.
    ನೀವು ಹೇಳಲು ಪದಗಳಿಗಾಗಿ ಆಲೋಚಿಸುತ್ತಿರುವಾಗ ನಾನು ನಿಮ್ಮ ವಾದಗಳನ್ನು ಆಲಿಸಿದೆನು.
12 ನಾನು ನಿಮ್ಮ ಮಾತುಗಳನ್ನು ಬಹಳ ಎಚ್ಚರಿಕೆಯಿಂದ ಗಮನವಿಟ್ಟು ಕೇಳಿದೆನು.
    ಆದರೆ ಯೋಬನು ತಪ್ಪಿತಸ್ಥನೆಂಬುದನ್ನು ನೀವು ನಿರೂಪಿಸಲಿಲ್ಲ.
    ನಿಮ್ಮಲ್ಲಿ ಒಬ್ಬರೂ ಯೋಬನ ವಾದಗಳಿಗೆ ಉತ್ತರಕೊಡಲಿಲ್ಲ.
13 ನೀವು ಮೂವರು, ‘ನಾವು ಜ್ಞಾನವನ್ನು ಕಂಡುಕೊಂಡಿದ್ದೇವೆ,
    ಯೋಬನ ವಾದಗಳಿಗೆ ಉತ್ತರವನ್ನು ದೇವರು ಕೊಡಬೇಕೇ ಹೊರತು ಮನುಷ್ಯರಲ್ಲ’ ಎಂದು ಹೇಳಬೇಡಿ.
14 ಯೋಬನು ನನ್ನ ವಿರುದ್ಧವಾಗಿ ಹೇಳಿಕೆಗಳನ್ನು ಹೊರಡಿಸಲಿಲ್ಲ.
    ಆದರೆ ನಾನು ಅವನಿಗೆ ನಿಮ್ಮ ವಾದಗಳಿಂದ ಉತ್ತರ ನೀಡುವುದಿಲ್ಲ.

15 “ಯೋಬನೇ, ನಿನ್ನ ಮೂವರು ಸ್ನೇಹಿತರು ವಾದ ಮಾಡಲು ವಿಫಲರಾಗಿದ್ದಾರೆ.
    ಹೆಚ್ಚಿಗೆ ಹೇಳಲು ಅವರಲ್ಲಿ ಏನೂ ಉಳಿದಿಲ್ಲ.
    ಅವರಲ್ಲಿ ಯಾವ ಉತ್ತರಗಳೂ ಇಲ್ಲ.
16 ಈ ಮೂವರು ಮೌನವಾಗಿ ಅಲ್ಲಿ ನಿಂತಿದ್ದಾರೆ;
    ಅವರಲ್ಲಿ ಉತ್ತರವಿಲ್ಲ.
    ಹೀಗಿರಲು ನಾನಿನ್ನೂ ಕಾಯುತ್ತಲೇ ಇರಬೇಕೇ?
17 ಇಲ್ಲ! ನಾನು ಸಹ ನನ್ನ ಉತ್ತರವನ್ನು ಕೊಡುವೆನು.
    ನಾನು ಸಹ ನನ್ನ ಅಭಿಪ್ರಾಯವನ್ನು ನಿನಗೆ ತಿಳಿಸುವೆನು.
18 ಯಾಕೆಂದರೆ ನನ್ನಲ್ಲಿ ಹೇಳಲು ಬೇಕಾದಷ್ಟಿದೆ.
    ನನ್ನ ಅಂತರಾತ್ಮವು ಮಾತಾಡಲು ನನ್ನನ್ನು ಒತ್ತಾಯಿಸುತ್ತಿದೆ.
19 ಆಹಾ, ದ್ರಾಕ್ಷಾರಸವನ್ನು ತುಂಬಿ ಬಾಯಿಕಟ್ಟಿದ ಹೊಸ ಬುದ್ದಲಿಯಂತೆ
    ನನ್ನ ಹೊಟ್ಟೆಯು ಒಡೆದುಹೋಗುವ ಸ್ಥಿತಿಯಲ್ಲಿದೆ.
20 ಆದ್ದರಿಂದ ನಾನು ಮಾತಾಡಲೇಬೇಕು; ಆಗ ನನಗೆ ಉಪಶಮನವಾಗುತ್ತದೆ.
    ನನ್ನ ತುಟಿಗಳನ್ನು ತೆರೆದು ಯೋಬನ ದೂರುಗಳಿಗೆ ಉತ್ತರ ಕೊಡಲೇಬೇಕು.
21 ಈ ವಾದದಲ್ಲಿ ನಾನು ಮುಖದಾಕ್ಷಿಣ್ಯ ಮಾಡುವುದಿಲ್ಲ;
    ಯಾರ ಮುಖಸ್ತುತಿಯನ್ನೂ ಮಾಡುವುದಿಲ್ಲ.
22 ಮುಖಸ್ತುತಿ ಮಾಡುವುದೇ ನನಗೆ ತಿಳಿದಿಲ್ಲ.
    ಮುಖಸುತ್ತಿ ಮಾಡುವುದು ನನಗೆ ಗೊತ್ತಿದ್ದರೆ, ನನ್ನ ಸೃಷ್ಟಿಕರ್ತನು ನನ್ನನ್ನು ಬಹು ಬೇಗನೆ ಶಿಕ್ಷಿಸುವನು.

ಲೂಕ 16:19-31

ಐಶ್ವರ್ಯವಂತನು ಮತ್ತು ಲಾಜರನು

19 ಯೇಸು ಹೀಗೆಂದನು: “ಒಬ್ಬ ಐಶ್ವರ್ಯವಂತನಿದ್ದನು. ಅವನು ಯಾವಾಗಲೂ ಉತ್ತಮವಾದ ಉಡುಪುಗಳನ್ನು ಧರಿಸುತ್ತಿದ್ದನು. ಅವನು ಬಹಳ ಐಶ್ವರ್ಯವಂತನಾಗಿದ್ದುದರಿಂದ ಪ್ರತಿದಿನವೂ ವೈಭವದೊಡನೆ ಊಟಮಾಡುತ್ತಾ ಸಂತೋಷಪಡುತ್ತಿದ್ದನು. 20 ಅಲ್ಲಿ ಲಾಜರನೆಂಬ ಒಬ್ಬ ಬಡಮನುಷ್ಯನೂ ಇದ್ದನು. ಅವನ ಮೈತುಂಬ ಹುಣ್ಣುಗಳಿದ್ದವು. ಅವನು ಐಶ್ವರ್ಯವಂತನ ಮನೆಯ ಹೊರಬಾಗಿಲ ಬಳಿ ಬಿದ್ದುಕೊಂಡಿರುತ್ತಿದ್ದನು. 21 ಐಶ್ವರ್ಯವಂತನು ಊಟ ಮಾಡಿದ ಮೇಲೆ ಹೊರಗೆಸೆದ ಎಂಜಲನ್ನು ತಿನ್ನುವುದಕ್ಕಾಗಿ ಅಲ್ಲಿ ಬಿದ್ದುಕೊಂಡಿರುತ್ತಿದ್ದನು. ನಾಯಿಗಳು ಬಂದು ಅವನ ಹುಣ್ಣುಗಳನ್ನು ನೆಕ್ಕುತ್ತಿದ್ದವು.

22 “ಸ್ವಲ್ಪ ಸಮಯದ ನಂತರ ಲಾಜರನು ಸತ್ತನು. ದೇವದೂತರು ಲಾಜರನನ್ನು ತೆಗೆದುಕೊಂಡು ಹೋಗಿ ಅಬ್ರಹಾಮನ ಎದೆಗೆ ಒರಗಿಸಿದರು. ಒಂದು ದಿನ ಐಶ್ವರ್ಯವಂತನೂ ಸತ್ತನು. ಅವನಿಗೆ ಸಮಾಧಿ ಮಾಡಲಾಯಿತು. 23 ಆದರೆ ಅವನು ಪಾತಾಳದಲ್ಲಿ ಬಹಳ ಯಾತನೆಪಡುತ್ತಾ ಬಹಳ ದೂರದಲ್ಲಿ ಅಬ್ರಹಾಮನ ಎದೆಗೆ ಒರಗಿಕೊಂಡಿದ್ದ ಲಾಜರನನ್ನು ನೋಡಿ, 24 ‘ತಂದೆಯಾದ ಅಬ್ರಹಾಮನೇ, ನನ್ನ ಮೇಲೆ ಕರುಣೆತೋರು! ಲಾಜರನನ್ನು ನನ್ನ ಬಳಿಗೆ ಕಳುಹಿಸು. ಅವನು ತನ್ನ ಬೆರಳನ್ನು ನೀರಿನಲ್ಲಿ ಅದ್ದಿ ನನ್ನ ನಾಲಿಗೆಯನ್ನು ತಣ್ಣಗೆ ಮಾಡಲಿ, ನಾನು ಈ ಬೆಂಕಿಯಲ್ಲಿ ಯಾತನೆಪಡುತ್ತಿದ್ದೇನೆ!’ ಎಂದು ಬೇಡಿಕೊಂಡನು.

25 “ಅದಕ್ಕೆ ಅಬ್ರಹಾಮನು, ‘ಕಂದಾ, ನಿನ್ನ ಜೀವಮಾನದ ದಿನಗಳು ನಿನಗೆ ನೆನಪಿಲ್ಲವೇ? ಅಲ್ಲಿ ನಿನಗೆ ಎಲ್ಲ ಬಗೆಯ ಸುಖವಿತ್ತು. ಆದರೆ ಲಾಜರಿನಿಗಾದರೋ ಕಷ್ಟಗಳೇ ತುಂಬಿಕೊಂಡಿದ್ದವು. ಆದ್ದರಿಂದ ಈಗ ಅವನು ಸುಖಪಡುತ್ತಿದ್ದಾನೆ, ನೀನು ಸಂಕಟಪಡುತ್ತಿರುವೆ. 26 ಮಾತ್ರವಲ್ಲದೆ ನಿನಗೂ ನಮಗೂ ಮಧ್ಯೆ ದೊಡ್ಡ ಡೊಂಗುರವಿದೆ. ಅಲ್ಲಿಗೆ ಬಂದು ನಿನಗೆ ಸಹಾಯ ಮಾಡಲು ಯಾರಿಗೂ ಸಾಧ್ಯವಿಲ್ಲ. ಅಲ್ಲದೆ ಯಾರು ಅಲ್ಲಿಂದ ಇಲ್ಲಿಗೆ ಬರಲು ಸಾಧ್ಯವಿಲ್ಲ’ ಎಂದು ಹೇಳಿದನು.

27 “ಐಶ್ವರ್ಯವಂತನು, ‘ಹಾಗಾದರೆ, ದಯಮಾಡಿ ಲಾಜರನನ್ನು ಭೂಲೋಕದಲ್ಲಿರುವ ನನ್ನ ತಂದೆಯ ಮನೆಗೆ ಕಳುಹಿಸು! 28 ನನಗೆ ಐದು ಮಂದಿ ಸಹೋದರರಿದ್ದಾರೆ. ಅವರು ಈ ಯಾತನೆಯ ಸ್ಥಳಕ್ಕೆ ಬಾರದಂತೆ ಲಾಜರನು ಅವರನ್ನು ಎಚ್ಚರಿಸಲಿ’ ಎಂದು ಹೇಳಿದನು.

29 “ಅದಕ್ಕೆ ಅಬ್ರಹಾಮನು, ‘ಮೋಶೆಯ ಧರ್ಮಶಾಸ್ತ್ರ ಮತ್ತು ಪ್ರವಾದಿಗಳ ಗ್ರಂಥಗಳು ಅವರಲ್ಲಿ ಇವೆ. ಅವರು ಅವುಗಳನ್ನು ಓದಿ ಕಲಿತುಕೊಳ್ಳಲಿ’ ಅಂದನು.

30 “ಅದಕ್ಕೆ ಐಶ್ವರ್ಯವಂತನು, ‘ತಂದೆಯಾದ ಅಬ್ರಹಾಮನೇ, ಹಾಗೆನ್ನಬೇಡ! ಯಾರಾದರೊಬ್ಬರು ಸತ್ತವರೊಳಗಿಂದ ಎದ್ದುಹೋದರೆ, ಅವರು ತಮ್ಮ ಹೃದಯಗಳನ್ನೂ ಜೀವಿತಗಳನ್ನೂ ಮಾರ್ಪಡಿಸಿಕೊಳ್ಳುವರು’ ಎಂದು ಹೇಳಿದನು.

31 “ಅದಕ್ಕೆ ಅಬ್ರಹಾಮನು ಅವನಿಗೆ, ‘ಇಲ್ಲ! ನಿನ್ನ ಸಹೋದರರು ಮೋಶೆಯ ಮತ್ತು ಪ್ರವಾದಿಗಳ ನುಡಿಗಳನ್ನು ಕೇಳುವುದಿಲ್ಲವಾದರೆ, ಸತ್ತವರೊಳಗಿಂದ ಜೀವಿತನಾಗಿ ಎದ್ದುಬಂದವನ ಮಾತನ್ನೂ ಅವರು ಕೇಳುವುದಿಲ್ಲ’” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International